ಕರಾವಳಿ
ದಿನದಲ್ಲಿ 913 ಮಂದಿ ಗುಣಮುಖ
ಉಡುಪಿ : ಕೋವಿಡ್‌ಗೆ ಮತ್ತೆ 6 ಬಲಿ; 863 ಮಂದಿಗೆ ಕೊರೋನ ಸೋಂಕು

ಉಡುಪಿ, ಮೇ 19: ಕೊರೋನ ಸೋಂಕು ಬುಧವಾರ ಮತ್ತೆ ಆರು ಮಂದಿಯನ್ನು ಬಲಿ ಪಡೆದಿದೆ. ಈ ಮೂಲಕ ಕೊರೋನ ಸಾಂಕ್ರಾಮಿಕಕ್ಕೆ ಮೃತಪಟ್ಟವರ ಸಂಖ್ಯೆ 281ಕ್ಕೇರಿದೆ. ದಿನದಲ್ಲಿ ಸೋಂಕಿಗೆ ಪಾಸಿಟಿವ್ ಬಂದವರು 863 ಮಂದಿಯಾದರೆ, ಚಿಕಿತ್ಸೆಯ ಬಳಿಕ ಗುಣಮುಖ ರಾದವರು 913 ಮಂದಿ. ಸದ್ಯ ಜಿಲ್ಲೆಯಲ್ಲಿ 6442 ಮಂದಿ ಸೋಂಕಿಗೆ ಸಕ್ರಿಯರಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಬುಧವಾರ ಮೃತರಲ್ಲಿ ಮೂವರು ಪುರುಷರು (60, 50, 86) ಹಾಗೂ ಮೂವರು ಮಹಿಳೆ (77, 65, 75)ಯರಿದ್ದಾರೆ. ಉಡುಪಿ ತಾಲೂಕಿನ ಮೂವರು, ಕುಂದಾಪುರ ತಾಲೂಕಿನ ಇಬ್ಬರು ಹಾಗೂ ಕಾರ್ಕಳ ತಾಲೂಕಿನ ಒಬ್ಬರು ಮೃತರು. ಮಣಿಪಾಲ, ಉಡುಪಿ, ಕುಂದಾಪುರ ಹಾಗೂ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗಳಲ್ಲಿ ಮೂವರು ಮಂಗಳವಾರ ಮತ್ತೆ ಮೂವರು ಬುಧವಾರ ಮೃತರಾಗಿದ್ದಾರೆ.
ಎಲ್ಲರೂ ಗಂಭೀರ ಕೊರೋನ ಸೋಂಕಿನ ಲಕ್ಷಣದೊಂದಿಗೆ ಉಸಿರಾಟ ತೊಂದರೆ, ನ್ಯುಮೋನಿಯಾದಿಂದ ನರಳುತಿದ್ದರು. ಸತ್ತವರು ಸಾಲಿಕೇರಿ, ಬಡಾಕೆರೆ, ನಾಡ, ಬೇಳಂಜೆ, ಅಲೆವೂರು, ಹಿರೇಬೆಟ್ಟು ಗ್ರಾಮೀಣ ಭಾಗದಿಂದ ಬಂದವರು. ಇಬ್ಬರು ಚಿಕಿತ್ಸೆಗೆಂದು ಆಸ್ಪತ್ರೆಗೆ ಸೇರಿ ಮರುದಿನವೇ ಮೃತಪಟ್ಟಿದ್ದಾರೆ.
ಬುಧವಾರ ಪಾಸಿಟಿವ್ ಬಂದ 863 ಮಂದಿಯಲ್ಲಿ 427 ಮಂದಿ ಪುರುಷ ರು ಹಾಗೂ 436 ಮಂದಿ ಮಹಿಳೆಯರು. ಇವರಲ್ಲಿ ಉಡುಪಿ ತಾಲೂಕಿನ 320, ಕುಂದಾಪುರ ತಾಲೂಕಿನ 333 ಹಾಗೂ ಕಾರ್ಕಳ ತಾಲೂಕಿನ 201 ಮಂದಿ ಇದ್ದು, ಉಳಿದ 9 ಮಂದಿ ಹೊರಜಿಲ್ಲೆಗಳಿಂದ ಉಡುಪಿಗೆ ವಿವಿಧ ಕಾರಣಗಳಿಗಾಗಿ ಆಗಮಿಸಿದವರು. ಇವರಲ್ಲಿ 26 ಮಂದಿ ಕೋವಿಡ್ ಆಸ್ಪತ್ರೆಗೆ 837 ಮಂದಿ ಹೋಮ್ ಐಸೋಲೇಷನ್‌ಗೆ ದಾಖಲಾಗಿದ್ದಾರೆ.
ಮಂಗಳವಾರ 913 ಮಂದಿ ಸೋಂಕಿನಿಂದ ಗುಣಮುಖರಾಗುವ ಮೂಲಕ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 42,513ಕ್ಕೇರಿದೆ. ನಿನ್ನೆ ಜಿಲ್ಲೆಯ 2229 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಇಂದಿನ 863 ಮಂದಿ ಸೇರಿ ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 49,236 ಆಗಿದೆ ಎಂದು ಡಾ.ಸೂಡ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 5,54,381 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.
353 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಬುಧವಾರ ಒಟ್ಟು 353 ಮಂದಿ ಕೋವಿಡ್‌ಗಿರುವ ಲಸಿಕೆಯ ಎರಡನೇ ಡೋಸ್‌ನ್ನು ಪಡೆದಿದ್ದಾರೆ. ಇವರಲ್ಲಿ 327 ಮಂದಿ 45 ವರ್ಷ ಮೇಲಿನವರಾದರೆ, 19 ಮಂದಿ ಆರೋಗ್ಯ ಕಾರ್ಯಕರ್ತರು ಹಾಗೂ 7 ಮಂದಿ ಮುಂಚೂಣಿ ಕಾರ್ಯಕರ್ತರು ಎಂದು ಡಾ.ಸೂಡ ತಿಳಿಸಿದರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ










