ಕರ್ನಾಟಕ
ಪೊಲೀಸರಿಂದ ಲಾಠಿ ಏಟು: ಎಫ್‍ಐಆರ್ ದಾಖಲಿಸಲು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು, ಮೇ 19: ಲಾಕ್‍ಡೌನ್ ಜಾರಿ ಸಂದರ್ಭದಲ್ಲಿ ಪೊಲೀಸರು ಲಾಠಿ ಏಟು ಕೊಟ್ಟ ಆರೋಪಕ್ಕೆ ಸಂಬಂಧಿಸಿ ಪೊಲೀಸರ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ನಿರ್ದೇಶಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಒಂದು ಸಾವಿರ ರೂಪಾಯಿ ದಂಡ ವಿಧಿಸಿ ವಕೀಲ ಬಾಲಕೃಷ್ಣನ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಪೊಲೀಸರು ಬಾಯಿ ಮಾತಿನಲ್ಲಿ ಹೇಳಿದರೆ ಕೇಳುತ್ತಾರಾ? ನಮ್ಮ ಜನರು ಅಷ್ಟು ನಾಗರಿಕರಾಗಿದ್ದಾರಾ? ಕೊರೋನದಿಂದ ಎಷ್ಟು ಪೊಲೀಸರು ಮೃತಪಟ್ಟಿದ್ದಾರೆ ತಿಳಿದಿದೆಯೇ ಎಂದು ನ್ಯಾಯಪೀಠ ಪ್ರಶ್ನಿಸಿದೆ.
ಪೊಲೀಸರು ತಮ್ಮ ಖುಷಿಗಾಗಿ ಲಾಠಿ ಏಟು ನೀಡಿಲ್ಲ. ಕೆಲವು ಪೊಲೀಸರಿಗೆ ನೀರು, ಊಟವೂ ಸಿಗುತ್ತಿಲ್ಲ. ಇಡೀ ವಿಶ್ವವೇ ಕೊರೋನ ಸೋಂಕಿನಿಂದ ನರಳುತ್ತಿದೆ. ಜನ ಮನೆಯಲ್ಲಿ ಇರಲಿ ಎಂದು ಪೊಲೀಸರು ಪ್ರಯತ್ನ ನಡೆಸುತ್ತಿದ್ದಾರೆ. ಪೊಲೀಸರಿಗೆ ಜೀವ ಭಯವಿದ್ದರೂ ಕರ್ತವ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಪೊಲೀಸರು ಶಿಸ್ತುಬದ್ಧ ಅಧಿಕಾರಿಗಳು. ಒಂದೆರಡು ಕಡೆ ಪೊಲೀಸರು ಚೌಕಟ್ಟು ಮೀರಿರಬಹುದು. ಅದಕ್ಕಾಗಿ ಎಲ್ಲ ಪೊಲೀಸರ ಮೇಲೆ ವಿಚಾರಣೆ ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಆರೋಪಕ್ಕೆ ಪೂರಕವಾಗಿ ಯಾವುದೇ ದಾಖಲೆ ಒದಗಿಸಿಲ್ಲ. ಹಲ್ಲೆ ನಡೆಸಿದರೆ ಖಾಸಗಿ ದೂರು ದಾಖಲಿಸಬಹುದು ಎಂದು ನ್ಯಾಯಪೀಠವು ತಿಳಿಸಿದೆ.
ಇದಕ್ಕೂ ಮೊದಲು, ಲಾಕ್‍ಡೌನ್ ಜಾರಿಗೊಳಿಸುವಾಗ ಪೊಲೀಸರು ಸಾರ್ವಜನಿಕರ ಮೇಲೇ ಲಾಠಿ ಏಟು ನೀಡುವುದು ಸೂಕ್ತವಲ್ಲ. ಕರ್ತವ್ಯದ ವೇಳೆ ಪೊಲೀಸರು ಸಮತೋಲನ ತಪ್ಪಬಾರದು. ಇಂತಹ ಘಟನೆಗಳಾಗದಂತೆ ಎಚ್ಚರ ವಹಿಸಬೇಕು ಎಂದು ಹೈಕೋರ್ಟ್ ಸರಕಾರಕ್ಕೆ ಸೂಚನೆ ನೀಡಿತ್ತು. ಜತೆಗೆ ಪೊಲೀಸರಿಗೆ ಸೂಕ್ತ ಮಾರ್ಗಸೂಚಿ ನೀಡಲು ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿತ್ತು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ










