varthabharthi


ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?

ಫೆಲೆಸ್ತೀನ್‌ನಲ್ಲಿ ನಡೆಯುತ್ತಿರುವುದೇನು?

ಆಕ್ರಮಿತ ನಾಗರಿಕರಿಗೆ ಐಡಿ ಎಂಬ ಮೂಗುದಾರ

ವಾರ್ತಾ ಭಾರತಿ : 20 May, 2021
ಎ.ಎಸ್. ಪುತ್ತಿಗೆ

    ಭಾಗ-4

ಫೆಲೆಸ್ತೀನ್‌ನ ಅರಬ್ ನಿವಾಸಿಗಳೆಂದರೆ ಇಸ್ರೇಲ್ ಭೂಮಿಯಲ್ಲಿರುವ ಅಲ್ಲಿನ ಮೂಲ ನಿವಾಸಿಗಳು. ಅವರ ವಿಷಯದಲ್ಲಿ ಇಸ್ರೇಲ್ ಸರಕಾರದ ಧೋರಣೆ ಏನು? ಇದನ್ನು ಅರಿಯಲು ನೀವು ದಾಖಲೆ ಪತ್ರಗಳನ್ನು ಹುಡುಕಿಕೊಂಡು ಹೋಗಬೇಕಾಗಿಲ್ಲ. ಪತ್ತೇದಾರಿಕೆ ನಡೆಸಬೇಕಾಗಿಲ್ಲ. ತನ್ನ ಇತಿಹಾಸದುದ್ದಕ್ಕೂ ಇಸ್ರೇಲ್ ಸರಕಾರ ಫೆಲೆಸ್ತೀನ್ ನಿವಾಸಿಗಳ ಜೊತೆ ಯಾವ ರೀತಿ ನಡೆದುಕೊಂಡಿದೆ ಎಂಬುದು ಬಹಳ ಸ್ಪಷ್ಟವಾಗಿ ಎಲ್ಲ ಬಗೆಯ ಲಿಖಿತ ಮತ್ತು ವೀಡಿಯೊ ಪುರಾವೆಗಳೊಂದಿಗೆ ಜಗತ್ತಿನ ಮುಂದಿದೆ.

ಇಸ್ರೇಲ್‌ನ ಜನಾಂಗವಾದಿ ವ್ಯವಸ್ಥೆಯಲ್ಲಿ ನಾಗರಿಕರನ್ನು ಹಲವು ವಿಭಿನ್ನ ವರ್ಗಗಳಾಗಿ ವಿಂಗಡಿಸಲಾಗಿದೆ. ಅಲ್ಲಿ ನಾಗರಿಕರಿಗೆ ಇಸ್ರೇಲ್ ಸರಕಾರದಿಂದ ನೀಡಲಾಗುವ ಗುರುತಿನ ಚೀಟಿ (ID)ಗಳಲ್ಲಿ ಆರು ವಿಭಿನ್ನ ಪ್ರಕಾರಗಳಿವೆ. ಇದು ಒಂದು ರೀತಿಯಲ್ಲಿ ಚಾತುರ್ವರ್ಣ್ಯದ ವಿಸ್ತರಣೆ ಎನ್ನಬಹುದು. ಈ ಎಲ್ಲ ಕಾರ್ಡ್‌ಗಳನ್ನೂ ವಿಭಿನ್ನ ರೀತಿಯಲ್ಲಿ ಕಲರ್ ಕೋಡಿಂಗ್ ಮಾಡಲಾಗಿದೆ. ಯಾರು ಎಷ್ಟು ಹಕ್ಕುಗಳಿಗೆ ಅರ್ಹರು? ಯಾರು ಯಾವ ಸವಲತ್ತುಗಳಿಗೆ ಅರ್ಹರು? ಯಾರು ಎಲ್ಲಿಗೆ ಪ್ರಯಾಣಿಸಬಹುದು? ಮತ್ತು ಅಂತಿಮವಾಗಿ, ಯಾರು ಎಷ್ಟು ಘನತೆ ಮತ್ತು ಗೌರವಕ್ಕೆ ಅರ್ಹರು ಎಂಬುದೆಲ್ಲಾ ಅವರವರ ಗುರುತು ಚೀಟಿಯ ಬಣ್ಣವನ್ನು ಅವಲಂಬಿಸಿರುತ್ತದೆ. ತಾನು ಜನಾಂಗವಾದಿ ಎಂಬುದನ್ನು ಒಪ್ಪಲೊಲ್ಲದ ಇಸ್ರೇಲ್ ಸರಕಾರ ತನ್ನ ಜನಾಂಗವಾದದ ಅನುಷ್ಠಾನಕ್ಕಾಗಿ ಐಡಿ ಪದ್ಧತಿಯನ್ನು ಯಾವ ರೀತಿ ಬಳಸಿಕೊಳ್ಳುತ್ತಾ ಬಂದಿದೆ ಎಂಬುದು ಒಂದು ಅಧ್ಯಯನಾರ್ಹ, ಸ್ವಾರಸ್ಯಕರ ವಿಷಯವಾಗಿದೆ.

 ಈ ಐಡಿ ಪದ್ಧತಿ ಆರಂಭವಾದದ್ದು 1967ರ ಭಯಾನಕ ಯುದ್ಧದ ಬಳಿಕ. ಯುದ್ಧದ ವೇಳೆ ತಾನು ವಶಪಡಿಸಿಕೊಂಡ ಎಲ್ಲ ಅರಬ್ ಪ್ರದೇಶಗಳನ್ನು ಅಂದರೆ ಈಜಿಪ್ಟ್ ಕೈಯಿಂದ ಕಿತ್ತುಕೊಂಡ ಗಾಝಾ ಪಟ್ಟಿ ಮತ್ತು ಜೋರ್ಡನ್ ಕೈಯಿಂದ ಕಿತ್ತುಕೊಂಡ ಪಶ್ಚಿಮ ದಂಡೆಯನ್ನು ಇಸ್ರೇಲ್ ಸರಕಾರವು ನಿರ್ಬಂಧಿತ ಪ್ರದೇಶಗಳೆಂದು ಘೋಷಿಸಿತು. ಅಲ್ಲಿಯ ಫೆಲೆಸ್ತೀನೀ ನಿವಾಸಿಗಳು, ಅಲ್ಲಿಂದ ಹೊರಹೋಗಲು ಅಥವಾ ಹೊರಹೋದರೆ ಮರಳಿ ಅಲ್ಲಿಗೆ ಬರಲು ಸರಕಾರದಿಂದ ವಿಶೇಷ ಐಡಿ ಕಾರ್ಡ್‌ಗಳನ್ನು ಪಡೆದಿರಬೇಕು ಎಂಬ ನಿಯಮವನ್ನು ಜಾರಿಗೊಳಿಸಿತು. ಆದರೆ ಜನರು ಐಡಿ ಕಾರ್ಡ್‌ಗಳಿಗಾಗಿ ಅರ್ಜಿ ಸಲ್ಲಿಸಲಾರಂಭಿಸಿದಾಗ ಸರಕಾರವು ಅವರಿಗೆ ಅದನ್ನು ನೀಡುವ ಬದಲು ಬೇರೆಯೇ ಒಂದು ನಿರ್ಣಾಯಕ ಕಾರ್ಯಾಚರಣೆಯನ್ನು ಆರಂಭಿಸಿತು. ಅಂದರೆ ಅದೇ ವರ್ಷ ಸೆಪ್ಟಂಬರ್ ತಿಂಗಳಲ್ಲಿ ಇಸ್ರೇಲ್ ಸರಕಾರವು, ತಾನು ಆಕ್ರಮಿಸಿಕೊಂಡ ಅರಬ್ ಪ್ರದೇಶಗಳಲ್ಲಿ ಆತುರಾತುರವಾಗಿ ಒಂದು ಜನಗಣತಿ ನಡೆಸಿತು. ಜನಗಣತಿಯ ದಾಖಲೆಯಲ್ಲಿ ಹೆಸರು ನಮೂದಿಸಲಾದವರಿಗೆ ಮಾತ್ರ ಐಡಿ ಕಾರ್ಡ್‌ಗಳನ್ನು ನೀಡಲಾಗುವುದು ಎಂದು ಘೋಷಿಸಿತು.

ಅದು ಈ ರೀತಿ, ಯುದ್ಧದ ಕಾವು ಆರುವ ಮುನ್ನವೇ ಜನಗಣತಿ ನಡೆಸಲು ಅಷ್ಟೊಂದು ಆತುರ ಪಟ್ಟಿದ್ದೇಕೆ ಎಂಬುದು ಆಗ ಹೆಚ್ಚಿ ನವರಿಗೆ ಅರ್ಥವಾಗಿರಲಿಲ್ಲ. ನಿಜವಾಗಿ ಆ ಜನಗಣತಿಯು ಸರಕಾರದ ಒಂದು ದೂರಗಾಮಿ ಸಂಚಿನ ಭಾಗವಾಗಿತ್ತು. ಯುದ್ಧಕ್ಕೆ ಮುಂಚೆ ಪ್ರಸ್ತುತ ಆಕ್ರಮಿತ ಪ್ರದೇಶಗಳ ಅರಬ್ ನಿವಾಸಿಗಳ ಒಟ್ಟು ಜನಸಂಖ್ಯೆ ಸುಮಾರು11.50 ಲಕ್ಷದಷ್ಟಿತ್ತು. ಅವರ ಪೈಕಿ ಸುಮಾರು 3 ಲಕ್ಷ ಜನ ತಮ್ಮ ಜೀವ ಉಳಿಸಿಕೊಳ್ಳಲು ಮತ್ತು ಯುದ್ಧದ ನಾಶನಷ್ಟಗಳಿಂದ ತಪ್ಪಿಸಿಕೊಳ್ಳಲು ಆ ಪ್ರದೇಶಗಳಿಂದ, ಅಕ್ಕಪಕ್ಕದ ಬೇರೆ ಪ್ರದೇಶಗಳಿಗೆ ವಲಸೆ ಹೋಗಿದ್ದರು. ಪ್ರಸ್ತುತ 3 ಲಕ್ಷ ಜನರು ಮರಳಿ ಬರುವ ಮುನ್ನವೇ ತನ್ನ ಜನಗಣತಿ ಶಾಸ್ತ್ರವನ್ನು ಮುಗಿಸಿಕೊಂಡ ಸರಕಾರವು ಉಪಸ್ಥಿತ 9.55 ಲಕ್ಷ ಜನರ ಹೆಸರುಗಳನ್ನು ಮಾತ್ರ ಜನಗಣತಿಯಲ್ಲಿ ದಾಖಲಿಸಿಕೊಂಡಿತು. ಕೇವಲ ತಾತ್ಕಾಲಿಕವಾಗಿ ವಲಸೆ ಹೋಗಿದ್ದ ಆ ಪ್ರದೇಶಗಳ ಪರಂಪರಾಗತ ನಿವಾಸಿಗಳು ಮರಳಿ ಬಂದಾಗ ಅವರಿಗೆ ಜನಗಣತಿಯ ದಾಖಲೆಯಲ್ಲಿ ತಮ್ಮ ಹೆಸರುಗಳನ್ನು ಸೇರಿಸಲು ಸರಕಾರ ಏನಾದರೂ ಏರ್ಪಾಟು ಮಾಡುವುದೆಂದು ಜನರು ನಿರೀಕ್ಷಿಸಿದ್ದರು. ಆದರೆ 53 ವರ್ಷಗಳ ಬಳಿಕ ಇಂದು ಕೂಡಾ ಆ ನಿರೀಕ್ಷೆ ಈಡೇರಿಲ್ಲ.

ಇಸ್ರೇಲ್ ಸರಕಾರದ ಔದಾರ್ಯವೆಲ್ಲಾ ಯುರೋಪಿನಿಂದ ಬಂದ ಶಾಶ್ವತ ಯಹೂದಿ ವಲಸಿಗರಿಗೆ ಮೀಸಲಾಗಿತ್ತು. ಸ್ಥಳೀಯ ತಾತ್ಕಾಲಿಕ ಅರಬ್ ವಲಸಿಗರು ಅದರ ದೃಷ್ಟಿಯಲ್ಲಿ ಕಿಂಚಿತ್ ಮಾನವೀಯ ರಿಯಾಯ್ತಿಗೂ ಅರ್ಹರಾಗಿರಲಿಲ್ಲ. ಪ್ರಸ್ತುತ ಮೂರು ಲಕ್ಷ ಮಂದಿಗಾಗಲಿ ಅವರ ಸಂತಾನಗಳಿಗಾಗಲಿ ಜನಗಣತಿಯ ದಾಖಲೆಯಲ್ಲಿ ಜಾಗ ಸಿಕ್ಕಿಲ್ಲ ಮತ್ತು ಆ ಕಾರಣಕ್ಕಾಗಿ ಐಡಿ ಕೂಡಾ ಸಿಕ್ಕಿಲ್ಲ ! ಅವರು ಮತ್ತವರ ಸಂತಾನಗಳು ತಮ್ಮದೇ ನಾಡಿನಲ್ಲಿ ಶಾಶ್ವತ ನಿರಾಶ್ರಿತರು ಮತ್ತು ನಿರ್ಗತಿಕರಾಗಿ ಬಿಟ್ಟರು.

 ಐಡಿ ಪಡೆದವರ ಪಾಡೇನು?

ಸ್ಥಳೀಯ ಪೌರಾಡಳಿತದ ಸಹಭಾಗಿತ್ವದೊಂದಿಗೆ ಮಿಲಿಟರಿ ಕಚೇರಿಗಳ ಮೂಲಕ ಒದಗಿಸಲಾಗುತ್ತಿದ್ದ ಈ ಕಾರ್ಡ್ ವ್ಯವಸ್ಥೆಯಲ್ಲಿ 1981ರಲ್ಲಿ, ಕೆಲವು ತಾಂತ್ರಿಕ ಬದಲಾವಣೆಗಳನ್ನು ಮಾಡಲಾಯಿತು. ವಯಸ್ಸು16 ವರ್ಷ ಪೂರ್ತಿಯಾದವರಿಗೆ ಈ ಕಾರ್ಡ್‌ಗಳನ್ನು ನೀಡಲಾಗುತ್ತದೆ.

ಇಸ್ರೇಲ್ ನಾಗರಿಕರಿಗೆ ಕಡು ನೀಲಿ ಬಣ್ಣದ ಐಡಿ ಕಾರ್ಡ್. ಅದು ಮಹಾಭಾಗ್ಯ ಶಾಲಿಗಳ ಕಾರ್ಡ್. ಅತ್ಯಧಿಕ ಹಕ್ಕು, ಅಧಿಕಾರ ಮತ್ತು ಗೌರವ ಈ ವರ್ಗಕ್ಕೆ ಮೀಸಲಾಗಿರುತ್ತದೆ. ಅವರಿಗೆ ಮತದಾನದ ಹಕ್ಕಿರುತ್ತದೆ. ಇಸ್ರೇಲ್ ನ ಯಾವುದೇ ಭಾಗದಲ್ಲಿ ಮತ್ತು ಆಕ್ರಮಿತ ಪಶ್ಚಿಮ ದಂಡೆಯ ಶೇ.80 ಭಾಗಗಳಲ್ಲಿ ಸಂಚರಿಸುವ ಅಧಿಕಾರವಿರುತ್ತದೆ. ಪೂರ್ವ ಜೆರುಸಲೇಮ್‌ನ ಫೆಲೆಸ್ತೀನಿ ನಾಗರಿಕರಿಗೆ ಲಘು ನೀಲಿ ಬಣ್ಣದ ಕಾರ್ಡ್. ಅವರಿಗೆ ಮತದಾನದ ಹಕ್ಕಿಲ್ಲ. ಇಸ್ರೇಲ್‌ನ ಹೆಚ್ಚಿನ ಭಾಗಗಳಲ್ಲಿ ಅವರು ಸಂಚರಿಸಬಹುದು. ಆದರೆ ಅವರು ತಮ್ಮ ಜೆರುಸಲೇಮ್ ಪ್ರದೇಶದಿಂದ ಹೊರಗೆ ಹೋದರೆ ಅವರ ಕಾರ್ಡ್ ರದ್ದಾಗಿ ಬಿಡುವ ಎಲ್ಲ ಸಾಧ್ಯತೆಗಳಿರುತ್ತವೆ.

ಪಶ್ಚಿಮ ದಂಡೆಯ ಫೆಲೆಸ್ತೀನಿಗಳಿಗೆ ಲಘು ಹಸಿರು ಬಣ್ಣದ ಕಾರ್ಡ್. ಅವರಿಗೂ ಮತದಾನದ ಹಕ್ಕಿಲ್ಲ. ಅವರು ಹೆಚ್ಚೆಂದರೆ ಪಶ್ಚಿಮದಂಡೆಯ ಸುಮಾರು ಶೇ.40 ಭಾಗದಲ್ಲಿ ಸಂಚರಿಸಬಹುದು. ಅಲ್ಲಿಂದ ಹೊರಹೋದರೆ ಅವರು ಹಲವು ಬಗೆಯ ಕಠಿಣ ನಿರ್ಬಂಧಗಳಿಗೆ ತುತ್ತಾಗುತ್ತಾರೆ. ಆರಂಭದಲ್ಲಿ ಗಾಝಾ ಪಟ್ಟಿಯ ನಿವಾಸಿ ಫೆಲೆಸ್ತೀನಿಗಳಿಗೂ ಇದೇ ಕಾರ್ಡ್ ಅನ್ನು ನೀಡಲಾಗುತ್ತಿತ್ತು. 2007ರ ಬಳಿಕ ಅವರಿಗೆ ಲಘು ಹಸಿರು ಬಣ್ಣದ ಕಾರ್ಡ್ ಗಳನ್ನು ನೀಡಲಾಯಿತು. ಅವರಿಗೆ ಮತದಾನದ ಹಕ್ಕಿಲ್ಲ. ಅವರಲ್ಲಿ ಯಾರಿಗೂ ತಾತ್ಕಾಲಿಕವಾಗಿ ಕೂಡಾ ಗಾಝಾದ ಹೊರಗೆ ವಾಸಿಸಲು ಅನುಮತಿ ಇಲ್ಲ.

ಇಷ್ಟಲ್ಲದೆ ಅವರ್ಣರ ಒಂದು ಬೃಹತ್ ವರ್ಗವೂ ಇದೆ. ಅವರೇ ನಿರಾಶ್ರಿತ ಮತ್ತು ನಿರ್ವಸಿತ ಫೆಲೆಸ್ತೀನಿಯರು. ಅವರಿಗೆ ಯಾವ ಬಣ್ಣದ ಕಾರ್ಡ್ ಕೂಡಾ ಇಲ್ಲ. ಆದ್ದರಿಂದಲೇ ಇಸ್ರೇಲ್‌ನಲ್ಲಿ ಅವರಿಗೆ ಯಾವ ಹಕ್ಕು, ಅಧಿಕಾರಗಳೂ ಇಲ್ಲ. ಮಾತ್ರವಲ್ಲ ಇಸ್ರೇಲ್ ಅಥವಾ ಆಕ್ರಮಿತ ಪ್ರದೇಶಗಳಿಗೆ ಮರಳಿ ಹೋಗುವ ಅವಕಾಶವೂ ಇಲ್ಲ. ಅವರು ಯಾವುದಾದರೂ ಸಣ್ಣ ಕೊಳಚೆ ಪ್ರದೇಶದಲ್ಲಿರುವ ಸೀಮಿತ ಸಂಖ್ಯೆಯಲ್ಲಿ ವಾಸಿಸುತ್ತಿರುವ ಪುಟಾಣಿ ಸಮುದಾಯವೇನಲ್ಲ. ಇಸ್ರೇಲ್‌ನನೆರೆಯ ಅರಬ್ ದೇಶಗಳಲ್ಲಿ ಮತ್ತು ಜಗತ್ತಿನ ವಿವಿಧ ಭಾಗಗಳಲ್ಲಿ ಚದುರಿಕೊಂಡಿರುವ ಈ ಅವರ್ಣರ ಸಂಖ್ಯೆ ಸುಮಾರು 60 ಲಕ್ಷದಷ್ಟಿದೆ.

ರಸ್ತೆಯಲ್ಲಿ ನಡೆದಾಡುವ ಹಕ್ಕಿನಿಂದ ಆರಂಭಿಸಿ ಶಾಲೆಗೆ ಸೇರ್ಪಡೆ, ಆಸ್ಪತ್ರೆಗೆ ದಾಖಲಾತಿ, ನೌಕರಿ, ಬ್ಯಾಂಕ್ ಖಾತೆ, ಕೌಟುಂಬಿಕ ಸಮಾರಂಭಗಳಲ್ಲಿ ಹಾಜರಾತಿ ಹೀಗೆ ಎಲ್ಲದರಲ್ಲೂ ಈ ಕಾರ್ಡ್‌ನ ಪಾತ್ರ ನಿರ್ಣಾಯಕವಾಗಿರುತ್ತದೆ. 1993 ರಲ್ಲಿ ಆಕ್ರಮಿತ ಪ್ರದೇಶಗಳ ಸ್ಥಳೀಯ ಆಡಳಿತವು ಫೆಲೆಸ್ತೀನ್ ಪ್ರಾಧಿಕಾರದ ಸರಕಾರಕ್ಕೆ ವರ್ಗವಾದ ಬಳಿಕವೂ ಇಲ್ಲಿ ಪ್ರಸ್ತುತ ಕಾರ್ಡ್‌ಗಳನ್ನು ಒದಗಿಸುವ ಅಧಿಕಾರ ಮಾತ್ರ ಇಸ್ರೇಲಿ ಮಿಲಿಟರಿ ಅಧಿಕಾರಿಗಳ ಕೈಯಲ್ಲೇ ಉಳಿದಿದೆ. ಪಶ್ಚಿಮ ದಂಡೆ ಮತ್ತು ಗಾಝಾ ಪಟ್ಟಿಯಲ್ಲಿ ಕಾರ್ಡ್ ಒದಗಿಸುವ ವಿಷಯದಲ್ಲಿ ಫೆಲೆಸ್ತೀನ್ ಆಡಳಿತಕ್ಕಿರುವುದು ಕೇವಲ ಗುಮಾಸ್ತರ ಪಾತ್ರ ಮಾತ್ರ. ಯಾರು ಯಾವ ಭಾಗದ ನಿವಾಸಿ ಮತ್ತು ಯಾರು ಯಾವ ಕಾರ್ಡ್‌ಗೆಅರ್ಹರು ಎಂಬುದನ್ನೆಲ್ಲಾ ಇಸ್ರೇಲ್ ಸರಕಾರವೇ ನಿರ್ಧರಿಸುತ್ತದೆ. ಇಸ್ರೇಲ್ ಸರಕಾರವು ಜನಗಣತಿ ಪಟ್ಟಿಯಿಂದ ಹೊರಗಿಟ್ಟವರಿಗೆ ಕಾರ್ಡ್ ಒದಗಿಸುವ ಹಕ್ಕು ಫೆಲೆಸ್ತೀನ್ ಸರಕಾರಕ್ಕೂ ಇಲ್ಲ. ಈರೀತಿ ಇಸ್ರೇಲ್ ಸರಕಾರವು ಜನಗಣತಿ ದಾಖಲೆಯ ಮೂಲಕ ಗುರುತು ಚೀಟಿಗಳನ್ನು ಮತ್ತು ಗುರುತು ಚೀಟಿಗಳ ಮೂಲಕ ನಾಗರಿಕರ ಸಂಚಾರ ಹಾಗೂ ಚಲನವಲನವನ್ನು ನಿಯಂತ್ರಿಸುತ್ತದೆ.

ಆಕ್ರಮಿತ ಪಶ್ಚಿಮ ದಂಡೆಯೊಳಗೆ ಅಲ್ಲಲ್ಲಿ ಚೆಕ್ ಪೋಸ್ಟ್‌ಗಳಿದ್ದು, ಯಾರಿಗೂ ಕಾರ್ಡ್ ಇಲ್ಲದೆ ಆ ಚೆಕ್‌ಪೋಸ್ಟ್‌ಗಳನ್ನು ದಾಟಿ ಹೋಗಲಿಕ್ಕಾಗುವುದಿಲ್ಲ. ಈ ರೀತಿ ಸ್ವತಃ ತಮ್ಮದೇ ಸೀಮಿತ ಪ್ರದೇಶದೊಳಗೂ ಫೆಲೆಸ್ತೀನಿಗಳ ಚಲನೆ ತೀವ್ರ ನಿರ್ಬಂಧಕ್ಕೆ ಒಳಪಟ್ಟಿರುತ್ತದೆ. ದಕ್ಷಿಣ ಆಫ್ರಿಕಾದ ಬಿಳಿಯ ಜನಾಂಗವಾದಿ ಸರಕಾರವು ಅಲ್ಲಿನ ಕರಿಯರನ್ನು ಮತ್ತು ಮಿಶ್ರ ವರ್ಣೀಯರನ್ನು ನಿಯಂತ್ರಿಸಲಿಕ್ಕಾಗಿ ಇದೇ ವಿಧಾನವನ್ನು ಬಳಸಿತ್ತು. ಇಸ್ರೇಲ್ ಮತ್ತದರ ಆಕ್ರಮಿತ ಪ್ರದೇಶಗಳ ಅರಬ್ ನಾಗರಿಕರು ಕಳೆದ ಐದು ದಶಕಗಳಿಂದ ಈ ಬಗೆಯ ನಿರ್ಬಂಧದಡಿಯಲ್ಲಿ ನರಳುತ್ತಿದ್ದಾರೆ. ನಿರ್ಬಂಧಗಳ ಸ್ವರೂಪ ದಿನೇದಿನೇ ಹೆಚ್ಚೆಚ್ಚು ಕ್ಲಿಷ್ಟವಾಗುತ್ತಾ ಸಾಗಿದೆ. ಫೆಲೆಸ್ತೀನ್‌ನ ನಾಗರಿಕರು ಪಶ್ಚಿಮ ದಂಡೆಯಿಂದ ಗಾಝಾ ಪಟ್ಟಿಗೆ ಅಥವಾ ಗಾಝಾ ಪಟ್ಟಿಯಿಂದ ಪಶ್ಚಿಮ ದಂಡೆಗೆ ಪ್ರಯಾಣಿಸ ಬೇಕಿದ್ದರೆ ಇಸ್ರೇಲ್ ಸರಕಾರದಿಂದ ವಿಶೇಷ ಅನುಮತಿ ಪತ್ರವೊಂದನ್ನು ಪಡೆಯಬೇಕಾಗುತ್ತದೆ. ಪ್ರಸ್ತುತ ಎರಡೂ ಪ್ರದೇಶಗಳನ್ನು ಕಟ್ಟುನಿಟ್ಟಿನ ನಿಯಂತ್ರಣದಲ್ಲಿಟ್ಟುಕೊಳ್ಳಲಿಕ್ಕಾಗಿ ಇಸ್ರೇಲ್ ಸರಕಾರವು ಅವುಗಳ ನಿಯಂತ್ರಣವನ್ನು ತನ್ನದೇ ಮಿಲಿಟರಿಯ ಎರಡು ಪ್ರತ್ಯೇಕ ಕಮಾಂಡರ್ ಗಳಿಗೆ ವಹಿಸಿದೆ.

1967 ಮತ್ತು 1994ರ ಮಧ್ಯೆ ಇಸ್ರೇಲ್ ಸರಕಾರವು ವಿವಿಧ ಕುಂಟು ನೆಪಗಳನ್ನು ಮುಂದಿಟ್ಟು 1,30,000ಕ್ಕೂ ಹೆಚ್ಚು ನೋಂದಾಯಿತ ಫೆಲೆಸ್ತೀನಿ ನಿವಾಸಿಗಳ ಐಡಿ ಕಾರ್ಡ್‌ಗಳನ್ನು ಶಾಶ್ವತವಾಗಿ ರದ್ದುಗೊಳಿಸಿದೆ. ವರ್ಷ 2000 ದಿಂದಲಂತೂ ಇಸ್ರೇಲ್ ಸರಕಾರವು ಸ್ಥಳೀಯ ಅರಬ್ ನಿವಾಸಿಗಳಿಗೆ ಮನೆ ಬದಲಾವಣೆ, ಪ್ರಾಂತ ಬದಲಾವಣೆ, ವಿಳಾಸ ಬದಲಾವಣೆ ಇತ್ಯಾದಿ ಯಾವುದೇ ಆಧಾರದಲ್ಲಿ ಹೊಸ ಅಥವಾ ಪರಿಷ್ಕೃತ ಕಾರ್ಡ್‌ಗಳನ್ನು ಒದಗಿಸುವ ಸವಲತ್ತನ್ನೂ ನಿಲ್ಲಿಸಿಬಿಟ್ಟಿದೆ. ಇದರಿಂದಾಗಿ ಒಬ್ಬ ವ್ಯಕ್ತಿಗೆ ಎಷ್ಟು ತುರ್ತು ಅಗತ್ಯವಿದ್ದರೂ ಅವನು ತನ್ನ ಮನೆ ಬದಲಾಯಿಸಲು ಸಾಧ್ಯವಾಗುವುದಿಲ್ಲ. ವಿಶೇಷವಾಗಿ ಶಿಕ್ಷಣಕ್ಕಾಗಿ ಗಾಝಾ ಪಟ್ಟಿ ಮತ್ತು ಪಶ್ಚಿಮ ದಂಡೆಯ ನಡುವೆ ಪ್ರಯಾಣಿಸಬಯಸುವ ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣವು ಈ ನಿರ್ಬಂಧಗಳಿಂದಾಗಿ ಮೊಟಕುಗೊಂಡಿದೆ. ಒಟ್ಟಿನಲ್ಲಿ ಫೆಲೆಸ್ತೀನ್‌ನ ಮೂಲ ನಿವಾಸಿಗಳು ತಮ್ಮದೇ ನಾಡಿನಲ್ಲಿ ಕಠಿಣ ಸೆರೆವಾಸದ ಸ್ಥಿತಿಯಲ್ಲಿದ್ದಾರೆ.

 2005 ರಲ್ಲಿ ಇಸ್ರೇಲಿನ ಯಹೂದಿಗಳ ಖಾಸಗಿ ಮಾನವಹಕ್ಕು ಸಂಸ್ಥೆಯೊಂದು (B’Tselem) ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಂತೆ ಪಶ್ಚಿಮ ದಂಡೆ ಅಥವಾ ಗಾಝಾದಲ್ಲಿರುವ ನೋಂದಾಯಿತ ಫೆಲೆಸ್ತೀನ್ ನಾಗರಿಕರ ಪೈಕಿ 6,40,000 ಮಂದಿಯ (ಶೇ.17.2) ತಂದೆ, ತಾಯಿ, ಮಕ್ಕಳು, ಪತಿ, ಪತ್ನಿ ಅಥವಾ ಸಹೋದರ ಸಹೋದರಿಯರ ಪೈಕಿ ಯಾರಾದರೊಬ್ಬರನ್ನು ಸ್ಥಳೀಯ ನಿವಾಸಿ ಎಂದು ನೋಂದಾಯಿಸಲು ಮಿಲಿಟರಿ ಮತ್ತು ಸರಕಾರಿ ಅಧಿಕಾರಿಗಳು ನಿರಾಕರಿಸಿದ್ದಾರೆ. ಹೆಚ್ಚಿ ನ ಪ್ರಕರಣಗಳಲ್ಲಿ ಅಧಿಕಾರಿಗಳು ತಮ್ಮ ನಿರಾಕರಣೆಗೆ ಯಾವುದೇ ಕಾರಣವನ್ನೂ ತಿಳಿಸಿಲ್ಲ. ಈ ರೀತಿ ವಿರಹವೆಂಬುದು ಅಷ್ಟೊಂದು ದೊಡ್ಡ ಸಂಖ್ಯೆಯ ಫೆಲೆಸ್ತೀನಿಗಳ ಬದುಕಿನ ನಿತ್ಯಭಾಗ್ಯವಾಗಿ ಬಿಟ್ಟಿದೆ.

ಉಸಿರು ಗಟ್ಟಿಸುವ ಚೆಕ್ ಪಾಯಿಂಟ್‌ಗಳ ಹಾವಳಿ

ಪಶ್ಚಿಮ ದಂಡೆಯಲ್ಲಿ ಇಸ್ರೇಲ್‌ನಿಂದ ವರ್ಕ್ ಪರ್ಮಿಟ್ ಪಡೆದಿರುವ 70,000ಕ್ಕೂ ಹೆಚ್ಚಿನ ಕಾರ್ಮಿಕರಿದ್ದಾರೆ. ಅವರು ತಮ್ಮ ಉದ್ಯೋಗಕ್ಕಾಗಿ ನಿತ್ಯ ಪ್ರಯಾಣಿಸಬೇಕಾಗುತ್ತದೆ. ಆದರೆ ಅಲ್ಲಿ ಪ್ರಯಾಣಿಸುವುದೆಂದರೆ ಹಿಮಾಲಯ ಹತ್ತುವುದಕ್ಕಿಂತಲೂ ಹೆಚ್ಚು ಪ್ರಯಾಸದ ಸಾಹಸವಾಗಿರುತ್ತದೆ. ಕೇವಲ ಪಶ್ಚಿಮ ದಂಡೆಯೊಂದರಲ್ಲೇ ಇಸ್ರೇಲ್ ಸರಕಾರ 140 ಮಿಲಿಟರಿ ಚೆಕ್ ಪಾಯಿಂಟ್‌ಗಳ ಸಹಿತ 700 ಕ್ಕೂ ಹೆಚ್ಚು ರಸ್ತೆ ತಡೆಗಳನ್ನು ನಿರ್ಮಿಸಿದೆ. ಯಾವುದೇ ಕಾರಣಕ್ಕಾಗಿ ಒಂದೆಡೆಯಿಂದ ಇನ್ನೊಂಡೆಗೆ ತಲುಪ ಬಯಸುವವರು ರಸ್ತೆತಡೆಗಳನ್ನು ದಾಟುತ್ತಾ ತೀರಾ ನಿಧಾನಗತಿಯಲ್ಲಿ ಪ್ರಯಾಣಿಸಬೇಕು. ಮಾತ್ರವಲ್ಲ, ಚೆಕ್ ಪಾಯಿಂಟ್‌ಗಳಲ್ಲಿ ಪದೇ ಪದೇ ತಪಾಸಣೆಗೆ ಒಳಗಾಗಬೇಕು.

 ಇದರ ಪರಿಣಾಮವಾಗಿ ತುರ್ತು ಚಿಕಿತ್ಸೆಗೆಂದು ಹೋಗುವ ಎಷ್ಟೋ ಮಂದಿ ಚೆಕ್ ಪಾಯಿಂಟ್‌ಗಳಲ್ಲಿ ಕೊನೆಯುಸಿರೆಳೆಯುತ್ತಾರೆ. ತುರ್ತಾಗಿ ಹೆರಿಗೆಗೆಂದು ಆಸ್ಪತ್ರೆಗೆ ಧಾವಿಸುತ್ತಿರುವ ಎಷ್ಟೋ ಮಹಿಳೆಯರು ಒಂದೋ ಚೆಕ್ ಪಾಯಿಂಟ್‌ಗಳಲ್ಲೇ ಹೆರುತ್ತಾರೆ ಅಥವಾ ಹೆರುವ ಶ್ರಮದಲ್ಲಿ ರಕ್ತಸ್ರಾವವಾಗಿ, ವೈದ್ಯಕೀಯ ನೆರವು ಸಿಗದೇ ರಸ್ತೆಪಕ್ಕದಲ್ಲೇ ಸಾಯುತ್ತಾರೆ.

ಗಾಝಾದಲ್ಲಿ ಬದುಕುವುದೆಂದರೆ....?

  2017ರಲ್ಲಿ ವಿಶ್ವ ಸಂಸ್ಥೆ ಪ್ರಕಟಿಸಿದ ಒಂದು ವರದಿಯ ಪ್ರಕಾರ ಇಸ್ರೇಲ್ ಆಕ್ರಮಿತ ಗಾಝಾದಲ್ಲಿ ಪರಿಸ್ಥಿತಿ ದಿನಗಳೆದಂತೆ ಬಿಗಡಾಯಿಸುತ್ತಿದ್ದು, ಮಾನವ ಬದುಕಿಗೆ ಅಯೋಗ್ಯವಾಗಿ ಬಿಟ್ಟಿದೆ. 2007ರಲ್ಲಿ ಗಾಝಾದ ಮೇಲೆ ಇಸ್ರೇಲ್ ಸರಕಾರವು ದಿಗ್ಬಂಧನ ಹೇರಿದ ಬಳಿಕ ಅಲ್ಲಿನ ಕೈಗಾರಿಕೆ ಸಂಪೂರ್ಣ ಕುಸಿದು ಬಿದ್ದಿದೆ. ನಿರುದ್ಯೋಗದ ಪ್ರಮಾಣವೂ ಶೇ.42 ರಷ್ಟಿದೆ. ಅಲ್ಲಿ ಲಭ್ಯವಿರುವ ಹೆಚ್ಚಿನ ನೀರು ಕುಡಿಯಲು ಯೋಗ್ಯವಾಗಿಲ್ಲ. ದಿನಕ್ಕೆ ಹೆಚ್ಚೆಂದರೆ ಮೂರರಿಂದ ನಾಲ್ಕು ಗಂಟೆ ಮಾತ್ರ ವಿದ್ಯುತ್ ಲಭ್ಯವಿರುತ್ತದೆ. ಸ್ಥಳೀಯರು ಮತ್ತು ಸರಕಾರದ ನಡುವೆ ಘರ್ಷಣೆ ಏರ್ಪಟ್ಟರಂತೂ ವಿದ್ಯುತ್ ಸಂಪೂರ್ಣ ಇಲ್ಲವಾಗಿ ಎಲ್ಲಡೆ ಕತ್ತಲು ಕವಿದು ಬಿಡುತ್ತದೆ.

 ಇಸ್ರೇಲ್ ಕಡೆಯಿಂದ ಪದೇ ಪದೇ ನಡೆಯುವ ಕ್ರೂರ ಮಿಲಿಟರಿ ಕಾರ್ಯಾಚರಣೆಗಳು ಗಾಝಾದ ಪ್ರಾಥಮಿಕ ಪೌರ ಸವಲತ್ತುಗಳನ್ನು ನಾಶ ಮಾಡಿರುವುದು ಮಾತ್ರವಲ್ಲದೆ ಅಲ್ಲಿನ ಪುಟ್ಟ, ಮುಗ್ಧ ಮಕ್ಕಳ ಮಾನಸಿಕ ಆರೋಗ್ಯದ ಮೇಲೂ ತೀವ್ರ ದುಷ್ಪರಿಣಾಮಗಳನ್ನು ಬೀರಿವೆ. ಗಾಝಾದ ಕಮ್ಮ್ಮುನಿಟಿ ಮೆಂಟಲ್ ಹೆಲ್ತ್ ಸಂಸ್ಥೆಯ ವರದಿ ಪ್ರಕಾರ ಅಲ್ಲಿನ ಶೇ.51 ಮಕ್ಕಳು (PTSD)  ಎಂಬ ಮಾನಸಿಕ ಅಸ್ವಾಸ್ಥದಿಂದ ಬಳಲುತ್ತಿದ್ದಾರೆ.

ವೈದ್ಯಕೀಯ ಜನಾಂಗವಾದ

 ಒಂದು ಸಮಾಜದಲ್ಲಿ ಜನಾಂಗವಾದ ಬಂತೆಂದರೆ ಅಲ್ಲಿ ಮಾನವೀಯತೆ ಸತ್ತು ಮಣ್ಣಾಯಿತು ಎಂದೇ ಅರ್ಥ. ವೃತ್ತಿಪರ ಅಪರಾಧಿಗಳು ಮತ್ತು ದರೋಡೆಕೋರರು ಕೂಡಾ ಹಲವೊಮ್ಮೆ ಮಾನವೀಯ ಅನುಕಂಪ ತೋರುವುದುಂಟು. ವೃದ್ಧರು, ಮಹಿಳೆಯರು ಮತ್ತು ಮಕ್ಕಳ ಮೇಲೆ ದಯೆ ತೋರುವುದುಂಟು. ಆದರೆ ಜನಾಂಗವಾದ ಹಾಗಲ್ಲ. ಇಲ್ಲಿ ಸಂತೃಪ್ತಿ ಮತ್ತು ವಿಜಯದ ಸಂಭ್ರಮ ಸಿಗುವುದೇ ಕ್ರೌರ್ಯ ಮತ್ತು ಅಮಾನುಷತೆ ಮೆರೆಯುವುದರಲ್ಲಿ.

ಇಸ್ರೇಲ್ ಸರಕಾರವು ತನ್ನ ಮಿಲಿಟರಿ ಆಡಳಿತದಲ್ಲಿರುವ ಆಕ್ರಮಿತ ಫೆಲೆಸ್ತೀನ್‌ನ ಪ್ರದೇಶಗಳ ಜನರ ಚಲನೆಯ ಮೇಲೆ ಮಾತ್ರವಲ್ಲ ಅಲ್ಲಿ ಸರಕು - ಸಾಮಾನುಗಳ ಸಾಗಾಟದ ಮೇಲೂ ಅಪಾರ ನಿರ್ಬಂಧಗಳನ್ನು ಹೇರಿದೆ. ಪ್ರಸ್ತುತ ಪ್ರದೇಶದ ಯಾವುದೇ ವಿಮಾನನಿಲ್ದಾಣ ಅಥವಾ ಬಂದರಿನ ಮೇಲೆ ಫೆಲೆಸ್ತೀನ್ ಜನತೆಗಾಗಲಿ ಅವರನ್ನು ಪ್ರತಿನಿಧಿಸುವ ಪ್ರಾಧಿಕಾರಗಳಿಗಾಗಲಿ ಯಾವುದೇ ನಿಯಂತ್ರಣವಿಲ್ಲ. ಆದ್ದರಿಂದ ಅದೆಷ್ಟೋ ಅತ್ಯಾವಶ್ಯಕ ಔಷಧಿಗಳು ಮತ್ತು ವೈದ್ಯಕೀಯ ಸಲಕರಣೆಗಳು ಫೆಲೆಸ್ತೀನಿನ ಆಸ್ಪತ್ರೆಗಳ ಪಾಲಿಗೆ ಅಲಭ್ಯವಾಗಿವೆ. ಲೇಸರ್ ಮೂಲದ ಎಷ್ಟೋ ಯಂತ್ರಗಳ ಸಾಗಣೆಯನ್ನು ಇಸ್ರೇಲ್ ಸರಕಾರವು ಸ್ಪಷ್ಟವಾಗಿ ನಿಷೇಧಿಸಿದೆ.

ಸಂಚಾರದ ಮೇಲಿನ ನಿರ್ಬಂಧಗಳು ಮತ್ತು ದಾಖಲೆಪತ್ರಗಳ ಕುರಿತಾದ ವಿಪರೀತ ಔಪಚಾರಿಕತೆಯು ಇಲ್ಲಿ ಅನೇಕ ದುರಂತಗಳಿಗೆ ಕಾರಣವಾಗಿದೆ. ಉದಾ: ಮಾನವಹಕ್ಕು ಸಂಸ್ಥೆಯೊಂದರ ವರದಿ ಪ್ರಕಾರ 2017ರ ಒಂದೇ ವರ್ಷದಲ್ಲಿ, ಚಿಕಿತ್ಸೆಗಾಗಿ ಪ್ರಯಾಣಿಸಲು ಅನುಮತಿಗಾಗಿ ಅರ್ಜಿ ಸಲ್ಲಿಸಿ, ಅನುಮತಿ ಸಿಗದ ಕಾರಣ ಗಾಝಾದಲ್ಲಿ 46 ಫೆಲೆಸ್ತೀನಿ ಕ್ಯಾನ್ಸರ್ ರೋಗಿಗಳು ಜೀವಕಳೆದುಕೊಂಡಿದ್ದಾರೆ.

ಇಸ್ರೇಲ್‌ನ ಕೋವಿಡ್ ಜನಾಂಗವಾದ

ಇಸ್ರೇಲನ್ನು ಹೊಗಳುವುದನ್ನೇ ವೃತ್ತಿಯಾಗಿಸಿಕೊಂಡಿರುವ ಕೆಲವು ಬಕ್ಕೆಟ್ ವಲಯಗಳು ಇಸ್ರೇಲ್ ಸರಕಾರವು ಕೋವಿಡ್ ನಿಯಂತ್ರಣದ ವಿಷಯದಲ್ಲಿ ಭಾರೀ ದಕ್ಷತೆ ಮೆರೆದಿದೆ ಎಂದು ಅಲ್ಲಲ್ಲಿ ಮಂತ್ರ ಜಪಿಸುವುದು ಕಂಡು ಬಂದಿದೆ. ಆದರೆ ಕೋವಿಡ್ ಲಸಿಕೆಯ ವಿತರಣೆಯ ವೇಳೆ ಇಸ್ರೇಲ್ ತೋರಿದ ಅಕ್ಷಮ್ಯ ಜನಾಂಗವಾದ ಜಗತ್ತಿನ ಗಮನಕ್ಕೆ ಬರುವಷ್ಟು ನಿಚ್ಚಳವಾಗಿತ್ತು.

ಜಾಗತಿಕ ಮಾನ್ಯತೆ ಇರುವ ಖ್ಯಾತ ಮಾನವಹಕ್ಕು ಸಂರಕ್ಷಣಾ ಸಂಘಟನೆ ಹ್ಯೂಮನ್ ರೈಟ್ಸ್ ವಾಚ್ (HRW)ವರದಿ ಪ್ರಕಾರ. ಮಾರ್ಚ್ ತಿಂಗಳ ಹೊತ್ತಿಗೆ ಇಸ್ರೇಲ್‌ನೊಳಗಿನ ಇಸ್ರೇಲಿಗಳು ಕೋವಿಡ್ ಪಿಡುಗಿನಿಂದ ತಾವು ಮುಕ್ತರಾಗುತ್ತಿದ್ದೇವೆಂದು ನೆಮ್ಮದಿಯ ನಿಟ್ಟುಸಿರು ಬಿಡತೊಡಗಿದ್ದರು. ಆದರೆ ಆದೇ ವೇಳೆ, ಇಸ್ರೇಲ್‌ನ ನಿಯಂತ್ರಣದಲ್ಲಿರುವ ಪ್ರದೇಶಗಳ 50 ಲಕ್ಷಕ್ಕೂ ಅಧಿಕ ಫೆಲೆಸ್ತೀನ್ ನಾಗರಿಕರು ಲಸಿಕೆಗಳಿಗಾಗಿ ಪರದಾಡುತ್ತಿದ್ದರು. ಅವರಿಗೆ ಲಸಿಕೆಗಳನ್ನು ಒದಗಿಸುವ ನಿಟ್ಟಿನಲ್ಲಿ ಇಸ್ರೇಲ್ ಸರಕಾರ ಯಾವುದೇ ಆಸಕ್ತಿ ವಹಿಸಲಿಲ್ಲ. ಸರಕಾರದ ಉತ್ಸಾಹವೆಲ್ಲ ಆ ಪ್ರದೇಶಗಳಲ್ಲಿರುವ ಯಹೂದಿ ವಲಸಿಗರಿಗೆ ಲಸಿಕೆ ತಲುಪಿಸುವುದಕ್ಕೆ ಸೀಮಿತವಾಗಿತ್ತು. ಸಾಲದ್ದಕ್ಕೆ ಆ ಪ್ರದೇಶಗಳಲ್ಲಿ ಜನ ಸಂಚಾರ ಮತ್ತು ಸರಕು ಸಾಗಣೆಯ ಮೇಲೆ ತಾನು ಹೇರಿರುವ ಕಠಿಣ ನಿರ್ಬಂಧಗಳನ್ನು ಸಡಿಲಿಸುವುದಕ್ಕೂ ನಿರಾಕರಿಸುವ ಮೂಲಕ ಫೆಲೆಸ್ತೀನ್ ಪ್ರಾಧಿಕಾರದವರು ಕೂಡ ಲಸಿಕೆಗಳನ್ನು ಹೊರಗಿನಿಂದ ತರಿಸಿಕೊಳ್ಳದಂತೆ ಇಸ್ರೇಲ್ ಸರಕಾರ ನೋಡಿಕೊಂಡಿತು.

 ಈ ಹಿನ್ನೆಲೆಯಲ್ಲಿ, ಅಮೆರಿಕದ ಜನಪ್ರಿಯ ಕಾಮಿಡಿ ಶೋ ‘ಸಾಟರ್ಡೆ ನೈಟ್ ಲೈವ್’ ನಲ್ಲಿ ಖ್ಯಾತ ಕಾಮಿಡಿ ಕಲಾವಿದ ಮೈಕೆಲ್ ಚೇ ಹಾರಿಸಿದ ಒಂದು ಚಟಾಕಿ ಬಹಳ ಚರ್ಚಿತವಾಗಿತ್ತು.

ತಾನು ಈಗಾಗಲೇ ತನ್ನ ಅರ್ಧ ಜನಸಂಖ್ಯೆಗೆ ಕೋವಿಡ್ ಲಸಿಕೆ ನೀಡಿ ಆಗಿದೆ ಎಂದು ಇಸ್ರೇಲ್ ಸರಕಾರ ಹೇಳಿಕೊಂಡಿದೆ. ನನಗನಿಸುವಂತೆ ಅದು ಅಲ್ಲಿನ ಯಹೂದಿ ಜನಸಂಖ್ಯೆ ಇರಬಹುದು ಎಂದು ಅವರು ಹೇಳಿದ್ದರು.

ಇದರ ವಿರುದ್ಧ ಬಕ್ಕೆಟ್ ವಲಯಗಳು ತುಂಬಾ ರೇಗಾಡಿದ್ದವು.

(ಮುಂದುವರಿಯುವುದು)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)