varthabharthi


ಸಂಪಾದಕೀಯ

ಜನಪ್ರತಿನಿಧಿಗಳು ಎಲ್ಲಿದ್ದಾರೆ?

ವಾರ್ತಾ ಭಾರತಿ : 11 May, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಕೋವಿಡ್-19 ಎರಡನೇ ಅಲೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಬಡವರು ಸಿರಿವಂತರೆನ್ನದೆ ಎಲ್ಲರ ಮನೆಬಾಗಿಲಿಗೂ ಬರುತ್ತಿರುವ ಈ ಜೀವ ಘಾತುಕ ಸೋಂಕನ್ನು ಎದುರಿಸಲು ದುಡ್ಡಿದ್ದವರು ಆಸ್ಪತ್ರೆಗಳ ಹಾಸಿಗೆಗಳನ್ನು ಬುಕ್‌ಮಾಡಿ ಹೇಗೋ ಪಾರಾಗುತ್ತಾರೆಂದರೂ ಅವರಿಗೂ ಅಪಾಯ ತಪ್ಪಿದ್ದಲ್ಲ. ಇನ್ನು ಬಡವರು, ಕೆಳ ಮಧ್ಯಮ ವರ್ಗದವರ ಪರಿಸ್ಥಿತಿ ಯಾರಿಗೂ ಬೇಡ. ಕೈಯಲ್ಲಿ ಕಾಸಿಲ್ಲ. ಹೇಗೋ ಮಾಡಿ ಹಣ ಹೊಂದಿಸಿದರು ಆಸ್ಪತ್ರೆಗಾಗಿ ಅಲೆದಾಟ, ಬೆಡ್‌ಗಾಗಿ ಪರದಾಟ, ಬೆಡ್ ಹೊಂದಿಸಿಕೊಂಡ ನಂತರ ವೆಂಟಿಲೇಟರ್‌ಗಾಗಿ ಮತ್ತೆ ಒದ್ದಾಟ. ಹೀಗಾಗಿ ಸಾಯುತ್ತಿರುವವರಲ್ಲಿ ಬಡವರೇ ಹೆಚ್ಚು. ಹಿಂದುಳಿದ ಚಾಮರಾಜನಗರ ಜಿಲ್ಲೆಯಲ್ಲಿ ಒಂದೇ ವಾರದಲ್ಲಿ ಮೂವತ್ತಕ್ಕೂ ಹೆಚ್ಚು ಸಾವುಗಳು. ಜೊತೆಗೆ ಲಾಕ್‌ಡೌನ್‌ನಿಂದ ನಿಂತು ಹೋದ ಆದಾಯ. ಇಂತಹ ಸಂಕಟದ ಸನ್ನಿವೇಶದಲ್ಲಿ ನೆರವಿಗೆ ಬರಬೇಕಾದವರು ಯಾರು? ಸಹಜವಾಗಿ ಜನಸಾಮಾನ್ಯರು ತಾವು ಮತ ಹಾಕಿ ಗೆಲ್ಲಿಸಿದ ಶಾಸಕರು ಮತ್ತು ಸಂಸದರತ್ತ ಭರವಸೆಯ ಆಸೆಯಿಂದ ನೋಡುತ್ತಾರೆ. ಆದರೆ ನಮ್ಮ ಕರ್ನಾಟಕದ ಪಾಲಿಗೆ ಜನತೆಯ ನಿರೀಕ್ಷೆ ಹುಸಿಯಾಗುತ್ತಿದೆ. ಬಹುತೇಕ ಜನ ಪ್ರತಿನಿಧಿಗಳು ಎಲ್ಲಿದ್ದಾರೆ ಎಂದು ಹುಡುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಜ್ಯದ ರಾಜಧಾನಿ ಬೆಂಗಳೂರು ಸಾವಿನ ಮನೆಯಾಗುತ್ತಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿದೆ. ನಿತ್ಯವೂ ಸಾವಿರಗಟ್ಟಲೆ ಪ್ರಕರಣಗಳು ದಾಖಲಾಗುತ್ತಿವೆ. ಇಂತಹ ಸಂಕಷ್ಟದ ಸನ್ನಿವೇಶದಲ್ಲಿ ತಮಗೆ ಮತ ಹಾಕಿ ಗೆಲ್ಲಿಸಿದ ಜನಸಾಮಾನ್ಯರ ನೆರವಿಗೆ ಧಾವಿಸಬೇಕಾದ ವಿಧಾನಸಭೆ ಮತ್ತು ಲೋಕಸಭಾ ಸದಸ್ಯರು ಎಲ್ಲೂ ಕಾಣುತ್ತಿಲ್ಲ. ಎಲ್ಲರೂ ಹೀಗಿರಲಿಕ್ಕಿಲ್ಲ, ಆದರೆ ಇಂತಹವರ ಸಂಖ್ಯೆ ಜಾಸ್ತಿ ಇದೆ.ಸರಕಾರದಿಂದ ಪರಿಹಾರ ಕಾರ್ಯಗಳೇನೋ ನಡೆದಿವೆ. ಆದರೆ ಅವುಗಳ ಮೇಲುಸ್ತುವಾರಿ ವಹಿಸಿಕೊಂಡು ಜನರಿಗೆ ನೆರವಾಗಬೇಕಾದ ಜನಪ್ರತಿನಿಧಿಗಳು ಯಾರ ಕೈಗೂ ಸಿಗುತ್ತಿಲ್ಲ.ಇನ್ನು ಕೆಲವರು ತಮ್ಮದೇ ಸುರಕ್ಷಿತ ಲೋಕದಲ್ಲಿ ಕುಳಿತು ಫೇಸ್‌ಬುಕ್, ವಾಟ್ಸ್‌ಆ್ಯಪ್‌ಗಳ ಮೂಲಕ ಕಾಟಾಚಾರದ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾ ನೆಮ್ಮದಿಯಾಗಿದ್ದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಸಾಮಾನ್ಯರು ಇಂತಹ ಹಿಂದೆಂದೂ ಕಂಡರಿಯದ ತೊಂದರೆಗೆ ಸಿಲುಕಿದಾಗ ಜನರು ಮತ್ತು ಸರಕಾರದ ನಡುವೆ ಸೇತುವೆಯಾಗಿ ಸರಕಾರದಿಂದ ಬರುವ ಸೌಕರ್ಯಗಳನ್ನು ಒದಗಿಸುವ ಕೆಲಸವನ್ನು ಜನಪ್ರತಿನಿಧಿಗಳು ಮಾಡಬೇಕು. ಈ ಕೆಲಸಕ್ಕಾಗಿ ಅವರು ಸಂಬಳ, ಭತ್ತೆಗಳನ್ನು ಪಡೆಯುತ್ತಾರೆ, ವಿಶೇಷ ಅನುದಾನಗಳೂ ಅವರಿಗಿವೆ. ಶಾಸಕರು, ಸಂಸದರು ಬಂದರೆ ಸರಕಾರಿ ಅಧಿಕಾರಿಗಳೂ ಎಚ್ಚರದಿಂದ ಕೆಲಸ ಮಾಡುತ್ತಾರೆ. ಆದರೆ ನಮ್ಮ ಬಹುತೇಕ ಜನಪ್ರತಿನಿಧಿಗಳು ತಮ್ಮ ಕರ್ತವ್ಯವನ್ನು ಮರೆತಂತೆ ಕಾಣುತ್ತದೆ. ಜನಪ್ರತಿನಿಧಿಗಳು ಕ್ರಿಯಾಶೀಲರಾಗಿದ್ದರೆ ನಮ್ಮ ಜನಸಾಮಾನ್ಯರು ಇಷ್ಟು ಪರದಾಡುವ ಪರಿಸ್ಥಿತಿ ಬರುತ್ತಿರಲಿಲ್ಲ.

ಬೆಂಗಳೂರಿನಲ್ಲಿ 28 ಶಾಸಕರು ಮತ್ತು ಮೂವರು ಸಂಸದರಿದ್ದಾರೆ. ಇವರಲ್ಲಿ ಜನಸಾಮಾನ್ಯರ ಸಂಕಟಗಳಿಗೆ ಸ್ಪಂದಿಸುವವರ ಸಂಖ್ಯೆ ತುಂಬ ಕಡಿಮೆ. ಅಂತಲೇ ಅಲ್ಲಿ ನಿತ್ಯ ದುರಂತಗಳು ಸಂಭವಿಸುತ್ತಿವೆ. ಇನ್ನು ಕೆಲವು ಸಂಸದರು ಮತ್ತು ಶಾಸಕರು ಜನಸಾಮಾನ್ಯರ ನೆರವಿಗೆ ಬರುವ ಬದಲು ಮನುಷ್ಯರನ್ನು ಧರ್ಮದ ಆಧಾರದಲ್ಲಿ ಪ್ರತ್ಯೇಕಿಸಿ ಹಣಿಯುವ ಚಾಳಿ ಹೊಂದಿದ್ದಾರೆ. ಕೋವಿಡ್ ವಾರ್‌ರೂಮ್‌ಗೆ ಹೋಗಿ ಅಲ್ಲಿ ಮುಸ್ಲಿಂ ನೌಕರರು ಎಷ್ಟಿದ್ದಾರೆ ಎಂದು ಹುಡುಕಿ ಅಂತಹವರ ಪಟ್ಟಿ ಮಾಡಿ ಅವರನ್ನು ಕೆಲಸದಿಂದ ತೆಗೆಸುವುದೇ ಇವರ ಕೆಲಸವಾಗಿದೆ. ಶಾಸಕರಲ್ಲಿ ಬಹಳ ಮಂದಿ ಜನರನ್ನು ಭೇಟಿ ಮಾಡುವುದು ಒತ್ತಟ್ಟಿಗೆ ಇರಲಿ ತಮ್ಮ ಕ್ಷೇತ್ರದ ಮತದಾರರ ದೂರವಾಣಿ ಕರೆಯನ್ನೂ ಸ್ವೀಕರಿಸುವುದಿಲ್ಲ.

ಕೋವಿಡ್ ಎರಡನೇ ಅಲೆಗೆ ಹೆದರಿದ ಅನೇಕ ಶಾಸಕರು ಮತ್ತು ಸಂಸದರು ಮನೆ ಬಿಟ್ಟು ಹೊರಗೆ ಬರುತ್ತಿಲ್ಲ. ಮನೆಯಲ್ಲಿ ಇದ್ದರೂ ಇಲ್ಲ ಎಂದು ಸುಳ್ಳು ಹೇಳಿಸುತ್ತಾರೆ. ಕಲ್ಯಾಣ ಕರ್ನಾಟಕದ ಶಾಸಕರು ಕಳೆದ ವರ್ಷ ಕೋವಿಡ್ ಮೊದಲ ಅಲೆ ಬಂದಾಗ ಆಹಾರದ ಕಿಟ್ ಒದಗಿಸುವಂತಹ ಕೆಲಸ ಮಾಡಿದರು. ಆದರೆ ಈ ವರ್ಷ ಎರಡನೇ ಅಲೆ ಬಂದಾಗ ಅವರಲ್ಲಿ ಹೆಚ್ಚಿನವರು ನಾಪತ್ತೆಯಾಗಿದ್ದಾರೆ.

ಬೆಂಗಳೂರು ಮತ್ತು ಕಲ್ಯಾಣ ಕರ್ನಾಟಕದ ಶಾಸಕರು ಹೀಗಿದ್ದರೆ ಇನ್ನು ಮುಂಬೈ ಕರ್ನಾಟಕ ಭಾಗದ ಧಾರವಾಡ, ಮುಂತಾದ ಜಿಲ್ಲೆಗಳ ಜನ ಪ್ರತಿನಿಧಿಗಳು ಸಭೆ, ಸಮಾರಂಭ, ಸಲಹೆ, ಸೂಚನೆಗಳಿಗೆ ಸೀಮಿತರಾಗಿ ಉಳಿದಿದ್ದಾರೆ. ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ಮುಂತಾದ ಜಿಲ್ಲೆಗಳ ಜನಪ್ರತಿನಿಧಿಗಳು ತಮ್ಮ ಮತಕ್ಷೇತ್ರಕ್ಕೆ ಕಾಲಿಡದೆ ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯಕ್ಷರಾಗಿ ಸಂದೇಶ ನೀಡುವ ಮೂಲಕ ಕೋವಿಡ್ ತೊಲಗಿಸುವ ಸಾಹಸ ಮಾಡುತ್ತಿದ್ದಾರೆ. ಹೀಗಾಗಿ ಜನಸಾಮಾನ್ಯರ ಪರದಾಟ ತಪ್ಪುತ್ತಿಲ್ಲ.

ಜನಪ್ರತಿನಿಧಿಗಳು ಮತಕ್ಷೇತ್ರದ ಜನರ ನೋವಿಗೆ ಸ್ಪಂದಿಸುವ ಜೊತೆಗೆ ಸರಕಾರದ ಮೇಲೆ ಒತ್ತಡ ತಂದು ಕೆಲಸ ಮಾಡಿಸಲು ಮುಂದಾಗಬೇಕು. ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರಾದವರು ರಾಜ್ಯಕ್ಕೆ ನ್ಯಾಯವಾಗಿ ದೊರೆಯಬೇಕಾದ ಸೌಕರ್ಯಗಳಿಗಾಗಿ ಕೇಂದ್ರದ ಮೇಲೆ ಒತ್ತಡ ತರಬೇಕು. ಇತ್ತೀಚೆಗೆ ಕರ್ನಾಟಕಕ್ಕೆ ಹಂಚಿಕೆ ಮಾಡಿರುವ ವೈದ್ಯಕೀಯ ಆಮ್ಲಜನಕವನ್ನು 965 ಟನ್‌ನಿಂದ 1,200 ಟನ್‌ಗೆ ಹೆಚ್ಚಿಸಲು ಕೇಂದ್ರ ನಿರಾಕರಿಸಿತು. ಆಗ ಕರ್ನಾಟಕ ಹೈಕೋರ್ಟ್ ಮಧ್ಯಪ್ರವೇಶ ಮಾಡಿ ತಕ್ಷಣ ಕರ್ನಾಟಕಕ್ಕೆ 1,200 ಟನ್ ಆಮ್ಲಜನಕ ನೀಡಬೇಕೆಂದು ಆದೇಶ ಮಾಡಿತು. ಇದರ ವಿರುದ್ಧ ಕೇಂದ್ರ ಸರಕಾರ ತಡೆ ಕೋರಿ ಸುಪ್ರೀಂ ಕೋರ್ಟ್‌ಗೆ ಹೋಯಿತು. ಸುಪ್ರೀಂ ಕೋರ್ಟ್ ತಡೆ ನೀಡಲು ನಿರಾಕರಿಸಿತು. ಈ ಇಡೀ ಪ್ರಕರಣದಲ್ಲಿ ಕರ್ನಾಟಕದ ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರು ಬಾಯಿ ಮುಚ್ಚಿ ತೆಪ್ಪಗೆ ಕುಳಿತರು. ಕೇಂದ್ರದ ಮೇಲೆ ಒತ್ತಡ ತರುವ ಒಂದೇ ಒಂದು ಪ್ರಯತ್ನವನ್ನೂ ಮಾಡಲಿಲ್ಲ. ಅದರಲ್ಲೂ ಆಳುವ ಬಿಜೆಪಿ ಸಂಸದರು ಪ್ರಧಾನಿ ಕೋಪಗೊಳ್ಳಬಹುದೆಂದು ಬಾಯಿಗೆ ಬಟ್ಟೆ ಕಟ್ಟಿಕೊಂಡು ಕುಳಿತರು. ಕೊನೆಗೆ ಸುಪ್ರೀಂ ಕೋರ್ಟ್ ಕರ್ನಾಟಕದ ನೆರವಿಗೆ ಬರಬೇಕಾಯಿತು. ನಮ್ಮ ಅಕ್ಕಪಕ್ಕದ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಸಂಸದರು ತಮ್ಮ ರಾಜ್ಯದ ಹಿತಾಸಕ್ತಿಯ ಪ್ರಶ್ನೆ ಬಂದಾಗ ಪಕ್ಷಭೇದ ಮರೆತು ಒಂದಾಗಿ ಕೇಂದ್ರದ ಮೇಲೆ ಒತ್ತಡ ತಂದು ಕೆಲಸ ಮಾಡಿಸಿಕೊಳ್ಳುತ್ತಾರೆ. ಆದರೆ ನಮ್ಮ ರಾಜ್ಯದ ಸಂಸದರು ಗೆದ್ದು ಒಮ್ಮೆ ದಿಲ್ಲಿಗೆ ಹೋದರೆ ಸಾಕು ಮತ್ತೆ ಅವರ ದರ್ಶನವಾಗುವುದು ಚುನಾವಣೆ ಬಂದಾಗ ಎಂಬುದು ವಿಷಾದದ ಸಂಗತಿಯಾಗಿದೆ.

ಕೊರೋನದಂತಹ ಸಂಕಷ್ಟದ ಸಂದರ್ಭದಲ್ಲಿ ಜನಪ್ರತಿನಿಧಿಗಳಾದವರು ಜನಸಾಮಾನ್ಯರ ನೋವಿಗೆ ಸ್ಪಂದಿಸಿ ಸಾಂತ್ವನ ನೀಡಲು ಮುಂದಾಗಬೇಕು. ಜನರು ಮತ ಹಾಕಿ ಗೆಲ್ಲಿಸಿದ್ದಾರೆಂದು ವಿಧಾನಸಭೆ ಮತ್ತು ಲೋಕಸಭೆ ಪ್ರವೇಶಿಸಿ ಅಧಿಕಾರದ ಸುಖ ಅನುಭವಿಸುತ್ತಿದ್ದಾರೆ. ಅಧಿಕಾರ ಇರುವವರಲ್ಲಿ ಅಂತಃಕರಣವಿರಬೇಕು. ಇನ್ನು ಮುಂದಾದರೂ ಜನಪ್ರತಿನಿಧಿಗಳು ಜನರ ನೋವು, ಸಂಕಟಗಳಿಗೆ ಸ್ಪಂದಿಸಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)