varthabharthi


ಕರ್ನಾಟಕ

ಸೋಮವಾರಪೇಟೆ ಪಟ್ಟಣ ಪಂಚಾಯತ್ ಅಧ್ಯಕ್ಷೆ ನಳಿನಿ ಗಣೇಶ್ ಕೊರೋನದಿಂದ ನಿಧನ

ವಾರ್ತಾ ಭಾರತಿ : 19 May, 2021

ಮಡಿಕೇರಿ, ಮೇ 19: ಸೋಮವಾರಪೇಟೆ ಪಟ್ಟಣ ಪಂಚಾಯತ್ ಅಧ್ಯಕ್ಷೆ ನಳಿನಿ ಗಣೇಶ್ ಅವರು ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ. ನಳಿನಿ ಗಣೇಶ್ 2020ರ ನವೆಂಬರ್ ತಿಂಗಳಲ್ಲಿ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡಿದ್ದರು.

ಸೋಮವಾರಪೇಟೆ ತಾಲೂಕು ಜಾನಪದ ಪರಿಷತ್ ನಿರ್ದೇಶಕಿಯಾಗಿದ್ದ ನಳಿನಿ ಗಣೇಶ್, ಉತ್ತಮ ಗಾಯಕಿಯೂ ಆಗಿದ್ದರು. ಕೆಲವು ದಿನಗಳ ಹಿಂದೆ ನಳಿನಿ ಗಣೇಶ್ ಅವರಿಗೆ ಕೊರೋನ ಸೋಂಕು ತಗಲಿದ್ದು, ಉಸಿರಾಟದ ಸಮಸ್ಯೆ ಇದ್ದ ಹಿನ್ನಲೆಯಲ್ಲಿ ಅವರನ್ನು ಮಡಿಕೇರಿಯ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ನಿಧನರಾಗಿದ್ದಾರೆ.

1990ರಲ್ಲಿ ಮೊದಲ ಬಾರಿಗೆ ಸೋಮವಾರಪೇಟೆ ಪಂಚಾಯತ್‍ಗೆ ಬಿಜೆಪಿ ಸದಸ್ಯೆಯಾಗಿ ಆಯ್ಕೆಯಾಗಿದ್ದರು. 1996, 2001, 2007, 2020ರಲ್ಲಿಯೂ ಸದಸ್ಯೆಯಾಗಿ ಆಯ್ಕೆಯಾದ ನಳಿನಿ ಗಣೇಶ್, 1996ರಲ್ಲಿ ಉಪಾಧ್ಯಕ್ಷೆಯಾಗಿ 2007 ಮತ್ತು 2020ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಏರಿದ್ದರು. 2 ಬಾರಿ ಸೋಮವಾರಪೇಟೆ ಪಂಚಾಯತ್‍ಗೆ ಅಧ್ಯಕ್ಷೆ ಮತ್ತು 1 ಬಾರಿ ಉಪಾಧ್ಯಕ್ಷೆ ಆದ ಹಿರಿಮೆಯನ್ನು ಅವರು ಹೊಂದಿದ್ದರು. 

ನಳಿನಿ ಗಣೇಶ್ ಅವರ ನಿಧನಕ್ಕೆ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ಸಂತಾಪ ಸೂಚಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)