varthabharthi


ನಿಮ್ಮ ಅಂಕಣ

ಪ್ರಕೃತಿ, ಸಾಂಕ್ರಾಮಿಕ ರೋಗಗಳು ಮತ್ತು ನಾವು

ವಾರ್ತಾ ಭಾರತಿ : 11 May, 2021
ಡಾ. ಎಂ. ವೆಂಕಟಸ್ವಾಮಿ

ಭೂಮಿಯ ಮೇಲೆ ಕಾಲಕಾಲಕ್ಕೆ ಮನುಷ್ಯರಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಸಾಂಕ್ರಾಮಿಕ ರೋಗಗಳ ಬಗ್ಗೆ ಒಮ್ಮೆ ಹಿಂದಿರುಗಿ ನೋಡಿದರೆ ಅವು ಭೂಮಿಯ ಮೇಲೆ ಮೊದಲಿಗೆ ಎಲ್ಲಿ ಕಾಣಿಸಿಕೊಂಡವು? ಕಾರಣಗಳೇನು? ವೈರಸ್‌ಗಳು ಹೇಗೆ ಜನಸಮುದಾಯಗಳಿಗೆ ಹರಡಿಕೊಂಡವು ಎನ್ನುವುದು ಅರ್ಥವಾಗುತ್ತದೆ. ಪ್ರತಿಯೊಂದು ಸಲವೂ ಹೊಸದಾಗಿ ಕಾಣಿಸಿಕೊಳ್ಳುವ ಸಾಂಕ್ರಾಮಿಕ ರೋಗಗಳು ಮನುಷ್ಯ ಪರಿಸರದ ಮೇಲೆ ನಡೆಸಿದ ಅಟ್ಟಹಾಸದ ಫಲಿತಾಂಶವೇ ಆಗಿದೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ.


ನಾವು ಸಂಪೂರ್ಣವಾಗಿ ಅವಲಂಬಿಸಿರುವ ನಮ್ಮ ಸುತ್ತಲಿನ ಪರಿಸರ ವ್ಯವಸ್ಥೆಯನ್ನು ಅಪಾಯಕ್ಕೆ ದೂಡುವುದರ ಜೊತೆಗೆ ಪೃಥ್ವಿಯ ಮೇಲಿನ ಪರಿಸರ ಹಾಳುಮಾಡುತ್ತಾ ಎಲ್ಲಾ ರೀತಿಯ ನೈಸರ್ಗಿಕ ಸಂಪನ್ಮೂಲಗಳನ್ನು ದೋಚುತ್ತಾ, ಅರಣ್ಯಗಳನ್ನು ನಾಶಮಾಡುತ್ತಾ, ವನ್ಯಪ್ರಾಣಿಗಳನ್ನು ಸಂಹಾರ ಮಾಡುತ್ತಾ ನಮ್ಮನ್ನು ನಾವೇ ಅಪಾಯಕ್ಕೆ ಒಡ್ಡಿಕೊಂಡಿದ್ದೇವೆ. ಈಗ ಜಗತ್ತಿನಲ್ಲಿ ಕಾಣಿಸಿಕೊಂಡಿರುವ ಭೀಕರ ಸಾಂಕ್ರಾಮಿಕ ರೋಗ ಕೋವಿಡ್-19 (ನೂರಾರು, ಸಾವಿರಾರು ರೂಪಾಂತರ ತಳಿಗಳು) ಮನುಷ್ಯನು ಪ್ರಕೃತಿಯ ಜೊತೆಗೆ ವಿನಾಶಕಾರಿ ಸಂಬಂಧವನ್ನು ಬೆಳೆಸಿಕೊಂಡಿದ್ದೇ ಕಾರಣ ಎಂಬುದಾಗಿ ವಿಜ್ಞಾನಿಗಳು ಹೇಳುತ್ತಿದ್ದಾರೆ.

ಸಾಂಕ್ರಾಮಿಕ ರೋಗಗಳು ಮನುಷ್ಯನ ಮಧ್ಯೆ ಹರಡುವುದನ್ನು ಪ್ರಾಚೀನ ಕಾಲದಿಂದಲೂ ನಾವು ನೋಡುತ್ತಲೇ ಬಂದಿದ್ದೇವೆ. ಇವುಗಳಲ್ಲಿ ಕೆಲವು ಮುಖ್ಯವಾದ ವೈರಸ್‌ಗಳೆಂದರೆ ಹೆಪಟೈಟಿಸ್ ಬಿ(ಎಚ್‌ಬಿವಿ), ಹರ್ಪಿಸ್ ಸಿಂಪ್ಲೆಕ್ಸ್-1 ಮತ್ತು 2, ಮಾರ್ಬರ್ಗ್, ಎಬೋಲಾ, ರೇಬೀಸ್, ಎಚ್‌ಐವಿ/ಏಡ್ಸ್, ಹಂಟವೈರಸ್ ಪಲ್ಮನರಿ ಸಿಂಡ್ರೋಮ್(ಎಚ್‌ಪಿಎಸ್), ಇನ್‌ಫ್ಲೂಯೆನ್ಸ, ಡೆಂಗಿ, ರೋಟವೈರಸ್, ಸಾರ್ಸ್‌-ಇಟ್ಖ ಮತ್ತು ಮರ್ಸ್ ಇಟ್ಖ ಇತ್ಯಾದಿ. ಈ ಎಲ್ಲಾ ಮಾರಕ ರೋಗಗಳು ಮನುಷ್ಯರಿಗೆ ಮೊದಲಿಗೆ ಅಂಟಿಕೊಂಡಾಗ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿದ್ದರ ಜೊತೆಗೆ ಅಂಗವೈಕಲ್ಯವನ್ನೂ ಉಂಟುಮಾಡಿವೆ. ಹಲವು ರೋಗಗಳಿಗೆ ಇನ್ನೂ ಯಾವುದೇ ಲಸಿಕೆ/ಔಷಧಿಗಳನ್ನು ಕಂಡುಹಿಡಿಯಲಾಗಲಿಲ್ಲ. ಭೂಮಿಯ ಮೇಲೆ ಕಾಲಕಾಲಕ್ಕೆ ಮನುಷ್ಯರಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಸಾಂಕ್ರಾಮಿಕ ರೋಗಗಳ ಬಗ್ಗೆ ಒಮ್ಮೆ ಹಿಂದಿರುಗಿ ನೋಡಿದರೆ ಅವು ಭೂಮಿಯ ಮೇಲೆ ಮೊದಲಿಗೆ ಎಲ್ಲಿ ಕಾಣಿಸಿಕೊಂಡವು? ಕಾರಣಗಳೇನು? ವೈರಸ್‌ಗಳು ಹೇಗೆ ಜನಸಮುದಾಯಗಳಿಗೆ ಹರಡಿಕೊಂಡವು ಎನ್ನುವುದು ಅರ್ಥವಾಗುತ್ತದೆ.

ಪ್ರತಿಯೊಂದು ಸಲವೂ ಹೊಸದಾಗಿ ಕಾಣಿಸಿಕೊಳ್ಳುವ ಸಾಂಕ್ರಾಮಿಕ ರೋಗಗಳು ಮನುಷ್ಯ ಪರಿಸರದ ಮೇಲೆ ನಡೆಸಿದ ಅಟ್ಟಹಾಸದ ಫಲಿತಾಂಶವೇ ಆಗಿದೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ನಮ್ಮ ದೇಹದ ಅಂಗಾಂಗಗಳಲ್ಲಿ ವೈರಸ್‌ಗಳು ಹೇಗೆ ಶಾಶ್ವತವಾಗಿ ಮನೆಮಾಡಿಕೊಂಡಿರುತ್ತವೋ ಅದೇ ರೀತಿಯಲ್ಲಿ ಪ್ರಾಣಿಗಳ ದೇಹದಲ್ಲೂ ಅನೇಕ ರೀತಿಯ ವೈರಸ್‌ಗಳು ಬದುಕು ನಡೆಸುತ್ತಿರುತ್ತವೆ. ನಾವು ಪ್ರಕೃತಿ ಮೇಲೆ ನಡೆಸುವ ದಾಳಿಯಿಂದ-ಅರಣ್ಯಗಳನ್ನು ನಾಶ ಮಾಡುವುದರಿಂದ, ವನ್ಯ ಪ್ರಾಣಿಗಳನ್ನು ಬೇಟೆಯಾಡಿ ಭಕ್ಷಿಸುವುದರಿಂದ ಮತ್ತು ಸಾಕು ಪ್ರಾಣಿಗಳನ್ನು ಮನೆಗಳಲ್ಲಿ ಪಾಲನೆ ಮಾಡುವುದರಿಂದ ಅವುಗಳಲ್ಲಿ ವಾಸಿಸುವ ವೈರಸ್‌ಗಳು ಸುಲಭವಾಗಿ ನಮ್ಮ ದೇಹಕ್ಕೆ ಸಂಪರ್ಕ ಪಡೆದುಕೊಳ್ಳುತ್ತವೆ.

ಒಟ್ಟಿನಲ್ಲಿ ಲಕ್ಷಾಂತರ ವರ್ಷಗಳಿಂದ ಮನುಷ್ಯನಿಂದ ದೂರವೇ ಉಳಿದಿದ್ದ ವನ್ಯಪ್ರಾಣಿ ಜಗತ್ತನ್ನು ಈಗ ಹೆಚ್ಚಾಗಿ ನಮ್ಮ ಜಗತ್ತಿಗೆ ತಂದುಕೊಳ್ಳುತ್ತಿದ್ದೇವೆ. ಜಗತ್ತಿನ ಎಲ್ಲಾ ದೇಶಗಳ ಜನರೂ ಹೆಚ್ಚುಕಡಿಮೆ ವನ್ಯಜೀವಿಗಳನ್ನು ಬೇಟೆಯಾಡಿ ಭಕ್ಷಿಸುತ್ತಾರೆ. ಹಾಗೇ ವನ್ಯಪ್ರಾಣಿಗಳನ್ನು ತಂದು ಮಾರುವ ಅಗಾಧ ಮಾರುಕಟ್ಟೆಗಳು ಜಗತ್ತಿನ ಹಲವು ದೇಶಗಳಲ್ಲಿ ನೋಡಬಹುದು. ಜೊತೆಗೆ ಇವುಗಳ ಮಾಂಸವನ್ನು ಸಂಸ್ಕರಿಸಿ ಟನ್ನುಗಟ್ಟಲೆ ರಫ್ತು ಮಾಡಲಾಗುತ್ತದೆ. ಹಾಗೆಯೇ ಸಾಗರಗಳಿಂದ ಹಿಡಿದು ತರುವ ಮೀನು ಇತರ ಜೀವಿಗಳನ್ನು ಜಗತ್ತಿನಾದ್ಯಂತ ಭಕ್ಷಿಸಲಾಗುತ್ತದೆ. ವನ್ಯಪ್ರಾಣಿಗಳನ್ನು ಬೇಟೆಯಾಡಿ ಹಿಡಿದು ತರುವಾಗ ಮತ್ತು ಪಂಜರಗಳಲ್ಲಿ ಕೂಡಿಹಾಕಿ ಕೊಲ್ಲುವ ಮುನ್ನ ಅವು ಭೀತಿಗೆ ಒಳಗಾಗಿ ಮಲಮೂತ್ರಗಳ ಮೂಲಕ ಹೆಚ್ಚು ವೈರಸ್‌ಗಳನ್ನು ಚೆಲ್ಲುತ್ತವೆ. ಆಗ ವೈರಸ್‌ಗಳು ಅನಾಯಾಸವಾಗಿ ಮನುಷ್ಯ ದೇಹ ಸೇರಿಕೊಳ್ಳುತ್ತವೆ. ವನ್ಯ ಪ್ರಾಣಿಗಳನ್ನು ಮಾರಾಟ ಮಾಡುವ ಆರ್ದ್ರ ಮಾರುಕಟ್ಟೆಗಳು ವೈರಸ್‌ಗಳನ್ನು ಹರಡುವ ದೊಡ್ಡ ಕೇಂದ್ರಗಳಾಗಿದ್ದು ಇವು ಒಂದು ರೀತಿಯಲ್ಲಿ ಫ್ಯಾಷನ್ ಉದ್ಯಮದಂತೆ ಕಾಣಿಸುತ್ತವೆ. ಚಳಿಗಾಲದಲ್ಲಿ ಧರಿಸುವ ಜಾಕೆಟ್‌ಗಳನ್ನು ತಯಾರಿಸಲು ಬಳಸುವ ತುಪ್ಪಳವನ್ನು ಪಡೆಯಲು ಹೇರಳವಾಗಿ ತುಪ್ಪಳ ನೀಡುವ ಪ್ರಾಣಿಗಳನ್ನು ಸಾಕಣೆ ಕೇಂದ್ರಗಳಲ್ಲಿ ಬ್ರೀಡ್ ಮಾಡುವುದನ್ನು ಯುರೋಪ್ ಮತ್ತಿತರ ದೇಶಗಳಲ್ಲಿ ನೋಡಬಹುದು.

ಸಾವಿರಾರು ಪ್ರಾಣಿಗಳನ್ನು ಸಣ್ಣಸಣ್ಣ ಗೂಡುಗಳಲ್ಲಿ ಹಾಕಿ ಅವುಗಳನ್ನು ತುಪ್ಪಳಕ್ಕಾಗಿ ಕೊಲ್ಲುವಾಗ ಅವು ಹೆದರಿಕೊಂಡು ಹೆಚ್ಚು ವೈರಸ್‌ಗಳನ್ನು ಬಿಡುಗಡೆ ಮಾಡುತ್ತವೆ. ಮನುಷ್ಯನು ವನ್ಯಜೀವಿಗಳ ಆವಾಸ ಸ್ಥಾನಗಳಿಗೆ ಲಗ್ಗೆಹಾಕಿ ಜಗತ್ತಿನಾದ್ಯಂತ ಅರಣ್ಯ ಭೂಮಿಯನ್ನು ಆಕ್ರಮಿಸಿಕೊಳ್ಳುತ್ತಿರುವುದರಿಂದ ವನ್ಯಪ್ರಾಣಿಗಳು ನಾಡಿಗೆ ಬಂದು ಜನರ ಕೈಯಲ್ಲಿ ಸಾಯತ್ತಿವೆ. ಅರಣ್ಯಗಳಲ್ಲಿರುವ ಜೀವವೈವಿಧ್ಯದಲ್ಲಿ ಸಾವಿರಾರು ವೈರಸ್‌ಗಳು ಮನೆ ಮಾಡಿಕೊಂಡಿದ್ದು ಅವು ಮನುಷ್ಯರ ಸಂಪರ್ಕಕ್ಕೆ ಬರುತ್ತವೆ. ಇದರಿಂದ ಶೇ. 31 ಹೊಸ ಸೋಂಕು ಕಾಯಿಲೆಗಳು ಮನುಷ್ಯನಿಗೆ ಅಂಟಿಕೊಳ್ಳುತ್ತಿವೆ ಎನ್ನಲಾಗಿದೆ. ಅರಣ್ಯ ಪ್ರದೇಶಗಳಲ್ಲಿ ರಸ್ತೆಗಳನ್ನು ನಿರ್ಮಾಣ ಮಾಡುವ ಕ್ಷಣದಿಂದಲೇ ವೈರಸ್‌ಗಳು ಮನುಷ್ಯನ ಸಂಪರ್ಕಕ್ಕೆ ಬಂದುಬಿಡುತ್ತವೆ. 1920ರ ಸುಮಾರಿಗೆ ಎಚ್‌ಐವಿ ವೈರಸ್ ಕಾಂಗೊ ಕಾಡುಗಳಿಂದ ಹೊರಕ್ಕೆ ಬಂದು 1980ರ ಸುಮಾರಿಗೆ ಮನುಷ್ಯರಿಗೆ ಹರಡಿಕೊಂಡಿತು ಎಂದು ಹೇಳಲಾಗುತ್ತದೆ. ಕೆಲವು ಜನರು ಮೊದಲಿಗೆ ಈ ಕಾಡುಗಳಲ್ಲಿ ಮರಗಳನ್ನು ಕಡಿಯುತ್ತಿದ್ದಾಗ ಚಿಂಪಾಂಜಿಗಳಲ್ಲಿ ಮನೆಮಾಡಿಕೊಂಡಿದ್ದ ಎಚ್‌ಐವಿ ವೈರಸ್ ಮನುಷ್ಯನಿಗೆ ಅಂಟಿಕೊಂಡಿತು.

ಆಧುನಿಕ ಜಗತ್ತು ವೈಜ್ಞಾನಿಕವಾಗಿ ತುಂಬಾ ಅಭಿವೃದ್ಧಿ ಹೊಂದಿದ್ದು ವೈರಸ್‌ಗಳು ನಮ್ಮನ್ನು ಏನೂ ಮಾಡಲಾರವು, ನಮಗೆ ಏನೂ ತೊಂದರೆ ಆಗುವುದಿಲ್ಲ ಎಂದು ನಾವು ಊಹಿಸಿಕೊಂಡಿದ್ದೆವು. ಕಳೆದು ಎರಡು ದಶಕಗಳಿಂದ ವಿಜ್ಞಾನಿಗಳು ಅರಣ್ಯನಾಶ, ವನ್ಯಪ್ರಾಣಿಗಳ ಭಕ್ಷಣೆ ಮತ್ತು ಪರಿಸರ ಶೋಷಣೆಯಿಂದ ಸಾಂಕ್ರಾಮಿಕ ರೋಗಗಳು ಅಮರಿಕೊಳ್ಳುತ್ತವೆ ಎಂದು ಎಚ್ಚರಿಸುತ್ತಲೇ ಬರುತ್ತಿದ್ದರು. ಆದರೆ ಇಷ್ಟು ಬೇಗ ಇಷ್ಟೊಂದು ವಿನಾಶಕಾರಿಯಾಗುತ್ತದೆ ಎಂದು ಯಾರೂ ಊಹಿಸಲಿಲ್ಲ. ಚೀನಾದಲ್ಲಿ ಉದ್ಭವಿಸಿದ ಕೋವಿಡ್-19 ಕೊರೋನ ವೈರಸ್‌ನ ಹೊಸ ರೂಪಾಂತರ ವೈರಸ್ ಎಂದು ತ್ವರಿತವಾಗಿ ಕಂಡುಹಿಡಿಯಲಾಯಿತು. ಈ ವೈರಸ್ ಯಾವ ಪ್ರಾಣಿಗಳಿಂದ ಮನುಷ್ಯನ ಸಂಪರ್ಕಕ್ಕೆ ಬಂದಿತು ಎನ್ನುವುದನ್ನು ಮೊದಲಿಗೆ ಹುಡುಕಲಾಯಿತು.

ಬಾವಲಿಗಳಲ್ಲಿ ಕಂಡುಬಂದ ಈ ಕೊರೋನ ವೈರಸ್ ದಕ್ಷಿಣ ಚೀನಾದ ಯುನಾನ್ ಪ್ರಾಂತದ ಗ್ರಾಮೀಣ ಪ್ರದೇಶಗಳಿಂದ ಬಂದಿದೆ ಎಂಬುದಾಗಿ ಗೊತ್ತಾಗಿದೆ. ಈ ಪ್ರದೇಶಗಳ ಕಾಡುಗಳಲ್ಲಿರುವ ಬಾವಲಿ ಕಾಲನಿಗಳಲ್ಲಿ ಲಕ್ಷಾಂತರ ಬಾವಲಿಗಳು ಪ್ರತಿರಾತ್ರಿ ಹಲವಾರು ಕಿಲೋಮೀಟರುಗಳ ದೂರ ಹಾರಾಡಿ ತಮ್ಮ ಮರಿಗಳಿಗೆ ಆಹಾರ ತರುತ್ತಿದ್ದವು. ಯುನಾನ್‌ನ ಈ ಪ್ರದೇಶ ಕಳೆದ ಕೆಲವು ದಶಕಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನಂಬಲಾರದಷ್ಟು ಬದಲಾವಣೆಯನ್ನು ಕಂಡಿದೆ. ಅತಿವೇಗದ ರೈಲು ರಸ್ತೆಗಳನ್ನು ಮಾಡಲಾಯಿತು. ಹಾಗೇ ದಟ್ಟ ಕಾಡುಗಳನ್ನು ಕಡಿದು ರಸ್ತೆಗಳನ್ನು ನಿರ್ಮಿಸಲಾಯಿತು. ಕಾರಣ, ಕೋವಿಡ್-19 ಮೂಲವಾಗಿ ಇಲ್ಲಿಂದಲೇ ಪ್ರಾರಂಭವಾಗಿರಬೇಕು ಎಂದು ಹೇಳಲಾಗುತ್ತಿದೆ. ಮೊದಲು ಸೋಂಕಿಗೆ ಒಳಗಾದವರು ಯಾರೋ ಇಲ್ಲಿಂದ ವುಹಾನ್‌ಗೆ ಪ್ರಯಾಣ ಮಾಡಿ ಅಲ್ಲಿಗೆ ಸೋಂಕು ಹರಡಿರಬೇಕು ಅಥವಾ ಇಲ್ಲಿಂದ ಹಿಡಿದು ತಂದ ವನ್ಯಪ್ರಾಣಿಗಳನ್ನು ವುಹಾನ್ ಆರ್ದ್ರ ಮಾರುಕಟ್ಟೆಗಳಿಗೆ ಸಾಗಣೆ ಮಾಡುವ ಮೂಲಕ ಕೋವಿಡ್-19ಅನ್ನು ತಂದು ಸ್ಫೋಟಿಸಿರಬೇಕು.

ಪ್ರಾಕೃತಿಕ ಇತಿಹಾಸ ತಜ್ಞ ಸರ್. ಡೇವಿಡ್ ಅಟೆನ್‌ಬರೋ ಹೀಗೆ ಹೇಳುತ್ತಾರೆ: ‘‘ಇದು ಪ್ರಕೃತಿಯೊಂದಿಗಿನ ನಮ್ಮ ಸಂಬಂಧ ಮತ್ತು ಅದರೊಂದಿಗೆ ನಾವು ಸಂವಹನ ನಡೆಸಿದ ರೀತಿ ಕೋವಿಡ್-19 ಸ್ಫೋಟವಾಗುವುದಕ್ಕೆ ಕಾರಣವಾಗಿದೆ ಎನ್ನುವುದು ನನ್ನ ಅಭಿಪ್ರಾಯ. ನಾವು ಜೀವವೈವಿಧ್ಯವನ್ನು ನಿಜವಾಗಿಯೂ ನಿರ್ಣಾಯಕ ರೀತಿಯಲ್ಲಿ ಬದಲಾಯಿಸುತ್ತಿರುವ ಕಾರಣ ಹೆಚ್ಚು ಅಪಾಯಕ್ಕೆ ಈಗ ಸಿಲುಕಿಕೊಂಡಿದ್ದೇವೆ. ಇದನ್ನು ನಾವು ಹೀಗೆ ಮುಂದುವರಿಸಿದರೆ, ಈ ವರ್ಷ ನಾವು ಅನುಭವಿಸಿದ್ದು ಒಂದು ಘಟನೆಯಾಗಿ ಇಲ್ಲಿಗೆ ನಿಲ್ಲುವುದಿಲ್ಲ. ಪ್ರತಿವರ್ಷ ಕನಿಷ್ಠ ಐದು ಹೊಸ ರೂಪಾಂತರ ತಳಿಗಳು ಮನುಷ್ಯರ ಮಧ್ಯೆ ಕಾಣಿಸಿಕೊಳ್ಳುತ್ತವೆ. ನಾವು ಇವುಗಳ ಜೊತೆಗೆ ನಿಜವಾಗಿಯೂ ಬದುಕಲಾರೆವು. ಈ ವೈರಸ್‌ಗಳು ಸಾಂಕ್ರಾಮಿಕ ಜಗತ್ತಿನ ಆರ್ಥಿಕತೆಯನ್ನು ಧ್ವಂಸ ಮಾಡುತ್ತಿವೆ. ನಾವು ಈಗಿನ ಮಟ್ಟದಲ್ಲಿ ಖಂಡಿತ ಮುಂದುವರಿಯಲಾರೆವು!’’

(ಸರ್. ಡೇವಿಡ್ ಅಟೆನ್‌ಬರೋ ಎಚ್ಚರಿಕೆ, ಬಿಬಿಸಿ ಮತ್ತು ಇತರ ಮೂಲಗಳಿಂದ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)