varthabharthi


ಕರಾವಳಿ

ಹಿರಿಯ ಸಾಹಿತಿ, ಸಂಶೋಧಕ ಪ್ರೊ. ಬಿ.ಎಂ.ಇಚ್ಲಂಗೋಡು ನಿಧನ

ವಾರ್ತಾ ಭಾರತಿ : 24 May, 2021

ಮಂಗಳೂರು: ನಾಡಿನ ಹಿರಿಯ ಸಾಹಿತಿ, ಬ್ಯಾರಿ ಸಂಶೋಧಕ, ಪತ್ರಕರ್ತ, ನಿವೃತ್ತ ಉಪನ್ಯಾಸಕ ಪ್ರೊ. ಬಿ.ಎಂ. ಇಚ್ಲಂಗೋಡು (84) ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ತಡರಾತ್ರಿ ನಿಧನರಾದರು.

ನಗರದ ಅತ್ತಾವರ ನಂದಿಗುಡ್ಡೆಯ ನಿವಾಸಿಯಾಗಿದ್ದ ಬಿ.ಎಂ. ಇಚ್ಲಂಗೋಡು ಅವರು ಪತ್ನಿ, ನಾಲ್ವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಬ್ಯಾರಿ ಕ್ಷೇತ್ರ ಕಾರ್ಯದಲ್ಲಿ ಆಳವಾದ ಅಧ್ಯಯನ ನಡೆಸಿದ್ದ ಅವರು ಇಳಿ ವಯಸ್ಸಿನಲ್ಲೂ ಯುವಕರನ್ನು ನಾಚಿಸುವಂತೆ ಸಂಶೋಧನೆಯಲ್ಲಿ ನಿರತರಾಗಿದ್ದರು. ಅನೇಕ ಯುವ ಸಂಶೋಧಕರಿಗೆ ಮಾರ್ಗದರ್ಶನ ನೀಡಿದ್ದರು. ಮನೆ ಸಮೀಪವೇ ಕಚೇರಿಯನ್ನು ಹೊಂದಿದ್ದ ಅವರು ಗ್ರಾಹಕರಿಗಾಗುತ್ತಿದ್ದ ಅನ್ಯಾಯದ ವಿರುದ್ಧ ಕಾನೂನು ಹೋರಾಟ ಮಾಡಿ ಗಮನ ಸೆಳೆದಿದ್ದರು. ಅಲ್ಲದೆ ಜನಸಾಮಾನ್ಯರಿಗೆ ಕಾನೂನು ನೆರವು ನೀಡುತ್ತಿದ್ದರು. ಇಳಿವಯಸ್ಸಿನಲ್ಲೂ ಸಾಹಿತ್ಯ, ಅಧ್ಯಯನದಲ್ಲಿ ಉತ್ಸಾಹದಿಂದ ತೊಡಗಿಸಿಕೊಂಡಿದ್ದರು.

ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೈಯಾಡಿಸಿದ್ದರು. ಆಳವಾದ ಅಧ್ಯಯನ, ಕ್ಷೇತ್ರ ಕಾರ್ಯಗಳ ಮೂಲಕ ಮೌಲ್ಯಯುತ ಪ್ರಬಂಧಗಳನ್ನು ಮಂಡಿಸಿದ್ದ ಅವರು ಕತೆ, ಕವನ, ಲೇಖನ, ಹಾಸ್ಯಲೇಖನಗಳನ್ನೂ ಬರೆದು ಗಮನ ಸೆಳೆದಿದ್ದರು. ಸದ್ದಿಲ್ಲದೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದರು.

ಬ್ಯಾರಿ ಭಾಷೆ, ಸಾಹಿತ್ಯ, ಸಂಸ್ಕೃತಿಯ ಕುರಿತಾಗಿ ಅವರು ನಡೆಸಿದ ಅಧ್ಯಯನಕ್ಕೆ ಮನ್ನಣೆ ಎಂಬಂತೆ ಉಡುಪಿಯಲ್ಲಿ 2001ರಲ್ಲಿ ನಡೆದ ಮೂರನೇ ಬ್ಯಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಲಭಿಸಿತ್ತು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಪ್ರಥಮ ಅವಧಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಹೊರತಂದ ಬ್ಯಾರಿ, ಕನ್ನಡ, ಇಂಗ್ಲಿಷ್ ಡಿಕ್ಷನರಿಯ ಪ್ರಧಾನ ಸಂಪಾದಕರಾಗಿ ಕೆಲಸ ಮಾಡಿದ್ದರು.

ಕಾಸರಗೋಡು ಜಿಲ್ಲೆಯ ಇಚ್ಲಂಗೋಡು ಎಂಬಲ್ಲಿ ಅಬ್ದುಲ್ಲಾ ಹಾಜಿ ಮತ್ತು ಕುಂಞಲಿಮಾ ದಂಪತಿಯ ಪುತ್ರನಾಗಿ ಮಾ.2, 1937ರಂದು ಜನಿಸಿದ್ದ ಬಿ.ಮುಹಮ್ಮದ್ (ಬಿಎಂ ಇಚ್ಲಂಗೋಡು) ದ.ಕ.ಜಿಲ್ಲೆಯ ಮೂಡುಬಿದಿರೆಯಲ್ಲಿ ಇತಿಹಾಸ ಉಪನ್ಯಾಸಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದರು. ನಿವೃತ್ತಿಯ ಬಳಿಕ ಮಂಗಳೂರಿನ ನಂದಿಗುಡ್ಡದಲ್ಲಿ ನೆಲೆಸಿದ್ದರು.

ಇಚ್ಲಂಗೋಡಿನಲ್ಲಿ 10ನೆ ತರಗತಿ ಕಲಿತ ಬಳಿಕ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ, ಉಡುಪಿಯ ಮಹಾತ್ಮಾ ಗಾಂಧಿ ವೆುಮೋರಿಯಲ್ ಕಾಲೇಜಿನಲ್ಲಿ ಬಿಎ, ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂಎ, ಉಡುಪಿಯ ಶಾರದಾ ವಿಲಾಸ ಲಾ ಕಾಲೇಜಿನಲ್ಲಿ ಬಿಎಲ್, ಮಣಿಪಾಲದ ಫೆಲೋ ಆಫ್ ಅಕಾಡಮಿ ಆಫ್ ಜರನಲ್ ಎಜುಕೇಶನ್‌ನಲ್ಲಿ ಎಫ್‌ಎಜಿಇ, ಮಂಗಳೂರು ವಿವಿಯಿಂದ ಹಾರ್ಟಿಕಲ್ಚರ್ ತರಬೇತಿ, ಶಿವಮೊಗ್ಗದಲ್ಲಿ ರೇಕಿ ಹೀಲಿಂಗ್ ಪದವಿ ಪಡೆದಿದ್ದರು. ಹೀಗೆ ಪದವಿಯ ಮೇಲೆ ಪದವಿ ಪಡೆದು ಊರಲ್ಲೇ ಒಳ್ಳೆಯ ಪ್ರತಿಭಾವಂತ ಎಂಬ ಹಿರಿಮೆಗೂ ಪಾತ್ರರಾಗಿದ್ದರು.

ಸಂಶೋಧಕನಾಗಿ ಇಚ್ಲಂಗೋಡು

ಪ್ರಾಧ್ಯಾಪಕನಾದರೂ ಕೂಡ ತುಳುನಾಡಿನ ಬ್ಯಾರಿ ಸಂಸ್ಕೃತಿ, ಭಾಷೆಯ ಬಗ್ಗೆ ಅಧ್ಯಯನ ನಡೆಸಿ ಅನೇಕ ಕೃತಿಗಳನ್ನು ರಚಿಸಿದರು. ಬ್ಯಾರಿ ಭಾಷೆಯ ಬಗ್ಗೆಯೂ ಆಳವಾದ ಅಧ್ಯಯನ ನಡೆಸಿ ಸಂಶೋಧಕ ಎಂದು ಗುರುತಿಸಲ್ಪಟ್ಟರು. ಮೂಡುಬಿದಿರೆಯ ಸಾಂಸ್ಕೃತಿಕ ಅಧ್ಯಯನ, ಕಾರ್ಕಳದ ಸಾಂಸ್ಕೃತಿಕ ಅಧ್ಯಯನ, ಬಂಟ್ವಾಳದ ಸಾಂಸ್ಕೃತಿಕ ಅಧ್ಯಯನ, ಮಂಗಳೂರಿನ ಮುಸ್ಲಿಮರ ಕುರಿತು ವಿಶೇಷ ಅಧ್ಯಯನ ನಡೆಸಿ ಗಮನ ಸೆಳೆದಿದ್ದರು.

ಪದವಿ ತರಗತಿಯಲ್ಲಿದ್ದಾಗ ಪ್ರಾಧ್ಯಾಪಕರೊಬ್ಬರು ‘ನೀನ್ ಬ್ಯಾರಿಯಾ?’ ಎಂದು ಪ್ರಶ್ನಿಸಿದ್ದೇ ತಡ, ಪ್ರೊ.ಬಿಎಂ ಇಚ್ಲಂಗೋಡು ಹಿಂದೆ ಮುಂದೆ ನೋಡದೆ ‘ಹೌದು’ ಎಂದಿದ್ದರು. ‘ಹಾಗಿದ್ದರೆ ಮುಸ್ಲಿಮರಾದ ನಿಮಗೆ ಬ್ಯಾರಿ ಅಂತ ಹೇಗೆ ಬಂತು? ಎಂದು ಪ್ರಾಧ್ಯಾಪಕರು ಮತ್ತೆ ಕೇಳಿದಾಗ ಇಚ್ಲಂಗೋಡು ಅವರ ಬಳಿ ಸ್ಪಷ್ಟ ಉತ್ತರವಿರಲಿಲ್ಲವಂತೆ. ಹಾಗಂತ ಇಚ್ಲಂಗೋಡು ಸುಮ್ಮನಿರಲಿಲ್ಲ. ಆ ಬಗ್ಗೆ ಅಧ್ಯಯನದಲ್ಲಿ ತೊಡಗಿಸಿ ಕೊಂಡರು. ಮಂಗಳೂರು ವಿವಿಯ ಪ್ರೊ. ಬಿ.ಶೇಖ್ ಅಲಿಯ ಮಾರ್ಗದರ್ಶನವನ್ನೂ ಪಡೆದರು.

‘ಬ್ಯಾರಿಗಳು ಯಾರು? ಎಲ್ಲಿಂದ ಬಂದರು?’ ಎಂಬ ಪ್ರಶ್ನೆಯ ಮೂಲಕ ಬೇರೆ ಬೇರೆ ಪತ್ರಿಕೆಗಳಲ್ಲಿ ಅನೇಕ ಲೇಖನಗಳನ್ನು ಬರೆದರು. ಅದರೊಂದಿಗೆ ಬೆದರಿಕೆ ಕರೆಗಳನ್ನೂ ಸ್ವೀಕರಿಸಿದರು. ಆದರೂ ಪ್ರೊ. ಬಿ.ಎಂ. ಇಚ್ಲಂಗೋಡು ಅಧ್ಯಯನ, ಸಂಶೋಧನೆಯಿಂದ ಹಿಂದಕ್ಕೆ ಸರಿಯಲಿಲ್ಲ. ಬ್ಯಾರಿ ಕ್ಷೇತ್ರ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು.

1997ರಲ್ಲಿ ಬೆಂಗಳೂರಿನ ಬ್ಯಾರೀಸ್ ವೆಲ್ಪೇರ್ ಅಸೋಸಿಯೇಶನ್ ಸಂಘಟನೆಯ ಪ್ರಮುಖರು ಎರಡು ದಿನದ ಬ್ಯಾರಿ ಸಮ್ಮೇಳನದಲ್ಲಿ ಪ್ರೊ.ಬಿ.ಎಂ. ಇಚ್ಲಂಗೋಡು ಅವರ ಸಾಧನೆಯನ್ನು ಕೊಂಡಾಡಿದರು. ಸನ್ಮಾನಿಸಿ ಗುರುತಿಸಿದರು. ಒಂದು ಕಾಲಕ್ಕೆ ಬ್ಯಾರಿ ಎಂದು ಬರೆದರೆ ಪ್ರಾಣ ತೆಗೆಯುವುದಾಗಿ ಬೆದರಿಸಿದ್ದ ಸ್ವ ಸಮುದಾಯಕ್ಕೆ ಸೇರಿದ್ದವರೇ ‘ಬ್ಯಾರಿ’ ಎಂಬ ಅಸ್ಮಿತೆಯನ್ನು ನಾಡಿಗೆ ಪರಿಚಯಿಸಿದ್ದಕ್ಕಾಗಿ ಕರೆದು ಸನ್ಮಾನಿಸಿದ್ದು ಇಚ್ಲಂಗೋಡು ಅವರ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು.

ಬ್ಯಾರಿ ಕ್ಷೇತ್ರ ಕಾರ್ಯದಲ್ಲಿ ಪಿಎಚ್‌ಡಿ ಮಾಡಲು ಮುಂದಾಗಿದ್ದ ಇಚ್ಲಂಗೋಡಿಗೆ ಕಾರಣಾಂತರದಿಂದ ಪಿಎಚ್‌ಡಿ ಮಾಡಲು ಸಾಧ್ಯವಾಗದ ನೋವು ಸದಾ ಕಾಡುತ್ತಿದ್ದರೂ ಕೂಡ ಬ್ಯಾರಿ ಸಮುದಾಯ ತನ್ನನ್ನು ಗುರುತಿಸಿ ಗೌರವಿಸಿದ್ದು ಪಿಎಚ್‌ಡಿಗೆ ಸಮಾನ ಎಂದು ಭಾವಿಸಿ ಹರ್ಷಿತರಾಗಿದ್ದರು. ಆ ಬಳಿಕ ಪ್ರೊ.ಬಿಎಂ ಇಚ್ಲಂಗೋಡು ಹಿಂದಿರುಗಿ ನೋಡಲಿಲ್ಲ. ಬ್ಯಾರಿ ಸಂಸ್ಕೃತಿ, ಭಾಷೆಯ ಬಗ್ಗೆ ಮತ್ತಷ್ಟು ಅಧ್ಯಯನ ನಡೆಸಿ ಅನೇಕ ಕೃತಿಗಳನ್ನು ಹೊರಗೆ ತಂದಿದ್ದರು.

ಸುಮಾರು 150 ಕಥೆಗಳು, 200ಕ್ಕೂ ಅಧಿಕ ಕವನಗಳು, 25ರಷ್ಟು ಹಾಸ್ಯಲೇಖನಗಳು, 800ರಷ್ಟು ವೈಚಾರಿಕ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ರಾಷ್ಟ್ರೀಯ ಭಾಷಾ ಸರ್ವೆಯಲ್ಲಿ ಬ್ಯಾರಿ ಮತ್ತು ತುಳು ಭಾಷೆಯ ಪರಿಚಯ ಲೇಖನ ಬರೆದಿದ್ದರು. ಮಂಗಳೂರು ಆಕಾಶವಾನಿಯಲ್ಲಿ ಅನೇಕ ಚಿಂತನ ಭಾಷಣಗಳು ಪ್ರಸಾರವಾಗಿತ್ತು. ಧರ್ಮಸ್ಥಳದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಧರ್ಮ ಸಮನ್ವಯ ಕುರಿತು ಭಾಷಣ ಮಾಡಿದ್ದರು. ನಾಡಿನ ವಿವಿಧ ಕಡೆ 200ಕ್ಕೂ ಅಧಿಕ ಪ್ರಶಸ್ತಿ, ಬಿರುದು, ಗೌರವ, ಸನ್ಮಾನಕ್ಕೆ ಭಾಜನರಾಗಿದ್ದರು.

ಪ್ರಶಸ್ತಿ-ಸನ್ಮಾನ-ಗೌರವ

1975ರಲ್ಲಿ ದಿವ್ಯದರ್ಶನ (ಪವಿತ್ರ ಕುರ್‌ಆನ್) ಕಾವ್ಯಾನುವಾದಕ್ಕೆ ರಾಷ್ಟ್ರಪ್ರಶಸ್ತಿ, ಮೂಡುಬಿದಿರೆಯ ರೋಟರಿ ಕ್ಲಬ್‌ನಿಂದ ಸಾಹಿತ್ಯ ಸೇವಾ ಸನ್ಮಾನ, ಬ್ಯಾರಿ ಸಂಸ್ಕೃತಿ ಸಂಶೊಧನೆಗಾಗಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್‌ನಿಂದ ಸನ್ಮಾನ, ಪ್ರಥಮ ಬ್ಯಾರಿ ಸಾಹಿತ್ಯ ಸಮ್ಮೇಳನ ದಲ್ಲಿ ಬ್ಯಾರಿ ಸಾಹಿತ್ಯ ಸನ್ಮಾನ, ಉಡುಪಿಯಲ್ಲಿ ನಡೆದ 3ನೆ ಬ್ಯಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕೇಂದ್ರ ಬ್ಯಾರಿ ಪರಿಷತ್‌ನಿಂದ ಬ್ಯಾರಿ ಗೌರವ ಸನ್ಮಾನ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಸದಸ್ಯತ್ವ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ, ಮುಸ್ಲಿಂ ಲೇಖಕರ ಸಂಘದಿಂದ ವರ್ಷದ ಹಿರಿಯ ಸಾಹಿತಿ ಪ್ರಶಸ್ತಿ, ದ.ಕ.ಜಿಲ್ಲಾ ದಸ್ತಾವೇಜು ಬರಹಗಾರರ ಸಂಘದಿಂದ ಸಾಹಿತ್ಯ ಸೌರಭ ಸನ್ಮಾನ, ಭಾರತೀಯ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಫೆಡರೇಶನ್‌ನಿಂದ ಮಾಧ್ಯಮ ಸನ್ಮಾನ, ದ.ಕ.ಜಿಲ್ಲಾ ಗ್ರಾಹಕ ಸೇವಾ ಒಕ್ಕ್ಕೂಟದಿಂದ ಗ್ರಾಹಕ ಸೇವಾ ಸನ್ಮಾನ, ಮೂಡುಬಿದಿರೆಯ ಪತ್ರಕರ್ತರ ಸಂಘದಿಂದ ಗ್ರಾಹಕ ಸೇವಾ ಸನ್ಮಾನ, ದ.ಕ.ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಅಖಿಲ ಭಾರತ ಬ್ಯಾರಿ ಪರಿಷತ್‌ನಿಂದ ಬ್ಯಾರಿ ಸಾಹಿತ್ಯ ಸನ್ಮಾನ, ಆಳ್ವಾಸ್ ಶಿಕ್ಷಣ ಸಂಶೋಧಕ, ಸಾಹಿತಿ ಸಮಾಜ ಸೇವಕ ಸನ್ಮಾನ, ಕರ್ನಾಟಕ ಗಡಿನಾಡ ಕನ್ನಡ ಸಮ್ಮೇಳನದ ಗಡಿನಾಡು ಧ್ವನಿ ರಾಜ್ಯ ಪ್ರಶಸ್ತಿ, ದ.ಕ.ಜಿಲ್ಲಾ ಆರನೇ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಚುಟುಕು ಸಾಹಿತ್ಯ ಪ್ರಶಸ್ತಿ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಟ್ಯಾಲೆಂಟ್ ಮೀಲಾದ್ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಮತ್ತು ನಮ್ಮೂರು ನಮ್ಮವರು ನೆಲ್ಯಾಡಿ ವತಿಯಿಂದ ಬಿಸು ತುಳುನಾಡ್‌ದ ಪೊರ್ಲು ಸನ್ಮಾನ, ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಅಕಾಡಮಿಯ ವತಿಯಿಂದ ಕಾವ್ಯ ಮತ್ತು ಮಾಧ್ಯಮ ಪ್ರಶಸ್ತಿ, ಕೇರಳ ರಾಜ್ಯ 5ನೆ ಕನ್ನಡ ಸಮ್ಮೇಳನದಲ್ಲಿ ಕರ್ನಾಟಕ ಉತ್ಸವ ಸನ್ಮಾನ, ದೇರಳಕಟ್ಟೆಯ ಕರಾವಳಿ ಕರ್ನಾಟಕ ಸಾಂಸ್ಕೃತಿಕ ಸಮ್ಮೇಳನದಲ್ಲಿ ಸಾಹಿತ್ಯ ಸನ್ಮಾನ, ಸುರ್ವೆ ಕಲ್ಚರಲ್ ಅಕಾಡಮಿಯಿಂದ ಕುವೆಂಪು ರಾಜ್ಯ ಪ್ರಶಸ್ತಿ, ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ದ.ಕ.ಜಿಲ್ಲಾ ಹಿರಿಯ ನಾಗರಿಕ ಸೇವಾ ಪ್ರಶಸ್ತಿ, ಆಳ್ವಾಸ್ ನುಡಿಸಿರಿಯಲ್ಲಿ ಬ್ಯಾರಿ ಸಾಹಿತ್ಯ ಪ್ರಶಸ್ತಿ, ಮಂಗಳೂರಿನ ರಮ್ಲಾನ್ ಟ್ರಸ್ಟ್‌ನಿಂದ 2015ರಲ್ಲಿ ಎಕ್ಸಲೆನ್ಸ್ ಸರ್ಟಿಫಿಕೆಟ್, ಯುನಿವೆಫ್ ಕರ್ನಾಟಕ ವತಿಯಿಂದ ಶೇಕ್ ಅಹ್ಮದ್ ಸರ್ ಹಿಂದಿ ಪ್ರಶಸ್ತಿ, ದ.ಕ.ಜಿಲ್ಲಾ ಕಸಾಪ ವತಿಯಿಂದ ಸಾಹಿತಿ-ಕವಿ-ಸಂಘಟಕ-ಸಂಶೋಧಕ-ಸಮಾಜಸೇವಕ ಗೌರವ ಸನ್ಮಾನ, ಕರ್ನಾಟಕ ಜಾನಪದ ಅಕಾಡಮಿ ಪ್ರಶಸ್ತಿ, ಸರ್.ಎಂ. ವಿಶ್ವೇಶ್ವರಯ್ಯ ರಾಷ್ಟ್ರೀಯ ಪ್ರಶಸ್ತಿ, ಬೆಂಗಳೂರಿನ ಜ್ಞಾನ ಮಂದಾರ ಅಕಾಡಮಿಯಿಂದ ಸಮಾಜರತ್ನ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿ, ಸನ್ಮಾನ, ಗೌರವಕ್ಕೆ ಪಾತ್ರರಾಗಿದ್ದರು.

ಪ್ರಕಟಿತ ಕೃತಿಗಳು

ದಿವ್ಯದರ್ಶನ (ಪವಿತ್ರ ಕುರ್‌ಆನ್ ಕಾವ್ಯಾನುವಾದ), ಸಿವಿಲೈಸೇಶನ್ ಆಫ್ ಏನ್ಸಿಯಂಟ್ ವೋರ್ಲ್ಡ್ (ಇಂಗ್ಲಿಷ್), ಇಂಡಿಯಾ ಟುಡೆ (ಇಂಗ್ಲಿಷ್), ತುಳುನಾಡಿನ ಮುಸ್ಲಿಮರು-ಬ್ಯಾರಿ ಸಂಸ್ಕೃತಿ, ದಿ ಬ್ಯಾರೀಸ್ ಆಫ್ ತುಳುನಾಡು, ಪೆರಿಮೆ (ಸಂಪಾದನೆ), ಬ್ಯಾರಿ ನಿಘಂಟು (ಸಂಪಾದನೆ), ನಾನುಂ ನೀನುಂ ದುನಿಯಾವುಂ (ಕಥಾ ಸಂಕಲನ), ಬ್ಯಾರಿ ಭಾಷೆ ದ್ರಾವಿಡ ಭಾಷೆಯೇ? (ಸಂಶೋಧನೆ), ಬ್ಯಾರಿ ಎದ್ರ್ ಮಸಲೆಙ (ಒಗಟುಗಳು), ಬ್ಯಾರಿ ಬಾಸೆ-ಪದ ಪ್ರಯೋಗತ್ತೆ ಅರಿವು (ವ್ಯಾಕರಣ). ನೂಲ್‌ಮೊಲಿ -ಬ್ಯಾರಿ ಚೊಲ್ತುರೊ ಬೂಕು (ವಚನಗಳು), ಬ್ಯಾರಿ ಆಂದೋಲನದಲ್ಲಿ ಪ್ರೊ.ಇಚ್ಲಂಗೋಡು, ಭಾಷಣ ಕಲೆ, ಶ್ರೀಮಂತಿಕೆಯ ಸೂತ್ರಗಳು, ವೈಭವದ ನಾಡು ಕರ್ನಾಟಕ, ಬಳಕೆದಾರರ ಸಮಸ್ಯೆಗಳು ಮತ್ತು ಪರಿಹಾರ, ಸಿರಿನಿಧಿ (ವೈಚಾರಿಕ ಲೇಖನ ಸಂಕಲನ), ಹೃದಯದೀಪ (ಹದೀಸ್ ಸಂಕಲನ), ನೈರ್ಮಲ್ಯ ಸೂತ್ರ, ಔಲಿಯಾಗಳು ಮತ್ತು ತಸವ್ವಫ್, ಹದೀಸ್ ವೌಲ್ಯಗಳು, ಪೈಗಂಬರ ಜಯಂತಿ, ಮರಳುಗಾಡಿನ ನವೋದಯ, ಲೋಕಾನುಗ್ರಹಿಯ ಕೊಡುಗೆ, ಹಿತವಚನಗಳು, ಗ್ರಾಹಕ ಸಂರಕ್ಷಣಾ ಕಾಯ್ದೆ ಮತ್ತು ಜನಸಾಮಾನ್ಯರು, ಭಾರತದಲ್ಲಿ ಮುಸ್ಲಿಮರ ಭವಿಷ್ಯ, ಇಸ್ಲಾಂ ಎಂದರೇನು? (ಕವನ ಸಂಕಲನ), ಕವಿ ಹೃದಯ (ಕವನ ಸಂಕಲನ), ಕನ್ಯಾಕುಮಾರಿ (ಕವನ ಸಂಕಲನ), ಜೀವಪೋಷಕ ಮರಗಿಡಗಳು ಮತ್ತು ಔಷಧೀಯ ಫಲಗಳು, ದೆವ್ವದ ಮನೆ (ಕಥಾ ಸಂಕಲನ), ಕನ್ನಡದ ದೀಪ (ಹಾಸ್ಯ ಚುಟುಕು ಮತ್ತು ಕವನ ಸಂಕಲನ), ಕರ್ನಾಟಕ ದರ್ಶನ, ಸ್ವಾಮಿ ವಿವೇಕಾನಂದ ಆ್ಯಂಡ್ ಇಂಡಿಯನ್ ಸೊಸೈಟಿ (ಇಂಗ್ಲಿಷ್), ಗ್ರಾಹಕ ಜಾಗೃತಿ, ಆರೋಗ್ಯ ಸಲಹೆ, ಕಿರುಪುಸ್ತಕ ಮಾಲಿಕೆಗಳು, ಇಸ್ಲಾಮಿನ ಸತ್ಯ ದರ್ಶನ, ಸುಖಜೀವನ ಅರಳುವ ದಿನ, ಗ್ರಾಹಕ ವಿಚಾರಗಳು ಇತ್ಯಾದಿ ಕೃತಿಗಳನ್ನು ಹೊರ ತಂದಿದ್ದರು.

ಮಾಧ್ಯಮ ಕ್ಷೇತ್ರ

ಮೀಡಿಯಾ ಟೈಮ್ಸ್ ಗ್ರಾಹಕ ಮಾಧ್ಯಮ ವಾರಪತ್ರಿಕೆಯ ಸಂಪಾದಕ, ಸಮನ್ವಯ ಗ್ರಾಹಕ ಮಾಸಿಕದ ಸಂಪಾದಕ, ತವನಿಧಿ ಮಾಸಿಕದ ಸಂಪಾದಕ, ಮುಸ್ತಕೀಮ್ ಮಾಸಿಕದ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು.

ಇತರ ಕ್ಷೇತ್ರಗಳು

ಇಚ್ಲಂಗೋಡು ಗ್ರಾಮ ಸೇವಾ ಸಂಘದ ಸ್ಥಾಪನೆ, ಕಾರ್ಕಳ ತಾಲೂಕು ಮುಸ್ಲಿಂ ಸೇವಾ ಸಂಘದ ಸ್ಥಾಪನೆ, ಮೂಡುಬಿದರೆ ವಿಜಯನಗರ ವೆಲ್ಫೇರ್ ಅಸೋಸಿಯೇಶನ್‌ನ ಸ್ಥಾಪನೆ, ಮೂಡುಬಿದಿರೆ ಸರ್ವಿಸ್ ಸೆಂಟರ್ ಆರಂಭ, ಮೂಡುಬಿದಿರೆ ನಾಗರಿಕ ಸಮನ್ವಯ ಸಮಿತಿ ರಚನೆ, ಮಂಗಳೂರು ಗ್ರಾಹಕ ಜಾಗೃತಿ ವೇದಿಕೆಯ ಅಧ್ಯಕ್ಷ/ಸಂಚಾಲಕ, ದ.ಕ.ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟದ ಸ್ಥಾಪಕ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಗ್ರಾಹಕ ರಕ್ಷಣಾ ಪರಿಷತ್‌ನ ಸದಸ್ಯ, ದ.ಕ.ಜಿಲ್ಲಾ ಗ್ರಾಹಕ ರಕ್ಷಣಾ ಪರಿಷತ್‌ನ ಸದಸ್ಯ, ದ.ಕ.ಜಿಲ್ಲಾ ಗ್ರಾಹಕ ವೇದಿಕೆಯ ಲೋಕ ಅದಾಲತ್‌ನ ಸಂಧಾನಕಾರ, ದ.ಕ.ಸಿಟಿಜನ್ಸ್ ಕೋ ಆರ್ಡಿನೇಶನ್ ಕೌನ್ಸಿಲ್ ಮೂಡುಬಿದಿರೆ ಸಂಚಾಲಕ, ಇಚ್ಲಂಗೋಡು ವೆಲ್ಫೇರ್ ಫೌಂಡೇಶನ್‌ನ ಅಧ್ಯಕ್ಷ. ಹೀಗೆ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ ಸಂಘಟನೆಗಳ ಸ್ಥಾಪಕರಾಗಿದ್ದರಲ್ಲದೆ ಜವಾಬ್ದಾರಿಯುತ ಸ್ಥಾನಗಳನ್ನೂ ನಿರ್ವಹಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)