ಕರ್ನಾಟಕ
ಸರಕಾರದ ವಿರುದ್ಧ ಮತ್ತೆ ಹರಿಹಾಯ್ದ ಮಾಜಿ ಸಚಿವ
ಕೊರೋನ ಚಿಕಿತ್ಸೆಗೆ ಖರ್ಚು ಮಾಡಲೂ ಸಿಎಂ ಪುತ್ರನ ಅನುಮತಿ ಬೇಕಿದೆ: ಎಚ್.ವಿಶ್ವನಾಥ್ ಆರೋಪ

ಮೈಸೂರು, ಮೇ 19: ಮೈಸೂರು ಜಿಲ್ಲೆಯಲ್ಲಿ ಕೊರೋನದಿಂದ ಜನರು ಸಾಯುತ್ತಿದ್ದಾರೆ. ಆದರೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಅಗತ್ಯ ಕ್ರಮ ಕೈಗೊಂಡು ಖರ್ಚು ಮಾಡುವ ಅಧಿಕಾರ ಇಲ್ಲ. ಪವರ್ ಇರುವುದು ಮುಖ್ಯಮಂತ್ರಿಯ ಪುತ್ರ ವಿಜಯೇಂದ್ರನಿಗೆ ಮಾತ್ರ. ಪ್ರತಿಯೊಂದಕ್ಕೂ ಬೆಂಗಳೂರಿಗೆ ತೆರಳಿ ವಿಜಯೇಂದ್ರನ ಅನುಮತಿ ಪಡೆಯಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನರು ಕೋವಿಡ್ ನಿಂದ ಸಾಯುತ್ತಿದ್ದಾರೆ. ಅದನ್ನು ನಿಯಂತ್ರಣ ಮಾಡಲು ಜಿಲ್ಲಾಧಿಕಾರಿಗೆ ಅಧಿಕಾರ ಇಲ್ಲ, ಪ್ರತಿಯೊಂದನ್ನು ತರಿಸಿಕೊಳ್ಳಬೇಕು ಎಂದರೆ ಬೆಂಗಳೂರಿಗೆ ತೆರಳಿ ಅನುಮತಿ ಪಡೆಯಬೇಕು. ಹೀಗಿದ್ದ ಮೇಲೆ ಅಧಿಕಾರಿಗಳು ಹೇಗೆ ಕೆಲಸ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಜಿಲ್ಲಾ ಮಂತ್ರಿಗಳು ಕೊರೋನ ನಿಯಂತ್ರಣ ಸಂಬಂಧ ಬರೀ ಸಭೆಗಳನ್ನು ನಡೆಸಿದರೆ ಸಾಲದು, ಸಭೆ ನಡೆಸಿ ಏನು ಕ್ರಮ ಕೈಗೊಂಡಿದ್ದೀರಿ. ಜಿಲ್ಲಧಿಕಾರಿ ಬಳಿ ಮನವಿ ಮಾಡಿಕೊಳ್ಳುವುದಲ್ಲ ನಿಮ್ಮ ಕೆಲಸ. ಕಮಾಂಡ್ ಮಾಡಬೇಕು ಎಂದು ಹೇಳಿದರು.
ಕೋವಿಡ್ ಸಂಕಷ್ಟ ಎದುರಿಸುತ್ತಿರುವ ಹಳ್ಳಿಗಳಲ್ಲಿ ಔಷಧಿಗಳು ಸಿಗುತ್ತಿಲ್ಲ, ಅವುಗಳನ್ನು ಪಡೆಯಬೇಕು ಎಂದರೆ ಬೆಂಗಳೂರಿಗೆ ತೆರಳಬೇಕು, ಒಬ್ಬರೆ ಅಧಿಕಾರವನ್ನು ಹಿಡಿದಿಟ್ಟುಕೊಂಡಿದ್ದಾರೆ. ದಯವಿಟ್ಟು ಸರ್ಕಾರ ನಡೆಸುವ ಮಂದಿ ಹೆಣದ ಮೇಲೆ ದುಡ್ಡು ಎತ್ತಲು ಹೋಗಬೇಡಿ. ಆಯಾ ಜಿಲ್ಲಾಧಿಕಾರಿಗಳಿಗೆ ಅಧಿಕಾರ ಕೊಡಿ, ಅವರ ನಿಯಂತ್ರಣಕ್ಕೆ ಪ್ರಧಾನ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಿ ಎಂದು ವಿಶ್ವನಾಥ್ ಹೇಳಿದರು.
ಲಾಕ್ ಡೌನ್ ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ವಾರಕ್ಕೊಮ್ಮೆ ಅಂಗಡಿ ಮುಂಗಟ್ಟುಗಳನ್ನು ತರೆದು ಅಗತ್ಯ ವಸ್ತಗಳ ಪಡೆಯಲು ಅವಕಾಶ ಮಾಡಿಕೊಡಬೇಕಿದೆ ಎಂದು ಹೇಳಿದರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ










