varthabharthi


ಸಂಪಾದಕೀಯ

ಕೊರೋನ ಅಲೆಯಲ್ಲಿ ಉಣ್ಣುತ್ತಿರುವ ಜಾಣರು

ವಾರ್ತಾ ಭಾರತಿ : 13 May, 2021

‘.....ಮದುವೆಯಲ್ಲಿ ಉಂಡವನೇ ಜಾಣ...’ ಎನ್ನುವ ಗಾದೆ ಮಾತು ಮುಂದಿನ ದಿನಗಳಲ್ಲಿ ‘ಕೋರೋನ ಅಲೆಯಲ್ಲಿ ಉಂಡವನೇ ಜಾಣ’ ಎಂದು ಬದಲಾಗುವುದರಲ್ಲಿ ಯಾವ ಅನುಮಾನವೂ ಇಲ್ಲ. ಈ ದೇಶದ ಬಹುಸಂಖ್ಯಾತ ಜನರು ಹಸಿವು, ಕಾಯಿಲೆಗಳಿಂದ ತತ್ತರಿಸಿ ಕೂತಿರುವ ಹೊತ್ತಿನಲ್ಲೇ, ಇನ್ನೊಂದು ಸಣ್ಣ ಗುಂಪು ಯಾರಿಂದ ಎಷ್ಟು ದೋಚಬಹುದು ಎಂಬ ಲೆಕ್ಕಾಚಾರದಲ್ಲಿ ಮುಳುಗಿದೆ. ಒಂದೆಡೆ ಲಾಕ್‌ಡೌನ್, ಮಗದೊಂದೆಡೆ ಕೊರೋನ ಆತಂಕಗಳ ನಡುವೆ ಜನಸಾಮಾನ್ಯರು ಗಾಣಕ್ಕೆ ಸಿಕ್ಕವರಂತೆ ಒದ್ದಾಡುತ್ತಿದ್ದಾರೆ. ವಿಪರ್ಯಾಸವೆಂದರೆ, ಜನರನ್ನು ಕೊರೋನ ಸೋಂಕಿನಿಂದ ಭವಿಷ್ಯದಲ್ಲಿ ಪಾರು ಮಾಡಬಹುದು ಎಂದು ಭಾವಿಸಿರುವ ಲಸಿಕೆಯೂ ವಾಣಿಜ್ಯೀಕರಣವಾಗಿರುವುದು. ಪರಿಣಾಮವಾಗಿ ಜನರು ಲಸಿಕೆಯ ಬಗ್ಗೆ ತೀವ್ರ ಗೊಂದಲದಲ್ಲಿದ್ದಾರೆ.

ದೊಡ್ಡ ಸಂಖ್ಯೆಯ ಜನರು ‘ಇದರ ಸಹವಾಸವೇ ಬೇಡ’ ಎಂದು ಲಸಿಕೆ ಹಾಕಿಸಿಕೊಳ್ಳುವುದರಿಂದ ಹಿಂದೆ ಸರಿಯುತ್ತಿದ್ದಾರೆ. ಭಾರತದಲ್ಲಿ ಸಾಮಾಜಿಕವಾಗಿ ಹಾಗೂ ಅರ್ಥಿಕವಾಗಿ ಹಿಂದುಳಿದಿರುವ ರಾಜ್ಯಗಳು ತಮ್ಮ ಆರೋಗ್ಯ ಬಜೆಟ್‌ಗೆ ಮೀಸಲಿಟ್ಟಿರುವ ಶೇ.30ರಷ್ಟು ಹಣವನ್ನು ತಮ್ಮ ರಾಜ್ಯದ ಜನತೆಗಾಗಿ ಕೋವಿಡ್-19 ಲಸಿಕೆಗಳ ಖರೀದಿಗೆ ಖರ್ಚು ಮಾಡುವಂತಹ ಪರಿಸ್ಥಿತಿ ಈಗ ಬಂದಿದೆ.18ರಿಂದ 44 ವರ್ಷದ ವಯೋಮಾನದವರಿಗೆ ಕೋವಿಡ್-19 ಪ್ರತಿರೋಧಕ ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದ ದೇಶದ 29 ರಾಜ್ಯಗಳಲ್ಲಿ ಬಿಹಾರ, ಛತ್ತೀಸ್‌ಗಡ, ಜಾರ್ಖಂಡ್, ಮಧ್ಯಪ್ರದೇಶ, ಒಡಿಶಾ, ರಾಜಸ್ಥಾನ, ಉತ್ತರಾಖಂಡ ಹಾಗೂ ಉತ್ತರಪ್ರದೇಶ ಕೂಡಾ ಸೇರಿವೆ. ಇದಕ್ಕಾಗಿ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಲಸಿಕೆಯನ್ನು ಖರೀದಿಸಲು ಅವು ತಮ್ಮ ಆರೋಗ್ಯ ಬಜೆಟ್‌ನ ಶೇ.23 ಹಾಗೂ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆಯ ಖರೀದಿಗೆ ಶೇ.30ರಷ್ಟು ಹಣವನ್ನು ಖರ್ಚು ಮಾಡಲೇಬೇಕಾಗುತ್ತದೆ.ಲಸಿಕೆ ಉತ್ಪಾದಕ ಸಂಸ್ಥೆಗಳಿಂದ ತಾವು ಪ್ರತಿ ಡೋಸ್‌ಗೆ 150 ರೂ.ನಂತೆ ಖರೀದಿಸುವುದಾಗಿ ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. ಆದರೆ ಕೋವಿಶೀಲ್ಡ್ ರಾಜ್ಯ ಸರಕಾರಗಳಿಗೆ ಪ್ರತಿ ಡೋಸ್‌ಗೆ 300 ರೂ. ಹಾಗೂ ಕೋವ್ಯಾಕ್ಸಿನ್ ಪ್ರತಿ ಡೋಸ್‌ಗೆ 400 ರೂ.ಗೆ ಪೂರೈಕೆಯಾಗುತ್ತಿದೆ.

ಎಪ್ರಿಲ್ 30ರವರೆಗೆ ಭಾರತವು ಕೇವಲ ನೋಂದಾಯಿತ ಆರೋಗ್ಯಪಾಲನಾ ಕಾರ್ಯಕರ್ತರು, ಮುಂಚೂಣಿಯ ಕಾರ್ಯಕರ್ತರು ಹಾಗೂ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆಯನ್ನು ನೀಡಿತ್ತು. ಆನಂತರ ಕೇಂದ್ರ ಸರಕಾರವು ಲಸಿಕೆ ಪಡೆಯು ವ ಆರ್ಹತೆಯನ್ನು ಎಲ್ಲಾ ವಯಸ್ಕರಿಗೆ ವಿಸ್ತರಿಸಿದೆ. ಸರಕಾರದ ನೂತನ ಲಸಿಕಾ ನೀತಿಯ ಪ್ರಕಾರ ಲಸಿಕಾ ತಯಾರಕ ಸಂಸ್ಥೆಗಳು ತಮ್ಮ ಶೇ. 50ರಷ್ಟು ದಾಸ್ತಾನನ್ನು ಕೇಂದ್ರ ಸರಕಾರ ಖರೀದಿಸಲಿದೆ.ತಯಾರಕರು ತಮ್ಮ ಉಳಿದ ಶೇ.50ರಷ್ಟು ದಾಸ್ತಾನನ್ನು ರಾಜ್ಯ ಸರಕಾರಗಳು ಹಾಗೂ ಖಾಸಗಿ ಆಸ್ಪತ್ರೆಗಳಿಗೆ ವಿತರಿಸಬಹುದಾಗಿದೆ.ಹೀಗೆ 18ರಿಂದ 44 ವರ್ಷದ ವಯೋಮಾನದೊಳಗಿನವರಿಗಾಗಿ ಲಸಿಕೆಗಳನ್ನು ಖರೀದಿಸುವ ಹಾಗೂ ನೀಡುವ ಹೊಣೆಗಾರಿಕೆಯು ರಾಜ್ಯ ಸರಕಾರಗಳ ಹೆಗಲಿಗೇರಿದೆ.

ಅಂದ ಹಾಗೆ, 2021-22ನೇ ವಿತ್ತ ವರ್ಷದಲ್ಲಿ ಕೋವಿಡ್-19 ಲಸಿಕೆಗಾಗಿ ನೀಡಲಾದ 35 ಸಾವಿರ ಕೋಟಿ ರೂ. ಬಜೆಟ್ ಅನುದಾನದ ಕೇವಲ ಶೇ.8.5ನ್ನು (ಅಂದಾಜು 3 ಸಾವಿರ ಕೋಟಿ ರೂ.)ಮಾತ್ರ ಕೇಂದ್ರ ಸರಕಾರ ಬಳಸಿಕೊಂಡಿವೆ. ಉಳಿದ 32 ಸಾವಿರ ಕೋಟಿ ಹಣದಿಂದ ದೇಶದ ಇಡೀ ಜನಸಂಖ್ಯೆಗೆ ಸಾಕಾಗುವಷ್ಟು ಲಸಿಕೆಯನ್ನು ಖರೀದಿಸಬಹುದಾಗಿದೆ ಎಂದು ಇಂಡಿಯಾಸ್ಪೆಂಡ್ ಸಂಸ್ಥೆಯ ವಿಶ್ಲೇಷಣಾ ವರದಿಯೊಂದು ತಿಳಿಸಿದೆ.ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಿಸಿಕೊಳ್ಳುವುದು ದೇಶದ ಬಹುತೇಕ ಜನಸಾಮಾನ್ಯ ರ ಪಾಲಿಗೆ ದುಬಾರಿಯಾಗಿದೆ. ಕೋವಿಡ್-19 ಸಾಂಕ್ರಾಮಿಕವು ಈಗಾಗಲೇ ಕೋಟ್ಯಂತರ ಭಾರತೀಯರನ್ನು ಬಡತನದ ದವಡೆಗೆ ದೂಡಿದೆ. ಖಾಸಗಿ ಆರೋಗ್ಯ ಪಾಲನಾ ಸಂಸ್ಥೆಗಳಿಗೆ ಅಧಿಕ ದರದಲ್ಲಿ ಲಸಿಕೆಯನ್ನು ಮಾರಾಟ ಮಾಡಲು ಕೇಂದ್ರ ಸರಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಲಸಿಕೆ ಉತ್ಪಾದಕರು ಖಾಸಗಿ ಸಂಸ್ಥೆಗಳಿಗೆ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಲಸಿಕೆಗಳನ್ನು ಪೂರೈಕೆ ಮಾಡಲು ಉತ್ತೇಜನ ದೊರಕಿದಂತಾಗಿದೆ. ಪ್ರಸಕ್ತ ಖಾಸಗಿ ಆಸ್ಪತ್ರೆಗಳಿಗೆ ಕೋವಿಶೀಲ್ಡ್ ಲಸಿಕೆಯನ್ನು ರಾಜ್ಯ ಸರಕಾರಗಳಿಗೆ ಮಾರುವ ದರದ ಎರಡು ಪಟ್ಟು ಹಾಗೂ ಕೋವ್ಯಾಕ್ಸಿನನ್ನು ರಾಜ್ಯ ಸರಕಾರಿ ದರದ ಮೂರು ಪಟ್ಟಿನಲ್ಲಿ ಮಾರಾಟ ಮಾಡಲು ಅನುಮತಿ ನೀಡಿದೆ.

ಭಾರತದ ಅತ್ಯಧಿಕ ಜನಸಂಖ್ಯೆಯ ರಾಜ್ಯವಾದ ಉತ್ತರಪ್ರದೇಶ 18ರಿಂದ 44 ವರ್ಷ ವಯೋಮಾನದೊಳಗಿನವರಿಗೆ ಲಸಿಕೆ ನೀಡಲು ಏನಿಲ್ಲವೆಂದರೂ 5,715 ಕೋಟಿ ರೂ.ಗಳನ್ನು ಖರ್ಚು ಮಾಡಬೇಕಿದೆ. ಈ ಮೊತ್ತವು ಆ ರಾಜ್ಯದ 2021-22ನೇ ಸಾಲಿನ ಆರೋಗ್ಯ ಬಜೆಟ್‌ನ ಶೇ.18ರಷ್ಟಾಗಿದೆ. ಒಂದು ವೇಳೆ ಕೋವ್ಯಾಕ್ಸಿನ್ ಮಾತ್ರವೇ ಖರೀದಿಸಿದಲ್ಲಿ ಆ ಮೊತ್ತವು 2 ಸಾವಿರ ಕೋಟಿ ರೂ.ಗಳಿಂದ 7,620 ಕೋಟಿ ರೂ.ಗೆ ಏರಿಕೆಯಾಗಲಿದ್ದು (ಸುಮಾರು 100 ಕೋಟಿ ಡಾಲರ್), ಇದು ಆ ರಾಜ್ಯದ ಆರೋಗ್ಯ ಬಜೆಟ್‌ನ ಶೇ.23ರಷ್ಟಾಗಲಿದೆ. ಹಾಗೆಯೇ ಬಿಹಾರ ಕೂಡಾ ತನ್ನ ಆರೋಗ್ಯ ಬಜೆಟ್‌ನ ಅತಿ ದೊಡ್ಡ ಭಾಗವನ್ನು 4.9 ಕೋಟಿ ಅರ್ಹ ಜನಸಂಖ್ಯೆಗೆ ಲಸಿಕೆಯನ್ನು ನೀಡಲು ಖರ್ಚು ಮಾಡಬೇಕಾಗಿದೆ.ಈ ವೆಚ್ಚವು ಕೇವಲ ಲಸಿಕೆಗಳ ಡೋಸ್‌ಗಳನ್ನು ಖರೀದಿಸುವುದಕ್ಕೆ ಮಾತ್ರವೇ ಸಾಕಾಗುತ್ತದೆ. ಆದರೆ ಲಸಿಕೆಯ ವಿತರಣೆ ಜಾಲ, ಲಸಿಕೆ ನೀಡಿಕೆ ತರಬೇತಿ, ಸಾರಿಗೆ ಹಾಗೂ ಆನಂತರ ಪ್ರಕ್ರಿಯೆಗಳಿಗೆ ಇನ್ನಷ್ಟು ವೆಚ್ಚ ತಗಲುತ್ತದೆ. ಇದರಿಂದಾಗಿ ಸರಕಾರವು ಕ್ಷಯ, ಮಲೇರಿಯ,ಬಾಣಂತಿ ಚಿಕಿತ್ಸೆ ಹಾಗೂ ಶಿಶು ಆರೋಗ್ಯ ಮತ್ತಿತರ ಪ್ರಮುಖ ಆರೋಗ್ಯ ಕ್ಷೇತ್ರಗಳಿಗೆ ತಾನು ಮಾಡುತ್ತಿರುವ ವೆಚ್ಚವನ್ನು ರಾಜ್ಯವು ಕೋವಿಡ್-19 ಪ್ರತಿರೋಧಕ ಲಸಿಕಾಕರಣಕ್ಕೆ ವರ್ಗಾಯಿಸಬೇಕಾದ ಅನಿವಾರ್ಯತೆಯುಂಟಾಗಿದೆ.

ದೇಶಾದ್ಯಂತ ಹಲವಾರು ಆಸ್ಪತ್ರೆಗಳಲ್ಲಿ ಈಗ ಕೋವಿಶೀಲ್ಡ್ ಲಸಿಕೆಯನ್ನು ಪ್ರತಿ ಡೋಸ್‌ಗೆ 900ರೂ . ಹಾಗೂ ಕೋವ್ಯಾಕ್ಸಿನ್‌ಗೆ 1 ಸಾವಿರ ರೂ. ವಿಧಿಸಲಾಗುತ್ತಿದೆ. ಇಂತಹ ದುಬಾರಿ ದರಗಳು ವಿಧಿಸಿರುವುದು ಭಾರತೀಯ ಜನಸಂಖ್ಯೆಯ ಒಂದು ದೊಡ್ಡ ವರ್ಗಕ್ಕೆ ಹೊರೆಯಾಗಲಿದೆ. ಕೋವಿಡ್-19 ಸಾಂಕ್ರಾಮಿಕದ ಅಟ್ಟಹಾಸವು ಭಾರತದಲ್ಲಿನ ಕಡುಬಡವರ ಸಂಖ್ಯೆಯನ್ನು 7.5 ಕೋಟಿಗೆ ಏರಿಸಿದ್ದು, ಇದು ಬ್ರಿಟನ್‌ನ ಒಟ್ಟು ಜನಸಂಖ್ಯೆಗೆ ಸರಿಸಮಾನವಾಗಿದೆ.ಲಾಕ್‌ಡೌನ್ ಬಳಿಕ ಬಡವರ್ಗ ಮತ್ತು ಮಧ್ಯಮವರ್ಗದ ನಡುವಿನ ಪರದೆ ತೆಳುವಾಗಿದೆ. ಆರೋಗ್ಯದ ಮೇಲೆ ಮಾಡುತ್ತಿರುವ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಡತನದ ರೇಖೆಗೆ ತಳ್ಳಲ್ಪಡುತ್ತಿರುವ ಭಾರತೀಯರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ ಎಂದು ವಿಶ್ವ ಬ್ಯಾಂಕ್ ದತ್ತಾಂಶಗಳು ತಿಳಿಸಿವೆ. ಹೀಗಿರುವಾಗ, ಬಡವರನ್ನು ಈ ಲಸಿಕೆ ತಲುಪುವುದು ಹೇಗೆ? ಬರೇ ಒಂದು ವರ್ಗವಷ್ಟೇ ಲಸಿಕೆಯನ್ನು ಹಾಕಿಕೊಂಡರೆ, ದೇಶ ಸಂಪೂರ್ಣವಾಗಿ ಕೊರೋನವನ್ನು ಗೆಲ್ಲುವುದು ಸಾಧ್ಯವೇ? ಲಸಿಕೆಯ ಹಿಂದಿರುವ ರಾಜಕಾರಣವನ್ನು ಗಮನಿಸಿದಾಗ, ಈ ದೇಶ ಶಾಶ್ವತವಾಗಿ ಕೊರೋನ ಮತ್ತು ಲಾಕ್‌ಡೌನ್ ಜೊತೆಗೆ ಬದುಕು ಸಾಗಿಸಬೇಕಾಗುತ್ತದೆಯೋ ಎಂಬ ಆತಂಕ ಜನರನ್ನು ಕಾಡುತ್ತಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)