varthabharthi


ರಾಷ್ಟ್ರೀಯ

ನಾರದ ಲಂಚ ಪ್ರಕರಣ

ಸುವೇಂದು ಅಧಿಕಾರಿ, ಮುಕುಲ್ ರಾಯ್ ಬಂಧನಕ್ಕೆ ಅಗತ್ಯ ಅನುಮತಿ ಲಭಿಸಿರಲಿಲ್ಲ ಎಂದ ಸಿಬಿಐ

ವಾರ್ತಾ ಭಾರತಿ : 19 May, 2021

ಸುವೇಂದು, ಮುಕುಲ್ ರಾಯ್ photo: indian express

 ಕೋಲ್ಕತಾ: ನಾರದ ಲಂಚ ಪ್ರಕರಣದಲ್ಲಿ ಮೇ 17 ರಂದು ನಾಲ್ವರು ತೃಣಮೂಲ ಕಾಂಗ್ರೆಸ್ ಮುಖಂಡರನ್ನು ಬಂಧಿಸುವ ಮುನ್ನ ದಾಖಲಾದ ಚಾರ್ಜ್‌ಶೀಟ್‌ನಲ್ಲಿ ಇತರ ಆರೋಪಿಗಳಾದ ಸುವೇಂದು  ಅಧಿಕಾರಿ, ಮುಕುಲ್ ರಾಯ್, ಕಾಕಲಿ ಘೋಷ್ ದಸ್ತಿದಾರ್ ಮತ್ತು ಸೌಗತಾ ರಾಯ್ ವಿರುದ್ಧ ತನಿಖೆ ಆರಂಭಿಸಲು ಅಗತ್ಯ ಅನುಮತಿ ದೊರೆತಿಲ್ಲ ಎಂದು ಕೇಂದ್ರ ತನಿಖಾ ದಳವು(ಸಿಬಿಐ) ಉಲ್ಲೇಖಿಸಿದೆ.

ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಚಾರ್ಜ್‌ಶೀಟ್ ಸಲ್ಲಿಸಿದ ಸಿಬಿಐ,   ಸಚಿವರಾದ ಫಿರ್ಹಾದ್ ಹಕೀಮ್ ಹಾಗೂ  ಸುಬ್ರತಾ ಮುಖರ್ಜಿ, ಟಿಎಂಸಿ ಶಾಸಕ ಮದನ್ ಮಿತ್ರ ಹಾಗೂ  ಕೋಲ್ಕತಾದ ಮಾಜಿ ಮೇಯರ್ ಸೋವನ್ ಚಟರ್ಜಿ ಅವರನ್ನು ಲಂಚ ಪ್ರಕರಣದಲ್ಲಿ ಬಂಧಿಸಿತ್ತು.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿಗೆ ಪಕ್ಷಾಂತರವಾಗಿದ್ದ ಸುವೇಂದು ಅಧಿಕಾರಿ ಹಾಗೂ  ಮುಕುಲ್ ರಾಯ್ ಅವರನ್ನು ಬಂಧಿಸದಿದ್ದಕ್ಕಾಗಿ ಟಿಎಂಸಿ,  ಸಿಬಿಐ ವಿರುದ್ಧ ವಾಗ್ದಾಳಿ ನಡೆಸಿದೆ.

2014 ರಲ್ಲಿ ಲಂಚ ಪ್ರಕರಣ ಬೆಳಕಿಗೆ ಬಂದಾಗ ಸುವೇಂದು ಅಧಿಕಾರಿ ಹಾಗೂ ಮುಕುಲ್ ರಾಯ್ ಜೊತೆಗೆ  ಇತರ  ಆರೋಪಿಗಳಾದ ಟಿಎಂಸಿ ನಾಯಕರಾದ ಕಾಕಲಿ ಘೋಷ್ ದಸ್ತಿದಾರ್ ಹಾಗೂ  ಸೌಗತಾ ರಾಯ್ ವಿರುದ್ಧ, ಸಮರ್ಥ ಪ್ರಾಧಿಕಾರದಿಂದ ಕಾನೂನು ಕ್ರಮ ಜರುಗಿಸಲು ಅಗತ್ಯವಾದ ಅನುಮತಿ ದೊರೆತಿರಲಿಲ್ಲ. ಹೀಗಾಗಿ ಅವರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸುವಲ್ಲಿ ವಿಫಲವಾಗಿದ್ದೇವೆ  ಎಂದು ನ್ಯಾಯಾಲಯಕ್ಕೆ ಸಿಬಿಐ ತಿಳಿಸಿದೆ.

ಮೇ 17 ರಂದು ಬಂಧಿಸಲ್ಪಟ್ಟ ಇತರ ಆರೋಪಿಗಳು ಆಗ ವಿಧಾನಸಭೆಯ ಸದಸ್ಯರಾಗಿದ್ದರು. ಫಿರ್ಹಾದ್ ಹಕೀಮ್, ಮದನ್ ಮಿತ್ರ, ಸುಬ್ರತಾ ಮುಖರ್ಜಿ ಹಾಗೂ  ಶೋವನ್ ಚಟರ್ಜಿ ಅವರ ವಿರುದ್ಧ  ಕಾನೂನು ಕ್ರಮ ಜರುಗಿಸಲು ಸಿಬಿಐ ರಾಜ್ಯಪಾಲ ಜಗದೀಪ್ ಧಂಖರ್ ಅವರಿಂದ ಅನುಮತಿ ಪಡೆಯಿತು ಹಾಗೂ  ಅವರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿತು.

ಸೋಮವಾರ ವಿಶೇಷ ಸಿಬಿಐ ನ್ಯಾಯಾಲಯವು ನಾಲ್ವರು ಟಿಎಂಸಿ ಮುಖಂಡರಿಗೆ ಜಾಮೀನು ನೀಡಿತು. ಆದರೆ, ಸಿಬಿಐ ಈ ಆದೇಶವನ್ನು ಪ್ರಶ್ನಿಸಿದ ನಂತರ ಕಲ್ಕತ್ತಾ ಹೈಕೋರ್ಟ್ ಜಾಮೀನು ತಡೆಹಿಡಿದಿದೆ. "ಮುಂದಿನ ಆದೇಶದವರೆಗೆ ಅವರನ್ನು ನ್ಯಾಯಾಂಗ ಬಂಧನದಲ್ಲಿಡಬೇಕೆಂದು" ವಿಭಾಗೀಯ ಪೀಠವು ತನ್ನ ಆದೇಶದಲ್ಲಿ ತಿಳಿಸಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)