varthabharthi


ವಿಶೇಷ-ವರದಿಗಳು

"ಪ್ರಥಮ ಉಪವಾಸ ಕೈಗೊಂಡ ದಿನದ ಅನುಭೂತಿ ಮರೆಯಲು ಯಾವತ್ತೂ ಸಾಧ್ಯವಿಲ್ಲ"

ಜಮ್ಮುಕಾಶ್ಮೀರದಲ್ಲಿನ ಕರ್ತವ್ಯದ ವೇಳೆ ರಮಝಾನ್‌ ಉಪವಾಸ ಕೈಗೊಂಡ ಅನುಭವ ಹಂಚಿಕೊಂಡ ಸೇನಾಧಿಕಾರಿ ಮೇ.ಜ. ಯಶ್‌ ಮೋರ್

ವಾರ್ತಾ ಭಾರತಿ : 11 May, 2021

ಮೇಜರ್‌ ಜನರಲ್‌ ಯಶ್‌ ಮೋರ್ photo: scroll.in

ಜಮ್ಮು ಕಾಶ್ಮೀರದಲ್ಲಿ ನೇಮಕವಾದ ಬಳಿಕ ತನ್ನ ಜೀವನದಲ್ಲಿ ಯಾವ ರೀತಿಯ ಬದಲಾವಣೆಗಳು ಸಂಭವಿಸಿತು? ಉಪವಾಸ ವೃತ ಕೈಗೊಂಡ ಕುರಿತಾದಂತೆ ತನ್ನ ಅನುಭವಗಳನ್ನು ಭಾರತೀಯ ಸೇನೆಯ ಮೇಜರ್‌ ಜನರಲ್‌ ಆಗಿದ್ದ ಡಾ. ಯಶ್‌ ಮೋರ್‌ ರವರು scroll.in ನಲ್ಲಿ ಹಂಚಿಕೊಂಡಿದ್ದಾರೆ. 

"ಭಾರತೀಯ ಸೇನೆಯು 2001ರಲ್ಲಿ ನನ್ನನ್ನು ಕಾಶ್ಮೀರದಲ್ಲಿ ನೇಮಕಾತಿ ಮಾಡಿದ್ದು ನನ್ನ ಜೀವನವನ್ನೇ ಬದಲಾಯಿಸಿತು. ಅದಕ್ಕೂ ಮೊದಲು ನನ್ನ 17 ವರ್ಷದ ಸೇವೆಯ ಬಳಿಕ ಲೆಫ್ಟಿನೆಂಟ್‌ ಕರ್ನಲ್‌ ಆಗಿ ನನಗೆ ಮುಂಬಡ್ತಿ ನೀಡಬಹುದೆಂಬ ನಿರೀಕ್ಷೆಯಲ್ಲಿ ನಾನಿದ್ದೆ. ಆದರೆ ನನ್ನ ಜಮ್ಮುಕಾಶ್ಮೀರದ ಅನಂತ್‌ ನಾಗ್‌ ನಲ್ಲಿ 36 ರಾಷ್ಟ್ರೀಯ ರೈಫಲ್‌ ಯುನಿಟ್‌ ನಲ್ಲಿ ನೇಮಕ ಮಾಡಲಾಯಿತು. ಇದು ಸಮರ್ಪಕವಾಗಿರಲಿಲ್ಲ. ಈ ವಿಚಾರದಲ್ಲಿ ಕಮಾಂಡಿಂಗ್‌ ಆಫೀಸರ್‌ ಮಧ್ಯಪ್ರವೇಶಿಸಿ ನಿರ್ದೇಶವನ್ನು ರದ್ದುಗೊಳಿಸಲು ಮುಂದಾದಾಗ ನಾನು ನನ್ನ ನೇಮಕಾತಿಯ ಕುರಿತು ಒಪ್ಪಿಕೊಂಡು, ಇದು ಮುಂದೆ ಸಹಾಯವಾಗಬಹುದು ಎಂದುಕೊಂಡು ದೇಶದ ಕರೆಗೆ ಸಮ್ಮತಿಸಿದೆ.

ಎರಡು ವಾರಗಳ ಬಳಿಕ ನನ್ನ ಕುಟುಂಬದೊಂದಿಗೆ ವಿದಾಯ ಹೇಳಿ ನಾನು ಕಾಶ್ಮೀರ ತಲುಪಿದೆ. ನನ್ನ ವೈಯಕ್ತಿಕ  ಕೆಲಸ ಕಾರ್ಯಗಳ ಮಧ್ಯೆ ನಾನು ಅಲ್ಲಿನ ಸ್ಥಳೀಯ ಧರ್ಮವಾದ ಇಸ್ಲಾಂನ ಕುರಿತು ಅರಿಯಲು ಪ್ರಾರಂಭಿಸಿದೆ. ಅಲ್ಲೇ ಕೋಕೆರಾಂಗ್‌ ಸಮೀಪದಲ್ಲಿ ಓರ್ವ ಮುಸ್ಲಿಂ ವಿದ್ವಾಂಸರನ್ನು ಭೇಟಿಯಾಗುವ ಅವಕಾಶ ದೊರಕಿತು. ಅವರ ಪ್ರೀತಿಯ ಆತಿಥ್ಯ ಸ್ವೀಕರಿಸಿ, ಮಾತನಾಡಿ ಹಿಂದಿರುಗುವ ವೇಳೆ ಅವರೊಂದಿಗೆ ಇಂಗ್ಲಿಷ್‌ ಕುರ್‌ ಆನ್‌ ತರ್ಜುಮೆಯನ್ನು ಕೇಳಿ ಪಡೆದುಕೊಂಡೆ. 

ಬಳಿಕ ಕೆಲ ದಿನಗಳನ್ನು ನಾನು ಕುರ್‌ ಆನ್‌ ಓದುತ್ತಾ ಕಳೆದೆ. ನನ್ನ ಹಾಸಿಗೆಯ ಪಕ್ಕದಲ್ಲೇ ಕುರ್‌ ಆನ್‌ ಯಾವಾಗಲೂ ಇರುತ್ತಿತ್ತು. ಇದರಿಂದಾಗಿಯೇ ಇಸ್ಲಾಂನ ಕುರಿತು ತಿಳಿದುಕೊಳ್ಳುವ ನನ್ನ ಆಗ್ರಹಕ್ಕೆ ಹೃದಯ ಮತ್ತು ಮನಸ್ಸಿನಲ್ಲಿ ಬೇರು ಮೂಡಲು ಪ್ರಾರಂಭವಾಗಿತ್ತು. ಈ ಯಾತ್ರೆ ಪ್ರಾರಂಭವಾದಂದಿನಿಂದ ಇದು ಎಲ್ಲಿಯವರೆಗೆ ತಿರುವು ಪಡೆದುಕೊಳ್ಳಬಹುದು ಎಂಬ ಉಪಾಯ ನನಗಿರಲಿಲ್ಲ. ಇದೇ ಸಂದರ್ಭದಲ್ಲಿ ಕ್ರಿಶ್ಚಿಯನ್‌ ನನ್‌ ಆಗಿದ್ದ ಕರೆನ್‌ ಆರ್ಮ್‌ ಸ್ಟ್ರಾಂಗ್‌ ರವರು ಬರೆದಿದ್ದ ಮುಹಮ್ಮದ್:‌ ಎ ಬಯೋಗ್ರಫಿ ಆಫ್‌ ಫ್ರಾಫೆಟ್‌ ಪುಸ್ತಕವೂ ನನಗೆ ಓದಲು ದೊರಕಿತು. 

ನಾನು ಇಸ್ಲಾಂ ಕುರಿತು ಆಳವಾಗಿ ಅಧ್ಯಯನ ಮಾಡುತ್ತಿದ್ದಂತೆಯೇ ಒಂದು ವಿಚಾರ ನನಗೆ ಸ್ಪಷ್ಟವಾಯಿತು. ಎಲ್ಲಾ ಧರ್ಮಗಳೂ, ಎಲ್ಲಾ ವಿಶ್ವಾಸಗಳೂ ಒಂದೇ ವಿಚಾರನ್ನು ಪ್ರಚುರಪಡಿಸುತ್ತದೆ. ನಮ್ಮ ನಡುವೆ ಭೇದಗಳು ಕಡಿಮೆಯಿದ್ದು, ಸಾಮಾನ್ಯ ವಿಚಾರಗಳೇ ಹೆಚ್ಚಾಗಿವೆ ಎಂದು ಅರಿತುಕೊಂಡೆ. ಇಸ್ಲಾಂ ಭಯೋತ್ಪಾದನೆ ಸಾರುತ್ತದೆ ಎನ್ನುವ ಕೆಲವರ ಹೇಳಿಕೆಗಳಿಗೆ ಯಾವುದೇ ಹುರುಳಿಲ್ಲ ಎಂಬುವುದನ್ನೂ ನಾನು ಅರಿತುಕೊಂಡೆ.

ನನ್ನ ಮೊದಲು ರಮಝಾನ್‌ ಉಪವಾಸ:

ಅಂದು ರಮಝಾನ್‌ ತಿಂಗಳಾಗಿತ್ತು. ಲೆಫ್ಟಿನೆಂಟ್‌ ಜನರಲ್‌ ವಿಕೆ ಪಟಾಂಕರ್‌ ರವರು ನಮ್ಮ ಬೆಟಾಲಿಯನ್‌ ಗೆ ಭೇಟಿ ನೀಡಿದ್ದರು. ಈ ವೇಳೆ ನಮ್ಮನ್ನುದ್ದೇಶಿಸಿ ಮಾತನಾಡುತ್ತಾ ಅವರು, ಮುಸ್ಲಿಮರಿಗೆ ರಮಝಾನ್‌ ತಿಂಗಳು ತುಂಬಾ ಪ್ರಾಮುಖ್ಯವಾಗಿದೆ. ನಾವು ನಮ್ಮ ಆಪರೇಷನ್‌ ಗಳನ್ನು ನಡೆಸುವಾಗ ಜಾಗರೂಕರಾಗಿರಬೇಕು. ಇಲ್ಲಿನ ಸ್ಥಳೀಯರ ಭಾವನೆಗಳಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು. ಇನ್ನು ಕೊನೆಯ ಸಲಹೆಯೇನೆಂದರೆ, "ನಿಮಗೆ ಸಾಧ್ಯವಾದರೆ ಅಧಿಕಾರಿಗಳೆಲ್ಲಾ ರಮಝಾನ್‌ ಉಪವಾಸ ವೃತ ಕೈಗೊಳ್ಳಲು ಪ್ರಯತ್ನಿಸಿ" ಎಂದು ಹೇಳಿದರು.

ಬಳಿಕ ನಾನು ನನ್ನ ವಾಸಸ್ಥಳಕೆ ಹಿಂದಿರುಗಿದ ಬಳಿಕ ʼಈ ಉಪಾಯ ಇದುವರೆಗೂ ನನಗೇಕೆ ಹೊಳೆಯಲಿಲ್ಲ ಎಂದು ನನ್ನಲ್ಲೇ ಪ್ರಶ್ನಿಸಿಕೊಂಡೆ. ರಮಝಾನ್‌ ತಿಂಗಳು ಪ್ರಾರಂಭವಾಯಿತು. ಆ ಪ್ರದೇಶಗಳಲ್ಲೆಲ್ಲಾ ಬದಲಾವಣೆಗಳು ಕಾಣಲು ಶುರುವಾಯಿತು. ಬೆಳಗ್ಗಿನ ಜಾವದಲ್ಲೇ ಮಹಿಳೆಯರು ಸಹ್ರಿಗೆ ತಯಾರು ಮಾಡುವುದು, ಹಾಡುವುದು, ಒಂದು ಗುಟುಕು ನೀರು ಕುಡಿಯದೇ ಮುಸ್ಸಂಜೆಯ ವರೆಗೆ ಕಾಯುವುದು, ಎಲ್ಲರೂ ಸೇರಿ ಇಫ್ತಾರ್‌ ನಿರ್ವಹಿಸುವುದು. ಇದೆಲ್ಲಾ ಮುಂದುವರಿದಿತ್ತು. 

ಒಂದು ದಿನ ನನ್ನ ಮನಸ್ಸಿನಲ್ಲಿದ್ದ ಎಲ್ಲ ವಿಚಾರಗಳನ್ನು ಬದಿಗಿಟ್ಟು ನಾನು ಉಪವಾಸ ವೃತ ಕೈಗೊಳ್ಳಬೇಕೆಂಬ ನಿರ್ಧಾರ ಮಾಡಿದೆ. ಬೆಳಗಿನ ಜಾವ 3 ಗಂಟೆಗೆ ನನ್ನ ಅಲಾರಾಮ್‌ ಸೆಟ್‌ ಮಾಡಿಕೊಂಡೆ. ನಾನು ಇದುವರೆಗೂ ಉಪವಾಸ ಕೈಗೊಂಡಿರಲಿಲ್ಲ. ಒಂದು ವೇಳೆ ಇದನ್ನು ಪೂರೈಸಲು ನನಗೆ ಸಾಧ್ಯವಾಗದಿದ್ದರೆ? ಈ ಬಿಸಿಲಿನಲ್ಲಿ 15 ಗಂಟೆ ಚಾ, ಕಾಫಿ, ನೀರು ಏನನ್ನೂ ಸೇವಿಸದೇ ನಾನು ಇರಬಲ್ಲೆನೇ? ಎಂಬ ಪ್ರಶ್ನೆ ಮನದಲ್ಲಿ ಮೂಡಲು ಪ್ರಾರಂಭವಾಯಿತು.

ಇವೆಲ್ಲದರ ನಡುವೆ ನಾನು ಬೆಳಗ್ಗೆ ಎದ್ದು ನನ್ನ ಸಹ್ರಿಗೆ ತಯಾರು ಮಾಡಲು ಪ್ರಾರಂಭಿಸಿದೆ. 4 ಗಂಟೆಯ ವೇಳೆ ಏನನ್ನೂ ತಿನ್ನಲಾಗದೇ ಇದ್ದರೂ ಕೂಡಾ, ಮುಂದಿನ 15 ಗಂಟೆಗಳನ್ನು ಮನದಲ್ಲೇ ನೆನೆದು ಉಳಿದಿದ್ದ ರೊಟ್ಟಿ, ತರಕಾರಿ ಪಲ್ಯವನ್ನು ತಿಂದೆ. ಉತ್ತಮವಾದ ಹವಾಮಾನವಿದ್ದ ಕಾರಣ ಮೊದಲ ಕೆಲವು ಗಂಟೆಗಳು ಅನಾಯಾಸವಾಗಿ ಕಳೆದು ಹೋಯಿತು. ಬಳಿಕ ಶುರುವಾಯಿತು ನೋಡಿ ಕಠಿಣ ಪರೀಕ್ಷೆಗಳು. ನಾನು ನನ್ನ ಟ್ರೂಪ್‌ ನೊಂದಿಗೆ ಪಟ್ರೋಲ್‌ ಗೆ ತೆರಳಿದೆ. ಅಲ್ಲಿ ವಿಶ್ರಾಂತಿಯ ಸಂದರ್ಭ ಎಲ್ಲರಿಗೂ ನೀರು, ಚಹಾ ವಿತರಿಸಲಾಯಿತು. ನನಗೆ ಬೇಕು ಎಂದಿದ್ದರೂ ನಾನು ಅದನ್ನು ಪಡೆದುಕೊಳ್ಳಲಿಲ್ಲ. ಬಳಿಕ ಅಲ್ಲಿಂದ ಹಿಂದಿರುಗಿದೆವು.

ಮಧ್ಯಾಹ್ನವಾಗುತ್ತಿದ್ದಂತೆಯೇ ಅಗ್ನಿಪರೀಕ್ಷೆ ಪ್ರಾರಂಭವಾಯಿತು. ಗಂಟಲುಗಳು ಒಣಗತೊಡಗಿದವು. ಅತಿಯಾಗಿ ಹಸಿವಾಗಲು ಪ್ರಾರಂಭವಾಯಿತು. ಆದರೂ ನಾನು ಉಪವಾಸವನ್ನು ಬಿಡದಿರಲು ದೃಢ ನಿರ್ಧಾರ ಮಾಡಿದ್ದೆ. ಇವೆಲ್ಲದರ ನಡುವೆ ನನಗೆ ಅನುಭೂತಿ ನೀಡುತ್ತಿದ್ದದ್ದು ಕಾಶ್ಮೀರದ ಸೌಂದರ್ಯವಾಗಿತ್ತು. ಮಧ್ಯಾಹ್ನದ ಊಟದ ವೇಳೆಗೆ ನನ್ನ ತಂಡವು ಕಮಾಂಡರ್‌ ಉಪವಾಸ ವೃತದಲ್ಲಿದ್ದಾರೆ ಎನ್ನುವುದನ್ನು ಅರಿತುಕೊಂಡರು. ಕೆಲವರು ಉಪವಾಸ ಬಿಡಲು ಸೂಚಿಸಿದರೂ, ನನ್ನ ದೃಢ ನಿರ್ಧಾರವನ್ನು ಅವರಗೆ ಬದಲಿಸಲು ಸಾಧ್ಯವಾಗಲಿಲ್ಲ.

ಅಂತೂ ಮುಸ್ಸಂಜೆಯ ವೇಳೆಗೆ ಸೂರ್ಯ ಮುಳುಗುವ ಸಂದರ್ಭ ಕಾಶ್ಮೀರದಲ್ಲಿ ಮತ್ತೊಮ್ಮೆ ಕಲರವ ಪ್ರಾರಂಭವಾಯಿತು. ಮಸೀದಿಗಳಲ್ಲಿ ಆಝಾನ್‌ ಮೊಳಗುವುದನ್ನು ಕಾದು ಎಲ್ಲರೂ ಇಫ್ತಾರ್‌ ಗೆ ಸಿದ್ಧವಾಗುತ್ತಿದ್ದರು. ನಾನೂ ನನ್ನ ಮುಸ್ಲಿಂ ಸಹೋದ್ಯೋಗಿಗಳೊಂದಿಗೆ ಉಪವಾಸ ಬಿಡಲು ಸಿದ್ಧನಾಗಿ ನಮಾಝ್‌ ನ ಚಾಪೆಯಲ್ಲಿ ಕುಳಿತೆ. ಆಝಾನ್‌ ಮೊಳಗುತ್ತಿದ್ದಂತೆಯ ನಾನು ನನ್ನ ಮೊದಲ ಆಹಾರವನ್ನು ಸೇವಿಸಿದೆ. ಅಲ್ಲಿಯವರೆಗೆ ಖರ್ಜೂರಕ್ಕೆ ಇಷ್ಟೊಂದು ಸ್ವಾದವಿದೆ ಎಂದು ನನಗೆ ತಿಳಿದೇ ಇರಲಿಲ್ಲ. ನೀರು ಕೂಡಾ ಇಷ್ಟೊಂದು ಸ್ವಾದಕರವಾಗಿ ಪರಿಣಮಿಸಬಹುದೆಂದು ಅಂದುಕೊಂಡೇ ಇರಲಿಲ್ಲ. ಅಂತೂ ಮೊದಲ ಉಪವಾಸವನ್ನು ನಾನು ಪೂರೈಸಿದ್ದೆ.

ಅಂದಿನ ದಿನದ ನನ್ನ ಸಾಧನೆ ನನಗೆ ತೃಪ್ತಿ ತಂದಿತ್ತು. ನನ್ನ ವೈಯಕ್ತಿಕ ಗುರಿಯನ್ನು ಸಾಧಿಸಲು ನನ್ನಿಂದ ಸಾಧ್ಯ ಎಂಬ ನಂಬಿಕೆ ಮೂಡಿತು. ಅದೇ ವೇಳೆ ನಾನು ನನ್ನ ಬಹುಸಂಖ್ಯಾತ ಭಾವನೆಗಳನ್ನು ಅನುಭವಿಸಿದೆ. ವಿವಿಧ ನಂಬಿಕೆಗಳನ್ನು ಹೊಂದಿರುವ ನನ್ನ ಇತರ ನಾಗರಿಕರ ಕುರಿತು ಅನುಭೂತಿ ಮತ್ತು ಗೌರವವನ್ನು ಹಾಗೂ ತೀವ್ರ ಶಾಂತತೆಯನ್ನು ಅನುಭವಿಸಿದೆ. ದಿನದಲ್ಲಿ 14ರಿಂದ 17 ಗಂಟೆಗಳ ಕಾಲ ಆಹಾರ ಸೇವಿಸದೇ 30 ದಿನ ನಿರಂತರ ವೃತ ಕೈಗೊಳ್ಳುವ ಶತಕೋಟಿ ಜನರಲ್ಲಿ ನಾನೂ ಒಬ್ಬನಾದ ಸಂತೃಪ್ತಿ ನನ್ನಲ್ಲಿ ಮೂಡಿತ್ತು. ಈ ಸಂತೋಷವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ.

ಆ ರಮಝಾನ್‌ ನಲ್ಲಿ ನಾನು 5 ಉಪವಾಸ ವೃತಗಳನ್ನು ಕೈಗೊಂಡೆ. ನನ್ನ ಎಲ್ಲ ಸಹೋದ್ಯೋಗಿಗಳಿಗೆ ಒಂದು ದಿನವಾದರೂ ಉಪವಾಸ ಕೈಗೊಳ್ಳುವಂತೆ ಸೂಚಿಸಿದೆ. ಅದರಲ್ಲಿ ಬಹುತೇಕರು ನನ್ನ ಸಲಹೆಯನ್ನು ಸ್ವೀಕರಿಸಿದರು ಎನ್ನುವುದು ನನಗೆ ತೃಪ್ತಿ ತಂದಿತ್ತು. ಈ ಅನುಭವವನ್ನು ನನಗೆ ಯಾವತ್ತೂ ಮರೆಯಲು ಸಾಧ್ಯವಿಲ್ಲ. ನಮ್ಮ ಲಾಂಗರ್‌ (ಕಿಚನ್)ಗಳಲ್ಲಿ ಮಾಡುವ ಹಲ್ವಾ ಮತ್ತು ಪೂರಿಯನ್ನು ಹೊರಗಿನವರು ಯಾರೂ ರುಚಿ ನೋಡಿರಲಿಲ್ಲ. ನಾವು ಈದ್‌ ದಿನದಂದು ಅದನ್ನು ಎಲ್ಲರಿಗೂ ಹಂಚಿದೆವು. ಕಾಶ್ಮೀರಿಗಳು ಹೃದಯವಂತರು ಮತ್ತು ಆತಿಥ್ಯದಲ್ಲಿ ಎತ್ತಿದ ಕೈ. ನಾನು 17 ವರ್ಷಗಳ ಬಳಿಕ ಅದೇ ಪ್ರದೇಶಕ್ಕೆ ನನ್ನ ಪತ್ನಿಯೊಂದಿಗೆ ಮರಳಿ ಬಂದಾಗ ಸಲ್ಲಿನ ಬಹುತೇಕರು ಅಂದಿನ ಈದ್‌ ಮತ್ತು ನಮ್ಮ ಪ್ರೀತಿಯನ್ನು ನೆನಪಿಸಿದರು. ಈ 2002ರ ರಮಝಾನ್‌ ಅನ್ನು ನನಗೆ ಯಾವತ್ತೂ ಮರೆಯಲು ಸಾಧ್ಯವಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)