varthabharthi


ರಾಷ್ಟ್ರೀಯ

ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಂ ಮಹಿಳೆಯರ ‘ಹರಾಜು’: ಕಾಂಗ್ರೆಸ್ ನಾಯಕಿಯಿಂದ ದೂರು ದಾಖಲು

ವಾರ್ತಾ ಭಾರತಿ : 16 May, 2021

ಹೊಸದಿಲ್ಲಿ, ಮೇ 16: ಮನೋರಂಜನೆಯ ರೂಪವಾಗಿ ಆನ್ಲೈನ್ನಲ್ಲಿ ಮುಸ್ಲಿಂ ಮಹಿಳೆಯರ ಹರಾಜಿನ ಪ್ರಹಸನಕ್ಕಾಗಿ ಬಲಪಂಥೀಯ ಬಳಕೆದಾರರಿಗೆ ಸೇರಿದ್ದೆನ್ನಲಾಗಿರುವ ಹಲವಾರು ಸಾಮಾಜಿಕ ಮಾಧ್ಯಮ ಖಾತೆಗಳು ತೀವ್ರ ಟೀಕೆಗೊಳಗಾಗಿವೆ. ಈ ಅಗ್ಗದ ಮನೋರಂಜನೆಯ ಬಲಿಪಶುಗಳಲ್ಲಿ ಒಬ್ಬರಾದ ಕಾಂಗ್ರೆಸ್ ನ ಸಾಮಾಜಿಕ ಮಾಧ್ಯಮ ರಾಷ್ಟ್ರೀಯ ಸಮನ್ವಯಕಾರರಾದ ಹಸೀಬಾ ಅಮೀನ ಅವರು ಆರೋಪಿಯ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.

ಮೇ 13ರಂದು ‘ಲಿಬರಲ್ ಡೋಜ್ ಲೈವ್’ ಯೂಟ್ಯೂಬ್ ಚಾನೆಲ್ನಲ್ಲಿ ನೇರ ಪ್ರಸಾರದೊಂದಿಗೆ ಈ ವರ್ಚುವಲ್ ‘ಸ್ಫೋರ್ಟ್’ ಆರಂಭಗೊಂಡಿತ್ತು ಎಂದು ಅಮೀನ ಹೇಳಿದ್ದಾರೆ.

‘ಈದ್ ವಿಶೇಷ’ವಾಗಿ ಪ್ರಾಯೋಜಿಸಲಾಗಿದ್ದ ಈ ಲೈವ್ ಕಾರ್ಯಕ್ರಮದಲ್ಲಿ ಪಾಕಿಸ್ತಾನಿ ಮಹಿಳೆಯರ ಚಿತ್ರಗಳನ್ನು ಬಳಸಲಾಗಿತ್ತು ಮತ್ತು ‘ಲಾಲಸೆ ತುಂಬಿದ ಕಣ್ಣುಗಳಿಂದ ಈ ಮಹಿಳೆಯರನ್ನು ಹಿಂಬಾಲಿಸುವಂತೆ ’ವೀಕ್ಷಕರನ್ನು ಆಹ್ವಾನಿಸಲಾಗಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗಳು ವ್ಯಕ್ತವಾದ ಬಳಿಕ ಈ ಲೈವ್ ಸ್ಟ್ರೀಮ್ ವೀಡಿಯೊವನ್ನು ಯೂ ಟ್ಯೂಬ್ನಲ್ಲಿ ಪ್ರೈವೇಟ್ ಆಗಿಸಲಾಗಿತ್ತು.

ಈ ವರ್ಚುವಲ್ ‘ಹರಾಜು’ ಬಳಿಕ ಶುಕ್ರವಾರ ಬೆಳಗಿನ ಜಾವದಲ್ಲಿ ಟ್ವಿಟರ್ಗೆ ಹರಡಿತ್ತು. ಇದರಲ್ಲಿ ಭಾಗಿಯಾಗಿದ್ದವರು ಮುಸ್ಲಿಂ ಮಹಿಳೆಯರಿಗೆ ಅವಮಾನಕಾರಿಯಾದ ಶಬ್ದಗಳನ್ನು ಬಳಸಿದ್ದರು ಎಂದು ಅಮೀನ ಹೇಳಿದ್ದಾರೆ. ಸ್ವತಃ ಅಮೀನ ಈ ಕಾರ್ಯಕ್ರಮದ ಬಲಿಪಶುವಾಗಿದ್ದರು.

ಅಮೀನ ದೂರು ನೀಡಿದ ಮತ್ತು ಇತರ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಟೀಕೆಗಳ ಬಳಿಕ ಈ ಖಾತೆಗಳನ್ನು ಡಿಲಿಟ್ ಮಾಡಲಾಗಿದೆ ಇಲ್ಲವೇ ಹೆಸರುಗಳನ್ನು ಬದಲಿಸಲಾಗಿದೆ.
ಅಮೀನ ದೂರಿನ ಬಗ್ಗೆ ಪ್ರತಿಕ್ರಿಯೆಗಾಗಿ ಸುದ್ದಿಸಂಸ್ಥೆಯು ದಿಲ್ಲಿ ಪೊಲೀಸ್ ನ ಸಾರ್ವಜನಿಕ ಸಂಪರ್ಕಾಧಿಕಾರಿ ಚಿನ್ಮಯ ಬಿಸ್ವಾಲ್ ಅವರನ್ನು ಸಂಪರ್ಕಿಸಿದ್ದು, ತನಗೆ ಈ ಪ್ರಕರಣದ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ಅವರು ತಿಳಿಸಿದ್ದಾರೆ.

ನೈರುತ್ಯ ದಿಲ್ಲಿ ಜಿಲ್ಲೆಯಲ್ಲಿ ತಾನು ದೂರು ಸಲ್ಲಿಸಿರುವುದಾಗಿ ಅಮೀನ ಹೇಳಿದ್ದು, ದೂರು ತಮಗೆ ಅಧಿಕೃತವಾಗಿ ವರ್ಗಾವಣೆಗೊಂಡ ಬಳಿಕ ವಿಧ್ಯುಕ್ತ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸುವುದಾಗಿ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು. ಆನ್ಲೈನ್ ಪೋರ್ಟಲ್ನಲ್ಲಿ ದೂರು ದಾಖಲಿಸಿದ್ದರೆ ಅದು ಸಂಬಂಧಿತ ಜಿಲ್ಲೆಯನ್ನು ತಲುಪಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ ಎಂದರು.‌

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)