ರಾಷ್ಟ್ರೀಯ
ಕೆ.ಕೆ.ಶೈಲಜಾರಿಂದ ತೆರವಾದ ಆರೋಗ್ಯ ಸಚಿವೆ ಸ್ಥಾನ ವೀಣಾ ಜಾರ್ಜ್ ತುಂಬುವ ಸಾಧ್ಯತೆ

photo: the quint.
ತಿರುವನಂತಪುರಂ: ಮಾಜಿ ಪತ್ರಕರ್ತೆ, ಎರಡು ಬಾರಿ ಶಾಸಕಿಯಾಗಿ ಆಯ್ಕೆಯಾಗಿರುವ ವೀಣಾ ಜಾರ್ಜ್ ಅವರನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜ್ಯದ ಆರೋಗ್ಯ ಸಚಿವೆಯನ್ನಾಗಿ ನೇಮಕಗೊಳಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ವೀಣಾ ಅವರು ಮಾಜಿ ಆರೋಗ್ಯ ಸಚಿವೆ ಕೆ ಕೆ ಶೈಲಜಾ ಅವರ ಸ್ಥಾನ ತುಂಬಲಿದ್ದಾರೆ.
ಮಂಗಳವಾರ ತಮ್ಮ ನೂತನ ಸಚಿವ ಸಂಪುಟ ಘೋಷಿಸಿದ್ದ ವಿಜಯನ್, ಕೋವಿಡ್ ನಿರ್ವಹಣೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದ ಶೈಲಜಾ ಅವರನ್ನು ಕೈಬಿಟ್ಟಿರುವುದು ವ್ಯಾಪಕ ಅಚ್ಚರಿಗೆ ಕಾರಣವಾಗಿತ್ತು. ಆದರೆ ವಿಜಯನ್ ಅವರ ನೂತನ ಸಂಪುಟದಲ್ಲಿ ಹಿಂದಿನ ಸರಕಾರದಲ್ಲಿದ್ದ ಸಿಪಿಎಂನ ಯಾವುದೇ ಸಚಿವರಿಗೂ ಸ್ಥಾನ ಲಭಿಸಿಲ್ಲ ಎಂಬುದೂ ಇಲ್ಲಿ ಗಮನಾರ್ಹ.
ಸಿಎಂ ಅಳಿಯ ಹಾಗೂ ಡಿವೈಎಫ್‍ಐ ರಾಷ್ಟ್ರೀಯ ಅಧ್ಯಕ್ಷ ಮುಹಮ್ಮದ್ ರಿಯಾಝ್ ಅವರಿಗೆ ಲೋಕೋಪಯೋಗಿ ಹಾಗೂ ಪ್ರವಾಸೋದ್ಯಮ ಇಲಾಖೆ ವಹಿಸಲಾಗಿದೆ. ರಿಯಾಝ್ ಅವರು ಕಳೆದ ವರ್ಷ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ಅವರನ್ನು ವಿವಾಹವಾಗಿದ್ದರು.
ನೂತನ ವಿತ್ತ ಸಚಿವರಾಗಿ ಕೆ.ಎನ್ ಬಾಲಗೋಪಾಲ್ ಅವರನ್ನು ನೇಮಿಸಲಾಗಿದ್ದು ವಿ.ಸಿವನ್‍ಕುಟ್ಟಿ (ಶಿಕ್ಷಣ), ಪಿ ರಾಜೀವ್ (ಕೈಗಾರಿಕೆ), ಕೆ ರಾಧಾಕೃಷ್ಣ (ದೇವಸ್ವಂ, ಎಸ್‍ಸಿ/ಎಸ್‍ಟಿ), ಆರ್ ಬಿಂದು (ಉನ್ನತ ಶಿಕ್ಷಣ), ಆಂಟನಿ ರಾಜು (ಸಾರಿಗೆ), ಎಂ ವಿ ಗೋವಿಂದನ್ (ಸ್ಥಳೀಯಾಡಳಿತ), ವಿ ಎನ್ ವಾಸವನ್ (ಅಬಕಾರಿ, ಕಾರ್ಮಿಕ) ಕೆ ಕೃಷ್ಣ ಕುಟ್ಟಿ (ವಿದ್ಯುತ್), ಅಹಮದ್ ದೇವರಕೊವಿಲ್ (ಬಂದರು), ಸಾಜಿ ಚೆರಿಯನ್ (ಮೀನುಗಾರಿಕೆ, ಸಂಸ್ಕೃತಿ) ವಿ ಅಬ್ದುರಹಿಮಾನ್ (ಅಲ್ಪಸಂಖ್ಯಾತ ವ್ಯವಹಾರಗಳು ಮತ್ತು ಎನ್ನಾರೈ), ಜೆ ಚಿಂಚು ರಾಣಿ (ಪಶುಸಂಗೋಪನೆ), ಎ ಕೆ ಸಸೀಂದ್ರನ್ (ಅರಣ್ಯ) ನೂತನ ಸಚಿವರಾಗಿ ಆಯ್ಕೆಗೊಂಡಿದ್ದಾರೆ.
ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಗುರುವಾರ ಅಪರಾಹ್ನ 3.30ಕ್ಕೆ ಸೆಂಟ್ರಲ್ ಮೈದಾನದಲ್ಲಿ ನಡೆಯಲಿದೆ.
ಸ್ಪೀಕರ್ ಸ್ಥಾನ ಎಂ ಪಿ ರಾಜೇಶ್ ಅವರಿಗೆ ದೊರಕಿದ್ದರೆ, ಹಿರಿಯ ಶಾಸಕ ಚಿತಯೆಮ್ ಗೋಪಕುಮಾರ್ ಅವರು ಉಪಸ್ಪೀಕರ್ ಆಗಲಿದ್ದಾರೆ ಎಂದು ತಿಳಿದು ಬಂದಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ










