varthabharthi


ಅಂತಾರಾಷ್ಟ್ರೀಯ

ಪೈಪ್ಲೈನ್ ಮೇಲಿನ ಸೈಬರ್ ದಾಳಿಯ ಹಿಂದೆ ರಶ್ಯದ ಗುಂಪು: ಜೋ ಬೈಡನ್‌

ವಾರ್ತಾ ಭಾರತಿ : 12 May, 2021

ವಾಶಿಂಗ್ಟನ್, ಮೇ 11: ಅಮೆರಿಕದ ಪೂರ್ವ ಭಾಗದಲ್ಲಿರುವ ಬೃಹತ್ ತೈಲ ಪೈಪ್ಲೈನೊಂದರ ಕಂಪ್ಯೂಟರ್ ವ್ಯವಸ್ಥೆಯ ಮೇಲೆ ದಾಳಿ ನಡೆಸಿ ಪೈಪ್ಲೈನನ್ನು ಸ್ಥಗಿತಗೊಳಿಸಿರುವ ಕೃತ್ಯದ ಹಿಂದೆ ರಶ್ಯದ ಒಂದು ಗುಂಪಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೋಮವಾರ ಆರೋಪಿಸಿದ್ದಾರೆ.

ಕೊಲೋನಿಯಲ್ ಪೈಪ್ಲೈನ್ ಮೇಲೆ ಸೈಬರ್ ದಾಳಿ ನಡೆಸಿ ಅದನ್ನು ನಿಷ್ಕ್ರಿಯಗೊಳಿಸಿರುವ ಗುಂಪನ್ನು ಅಮೆರಿಕದ ತನಿಖಾ ಸಂಸ್ಥೆ ಎಫ್ಬಿಐ ಡಾರ್ಕ್ಸೈಡ್ ಎಂಬುದಾಗಿ ಗುರುತಿಸಿದೆ. ಈ ಗುಂಪು ಕಳೆದ ವರ್ಷ ತಲೆ ಎತ್ತಿದ್ದು, ಕಾರ್ಪೊರೇಟ್ ಕಂಪ್ಯೂಟರ್ ವ್ಯವಸ್ಥೆಗಳನ್ನು ನಿಷ್ಕ್ರಿಯಗೊಳಿಸುವ ಕೃತ್ಯದಲ್ಲಿ ತೊಡಗಿದೆ. ಅವುಗಳು ಸಕ್ರಿಯಗೊಳ್ಳಬೇಕಾದರೆ ಅದಕ್ಕೆ ಹಣ ಕೊಡಬೇಕಾಗುತ್ತದೆ.

ಇದರಲ್ಲಿ ರಶ್ಯ ಶಾಮೀಲಾಗಿದೆ ಎನ್ನುವುದಕ್ಕೆ ಈವರೆಗೆ ಪುರಾವೆ ಲಭ್ಯವಾಗಿಲ್ಲ. ಆದರೆ, ಇದರ ಹಿಂದಿರುವ ಜನರು ರಶ್ಯದಲ್ಲಿದ್ದಾರೆ ಹಾಗೂ ದಾಳಿಯಲ್ಲಿ ಬಳಸಲಾದ ರ್ಯಾನ್ಸಮ್ವೇರ್ ರಶ್ಯದಲ್ಲಿ ಲಭ್ಯವಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬೈಡನ್ ಹೇಳಿದರು.

ಇದನ್ನು ನಿಭಾಯಿಸುವ ಜವಾಬ್ದಾರಿ ರಶ್ಯದ ಮೇಲಿದೆ ಎಂದರು. ಈ ಸೈಬರ್ ದಾಳಿಯಿಂದಾಗಿ ಟೆಕ್ಸಾಸ್ ಮತ್ತು ನ್ಯೂಯಾರ್ಕ್ ನಡುವಿನ 8,850 ಕಿಲೋಮೀಟರ್ ಪೈಪ್ಲೈನ್ ಮೂರು ದಿನಗಳ ಕಾಲ ಸಂಪೂರ್ಣವಾಗಿ ಸ್ತಬ್ಧವಾಗಿದೆ. ಪೈಪ್ಲೈನನ್ನು ಭಾಗಶಃ ತೆರೆಯಲು ಪ್ರಯತ್ನಗಳನ್ನು ನಡೆಸುತ್ತಿರುವುದಾಗಿ ಪೈಪ್ಲೈನ್ ಕಂಪೆನಿ ಕೊಲೋನಿಯಲ್ ಸೋಮವಾರ ಹೇಳಿದೆ.

► ಹಣ ಮಾಡುವುದಷ್ಟೇ ನಮ್ಮ ಉದ್ದೇಶ; ಅನಾಹುತ ಸೃಷ್ಟಿಸುವುದಲ್ಲ!: ಸೈಬರ್ ದಾಳಿಯ ಹಿಂದಿನ ಗುಂಪು

ಅನಾಹುತ ಉಂಟು ಮಾಡುವುದಕ್ಕಾಗಿ ಅಮೆರಿಕದ ಬೃಹತ್ ಇಂಧನ ಪೈಪ್ಲೈನ್ ಮೇಲೆ ತಾನು ಸೈಬರ್ ದಾಳಿ ನಡೆಸಿಲ್ಲ ಎಂದು ರ್ಯಾನ್ಸಮ್ವೇರ್ ಕಂಪೆನಿ ಡಾರ್ಕ್ಸೈಡ್ ಸೋಮವಾರ ಹೇಳಿದೆ.

ಡಾರ್ಕ್ ಸೈಡ್ ವೆಬ್ಸೈಟ್ನಲ್ಲಿ ಹಾಕಲಾದ ಪತ್ರಿಕಾ ಹೇಳಿಕೆಯಲ್ಲಿ, ಗುಂಪು ನೇರವಾಗಿ ಕೊಲೋನಿಯಲ್ ಪೈಪ್ಲೈನ್ ಬಗ್ಗೆ ಪ್ರಸ್ತಾಪಿಸಿಲ್ಲ. ನಮ್ಮ ಉದ್ದೇಶ ಹಣ ಮಾಡುವುದು, ಸಮಾಜಕ್ಕೆ ಸಮಸ್ಯೆಗಳನ್ನು ಉಂಟು ಮಾಡುವುದು ಅಲ್ಲ ಎಂದು ಅದು ಹೇಳಿದೆ.
ಎಷ್ಟು ಹಣಕ್ಕೆ ಬೇಡಿಕೆ ಇಡಲಾಗಿದೆ ಎನ್ನುವುದನ್ನು ಹೇಳಿಕೆ ತಿಳಿಸಿಲ್ಲ. ಅದೇ ವೇಳೆ, ತಾವು ಯಾರೊಂದಿಗೂ ಯಾವುದೇ ಒತ್ತೆ ಹಣ ಪಾವತಿ ಮಾತುಕತೆಯಲ್ಲಿ ತೊಡಗಿಲ್ಲ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.

ಸೈಬರ್ ದಾಳಿ ನಡೆಸಿರುವ ಗುಂಪು ರಾಜಕೀಯಾತೀತ ಎಂದು ತಿಳಿಸಿರುವ ಹೇಳಿಕೆ, ನಮ್ಮನ್ನು ಯಾವುದೇ ನಿರ್ದಿಷ್ಟ ಸರಕಾರದೊಂದಿಗೆ ಗುರುತಿಸುವ ಅಗತ್ಯವಿಲ್ಲ ಎಂದಿದೆ.

► ದಾಳಿಯ ಹಿಂದೆ ಕೈವಾಡವಿಲ್ಲ: ರಶ್ಯ

ತನ್ನ ಬೃಹತ್ ತೈಲ ಪೈಪ್ಲೈನೊಂದರ ಮೇಲೆ ನಡೆದ ಸೈಬರ್ ದಾಳಿಯ ಹಿಂದೆ ರಶ್ಯದಲ್ಲಿರುವ ಸೈಬರ್ ಕ್ರಿಮಿನಲ್ ಗಳ ಗುಂಪಿದೆ ಎಂಬ ಅಮೆರಿಕದ ಆರೋಪವನ್ನು ರಶ್ಯ ಮಂಗಳವಾರ ತಿರಸ್ಕರಿಸಿದೆ.

ಕೆಲವು ಪತ್ರಕರ್ತರ ಕಪೋಲಕಲ್ಪಿತ ಹಾಗೂ ಆಧಾರರಹಿತ ಆರೋಪಗಳನ್ನು ನಾವು ಸ್ಪಷ್ಟವಾಗಿ ತಿರಸ್ಕರಿಸುತ್ತೇವೆ ಹಾಗೂ ರಶ್ಯವು ವರ್ಚುವಲ್ ಕ್ಷೇತ್ರದಲ್ಲಿ ದುರುದ್ದೇಶಪೂರಿತ ಚಟುವಟಿಕೆಗಳನ್ನು ನಡೆಸುವುದಿಲ್ಲ ಎನ್ನುವುದನ್ನು ಪುನರುಚ್ಚರಿಸುತ್ತೇವೆ ಎಂದು ಅಮೆರಿಕದಲ್ಲಿರುವ ರಶ್ಯ ರಾಯಭಾರ ಕಚೇರಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)