ಕರಾವಳಿ
ಉಡುಪಿ: ಕಪ್ಪು ಶಿಲೀಂದ್ರ ಸೋಂಕು ಕಂಡುಬಂದ ಹೊರಜಿಲ್ಲೆಗಳ 7 ಮಂದಿಗೆ ಮಣಿಪಾಲದಲ್ಲಿ ಚಿಕಿತ್ಸೆ

ಉಡುಪಿ, ಮೇ 19: ಕೋವಿಡ್‌ಗೆ ಪಾಸಿಟಿವ್ ಬಂದವರಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಕಪ್ಪು ಶಿಲೀಂದ್ರ (ಮ್ಯೂಕರ್ ಮೈಕೋಸಿಸ್) ಸೋಂಕಿಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಹೊರಜಿಲ್ಲೆಯಿಂದ ಬಂದ ಏಳು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಈ ಬಗ್ಗೆ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಡಾ.ಸೂಡ, ಐವರು ಮಹಿಳೆಯರು ಹಾಗೂ ಇಬ್ಬರು ಪುರುಷರು ಈ ಸೋಂಕಿಗಾಗಿ ಇದೀಗ ಚಿಕಿತ್ಸೆ ಪಡೆಯುತ್ತಿದ್ದಾರೆ. ಹರಿಹರ, ದಾವಣಗೆರೆ, ಚಿತ್ರದುರ್ಗ, ಕೊಪ್ಪಳ, ರಾಣಿಬೆನ್ನೂರು, ಹುಬ್ಬಳ್ಳಿ ಹಾಗೂ ಧಾರವಾಡಗಳಿಂದ ಬಂದ ಈ ಸೋಂಕಿತರೆಲ್ಲರೂ ಮಧುಮೇಹ ಕಾಯಿಲೆ ಹೊಂದಿದ್ದಾರೆ. ಎಲ್ಲರೂ ಕೋವಿಡ್‌ಗೆ ಪಾಸಿಟಿವ್ ಬಂದವರಾಗಿದ್ದಾರೆ.
ಕೆಎಂಸಿಯಲ್ಲಿ ಚಿಕಿತ್ಸೆಯಲ್ಲಿರುವ ಏಳು ಮಂದಿಯಲ್ಲಿ ದಾವಣಗೆರೆಯ ಒಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲರಿಗೂ ಶಸ್ತ್ರಚಿಕಿತ್ಸೆಯಾಗಿದ್ದು, ಎಲ್ಲರೂ ಚೇತರಿಸಿಕೊಳ್ಳುತಿದ್ದಾರೆ ಎಂದು ಡಾ.ಸೂಡ ತಿಳಿಸಿದರು. ಉಳಿದಂತೆ ಜಿಲ್ಲೆಯ ಯಾರಲ್ಲೂ ಈ ಸೋಂಕು ಕಂಡುಬಂದಿಲ್ಲ ಎಂದವರು ನುಡಿದರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ










