varthabharthi


ಕ್ರೀಡೆ

ಬಡತನದಲ್ಲೇ ಬದುಕು ಕಟ್ಟಿದ ಬಾಲಕ

ವಿಶ್ವ ಹರ್ಡಲ್ಸ್ ಶ್ರೇಯಾಂಕದಲ್ಲಿ 3ನೇ ಸ್ಥಾನಕ್ಕೇರಿದ ಮಲಪ್ಪುರಂನ 17 ವರ್ಷದ ಹುಡುಗ ಮುಹಮ್ಮದ್ ಹನಾನ್

ವಾರ್ತಾ ಭಾರತಿ : 12 May, 2021

ತಿರುವನಂತರಪುರ, ಮೇ 12: ಮಲ್ಲಪ್ಪುರಂನ 17ರ ವಯಸ್ಸಿನ ಬಾಲಕ ಮುಹಮ್ಮದ್ ಹನಾನ್ ವಿ. ಈ ತಿಂಗಳು ವಿಶ್ವ ಅಥ್ಲೆಟಿಕ್ಸ್ ಬಿಡುಗಡೆ ಮಾಡಿದ ವಿಶ್ವ ಶ್ರೇಯಾಂಕದಲ್ಲಿ ಮೂರನೇ ಸ್ಥಾನಕ್ಕೇರುವ ಮೂಲಕ  ತಿರೂರು ಪಟ್ಟಣಕ್ಕೆ ಕೀರ್ತಿ ತಂದಿದ್ದಾರೆ.

ಫೆಬ್ರವರಿ 26 ರಂದು ಕ್ಯಾಲಿಕಟ್ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ವಲಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಎರವಲು ಪಡೆದ ಸ್ಪೈಕ್‌ಗಳೊಂದಿಗೆ ಓಡಿದ್ದ  ಹನಾನ್, 13.80 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಬಾಲಕರ 18 ವರ್ಷದೊಳಗಿನವರ ವಿಭಾಗದಲ್ಲಿ 110 ಮೀ . ಹರ್ಡಲ್ಸ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದರು.

ಹೊಸ  ವಿಶ್ವ ಶ್ರೇಯಾಂಕದ ಪ್ರಕಾರ ಈ  ಸಮಯವು(13.80 ಸೆ.) ವಿಶ್ವದಲ್ಲಿ  ಮೂರನೇ ಶ್ರೇಷ್ಠ ಸಮಯವಾಗಿದೆ. ಗಮನಾರ್ಹ ಸಂಗತಿಯೆಂದರೆ, ಹನಾನ್  ಸಿಂಥೆಟಿಕ್ ಟ್ರ್ಯಾಕ್‌ನಲ್ಲಿ ಯಾವುದೇ ತರಬೇತಿಯನ್ನು ಪಡೆದಿಲ್ಲ. ಅವರು ಹೆಚ್ಚಾಗಿ  ಫುಟ್‌ಪಾತ್‌ನಲ್ಲಿ ಹಾಗೂ ತಿರೂರ್‌ನಲ್ಲಿನ ವೆಲ್ಲಚೈಲಿಲ್ ಇರುವ ಮನೆಯ ಸಮೀಪ   ಹಾಗೂ  ಹತ್ತಿರದ ಕಡಲತೀರದಲ್ಲಿ ತರಬೇತಿ  ಪಡೆದಿದ್ದಾರೆ.

“ಈಗ ರಮಝಾನ್ ಸಮಯ. ಹಾಗಾಗಿ ನಿದ್ದೆ ಮಾಡಲು ಹೆಚ್ಚು ಸಮಯ ಸಿಗುತ್ತದೆ ಹಾಗೂ  ನಾನು ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಕನಸು ಕಾಣುತ್ತಿದ್ದೆ. ನಾನು ವಿಶ್ವ ಶ್ರೇಯಾಂಕದ ಮೊದಲ ಮೂರು ಸ್ಥಾನದಲ್ಲಿದ್ದೇನೆ ಎಂದು ನಂಬಲು ಆಗುತ್ತಿಲ್ಲ ”ಎಂದು ಹನಾನ್  ಬುಧವಾರ indianexpress.com ಗೆ ತಿಳಿಸಿದರು.

 ರಷ್ಯಾದ ಕ್ರೀಡಾಪಟುಗಳು ಮೊದಲ ಎರಡು ಸ್ಥಾನಗಳನ್ನು ಪಡೆದರೆ,. ಇಬ್ಬರು ಭಾರತೀಯರಾದ ಸರ್ಥಕ್ ಸದಾಶಿವ್ ಹಾಗೂ  ಶುಬಮ್ ಸಿಂಗ್ ವಿಶ್ವ ಶ್ರೇಯಾಂಕದಲ್ಲಿ 37 ಹಾಗೂ  52 ನೇ ಸ್ಥಾನ ಪಡೆದಿದ್ದಾರೆ.

 “ಹನಾನ್  ಪಾಲಿಗೆ ಇದು ಸಣ್ಣ ಸಾಧನೆಯಲ್ಲ. ಆತ ಶ್ರೇಯಾಂಕವನ್ನು ಕಾಯ್ದುಕೊಂಡರೆ ಅಥವಾ ಸ್ಥಾನವನ್ನು ಉತ್ತಮಗೊಳಿಸಿದರೆ ಅದು ನಿಜವಾಗಿಯೂ ದೊಡ್ಡ ಸಾಧನೆ. ಈಗ ಋತುವಿನ ಆರಂಭಿಕ ದಿನಗಳು.  ಆದರೆ ಸ್ವಲ್ಪ ಸಮಯದವರೆಗೆ ವಿಶ್ವ ನಂ .3 ಸ್ಥಾನವನ್ನು ಗಳಿಸಿದ ಶ್ರೇಯಸ್ಸನ್ನು ಯಾರೂ ಅಲ್ಲಗಳೆಯುವಂತಿಲ್ಲ ”ಎಂದು ಖ್ಯಾತ ಅಥ್ಲೆಟಿಕ್ಸ್ ಸಂಖ್ಯಾಶಾಸ್ತ್ರಜ್ಞ ರಾಮ್ ಮುರಳಿಕೃಷ್ಣನ್ ಎಚ್ಚರಿಸಿದ್ದಾರೆ.

ಮುಹಮ್ಮದ್ ಹನಾನ್  ಹಾಗೂ  ಅವರ ಎರಡನೇ ಸಹೋದರ, 400 ಮೀಟರ್ ಹರ್ಡಲರ್ ಮುಹಮ್ಮದ್ ಆಶಿಕ್,  ಅವರು ತಮ್ಮ ಸುತ್ತಮುತ್ತಲಿನ  ಇತರ ಕೆಲವು ಹುಡುಗರೊಂದಿಗೆ ತರಬೇತಿ ಪಡೆಯುತ್ತಿದ್ದಾರೆ.

ಅಬುಧಾಬಿಯಲ್ಲಿ ಹೌಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿರುವ ಕರೀಮ್ ವಿ. ಹಾಗೂ  ಗೃಹಿಣಿ ನೂರ್ ಜಹಾನ್ ಅವರ ಮೂರನೇ ಮಗನಾಗಿರುವ  ಹನಾನ್  ಅವರಿಗೆ ಕೊಟ್ಟಾಯಂನ ಎಂಜಿ ವಿಶ್ವವಿದ್ಯಾಲಯದಲ್ಲಿ ಎಂಪಿಇಡಿ ಮಾಡುತ್ತಿರುವ ಅವರ ಹಿರಿಯ ಸಹೋದರ ಹರ್ಷದ್ ತರಬೇತಿ ನೀಡುತ್ತಿದ್ದಾರೆ.

ಜನವರಿಯಲ್ಲಿ, ಗುವಾಹಟಿಯಲ್ಲಿ ನಡೆದ ರಾಷ್ಟ್ರೀಯ ಜೂನಿಯರ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಿ ಅಲ್ಲಿ ಅವರು ಚಾಂಪಿಯನ್ ಆದರು.  ದೇವಧರ್ ಸರಕಾರಿ ಹೈಯರ್ ಸೆಕೆಂಡರಿ ಸ್ಕೂಲ್ ನ  ಪ್ಲಸ್ -2 ವಿದ್ಯಾರ್ಥಿ ಯಾಗಿರುವ  ಹನಾನ್ ಗೆ ವೆಲ್ಲಿಂಗ್ಟನ್‌ನ ಮದ್ರಾಸ್ ರೆಜಿಮೆಂಟಲ್ ಸೆಂಟರ್‌ನಲ್ಲಿ ಉದ್ಯೋಗ ಲಭಿಸಿದೆ. ಕೋವಿಡ್ -19 ರ ಎರಡನೇ ಅಲೆಯಿಂದಾಗಿ ಮುಂದೂಡಲ್ಪಟ್ಟ ರಾಜ್ಯ ಮಂಡಳಿ ಪರೀಕ್ಷೆಯನ್ನು ಪೂರ್ಣಗೊಳಿಸಿದ ನಂತರ ಅವರು ಹವಿಲ್ದಾರ್ ಆಗಿ ಕರ್ತವ್ಯಕ್ಕೆ ಸೇರುವ ಸಾಧ್ಯತೆಯಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)