varthabharthi


ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?

ಫೆಲೆಸ್ತೀನ್‌ನಲ್ಲಿ ನಡೆಯುತ್ತಿರುವುದೇನು?

ಇಸ್ರೇಲ್ ಮತ್ತು ಝಿಯೋನಿಝಮ್ ಬಗ್ಗೆ ಕ್ರೈಸ್ತರ ನಿಲುವೇನು?

ವಾರ್ತಾ ಭಾರತಿ : 26 May, 2021
ಎ.ಎಸ್. ಪುತ್ತಿಗೆ

ಭಾಗ -8 

► 5 ದಶಕಗಳ ಕಾಲ ಇಸ್ರೇಲ್‌ಗೆ ಕೆಥೊಲಿಕ್ ಪೋಪ್‌ರಿಂದ ಮಾನ್ಯತೆ ಸಿಕ್ಕಿರಲಿಲ್ಲ.

ಕೆಥೊಲಿಕ್ ಕ್ರೈಸ್ತ ಸಮುದಾಯ ಮತ್ತು ಇಸ್ರೇಲ್ ಸರಕಾರದ ನಡುವೆ ಈಗ ಎದ್ದು ಕಾಣುವ ಸ್ನೇಹ ಬಹಳ ಸ್ವಾಭಾವಿಕವಾಗಿ ಹುಟ್ಟಿದ್ದೇನೂ ಅಲ್ಲ. ನಾವು ನಿಮ್ಮ ಜೊತೆ ನಿಂತಿದ್ದೇವೆ ಎಂಬ ಚಂದದ ಬ್ಯಾನರ್‌ಗಳ ಹಿಂದೆ, ಹತ್ತಾರು ಶತಮಾನಗಳಷ್ಟು ದೀರ್ಘವಾದ ಒಂದು ರಕ್ತ ರಂಜಿತ ಇತಿಹಾಸ ಅಡಗಿದೆ. ಪೂರ್ವಗ್ರಹಗಳು, ವಿದ್ವೇಷ, ತೀವ್ರ ಉದ್ವಿಗ್ನತೆ, ಗುಂಪುಹತ್ಯೆ, ಬಹಿಷ್ಕಾರ, ದಿಗ್ಬಂಧನ, ಯುದ್ಧ ಮತ್ತು ಸಮೂಹ ಹತ್ಯೆಯ ಸಹಿತ ಹಲವು ಕರಾಳ ಮುಖ್ಯಾಂಶಗಳನ್ನೊಳಗೊಂಡ ಇತಿಹಾಸ ಅದು. ಆದ್ದರಿಂದಲೇ ಯಹೂದಿಗಳ ಮತ್ತು ಕ್ರೈಸ್ತರ ನಡುವೆ ಸ್ನೇಹ ಸ್ಥಾಪನೆ ಎಷ್ಟೇ ಅಪೇಕ್ಷಣೀಯವಾಗಿದ್ದರೂ, ಎರಡೂ ಕಡೆ ಅದನ್ನು ಬಯಸುವ ಸಜ್ಜನರು ಧಾರಾಳ ಸಂಖ್ಯೆಯಲ್ಲಿದ್ದರೂ, ಉಭಯ ಪಾಳಯಗಳಲ್ಲಿ ಅದರ ವಿರುದ್ಧ ಪ್ರಬಲ ಪ್ರತಿರೋಧವಿತ್ತು. ಇಸ್ರೇಲ್ ಸರಕಾರ ಮತ್ತು ‘ಹೋಲಿ ಸೀ’ ಅಥವಾ ಪೋಪರ ಕೇಂದ್ರವಾದ ವ್ಯಾಟಿಕನ್ ಸರಕಾರದ ಮಧ್ಯೆ ಸ್ನೇಹ ಸ್ಥಾಪನೆಯ ಹಾದಿಯಲ್ಲೂ ಅಂತಹದೇ ಅಡೆತಡೆಗಳಿದ್ದವು.

ಈ ಹಿನ್ನೆಲೆಯಲ್ಲಿ ಪ್ರಸ್ತಾಪಿಸಲೇಬೇಕಾದ ಒಂದು ಅಂಶವೇನೆಂದರೆ, ಇಸ್ರೇಲ್ ಸರಕಾರ ಅಸ್ತಿತ್ವಕ್ಕೆ ಬಂದು ಕನಿಷ್ಠ 50 ವರ್ಷಗಳ ತನಕ ಕೆಥೊಲಿಕ್ ಕ್ರೈಸ್ತರ ಕೇಂದ್ರವಾದ ವ್ಯಾಟಿಕನ್, ಇಸ್ರೇಲ್ ಸರಕಾರಕ್ಕೆ ಅಧಿಕೃತ ಮನ್ನಣೆಯನ್ನೇ ನೀಡಿರಲಿಲ್ಲ !

  ತನ್ನ ಬದ್ಧ ವೈರಿ ಎಂದು ಇಸ್ರೇಲ್ ಸರಕಾರವೇ ಘೋಷಿಸಿದ್ದ ಮತ್ತು ಒಂದು ಹಂತದಲ್ಲಿ ಇಸ್ರೇಲ್ ವಿರುದ್ಧ ಸಶಸ್ತ್ರ ಸಂಗ್ರಾಮದಲ್ಲೂ ನಿರತವಾಗಿದ್ದ ಯಾಸಿರ್ ಅರಫಾತ್ ಅವರ ನೇತೃತ್ವದ ಫೆಲೆಸ್ತೀನ್ ಲಿಬರೇಶನ್ ಆರ್ಗನೈಸೇಶನ್ (ಪಿಎಲ್.ಓ) 1993 ಸೆಪ್ಟಂಬರ್‌ನಲ್ಲಿ ಅಧಿಕೃತವಾಗಿ ಇಸ್ರೇಲ್ ಅನ್ನು ಒಂದು ಸರಕಾರವೆಂದು ಅಂಗೀಕರಿಸಿತ್ತು. ವ್ಯಾಟಿಕನ್ ಈ ಕೆಲಸವನ್ನು ಮಾಡಿದ್ದು ಇದಾಗಿ ಮೂರು ತಿಂಗಳ ಬಳಿಕ, ಅಂದರೆ 1993 ಡಿಸೆಂಬರ್ ಅಂತ್ಯದಲ್ಲಿ!

► ಯಹೂದ್ಯರ ಬಳಿ ಕ್ಷಮೆ ಯಾಚಿಸಿದ ವ್ಯಾಟಿಕನ್

ಇಸ್ರೇಲ್ ಮತ್ತು ವ್ಯಾಟಿಕನ್ ನಡುವಣ ಸಂಬಂಧಗಳನ್ನು ಸುಧಾರಿುವ ಪ್ರಕ್ರಿಯೆ ಸುಲಭದ್ದಾಗಿರಲಿಲ್ಲ.

‘‘ಯುರೋಪಿನಲ್ಲಿ ಕ್ರೈಸ್ತರೇ ಬಹುಸಂಖ್ಯಾತರಾಗಿದ್ದ ನಾಡುಗಳಲ್ಲಿ ನಾಝಿಗಳು 60 ಲಕ್ಷದಷ್ಟು ಯಹೂದಿಗಳ ಸಾಮೂಹಿಕ ಹತ್ಯಾಕಾಂಡ ನಡೆಸುತ್ತಿದ್ದಾಗ, ಕೆಥೊಲಿಕ್ ಕ್ರೈಸ್ತರ ಕೇಂದ್ರವಾದ ವ್ಯಾಟಿಕನ್ ಆಗಲಿ ಕೆಥೊಲಿಕರ ಪರಮೋಚ್ಚ ಧಾರ್ಮಿಕ ಮುಖ್ಯಸ್ಥರಾದ ಪೋಪ್ ಅವರಾಗಲಿ ಅದನ್ನು ತಡೆಯಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಮಾತ್ರವಲ್ಲ, ಅವರ ಸಹಾನುಭೂತಿ ಕೂಡಾ ಕಟುಕರ ಪರವಾಗಿತ್ತು.’’ ಎಂದು ಯಹೂದಿಗಳ ಒಂದು ಗುಂಪು ಬಹುಕಾಲದಿಂದ ದೂಷಿಸುತ್ತಾ ಬಂದಿದೆ. ಹಾಗೆಯೇ, ಈ ವಿಷಯದಲ್ಲಿ ವ್ಯಾಟಿಕನ್ ಕೇಂದ್ರವು ಯಹೂದಿ ಸಮಾಜದ ಬಳಿ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸುತ್ತಲೂ ಇದ್ದರು. ವಿಶೇಷವಾಗಿ 1939 ರಿಂದ 1958 ತನಕ ಪೋಪ್ ಹುದ್ದೆಯಲ್ಲಿದ್ದ ಪೋಪ್ ಪಯಸ್ - 12 ಅವರು ತಾಳಿದ್ದ ನಿಲುವಿನ ಬಗ್ಗೆ ಯಹೂದಿಗಳಿಗೆ ತೀವ್ರ ಆಕ್ಷೇಪವಿತ್ತು. ಈ ಕುರಿತು ಯಹೂದಿಗಳು ಮತ್ತು ಕೆಥೊಲಿಕರ ನಡುವೆ ವಿವಿಧ ವೇದಿಕೆಗಳಲ್ಲಿ ಮತ್ತು ಪರಸ್ಪರ ಅಧಿಕೃತ ಮಾತುಕತೆಗಳ ವೇಳೆ ಹಲವು ಬಾರಿ ಬಹಳ ಬಿಸಿ ಬಿಸಿಯಾದ ವಿನಿಮಯಗಳೂ ನಡೆದಿದ್ದವು. ಕೆಥೊಲಿಕ್ ಚರ್ಚು ಹೋಲೋಕಾಸ್ಟ್ ಸಂದರ್ಭದಲ್ಲಿ ತಾನು ತಳೆದ ನಿಲುವಿಗೆ ವಿವಿಧ ಬಗೆಯ ಸಮರ್ಥನೆಗಳನ್ನು ಮುಂದಿಡುತ್ತಲೂ ಬಂದಿತ್ತು.

1978 ರಿಂದ 2005ರ ತನಕ ಪೋಪ್ ಆಗಿದ್ದ ಜಾನ್ ಪಾಲ್ (ದ್ವಿತೀಯ) ಅವರ ನೇತೃತ್ವದ ಅವಧಿಯಲ್ಲಿ, ಅವರ ಪ್ರಾಮಾಣಿಕ ಶ್ರಮದಿಂದಾಗಿ, ಹಲವು ನಿರ್ಣಾಯಕ ಬದಲಾವಣೆಗಳು ಕಂಡು ಬಂದವು. ಯಹೂದಿಗಳನ್ನು ‘ನಮ್ಮ ಅಣ್ಣಂದಿರು’ ಎಂದು ಕರೆದ ಅವರು 1986ರಲ್ಲಿ ರೋಮ್‌ನಲ್ಲಿರುವ ಗ್ರೇಟ್ ಸಿನೆಗಾಗ್ ಅನ್ನು ಸಂದರ್ಶಿಸುವ ಮೂಲಕ ಆಧುನಿಕ ಕಾಲದಲ್ಲಿ ಯಹೂದಿಗಳ ಸಿನೆಗಾಗ್‌ಗೆ ಭೇಟಿ ನೀಡಿದ ಮೊದಲ ಪೋಪ್ ಎನಿಸಿದರು. 1979ರಲ್ಲಿ ಅವರು ಪೋಲೆಂಡ್‌ನಲ್ಲಿರುವ ಜರ್ಮನಿಯ ಪರಿತ್ಯಕ್ತ ಆಸ್ಚ್ ವಿಟ್ಜ್ (Auschwitz) ನಾಝಿ ಕ್ಯಾಂಪ್ ಗೆ ನೀಡಿದ ಭೇಟಿಯೂ ಒಂದು ಐತಿಹಾಸಿಕ ದಾಖಲೆ ಎನಿಸಿತು. ಅವರು 1990 ರಲ್ಲಿ ‘ಯಹೂದಿ ದ್ವೇಷ’ ಎಂಬುದು ದೇವರ ವಿರುದ್ಧ ಮತ್ತು ಮನುಕುಲದ ವಿರುದ್ಧ ಎಸಗುವ ಪಾಪ ಕೃತ್ಯ ಎಂದು ಘೋಷಿಸಿದರು.

1998 ಮಾರ್ಚ್ 16 ರಂದು ವ್ಯಾಟಿಕನ್‌ನಲ್ಲಿ ಜಗತ್ತಿನ ಸುಮಾರು ಶತಕೋಟಿ ಕೆಥೊಲಿಕ್ ಕ್ರೈಸ್ತರ ಧಾರ್ಮಿಕ ನಾಯಕ ಪೋಪ್ ಜಾನ್ ಪಾಲ್ (ದ್ವಿತೀಯ) ಅವರ ಪುಸ್ತಕವೊಂದು ಬಿಡುಗಡೆಗೊಂಡಿತು. ಅದರ ಮುನ್ನುಡಿ ಯಲ್ಲಿ ಪೋಪ್ ಅವರು, ಎರಡನೆಯ ಮಹಾಯುದ್ಧದ ವೇಳೆ ನಡೆದ ಯಹೂದಿಗಳ ನರಮೇಧವನ್ನು ತಡೆಯುವ ನಿಟ್ಟಿನಲ್ಲಿ ಕ್ರೈಸ್ತ ಚರ್ಚು ಯಾವುದೇ ನಿರ್ಣಾಯಕ ಕ್ರಮ ಕೈಗೊಳ್ಳದೇ ಇದ್ದ ಬಗ್ಗೆ ಖೇದ ಪ್ರಕಟಿಸಿದರು. ಕೆಥೊಲಿಕ್‌ಸಮಾಜದ ವೈಫಲ್ಯಗಳ ಕುರಿತಂತೆ ವ್ಯಾಟಿಕನ್ ಕಡೆಯಿಂದ ಈ ವಿಷಾದ ಪ್ರಕಟನೆಯು ಗತಕಾಲದ ಅಪಗ್ರಹಿಕೆ ಮತ್ತು ಅನ್ಯಾಯಗಳಿಂದ ಉಂಟಾದ ಗಾಯಗಳನ್ನು ಗುಣಪಡಿಸಬಹುದು ಎಂಬ ಆಶಾವಾದವನ್ನು ಅವರು ವ್ಯಕ್ತಪಡಿಸಿದರು. 2000 ಮಾರ್ಚ್‌ನಲ್ಲಿ, ರೋಮ್‌ನ ಸೈನ್ಟ್ ಪೀಟರ್ಸ್ ಬಾಸಿಲಿಕಾದಲ್ಲಿ ಭಾಷಣ ಮಾಡಿದ ಪೋಪರು ಮತ್ತೆ ಪರಮ ವಿನಯವನ್ನು ಪ್ರದರ್ಶಿಸಿದರು. ಕಳೆದ ಶತಮಾನಗಳಲ್ಲಿ ಮೆರೆದ ಪೈಪೋಟಿ ಮತ್ತು ವೈಷಮ್ಯವು ಮೂರನೇ ಸಹಸ್ರಮಾನದಲ್ಲಿ ತಲೆ ಎತ್ತದಂತೆ ನೋಡಿಕೊಳ್ಳುತ್ತೇವೆಂದು ನಾವು ಸಂಕಲ್ಪ ಮಾಡೋಣ ಎಂದು ಅವರು ಕರೆ ನೀಡಿದರು. ಪಾರ್ಕಿನ್ಸನ್ ವ್ಯಾಧಿಯಿಂದ ಬಳಲುತ್ತಿದ್ದರೂ, ಮಾತನಾಡಲು ಪ್ರಯಾಸ ವಾಗುತ್ತಿದ್ದರೂ ಉತ್ಸಾಹದಿಂದ ಮಾತನಾಡಿದ ಅವರು ‘‘ನಾವು ಕ್ಷಮಿಸುತ್ತೇವೆ ಮತ್ತು ಕ್ಷಮೆಯಾಚಿಸುತ್ತೇವೆ. ಕ್ರೈಸ್ತರೊಳಗೆ ಉಂಟಾದ ಒಡಕುಗಳಿಗಾಗಿ, ಸತ್ಯಪ್ರಸಾರದ ಮಾರ್ಗದಲ್ಲಿ ಕೆಲವರು ನಡೆಸಿದ ಹಿಂಸೆಗಳಿಗಾಗಿ ಮತ್ತು ಇತರ ಧರ್ಮಗಳ ಅನುಯಾಯಿಗಳ ವಿಷಯದಲ್ಲಿ ಅನುಸರಿಸಲಾದ ಅಪನಂಬಿಕೆ ಮತ್ತು ವಿದ್ವೇಷದ ಧೋರಣೆಗಾಗಿ ನಾವು ಕ್ಷಮೆ ಬೇಡುತ್ತೇವೆ’’ ಎಂದರು.

ಜಾಗತಿಕ ಜನಾಭಿಪ್ರಾಯ ರೂಪಿಸಲು ಫೆಲೆಸ್ತೀನ್ ಕ್ರೈಸ್ತರ ಶ್ರಮ

 2017ರಲ್ಲಿ ವರ್ಲ್ಡ್ ಕಮ್ಯುನಿಯನ್ ಆಫ್ ರಿಫಾರ್ಮ್ಡ್‌ಚರ್ಚಸ್ (WCRC) ಎಂಬ ಕ್ರೈಸ್ತರ ಜಾಗತಿಕ ಸಂಘಟನೆಯು ಪ್ರಕಟಿಸಿದ ಒಂದು ಹೇಳಿಕೆಯು ಬಹಳಷ್ಟು ಚರ್ಚಿತವಾಗಿತ್ತು. ಆ ಹೇಳಿಕೆ ಹೀಗಿತ್ತು: ಇಂದು ಫೆಲೆಸ್ತೀನ್‌ನಲ್ಲಿ ಮೆರೆಯುತ್ತಿರುವ ಅನ್ಯಾಯ, ಫೆಲೆಸ್ತೀನ್ ಜನತೆಯ ನರಳಿಕೆ ಮತ್ತು ಫೆಲೆಸ್ತೀನ್ ಕ್ರೈಸ್ತರ ಆಕ್ರಂದನ-ಇವುಗಳನ್ನೆಲ್ಲಾ ನಾವು ಕಡೆಗಣಿಸಿದರೆ, ಕ್ರೈಸ್ತ ಧರ್ಮದ ವಿಶ್ವಾಸಾರ್ಹತೆಯೇ ಪ್ರಶ್ನಾರ್ಹವಾಗಿ ಬಿಟ್ಟೀತು.

ಅವರ ಈ ಧೋರಣೆಯ ಬಗ್ಗೆ ಸ್ವತಃ ವ್ಯಾಟಿಕನ್‌ನ ಕೆಲವು ವಲಯಗಳಿಗೆ ಆಕ್ಷೇಪವಿತ್ತು. ಯಹೂದಿ ಸಮುದಾಯದಲ್ಲಿ ಹೆಚ್ಚಿನವರು ಅವರ ಮಾತುಗಳನ್ನು ಸ್ವಾಗತಿಸಿದರೂ ಹಲವರು ಎಲ್ಲರನ್ನು ಸಮಾಧಾನಪಡಿಸಲು ಅವರಿಗೆ ಸಾಧ್ಯವಾಗಲಿಲ್ಲ. ಆದರೆ ಅವರ ಮನೋವೈಶಾಲ್ಯವನ್ನು ಜಗತ್ತು ಹತ್ತಿರದಿಂದ ಕಂಡಿತು.

► ಇಸ್ರೇಲ್‌ನಲ್ಲಿ ಕ್ರೈಸ್ತರೆಷ್ಟು ಸ್ವತಂತ್ರರು?

ಸಾಮಾನ್ಯವಾಗಿ ಯಹೂದಿಗಳು ಇತರರನ್ನು ತಮ್ಮ ಧರ್ಮ ಸ್ವೀಕರಿಸಲು ಆಮಂತ್ರಿಸುವುದಿಲ್ಲ. ಹಾಗೆಯೇ ಇತರ ಯಾವುದಾದರೂ ಧರ್ಮದವರು ಯಹೂದಿಗಳನ್ನು ತಮ್ಮ ಧರ್ಮದೆಡೆಗೆ ಆಮಂತ್ರಿಸುವುದನ್ನು ಯಹೂದಿಗಳ ಒಂದು ದೊಡ್ಡ ಪಂಗಡ ಸಹಿಸುವುದಿಲ್ಲ. ಇಸ್ರೇಲ್‌ನಲ್ಲಿ ಯಹೂದಿ ಯುವಜನತೆಯ ನಡುವೆ ಧರ್ಮ ಪ್ರಚಾರ ಮಾಡಲು ಹೊರಟ ಸಂಸ್ಥೆಯೊಂದರ ಅನುಭವ ಇಲ್ಲಿದೆ:

 ಜಗತ್ತಿನೆಲ್ಲೆಡೆ ಜನರಿಗೆ ಕ್ರೈಸ್ತ ಧರ್ಮವನ್ನು ಪರಿಚಯಿಸುವುದಕ್ಕೆ ಮತ್ತು ಕ್ರೈಸ್ತ ಧರ್ಮದೆಡೆಗೆ ಜನರನ್ನು ಆಕರ್ಷಿಸುವುದಕ್ಕೆಂದೇ ಮೀಸಲಾಗಿರುವ ‘ಗಾಡ್ ಟಿವಿ’ ಎಂಬೊಂದು ಟಿವಿ ಜಾಲವಿದೆ. ಇಸ್ರೇಲ್‌ನ ಕಾನೂನು ಪ್ರಕಾರ ಅಲ್ಲಿ ಎಲ್ಲ ಧರ್ಮದವರಿಗೆ ಧರ್ಮಪ್ರಚಾರದ ಅಧಿಕಾರವಿದೆ. ಈ ಅಧಿಕಾರವನ್ನು ಬಳಸಿ ‘ಗಾಡ್ ಟಿವಿ’ಯವರು ಇಸ್ರೇಲ್‌ನಲ್ಲಿ ತಮ್ಮ ಕಾರ್ಯಕ್ರಮಗಳ ಪ್ರಸಾರ ಆರಂಭಿಸಿದರು. ಆರಂಭದಲ್ಲಿ ಅದಕ್ಕೆ ದೊಡ್ಡ ವಿರೋಧವೇನೂ ಪ್ರಕಟವಾಗಲಿಲ್ಲ. ಆದರೆ ಕಳೆದ ವರ್ಷ ಅವರು ‘ಶೆಲಾನು ಟಿವಿ’ ಎಂಬ ಹೆಸರಲ್ಲಿ ಹದಿಹರೆಯದವರಿಗಾಗಿ ಹಿಬ್ರೂ ಭಾಷೆಯಲ್ಲಿ ಒಂದು ಹೊಸ ಚಾನೆಲ್ ಆರಂಭಿಸಿದಾಗ ಸಮಸ್ಯೆಗಳು ತಲೆದೋರತೊಡಗಿದವು. ಹಲವು ವಲಯಗಳಿಂದ ವಿರೋಧ ಆರಂಭವಾಯಿತು.

2017 ರಲ್ಲಿ ಫೆಲೆಸ್ತೀನ್‌ನ ಕ್ರೈಸ್ತ ಸಂಘಟನೆಗಳ ಒಕ್ಕೂಟ (CCOP ) ವು ವರ್ಲ್ಡ್ ಕೌನ್ಸಿಲ್ ಆಫ್ ಚರ್ಚಸ್ (WCC) ಗೆ ಕಳಿಸಿದ ಒಂದು ತುರ್ತು ಸಂದೇಶ ಹೀಗಿತ್ತು: ‘‘ಕ್ರೈಸ್ತರೇ, ಇಲ್ಲಿನ ಸನ್ನಿವೇಶವು ವಿಷಮ ಸ್ಥಿತಿಗಿಂತಲೂ ಕೆಟ್ಟದಾಗಿದೆ. ನಾವು ದುರಂತಮಯ ಅಳಿವಿನ ಅಂಚಿನಲ್ಲಿದ್ದೇವೆ. ಇದು ಟೊಳ್ಳು ರಾಜತಾಂತ್ರಿಕ ಚಟುವಟಿಕೆಗಳ ಸಮಯ ಖಂಡಿತ ಅಲ್ಲ’’.

‘ಗಾಡ್ ಟಿವಿ’ ಯವರು ದೇಶದ ಕೇಬಲ್ ಮತ್ತು ಸ್ಯಾಟಲೈಟ್ ಪ್ರಸಾರ ಸಮಿತಿಗೆ ದೂರು ಸಲ್ಲಿಸಿದಾಗ ನೀವು ಪ್ರಸಾರ ಮಾಡುವ ಸಂದೇಶವು ಜನರ ಮೇಲೆ ಅನುಚಿತ ರೀತಿಯಲ್ಲಿ ಪ್ರಭಾವ ಬೀರುವ ಸಾಧ್ಯತೆ ಕಂಡರೆ ನಾವು ನಿಮ್ಮ ಚಾನೆಲ್ ಅನ್ನು ಮುಚ್ಚಬೇಕಾಗುತ್ತದೆ ಎಂಬ ಉತ್ತರ ಸಿಕ್ಕಿತು. ನಾವು ಅಧಿಕೃತ ಅನುಮತಿ ಪಡೆದು ಕಾನೂನು ಪ್ರಕಾರ ಈ ಚಾನೆಲ್ ಆರಂಭಿಸಿದ್ದೇವೆ ಎಂದು ಟಿವಿಯವರು ವಾದಿಸಿದಾಗ, ಈಗ ಕಾನೂನು ಬದಲಾಗಿದೆ ಎಂದು ಅವರ ಬಾಯಿ ಮುಚ್ಚಿಸಲಾಯಿತು. ಕೊನೆಗೆ ದೇಶದ ಸಂವಹನ ಸಚಿವ ಡೇವಿಡ್ ಆಮ್ ಸಾಲೆಮ್ ಅವರ ಬಳಿಗೆ ದೂರು ಸಲ್ಲಿಸಿದಾಗ ಅವರು ‘‘ನೀವು ನಿಯಮ ಉಲ್ಲಂಸಿದ್ದು ಖಚಿತವಾದರೆ ನಿಮ್ಮ ಚಾನೆಲ್ ಅನ್ನು ಮುಚ್ಚಲೇ ಬೇಕಾಗುತ್ತದೆ’’ ಎಂದರು.

ನೆತನ್ಯಾಹು ಸಚಿವ ಸಂಪುಟದ ಸದಸ್ಯರಾಗಿರುವ ಆಮ್ ಸಾಲೆಮ್‌ರೊಡನೆ ಮಾಧ್ಯಮದವರು ಈ ಕುರಿತು ಪ್ರಶ್ನಿಸಿದಾಗ ಅವರ ಪ್ರತಿಕ್ರಿಯೆ ಹೀಗಿತ್ತು:

 ‘‘ಧರ್ಮ ಪ್ರಚಾರ ಮಾಡುವ ಯಾವುದೇ ಚಾನೆಲ್ ಅನ್ನು ಯಾವುದೇ ಸನ್ನಿವೇಶದಲ್ಲಿ ಇಸ್ರೇಲ್ ನೊಳಗೆ ಕಾರ್ಯ ನಿರ್ವಹಿಸಲು ನಾವು ಅನುಮತಿಸುವಂತಿಲ್ಲ’’.

(ಮುಂದುವರಿಯುದು)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)