varthabharthi


ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?

ಇಸ್ರೇಲ್ ಯುದ್ಧಾಪರಾಧಗಳು: ಅಂತರ್‌ರಾಷ್ಟ್ರೀಯ ಕ್ರಿಮಿನಲ್ ಕೋರ್ಟ್‌ನಿಂದ ತನಿಖೆ

ಫೆಲೆಸ್ತೀನ್‌ನಲ್ಲಿ ನಡೆಯುತ್ತಿರುವುದೇನು?

ವಾರ್ತಾ ಭಾರತಿ : 25 May, 2021
ಎ.ಎಸ್. ಪುತ್ತಿಗೆ

ಭಾಗ-7

ಆಕ್ರಮಣದಿಂದ ಲಾಭ ಇಲ್ಲವೆಂದವರಾರು?

ದೊಡ್ಡ ಪ್ರಮಾಣದ ಆಕ್ರಮಣದಿಂದ ಲಾಭವಿದೆ. 1948 ರಲ್ಲಿ ಆಕ್ರಮಣದ ಮೂಲಕವೇ ಫೆಲೆಸ್ತೀನ್ ನೆಲದಲ್ಲಿ ಇಸ್ರೇಲ್ ದೇಶದ ಸ್ಥಾಪನೆಯಾಯಿತು. ಆದ್ದರಿಂದ ಜಗತ್ತಿನ ಹೆಚ್ಚಿನ ದೇಶಗಳು ಇಸ್ರೇಲ್‌ಗೆ ಮಾನ್ಯತೆ ನೀಡಲು ಸಿದ್ಧರಿರಲಿಲ್ಲ. 1967ರಲ್ಲಿ ಮತ್ತೆ ಇಸ್ರೇಲ್ ಒಂದು ದೊಡ್ಡ ಪ್ರಮಾಣದ ಆಕ್ರಮಣ ಮಾಡಿತು. ಹಿಂದೆ ಆಕ್ರಮಿಸಿದ್ದಕ್ಕಿಂತ ಹಲವು ಪಟ್ಟು ಅಧಿಕ ಭೂಮಿಯನ್ನು ಆಕ್ರಮಿಸಿತು. ಆ ಬಳಿಕವೂ ಅದು ಹಲವು ಬಾರಿ ಮಿಲಿಟರಿ ಕಾರ್ಯಾಚರಣೆಗಳ ಮೂಲಕ ತನ್ನದಲ್ಲದ ನೆಲಗಳನ್ನು ಆಕ್ರಮಿಸಿಕೊಂಡು ತನ್ನ ಗಡಿಗಳನ್ನು ವಿಸ್ತರಿಸಿಕೊಂಡಿತು. ಈ ಪ್ರಕ್ರಿಯೆಯಲ್ಲಿ ಎಷ್ಟು ರಕ್ತ ಹರಿದರೂ ಎಷ್ಟು ಜೀವಗಳು ಆಹುತಿಯಾದರೂ ಇಸ್ರೇಲ್ ಪಾಲಿಗೆ ಇದೊಂದು ಲಾಭದಾಯಕ ವ್ಯವಹಾರವಾಯಿತು. ಏಕೆಂದರೆ 1967ರ ತನಕ ಇಸ್ರೇಲ್‌ನ ಅಸ್ತಿತ್ವವನ್ನೇ ಒಪ್ಪಲು ನಿರಾಕರಿಸುತ್ತಿದ್ದವರು, ವಿಶೇಷವಾಗಿ ಹೆಚ್ಚಿನ ಅರಬ್ ದೇಶಗಳು ಈಗ 1967ಕ್ಕೆ ಮುಂಚಿನ ಇಸ್ರೇಲ್ ಗಡಿಗಳ ವಿರುದ್ಧ ಮಾತನಾಡುತ್ತಿಲ್ಲ. ಇಸ್ರೇಲ್ 1967ರ ತನ್ನ ಗಡಿಗೆ ಮರಳಬೇಕು ಎಂದು ಅವು ಆಗ್ರಹಿಸುತ್ತಿವೆ. ಚೌಕಾಶಿಯೆಲ್ಲವೂ 1967ರ ನಂತರ ಆಕ್ರಮಿಸಿಕೊಳ್ಳಲಾದ ಭೂಭಾಗಗಳಿಗೆ ಸೀಮಿತ ವಾಗಿದೆ.

ಒಂದು ಕಾಲದಲ್ಲಿ ‘‘ಅವರ ಕೊರಳನ್ನೇಕೆ ಹಿಡಿದಿರುವಿರಿ?’’ ಎಂದು ರೇಗಾಡುತ್ತಿದ್ದವರೆಲ್ಲ ಇದೀಗ ಕೊರಳನ್ನು ಮರೆತಿದ್ದಾರೆ. ಜುಟ್ಟು ಬಿಟ್ಟು ಬಿಡಿ, ಸಾಕು. ಎನ್ನುತ್ತಿದ್ದಾರೆ. ಸಂಪೂರ್ಣ ಅರಮನೆಯನ್ನು ಆಕ್ರಮಿಸಿಕೊಂಡವನ ಜೊತೆ ಇದೀಗ ಅರಮನೆಯ ಮಾಲಕರು ಒಂದು ಕೋಣೆಗಾಗಿ ಚೌಕಾಶಿ ನಡೆಸುತ್ತಿದ್ದಾರೆ. ಕೋಣೆ ಸಿಕ್ಕಿ ಬಿಟ್ಟರೆ ಅದು ಕೊಟ್ಟವನ ಔದಾರ್ಯ, ಪಡೆದವರ ಸೌಭಾಗ್ಯ.

ಅಮೆರಿಕದ ಬಿಷಪರ ಒಕ್ಕೂಟಕ್ಕೆ ಫೆಲೆಸ್ತೀನ್‌ನ ಕ್ರೈಸ್ತರ ಮನವಿ

ಕಳೆದ ವರ್ಷ ಇಸ್ರೇಲ್ ಮತ್ತು ಸಂಯುಕ್ತ ಅರಬ್ ಎಮಿರೇಟ್ಸ್ (ಯುಎಇ) ನಡುವೆ ಒಂದು ಶಾಂತಿ ಒಪ್ಪಂದ ನಡೆಯಿತು. ಇಸ್ರೇಲ್ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಅದರ ಜೊತೆ ಅಧಿಕೃತವಾಗಿ ಪೂರ್ಣ ಪ್ರಮಾಣದ ರಾಜತಾಂತ್ರಿಕ ಸಂಬಂಧ ಸ್ಥಾಪಿಸಿಕೊಂಡ ಮೊದಲ ಅರಬ್ ದೇಶ ಈಜಿಪ್ಟ್ ಆಗಿತ್ತು. ಈ ಬೆಳವಣಿಗೆ 1979ರಲ್ಲಿ ನಡೆದಿತ್ತು. ಆ ಬಳಿಕ 1994ರಲ್ಲಿ ಜೋರ್ಡನ್ ಈ ಸಾಲಿಗೆ ಸೇರಿತು. 2020ರಲ್ಲಿ ಯುಎಇ ಅಂತಹ ಮೂರನೆಯ ಅರಬ್ ದೇಶವಾಯಿತು. ಇದನ್ನು ಇಸ್ರೇಲ್ ದೇಶ ಸಾಧಿಸಿದ ಒಂದು ದೊಡ್ಡ ಮುನ್ನಡೆಯೆಂದು ಪರಿಗಣಿಸಲಾಯಿತು. ಜಗತ್ತಿನ ಹಲವು ಸರಕಾರಗಳು ಮತ್ತು ಖಾಸಗಿ ವಲಯಗಳು ಇದಕ್ಕಾಗಿ ಇಸ್ರೇಲ್ ಸರಕಾರವನ್ನು ಅಭಿನಂದಿಸಿದವು ಮತ್ತು ಎರಡೂ ಸರಕಾರಗಳನ್ನು ಶ್ಲಾಸುವ ಹೇಳಿಕೆಗಳನ್ನು ನೀಡಿದವು. ಅಮೆರಿಕದ ಕೆಥೊಲಿಕ್ ಬಿಷಪ್ ಕಮಿಟಿಯ ಪರವಾಗಿ ಅದರ ಮುಖ್ಯಸ್ಥ ರಾಕ್ ಫರ್ಡ್‌ನ ಬಿಷಪ್ ಡೇವಿಡ್ ಜೆ. ಮೆಲ್ಲೊಯ್ ಕೂಡಾ ಅಂತಹ ಒಂದು ಹೇಳಿಕೆಯನ್ನು ನೀಡಿದರು. ಕ್ರೈಸ್ತ ಸಮುದಾಯವು ಇಸ್ರೇಲ್ ಜೊತೆಗಿದೆ ಎಂಬ ಅಭಿಪ್ರಾಯ ಮೂಡಿಸುವ ಅವರ ಹೇಳಿಕೆ ಮಾಧ್ಯಮಗಳಲ್ಲೆಲ್ಲ ಸಾಕಷ್ಟು ಪ್ರಚಾರ ಪಡೆಯಿತು. ಆಗಸ್ಟ್ 13 ರ ಈ ಹೇಳಿಕೆ ಕುರಿತಂತೆ, ಜೆರುಸಲೇಮ್ ನ ಕೆಲವು ಪ್ರಮುಖ ಕ್ರೈಸ್ತರು ತಮ್ಮ ಪ್ರತಿಕ್ರಿಯೆಯನ್ನು ಬರೆದರು. ಬಿಷಪ್ ಡೇವಿಡ್ ಜೆ. ಮೆಲ್ಲೊಯ್‌ರನ್ನುದೇಶಿಸಿ ಬರೆದ ಪತ್ರದ ರೂಪದಲ್ಲಿರುವ ಈ ಪ್ರತಿಕ್ರಿಯೆ ಗಮನಾರ್ಹವಾಗಿದೆ. ಅದರ ಕೆಲವು ಭಾಗಗಳು ಇಲ್ಲಿವೆ:

 ರಾಕ್ ಫರ್ಡ್‌ನ ಬಿಷಪ್, ಮೋಸ್ಟ್ ರೆವರೆಂಡ್ ಡೇವಿಡ್ ಮೆಲ್ಲೊಯ್ ಅವರಿಗೆ, ಯುವರ್ ಎಕ್ಸಲೆನ್ಸಿ, ಇಸ್ರೇಲ್ ಮತ್ತು ಯುಎಇ ನಡುವೆ ಏರ್ಪಟ್ಟಿರುವ ಒಪ್ಪಂದದ ಕುರಿತಂತೆ ಸಮಾಧಾನವನ್ನು ಪ್ರಕಟಿಸುವ ತಮ್ಮ ಆಗಸ್ಟ್ 13 ರ ಹೇಳಿಕೆಯನ್ನು ನಾವು ಓದಿದೆವು. ನ್ಯಾಯ ಮತ್ತು ಶಾಂತಿಗಾಗಿರುವ ಫೆಲೆಸ್ತೀನ್‌ನ ಕ್ರೈಸ್ತ ಸಂಘಟನೆಗಳವರೆಂಬ ನೆಲೆಯಲ್ಲಿ ಆ ಕುರಿತು ನಮ್ಮ ಕೆಲವು ಅನಿಸಿಕೆಗಳನ್ನೂ ತಮಗೆ ಕಳಿಸುತ್ತಿದ್ದೇವೆ.

ಯಾವುದೇ ಅರಬ್ ದೇಶ ಮತ್ತು ಇಸ್ರೇಲ್ ಸರಕಾರ ಪರಸ್ಪರ ಮನ್ನಣೆ ಕೊಟ್ಟುಕೊಂಡರೆ ಅದನ್ನು ಶಾಂತಿಯ ಹಾದಿಯಲ್ಲಿ ಸಾಧಿಸಲಾದ ಮುನ್ನಡೆ ಎಂದು ಪರಿಗಣಿಸುವವರು ತಪ್ಪು ತಿಳುವಳಿಕೆಯಲ್ಲಿದ್ದಾರೆ. ನಿಜವಾಗಿ, ಫೆಲೆಸ್ತೀನ್ ನೆಲದ ಮೇಲೆ ಇಸ್ರೇಲ್‌ನ ಮಿಲಿಟರಿ ಆಕ್ರಮಣ ಎಂಬ ಮೂಲ ಸಮಸ್ಯೆಯನ್ನು ಬಗೆಹರಿಸುವ ಸಂಕಲ್ಪದೊಂದಿಗೆ ಇಡಲಾದ ಹೆಜ್ಜೆಯನ್ನು ಮಾತ್ರ ಶಾಂತಿಯ ಕಡೆಗೆ ಮುನ್ನಡೆ ಎಂದು ಪರಿಗಣಿಸಲು ಸಾಧ್ಯ. ಇಸ್ರೇಲ್ ಮತ್ತು ಅರಬ್ ದೇಶಗಳ ನಡುವೆ ಶಾಂತಿ ಸ್ಥಾಪನೆಯಾಗಬೇಕಿದ್ದರೆ, ಆ ಪ್ರಕ್ರಿಯೆಯು, ಫೆಲೆಸ್ತೀನ್ ಮೇಲಿನ ಇಸ್ರೇಲ್‌ನ ಆಕ್ರಮಣವನ್ನು ಕೊನೆಗೊಳಿಸಿ, ಫೆಲೆಸ್ತೀನ್ ಜನತೆಗೆ ಸ್ವ ನಿರ್ಧಾರದ ಹಕ್ಕಿನ ಸಹಿತ ಅವರ ಎಲ್ಲ ಹಕ್ಕುಗಳನ್ನು ಅವರಿಗೆ ನೀಡುವ ಮೂಲಕ ಆರಂಭವಾಗಬೇಕು. ಬೇರೆ ಯಾವುದೇ ಮಾರ್ಗವು ಶಾಂತಿಯ ಕಡೆಗೆ ಹುಸಿ ಹೆಜ್ಜೆ ಎನಿಸುತ್ತದೆ. ಬಡವರನ್ನು ಮೊದಲು ಮೂಲೆಗುಂಪಾಗಿಸಿ ಆ ಬಳಿಕ ಶಕ್ತಿಶಾಲಿಗಳ ಮುಂದೆ ಮಂಡಿಯೂರುವಂತೆ ನಿರ್ಬಂಧಿಸಿದರೆ ಅದನ್ನು ಶರಣಾಗತಿ ಎನ್ನಬಹುದೇ ಹೊರತು ಶಾಂತಿ ಎನ್ನಲಾಗುವುದಿಲ್ಲ.

ಒಂದು ವೇಳೆ ಅರಬ್ ಸರಕಾರಗಳು ಇಸ್ರೇಲ್‌ಗೆ ಮನ್ನಣೆ ನೀಡಿದರೂ, ಫೆಲೆಸ್ತೀನಿಗಳು ದಬ್ಬಾಳಿಕೆಯಡಿ ಯಲ್ಲಿ ಬದುಕುತ್ತಿರುವ ತನಕ ಅರಬ್ ಜನತೆ ಇಸ್ರೇಲ್ ಜೊತೆ ಸಂಬಂಧ ಸುಧಾರಣೆಗೆ ಸಮ್ಮತಿಸಲಾರರು. ನಿಜವಾದ ಶಾಂತಿ ಪ್ರಕ್ರಿಯೆಯು ಫೆಲೆಸ್ತೀನ್ ಜನತೆಯೊಂದಿಗೆ ಶಾಂತಿ ಸ್ಥಾಪನೆಯೊಂದಿಗೆ ಆರಂಭವಾಗಬೇಕೇ ಹೊರತು ಅರಬ್ ದೇಶಗಳೊಂದಿಗೆ ಒಪ್ಪಂದಗಳನ್ನು ಮಾಡುವ ಮೂಲಕ ಅಲ್ಲ. ನಿಜವಾದ ಶಾಂತಿಯು ಫೆಲೆಸ್ತೀನ್ ಜನತೆಯ ಹೃದಯಗಳಿಂದ ಆರಂಭವಾಗಬೇಕು. ಆ ಆಯ್ಕೆ ಇಸ್ರೇಲ್‌ನ ಕೈಯಲ್ಲಿದೆ. ಐತಿಹಾಸಿಕ ಫೆಲೆಸ್ತೀನ್ ಭೂಮಿಯ ಉಳಿದ 22ಶೇ. ಭಾಗವನ್ನು ಇಸ್ರೇಲ್ ಸರಕಾರವು ಫೆಲೆಸ್ತೀನ್ ದೇಶವೆಂದು ಮಾನ್ಯ ಮಾಡಬೇಕು. ಜನರ ಮಧ್ಯೆ ಸಮಾನತೆ ಇರಬೇಕಾದುದು ಮುಖ್ಯ. ದೇವರಂತೂ ಎಲ್ಲ ಜನರನ್ನು ಸಮಾನರಾಗಿಯೇ ಸೃಷ್ಟಿಸಿದ್ದಾನೆ.

ಕೆಲವರು ಈ ಒಪ್ಪಂದವನ್ನು ‘ಅಬ್ರಹಾಮ್ ಎಕ್ಕಾರ್ಡ್’ ಎಂದು ಕರೆಯುತ್ತಿದ್ದಾರೆ. ಈ ಕುರಿತು ನಾವು ಹೇಳುವುದಿಷ್ಟೇ: ದೇವರನ್ನು ಮತ್ತು ದೇವರ ದೂತರುಗಳನ್ನು ಶಕ್ತಿಶಾಲಿಗಳ ಪಾಳಯದಲ್ಲಿ ನಿಲ್ಲಿಸಿ ಶೋಷಿಸಿದ್ದು ಸಾಕು. ಈ ವಿಷಯದಲ್ಲಿ ನಾವು ದೇವರನ್ನು ಮತ್ತು ದೇವರ ದೂತರನ್ನು ಎಳೆದು ತರುವುದಿದ್ದರೆ ಮತ್ತೆ ನಾವು ದೇವರ ಆದೇಶಗಳನ್ನು ಮತ್ತು ದೇವರು - ಇಸ್ರೇಲಿಗಳು ಮತ್ತು ಫೆಲೆಸ್ತೀನಿಗಳ ಸಹಿತ - ಎಲ್ಲ ಮಾನವರಿಗೆ ದೇವರು ದಯಪಾಲಿಸಿರುವ ಸಮಾನತೆಯನ್ನು ಪಾಲಿಸಬೇಕು. ಎಲ್ಲರ ವಿಷಯದಲ್ಲಿ ನ್ಯಾಯವನ್ನು ಪಾಲಿಸಬೇಕು. ಆದರೆ ಇಂದು ವಾಸ್ತವದಲ್ಲಿ ಶಕ್ತಿಶಾಲಿಗಳು ತಮ್ಮದನ್ನೂ ಇತರರಿಗೆ ಸೇರಿದ್ದನ್ನೂ ಕಿತ್ತುಕೊಂಡು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಅವರಿಗೆ ಕೆಲವು ಚರ್ಚುಗಳ ಬೆಂಬಲವೂ ಸಿಗುತ್ತಿದೆ. ದುರ್ಬಲರಿಂದ ಅವರ ಅಧಿಕಾರಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಶಕ್ತಿಶಾಲಿಗಳ ಕಡೆಯಿಂದ ಒಂದಷ್ಟು ಪದಗಳು ಮಾತ್ರ ಹರಿದು ಬರುತ್ತಿವೆ, ಯಾವುದೇ ಕ್ರಮ ಮುಂದೆ ಬರುತ್ತಿಲ್ಲ.

 ಶಾಂತಿಗಿರುವುದು ಒಂದೇ ದಾರಿ. ದುರ್ಬಲರಿಗೆ ಬೆಂಬಲ ನೀಡಬೇಕು ಮತ್ತು ಅವರ ವಿರುದ್ಧ ಶಕ್ತಿಶಾಲಿಗಳು ನಡೆಸುವ ಅನ್ಯಾಯಗಳನ್ನು ವಿರೋಧಿಸಬೇಕು. ಇದಕ್ಕಾಗಿ ಚರ್ಚುಗಳು, ಪವಿತ್ರ ಭೂಮಿಯ ಜನತೆ ಬಹುಕಾಲದಿಂದ ಅನುಭವಿಸುತ್ತಿರುವ ದುರಂತ ಸ್ಥಿತಿಯನ್ನು ಕೊನೆಗೊಳಿಸುವಂತೆ ತಮ್ಮ ಸರಕಾರಗಳ ಮೇಲೆ ಒತ್ತಡ ಹೇರಬೇಕು. ಫೆಲೆಸ್ತೀನ್‌ನ ಹಲವು ಪ್ರಮುಖ ಕ್ರೈಸ್ತ ಸಂಸ್ಥೆಗಳ ಮುಖ್ಯಸ್ಥರು ಈ ಪತ್ರಕ್ಕೆ ಸಹಿ ಮಾಡಿದ್ದರು.

►H.B. Michel Sabbah, Patriarch Emeritus

► Mr. Rifat Kassis, Coordinator of Kairos Palestine

► Mr. Fuad Giacaman, Coordinator of NCCOP & Director of Arab Educational Institute

► Rev. Dr. Mitri Raheb, President, DIYAR

►Mr. Omar Harami, Sabeel Ecumenical Liberation Theology Center

► Mr. Nader Abu Amsha, The East Jerusalem Rehab. Program & Beit Sahour YMCA

► Professor Mazin Qumsiyeh, Director, Palestine Institute for Biodiversity and Sustainability, Bethlehem University

► Rev. Dr. Munther Isaac, Director of Christ at the Checkpoint conference

► Mr. Nidal Abu Zuluf, Joint Advocacy Initiative (JAI) 

 ನೊಬೆಲ್ ಪ್ರಶಸ್ತಿ ವಿಜೇತ ಆರ್ಚ್ ಬಿಷಪ್ ದೆಸ್ಮನ್ಡ್ ಟೂಟು ಗುರುತಿಸಿದ ಜನಾಂಗವಾದ

ನೊಬೆಲ್ ಪ್ರಶಸ್ತಿ ವಿಜೇತ ದೆಸ್ಮನ್ಡ್ ಟೂಟು (Desmond Tutu) ತಮ್ಮ ಹಲವಾರು ವಿಶೇಷತೆಗಳಿಗಾಗಿ ಪ್ರಖ್ಯಾತರು. ಕೇಪ್ ಟೌನ್‌ನ ಪ್ರಥಮ ಕರಿಯ ಆರ್ಚ್ ಬಿಷಪ್ ಆಗಿದ್ದವರು. ದಕ್ಷಿಣ ಆಫ್ರಿಕಾದಲ್ಲಿ ಕರಿಯರ ವಿರುದ್ಧ ಅತ್ಯುಗ್ರ ದಮನ ನೀತಿಯನ್ನು ಅನುಸರಿಸುತ್ತಿದ್ದ ಬಿಳಿಯರ ಸರಕಾರದ ವರ್ಣಭೇದ ಮತ್ತು ಜನಾಂಗವಾದಗಳ ವಿರುದ್ಧ ಹಲವು ದಶಕಗಳ ದೀರ್ಘ ಹೋರಾಟ ನಡೆಸಿದವರು. ಅಲ್ಲಿ ಪೌರ ಹಕ್ಕುಗಳಿಗಾಗಿ ನಡೆದ ಅಹಿಂಸಾತ್ಮಕ ಹೋರಾಟದ ಪ್ರಮುಖ ನಾಯಕರಲ್ಲೊಬ್ಬರು. ದೆಸ್ಮನ್ಡ್ ಟೂಟು ಸಾಮಾನ್ಯ ಪಕ್ಷಪಾತ, ಪೂರ್ವಗ್ರಹ ಇತ್ಯಾದಿಗಳಿಗೂ ಜನಾಂಗವಾದಕ್ಕೂ ಇರುವ ವ್ಯತ್ಯಾಸವನ್ನು ಚೆನ್ನಾಗಿ ಬಲ್ಲರು. ಅವರು ಜನಾಂಗವಾದ ಎಲ್ಲಿ ಯಾವ ಸ್ವರೂಪದಲ್ಲಿ ಇದ್ದರೂ ಗುರುತಿಸಬಲ್ಲಷ್ಟು ಪ್ರಬುದ್ಧರು. ಇಸ್ರೇಲ್‌ನ ಆಕ್ರಮಿತ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಅವರ ಅನಿಸಿಕೆ ಹೀಗಿತ್ತು:

‘‘ಇಸ್ರೇಲ್ ಸಮಾಜದ ಸದಸ್ಯರು ಮತ್ತು ಅಲ್ಲಿಯ ಭದ್ರತಾ ಪಡೆಗಳು ಯಾವ ರೀತಿ ಯೋಜನಾಬದ್ಧವಾಗಿ ಫೆಲೆಸ್ತೀನ್‌ನ ಪುರುಷರು, ಮಹಿಳೆಯರು ಮತ್ತು ಮಕ್ಕಳನ್ನು ಅಪಮಾನಿಸುತ್ತಾರೆ ಎಂಬುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಅಲ್ಲಿ ಅವರು ಅನುಭವಿಸುತ್ತಿರುವ ಅಪಮಾನವು, ದಕ್ಷಿಣ ಆಫ್ರಿಕಾದ ಕರಿಯರಿಗೆ ಸಾಕಷ್ಟು ಪರಿಚಿತವಾಗಿದೆ. ಏಕೆಂದರೆ ಅವರು ಜನಾಂಗವಾದಿ ಸರಕಾರದ ಕೈಯಲ್ಲಿ ಅಗಾಧ ಅಪಮಾನ, ಕಿರುಕುಳ ಮತ್ತು ಹಲ್ಲೆಗಳನ್ನು ಅನುಭವಿಸಿದ್ದಾರೆ’’.

ತನ್ನ ಧೋರಣೆಗಳನ್ನು ಬದಲಿಸುವಂತೆ ಇಸ್ರೇಲ್ ಅನ್ನು ನಿರ್ಬಂಧಿಸಬೇಕಿದ್ದರೆ, ಇಸ್ರೇಲ್ ಅನ್ನು ಬಹಿಷ್ಕರಿಸಬೇಕು ಮತ್ತು ಅದರ ಮೇಲೆ ಆರ್ಥಿಕ ನಿರ್ಬಂಧಗಳನ್ನು ಹೇರಬೇಕು ಎಂಬ ಬೇಡಿಕೆಯನ್ನು ಅವರು ಬೆಂಬಲಿಸಿದರು. ‘‘ಅನ್ಯಾಯವನ್ನು ಕಂಡು ಕಣ್ಣು ಮುಚ್ಚಿಕೊಳ್ಳುವವರು ನಿಜವಾಗಿ ಅನ್ಯಾಯವನ್ನು ಹೆಚ್ಚಿಸುತ್ತಾರೆ. ಅನ್ಯಾಯದ ಸನ್ನಿವೇಶದಲ್ಲಿ ನೀವು ತಟಸ್ಥರಾಗಿದ್ದರೆ, ನೀವು ಅನ್ಯಾಯ ಮಾಡುವವರ ಪಕ್ಷದಲ್ಲಿದ್ದೀರಿ ಎಂದೇ ಅರ್ಥ. ನಾವು ಪೂಜಿಸುವುದೆಲ್ಲಿ ಅಥವಾ ಬದುಕುವುದೆಲ್ಲಿ ಎಂಬುದು ಮುಖ್ಯವಲ್ಲ. ನಾವೆಲ್ಲಾ ಒಂದು ಕುಟುಂಬದವರು. ಅದುವೇ ಮಾನವ ಕುಟುಂಬ. ದೇವರ ಕುಟುಂಬ’’ ಎಂದು ಟೂಟು ಹೇಳಿದರು.
 

ಫೆಲೆಸ್ತೀನಿಗಳಿಗೆ ಬೆಂಬಲವಾಗಿ ಇಟಲಿ ಕಾರ್ಮಿಕರ ಮುಷ್ಕರ

 ಕಳೆದ ವಾರ ಇಟಲಿಯ ಲಿವೋನೋ ಬಂದರಿನಲ್ಲಿ ಹಡಗುದಾಣಗಳ ಕಾರ್ಮಿಕರ ಸಂಘಟನೆಗಳ ಒಕ್ಕೂಟವು, ಫೆಲೆಸ್ತೀನ್ ಜನತೆಯ ಪರವಾಗಿ ತಮ್ಮ ಭಾವೈಕ್ಯದ ಪ್ರತೀಕವಾಗಿ ಒಂದು ಮುಷ್ಕರ ನಡೆಸಿತು. ಇಸ್ರೇಲ್ ಮೂಲದ ಖಾಸಗಿ ಕಂಪೆನಿಯೊಂದರ ಮಾಲಕತ್ವದ ‘ಏಷಿಯಾಟಿಕ್ ಐಲ್ಯಾಂಡ್’ ಎಂಬ ಹಡಗು ಶಸ್ತ್ರಾಸ್ತ್ರಗಳು ತುಂಬಿದ ಹಲವು ಕಂಟೈನರ್‌ಗಳನ್ನು ಇಸ್ರೇಲಿನ ಹೈಫಾ ಬಂದರಿಗೆ ಒಯ್ಯಲು ಸಜ್ಜಾಗಿತ್ತು. ಆದರೆ ಫೆಲೆಸ್ತೀನ್ ನಾಗರಿಕರ ವಿರುದ್ಧ ಇಸ್ರೇಲ್ ಸರಕಾರವು ನಡೆಸುತ್ತಿರುವ ಹಿಂಸೆ ಮತ್ತು ರಕ್ತಪಾತವನ್ನು ತಾವು ಖಂಡಿಸುವುದಾಗಿ ಹೇಳಿದ ಕಾರ್ಮಿಕ ಒಕ್ಕೂಟದ ಸದಸ್ಯರು ಶಸ್ತ್ರಾಸ್ತ್ರಗಳ ಕಂಟೈನರ್‌ಗಳನ್ನು ಹಡಗಿಗೆ ಹತ್ತಿಸಲು ನಿರಾಕರಿಸಿದರು.

ಕೆನಡಾದಲ್ಲಿ ಇಸ್ರೇಲ್ ಜೊತೆ ವಾಣಿಜ್ಯ ಒಪ್ಪಂದಕ್ಕೆ ವಿರೋಧ

ಈ ವರ್ಷ ಜನವರಿ ತಿಂಗಳಲ್ಲಿ ಕೆನಡಾದ 150ಕ್ಕೂ ಹೆಚ್ಚಿನ ಕಲಾವಿದರು, ಬುದ್ಧಿಜೀವಿಗಳು, 20ಕ್ಕೂ ಹೆಚ್ಚಿನ ಕಾರ್ಮಿಕ ಸಂಘಟನೆಗಳು, ವಿದ್ಯಾರ್ಥಿ ಒಕ್ಕೂಟಗಳು ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಮಾಂಟ್ರಿಯಲ್ ನಗರದಲ್ಲಿ ಸೇರಿ ಇಸ್ರೇಲ್ ಸರಕಾರದ ವಸಾಹತು ಶಾಹಿತ್ವದಿಂದ ಫೆಲೆಸ್ತೀನ್ ಅನ್ನು ಮುಕ್ತಗೊಳಿಸಬೇಕೆಂದು ಕರೆ ನೀಡಿದರು. ಕೆನಡಾ ಸರಕಾರವು ಇಸ್ರೇಲ್ ಸರಕಾರದ ಜೊತೆ ಮಾಡ ಹೊರಟ ವಾಣಿಜ್ಯ ಒಪ್ಪಂದವನ್ನು ಪ್ರದರ್ಶನಕಾರರು ಕಟುವಾಗಿ ವಿರೋಧಿಸಿದ್ದು, ಅದನ್ನು  ತಕ್ಷಣ ಕೈಬಿಡಬೇಕೆಂದು ಆಗ್ರಹಿಸಿದ್ದಾರೆ.

(ಮುಂದುವರಿಯುವುದು)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)