varthabharthi


ಪ್ರಚಲಿತ

ನ್ಯಾಯಾಂಗದ ಕ್ರಿಯಾಶೀಲತೆಗೆ ಅಪಸ್ವರವೇಕೆ?

ವಾರ್ತಾ ಭಾರತಿ : 17 May, 2021
ಸನತ್ ಕುಮಾರ್ ಬೆಳಗಲಿ

ದೇಶದಲ್ಲಿ ಇಂತಹ ಸ್ಫೋಟಕ ಪರಿಸ್ಥಿತಿ ನಿರ್ಮಾಣವಾದಾಗ, ನ್ಯಾಯಾಂಗದ ಮಧ್ಯಪ್ರವೇಶ ಅನಿವಾರ್ಯ ಆಗುತ್ತದೆ. ಇಂತಹ ಸೂಕ್ಷ್ಮ ಸನ್ನಿವೇಶದಲ್ಲಿ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿ ನ್ಯಾಯಾಲಯವನ್ನು ಗೌರವದಿಂದ ಕಂಡು ಸರಿಯಾದ ಮಾಹಿತಿಯನ್ನು, ಸಮಜಾಯಿಷಿಯನ್ನು ನೀಡಬೇಕು. ಇದನ್ನು ಬಿಟ್ಟು ನ್ಯಾಯಾಂಗದ ಮೇಲೆ ವಾಗ್ದಾಳಿ ಆರಂಭಿಸುವುದು, ಅದಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವುದು ಸರಕಾರಕ್ಕೆ ಶೋಭೆ ತರುವುದಿಲ್ಲ.ಸ್ವಾತಂತ್ರ್ಯದ ಏಳು ದಶಕಗಳ ನಂತರ ಭಾರತದ ಪ್ರಜಾಪ್ರಭುತ್ವ ಅಪಾಯದ ಸುಳಿಗೆ ಸಿಲುಕಿದೆ. ಪ್ರಭುತ್ವದ ಸೂತ್ರ ಹಿಡಿದವರು ತಮಗೆ ಅಪಥ್ಯವಾಗುವ ಆದೇಶಗಳನ್ನು ನೀಡುತ್ತಿರುವ ನ್ಯಾಯಾಲಯಗಳನ್ನು ನಿಯಂತ್ರಿಸಲು ನೇರ ದಾಳಿಗೆ ಇಳಿದಿದ್ದಾರೆ. ಕೋವಿಡ್ ಲಸಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡುತ್ತಿರುವ ಆದೇಶಗಳಿಂದ ತಾಳ್ಮೆ ಕಳೆದುಕೊಂಡ ಕೇಂದ್ರ ಸಚಿವ ಡಿ. ವಿ. ಸದಾನಂದಗೌಡರ ಬಾಯಿಯಿಂದ ಬಂದ ‘ನೇಣು ಹಾಕಿಕೊಳ್ಳುವ’ ಮಾತಾಗಲಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಅವರು ‘ನ್ಯಾಯಾಧೀಶರು ಸರ್ವಜ್ಞರೇ’ ಎಂದು ಅವಮಾನಕಾರಿ ಮಾತನ್ನು ಆಡಿರುವುದಾಗಲಿ ಆಕಸ್ಮಿಕವಲ್ಲ. ಇದು ನ್ಯಾಯಾಂಗವನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳುವ ಯೋಜನಾ ಬದ್ಧ ಕಾರ್ಯಸೂಚಿ.

ನಿಜ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಪ್ರಜಾಪ್ರಭುತ್ವದ ಆಧಾರಸ್ತಂಭಗಳು. ಒಂದರ ಮೇಲೆ ಇನ್ನೊಂದು ಸವಾರಿ ಮಾಡಬಾರದು. ಆದರೆ, ಜನಸಾಮಾನ್ಯರ ಸಮಸ್ಯೆಗಳಿಗೆ ಶಾಸಕಾಂಗ ಮತ್ತು ಕಾರ್ಯಾಂಗಗಳು ಸ್ಪಂದಿಸದೆ ನಿರ್ಲಕ್ಷ ಮಾಡಿದಾಗ ದಾರಿ ಕಾಣದ ಜನರು ನ್ಯಾಯಾಲಯದ ಬಾಗಿಲು ತಟ್ಟುತ್ತಾರೆ. ತಮ್ಮ ಅಳಲನ್ನು ನಿವೇದಿಸಿಕೊಳ್ಳುತ್ತಾರೆ. ಆಗ ನ್ಯಾಯಾಲಯಗಳು ಕಂಡೂ ಕಾಣದಂತೆ ಕುಳಿತುಕೊಳ್ಳಲು ಆಗುವುದಿಲ್ಲ. ಒಂದು ವೇಳೆ ನ್ಯಾಯಾಂಗ ಕೂಡ ಸುಮ್ಮನೆ ಕುಳಿತರೆ ದೇಶದಲ್ಲಿ ಅಶಾಂತಿ ಮತ್ತು ಅರಾಜಕತೆ ಉಂಟಾಗುತ್ತದೆ.

ಉದಾಹರಣೆಗೆ, ಕೋವಿಡ್ ದೇಶದೆಲ್ಲೆಡೆ ಹಬ್ಬಿದಾಗ ಆಮ್ಲಜನಕದ ಕೊರತೆಯಿಂದ ರೋಗಿಗಳು ಸಾಯುತ್ತಿರುವಾಗ, ಲಸಿಕೆಗಾಗಿ ಜನರು ಅಲೆದಾಡುತ್ತಿರುವ ಸ್ಥಿತಿ ನಿರ್ಮಾಣವಾದಾಗ ನ್ಯಾಯಾಲಯಗಳು ಕಣ್ಣು, ಬಾಯಿ ಮತ್ತು ಕಿವಿ ಮುಚ್ಚಿ ಕುಳಿತುಕೊಳ್ಳಬೇಕೆಂದು ಬಯಸುವುದು ಸರ್ವಾಧಿಕಾರಿ ಮನಸ್ಥಿತಿ.

ದೇಶದಲ್ಲಿ ಇಂತಹ ಸ್ಫೋಟಕ ಪರಿಸ್ಥಿತಿ ನಿರ್ಮಾಣವಾದಾಗ, ನ್ಯಾಯಾಂಗದ ಮಧ್ಯಪ್ರವೇಶ ಅನಿವಾರ್ಯ ಆಗುತ್ತದೆ. ಇಂತಹ ಸೂಕ್ಷ್ಮ ಸನ್ನಿವೇಶದಲ್ಲಿ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿ ನ್ಯಾಯಾಲಯವನ್ನು ಗೌರವದಿಂದ ಕಂಡು ಸರಿಯಾದ ಮಾಹಿತಿಯನ್ನು, ಸಮಜಾಯಿಷಿಯನ್ನು ನೀಡಬೇಕು. ಇದನ್ನು ಬಿಟ್ಟು ನ್ಯಾಯಾಂಗದ ಮೇಲೆ ವಾಗ್ದಾಳಿ ಆರಂಭಿಸುವುದು, ಅದಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವುದು ಸರಕಾರಕ್ಕೆ ಶೋಭೆ ತರುವುದಿಲ್ಲ.

ಕೋವಿಡ್‌ನಿಂದ ದೇಶದಲ್ಲಿ ಜನಸಾಮಾನ್ಯರು ಸಾಯುತ್ತಿರುವಾಗ, ಸರಕಾರ ಅದನ್ನು ಜವಾಬ್ದಾರಿಯಿಂದ ನಿಭಾಯಿಸಬೇಕು, ಹತಾಶರಾದ ಜನರಿಗೆ ಆತ್ಮಸ್ಥೈರ್ಯ ತುಂಬಬೇಕು. ಆ ಕೆಲಸ ಚುನಾಯಿತ ಸರಕಾರದಿಂದ ಆಗದಿದ್ದಾಗ, ನ್ಯಾಯಾಂಗ ಕ್ರಿಯಾಶೀಲ ಆಗುವುದು ತಪ್ಪಲ್ಲ.

ಸರಕಾರದ ಲೋಪದೋಷಗಳನ್ನು ಪ್ರಶ್ನಿಸುವವರನ್ನೆಲ್ಲ ದೇಶದ್ರೋಹಿಗಳೆಂದು ಕರೆದು ತೇಜೋವಧೆ ಮಾಡುವುದು ಮಾತ್ರವಲ್ಲ, ಅಂತಹವರನ್ನು ರಾಜದ್ರೋಹದ ಆರೋಪದ ಮೇಲೆ ಜೈಲಿಗೆ ತಳ್ಳಿ ದಕ್ಕಿಸಿಕೊಂಡಾಗ ನ್ಯಾಯಾಂಗ ಆಕ್ಷೇಪಿಸಲಿಲ್ಲ. ಆಗಿನ ನ್ಯಾಯಾಧೀಶರ ಬಗ್ಗೆ ಸರಕಾರಕ್ಕೆ ತಕರಾರಿಲ್ಲ. ಸರಕಾರದ ಜೊತೆ ಸಹಕರಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ನಿವೃತ್ತರಾದಾಗ ಅವರಿಗೆ ರಾಜ್ಯಸಭಾ ಸದಸ್ಯತ್ವದ ಭಕ್ಷೀಸು ದೊರಕಿತು.

ಈ ಬಗ್ಗೆ ಜನ ಜಾಲತಾಣ ಮತ್ತಿತರ ಕಡೆ ಆಡಿಕೊಂಡರು. ಇನ್ನೊಬ್ಬ ನಿವೃತ್ತ ನ್ಯಾಯಮೂರ್ತಿಗೆ ರಾಜ್ಯಪಾಲರ ಹುದ್ದೆ ದೊರಕಿದ್ದು ಆಕಸ್ಮಿಕವಾಗಿರಲಿಲ್ಲ. ಆದರೆ, ಎಲ್ಲ ಕಾಲಕ್ಕೂ ಎಲ್ಲ ಸಂದರ್ಭದಲ್ಲೂ ನ್ಯಾಯಾಲಯ ಹೀಗೇ ಇರಬೇಕೆಂದು ಬಯಸುವುದು ಫ್ಯಾಶಿಸ್ಟ್ ಮನಸ್ಸುಗಳಿಂದ ಮಾತ್ರ ಸಾಧ್ಯ.
ಕರ್ನಾಟಕದಲ್ಲಿ ಕೋವಿಡ್ ಲಸಿಕೆಯ ಕೊರತೆ ಉಂಟಾಗಿರುವುದಕ್ಕೆ ರಾಜ್ಯ ಹೈಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ತರಾಟೆಗೆ ತೆಗೆದುಕೊಂಡಿತು. ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡ ಹೈಕೋರ್ಟ್, ‘‘ಲಸಿಕೆ ಇಲ್ಲದಿದ್ದರೆ ಅಭಿಯಾನ ಏಕೆ ಕೈಗೊಂಡಿರಿ’’ ಎಂದು ಪ್ರಶ್ನಿಸಿತು.

ಇದಕ್ಕೂ ಮುನ್ನ ಸುಪ್ರೀಂ ಕೋರ್ಟ್ ಕೂಡ ಕೋವಿಡ್-19 ಎರಡನೇ ಅಲೆಯ ನಿರ್ವಹಣೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಲೋಪಗಳನ್ನು ಪ್ರಶ್ನಿಸಿದಾಗ ‘ವಿಶ್ವ ಗುರು’ವಾಗಲು ಹೊರಟವರಿಗೆ ಇರಿಸು ಮುರಿಸು ಉಂಟಾಯಿತು. ಈ ಬಗ್ಗೆ ತನ್ನ ನೀತಿಯನ್ನು ಸಮರ್ಥಿಸಿಕೊಂಡ ಕೇಂದ್ರ ಸರಕಾರ ‘‘ಸುಪ್ರೀಂ ಕೋರ್ಟಿನ ಅತಿ ಉತ್ಸಾಹ ಮತ್ತು ನ್ಯಾಯಾಂಗದ ಕ್ರಿಯಾಶೀಲತೆಯಿಂದ ಸಂಕಷ್ಟಗಳು ಎದುರಾಗುತ್ತವೆ’’ ಎಂದು ವಾದಿಸಿದ್ದು ಮಾತ್ರವಲ್ಲ ನ್ಯಾಯಾಲಯದ ಮಧ್ಯಪ್ರವೇಶ ಹಸ್ತಕ್ಷೇಪ ಎಂದು ವ್ಯಾಖ್ಯಾನಿಸಿದೆ. ಇದರರ್ಥ ನ್ಯಾಯಾಂಗ ಸರಕಾರ ಹೇಳಿದಂತೆ ಕೇಳಿಕೊಂಡು ಬಿದ್ದಿರಬೇಕು ಎಂಬುದಾಗಿದೆ. ಇದು ಮೋದಿ, ಅಮಿತ್ ಶಾ ಬಯಕೆ ಮಾತ್ರವಲ್ಲ. ಈ ಸರಕಾರವನ್ನು ದೂರ ನಿಯಂತ್ರಣದ ಮೂಲಕ ನಿಯಂತ್ರಿಸುತ್ತಿರುವ ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರದ ಒತ್ತಾಸೆಯಾಗಿದೆ.

 2002ರಲ್ಲಿ ನಡೆದ ಗುಜರಾತ್ ಹತ್ಯಾಕಾಂಡದಿಂದ (ಆಗ ಗುಜರಾತ್ ಮುಖ್ಯಮಂತ್ರಿ) ಹಿಡಿದು ಈವರೆಗೆ ನಮ್ಮ ಪ್ರಧಾನಿಗಳ ಆಡಳಿತ ವೈಖರಿಯನ್ನು ಪ್ರಶ್ನಿಸಲು ನ್ಯಾಯಾಲಯಗಳು ಕೂಡ ಹಿಂಜರಿಯುತ್ತಿದ್ದವು. ಆದರೆ, ಕೋವಿಡ್ ಸಾವುಗಳು ಸಂಭವಿಸತೊಡಗಿದಾಗ ನ್ಯಾಯಾಲಯಗಳು ಕ್ರಿಯಾಶೀಲ ಆಗುವುದು ಅನಿವಾರ್ಯವಾಯಿತು.

ಕರ್ನಾಟಕದ ಪಾಲಿನ ಆಮ್ಲಜನಕ ಪೂರೈಕೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿ ಮಂಗಳಾರತಿ ಮಾಡಿಸಿಕೊಂಡದ್ದು, ದಿಲ್ಲಿ ಸರಕಾರಕ್ಕೆ ನಿಗದಿತ ಆಕ್ಸಿಜನ್ ಕೊಡಲು ವಿಳಂಬ ಮಾಡುತ್ತಿರುವುದು, ಮಠದಲ್ಲಿರಬೇಕಾದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸುಪ್ರೀಂಕೋರ್ಟ್ ಆದೇಶ ಧಿಕ್ಕರಿಸಿ ಕೇರಳ ಮೂಲದ ಪತ್ರಕರ್ತರೊಬ್ಬರನ್ನು ದಿಲ್ಲಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯಿಂದ ಗುಟ್ಟಾಗಿ ಮಥುರಾ ಜೈಲಿಗೆ ಕರೆದುಕೊಂಡು ಹೋಗಿದ್ದು ಇವೆಲ್ಲ ವಿದ್ಯಮಾನಗಳನ್ನು ಗಮನಿಸಿದರೆ ಕೇಂದ್ರ ಸರಕಾರ ಇನ್ನು ಮುಂದೆ ನ್ಯಾಯಾಂಗದ ಆದೇಶಗಳನ್ನೂ ಕಸದ ಬುಟ್ಟಿಗೆ ಹಾಕುವ ಜೊತೆಗೆ ನ್ಯಾಯಾಂಗದ ಮೇಲೆ ನಿಯಂತ್ರಣ ಸಾಧಿಸಲು ಹುನ್ನಾರ ನಡೆಸಿರುವುದು ಸ್ಪಷ್ಟವಾಗುತ್ತದೆ.

ಅಯೋಧ್ಯೆಯ ಬಾಬರಿ ಮಸೀದಿ ಮತ್ತು ರಾಮ ಮಂದಿರ ವಿವಾದದ ಪ್ರಶ್ನೆಯಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು, ಮಸೀದಿ ಕೆಡವಿದ ಪ್ರಕರಣದಲ್ಲಿ ಎಲ್. ಕೆ. ಅಡ್ವಾಣಿ ಮುಂತಾದವರು ದೋಷ ಮುಕ್ತರಾಗಿದ್ದು ಮಥುರಾ, ಕಾಶಿ ದೇವಾಲಯಗಳ ವಿವಾದದ ಬಗ್ಗೆ ತನಿಖೆಗೆ ಆದೇಶಿಸಿದ್ದು ಸುಪ್ರೀಂಕೋರ್ಟ್‌ನ ಒಂದು ನಡೆಯಾದರೆ, ಕೋವಿಡ್ ನಂತರ (ಮುಖ್ಯ ನ್ಯಾಯಮೂರ್ತಿ ಬೋಬ್ಡೆ ನಿವೃತ್ತಿ ನಂತರ) ಸುಪ್ರೀಂ ಕೋರ್ಟ್ ತೀರ್ಪುಗಳು ಕೇಂದ್ರ ಸರಕಾರಕ್ಕೆ ಮತ್ತು ಕೋವಿಡ್ ನಿರ್ವಹಣೆಯಲ್ಲಿ ವಿಫಲಗೊಂಡ ಕೆಲ ರಾಜ್ಯ ಸರಕಾರಗಳ ಬಗ್ಗೆ ಹೈಕೋರ್ಟ್‌ಗಳು ನೀಡಿರುವ ಆದೇಶಗಳು ಅಧಿಕಾರ ಸೂತ್ರ ಹಿಡಿದವರಿಗೆ ನುಂಗಲಾಗದ ತುತ್ತಾಗಿವೆ.

ಈಗ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರಕಾರಕ್ಕೆ ಸಂವಿಧಾನದ ಮೇಲೆ ನಂಬಿಕೆಯಿಲ್ಲ. ಇಂದಿನ ಸರಕಾರ ‘‘ಒಂದೇ ರಾಷ್ಟ್ರ, ಒಂದೇ ಧರ್ಮ, ಒಂದೇ ಭಾಷೆ, ಒಂದೇ ರೇಷನ್ ಕಾರ್ಡ್’’ ಎಂದು ಹೇಳುತ್ತ ಒಕ್ಕೂಟ ವ್ಯವಸ್ಥೆಯನ್ನು ಅಳಿಸಿ ಹಾಕಿ ಬಹುತ್ವ ಭಾರತದ ಗೋರಿಯ ಮೇಲೆ ಮನುವಾದಿ ಹಿಂದೂ ರಾಷ್ಟ್ರ ಕಟ್ಟುವ ಹಿಡನ್ ಅಜೆಂಡಾ ಹೊಂದಿದೆ. ಇದು ಬರೀ ರಾಜಕೀಯ ವಿರೋಧಿಗಳ ಟೀಕೆಯಲ್ಲ ಎಂಬುದು ಇತ್ತೀಚಿನ ಅದರ ನಡೆಯಿಂದ ಸ್ಪಷ್ಟವಾಗಿದೆ. ಇಂತಹ ವಿಶಿಷ್ಟ ಸಂದರ್ಭದಲ್ಲಿ ದೇಶ ಫ್ಯಾಶಿಸ್ಟರ ವಶವಾಗುವುದನ್ನು ತಪ್ಪಿಸಲು ನ್ಯಾಯಾಂಗದ ಕ್ರಿಯಾಶೀಲತೆ ಅನಿವಾರ್ಯ ಆಗಿದೆ.

ನ್ಯಾಯಾಂಗ ತನ್ನ ಲಕ್ಷ್ಮ್ಮಣ ರೇಖೆ ದಾಟಿ ವಿಪರೀತ ಕ್ರಿಯಾಶೀಲತೆಯನ್ನೇನೂ ತೋರಿಸುತ್ತಿಲ್ಲ. ಜನಸಾಮಾನ್ಯರ ಮೂಲಭೂತ ಹಕ್ಕುಗಳು ಉಲ್ಲಂಘನೆ ಆಗುತ್ತಿರುವಾಗ ನ್ಯಾಯಾಲಯಗಳು ತಮ್ಮ ಮಿತಿಯಲ್ಲಿ ಮಧ್ಯಪ್ರವೇಶ ಮಾಡಬೇಕಾಗುತ್ತದೆ. ಗಂಗಾ ನದಿಯಲ್ಲಿ ಕೋವಿಡ್ ರೋಗಿಗಳ ಹೆಣಗಳು ತೇಲುತ್ತಿರುವಾಗ, ಆಮ್ಲಜನಕ ಇಲ್ಲದೆ ಜನ ಸಾಯುತ್ತಿರುವಾಗ, ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಪರದಾಡುತ್ತಿರುವಾಗ ನ್ಯಾಯಾಂಗ ಕಣ್ಣು, ಕಿವಿ, ಮೂಗು ಮುಚ್ಚಿಕೊಂಡು ಕುಳಿತುಕೊಳ್ಳಬೇಕು ಎಂದು ಬೆದರಿಕೆ ಹಾಕುವುದು ಸರಿಯಲ್ಲ.

ಕೊರೋನದಂತಹ ಹಿಂದೆಂದೂ ಕಂಡರಿಯದ ಪರಿಸ್ಥಿತಿಯಲ್ಲಿ ಜನಸಾಮಾನ್ಯರು ಸಹಜವಾಗಿ ಆಕ್ರೋಶ ಭರಿತರಾಗುತ್ತಾರೆ. ಆಗ ಅಧಿಕಾರದಲ್ಲಿದ್ದವರು ಅತ್ಯಂತ ತಾಳ್ಮೆಯಿಂದ, ಸೌಜನ್ಯಪೂರ್ಣವಾಗಿ ಜನರ ನೋವಿಗೆ ಸ್ಪಂದಿಸಬೇಕಾಗುತ್ತದೆ. ಆದರೆ ನಮ್ಮ ಕೆಲ ಬಿಜೆಪಿ ನಾಯಕರು ಜನರನ್ನು ಹೀಯಾಳಿಸುತ್ತ, ನ್ಯಾಯಾಧೀಶರಿಗೆ ಬೆದರಿಕೆ ಹಾಕುವ ಭಾಷೆಯಲ್ಲಿ ಮಾತಾಡುವುದು ಪ್ರಜಾಪ್ರಭುತ್ವ ವಿರೋಧಿ ಮಾತ್ರವಲ್ಲ ಅನಾಗರಿತನದಿಂದ ಕೂಡಿದ್ದು ಎಂದು ಹೇಳಿದರೆ ತಪ್ಪಲ್ಲ.

ಜನತಂತ್ರ ವ್ಯವಸ್ಥೆಯಲ್ಲಿ ಜನರ ಸಾವು ಜನಪ್ರತಿನಿಧಿಗಳಲ್ಲಿ ಪಾಪಪ್ರಜ್ಞೆಯನ್ನು, ಪಶ್ಚಾತ್ತಾಪವನ್ನು ಉಂಟು ಮಾಡಬೇಕಾಗಿತ್ತು. ಆದರೆ, ನಮ್ಮ ದೇಶದ ರಾಜಕಾರಣಿಗಳು ಯಾವುದಕ್ಕೂ ಸ್ಪಂದಿಸದಂತಹ ಮೈ ಚರ್ಮ ಬೆಳೆಸಿಕೊಂಡಿದ್ದಾರೆ. ಕೋವಿಡ್‌ನಿಂದ ಸಾಯುತ್ತಿರುವ ಜನರಿಗಾಗಿ ಅನುಕಂಪ ತೋರಿಸುವುದು ಒತ್ತಟ್ಟಿಗಿರಲಿ, ಸಾವುಗಳ ಸಂಖ್ಯೆಯನ್ನು ಒಪ್ಪಿಕೊಳ್ಳದ ಸರಕಾರದ ಲೋಪಗಳನ್ನು ಸರಿಪಡಿಸಿಕೊಳ್ಳುವ ಸ್ಥಿತಿಯಲ್ಲಿ ಅವರಿಲ್ಲ.

ಇಂತಹ ಸನ್ನಿವೇಶದಲ್ಲಿ ನ್ಯಾಯಾಂಗ ಕ್ರಿಯಾಶೀಲವಾಗಿ ಜನರ ಹಿತರಕ್ಷಣೆಗೆ ನಿಲ್ಲಬೇಕಾಗುತ್ತದೆ. ಇದನ್ನು ಸಹಿಸದ ದುರಹಂಕಾರದ ರಾಜಕಾರಣಿಗಳು ನ್ಯಾಯಾಂಗದ ಮೇಲೆ ದಾಳಿಗೆ ಇಳಿದರೆ ಜನರು ನ್ಯಾಯಾಂಗದ ರಕ್ಷಣೆಗೆ ಧ್ವನಿಯೆತ್ತಬೇಕಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)