varthabharthi


ಅನುಗಾಲ

ಬೆಕೆಟ್ ಕುರಿತ ಎರಡು ನಾಟಕಗಳ ಸಮೀಕ್ಷೆ

ರಾಜಕಾರಣ ಮತ್ತು ಧರ್ಮಗಳ ನಡುವೆ

ವಾರ್ತಾ ಭಾರತಿ : 27 May, 2021
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಸಾಹಿತ್ಯವು ಜನಜೀವನದ ಗತಿಬಿಂಬವೂ ಹೌದು; ಪ್ರತಿಬಿಂಬವೂ ಹೌದು. ಅದು ಬದುಕನ್ನು, ಜಗತ್ತನ್ನು ಅಸಂಗತವಾಗಿ ನೋಡುವ ಸಾಧ್ಯತೆಯನ್ನು ಹೊಂದಿರುವುದರಿಂದಲೇ ಅದು ಕಾಲಬಾಧಿತವಲ್ಲ. ದುರಾಡಳಿತವನ್ನು ಪ್ರತಿರೋಧಿಸಿ ವಿಜೇತರಾದ ಮೇಲೂ ಮತ್ತೆ ಅಂತಹದೇ ದುರಾಡಳಿತ ಬಂದಿದೆ. ಏಕೆಂದರೆ ಜನರಿಗೆ ಶೀಘ್ರ ಮರೆವು, ವಿಸ್ಮತಿ ಸದಾ ಕಾಡುತ್ತಿರುತ್ತದೆ. ಅದನ್ನು ಮೀರಿ ಮುಂದುವರಿದರೆ ಅದು ಕಾಲೋಚಿತ ಪುಣ್ಯ.


ಆಳುವವರಲ್ಲಿ ಇರುವುದು ಒಂದೇ ಕಾನೂನು: ಯಾವ ಮೂಲದಿಂದಾಗಲೀ, ಯಾರ ಮೂಲಕವಾಗಲೀ ಅಧಿಕಾರವನ್ನು ಹಿಡಿಯುವುದು ಮತ್ತು ಅದನ್ನು ಯಾವ ರೀತಿಯಿಂದಲಾದರೂ ಉಳಿಸಿಕೊಳ್ಳುವುದು. ಈ ತಂತ್ರವು ರಾಜಪ್ರಭುತ್ವದಲ್ಲೂ ಅದನ್ನು ಅಳಿಸಿದ್ದೇವೆಂದುಕೊಂಡು ಜನತೆ ಸ್ಥಾಪಿಸಿದ ಇಂದಿನ ಪ್ರಜಾಪ್ರಭುತ್ವದಲ್ಲೂ ಇದೆ. ತಲೆಮಾರಿನಿಂದ ತಲೆಮಾರಿಗೆ ಚರಿತ್ರೆ ಮರುಕಳಿಸುತ್ತದೆಯೆಂಬುದನ್ನು ಬಿಟ್ಟರೆ ಮನುಷ್ಯರು ಇತರರ ಅನುಭವದಿಂದಲಾಗಲೀ, ಪುರಾಣ-ಇತಿಹಾಸದಿಂದಾಗಲೀ ಏನನ್ನೂ ಕಲಿಯುವುದಿಲ್ಲ. ರಾಜಧರ್ಮವನ್ನನುಸರಿಸದ ಅಧಿಕಾರವನ್ನು ಎದುರಿಸಿದವರು, ವಿರೋಧಿಸಿದವರು, ಪ್ರತಿಭಟಿಸಿದವರು ಎಷ್ಟೇ ಶ್ರೇಷ್ಠರಿರಲಿ, ಜ್ಞಾನಿಗಳಾಗಿರಲಿ ಅವರ ಅರಿವಾಗಲೀ ವೇದಾಂತವಾಗಲೀ ಪ್ರಭುತ್ವವನ್ನು ಮಣಿಸಿದ್ದು ಅಪರೂಪ. ದುರಂತವನ್ನು ಕಂಡದ್ದೇ ಹೆಚ್ಚು. ಕ್ರಾಂತಿಗಳು ಯಶಸ್ಸನ್ನು ಪಡೆದಿದ್ದರೆ ಅದಕ್ಕೆ ಜನರ ಮನಸ್ಸು ತತ್ಕಾಲಕ್ಕಾದರೂ ಉದ್ದೇಶಿತ ಒಳಿತಿನತ್ತ ಹರಿದದ್ದೇ ಕಾರಣ. ಕೈತಪ್ಪಿಂದ ಅಥವಾ ಬಾಯ್ತಪ್ಪಿನಿಂದ ಪ್ರಭುತ್ವವು ಏನನ್ನಾದರೂ ಹೇಳಿದರೆ ಅವರು ಅದನ್ನು ಹಿಂದಕ್ಕೆ ಪಡೆಯುವ ಮೊದಲೇ ಅದು ಅವರ ಅಂಧ ಮತ್ತು ಶ್ರದ್ಧಾವಂತ ಭಕ್ತರ, ಅನುಯಾಯಿಗಳ ಮೂಲಕ ಅನುಷ್ಠಾನಕ್ಕೆ ಬಂದು ಸರಿಪಡಿಸಲಾಗದ ಸಾಕಷ್ಟು ಹಿಂಸೆ, ದಮನ ನಡೆದಿರುವುದೂ ಇದೆ. ಸನ್ನೆಯನರಿತ ಸಖರೇ ಪ್ರಭುತ್ವದ ರಕ್ಷಕರು ಎಂಬುದನ್ನು ಸಿನೆಮಾಗಳಲ್ಲಿ ಖಳನಾಯಕನ ಸನ್ನೆಯ ಮೇಲೆ ಆತನ ಗೂಂಡಾ ಪಡೆ ಹರಿಹಾದು ಹಿಂಸಿಸುವುದರಲ್ಲಿ ನೋಡಬಹುದು.

ವ್ಯಂಗ್ಯಾರ್ಥದಲ್ಲಿ ಪ್ರಭುಸಂಹಿತೆ ಎಂದರೆ ಇದೇ ಇರಬಹುದು. ರಾಜಕಾರಣದ, ಅಧಿಕಾರದ ವಿರುದ್ಧ ಲೋಕಹಿತದ ಮತಧರ್ಮವಾಗಲೀ, ಮನುಷ್ಯಧರ್ಮವಾಗಲೀ ನಿರಂತರವಾಗಿ ಹೋರಾಡುತ್ತ ಬಂದಿದೆ. ಕರ್ನಾಟಕದಲ್ಲೂ 12ನೇ ಶತಮಾನವು ಧರ್ಮ ಮತ್ತು ರಾಜಶಕ್ತಿಯ ನಡುವಣ ಸಂಘರ್ಷವನ್ನು ಕಂಡಿತ್ತೆಂಬುದು ಬಸವಣ್ಣನ ಇತಿಹಾಸವನ್ನು ಗಮನಿಸಿದರೆ ಅರಿವಾಗಬಹುದು. ಇಂದಿರಾಗಾಂಧಿ ಹೇರಿದ ತುರ್ತುಸ್ಥಿತಿಯ ವಿರುದ್ಧ ಜೆಪಿ ಚಳವಳಿ ಇದೇ ಸ್ವರೂಪದ್ದು. ವಾಜಪೇಯಿ ಪ್ರಧಾನಿಯಾಗಿದ್ದಾಗ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಮೋದಿಗೆ ರಾಜಧರ್ಮವನ್ನು ಹೇಳಬೇಕಾಯಿತು. ಆದರೂ ಪ್ರಸ್ತುತ ಭಾರತದ ಸ್ಥಿತಿ ಇದಕ್ಕೆ ಭಿನ್ನವಾಗಿಲ್ಲ ಮತ್ತು ತುರ್ತಾಗಿ ಪರಿಹರಿಸಬೇಕಾದ ಜರೂರನ್ನು ತಲುಪಿದೆ. ಸಾಹಿತ್ಯವು ಜನಜೀವನದ ಗತಿಬಿಂಬವೂ ಹೌದು; ಪ್ರತಿಬಿಂಬವೂ ಹೌದು. ಅದು ಬದುಕನ್ನು, ಜಗತ್ತನ್ನು ಅಸಂಗತವಾಗಿ ನೋಡುವ ಸಾಧ್ಯತೆಯನ್ನು ಹೊಂದಿರುವುದರಿಂದಲೇ ಅದು ಕಾಲಬಾಧಿತವಲ್ಲ. ದುರಾಡಳಿತವನ್ನು ಪ್ರತಿರೋಧಿಸಿ ವಿಜೇತರಾದ ಮೇಲೂ ಮತ್ತೆ ಅಂತಹದೇ ದುರಾಡಳಿತ ಬಂದಿದೆ. ಏಕೆಂದರೆ ಜನರಿಗೆ ಶೀಘ್ರ ಮರೆವು, ವಿಸ್ಮತಿ ಸದಾ ಕಾಡುತ್ತಿರುತ್ತದೆ. ಅದನ್ನು ಮೀರಿ ಮುಂದುವರಿದರೆ ಅದು ಕಾಲೋಚಿತ ಪುಣ್ಯ.

ಪ್ರಭುತ್ವ ಮತ್ತು ಧರ್ಮಾಧಿಕಾರದ ನಡುವಿನ ಜಟಾಪಟಿಯ ಕುರಿತ ಇಂತಹ ಒಂದು ದೃಷ್ಟಾಂತ 12ನೇ ಶತಮಾನದ ಉತ್ತರಾರ್ಧದಲ್ಲಿ ಇಂಗ್ಲೆಂಡಿನಲ್ಲಿ ನಡೆಯಿತು. 2ನೆಯ ಹೆನ್ರಿ ಇಂಗ್ಲೆಂಡಿನ ದೊರೆಯಾಗಿದ್ದಾಗ ಆತನ ಆಪ್ತ ಸ್ನೇಹಿತ ಮತ್ತು ಅಪಾರ ತಿಳಿವಳಿಕೆಯ ದಕ್ಷ ಸಹಾಯಕನಾಗಿದ್ದವನು ಥಾಮಸ್ ಬೆಕೆಟ್ (ಕ್ರಿ.ಶ.1118-1170). ಹೆನ್ರಿ ಸ್ವಲ್ಪಮಸ್ತಿ-ಮೋಜಿನ ದೊರೆ. ರಾಜಬೊಕ್ಕಸಕ್ಕೆ ಚರ್ಚಿನಿಂದ ನೀಡುವ ಕರ/ಕಪ್ಪಸಾಲದೆಂಬುದು ಆತನ ಆಗ್ರಹ. ಇದರಲ್ಲಿ ದೊರೆಗೆ ಅನುಕೂಲವಾಗುವ ರೀತಿಯಲ್ಲಿ ಜನರನ್ನೊಲಿಸಿಕೊಂಡು ದುಡಿದ ಬೆಕೆಟ್‌ನನ್ನು 1155ರಲ್ಲಿ ಕ್ಯಾಂಟರ್‌ಬರಿಯ ಕುಲಪತಿಯಾಗಿ ನೇಮಿಸಲಾಗುತ್ತದೆ. ಬೆಕೆಟ್ ತುಸು ಹಿಂಜರಿದರೂ ರಾಜಭಕ್ತಿಯಿಂದಷ್ಟೇ ಅದನ್ನು ಒಪ್ಪಿಕೊಳ್ಳುತ್ತಾನೆ. 1162ರಲ್ಲಿ ಬೆಕೆಟ್‌ನನ್ನು ಕ್ಯಾಂಟರ್‌ಬರಿಯ ಆರ್ಚ್‌ಬಿಷಪ್ ಆಗಿ ನೇಮಿಸಲಾಗುತ್ತದೆ. ಬೆಕೆಟ್ ತನ್ನ ಕುಲಪತಿ ಸ್ಥಾನವನ್ನು (ಪ್ರಾಯಃ ದೊರೆಯ ಇಚ್ಛೆಗೆ ವಿರುದ್ಧವಾಗಿ) ತ್ಯಜಿಸುತ್ತಾನೆ. ಆರ್ಚ್‌ಬಿಷಪ್ ಬೆಕೆಟ್, ಹೆನ್ರಿಯ ಸಾಮ್ರಾಜ್ಯಕ್ಕಿಂತ ದೇವರ ಸಾಮ್ರಾಜ್ಯ ದೊಡ್ಡದು ಎಂಬ ಧೋರಣೆ ತಾಳಿ ದೊರೆಯ ಸೂಚನೆಗಳನ್ನು ಸೌಮ್ಯವಾಗಿಯೇ ತಳ್ಳಿಹಾಕುತ್ತಾನೆ. ಒತ್ತಡ ಹೆಚ್ಚಿದಾಗ ಅನಿವಾರ್ಯವಾಗಿ ಧಿಕ್ಕರಿಸುತ್ತಾನೆ. ದೊರೆಯ ಆಗ್ರಹಕ್ಕೆ ತುತ್ತಾಗಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ದೇಶವನ್ನು ತ್ಯಜಿಸಿ ಫ್ರೆಂಚ್ ದೊರೆಯ ಆಶ್ರಯ ಪಡೆಯುತ್ತಾನೆ. ಏಳು ವರ್ಷ ಕಳೆದು ಪೋಪರ ಮೂಲಕ ರಾಜಿಸಂಧಾನ ನಡೆದು 1170ರ ಕೊನೆಗೆ ತವರಿಗೆ ಮರಳಿದಾಗ ದೊರೆಯ ಸೈನಿಕರು ಬೆಕೆಟ್‌ನನ್ನು ಕ್ಯಾಂಟರ್‌ಬರಿಯ ಚರ್ಚಿನಲ್ಲಿ ಕೊಲೆಮಾಡುತ್ತಾರೆ. ಅದಾದ ಮರುವರ್ಷ ಚರ್ಚ್ ಬೆಕೆಟ್‌ನಿಗೆ ಸಂತ ಪದವಿ ಕೊಟ್ಟು ಗೌರವಿಸುತ್ತದೆ.

 ಇತಿಹಾಸದ ಎಳೆಯನ್ನು ಹಿಡಿದು ಸಾಹಿತ್ಯ ನಿರ್ಮಾಣವಾಗುವುದು ಸಹಜವೇ. ಬೆಕೆಟ್‌ನ ಸಮಕಾಲೀನ ಮತ್ತು ಬೆಕೆಟ್‌ನ ಹತ್ಯೆಯನ್ನು ಪ್ರತ್ಯಕ್ಷವಾಗಿ ನೋಡಿದ ಎಡ್ವರ್ಡ್ ಗ್ರಿಮ್ ಎಂಬವನು ಬರೆದಿಟ್ಟ ಐತಿಹ್ಯದ ಆಧಾರದಲ್ಲಿ 20ನೇ ಶತಮಾನದ ಪ್ರಸಿದ್ಧ ಕವಿ, ನಾಟಕಕಾರ ಮತ್ತು ವಿಮರ್ಶಕ ಟಿ.ಎಸ್.ಎಲಿಯಟ್ 1935ರಲ್ಲಿ ‘ಮರ್ಡರ್ ಇನ್ ದ ಕೆಥಡ್ರಲ್’(ಪ್ರಾರ್ಥನಾ ಮಂದಿರದಲ್ಲಿ ಹತ್ಯೆ) ಎಂಬ ಕಾವ್ಯನಾಟಕವನ್ನು ಬರೆದ. ಈ ನಾಟಕ ಬೆಕೆಟ್ ತನ್ನ ಗಡೀಪಾರಿನ ಆನಂತರ ಏಳು ವರ್ಷಗಳ ಬಳಿಕ ಇಂಗ್ಲೆಂಡಿಗೆ ಮರಳಿದಾಗ ಆತನ ಹತ್ಯೆಯಾಗುವುದನ್ನು ಚಿತ್ರಿಸಿದೆ. ಈ ನಾಟಕವನ್ನು ಕ್ಯಾಂಟರ್‌ಬರಿ ಉತ್ಸವಕ್ಕಾಗಿ ಚರ್ಚಿನ ಬೇಡಿಕೆ ಮೇರೆಗೆ ಎಲಿಯಟ್ ಬರೆದಿದ್ದ. (ಈ ರೀತಿಯ ಬೇಡಿಕೆಗನುಗುಣವಾಗಿ ಇತರರೂ ನಾಟಕಗಳನ್ನು ಬರೆದ ನಿದರ್ಶನಗಳಿವೆ. 1997ರಲ್ಲಿ ಭಾರತದ ಸ್ವಾತಂತ್ರ್ಯೋತ್ಸವದ ಸುವರ್ಣಮಹೋತ್ಸವದಂದು ಬಿತ್ತರಿಸುವುದಕ್ಕಾಗಿ ಬಿಬಿಸಿಯ ಕೋರಿಕೆ ಮೇರೆಗೆ ಗಿರೀಶ್ ಕಾರ್ನಾಡ್ ‘ಟಿಪೂ ಸುಲ್ತಾನ ಕಂಡ ಕನಸು’ ನಾಟಕವನ್ನು ಇಂಗ್ಲಿಷಿನಲ್ಲಿ ಬರೆದು ಆನಂತರ ಕನ್ನಡಕ್ಕೆ ಭಾಷಾಂತರಿಸಿದರು.) ದುರಂತ ನಾಟಕದಲ್ಲಿ ಸ್ವಲ್ಪ ವೇದಾಂತವಿದೆ.

ಚರ್ಚು ಕೆಲವು ನಿಯಮಗಳನ್ನು ಹೇರಿತ್ತೆಂದು ಎಲಿಯಟ್ ಹೇಳಿಕೊಂಡಿದ್ದಾನೆ. ಜೊತೆಗೇ ಅಸಂಗತವಲ್ಲದಿದ್ದರೂ ಎಪಿಕ್ ರಂಗಕಲ್ಪನೆಗನುಗುಣವಾಗಿ ವಿಚಾರಗಳ ಕರ್ಷಣವಿದೆ. ವಿಶೇಷವೆಂದರೆ ಬೆಕೆಟ್‌ನ ಜೀವನ ಮತ್ತು ಇತಿಹಾಸದಲ್ಲಿ ಬಹುಮುಖ್ಯ ನಾಯಕ/ಪ್ರತಿನಾಯಕ ಪಾತ್ರವಾಗಿದ್ದ ಹೆನ್ರಿ ಇಲ್ಲಿ ಪಾತ್ರವಾಗಿ ಬರುವುದೇ ಇಲ್ಲ. ಇಡೀ ನಾಟಕವು ಬೆಕೆಟ್‌ನ ಹತ್ಯೆಯಾಗುವ ಒಂದು ದಿನದ ಕಥಾವಸ್ತುವನ್ನು ರಂಗದಲ್ಲಿನ ಅಭಿನಯಕ್ಕಾಗಿ ಒಗ್ಗಿಸಿಕೊಂಡಿದೆ. 1935ರಲ್ಲಿ ಮೊದಲ ಆವೃತ್ತಿಯಲ್ಲಿ ಈ ನಾಟಕದ ಮೊದಲ ಅಂಕದಲ್ಲಿ ಪಾದ್ರಿಗಳ ಸಂಭಾಷಣೆಯಿದ್ದರೆ ಮರುವರ್ಷವೇ ಪ್ರಕಟವಾದ ಎರಡನೆಯ ಆವೃತ್ತಿಯಲ್ಲಿ ಅದರ ಬದಲಿಗೆ ಮಹಿಳೆಯರ ಮೇಳದ ಪೀಠಿಕೆಯನ್ನು ಸೇರಿಸಿಕೊಳ್ಳಲಾಗಿದೆ. ನಾಟಕದ ಆರಂಭದಿಂದ ಅಂತ್ಯದವರೆಗೆ ದುರಾಡಳಿತದ ಕುರಿತ ಸಿಟ್ಟು ಮತ್ತು ನೋವು ವ್ಯಕ್ತವಾಗುತ್ತದೆ. ಸ್ವಗತವಾಡುವ ಮಹಿಳೆಯರು ದುರಂತದ ಛಾಯೆಯನ್ನು ಮನಗಂಡವರಂತೆ ಮಾತನಾಡುತ್ತಾರೆ. ಬೆಕೆಟ್ ದಕ್ಷ ಮತ್ತು ದಯಾಪರನೆಂಬ ಮೆಚ್ಚುಗೆಯಿದೆ. ಬೆಕೆಟ್‌ನ ಘನತೆಯನ್ನು ಸ್ತುತಿಸುವುದರೊಂದಿಗೆ ತಾವೆಲ್ಲ ಶೋಷಣೆಯನ್ನು ಅನುಭವಿಸಿದ್ದೇವೆ, ತಮಗಿನ್ನು ಅಪಾಯವೆಂಬುದಿಲ್ಲ, ಈಗ ತಮಗೆ ಏನಿದ್ದರೂ ಮುಂದಿನ ದುರಂತಕ್ಕೆ ಸಾಕ್ಷಿಯಾಗುವುದಷ್ಟೇ ವಿಧಿ ಎನ್ನುತ್ತಾರೆ.

ಹೆನ್ರಿಯ ಅಧಿಕಾರ ಶಕ್ತಿ ಮತ್ತು ಬೆಕೆಟ್‌ನ ಸಜ್ಜನಿಕೆಯ ನಡುವೆ ‘‘ಸುತ್ತಿಗೆ ಮತ್ತು ಬಡಿಗಲ್ಲಿನ ನಡುವೆ ಪುಡಿಯಾಗುವುದು ಯಾರು?’’ ಎಂಬ ಸಾರ್ವಕಾಲಿಕ ಮಾರ್ಮಿಕ ಪ್ರಶ್ನೆಯಿದೆ. ಆವರೆಗಿನ ಘಟನೆಗಳನ್ನು ನಾಟಕದಲ್ಲಿ ಸೂಚ್ಯವಾಗಿ ಹೇಳುತ್ತ ‘‘ಎಲ್ಲ ಸಂಗತಿಗಳೂ ಸೇರಿ ಒಂದು ಘಟನೆಯನ್ನು ನಿರ್ಮಿಸುತ್ತವೆ’’ ಎಂಬ ಮಾತಿದೆ. ದೊರೆಗಳು ತಮ್ಮ ಹೊರತು ಇನ್ಯಾರ ಹಕ್ಕನ್ನೂ ಮನ್ನಿಸುವುದಿಲ್ಲವೆಂದು ಹೇಳುವ ಮೂಲಕ ಬೆಕೆಟ್‌ನ ಹಕ್ಕು ಚ್ಯುತಿಯಾಗುವುದನ್ನು ನಾಟಕದಲ್ಲಿ ಆತನ ಸಾವಿಗೆ ಮೊದಲೇ ಧ್ವನಿಸಲಾಗಿದೆ. ದೊರೆಯನ್ನು ಆತನ ಆನಂತರ ಇನ್ನೊಬ್ಬ ಬಂದಾಗ ಮರೆಯುತ್ತೇವೆ, ಆದರೆ ಸಜ್ಜನಿಕೆಯನ್ನು ಜನ ಮತ್ತು ಇತಿಹಾಸ ಮರೆಯುವುದಿಲ್ಲವೆಂಬ ಸಂದೇಶ ವ್ಯಾಖ್ಯೆಯಿದೆ. ಮನುಷ್ಯ ಅಮೂರ್ತದಿಂದ ಅಮೂರ್ತಕ್ಕೆ ಪಯಣಿಸುವುದೇ ಈ ಬದುಕು ಎಂಬುದರ ಜೊತೆಗೆ ಇಲ್ಲಿ ಎಷ್ಟು ಕಿರಿಯರಾಗಿರುತ್ತೇವೋ ಪರಲೋಕದಲ್ಲಿ ಹಿರಿಯರಾಗಿರುತ್ತೇವೆ; ಯಾರು ಸಮಾಜಕ್ಕೆ ವಿರೋಧಿಯೋ ಆತ ತನಗೇ ವಿರೋಧಿಯಾಗಿರುತ್ತಾನೆ ಎಂಬ ತಾತ್ವಿಕತೆಯೂ ಇದೆ. ಪಾದ್ರಿಗಳು ಬೆಕೆಟ್‌ನನ್ನು ಸುರಕ್ಷಿತ ತಾಣಕ್ಕೆ ಕರೆದೊಯ್ದು ಚರ್ಚಿನ ಮುಂಬಾಗಿಲುಗಳನ್ನು ಮುಚ್ಚಿದಾಗ ಬೆಕೆಟ್ ಚರ್ಚ್ ಕೋಟೆಯಲ್ಲ.

ಅದರ ಬಾಗಿಲು ತೆರೆದಿರಬೇಕು ಎನ್ನುತ್ತಾನೆ. ಅದನ್ನು ತೆರೆಸಿ ಸಾವಿಗೆ ಸಿದ್ಧನಾಗುತ್ತಾನೆ. ಆ ಹೊತ್ತಿಗೆ ಬೆಕೆಟ್ ‘‘ನಾನು ಅಪಾಯದಲ್ಲಿಲ್ಲ; ಸಾವಿನ ಸನಿಹದಲ್ಲಿದ್ದೇನೆ ಅಷ್ಟೇ’’ ಎಂಬ ಭರವಸೆಯನ್ನು ತೋರಿಸುತ್ತಾನೆ. ಬೆಕೆಟ್‌ನನ್ನು ನಾಲ್ವರು ಸೈನಿಕರು ತಾವು ದೊರೆಯ ಸೇವೆ ಮಾಡುತ್ತಿದ್ದೇವೆಂಬ ನಿಲುವಿನೊಂದಿಗೆ ಇರಿದು ಕೊಲ್ಲುತ್ತಾರೆ. ಆದರೆ ಕೊನೆಗೆ ಅವರು ಪ್ರೇಕ್ಷಕರಲ್ಲಿ ತಮ್ಮನ್ನು ತಾವು ದೊರೆಯ ಸೇವೆ ಮಾಡಿದ್ದೇವೆಯೇ ಹೊರತು ಬೆಕೆಟ್‌ನ ಸಾವಿನಲ್ಲಿ ಯಾವ ಆಸಕ್ತಿಯೂ ಇರಲಿಲ್ಲವೆಂದು ಸಮರ್ಥಿಸಿಕೊಳ್ಳುವ ನಿವೇದನೆಯನ್ನು ಗಮನಿಸಿದರೆ ಅವರಿಗೆ ತಮ್ಮ ಪಾಪಕೃತ್ಯದ ಅರಿವಿದೆಯೆಂಬುದು ಗೊತ್ತಾಗುತ್ತದೆ. ಹಂತಕ ಸೈನಿಕರು ಪ್ರೇಕ್ಷಕರೊಂದಿಗೆ ವೈಚಾರಿಕ ಚರ್ಚೆ ನಡೆಸಿ ಅವರು ನಾಟಕದ ತನ್ಮಯತೆಯಿಂದ ಹೊರಬರುವಂತೆ ಮತ್ತು ನಾಟಕದ ವಿಚಾರಗಳ ಸಾಧಕಬಾಧಕಗಳನ್ನು ಚರ್ಚಿಸಲು ಅವಕಾಶ ಮತ್ತು ವಾತಾವರಣವನ್ನು ನಿರ್ಮಿಸುವುದರೊಂದಿಗೆ ಎಪಿಕ್ ರಂಗಭೂಮಿಯ ಧೋರಣೆಯನ್ನೂ ಅಭಿವ್ಯಕ್ತಿಸುತ್ತದೆ. ಈ ನಾಟಕವು ಎಲಿಯಟ್‌ನ ಇತರ ಸಾಹಿತ್ಯ ಕೃತಿಗಳ ಮಟ್ಟದಲ್ಲಿ ಇಲ್ಲವಾದರೂ ಒಂದು ಪ್ರಮುಖ ನಾಟಕವಾಗಿದೆ.

ಒಂದೆೇ ಕಥಾವಸ್ತು ಒಂದಕ್ಕಿಂತ ಹೆಚ್ಚು ಕೃತಿಗಳಿಗೆ ದಾರಿಯಾಗುವುದು ಹೊಸತೇನಲ್ಲ. (ಕನ್ನಡದಲ್ಲೇ ಹಲವರು ಒಂದೇ ಕಥಾವಸ್ತುವನ್ನಾಧರಿಸಿದ ನಾಟಕಗಳನ್ನು ರಚಿಸಿದ್ದಾರೆ: ಕಾರ್ನಾಡರ ‘ತಲೆದಂಡ’, ಲಂಕೇಶರ ‘ನಾನೇ ಬಿಜ್ಜಳ’, ಶಿವಪ್ರಕಾಶ್ ಅವರ ‘ಮಹಾಚೈತ್ರ’ ಇವು ಬಸವಣ್ಣನ ಕಲ್ಯಾಣಕ್ರಾಂತಿಯ ಕುರಿತ ನಾಟಕಗಳಾದರೆ ಕಾರ್ನಾಡರ ‘ನಾಗಮಂಡಲ’, ಕಂಬಾರರ ‘ಸಿರಿಸಂಪಿಗೆ’ ಇವು ಜಾನಪದ ಕಥೆಯೊಂದನ್ನು ರಂಗಕ್ಕೆ ತಂದಿವೆ; ಕಾರ್ನಾಡರ ‘ಟಿಪೂ ಸುಲ್ತಾನ ಕಂಡ ಕನಸು’, ಶಿವಪ್ರಕಾಶರ ‘ಸುಲ್ತಾನ್ ಟಿಪ್ಪೂ’ ಹೀಗೆಯೇ ಪ್ರಕಟವಾಗಿವೆ. ಇವಲ್ಲದೆ ಇನ್ನೂ ಬೇರೆ ನಾಟಕಗಳಿರಬಹುದು.) ಎಲಿಯಟ್ ಬರೆದಾದ ಎರಡೂವರೆ ದಶಕಗಳ ಆನಂತರ 1959ರಲ್ಲಿ ಫ್ರೆಂಚ್ ನಾಟಕಕಾರ ರೆನ್ವಿ ‘ಬೆಕೆಟ್’ ಎಂಬ ನಾಟಕವನ್ನು ಬರೆದ. ಇದೂ ರಂಗಭೂಮಿಗಾಗಿಯೇ ರಚಿತವಾದದ್ದು. ಇಲ್ಲಿಯೂ ಜೀವನದ ದಾರ್ಶನಿಕ ನೋಟ ಸಿಗುತ್ತದೆ ಮಾತ್ರವಲ್ಲ, ಅಧಿಕಾರದ ನಿರಂಕುಶತೆಯು ತನ್ನ ಮದೋನ್ಮತ್ತ ಛಾಯೆಯನ್ನು ಬೀರುವುದರ ಮೂಲಕ ಸಮಾಜದ ಒಳ್ಳೆಯ ಮೌಲ್ಯಗಳನ್ನು ನಾಶಮಾಡುತ್ತದೆಯೆಂಬ ಸೂಚನೆಯನ್ನು ಪರಿಣಾಮಕಾರಿಯಾಗಿ ನೀಡುತ್ತದೆ. (ಬೆಕೆಟ್‌ನ್ನು ಎ.ಎನ್.ಪ್ರಸನ್ನ 2001ರಲ್ಲಿ ಕನ್ನಡಿಸಿದ್ದಾರೆ.)

ನಾಟಕದ ಆರಂಭಕ್ಕೇ ಬೆಕೆಟ್ ಸತ್ತು ಹೋಗಿದ್ದಾನೆ. ದೊರೆ ಪಶ್ಚಾತ್ತಾಪದಿಂದ ತನ್ನನ್ನು ಥಳಿಸಿಕೊಳ್ಳುತ್ತಾನೆ. ಆನಂತರದ ದೃಶ್ಯದಲ್ಲಿ ದೊರೆಯ ಹಗುರು ಜೀವನ, ಅವನಿಗೂ ಬೆಕೆಟ್‌ಗೂ ಇದ್ದ ಆಪ್ತತೆ, ಆನಂತರ ಬೆಕೆಟ್ ಆತನ ದುರಾಗ್ರಹಕ್ಕೆ ಪಾತ್ರವಾಗುವುದು ಮತ್ತು ಕೊನೆಗೆ ಧರ್ಮಾಧಿಕಾರವನ್ನು ರಾಜಕೀಯ ಅಧಿಕಾರವು ವಿವೇಚನಾರಹಿತವಾಗಿ ಕ್ರೂರವಾಗಿ ಮಣಿಸುವುದು ವಿವರಿಸಲ್ಪಟ್ಟಿದೆ. ‘‘ದಿಗ್ವಿಜಯಗಳಿಂದ ಏನು ಪ್ರಯೋಜನ, ಯೋಚಿಸುವುದನ್ನು ಬಿಟ್ಟ ಮೇಲೆ?’’ ಎಂಬ ಪ್ರಶ್ನೆ ಇಂದಿಗೂ ನಮ್ಮ ನಾಯಕರಿಗೆ ಪ್ರಸ್ತುತ. ಅಧಿಕಾರದಲ್ಲಿರುವವರು ಚಿಂತಕರ ಕುರಿತು ಹೇಗೆ ಯೋಚಿಸುತ್ತಾರೆಂಬ ಬಗ್ಗೆ ನಾಟಕದಲ್ಲಿ ಈ ಮಾತು ಬರುತ್ತದೆ: (ಆರ್ಚ್‌ಬಿಷಪ್) ‘‘ಸದಾ ಕಾಲ ಯೋಚನೆ ಮಾಡುವ ವ್ಯಕ್ತಿ. ಕೆಲವು ಸಲ ಪಕ್ಕದಲ್ಲಿ ಅವನು ಯೋಚಿಸುತ್ತಿರುವುದನ್ನು ನೋಡಿದರೆ ನನಗೆ ಸಂಕೋಚವಾಗುತ್ತೆ’’ ಎನ್ನುತ್ತಾನೆ ದೊರೆ ಹೆನ್ರಿ. ಈ ಸಂಕೋಚವೇ ಈರ್ಷೆಗೆ ಕಾರಣವಾಗುತ್ತದೆ. ನಮ್ಮಲ್ಲಿ ಪ್ರತಿಭಾವಂತರನ್ನು ಸರಕಾರ ಸದೆಬಡಿಯುವುದು ಈ ಕಾರಣಕ್ಕೇ. ನಿರಂಕುಶ ಪ್ರಭುವೊಬ್ಬ ತನ್ನ ಪ್ರಜೆಗಳ ಬಗ್ಗೆ ಹೇಗೆ ಯೋಚಿಸುತ್ತಾನೆಂಬುದನ್ನು ಹೇಳುವ ಮಾತುಗಳಿವು: ‘‘ನಾನು ಅರಮನೆಯಿಂದ ಹೊರಗೆ ಕಾಲಿಟ್ಟ ಮರುಕ್ಷಣದಲ್ಲಿ ನನಗೆ ಸಿಗುವ ಮೂಕರ ಸಂಖ್ಯೆ ನೋಡಿದರೆ, ತಮಾಷೆ ಅನ್ನಿಸುತ್ತೆ.

ನಾನು ಮೂಕರ ಸಾಮ್ರಾಜ್ಯ ಆಳ್ತಿದ್ದೇನೆ ಇದು ಯಾಕೆ ಅಂತ ಹೇಳ್ತೀಯ?’’ ‘‘ಅವರಿಗೆ ಹೆದರಿಕೆ ಪ್ರಭು.’’ ‘‘ನನಗೆ ಗೊತ್ತು. ಅದು ಒಳ್ಳೆಯದೇ. ಜನರು ಹೆದರಿಕೆಯಿಂದ ಬದುಕಬೇಕು. ಅದು ಅಗತ್ಯ.’’ ಮುಂದುವರಿದು ‘‘ಅವನನ್ನು ನೋಡು. ನಾಲಗೆ ಕಟ್ಟಿಹೋಗಿದೆ. ಇಡೀ ದೇಶ ಅವನ ಜೊತೆ ತೆವಳುತ್ತಾ ಇದೆ.’’ ದೊರೆ ‘‘ಸುಖಾಂತ ನನ್ನನ್ನು ದುಃಖಿತನನ್ನಾಗಿ ಮಾಡುತ್ತೆ..’’ ಎನ್ನುತ್ತಾನೆ. ಕೆಟ್ಟ ದೊರೆಯ ಕುರಿತು ‘‘ಪ್ರಭುಗಳು ಕಳೆಯಂತೆ ಹುಟ್ಟಿಕೊಳ್ಳುತ್ತಾರೆ.’’ ಇಂದಿನ ಪೊಲೀಸರನ್ನು ನೆನಪಿಸುವ ಹಾಗೆ ಬೆಕೆಟ್ ‘‘ನಮ್ಮ ಪೊಲೀಸಿನವರು ಗಾಬರಿಯಾಗಿದ್ದರು. ಅವರಿಗೆ ಎಲ್ಲೆಂದರಲ್ಲಿ ಕೊಲೆಪಾತಕರು ಕಾಣಿಸುತ್ತಾರೆ. ತಾವು ಮುಖ್ಯ ಅಂತ ತೋರಿಸಿಕೊಳ್ಳುವುದಕ್ಕೆ ಅವರು ಹಾಗೆ ಮಾಡುತ್ತಾರೆ.’’ ಎನ್ನುತ್ತಾನೆ. ಇಂದಿನ ರಾಜಕಾರಣಿಗಳ, ಶಾಸಕರ ಭ್ರಷ್ಟ ವ್ಯವಸ್ಥೆಯನ್ನು ಚುಚ್ಚುವ ಹಾಗೆ ‘‘ಮಾರಾಟಕ್ಕಿರುವವರನ್ನು ಮಾತ್ರ ಕೊಳ್ಳಲಿಕ್ಕೆ ಸಾಧ್ಯ’’ ಎನ್ನುತ್ತಾನೆ. ‘‘ತುಂಬಾ ಒಳ್ಳೆಯ ಆಲೋಚನೆಗಳೆಂದರೆ ಹುಚ್ಚು ಆಲೋಚನೆಗಳು. ಆದರೆ ಬುದ್ಧಿವಂತಿಕೆ ಅಂದರೆ ಅವುಗಳನ್ನು ಕುರಿತು ಯೋಚಿಸುವುದು.’’ ಇಡೀ ನಾಟಕ ಈ ಸಂಘರ್ಷದ ಸ್ಥಿತಿಯನ್ನು ಅವಲೋಕಿಸುತ್ತದೆ. ನಾಟಕಗಳು ನೆಪ. ಜನತೆ ತಮ್ಮ ಆಯ್ಕೆಯ ಅಂತಿಮ ಪರಿಣಾಮ ಭೀಕರವಾಗುವುದರ ಹೊಣೆ ಮತ್ತು ಪಾಪವನ್ನು ತಾವು ಹೊರಬೇಕಾಗುತ್ತದೆಂಬ ವಿವೇಚನೆ ಬಂದರೆ ಮಾತ್ರ ಒಳಿತಾದೀತು. ಕಲೆ-ಸಾಹಿತ್ಯದ ಅಂತಿಮ ಗುರಿ ಇದೇ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)