varthabharthi


ರಾಷ್ಟ್ರೀಯ

ಸಾಮಾಜಿಕ ಮಾಧ್ಯಮದ ದ್ವೇಷ ಪೋಸ್ಟ್ ಗಳ ಮೇಲೆ ದೀದಿ ಸಮರ: 34 ಎಫ್ಐಆರ್, 21 ಮಂದಿಯ ಬಂಧನ

ವಾರ್ತಾ ಭಾರತಿ : 11 May, 2021

ಕೋಲ್ಕತಾ, ಮೇ 11: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಐದು ದಿನಗಳಲ್ಲಿ ಮಮತಾ ಬ್ಯಾನರ್ಜಿ, ಸಾಮಾಜಿಕ ಜಾಲ ತಾಣದಲ್ಲಿ ನಕಲಿ ಸುದ್ದಿ ಹಾಗೂ ದ್ವೇಷ ಪೋಸ್ಟ್ಗಳ ಮೇಲೆ ಸಮರ ಸಾರಿದ್ದಾರೆ.

ಈ ಹಿಂದೆ ವಿಧಾನ ಸಭೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಜಯ ಗಳಿಸಿದ ಬಳಿಕ ಮೇ 2ರಂದು ಮಮತಾ ಬ್ಯಾನರ್ಜಿ ತನ್ನ ಮೂರನೇ ಮುಖ್ಯಮಂತ್ರಿ ಅಧಿಕಾರಾವಧಿಯಲ್ಲಿ ಕೊರೋನ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದರು.

ಈ ಐದು ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ 550 ನಕಲಿ ಪೋಸ್ಟ್ಗಳನ್ನು ಗುರುತಿಸಲಾಗಿದೆ. ಇದರಲ್ಲಿ ಹೆಚ್ಚಿನ ಪೋಸ್ಟ್ಗಳು ಚುನಾವಣೋತ್ತರ ಹಿಂಸಾಚಾರಕ್ಕೆ ಸಂಬಂಧಿಸಿವೆ. ಬಿಜೆಪಿ, ಅದರ ಘಟಕ ಹಾಗೂ ಬೆಂಬಲಿತ ಸಂಘಟನೆಗಳು ಇದರ ಹಿಂದಿವೆ ಎಂದು ಪಶ್ಚಿಮಬಂಗಾಳ ಪೊಲೀಸರು ಪ್ರತಿಪಾದಿಸಿದ್ದಾರೆ.

ಸಮುದಾಯಗಳ ನಡುವೆ ಉದ್ವಿಗ್ನತೆ ಪ್ರಚೋದಿಸುವ ಹಾಗೂ ತೊಂದರೆ ನೀಡುವ ನಕಲಿ ಹಾಗೂ ಕೋಮು ಸೂಕ್ಷ್ಮ ಪೋಸ್ಟ್ಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಅಪ್ಲೋಡ್ ಮಾಡಿದ ಆರೋಪದಲ್ಲಿ ರಾಜ್ಯಾದ್ಯಂತ ಹಾಗೂ ಕೊಲ್ಕೋತ್ತಾದಿಂದ ಕಳೆದ ಐದು ದಿನಗಳಲ್ಲಿ ಕನಿಷ್ಠ 34 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪಶ್ಚಿಮಬಂಗಾಳದ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇಂತಹ ಪ್ರಕರಣಗಳಲ್ಲಿ ನಂಟು ಹೊಂದಿದ ಕನಿಷ್ಠ 21 ಮಂದಿಯನ್ನು ಬಂಧಿಸಲಾಗಿದೆ. ಎಫ್ಐಆರ್ ದಾಖಲಾದವರಲ್ಲಿ ಬಿಜೆಪಿಯ ಹಿರಿಯ ನಾಯಕರಾದ ಸುವೇಂಧು ಅಧಿಕಾರಿ, ಕೈಲಾಶ್ ವಿಜಯವರ್ಗೀಯ ಹಾಗೂ ಅಗ್ನಿಮಿತ್ರ ಪೌಲ್ ಸೇರಿದ್ದಾರೆ ಎಂದು ಅವರು ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)