varthabharthi


ರಾಷ್ಟ್ರೀಯ

ದುಃಖಿತರಿಗೆ ಧರ್ಮದ ಅಗತ್ಯವಿಲ್ಲ ಎಂಬುದಕ್ಕೆ ಉದಾಹರಣೆಯಾದ ಮಹಿಳೆ

ಕೇರಳದಲ್ಲಿ ಹಿಂದು-ಕ್ರಿಶ್ಚಿಯನ್ ಚಿತಾಗಾರ ನಿರ್ವಹಿಸುತ್ತಿರುವ ಸುಬೀನಾ ರಹ್ಮಾನ್

ವಾರ್ತಾ ಭಾರತಿ : 16 May, 2021

ತಿರುವನಂತಪುರಂ, ಮೇ 16: ಕೊರೋನ ಸೋಂಕಿನ ಮಾರಣಾಂತಿಕ ಎರಡನೇ ಅಲೆಯಿಂದಾಗಿ ಮೃತರ ಸಂಖ್ಯೆ ಹೆಚ್ಚುತ್ತಿದ್ದು  ಮೃತರಿಗೆ ಗೌರವಪೂರ್ವಕ ಅಂತ್ಯಸಂಸ್ಕಾರ ಅಸಾಧ್ಯ ಎಂಬ ಪರಿಸ್ಥಿತಿ ನೆಲೆಸಿದೆ. ಇಂತಹ ಪರಿಸ್ಥಿತಿಯಲ್ಲೂ  ಕೇರಳದ ಸುಬಿನಾ ರಹ್ಮಾನ್ ಎಂಬ ಮಹಿಳೆ ಕಳೆದ 2 ವರ್ಷದಿಂದ ಮೃತದೇಹಗಳಿಗೆ ಅಂತ್ಯಸಂಸ್ಕಾರ ನಡೆಸುವ ಕಾಯಕವನ್ನು ಶೃದ್ಧೆಯಿಂದ ನಿರ್ವಹಿಸುತ್ತಿದ್ದು ದುಃಖಿತರಿಗೆ ಧರ್ಮವಲ್ಲ, ಸಹಾನುಭೂತಿಯ ಅಗತ್ಯವಿದೆ ಎಂಬುದನ್ನು ತೋರಿಸಿಕೊಡುತ್ತಿದ್ದಾರೆ.

ಕಳೆದ 2 ವರ್ಷಗಳಿಂದ ಸುಬಿನಾ ಕೇರಳದ ಇರಿಂಞಾಲಕ್ಕುಡ ಪಟ್ಟಣದ ಸ್ಮಶಾನ(ಚಿತಾಗಾರ)ದ ವ್ಯವಸ್ಥಾಪಕರಾಗಿ ಉಸ್ತುವಾರಿ ನಿರ್ವಹಿಸುತ್ತಿದ್ದಾರೆ. ಆದರೆ ಕೊರೋನ ಸೋಂಕು ತೀವ್ರಗತಿಯಲ್ಲಿ ಉಲ್ಬಣಗೊಂಡ ಬಳಿಕ ಸ್ಮಶಾನದ ವ್ಯವಸ್ಥಾಪಕರ ಜವಾಬ್ದಾರಿಯ ಜೊತೆಗೆ, ಬಹುತೇಕ ಮೃತದೇಹಗಳಿಗೆ ಅಂತ್ಯಸಂಸ್ಕಾರವನ್ನೂ ಇವರೇ ನಿರ್ವಹಿಸಬೇಕಿದೆ.

ಸೋಂಕಿನಿಂದ ಮೃತಪಟ್ಟ ರೋಗಿಗಳ ಮೃತದೇಹವನ್ನು ಸ್ಮಶಾನಕ್ಕೆ ತಲುಪಿಸಿ ಹೋಗುವವರೂ ಇದ್ದಾರೆ. ಆಗ ಮೃತದೇಹವನ್ನು  ವಿದ್ಯುತ್ ಚಿತೆಯಲ್ಲಿರಿಸಿ ಅಂತ್ಯಸಂಸ್ಕಾರ ನಡೆಸುವ ಜೊತೆಗೆ, ಮೃತರ ಸದ್ಗತಿಗಾಗಿ ಪ್ರಾರ್ಥನೆಯನ್ನೂ ತಾನೇ ಸಲ್ಲಿಸುತ್ತೇನೆ ಎಂದು ಸುಬಿನಾ ಹೇಳಿರುವುದಾಗಿ 'thewire.in' ವರದಿ ಮಾಡಿದೆ.

ಬಡ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಸುಬಿನಾ ಎರಡು ವರ್ಷದ ಹಿಂದೆ ಈ ಚಿತಾಗಾರದಲ್ಲಿ ಕ್ಲರ್ಕ್ ಆಗಿ ಸೇರಿದ್ದರು. ಕೆಲ ತಿಂಗಳ ಬಳಿಕ ಶವದಹನ ಮಾಡುವ ಕೆಲಸ ಕಾಲಿಬಿದ್ದಾಗ ಮನಸ್ಸಿಲ್ಲದಿದ್ದರೂ ಈ ಕೆಲಸಕ್ಕೆ ಸೇರಬೇಕಾಯಿತು. ಮನೆಯಲ್ಲಿ ವಿರೋಧದ ಜೊತೆಗೆ, ಹಿಂದುಗಳು ಒಪ್ಪಲಾರರು ಎಂಬ ಹಿಂಜರಿಕೆಯಿತ್ತು.  ಆಗ ಸುಬಿನಾಗೆ ಧೈರ್ಯ ತುಂಬಿದ್ದು, ಶವದಹನ ಕಾರ್ಯದಲ್ಲಿ ಸಹಾಯಕನಾಗಿದ್ದ ಸುನಿಲ್. ಕೇರಳದ ಈಳವ ಸಮುದಾಯ(ಕೆಳವರ್ಗ)ಕ್ಕೆ ಸೇರಿರುವ ಸುನಿಲ್ , ಜಾತಿ-ಧರ್ಮದ ಹೆಸರಿನಲ್ಲಿ ನಡೆಯುವ ಅಂಧಾನುಕರಣೆಗಳನ್ನು ಮೀರಿ ನಡೆಯಬೇಕು ಎಂದು ಬಲವಾಗಿ ಪ್ರತಿಪಾದಿಸುತ್ತಿದ್ದರು.

ಶತಮಾನಗಳಿಂದಲೂ ಈ ಕಾರ್ಯ ಮೇಲ್ವರ್ಗದ ಪುರೋಹಿತರಿಂದ ನಡೆದುಕೊಂಡು ಬರುತ್ತಿತ್ತು. ಆದರೆ ತೀವ್ರ ಪ್ರಮಾಣದ ವಿಪತ್ತುಗಳ ಸಂದರ್ಭದಲ್ಲಿ ಸಾಮಾಜಿಕ ಶ್ರೇಣಿಗಳು ನುಚ್ಚುನೂರಾಗುತ್ತವೆ ಎಂಬುದನ್ನು ಕೊರೋನ ಸೋಂಕು ತೋರಿಸಿಕೊಟ್ಟಿದೆ ಎಂದು ಸುನಿಲ್ ಹೇಳುತ್ತಾರೆ.

ಇದುವರೆಗೆ ಇಲ್ಲಿರುವ ಸಣ್ಣ ಚಿತಾಗಾರದ ಬಗ್ಗೆ ಹೆಚ್ಚಿನವರಿಗೆ ಗೊತ್ತೇ ಇರಲಿಲ್ಲ. ಆದರೆ ಈಗ ದಿನಾ ಕನಿಷ್ಟ 8 ಕೊರೋನ ಸೋಂಕಿತರ ಮೃತದೇಹಕ್ಕೆ ಅಂತ್ಯಸಂಸ್ಕಾರ ನಡೆಸಬೇಕಾಗುತ್ತದೆ. ಹೆಚ್ಚಿನ ದಿನ ನಾವು ಅವಧಿಮೀರಿ(ಓವರ್ಟೈಂ) ಕೆಲಸ ಮಾಡಬೇಕಾಗುತ್ತದೆ. ಅಂತ್ಯಸಂಸ್ಕಾರ ನಡೆದ ಬಳಿಕ ಮರುದಿನ ಬೆಳಿಗ್ಗೆ ಯಾಕೆಂದರೆ ಶವದಹನದ ಸ್ಥಳದಿಂದ ಸಂಗ್ರಹಿಸಿದ ಮೂಳೆ ಅಥವಾ ಬೂದಿಯನ್ನು ಕೊಂಡೊಯ್ಯಲು ಕುಟುಂಬದವರು ಬಂದಿರುತ್ತಾರೆ.  ಆ ಬಳಿಕ ಮನೆಗೆ ತೆರಳಿ, ಮನೆಗೆಲಸ ಮುಗಿಸಿ ಮತ್ತೆ ಕರ್ತವ್ಯಕ್ಕೆ ವಾಪಸಾಗುತ್ತೇನೆ ಎಂದು ಸುಬಿನಾ ಹೇಳುತ್ತಾರೆ.

ತನ್ನ ಕೆಲಸ ದೈಹಿಕವಾಗಿ ಮತ್ತು ಮಾನಸಿಕವಾಗಿ ಅತ್ಯಂತ ಶ್ರಮದ ಕಾರ್ಯವಾದರೂ ಇದನ್ನು ಕರ್ತವ್ಯ ಎಂದು ಭಾವಿಸಿದ್ದೇನೆ. ಸತ್ತವರಿಗೂ ಗೌರವವಿರಬೇಕು. ಸ್ಮಶಾನದಲ್ಲಿ, ಚಿತಾಗಾರದಲ್ಲಿ ಮೃತದೇಹಗಳನ್ನು ತಂದು ರಾಶಿ ಹಾಕುತ್ತಿರುವುದನ್ನು ಕಂಡಾಗ ಬೇಸರವಾಗುತ್ತದೆ. ಆದ್ದರಿಂದ ದಿನಾ  ನಮ್ಮಿಂದ ಸಾಧ್ಯವಾದಷ್ಟು ಅಂತ್ಯಸಂಸ್ಕಾರ ನಡೆಸಲು ನಿರ್ಧರಿಸಿದ್ದೇವೆ ಎಂದವರು ಹೇಳಿದ್ದಾರೆ.

ತನ್ನ ಸಮುದಾಯದಲ್ಲಿ ನಡೆಯುವ ಅಂತ್ಯಸಂಸ್ಕಾರದ ಉಸ್ತುವಾರಿ ನಡೆಸಲು ಅವಕಾಶ ಸಿಕ್ಕಿಲ್ಲ. ಆದರೆ ಹಿಂದುಗಳ ಮತ್ತು ಕ್ರಿಶ್ಚಿಯನ್ನರ ಆಚರಣೆಗೆ ಸಾಮೀಪ್ಯ ದಕ್ಕಿರುವುದು ಗಂಭೀರ ತಾತ್ವಿಕ ಪ್ರಶ್ನೆಗಳಿಗೆ ಅವಕಾಶ ನೀಡಿದೆ. ಸಮಾಜ ಸುಧಾರಕರು ಮಹಿಳೆಯರ ಸಬಲೀಕರಣ ಮತ್ತು ಜಾತಿ-ಧರ್ಮದ ಗೋಡೆಯನ್ನು ಕೆಡವಲು ಅವಿರತ ಪ್ರಯತ್ನ ಮಾಡುತ್ತಿರುವುದು ಯಾಕೆ? ಇಂತಹ ಸವಾಲುಗಳನ್ನು ಎದುರಿಸಿ ನಿಲ್ಲದಿದ್ದರೆ ಒಂದು ಸಮಾಜವಾಗಿ ನಾವು ವಿಫಲವಾಗುತ್ತೇವೆ ಎಂದು ಸುಬಿನಾ ಅಭಿಪ್ರಾಯ ಪಡುತ್ತಾರೆ.

ನನ್ನ  ನೆರೆಮನೆಯವರಿಗೆ ಸೋಂಕು ತಗುಲಿದೆ. ನಾನು  ನಿರ್ವಹಿಸುವ ಕೆಲಸವು ಸೋಂಕು ಹರಡುವ ಅಪಾಯ ಹೆಚ್ಚಿರುವ ಕಾರ್ಯವಾಗಿದೆ. ಈ ಬಾರಿ ಹಬ್ಬದ ಉಪವಾಸ ಪೂರ್ಣಗೊಳಿಸಲು ಆಗಿರಲಿಲ್ಲ. ಆದರೆ ನನಗೆ ಕೆಲಸವೇ ದೇವರು. ಧಾರ್ಮಿಕ ಆಚರಣೆಗಿಂತ ನನ್ನ ಕೆಲಸಕ್ಕೆ ಹೆಚ್ಚಿನ ಆದ್ಯತೆಯಿದೆ. ಈ ಹಿಂದೆಯೂ ದೇವಸ್ಥಾನ,ಚರ್ಚ್ಗೆ ಭೇಟಿ ನೀಡುತ್ತಿದ್ದೆ. ಕೊರೋನ ವಿರುದ್ಧ ಜನಜಾಗೃತಿ ಮೂಡಿಸಲು ಧಾರ್ಮಿಕ ಮುಖಂಡರೊಂದಿಗೆ ಕೆಲಸ ಮಾಡುತ್ತಿದ್ದೆ . 19ನೇ ಶತಮಾನದ ಚಿಂತಕ ಮತ್ತು ಆಧ್ಯಾತ್ಮಿಕ ಮುಖಂಡ ನಾರಾಯಣ ಗುರುಗಳೇ ತನಗೆ ಸ್ಪೂರ್ತಿ ಎಂದವರು ಹೇಳಿದ್ದಾರೆ.

ಸುಬೀನಾರ ತಿಳುವಳಿಕೆ, ಮನಸ್ಸಾಕ್ಷಿ ಅವರನ್ನು ಇತರರಿಗಿಂತ ಭಿನ್ನವಾಗಿಸಿದೆ. ನಮ್ಮ ಊರಿನಲ್ಲಿ ಕೋಮುಸೌಹಾರ್ದತೆ ಉಳಿಸಿಕೊಂಡಿದ್ದೇವೆ. ಆದರೆ ಧ್ರುವೀಕೃತ ಜಗತ್ತಿನಲ್ಲಿ ಕೋಮು ಸೌಹಾರ್ದತೆ ಕಾಯ್ದುಕೊಳ್ಳಲು ನಿರಂತರ ಕಾರ್ಯ ನಿರ್ವಹಿಸಬೇಕಾಗಿದೆ ಎಂಬುದನ್ನು ಸುಬೀನಾ ತೋರಿಸಿಕೊಟ್ಟಿದ್ದಾರೆ ಎಂದು ಇರಿಂಞಾಲಕುಡ ನಗರಪಾಲಿಕೆಯ ಅಧ್ಯಕ್ಷೆ ಸೋನಿಯಾ ಗಿರಿ ಪ್ರತಿಕ್ರಿಯಿಸಿದ್ದಾರೆ.

ಸೂಕ್ತ ಸುರಕ್ಷಾ ಸಾಧನಗಳೊಂದಿಗೆ ಮೃತದೇಹಗಳನ್ನು ಆ್ಯಂಬುಲೆನ್ಸ್ನಿಂದ ಕೆಳಗಿಳಿಸಿ ಚಿತಾಗಾರಕ್ಕೆ ಸಾಗಿಸುವಾಗ ಸುಬೀನಾ ಓರ್ವ ಹಿಂದೂ ಅಥವಾ ಮುಸ್ಲಿಮ್ ಜಾತಿಯವಳೇ ಎಂದು ಯಾರೊಬ್ಬರೂ ಯೋಚಿಸುವುದಿಲ್ಲ. ಅಥವಾ ಮಹಿಳೆ ಅಂತ್ಯಸಂಸ್ಕಾರ ನಡೆಸುವುದೇ ಎಂದು ಯಾರೊಬ್ಬರೂ ಪ್ರಶ್ನಿಸುವುದಿಲ್ಲ. ಸಾವು ಕೂಡಾ ತುಂಬಾ ಹತ್ತಿರದಲ್ಲಿದ್ದರೂ ನಮಗೆ ಸಾವಿನ ಭಯ ಕಾಡುವುದಿಲ್ಲ ಎಂದು ಸುಬೀನಾ ಹೇಳಿದ್ದಾರೆ.

ಚಿತೆಗೆ ಧರ್ಮದ ಹಂಗಿಲ್ಲ

ಚಿತೆಗೆ ಧರ್ಮದ ಹಂಗಿಲ್ಲ. ಚಿತೆ ಧರ್ಮದ ಹೆಸರಿನಲ್ಲಿ ತಾರತಮ್ಯ ತೋರುವುದಿಲ್ಲ. ಅಂತ್ಯಸಂಸ್ಕಾರ ನಡೆಸುವ ಈ ಉತ್ತಮ ಕೆಲಸದಲ್ಲಿ ಇನ್ನಷ್ಟು ಮಹಿಳೆಯರೂ ಪಾಲ್ಗೊಳ್ಳಬೇಕು ಎನ್ನುತ್ತಾರೆ ಸುಬಿನಾ. ಹಲವು ಕಾಲಗಳಿಂದ ಸ್ಮಶಾನದ ಉಸ್ತುವಾರಿ, ನಿರ್ವಹಣೆ, ಅಂತ್ಯಸಂಸ್ಕಾರದ ಕಾರ್ಯ ನಡೆಸುವುದದರಿಂದ ಮಹಿಳೆಯರನ್ನು ದೂರ ಇರಿಸಲಾಗುತ್ತಿತ್ತು. ಈಗ ತಾನು ಮಾಡುತ್ತಿರುವ ಕೆಲಸದಿಂದ ಹಿಂದು ಮತ್ತು ಕ್ರಿಶ್ಚಿಯನ್ ಕುಟುಂಬದವರಿಗೆ ಸೇವೆ ಸಲ್ಲಿಸುವ ಅವಕಾಶ ದಕ್ಕಿದೆ. ಇತರ ಸಮುದಾಯದವರನ್ನು ಅರಿತುಕೊಳ್ಳುವ, ಅವರೊಂದಿಗೆ ಇನ್ನಷ್ಟು ನಿಕಟವಾಗಿಸುವ ಈ ಕೆಲಸ ನಿರ್ವಹಣೆಯಲ್ಲಿ ತನಗೆ ಹೆಮ್ಮೆಯಿದೆ ಎಂದವರು ಹೇಳುತ್ತಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)