varthabharthi


ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?

ಫೆಲೆಸ್ತೀನ್ ನಲ್ಲಿ ನಡೆಯುತ್ತಿರುವುದೇನು?

ಅತಿ ಸರಳೀಕೃತ ವಿಶ್ಲೇಷಣೆಗಳು

ವಾರ್ತಾ ಭಾರತಿ : 19 May, 2021
ಎ.ಎಸ್. ಪುತ್ತಿಗೆ

ಭಾಗ-3

ಇಸ್ರೇಲ್‌ನಲ್ಲಿ ಇಂದು ನಡೆಯುತ್ತಿರುವುದೇನು? ಎಂಬ ಪ್ರಶ್ನೆಗೆ ಉತ್ತರವಾಗಿ ಕೆಲವು ಶುದ್ಧ ಸುಳ್ಳುಗಳು ಮತ್ತು ಅತಿ ಸರಳೀಕೃತ ವಿಶ್ಲೇಷಣೆಗಳು ವ್ಯಾಪಕವಾಗಿ ಚಲಾವಣೆಯಲ್ಲಿವೆ. ಉದಾ:

ಇಸ್ರೇಲ್ ಎಂಬುದು ಜಗತ್ತಿನೆಲ್ಲೆಡೆ ದಮನಿತರಾಗಿದ್ದ ಒಂದು ಸಮುದಾಯದವರು ತಮ್ಮ ಐತಿಹಾಸಿಕ ಮಾತೃ ಭೂಮಿಯಲ್ಲಿ ತಮ್ಮ ಶ್ರಮದಿಂದ ಕಟ್ಟಿ ಬೆಳೆಸಿದ ದೇಶ. ಇಸ್ರೇಲ್ ಮಧ್ಯಪ್ರಾಚ್ಯದ ಏಕಮಾತ್ರ ಅಪ್ಪಟ ಪ್ರಜಾಸತ್ತಾತ್ಮಕ, ಸೆಕ್ಯುಲರ್ ದೇಶ. ಇಸ್ರೇಲ್ ಆಧುನಿಕ ವೈಜ್ಞಾನಿಕ ಮತ್ತು ವೈಚಾರಿಕ ಸ್ಫೂರ್ತಿ ತುಂಬಿರುವ ಪ್ರಗತಿಪರ ವಿಚಾರಧಾರೆಯ, ಉದಾರ ಧೋರಣೆಯ ಸಂಪನ್ನ, ವಿದ್ಯಾವಂತರ ದೇಶ.

ಇಸ್ರೇಲ್‌ನ ಶಾಂತಿಪ್ರಿಯ ಸರಕಾರ ಮತ್ತು ಅಲ್ಲಿಯ ನಾಗರಿಕರು ಸದಾ ಶಾಂತಿಯನ್ನೇ ಬಯಸುತ್ತಾರೆ. ಆದರೆ ಇಸ್ರೇಲ್‌ನ ಔದಾರ್ಯದಿಂದ ಅಲ್ಲಿನ ಪೌರತ್ವ ಪಡೆದಿರುವ ಮತ್ತು ಇಸ್ರೇಲ್ ದೇಶದೊಳಗೆ ಆಶ್ರಯ ಪಡೆದಿರುವ ಮುಸ್ಲಿಮ್ ಮತ್ತು ಅರಬ್ ಮೂಲದ ಜನರು ತಮಗೆ ದೊರೆತಿರುವ ಸ್ವಾತಂತ್ರವನ್ನು ದುರುಪಯೋಗ ಪಡಿಸಿಕೊಂಡು ಅಲ್ಲಿಯ ಸರಕಾರ ಮತ್ತು ನಾಗರಿಕರಿಗೆ ಕಿರುಕುಳ ಕೊಡುತ್ತಲೇ ಇರುತ್ತಾರೆ. ಟಯರ್‌ಗಳನ್ನು ಸುಟ್ಟು ಪರಿಸರವನ್ನು ಮಲಿನಗೊಳಿಸುತ್ತಾರೆ. ಅವರ ಪುಂಡ ಪೋಕರಿ ಹುಡುಗರು ನಿತ್ಯವೆಂಬಂತೆ ಇಸ್ರೇಲಿನ ಪೊಲೀಸ್ ಮತ್ತು ಮಿಲಿಟರಿ ಅಧಿಕಾರಿಗಳ ಮೇಲೆ ಮಾತ್ರವಲ್ಲ ಮುಗ್ಧ ನಾಗರಿಕರ ಮೇಲೂ ಕಲ್ಲು, ಪೆಟ್ರೋಲ್ ಬಾಂಬ್ ಇತ್ಯಾದಿಗಳನ್ನು ಎಸೆದು ಹಿಂಸಿಸುತ್ತಿರುತ್ತಾರೆ. ಕವೆ ಕೋಲುಗಳ ಮೂಲಕ ಅಧಿಕಾರಿಗಳ ಮೇಲೆ ಹಲ್ಲೆ ನಡೆಸುತ್ತಾರೆ. ಆತ್ಮಾಹುತಿ ಬಾಂಬ್ ದಾಳಿಗಳನ್ನೂ ನಡೆಸುತ್ತಾರೆ. ಅವರು ತಮ್ಮ ಹಿಂಸಾತ್ಮಕ ಹಾಗೂ ಭಯೋತ್ಪಾದಕ ಚಟುವಟಿಕೆಗಳ ಮೂಲಕ ಇಸ್ರೇಲಿಗರ ಪಾಲಿಗೆ ಬದುಕನ್ನೇ ದುಸ್ತರಗೊಳಿಸಿಬಿಟ್ಟಿದ್ದಾರೆ.

ಇಸ್ರೇಲ್‌ನ ಅಕ್ಕಪಕ್ಕದಲ್ಲಿರುವ ಸರ್ವಾಧಿಕಾರಿ, ಅನಾಗರಿಕ ಅರಬ್ ಮತ್ತು ಮುಸ್ಲಿಮ್ ದೇಶಗಳಿಗೆ ತಮ್ಮ ನೆರೆಯಲ್ಲಿ ಒಂದು ಆಧುನಿಕ, ಪ್ರಗತಿಪರ, ವಿದ್ಯಾವಂತ, ಪ್ರಜಾಸತ್ತಾತ್ಮಕ ಹಾಗೂ ಸಭ್ಯ ಯಹೂದಿ ದೇಶವು ಅಭಿವೃದ್ಧಿ ಸಾಧಿಸುತ್ತಿರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದಲೇ ಆ ದೇಶಗಳೆಲ್ಲ ಒಂದಾಗಿ ಇಸ್ರೇಲ್‌ನ ಭದ್ರತೆ ಮತ್ತು ಅಸ್ತಿತ್ವಕ್ಕೆ ಅಪಾಯ ಒಡ್ಡುತ್ತಲೇ ಇರುತ್ತವೆ. ಆಗಾಗ ಇಸ್ರೇಲ್ ಮೇಲೆ ಮಿಸೈಲ್‌ಗಳನ್ನು ಎಸೆದು ಇಸ್ರೇಲಿಗರ ಜೀವ ಮತ್ತು ಸೊತ್ತುಗಳಿಗೆ ಹಾನಿ ಮಾಡುತ್ತಿರುತ್ತಾರೆ.

ಏಕ ಪಕ್ಷೀಯ ಸುಳ್ಳು ಪ್ರಚಾರಗಳಿಗೆ ಮತ್ತು ವಿಕೃತ ವಿಶ್ಲೇಷಣೆಗಳಿಗೆ ಬಲಿ ಬಿದ್ದು ಮುಗ್ಧವಾಗಿ ಈ ಬಗೆಯ ವೌಢ್ಯ ಆಧಾರಿತ ಪೂರ್ವಾಗ್ರಹಗಳನ್ನು ತಮ್ಮಾಳಗೆ ಪೋಷಿಸಿ ಕೊಳ್ಳುತ್ತಿರುವವರು ಈ ತಮ್ಮ ದಾರುಣ ಸ್ಥಿತಿಯಿಂದ ಹೊರಬರಲು ತುಂಬಾ ದೂರವೇನೂ ಹೋಗಬೇಕಾಗಿಲ್ಲ. ಇಸ್ರೇಲ್ ಮತ್ತು ಫೆಲೆಸ್ತೀನ್‌ಗಳ ಇತಿಹಾಸ ಮತ್ತು ವರ್ತಮಾನದ ಕುರಿತು ವಸ್ತುನಿಷ್ಠ ಮೂಲಗಳ ಮೂಲಕ ಲಭ್ಯವಿರುವ ಮಾಹಿತಿಗಳನ್ನೊಮ್ಮೆ ಕಣ್ಣುತೆರೆದು ನೋಡಿದರೆ ಸಾಕು. ಅವರ ನಂಬಿಕೆಗಳ ಲೋಕವೇ ಬದಲಾಗಿಬಿಡುವುದು ಖಚಿತ.

► ಇಸ್ರೇಲ್ ಮತ್ತು ಫೆಲೆಸ್ತೀನ್ ಎರಡು ಸಮಾನಾಂತರ ಸರಕಾರಗಳಲ್ಲ

ಕೆಲವರು ಇಸ್ರೇಲ್ ಮತ್ತು ಫೆಲೆಸ್ತೀನ್‌ಗಳನ್ನು ಎರಡು ಸಮಾನಾಂತರ ಸರಕಾರಗಳೆಂಬಂತೆ ಚಿತ್ರಿಸುತ್ತಾರೆ. ಹಾಗೆಂದು ಹಲವರು ನಂಬಿಕೊಂಡೂ ಇದ್ದಾರೆ. ಜನರ ಎಷ್ಟೋ ನಿರ್ಧಾರ ಮತ್ತು ತೀರ್ಮಾನಗಳು ಈ ನಂಬಿಕೆಯನ್ನೇ ಆಧರಿಸಿವೆ. ನಿಜವಾಗಿ ಈ ಎರಡು ಸರಕಾರಗಳ ನಡುವೆ ಅಜ - ಗಜ ಮಾತ್ರವಲ್ಲ ಭೂಮಿ - ಆಕಾಶಗಳ ವ್ಯತ್ಯಾಸವಿದೆ. ಕೆಲವು ಪ್ರಮುಖ ವ್ಯತ್ಯಾಸಗಳ ಪಟ್ಟಿ ಇಲ್ಲಿದೆ:

ಇಸ್ರೇಲ್ ಬಳಿ ತಾಂತ್ರಿಕವಾಗಿ ಜಗತ್ತಿನಲ್ಲೇ ಅತ್ಯಂತ ಮುಂದುವರಿದ ತಂತ್ರಜ್ಞಾನ, ಆಯುಧ ಮತ್ತು ಸಲಕರಣೆಗಳಿಂದ ಸಜ್ಜಿತವಾದ 5 ಲಕ್ಷಕ್ಕೂ ಹೆಚ್ಚಿನ ಯೋಧರು ಇರುವ ಬಲಿಷ್ಠ ಭೂಸೇನೆ ಇದೆ. ಇಸ್ರೇಲ್ ಪೂರ್ಣಪ್ರಮಾಣದ ಅಣ್ವಸ್ತ್ರ ಸಜ್ಜಿತ ದೇಶವಾಗಿದೆ. ಅದರ ಬಳಿ 

ಸುಮಾರು 400 ಅಣು ಬಾಂಬ್ ಸಜ್ಜಿತ ಕ್ಷಿಪಣಿಗಳಿವೆ. ಇಸ್ರೇಲ್ ಬಳಿ ಸಾಟಿಯೇ ಇಲ್ಲದಂತಹ ಅಜೇಯ ವಾಯುಸೇನೆ ಇದೆ. 1967ರಲ್ಲೇ

ಇಸ್ರೇಲ್ ವಾಯುಸೇನೆ ಎಷ್ಟು ಬಲಿಷ್ಠವಾಗಿತ್ತೆಂದರೆ ಅದರ ಮುಂದೆ ಎಲ್ಲ ನೆರೆದೇಶಗಳ ಒಟ್ಟು ವಾಯುಸೇನಾ ಸಾಮರ್ಥ್ಯವು ನಿರರ್ಥಕವಾಗಿ ಬಿಟ್ಟಿತ್ತು. ಇದೀಗ 54 ವರ್ಷಗಳ ಬಳಿಕ ಅದು ಎಷ್ಟು ಬಲಾಢ್ಯವಾಗಿರಬಹುದೆಂಬುದನ್ನು ಯಾರಾದರೂ ಊಹಿಸಬಹುದು.

ಇಸ್ರೇಲ್ ಬಳಿ 60ಕ್ಕೂ ಹೆಚ್ಚು ಸರ್ವ ಸಜ್ಜಿತ ಯುದ್ಧನೌಕೆಗಳು, 20,000ಕ್ಕೂ ಹೆಚ್ಚು ನೌಕಾ ಯೋಧರು ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ಸಜ್ಜಿತ ನೌಕಾಪಡೆ ಇದೆ. ಇಸ್ರೇಲಿನ ವಾರ್ಷಿಕ ಮಿಲಿಟರಿ ಬಜೆಟ್ 20.5 ಶತಕೋಟಿ ಡಾಲರ್ ನಷ್ಟಿದೆ. ಸಾಲದ್ದಕ್ಕೆ ಪ್ರತಿವರ್ಷ ಅಮೆರಿಕದಿಂದ ಭಾರೀ ಮೊತ್ತದ ಮಿಲಿಟರಿ ಸಹಾಯಧನವೂ ಇಸ್ರೇಲ್‌ಗೆಸಿಗುತ್ತದೆ. ಈವರೆಗೆ ಅಧಿಕೃತವಾಗಿ ಇಸ್ರೇಲ್‌ಗೆ ಅಮೆರಿಕ ನೀಡಿರುವ ಮಿಲಿಟರಿ ಸಹಾಯಧನ 146 ಶತಕೋಟಿ ಡಾಲರ್ ನಷ್ಟಾಗುತ್ತದೆ. ಅನಧಿಕೃತ ನೆರವಿನ ಮೊತ್ತ ಬೇರೆಯೇ ಇದೆ.

► ಇದಕ್ಕೆಲ್ಲ ಹೋಲಿಸಿದರೆ ಫೆಲೆಸ್ತೀನ್ ಸರಕಾರದ ಸಾಮರ್ಥ್ಯ ಎಷ್ಟು ಗೊತ್ತೇ?

‘ಫೆಲೆಸ್ತೀನ್ ಸರಕಾರ’ ಎಂಬುದು ಜಗತ್ತಿನ ಕಣ್ಣಿಗೆ ಮಣ್ಣೆರಚಲು ನಿರ್ಮಿಸಲಾಗಿರುವ ಒಂದು ಅಣಕ ಸಂಸ್ಥೆಯೇ ಹೊರತು ಅದು ಒಂದು ಪೂರ್ಣ ಪ್ರಮಾಣದ ಸರಕಾರವೇ ಅಲ್ಲ.

ಜಗತ್ತಿನ 138 ದೇಶಗಳು ಫೆಲೆಸ್ತೀನ್ ಸರಕಾರಕ್ಕೆ ಅಧಿಕೃತ ಮಾನ್ಯತೆ ನೀಡಿವೆ. ಆದರೆ ಇಸ್ರೇಲ್ ಸರಕಾರಕ್ಕಿರುವ ಸಾಮರ್ಥ್ಯ ಮತ್ತು ಅಧಿಕಾರಗಳಿಗೆ ಹೋಲಿಸಿದರೆ ಫೆಲೆಸ್ತೀನ್ ಸರಕಾರದ ಸಾಮರ್ಥ್ಯ ಮತ್ತು ಅಧಿಕಾರಗಳು ಒಂದು ನಗರ ಪಾಲಿಕೆಯಷ್ಟೂ ಇಲ್ಲ. ಹೆಚ್ಚೆಂದರೆ ಅದನ್ನು, ಬಲಿಷ್ಠ ಕೇಂದ್ರ ಸರಕಾರವೊಂದರ ಕಪಿ ಮುಷ್ಟಿಯಲ್ಲಿರುವ ಸ್ಥಳೀಯ ಆಡಳಿತ ಪ್ರಾಧಿಕಾರ ಎಂದು ಕರೆಯಬಹುದು. ಮುಖ್ಯವಾಗಿ ಭೂಸೇನೆ, ವಾಯು ಸೇನೆ, ನೌಕಾಪಡೆ ಮುಂತಾದ ಯಾವುದೇ ಬಗೆಯ ಸೇನೆಯನ್ನು ಇಟ್ಟುಕೊಳ್ಳುವ ಅಧಿಕಾರ ಫೆಲೆಸ್ತೀನ್ ಸರಕಾರಕ್ಕಿಲ್ಲ!

ಕ್ರೂರ ತಮಾಷೆ ಏನೆಂದರೆ ಫೆಲೆಸ್ತೀನ್ ಸರಕಾರಕ್ಕೆ ತನ್ನ ಅಧಿಕಾರ ವ್ಯಾಪ್ತಿಯ ಪ್ರದೇಶದಲ್ಲಿ ವಿದ್ಯುತ್ ಮತ್ತು ಜಲ ಸರಬರಾಜು ವ್ಯವಸ್ಥೆಯ ಮೇಲೂ ನಿಯಂತ್ರಣವಿಲ್ಲ. ಅದನ್ನೆಲ್ಲ ಇಸ್ರೇಲ್ ಸರಕಾರ ತನ್ನ ನಿಯಂತ್ರಣದಲ್ಲೇ ಇಟ್ಟುಕೊಂಡಿದೆ. ಫೆಲೆಸ್ತೀನ್ ಸರಕಾರದ ಅಧೀನವಿದೆ ಎನ್ನಲಾಗುವ ಪ್ರದೇಶಗಳು ಕೂಡ ಸಂಪೂರ್ಣವಾಗಿ ಅದರ ಅಧೀನದಲ್ಲಿಲ್ಲ. ಅವೆಲ್ಲ ಇಸ್ರೇಲ್ ಆಕ್ರಮಿತ ಪ್ರದೇಶಗಳಾಗಿದ್ದು ನೇರವಾಗಿ ಇಸ್ರೇಲ್‌ನ ನಿಯಂತ್ರಣದಲ್ಲಿವೆ. ಅಲ್ಲಿ ಎಲ್ಲ ವಿಷಯಗಳಲ್ಲೂ ಅಂತಿಮ ನಿರ್ಧಾರ ಇಸ್ರೇಲ್‌ನದ್ದೇ. ಅಲ್ಲಿ ಇಸ್ರೇಲ್ ಪಡೆಗಳು ತಮ್ಮ ಇಚ್ಛಾನುಸಾರ ಪ್ರವೇಶಿಸಬಹುದು. ತನಿಖೆ, ವಿಚಾರಣೆ, ಶೋಧನೆ, ಬಂಧನ ಇತ್ಯಾದಿ ಎಲ್ಲ ಬಗೆಯ ಕಾರ್ಯಾಚರಣೆಗಳನ್ನು ನಡೆಸಬಹುದು.

ಫೆಲೆಸ್ತೀನ್ ಸರಕಾರದ ಅಧೀನವಿದೆ ಎನ್ನಲಾಗುವ ಪ್ರದೇಶಗಳ ಒಳಗೆ ಇಸ್ರೇಲ್ ಸರಕಾರ ತನಗೆ ಮನಸಾದಾಗಲೆಲ್ಲ ನುಗ್ಗಿ, ತಾನಿಚ್ಛಿಸುವ ಅರಬ್ ಪ್ರದೇಶಗಳನ್ನು ವಶ ಪಡಿಸಿಕೊಂಡು ಅಲ್ಲಿ ತನ್ನ ಇಚ್ಛಾನುಸಾರ ಯಹೂದಿ ವಲಸಿಗರಿಗಾಗಿ ಹೊಸ ಬಡಾವಣೆ ಮತ್ತು ನಿವಾಸಗಳನ್ನು ನಿರ್ಮಿಸಿಕೊಡಬಹುದು. ಆ ಬಡಾವಣೆಗಳಿಗೆ ಭದ್ರತೆ ಒದಗಿಸುವ ಹೆಸರಲ್ಲಿ ಅವುಗಳ ಸುತ್ತಮುತ್ತಲ ಪ್ರದೇಶಗಳನ್ನು ವಶಪಡಿಸಿಕೊಂಡು ಅಲ್ಲಿ ಸ್ಥಳೀಯರ ಚಲನವಲನಗಳ ಮೇಲೆ ನಿರ್ಬಂಧ ಹೇರಬಹುದು.

ತಥಾಕಥಿತ ಫೆಲೆಸ್ತೀನ್ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕವೂ ಅದರ ಅಧೀನವಿದೆ ಎನ್ನಲಾಗುವ ಪ್ರದೇಶಗಳಲ್ಲಿ ಯಹೂದಿ ವಲಸಿಗರಿಗೆಂದೇ ಮೀಸಲಾಗಿರುವ ಬೃಹತ್ ಬಡಾವಣೆಗಳನ್ನು ನಿರ್ಮಿಸುವ ತನ್ನ ಕಾರ್ಯಾಚರಣೆಯನ್ನು ಇಸ್ರೇಲ್ ಸರಕಾರ ಎಗ್ಗಿಲ್ಲದೆ ಮುಂದುವರಿಸಿದೆ. ಇಸ್ರೇಲ್ ಸರಕಾರವು ಈಗಾಗಲೇ ತನ್ನೊಳಗಿನ ಯಹೂದಿ ಜನಸಂಖ್ಯೆಯ ಕನಿಷ್ಠ 11ಶೇ. ಭಾಗವನ್ನು ಫೆಲೆಸ್ತೀನ್ ಸರಕಾರವಿರುವ ಆಕ್ರಮಿತ ಪ್ರದೇಶಗಳಿಗೆ ವರ್ಗಾಯಿಸಿದೆ. ಈ ಮೂಲಕ ಆ ಪ್ರದೇಶಗಳ ಜನಸಂಖ್ಯೆಯಲ್ಲಿ ಯಹೂದಿ ಮತ್ತು ಅರಬ್ ಅನುಪಾತದಲ್ಲಿ ತೀವ್ರ ಏರುಪೇರು ಉಂಟಾಗುತ್ತಿದೆ. 2020ರ ಮಾಹಿತಿ ಪ್ರಕಾರ ಇಸ್ರೇಲ್ ಸರಕಾರದ ವಾರ್ಷಿಕ ಜಿಡಿಪಿ 40,264 ಕೋಟಿ ಡಾಲರ್‌ಗಳಾಗಿದ್ದರೆ ಫೆಲೆಸ್ತೀನ್ ಸರಕಾರದ ವಾರ್ಷಿಕ ಜಿಡಿಪಿ ಕೇವಲ 1,713 ಕೋಟಿ ಡಾಲರ್‌ಗಳು ಮಾತ್ರ.

► ಪುಟಾಣಿ ಇಸ್ರೇಲ್‌ನ ದೈತ್ಯ ಶಕ್ತಿಯ ಹಿಂದಿದೆ ಬಿಳಿಯ ಜಗತ್ತಿನ ಕರಾಳ ದ್ವಂದ್ವ ನೀತಿ

ಸ್ವಾತಂತ್ರ, ಸ್ವಾಯತ್ತೆ, ಮಾನವಹಕ್ಕುಗಳು ಇತ್ಯಾದಿಗಳ ಬಗ್ಗೆ ಜಗತ್ತಿಗೆಲ್ಲ ಸದಾ ಉಪದೇಶ ನೀಡುತ್ತಲಿರುವ ಅಮೆರಿಕ ಮತ್ತು ಯುರೋಪಿಯನ್ ದೇಶಗಳು ಮಧ್ಯ ಪ್ರಾಚ್ಯದಲ್ಲಿ ಯಹೂದಿಗಳಿಗೆ ಒಂದು ನೆಲೆ ಒದಗಿಸುವ ಮತ್ತು ನಿರ್ವಸಿತ ಯಹೂದಿಗಳಿಗೆ ಪುನರ್ವಸತಿ ಕಲ್ಪಿಸಿಕೊಡುವ ಬಗ್ಗೆ ಮಾತನಾಡುವುದು ಅರ್ಥವಾಗುತ್ತದೆ. ಆದರೆ ಒಂದು ಸಣ್ಣ ವಲಸಿಗ ಸಮುದಾಯಕ್ಕೆ ಪುನರ್ವಸತಿ ಮತ್ತು ಭದ್ರತೆ ಒದಗಿಸುವ ಹೆಸರಲ್ಲಿ ಒಂದು ನಾಡಿನಲ್ಲಿ ಶತಮಾನಗಳಿಂದ ಬದುಕುತ್ತಿರುವ ಒಂದು ದೊಡ್ಡ ಸಮುದಾಯವನ್ನು ಬಲವಂತವಾಗಿ ನಿರ್ವಸಿತಗೊಳಿಸುವುದು, ಅವರಿಂದ ಅವರ ನೆಲ, ಸೊತ್ತು, ಪ್ರಾಥಮಿಕ ಪೌರ ಸವಲತ್ತುಗಳನ್ನು ಮಾತ್ರವಲ್ಲ ಅವರ ಮೂಲಭೂತ ಮಾನವ ಹಕ್ಕುಗಳನ್ನು ಮತ್ತು ನಾಗರಿಕ ಅಧಿಕಾರಗಳನ್ನೆಲ್ಲ ಕಿತ್ತುಕೊಳ್ಳುವುದು ಅವರ ಬದುಕನ್ನು ಅಭದ್ರಗೊಳಿಸುವುದು, ಅವರು ಬದುಕುವ ಪ್ರದೇಶಗಳನ್ನೇ ಸಂಪೂರ್ಣ ಸೆರೆಮನೆಗಳಾಗಿ ಪರಿವರ್ತಿಸುವುದು ಇದು ಎಲ್ಲಿಯ ನ್ಯಾಯ?

1950ಕ್ಕಿಂತ ಮೊದಲಿನ ಒಂದು ಶತಮಾನದ ಅವಧಿಯಲ್ಲಿ ಯಹೂದಿಗಳನ್ನು ಎಲ್ಲ ಬಗೆಯ ಅಪಮಾನಗಳಿಗೆ ತುತ್ತಾಗಿಸಿ ಅವರಿಗೆ ಎಲ್ಲ ಬಗೆಯ ಹಿಂಸೆ, ಕಿರುಕುಳ ನೀಡಿ ಹಲವೆಡೆ ಅವರ ಸಾಮೂಹಿಕ ಹತ್ಯಾಕಾಂಡ ಕೂಡ ನಡೆಸಲಾಗಿತ್ತು ಎಂಬುದು ನಿಜ. ಆದರೆ ಈ ಅಪರಾಧ ಎಸಗಿದವರು ಯಾರು? ಯಹೂದಿಗಳ ವಿರುದ್ಧ ಜನಾಂಗವಾದದ ಕಿಚ್ಚು ಹಚ್ಚಿದವರು ಯಾರು? ಈ ಅಪರಾಧಗಳಲ್ಲಿ ಫೆಲೆಸ್ತೀನ್‌ನ ಅರಬರಿಗೆ ಕಿಂಚಿತ್ ಪಾತ್ರವೂ ಇರಲಿಲ್ಲ ಎಂಬುದು ಖಚಿತವಲ್ಲವೇ? ಹೀಗಿರುವಾಗ ಯಾರೋ ಮಾಡಿದ ಅಪರಾಧಕ್ಕೆ ಅವರೇಕೆ ಬೆಲೆತೆರಬೇಕು? ಅವರಿಗೇಕೆ ಈ ಶಿಕ್ಷೆ? ಈ ಪ್ರಶ್ನೆಗಳಿಗೆ ಬಿಳಿಯ ಜಗತ್ತಿನವರ ಬಳಿ ಯಾವ ಉತ್ತರವೂ ಇಲ್ಲ.

ಬಿಳಿಯರು ಕೆಲವು ದಶಕಗಳ ತನಕ ಯಹೂದಿಗಳ ವಿರುದ್ಧ ತಾವು ಎಸಗಿದ ಅಪರಾಧಕ್ಕೆ ಪ್ರಾಯಶ್ಚಿತ ಮಾಡಲು ಹೊರಟದ್ದು ಖಂಡಿತ ಸ್ವಾಗತಾರ್ಹ. ಆದರೆ ಅವರ ಪ್ರಾಯಶ್ಚಿತವು ಇನ್ನೊಂದು ದೀರ್ಘಕಾಲೀನ ಮಹಾಪರಾಧದ ಸರಣಿಯ ರೂಪದಲ್ಲಿದೆ ಎಂಬುದೇ ದುರಂತ.

ಬಿಳಿಯ ಜಗತ್ತು ತನ್ನದೇ ನೆಲದಲ್ಲಿ ಯಹೂದಿಗಳಿಗೆ ಘನತೆಯ ಮತ್ತು ಭದ್ರತೆಯೊಂದಿಗೆ ಬದುಕುವ ಸನ್ನಿವೇಶವನ್ನು ಒದಗಿಸಿಕೊಟ್ಟಿದ್ದರೆ ಯಹೂದಿಗಳು ಅಷ್ಟು ದೊಡ್ಡ ಸಂಖ್ಯೆಯಲ್ಲಿ ಯುರೋಪಿನಿಂದ ವಲಸೆ ಹೋಗುವ ಅಗತ್ಯವೇ ತಲೆದೋರುತ್ತಿರಲಿಲ್ಲ. ಆದರೆ ಬಿಳಿಯರು ತಮ್ಮ ಒಂದು ಪಾಪಕ್ಕೆ ಪರಿಹಾರವಾಗಿ ಇನ್ನೊಂದು ಪಾಪದ ಮಾರ್ಗವನ್ನು ಆರಿಸಿಕೊಂಡರು. ತಮ್ಮ ಬಲಿಪಶುಗಳಾಗಿದ್ದ ಯಹೂದಿಗಳಿಗೆ ನೆಲೆ ಒದಗಿಸಲು ಇನ್ನೊಂದು ಜನಾಂಗ ಮತ್ತು ಪ್ರದೇಶವನ್ನು ಬಲಿಪಶುವಾಗಿಸಿಬಿಟ್ಟರು. ಈ ನೀತಿಯ ಫಲಿತಾಂಶವೇ ಫೆಲೆಸ್ತೀನ್ ಎಂಬ ಅರಬ್ ನೆಲದಲ್ಲಿ ಇಸ್ರೇಲ್ ಎಂಬ ಜನಾಂಗೀಯ ದೇಶದ ಅಕ್ರಮ ಸ್ಥಾಪನೆ. ಈ ಅಪರಾಧವನ್ನು ಅವರು ಒಂದು ಸೀಮಿತ ಪ್ರದೇಶದಲ್ಲಿ ಒಂದು ಬಾರಿ ಮಾತ್ರ ಮಾಡಿದ್ದರೆ ಬಹುಶಃ ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಅದಕ್ಕೆ ಮನ್ನಣೆಯೂ ಸಿಗುತ್ತಿತ್ತು ಮತ್ತು ಕಾಲಕ್ರಮೇಣ ಆ ಅಪರಾಧ ಮರೆತು ಹೋಗುವ ಸಾಧ್ಯತೆಯೂ ಇತ್ತು. ಆದರೆ ಮೇಲ್ನೋಟಕ್ಕೆ ಮುಗ್ಧವಾಗಿದ್ದ ಅವರ ಸರಳ ಪ್ರಸ್ತಾವವು ವಾಮನಾವತಾರದ ಮೂರು ಹೆಜ್ಜೆಗಳಂತೆ ಎಲ್ಲವನ್ನೂ ಕಬಳಿಸಿಬಿಡುವ ಸಂಚಾಗಿತ್ತು ಎಂಬುದನ್ನು ಜಗತ್ತೀಗ ಕಣ್ಣಾರೆ ಕಾಣುತ್ತಿದೆ.

ಇಸ್ರೇಲ್ ಎಂಬ ಒಂದು ಪುಟಾಣಿ ದೇಶಕ್ಕೆ ಸತತವಾಗಿ ಕಳೆದ 7 ದಶಕಗಳಿಗಿಂತಲೂ ಹೆಚ್ಚಿನ ಅವಧಿಯಲ್ಲಿ ಎಲ್ಲ ಮಾನವೀಯ ವೌಲ್ಯಗಳು, ಸರ್ವಮಾನ್ಯ ಅಂತರ್‌ರಾಷ್ಟ್ರೀಯ ಕಾನೂನು ನಿಯಮಗಳು ಮತ್ತು ಬಲಿಷ್ಠ ಜಾಗತಿಕ ಜನಾಭಿಪ್ರಾಯ ಇವೆಲ್ಲವನ್ನೂ ಮೆಟ್ಟಿ ನಿಲ್ಲಲು ಹೇಗೆ ತಾನೇ ಸಾಧ್ಯವಾಗುತ್ತದೆ? ಭಾರೀ ಪ್ರತಿರೋಧದ ಎದುರು, ಒಂದು ದೊಡ್ಡ ಜನಸಮುದಾಯ ಮತ್ತು ಒಂದು ಪ್ರದೇಶದ ವಿರುದ್ಧ ಪದೇ ಪದೇ ಅಮಾನುಷ ದೌರ್ಜನ್ಯಗಳನ್ನು ಎಸಗಿ ತನ್ನ ಆಕ್ರಮಣಕಾರಿ ಜನಾಂಗವಾದಿ ಯೋಜನೆಗಳನ್ನು ಎಗ್ಗಿಲ್ಲದೆ ಅನುಷ್ಠಾನಿಸುತ್ತಾ ಹೋಗುವ ಸಾಮರ್ಥ್ಯ ಅದಕ್ಕೆ ಎಲ್ಲಿಂದ ಬರುತ್ತದೆ? ಹೀಗೆಂದು ಅಚ್ಚರಿ ಪಡುವವರು ತಿಳಿದಿರಬೇಕು: ಇಸ್ರೇಲ್ ದೇಶ ಈವರೆಗೆ ತಾನು ಸಾಧಿಸಿದ ಯಾವುದನ್ನೂ ಒಂಟಿಯಾಗಿ ಸಾಧಿಸಿಲ್ಲ. ಪ್ರಭಾವಶಾಲಿ ಝಿಯೋನಿಸ್ಟ್ ಸಂಘಟನೆಗಳಿರುವ ಅಮೆರಿಕ ಮತ್ತು ಒಂದು ಕಾಲದಲ್ಲಿ ತಮ್ಮ ನೆಲದಿಂದ ಓಡಿ ಹೋಗಲು ಯಹೂದಿಗಳನ್ನು ನಿರ್ಬಂಧಿಸಿದ್ದ ಯೂರೋಪಿನ ದೇಶಗಳು ಆರಂಭದಿಂದಲೂ ಇಸ್ರೇಲ್‌ಗೆ ಎಲ್ಲ ಬಗೆಯ ಆರ್ಥಿಕ, ತಾಂತ್ರಿಕ ಮತ್ತು ಸೈನಿಕ ನೆರವನ್ನು ಒದಗಿಸುತ್ತಾ ಬಂದಿವೆ. ಇಂದು ಕೂಡಾ ಅವು ಹೆಜ್ಜೆಹೆಜ್ಜೆಗೂ ಇಸ್ರೇಲ್ ಜೊತೆ ನಿಂತಿವೆ. ಮಾತ್ರವಲ್ಲ, ಎಲ್ಲ ಅಂತರ್‌ರಾಷ್ಟ್ರೀಯ ಕಾನೂನು ಮತ್ತು ಒತ್ತಡಗಳಿಂದ ಅದನ್ನು ರಕ್ಷಿಸುವುದಕ್ಕೆ ಕಂಕಣಬದ್ಧವಾಗಿವೆ. ಈ ಹಿನ್ನೆಲೆಯಲ್ಲಿ, ಇಸ್ರೇಲ್ ಅನ್ನು ಮಣಿಸಲು ಬಯಸುವವರು ಪ್ರಸ್ತುತ ಎಲ್ಲ ಶಕ್ತಿಗಳನ್ನು ಮಣಿಸುವ ಸಾಮರ್ಥ್ಯವನ್ನು ತಮ್ಮಲ್ಲಿ ಬೆಳೆಸಿಕೊಳ್ಳಬೇಕಾಗುತ್ತದೆ.

(ಮುಂದುವರಿಯುವುದು)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)