ಕರಾವಳಿ
ಉಡುಪಿ; ಸರಕಾರದಿಂದ ತಪ್ಪು ಸಂದೇಶ ಆರೋಪ : ಲಸಿಕೆಗಾಗಿ ಆಸ್ಪತ್ರೆಗೆ ಅಲೆದಾಡಿದ ಹಿರಿಯರು

ಉಡುಪಿ, ಮೇ 19: ರಾಜ್ಯ ಸರಕಾರದ ಸಾಫ್ಟ್‌ವೇರ್ ಸಮಸ್ಯೆಯಿಂದ ಮೊಬೈಲ್‌ಗೆ ಬಂದ ತಪ್ಪು ಸಂದೇಶದಿಂದಾಗಿ ಮೊದಲ ಡೋಸ್ ಪಡೆದು ಅವಧಿ ಮೀರಿದ ಹಲವು ಮಂದಿ ಹಿರಿಯರು, ಎರಡನೇ ಡೋಸ್‌ಗಾಗಿ ಖಾಸಗಿ ಆಸ್ಪತ್ರೆಗಳಿಗೆ ಅಲೆದಾಡಿರುವ ಬಗ್ಗೆ ವರದಿಯಾಗಿದೆ.
‘ಆತ್ಮೀಯ.... ರವರೇ ತಮ್ಮ ಕೋವಿಡ್-19 ಲಸಿಕೆಯ ಎರಡನೇ ಡೋಸ್‌ನ್ನು ದಿನಾಂಕ ಮೇ 19ರಂದು ಬೆಳಗ್ಗೆ 10 ಗಂಟೆಯಿಂದ 12ಗಂಟೆ ನಡುವೆ ಗಾಂಧಿ ಆಸ್ಪತ್ರೆ ಉಡುಪಿ ಸ್ಥಳದಲ್ಲಿ ನಿಗದಿಪಡಿಸಲಾಗಿದೆ. ನೋಂದಣಿ ಸಮಯದಲ್ಲಿ ನೀಡಿರುವ ತಮ್ಮ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ತೆಗೆದುಕೊಂಡು ಹೋಗುವುದು- ಕರ್ನಾಟಕ ಸರಕಾರ’ ಎಂಬ ಸಂದೇಶ ಜಿಲ್ಲೆಯ ಹಲವು ಮಂದಿ ಹಿರಿಯರ ಮೊಬೈಲ್‌ಗೆ ಇಂದು ಬಂದಿದೆ.
ಅದರಂತೆ ಈ ಸಂದೇಶ ಪಡೆದ ನೂರಾರು ಮಂದಿ ತಮಗೆ ಸೂಚಿಸಿರುವ ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ಪಡೆದುಕೊಳ್ಳಲು ತೆರಳಿದ್ದಾರೆ. ಕೆಲವರು ಗ್ರಾಮೀಣ ಪ್ರದೇಶದಿಂದಲೂ ನಗರಕ್ಕೆ ಲಸಿಕೆಗಾಗಿ ಬಂದಿದ್ದಾರೆ. ಆದರೆ ಆಸ್ಪತ್ರೆಗಳಿಗೆ ಯಾವುದೇ ಲಸಿಕೆಗಳು ಪೂರೈಕೆ ಆಗಿಲ್ಲ. ಆದುದರಿಂದ ಈ ಸಂದೇಶ ನೋಡಿ ಆಸ್ಪತ್ರೆಯವರಿಗೆಯೇ ಅಚ್ಚರಿಯಾಗಿದೆ. ಹೀಗೆ ಹಲವು ಮಂದಿ ಹಿರಿಯರು ಲಸಿಕೆ ಗಾಗಿ ಬೇರೆ ಬೇರೆ ಆಸ್ಪತ್ರೆಗಳಿಗೆ ಅಲೆದಾಟ ನಡೆಸಿದ್ದಾರೆ. ಕೊನೆಗೂ ಲಸಿಕೆ ಸಿಗದೆ ಮನೆಗೆ ವಾಪಾಸ್ಸು ಆಗಿದ್ದಾರೆ.
‘ಮಾ.31ರಂದು ಮೊದಲ ಡೋಸ್ ಪಡೆದ ನನಗೆ ಮತ್ತು ನನ್ನ ಪತ್ನಿಗೆ ಎರಡನೇ ಡೋಸ್ ಪಡೆಯುವ ಬಗ್ಗೆ ಮೊಬೈಲ್ ಸಂದೇಶ ಬಂದಿತ್ತು. ಅದರಂತೆ ನಾವು ರಿಕ್ಷಾದಲ್ಲಿ ಖಾಸಗಿ ಆಸ್ಪತ್ರೆಗೆ ತೆರಳಿದೆವು. ಆದರೆ ಆಸ್ಪತ್ರೆಯವರು ನಮಗೆ ಯಾವುದೇ ಮಾಹಿತಿ ಇಲ್ಲ, ನಿಮ್ಮಂತೆ ಹಲವು ಮಂದಿ ಬಂದರು ಹೋಗಿದ್ದಾರೆ ಎಂಬ ಉತ್ತರ ಬಂತು. ಅದಕ್ಕೆ ನಾವು ಲಸಿಕೆ ಸಿಗುವ ಅಲ್ಲೇ ಹತ್ತಿರ ಸರಕಾರಿ ಆಸ್ಪತ್ರೆಗೆ ತೆರಳಿದೆವು. ಅಲ್ಲೂ ಕೂಡ ಇದೇ ಉತ್ತರ ದೊರೆಯಿತು’ ಎಂದು ಪ್ರೊ.ಮುರಳೀಧರ ಉಪಾಧ್ಯಾಯ ತಿಳಿಸಿದ್ದಾರೆ.
‘ನಮಗೆ ಬಂದ ಸಂದೇಶದಲ್ಲಿ ಯಾವುದೇ ಗೊಂದಲ ಇಲ್ಲ. ನಮ್ಮ ಹೆಸರು ಸ್ಪಷ್ಟವಾಗಿದೆ. ಆದರೂ ನಮಗೆ ಲಸಿಕೆ ಸಿಗಲಿಲ್ಲ. ನಮಗೆ ಎರಡನೇ ಡೋಸ್ ಮೇ ಮೊದಲ ವಾರದಲ್ಲಿ ಸಿಗಬೇಕಾಗಿತ್ತು. ಬೇರೆ ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ಎರಡನೇ ಡೋಸ್ ನೀಡಲಾಗುತ್ತಿದೆ. ಬುದ್ಧಿವಂತರ ಜಿಲ್ಲೆ ಎನಿಸಿರುವ ಉಡುಪಿ ಯಲ್ಲಿ ಈ ರೀತಿ ಅವ್ಯವಸ್ಥೆ ಯಾಕೆ. ಇದೊಂದು ರೀತಿಯಲ್ಲಿ ನಮ್ಮನ್ನು ಫೂಲ್ ಮಾಡಿದಂತೆ ಆಗಿದೆ. ಈ ಕೊರೋನ ಭೀತಿಯ ಮಧ್ಯೆಯೂ ನಾವು ಆಸ್ಪತ್ರೆ ಗಳಿಗೆ ಅಲೆದಾಡುವುದು ಎಷ್ಟು ಸರಿ’ ಎಂದು ಅವರು ಪ್ರಶ್ನಿಸಿದ್ದಾರೆ.
ಎಲ್ಲರಿಗೂ ಸರಕಾರಿ ಕೇಂದ್ರದಲ್ಲಿ 2ನೆ ಡೋಸ್
ಮೊದಲ ಡೋಸ್ ಖಾಸಗಿ ಆಸ್ಪತ್ರೆಯಲ್ಲಿ ಪಡೆದುಕೊಂಡವರು ಎರಡನೇ ಡೋಸ್ ಸರಕಾರಿ ಲಸಿಕಾ ಕೇಂದ್ರಗಳಲ್ಲಿ ಪಡೆಯಬಹುದಾಗಿದೆ. ಮಣಿಪಾಲ ಕೆಎಂಸಿಯವರು ತಾವೇ ಲಸಿಕೆಯನ್ನು ಖರೀದಿಸಿ, ಅವಧಿ ಮೀರಿದ ತಮ್ಮ ಸಿಬ್ಬಂದಿಗಳಿಗೆ ಎರಡು ಮೂರು ದಿನಗಳಲ್ಲಿ ನೀಡಲಿದ್ದಾರೆ. ಉಳಿದ ಖಾಸಗಿ ಆಸ್ಪತ್ರೆಯವರು ಖರೀದಿಸಿ ತರುವವರೆಗೆ ಅಲ್ಲಿ ಮೊದಲ ಡೋಸ್ ಪಡೆದವರಿಗೆ ಇಲಾಖೆಯಿಂದ ಎರಡನೇ ಡೋಸ್ ನೀಡಲಾಗು ವುದು. ಖಾಸಗಿ ಆಸ್ಪತ್ರೆಯಲ್ಲಿ ಮೊದಲ ಡೋಸ್ ಪಡೆದುಕೊಂಡವರಿಗೂ ಎರಡನೇ ಡೋಸ್ ಪಡೆಯಲು ನಾವು ಮೊಬೈಲ್ ಸಂದೇಶ ಕಳುಹಿಸುತ್ತೇವೆ. ಯಾರು ಕೂಡ ಗೊಂದಲಕ್ಕೆ ಒಳಗಾಗುವುದು ಬೇಡ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
‘ಕೆಲವರ ಮೊಬೈಲ್‌ಗೆ ಲಸಿಕೆ ಪಡೆಯುವ ಬಗ್ಗೆ ಸಂದೇಶ ಹೋಗಿದೆ. ಅದು ಕರ್ನಾಟಕ ಸರಕಾರದಿಂದ ಬಂದ ಸಂದೇಶವೇ ಹೊರತು ನಮ್ಮ ಇಲಾಖೆಯಿಂದ ಕಳುಹಿಸಿದಲ್ಲ. ರಾಜ್ಯಮಟ್ಟದಲ್ಲಿ ಸಾಫ್ಟ್‌ವೇರ್ ಸಮಸ್ಯೆಯಿಂದ ಈ ರೀತಿ ಸಂದೇಶ ಎಲ್ಲ ಜಿಲ್ಲೆಗಳಿಗೂ ಹೋಗಿದೆ. ಆದರೆ ಅದು ತಪ್ಪು ಸಂದೇಶ ಆಗಿದೆ. ನಾವು ನಗರ ಪ್ರದೇಶದಲ್ಲಿ ಮಾತ್ರ ಸಂದೇಶ ಕಳುಹಿಸುತ್ತೇವೆ. ಗ್ರಾಮೀಣ ಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರೇ ಲಸಿಕೆ ಪಡೆಯುವವರಿಗೆ ಮಾಹಿತಿ ನೀಡುತ್ತಾರೆ’
-ಡಾ.ಎಂ.ಜಿ.ರಾಮ, ಲಸಿಕಾ ನೋಡೆಲ್ ಅಧಿಕಾರಿ, ಉಡುಪಿ
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ










