varthabharthi


ವಿಶೇಷ-ವರದಿಗಳು

ಸಂಕಟಗ್ರಸ್ತರಿಗೆ ಸಾಂತ್ವನ ಈದುಲ್ ಫಿತ್ರ್

ವಾರ್ತಾ ಭಾರತಿ : 11 May, 2021
-ಸುಮಯ್ಯ ರಮೀಝ್, ಪುತ್ತಿಗೆ

ಇಸ್ಲಾಮಿಕ್ ಕ್ಯಾಲೆಂಡರ್‌ನಲ್ಲಿ ‘ರಮಝಾನ್’ ಒಂಭತ್ತನೆಯ ತಿಂಗಳು. ಆ ತಿಂಗಳುದ್ದಕ್ಕೂ ನಿತ್ಯ ಉಪವಾಸ ಆಚರಿಸುವ ಜಗತ್ತಿನೆಲ್ಲೆಡೆಯ ಮುಸ್ಲಿಮರು, ರಮಝಾನ್ ಮುಗಿದಾಗ ಈದುಲ್ ಫಿತ್ರ್‌ನ್ನು ಆಚರಿಸುತ್ತಾರೆ. ಇದನ್ನು ಸಾಮಾನ್ಯವಾಗಿ ರಮದಾನ್ ಹಬ್ಬ ಅಥವಾ ರಮಝಾನ್ ಹಬ್ಬ ಎಂದೂ ಕರೆಯಲಾಗುತ್ತದೆ. ಆದರೆ ನೆನಪಿರಲಿ. ಈ ಹಬ್ಬ ಬರುವುದು ರಮದಾನ್ ತಿಂಗಳಲ್ಲಿ ಅಲ್ಲ. ರಮಝಾನ್‌ನ ಬೆನ್ನಿಗೇ ಬರುವ ಶವ್ವಾಲ್ ಎಂಬ ಹತ್ತನೇ ತಿಂಗಳ ಮೊದಲ ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಆ ದಿನ ಉಪವಾಸ ನಿಷಿದ್ಧವಾಗಿದೆ. ದೇವಾದೇಶ ಪಾಲನೆಯೇ ಮುಸ್ಲಿಮರ ಪಾಲಿನ ಪರಮ ಕರ್ತವ್ಯವಾದ್ದರಿಂದ, ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸಬೇಕೆಂಬ ಆದೇಶವನ್ನು ಪಾಲಿಸಿದಷ್ಟೇ ನಿಷ್ಠೆಯಿಂದ ಅವರು, ಶವ್ವಾಲ್ ತಿಂಗಳ ಮೊದಲ ದಿನ ಉಪವಾಸದ ಮೇಲಿರುವ ನಿಷೇಧವನ್ನೂ ಪಾಲಿಸುತ್ತಾರೆ.

ಅರಬಿ ಭಾಷೆಯಲ್ಲಿ ಹೆಚ್ಚಿನೆಲ್ಲ ಪದಗಳ ಹಿಂದೆ ಮೂರಕ್ಷರಗಳ ಒಂದು ಮೂಲ ಪದವಿರುತ್ತದೆ. ಆ ಮೂಲ ಪದವೇ, ಅದರಿಂದ ಮೂಡಿದ ಇತರ ಪದಗಳ ತಾತ್ಪರ್ಯ ನಿರ್ಣಯಕ್ಕೆ ಅತ್ಯಧಿಕ ಸಹಾಯಕವಾಗುತ್ತದೆ. ‘ಫಿತ್ರ್’ ಪದದ ಹಿಂದಿರುವ ಮೂಲ ಪದ ‘ಫತ್ರ್’ ಅಥವಾ ‘ಫತರ’. ಅದಕ್ಕೆ ಮುರಿಯು, ಮುಗಿಸು, ಪ್ರತ್ಯೇಕಿಸು, ಸೀಳು, ಸಿಡಿಯು ಮುಂತಾದ ಹಲವು ಅರ್ಥಗಳಿವೆ. ಹಗಲಿಡೀ ಉಪವಾಸ ಆಚರಿಸಿದವನು ಸೂರ್ಯಾಸ್ತಮಾನದ ಸಮಯದಲ್ಲಿ ತನ್ನ ಉಪವಾಸವನ್ನು ಮುಗಿಸುವ ಪ್ರಕ್ರಿಯೆಗೆ ‘ಇಫ್ತಾರ್’ ಎನ್ನುತ್ತಾರೆ. ಈ ಇಫ್ತಾರ್ ಕೂಡಾ ಅದೇ ಮೂಲದಿಂದ ಬಂದ ಪದ. ನಿತ್ಯದ ಉಪವಾಸವನ್ನು ಕೊನೆಗೊಳಿಸುವ ಪ್ರಕ್ರಿಯೆಗೆ ಇಫ್ತಾರ್ ಎನ್ನುವಂತೆ ಸಂಪೂರ್ಣ ತಿಂಗಳ ಉಪವಾಸವನ್ನು ಮುಗಿಸುವ ಪ್ರಕ್ರಿಯೆಗೆ ’ಫಿತ್ರ್’ ಎನ್ನುತ್ತಾರೆ. ಇದವೇ ಈದುಲ್ ಫಿತ್ರ್ ಎಂಬ ಪದದ ಹಿನ್ನೆಲೆ.

‘ಈದುಲ್ ಫಿತ್ರ್’ ಆಚರಣೆಯ ಹಿಂದೆ ಹಲವು ಔಚಿತ್ಯಗಳಿವೆ. ಕೆಲವರು ಇದನ್ನು ಒಂದು ತಿಂಗಳ ನಿತ್ಯ ಉಪವಾಸದ ಕರ್ತವ್ಯದಿಂದ ಮುಕ್ತರಾದುದಕ್ಕೆ ಸಂಭ್ರಮಿಸುವ ದಿನ ಎಂಬಂತೆ ಕಾಣುತ್ತಾರೆ. ಆದರೆ ನಿಜವಾಗಿ ಮುಸ್ಲಿಮರಲ್ಲಿ ಹೆಚ್ಚಿನವರು ರಮಝಾನ್ ತಿಂಗಳ ಆಗಮನಕ್ಕಾಗಿ ಬಹುಕಾಲದಿಂದ ಕಾದಿರುತ್ತಾರೆ. ಅಷ್ಟೊಂದು ಧಾರ್ಮಿಕರಲ್ಲದ ಮುಸ್ಲಿಮರಿಗೂ ಉಪವಾಸದ ತಿಂಗಳೊಂದಿಗೆ ಒಂದು ಭಾವನಾತ್ಮಕ ನಂಟು ಇರುತ್ತದೆ. ವರ್ಷವೆಲ್ಲಾ ಮಸೀದಿಯಿಂದ ದೂರವಿದ್ದವರು ಕೂಡಾ ರಮಝಾನ್ ತಿಂಗಳು ಬಂತೆಂದರೆ ಐದೂ ಹೊತ್ತು ಮಸೀದಿಯಲ್ಲಿ ಕಂಡು ಬರುತ್ತಾರೆ. ಅಂಥವರು ತಮ್ಮ ಬದುಕಿನಲ್ಲಿ ರಮಝಾನ್ ಎಂಬ, ಹಲವು ಸತ್ಕರ್ಮಗಳ ಸಂಪನ್ನ ಋತುವನ್ನು ಕಾಣುವ ಸೌಭಾಗ್ಯ ಮತ್ತೊಮ್ಮೆ ಪ್ರಾಪ್ತವಾಯಿತಲ್ಲಾ ಎಂಬ ಕೃತಾರ್ಥ ಭಾವದೊಂದಿಗೆ ಈದ್ ಆಚರಿಸುತ್ತಾರೆ. ಅವರು ಈದ್‌ನ ದಿನವನ್ನು ಕೃತಜ್ಞತೆಯ ದಿನವಾಗಿ ಕಾಣುತ್ತಾರೆ. ಎಷ್ಟೋ ಮಂದಿಗೆ ರಮಝಾನ್‌ನಲ್ಲಿ ತಮ್ಮ ಬದುಕಿನ ದಿಕ್ಕನ್ನೇ ಬದಲಾಯಿಸಲು ಸಾಧ್ಯವಾಗುವುದುಂಟು. ರಮಝಾನ್ ತಿಂಗಳಲ್ಲಿ, ಕುಟುಂಬ ಮತ್ತು ಸಮಾಜದಲ್ಲಿ ಬೆಳೆದುಕೊಳ್ಳುವ ನಿರ್ಮಲವಾದ ಆಧ್ಯಾತ್ಮಿಕ ವಾತಾವರಣದಲ್ಲಿ ಎಷ್ಟೋ ಮಂದಿ ತಮ್ಮ ಮುಂದಿನ ಬದುಕನ್ನು ಸುಳ್ಳು, ವಂಚನೆ, ಮದ್ಯ, ಜೂಜು, ವ್ಯಭಿಚಾರ, ಮಾದಕವ್ಯಸನ ಮುಂತಾದ ಸಕಲ ಅನಿಷ್ಟಗಳಿಂದ ಮುಕ್ತವಾಗಿಡುವುದಾಗಿ ಪ್ರತಿಜ್ಞೆ ಮಾಡುತ್ತಾರೆ. ಹೆಚ್ಚಿನವರು ಆ ಪ್ರತಿಜ್ಞೆಯನ್ನು ಪಾಲಿಸುತ್ತಾರೆ. ಈ ರೀತಿ ತಮ್ಮ ಬದುಕಿನಲ್ಲಿ ಕ್ರಾಂತಿ ತಂದುಕೊಂಡವರು ಸಹಜವಾಗಿಯೇ ಈದುಲ್ ಫಿತ್ರ್ ದಿನ ಸಂಭ್ರಮಿಸುತ್ತಾರೆ. ಅನೇಕರು ಒಂದು ತಿಂಗಳ ನಿತ್ಯ ಕಠಿಣ ತರಬೇತಿಯ ಅವಧಿಯನ್ನು ಯಶಸ್ವಿಯಾಗಿ ಮುಗಿಸಲು ತಮಗೆ ಸಾಧ್ಯವಾದುದಕ್ಕಾಗಿ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುತ್ತಾರೆ. ಇನ್ನು ಕೆಲವರು ಇದನ್ನು, ಸಾಮಾನ್ಯ ಜೀವನದಲ್ಲಿ ಮತ್ತು ವಿಶೇಷವಾಗಿ ರಮಝಾನ್ ತಿಂಗಳಲ್ಲಿ ತಮ್ಮಿಂದ ಸಂಭವಿಸಿರಬಹುದಾದ ಕುಂದು ಕೊರತೆಗಳ ಕುರಿತು ದೇವರಲ್ಲಿ ಕ್ಷಮೆ ಯಾಚಿಸುವ ದಿನವಾಗಿ ಕಾಣುತ್ತಾರೆ.

ಕುರ್‌ಆನ್ ಅನ್ನು ಮಾನವ ಸಮಾಜಕ್ಕೆ ಅಲ್ಲಾಹನು ನೀಡಿದ ಕೊಡುಗೆಗಳ ಪೈಕಿ ಅತ್ಯಮೂಲ್ಯ ಕೊಡುಗೆ ಎಂದು ಪರಿಗಣಿಸುವ ಮುಸ್ಲಿಮರು ಆ ಅನುಗ್ರಹಕ್ಕಾಗಿ ರಮಝಾನ್ ತಿಂಗಳುದ್ದಕ್ಕೂ ಮತ್ತು ವಿಶೇಷವಾಗಿ ಈದ್‌ನ ದಿನ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುತ್ತಿರುತ್ತಾರೆ. ಜೊತೆಗೆ, ಕುರ್‌ಆನ್‌ನ ಮಾರ್ಗದರ್ಶನ ಪ್ರಕಾರ ಬದುಕುತ್ತೇವೆಂಬ ಸಂಕಲ್ಪಮಾಡುತ್ತಾರೆ.

ಈ ಬಾರಿಯ ಹಬ್ಬ ಎಂದಿನಂತಲ್ಲ. ಕೊರೋನದ ದಿನಗಳಲ್ಲಿ ದುರಂತಗಳ ನೆರಳಲ್ಲಿ ಎಂದಿನಂತೆ ಹಬ್ಬ ಆಚರಿಸಲು ಸಾಧ್ಯವಿಲ್ಲ. ಆದರೆ ಸಮಾಜವನ್ನು ಸಂಮೋಹಿಕ ಸಂಕಟದಿಂದ ಪಾರುಗೊಳಿಸುವ ಕಾರ್ಯದಲ್ಲಿ ಸಂತಸ, ಸಂಭ್ರಮ ಕಾಣ ಬಲ್ಲವರು ಹಬ್ಬದ ದಿನ ಸಂತಸದಿಂದ ವಂಚಿತರಾಗಿರಬೇಕಾಗಿಲ್ಲ. ಅವರು ಹಬ್ಬದ ದಿನವನ್ನು ಅಂತಹ ಚಟುವಟಿಕೆಗಾಗಿಯೇ ಮೀಸಲಿಟ್ಟರೆ ಮತ್ತು ತಮ್ಮ ಬಂಧು ಮಿತ್ರಾದಿಗಳ ಜೊತೆ ಸೇರಿ ನಿರಾಶರಲ್ಲಿ ಆಶಾವಾದ ಮೂಡಿಸುವ, ದುಃಖಿತರಿಗೆ ಸಾಂತ್ವನ ನೀಡುವ ಮತ್ತು ದುರ್ಬಲರಿಗೆ ಬಲ ಒದಗಿಸುವ ಕಾಯಕದಲ್ಲಿ ತೊಡಗಿದರೆ ಹಬ್ಬದ ಸಂಭ್ರಮವೂ ಅವರದಾಗುತ್ತದೆ, ಸಾರ್ಥಕ್ಯದ ಭಾವವೂ ಅವರದಾಗುತ್ತದೆ.

ಈದುಲ್ ಫಿತ್ರ್‌ನ ಅತ್ಯಂತ ಅನುಪಮ ವಿಶೇಷತೆ ಇರುವುದು ಝಕಾತ್ ಅಲ್ ಫಿತ್ರ್‌ನಲ್ಲಿ

ಮುಸ್ಲಿಮ್ ಹಬ್ಬಗಳಲ್ಲಿ ಹಬ್ಬದ ಸಂಭ್ರಮವು ಕೇವಲ ಸಮಾಜದ ಸಂಪನ್ನರಿಗೆ ಮಾತ್ರ ಮೀಸಲಾಗಿ ಉಳಿಯದಂತೆ ನೋಡಿಕೊಳ್ಳುವ ಕೆಲವು ವಿಶೇಷ ಏರ್ಪಾಡುಗಳಿವೆ. ನಿತ್ಯಜೀವನದಲ್ಲಿ ಹಂಚಿ ತಿನ್ನುವ ಸಂಸ್ಕೃತಿಯನ್ನು ಪೋಷಿಸುವ ಇಸ್ಲಾಮ್ ಧರ್ಮದಲ್ಲಿ ಹಬ್ಬದ ದಿನ ಆ ಸಂಸ್ಕೃತಿಗೆ ಅಸಾಮಾನ್ಯ ಮಹತ್ವ ನೀಡಲಾಗಿದೆ. ಆದ್ದರಿಂದಲೇ ಅವರಲ್ಲಿ, ಹಬ್ಬದ ದಿನಗಳೆಂದರೆ ಹೆಚ್ಚು ಸಂಪನ್ನರು ಕಡಿಮೆ ಸಂಪನ್ನರ ಜೊತೆ ಸೇರಿ, ತಮ್ಮ ಬಳಿ ಇದ್ದುದನ್ನು ಹಂಚಿ ತಿನ್ನುವ ದಿನಗಳಾಗಿರುತ್ತವೆ.

ಈದುಲ್ ಫಿತ್ರ್ ನ ಹಗಲು ಆರಂಭವಾಗುವ ಮುನ್ನವೇ ‘ಸದಕಃ ಫಿತ್ರ್’ ಅಥವಾ ‘ಫಿತ್ರ್ ಝಕಾತ್’ ಎಂಬ ಒಂದು ವಿಶೇಷ ದಾನವನ್ನು ಸಮಾಜದ ಎಲ್ಲ ಬಡ ವ್ಯಕ್ತಿ ಮತ್ತು ಕುಟುಂಬಗಳಿಗೆ ತಲುಪಿಸುವ ಕ್ರಮವಿದೆ.

ಕೆಲವರು ‘ಝಕಾತ್’ ಮತ್ತು ‘ಝಕಾತ್ ಅಲ್ ಫಿತ್ರ್’ಗಳ ನಡುವಣ ವ್ಯತ್ಯಾಸ ಅರಿಯದೆ ಗೊಂದಲಕ್ಕೊಳಗಾಗುತ್ತಾರೆ. ಅವರು ತಿಳಿದಿರಬೇಕು: ಝಕಾತ್ ಬೇರೆ, ಝಕಾತ್ ಅಲ್ ಫಿತ್ರ್ ಬೇರೆ. ಝಕಾತ್ ಸಮಾಜದ ಸ್ಥಿತಿವಂತರ ಮೇಲೆ ಅಂದರೆ ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚು ಸಂಪತ್ತು ಉಳ್ಳ ವಯಸ್ಕರ ಮೇಲೆ ಮಾತ್ರ ಕಡ್ಡಾಯ. ಆದರೆ ಝಕಾತ್ ಅಲ್ ಫಿತ್ರ್ ಎಂಬುದು, ನೇರವಾಗಿ ಈದುಲ್ ಫಿತ್ರ್ ಹಬ್ಬಕ್ಕೆ ಸಂಬಂಧಿಸಿದ್ದು. ಅದು ಯಾರೆಲ್ಲರ ಬಳಿ ಹಬ್ಬದ ದಿನದ ಅಗತ್ಯಕ್ಕಿಂತ ಹೆಚ್ಚಿನ ಸವಲತ್ತು ಇದೆಯೋ ಅವರೆಲ್ಲರ ಮೇಲೆ ಕಡ್ಡಾಯ. ಅಂದರೆ ಸಾಮಾನ್ಯವಾಗಿ ಕೆಳ ಮಧ್ಯಮ ವರ್ಗದವರೆಲ್ಲಾ ಇದನ್ನು ಕೊಡಬೇಕಾದವರ ವ್ಯಾಪ್ತಿಯಲ್ಲಿ ಬರುತ್ತಾರೆ. ಝಕಾತ್ ಅಲ್ ಫಿತ್ರ್ ಅನ್ನು ಪ್ರತಿಯೊಬ್ಬ ಸಮರ್ಥ ವಯಸ್ಕನು ತನ್ನ ಪರವಾಗಿ ಮಾತ್ರವಲ್ಲ ತನ್ನ ಮನೆಯವರ ಅಂದರೆ ಪೋಷಣೆಯಲ್ಲಿರುವ ತನ್ನ ತಂದೆ, ತಾಯಿ, ಪತ್ನಿ, ಮತ್ತು ವಯಸ್ಕರಲ್ಲದ ಮಕ್ಕಳ ಪೈಕಿ ಪ್ರತಿಯೊಬ್ಬರ ಪರವಾಗಿಯೂ ಪಾವತಿಸಬೇಕು. ಝಕಾತ್ ಅಲ್ ಫಿತ್ರ್ ಅನ್ನು ಸಾಮಾನ್ಯವಾಗಿ ಆಯಾ ಊರಿನಲ್ಲಿ ಆಹಾರವಾಗಿ ಬಳಸಲಾಗುವ ಅಕ್ಕಿ, ಗೋಧಿ, ಜೋಳ ಮುಂತಾದ ದವಸ ಧಾನ್ಯಗಳ ರೂಪದಲ್ಲಿ ಪಾವತಿಸಲಾಗುತ್ತದೆ. ಆದರೆ ಸಮಾಜದ ತೀರಾ ಬಡ ವರ್ಗದವರನ್ನು ಹಬ್ಬದ ಸಂಭ್ರಮದಲ್ಲಿ ಸಹಭಾಗಿಗಳಾಗಿಸುವುದೇ ಝಕಾತ್ ಅಲ್ ಫಿತ್ರ್‌ನ ಮೂಲ ಉದ್ದೇಶವಾದ್ದರಿಂದ ಧಾನ್ಯದ ಬದಲು ಅದರ ಮೌಲ್ಯವನ್ನು ನಗದಾಗಿ ಪಾವತಿಸುವುದಕ್ಕೂ ಅವಕಾಶವಿದೆ. ಆಧುನಿಕ ಕಾಲದ ಹೆಚ್ಚಿನ ವಿದ್ವಾಂಸರ ಪ್ರಕಾರ ಪ್ರತಿಯೊಬ್ಬ ವ್ಯಕ್ತಿ ತನ್ನ ಪರಿಸರದಲ್ಲಿ ಹೆಚ್ಚು ಬಳಕೆಯಲ್ಲಿರುವ ಧಾನ್ಯವನ್ನು ಆರಿಸಿ, ಅದರ ಕನಿಷ್ಠ ಎರಡೂಕಾಲು ಕಿಲೋಗ್ರಾಮ್‌ನಷ್ಟು ಪ್ರಮಾಣಕ್ಕೆ ಆಯಾ ಪ್ರದೇಶದ ಮಾರುಕಟ್ಟೆಯಲ್ಲಿರುವ ಬೆಲೆಯನ್ನು ತನ್ನ ಹಾಗೂ ತನ್ನ ಪೋಷಣೆಯಲ್ಲಿರುವ ಎಲ್ಲ ಹಿರಿಯ ಮತ್ತು ಕಿರಿಯ ಸದಸ್ಯರ ಪರವಾಗಿ ಝಕಾತ್ ಅಲ್ ಫಿತ್ರ್ ರೂಪದಲ್ಲಿ ಪಾವತಿಸಬೇಕು. ಭಾರತದಲ್ಲಿ ಹಲವು ವಿದ್ವಾಂಸರು ಆ ಕನಿಷ್ಠ ಮೊತ್ತ 80 ರೂಪಾಯಿಯಷ್ಟಾಗುತ್ತದೆಂದು ಅಂದಾಜಿಸುತ್ತಾರೆ. (ಈ ಕುರಿತು ಇನ್ನಷ್ಟು ನಿಖರ ಮಾಹಿತಿ ಬೇಕಾದವರು ತಮ್ಮ ಸಮೀಪದ ತಜ್ಞ ವಿದ್ವಾಂಸರನ್ನು ಸಂಪರ್ಕಿಸಬೇಕಾಗಿ ವಿನಂತಿ.)

ಝಕಾತ್ ಅಲ್ ಫಿತ್ರ್ ಅನ್ನು, ಜನರು ಹಬ್ಬದ ನಮಾಝ್‌ಗೆಂದು ತಮ್ಮ ಮನೆಗಳಿಂದ ಹೊರಡುವ ಮುಂಚೆಯೇ ಅರ್ಹರಿಗೆ ಪಾವತಿಸಬೇಕು. ಇದು ಸಾಧ್ಯವಾಗಬೇಕಾದರೆ ಹಬ್ಬಕ್ಕಿಂತ ಕೆಲವು ದಿನ ಮುಂಚಿತವಾಗಿಯೇ ಈ ಕುರಿತು ಸಿದ್ಧತೆ ಆರಂಭವಾಗಬೇಕು. ಪಾವತಿಸುವವರು ತಾವೆಷ್ಟು ಪಾವತಿಸಬೇಕೆಂಬುದನ್ನು ವಿವರವಾಗಿ ಲೆಕ್ಕ ಹಾಕಬೇಕು. ಅರ್ಹರು ಯಾರು ಎಂಬುದನ್ನು ಗುರುತಿಸುವ ಪ್ರಕ್ರಿಯೆ ಕೂಡಾ ಮುಂಗಡವಾಗಿ ಮತ್ತು ಸಂಘಟಿತ ರೂಪದಲ್ಲಿ ನಡೆಯಬೇಕು. ಆಗ ಹಬ್ಬಕ್ಕೆ ಮುನ್ನವೇ ಎಲ್ಲ ಅರ್ಹರಿಗೆ ಅವರ ಪಾಲಿನ ಝಕಾತ್ ಅಲ್ ಫಿತ್ರ್ ಸಿಕ್ಕಿ ಬಿಡುತ್ತದೆ.

ಇಫ್ತಾರ್ ಕಿಟ್ ವಿತರಣೆ ಮತ್ತು ಝಕಾತ್ ಅಲ್ ಫಿತ್ರ್ ವಿತರಣೆಯನ್ನು ಮಿಶ್ರಗೊಳಿಸಬಾರದು. ಇಫ್ತಾರ್ ಕಿಟ್‌ಗೆ ಅರ್ಹರಾಗಿರುವವರೆಲ್ಲರೂ ಝಕಾತ್ ಅಲ್ ಫಿತ್ರ್ ಗೆ ಅರ್ಹರಾಗಿರಬೇಕಾಗಿಲ್ಲ. ಆದ್ದರಿಂದ ಝಕಾತ್ ಅಲ್ ಫಿತ್ರ್‌ಗೆ ಅರ್ಹರಾದವರನ್ನು ಪ್ರತ್ಯೇಕವಾಗಿ ಗುರುತಿಸಿ ಸಾಧ್ಯವಾದರೆ ಹಬ್ಬಕ್ಕಿಂತ ಒಂದೆರಡು ದಿನ ಮುನ್ನವೇ ಅದನ್ನು ನಗದು ರೂಪದಲ್ಲಿ ಅವರಿಗೆ ತಲುಪಿಸುವ ಏರ್ಪಾಟು ಮಾಡಬಹುದು. ಈ ಕಾರ್ಯದಲ್ಲಿ ಪ್ರಚಾರಪ್ರಿಯರಲ್ಲದ ಪ್ರಾಮಾಣಿಕ ಸಾಮಾಜಿಕ ಕಾರ್ಯಕರ್ತರು ಮತ್ತು ಸ್ವಯಂಸೇವಕರ ಜಾಲ ಇರುವ ಸೇವಾ ಸಂಸ್ಥೆಗಳ ಸೇವೆ ಪಡೆದುಕೊಳ್ಳುವುದು ಒಳ್ಳೆಯದು.

ಇದೊಂದು ಪುಣ್ಯಕಾರ್ಯವಾಗಿ ಸ್ವೀಕೃತವಾಗಬೇಕಿದ್ದರೆ, ಕೊಟ್ಟವರು ಯಾರು ಮತ್ತು ಪಡೆದವರು ಯಾರು ಎಂಬುದು ಚರ್ಚೆಯಾಗದಂತೆ ನೋಡಿಕೊಳ್ಳಬೇಕು.

ಮುಸ್ಲಿಮ್ ಸಮಾಜದಲ್ಲಿನ ಹಬ್ಬಗಳ ಕೆಲವು ವಿಶೇಷತೆಗಳು:

*ಮುಸ್ಲಿಮ್ ಹಬ್ಬಗಳು ಸಂಪೂರ್ಣವಾಗಿ ಮದ್ಯ ಮುಕ್ತವಾಗಿರುತ್ತವೆ.

*ಮುಸ್ಲಿಮ್ ಹಬ್ಬಗಳು ಪಟಾಕಿ ಮುಕ್ತವಾಗಿರುತ್ತವೆ.

*ಮುಸ್ಲಿಮರ ಪಾಲಿಗೆ ಹಬ್ಬದ ದಿನ ಎಂಬುದು ಮೈ ಮರೆಯುವ ಅಥವಾ ದೇವರನ್ನು ಮರೆಯುವ ದಿನವಾಗಿರುವುದಿಲ್ಲ. ಆದ್ದರಿಂದಲೇ ಹಾಡು, ನೃತ್ಯ ಇತ್ಯಾದಿಗಳು ಹಬ್ಬದ ಭಾಗವಾಗಿರುವುದಿಲ್ಲ. ಕೆಲವೆಡೆ ಕೆಲವರು, ವಿಶೇಷವಾಗಿ ಮಕ್ಕಳು ಹಬ್ಬದ ದಿನ ಹಾಡುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಆದರೆ ಅವರು ಹಾಡುವ ಹಾಡುಗಳು ಕೂಡಾ ಭಕ್ತಿ, ಸದ್ ಮೌಲ್ಯ ಮತ್ತು ಸಚ್ಚಾರಿತ್ರ್ಯಗಳಿಗೆ ಸಂಬಂಧಿಸಿರುತ್ತವೆ.

*ನಿತ್ಯ ಐದು ಹೊತ್ತು ನಮಾಝ್ ಮಾಡುವ ಮುಸ್ಲಿಮರು ಹಬ್ಬದ ದಿನ ಎಂಬ ಕಾರಣಕ್ಕಾಗಿ ಆ ತಮ್ಮ ನಿತ್ಯದ ಕರ್ತವ್ಯದಿಂದ ಮುಕ್ತರಾಗುವುದಿಲ್ಲ. ನಿಜವಾಗಿ ಹಬ್ಬದ ದಿನ ಅವರು ಒಂದು ಹೊತ್ತು ಹೆಚ್ಚುವರಿಯಾಗಿ ಅಂದರೆ ಆರು ಹೊತ್ತು ನಮಾಝ್ ಮಾಡುತ್ತಾರೆ.

*ಹಬ್ಬದ ದಿನ ನಡೆಯುವ ವಿಶೇಷ ನಮಾಝ್ ಇತರ ನಮಾಝ್‌ಗಳಿಗಿಂತ ಹಲವು ರೀತಿಯಲ್ಲಿ ಭಿನ್ನವಾಗಿರುತ್ತದೆ. ಇತರ ನಮಾಝ್‌ಗಳಿಗೆ ಹೋಲಿಸಿದರೆ ತಕ್ಬೀರ್ (ಅಲ್ಲಾಹು ಅಕ್ಬರ್ ಅಥವಾ ಅಲ್ಲಾಹನೇ ಸರ್ವೋನ್ನತನು ಎಂಬ ಘೋಷಣೆ) ಅನ್ನು ಹೆಚ್ಚುವರಿಯಾಗಿ ಹಲವು ಬಾರಿ ಘೋಷಿಸಲಾಗುತ್ತದೆ. ಪ್ರತಿ ಶುಕ್ರವಾರದ ವಿಶೇಷ ನಮಾಝ್‌ನಲ್ಲಿ ಮೊದಲು ಉಪದೇಶ ಮತ್ತು ಆ ಬಳಿಕ ಸಾಮೂಹಿಕ ನಮಾಝ್ ನಡೆದರೆ, ಈದ್‌ನ ದಿನ ಮೊದಲು ಸಾಮೂಹಿಕ ನಮಾಝ್ ನಡೆಸಿ ಆ ಬಳಿಕ ಉಪದೇಶ ನೀಡಲಾಗುತ್ತದೆ. ಪ್ರಸ್ತುತ ಉಪದೇಶದಲ್ಲಿ ಜನರಿಗೆ ಅವರ ಮಾನವೀಯ, ಧಾರ್ಮಿಕ ಮತ್ತು ಸಾಮಾಜಿಕ ಕರ್ತವ್ಯಗಳನ್ನು ನೆನಪಿಸಲಾಗುತ್ತದೆ. ಸತ್ಯ, ನ್ಯಾಯ, ಸಹನೆ, ಸಂಯಮ, ಸಚ್ಚಾರಿತ್ರ್ಯ, ಸೇವೆ, ಅನುಕಂಪ ಮುಂತಾದ ಮೌಲ್ಯಗಳ ಕುರಿತು ಜಾಗೃತಿಸಲಾಗುತ್ತದೆ.

*ನೆರೆಯವರನ್ನು ಮತ್ತು ಬಂಧು ಬಳಗದವರನ್ನು ಭೇಟಿಯಾಗುವುದು, ಅನಾರೋಗ್ಯ ಪೀಡಿತರನ್ನು ಮತ್ತು ವಯಸ್ಸಿನ ಕಾರಣ ಮನೆಯಲ್ಲೇ ಉಳಿದಿರುವ ಹಿರಿಯರನ್ನು ಸಂದರ್ಶಿಸುವುದು ಹಾಗೂ ಸಿಹಿತಿಂಡಿಗಳನ್ನು ಮತ್ತು ಮನೆಯಲ್ಲೇ ಮಾಡಿದ ವಿಶೇಷ ಖಾದ್ಯಗಳನ್ನು ಹಂಚಿಕೊಳ್ಳುವುದು ಹಬ್ಬದ ದಿನ ವಿಶೇಷ ಚಟುವಟಿಕೆಗಳಾಗಿರುತ್ತವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)