varthabharthi


ಕರ್ನಾಟಕ

''ಕೊರೋನ ನಿಯಂತ್ರಣಕ್ಕೆ ಬರುವವರೆಗೆ ಲಾಕ್‍ಡೌನ್ ಆಗಲಿ''

ತುಟಿಗೆ ಸವರುವ ಪ್ಯಾಕೇಜ್ ಮೂಲಕ ಇತರ ರಾಜ್ಯಗಳ ಮುಂದೆ ತಲೆ ತಗ್ಗಿಸುವಂತಾಗಿದೆ: ಸಿದ್ದರಾಮಯ್ಯ

ವಾರ್ತಾ ಭಾರತಿ : 19 May, 2021

ಬೆಂಗಳೂರು, ಮೇ 19: ಕೊರೋನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಘೋಷಣೆ ಮಾಡಿರುವ ಪ್ಯಾಕೇಜ್ ಊಟಕ್ಕಿಲ್ಲದ ಉಪ್ಪಿನಕಾಯಿ ರೀತಿಯಂತಿದೆ. ಜೊತೆಗೆ ಅವೈಜ್ಞಾನಿಕ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದಾರೆ. 

ತಮ್ಮ ನಿವಾಸದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬಡ ಕುಟುಂಬಗಳಿಗೆ ತಲಾ ಹತ್ತು ಕೆಜಿ ಅಕ್ಕಿ ಮತ್ತು ದುಡಿಯುವ ವರ್ಗದವರಿಗೆ ತಲಾ ಹತ್ತು ಸಾವಿರ ರೂ. ಪರಿಹಾರ ನೀಡುವ ಪ್ಯಾಕೇಜ್ ಘೋಷಣೆ ಮಾಡಿ ನೂರಕ್ಕೆ ನೂರರಷ್ಟು ಲಾಕ್‍ಡೌನ್ ಜಾರಿಗೆ ತನ್ನಿ ಎಂದು ಅವರು ಒತ್ತಾಯಿಸಿದ್ದಾರೆ. 

ಪ್ಯಾಕೇಜ್ ಘೋಷಿಸುವ ಮುನ್ನ ನೆರೆ ರಾಜ್ಯಗಳನ್ನು ನೋಡಿಯಾದರೂ ಯಡಿಯೂರಪ್ಪ ಅವರು ಪಾಠ ಕಲಿಯಬೇಕಿತ್ತು. ತುಟಿಗೆ ಸವರುವ ಪ್ಯಾಕೇಜ್ ಘೋಷಿಸುವ ಮೂಲಕ ಇತರ ರಾಜ್ಯಗಳ ಮುಂದೆ ತಲೆ ತಗ್ಗಿಸುವಂತೆ ಮಾಡಿದ್ದಾರೆ ಎಂದರು. 

ಮುಖ್ಯಮಂತ್ರಿಗಳು 1250 ಕೋಟಿ ರೂ. ಪ್ಯಾಕೇಜ್ ಎಂದು ಹೇಳಿದ್ದಾರೆ. ಆದರೆ, ಅವರೇ ಬಿಡುಗಡೆ ಮಾಡಿರುವ ಅಂಕಿ-ಅಂಶ ಗಮನಿಸಿದರೆ ಪ್ಯಾಕೇಜ್ ಮೊತ್ತ 1111.82 ಕೋಟಿ ಇದೆ. ಇದರಲ್ಲಿ ಕಟ್ಟಡ ಕಾರ್ಮಿಕರಿಗಾಗಿ 494 ಕೋಟಿ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಇದು ಸರ್ಕಾರ ತನ್ನ ಕೈಯಿಂದ ನೀಡುವುದಲ್ಲ. ಕಾರ್ಮಿಕರ ಕಲ್ಯಾಣ ನಿಧಿಯಿಂದ ನೀಡುವಂಥದ್ದು. ಅದು ಕಾರ್ಮಿಕರು ತಮ್ಮ ಕೂಲಿ ಹಣದಲ್ಲಿ ನೀಡಿರುವ ವಂತಿಗೆ. ಹೀಗಾಗಿ ಕಾರ್ಮಿಕರಿಗೆ ನೀಡಿರುವ ಪರಿಹಾರವನ್ನು ಪ್ಯಾಕೇಜ್‍ನಲ್ಲಿ ಸೇರಿಸಬಾರದು ಎಂದು ತಿಳಿಸಿದ್ದಾರೆ. 

ಅದೇ ರೀತಿ ಸಹಕಾರ ಇಲಾಖೆಯಿಂದ ಪಿಎಲ್‍ಡಿ ಬ್ಯಾಂಕ್ ಇನ್ನಿತರೆ ಸಹಕಾರ ಬ್ಯಾಂಕ್‍ಗಳು ನೀಡಿರುವ 134.38 ಸಾಲ ವಸೂಲಾತಿ ಗಡುವನ್ನು ಮೂರು ತಿಂಗಳು ಮುಂದೂಡಲಾಗಿದೆ. ಇದನ್ನು ಸರ್ಕಾರ ಪರಿಹಾರ ಎಂಬಂತೆ ಬಿಂಬಿಸಬಾರದು. ಕಟ್ಟಡ ಕಾರ್ಮಿಕರ ಪರಿಹಾರ ಮತ್ತು ಸಾಲ ವಸೂಲಾತಿ ಮುಂದಕ್ಕೆ ಹಾಕಿರುವುದನ್ನು ಕೈ ಬಿಟ್ಟರೆ ಉಳಿಯವುದು 483.44 ಕೋಟಿ ರೂ. ಮಾತ್ರ. ಇದು ಅತ್ಯಂತ ಅವೈಜ್ಞಾನಿಕ ಮತ್ತು ಜನರಿಗೆ ಯಾವ ರೀತಿಯಲ್ಲೂ ಉಪಯೋಗ ಆಗದ ಪ್ಯಾಕೇಜ್ ಆಗಿದೆ ಎಂದು ದೂರಿದರು.

ಕಳೆದ ವರ್ಷ ಯಡಿಯೂರಪ್ಪ ಅವರು 2100 ಕೋಟಿ ಪ್ಯಾಕೇಜ್ ಘೋಷಿಸಿದ್ದರು. ಅದರಲ್ಲಿ 850 ಕೋಟಿ ರೂ. ಗಳಷ್ಟು ಕಟ್ಟಡ ಕಾರ್ಮಿಕರ ನಿಧಿಯಿಂದಲೇ ಹಣವನ್ನು ಖರ್ಚು ಮಾಡಿ, ಸರ್ಕಾರ ಖರ್ಚು ಮಾಡಿದೆ ಎಂದು ಸುಳ್ಳು ಹೇಳಲಾಯಿತು. ಕಳೆದ ಬಾರಿಯ 2100 ಕೋಟಿ ರೂ.ಗಳ ಪ್ಯಾಕೇಜ್‍ನಲ್ಲಿ ಬಹುಪಾಲು ಹಣವನ್ನು ನೀಡಲೇ ಇಲ್ಲ. ಆಟೋ, ಕ್ಯಾಬ್, ಚಾಲಕರುಗಳಿಗೆ ಸಂಬಂಧಿಸಿದಂತೆ 7.75 ಲಕ್ಷ  ಜನರಿಗೆ ತಲಾ ಐದು ಸಾವಿರ ಪರಿಹಾರ ಕೊಡುವುದಾಗಿ ಹೇಳಿದ್ದರು. ಆದರೆ ವಾಸ್ತವವಾಗಿ ನೀಡಿದ್ದು ಕೇವಲ 2.10 ಲಕ್ಷ ಜನರಿಗೆ ಮಾತ್ರ. ಹಾಗೆಯೇ ಸವಿತಾ ಸಮಾಜದ ಶೇ. 50 ಜನರಿಗೂ ಪರಿಹಾರ ಸಿಗಲಿಲ್ಲ ಎಂದು ತಿಳಿಸಿದ್ದಾರೆ.

ಕೇಂದ್ರದಲ್ಲೂ, ರಾಜ್ಯದಲ್ಲೂ ಬಿಜೆಪಿ ಎಂದು ಅಧಿಕಾರಕ್ಕೆ ಬಂದ ರಾಜ್ಯದ ಬಿಜೆಪಿ ಸರ್ಕಾರ ಯಾವ ಕ್ಷಣದಲ್ಲೂ ಜನಪರವಾಗಿ ಯೋಚಿಸುತ್ತಿಲ್ಲ. ಮುಖ್ಯಮಂತ್ರಿ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಬಜೆಟ್ ಮೇಲೆ ನಡೆದ ಚರ್ಚೆಗಳಿಗೆ ಉತ್ತರ ನೀಡುವಾಗ ಅವರು ನೀಡಿದ್ದ ಉತ್ತರವನ್ನು ಗಮನಿಸಬೇಕು. ಅದರಲ್ಲಿ ಅವರು ಕರ್ನಾಟಕ ರಾಜ್ಯವು ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣ, ಕೇರಳ ರಾಜ್ಯಗಳಿಗಿಂತ ಉತ್ತಮ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡಿದೆ, ಆ ರಾಜ್ಯಗಳಿಗಿಂತ ಕರ್ನಾಟಕದ ಆರ್ಥಿಕತೆ ಉತ್ತಮವಾಗಿದೆ ಎಂದು ಹೇಳಿದ್ದರು ಎಂದು ನೆನಪಿಸಿದರು.

ಇಂದು ಘೋಷಿಸಿದ ಪ್ಯಾಕೇಜ್ ನೋಡಿದರೆ ಅಕ್ಕಪಕ್ಕದ ರಾಜ್ಯಗಳ ಎದುರು ತೀರಾ ಸಣ್ಣ ಪ್ಯಾಕೇಜ್ ಆಗಿದೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರದಿದ್ದರೂ ಆಂಧ್ರಪ್ರದೇಶ, ದೆಹಲಿ, ಕೇರಳ ಮುಂತಾದ ರಾಜ್ಯಗಳು ಜನಪರವಾದ ಪ್ಯಾಕೇಜುಗಳನ್ನು ಘೋಷಿಸಿವೆ. ಆ ರಾಜ್ಯಗಳ ಮುಂದೆ ಯಡಿಯೂರಪ್ಪ ಅವರು ಘೋಷಣೆ ಮಾಡಿರುವ ಪ್ಯಾಕೇಜ್ ಏನೇನೂ ಅಲ್ಲ. ಇದು ಜನರ ಕಣ್ಣಿಗೆ ಮಣ್ಣೆರಚುವ ತಂತ್ರ ಎಂದು ಸಿದ್ದರಾಮಯ್ಯ ಅವರು ಹೇಳಿದರು. 

ನೇಕಾರರು, ಅಕ್ಕಸಾಲಿಗರು, ಕಮ್ಮಾರರು, ಮಡಿವಾಳರು, ಛಾಯಾಗ್ರಾಹಕರು, ಟೈಲರಿಂಗ್ ವೃತ್ತಿಯವರು, ಸವಿತಾ ಸಮಾಜದವರಿಗೂ ಪರಿಹಾರ ನೀಡಬೇಕು. ಸೋಂಕು ನಿಯಂತ್ರಣಕ್ಕೆ ಬರುವವರೆಗೆ ಲಾಕ್‍ಡೌನ್ ಕಟ್ಟುನಿಟ್ಟಾಗಿ ಆಗಲಿ. ಅದಕ್ಕೂ ಮೊದಲು ವಿಶೇಷ ಪ್ಯಾಕೇಜ್ ಘೋಷಣೆಯಾಗಬೇಕು ಎಂದರು. 

ಕೊರೋನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳಿಗೆ ಈವರೆಗೆ 12 ಪತ್ರಗಳನ್ನು ಬರೆದಿದ್ದೇನೆ. ಯಾವುದಕ್ಕೂ ಉತ್ತರ ನೀಡುವ ಸೌಜನ್ಯ ಸಿಎಂ ಅವರಿಗೆ ಇಲ್ಲ. ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಜಾಯಮಾನ ಈ ಸರ್ಕಾರಕ್ಕೆ ಇಲ್ಲ ಎಂದು ತಿಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)