varthabharthi


ಅನುಗಾಲ

ಅಸಂಗತ-ಅಸಂಬದ್ಧಗಳ ಭವಿಷ್ಯ

ವಾರ್ತಾ ಭಾರತಿ : 3 Jun, 2021
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಇತಿಹಾಸದಲ್ಲಿ ಅಧಿಕಾರದ ಭದ್ರತೆಯ ಬಗ್ಗೆ ಆತಂಕವಿರುವ ಸರ್ವಾಧಿಕಾರಿಗಳು ಹೇಗೆ ವ್ಯವಹರಿಸಿದರೋ ಹಾಗೆಯೇ ಇಂದು ಭಾರತದ ಪ್ರಧಾನಿ ಮತ್ತವರ ಅಂಧಭಕ್ತರು ವ್ಯವಹರಿಸುತ್ತಿದ್ದಾರೆ. ಆದರೂ ಅವರಿಗಿರುವ ಭರವಸೆಯೆಂದರೆ ವಿರೋಧ ಪಕ್ಷದವರು ಒಗ್ಗಟ್ಟಾಗಿಲ್ಲ ಮತ್ತು ಒಬ್ಬ ಸಮರ್ಥ ನಾಯಕನನ್ನು ಕೊಡುವಲ್ಲಿ ಶಕ್ತವಾಗಿಲ್ಲ, ತಮ್ಮಾಳಗೆ ಕ್ಷುಲ್ಲಕ ಜಗಳಗಳನ್ನು, ನಾಯಕತ್ವವನ್ನು ಬಿಟ್ಟುಕೊಡಲು ಸಿದ್ಧವಿಲ್ಲದ ಅಹಂಭಾವವನ್ನು ತೊರೆಯುತ್ತಿಲ್ಲ. ರಾಷ್ಟ್ರೀಯವಾದ ಪರ್ಯಾಯವೊಂದು ಇನ್ನೂ ನೆಲೆಕಂಡುಕೊಂಡಿಲ್ಲ.


2020ರ ವರ್ಷಾಂತ್ಯಕ್ಕೆ ಸ್ವಲ್ಪ ತಿಳಿಯಾದ ಕೋವಿಡ್-19ರ ಪ್ರಕೋಪ ಮತ್ತೆ ಮುಂದುವರಿದಿದೆ. ಮೊದಲ ಅಲೆ ತೀರಿತೆಂದು (ತಪ್ಪು) ತಿಳಿದು ಸಮಾಧಾನದ ಉಸಿರೆಳೆದುಕೊಳ್ಳುತ್ತಿರುವಾಗಲೇ ಎರಡನೆಯ ಅಲೆಯು ಅಪ್ಪಳಿಸಿದೆ. ಕೆಲವು ತಿಂಗಳುಗಳಿಂದ ಕರ್ನಾಟಕದಲ್ಲೂ ಗಾಬರಿ ಹುಟ್ಟಿಸುವಷ್ಟು ಬೆಳೆದಿದೆ. ಪ್ರಾಯಃ ಕಳೆದ ಒಂದೂವರೆ ವರ್ಷದಿಂದ ಏನು ಬರೆದರೂ ಅದು ಕೋವಿಡ್-19ರಲ್ಲಿ ಆರಂಭವಾಗಬೇಕು, ಇಲ್ಲವೇ ಮುಗಿಯಬೇಕು ಎಂಬಂತೆ ಪರಿಸ್ಥಿತಿಯಿದೆ. ಹೊಟ್ಟೆಗಿಲ್ಲದವರ ಪಾಡು ಇನ್ನೂ ನಿಕೃಷ್ಟ. ಹಸಿವಿನ ಬೆಂಕಿ; ಚಿಂತೆಯ ಬೆಂಕಿ; ಚಿತೆಯ ಬೆಂಕಿ. ಸಾವು-ನೋವು. ಕಿಸಾಗೌತಮಿ ಸಾಸಿವೆಯನ್ನು ಹುಡುಕಲು ಹೊರಡುವಂತೆಯೇ ಇಲ್ಲ. ಯಾವ ಮನೆಯಲ್ಲೂ ತೂತಿಲ್ಲದ ದೋಸೆಯಿಲ್ಲ. ಸೂಫಿ ಕವಿ ಶೇಕ್ ಫರೀದ್ ಹೇಳಿದಂತೆ ‘‘ನಾನು ಮಾತ್ರ ನೊಂದೆ ಎಂದುಕೊಂಡಿದ್ದೆ, ಫರೀದ್/ ಆದರೆ ಈ ಲೋಕ ನನಗಿಂತ ಕಷ್ಟದಲ್ಲಿದೆ/ಸುತ್ತ ಹತ್ತಿ ನೋಡಿದೆ/ ಎಲ್ಲ ಮನೆಯೊಳಗೂ ಅದೇ ಸಂಕಟದ ಬೆಂಕಿ/ಉರಿಯುತ್ತಿದೆ.’’ ಆತ್ಮ ನಿರ್ಭರತೆಯ ಬದಲಿಗೆ ಆತ್ಮಹತ್ಯಾ ನಿರ್ಭರತೆಗೆ ದೇಶದ ಅನೇಕರು ತಲುಪಿದ್ದಾರೆ. ಕೋಟಿಗಟ್ಟಲೆ ಬಡವರು ಇನ್ನೂ ಬಡತನಕ್ಕೆ ತಳ್ಳಲ್ಪಟ್ಟರೆ, ಲಕ್ಷಲಕ್ಷ ಮಧ್ಯಮವರ್ಗದವರು ಬಡತನಕ್ಕೆ ಜಾರಿದ್ದಾರೆ. ಇವನ್ನು ಈ ಬಾರಿಯ ಎರಡನೆಯ ಅಲೆಯಲ್ಲಿ ಯಾವ ಕನ್ನಡಕವೂ ಇಲ್ಲದೆ ಗುರುತಿಸಬಹುದು. ಆದರೆ 18 ದಿನದ ಕೌರವ ಮಾತ್ರ ಇನ್ನೂ ಗದೆಯನ್ನು ಹಿಡಿದು ಹೆಣದ ಬಣವೆಯ ಮೇಲೆ ನಡೆಯುತ್ತಲೇ ಇದ್ದಾನೆ. ‘ಗಂಗೆಯಲಿ ತೇಲಿ ಬಂದನು ಕರ್ಣ ರಾಧೇಯ..’ ಎಂಬುದು ಹಳತಾಯಿತು. ‘ಈಗೇನಿದ್ದರೂ ಬತ್ತಲಾರದ ಗಂಗೆ’ ‘ಶವಗಳ ಹೊತ್ತು ಅಲೆಯುವ ಗಂಗೆ’!

ಇದರ ಪದಾಘಾತದಿಂದ ಪಾರಾಗುವುದು ಹೇಗೆ ಎಂದು ವರ್ತಮಾನವು ಚಿಂತಿಸುತ್ತಿರಬೇಕಾದರೆ ಮೂರನೆಯ ಅಲೆಯನ್ನು ನಿರೀಕ್ಷಿಸಲಾಗಿದೆ. ಅದಿನ್ನು ಹೇಗಿರಬಹುದೋ ಗೊತ್ತಿಲ್ಲ. ಈ ಅಲೆಗಳ ಮೂಲ ಸಮುದ್ರದಲ್ಲಿ ಇನ್ನೇನೇನು ಅಡಗಿದೆಯೋ ಭವಿಷ್ಯವೇ ಹೇಳಬೇಕು. ಅಂಕಿ-ಅಂಶಗಳ ಗಣಕಕಾರರು ಮನೆಮನೆಗಳಲ್ಲಿ ಒಳಗೂ ಹೊರಗೂ ಉರಿಯುವ ಬೆಂಕಿಯನ್ನು ಅಷ್ಟಾಗಿ ಗಮನಿಸುವುದಿಲ್ಲ. ಮಸಣದ ಮನೆಯಲ್ಲಿ ತನ್ನ ಪಾಡಿಗೆ ತಾನು ಹಾಡುತ್ತ, ಕುಣಿಯುತ್ತ ಕೂರುವ ಉನ್ಮತ್ತ ಉಲ್ಲಾಸರೂ ಇರುತ್ತಾರೆ; ದಿನವೂ ಸಾಯುವವರಿಗೆ ಅಳುವವರು ಯಾರು ಎಂಬಂತಹ ಮಂದಿಯೂ ಇರುತ್ತಾರೆ. ಅಂತಹವರನ್ನು ಬಿಟ್ಟು ಸಮಾಜದ ಆರೋಗ್ಯಭಾಗವೆಂದು ನಾವು ಗುರುತಿಸುವ ಮಂದಿ ಸಹಜವಾಗಿಯೇ ವ್ಯಾಕುಲರಾಗಿದ್ದಾರೆ.

ಸುಮಾರು 140 ಕೋಟಿ ಸಮೀಪಿಸಿದ ಭಾರತದ ಜನಸಂಖ್ಯೆಯಲ್ಲಿ ಒಂದಷ್ಟು ಜನರು ಅಳಿದರೆ ಆಡಳಿತಕ್ಕೆ ಏನೂ ಆಗುವುದಿಲ್ಲ; ಆದ್ದರಿಂದ ಚಿಂತೆಯಿಲ್ಲ. ಅಳಿದವರು ಮತದಾರರಲ್ಲದಿದ್ದರಂತೂ ಕಳೆದುಕೊಳ್ಳುವುದೇನೂ ಇಲ್ಲ. ತಮ್ಮ ಅಧಿಕಾರಾವಧಿಯನ್ನು ಉಳಿಸಿಕೊಳ್ಳುವ ಮತ್ತು ಇನ್ನೊಂದು ಚುನಾವಣೆಯಲ್ಲಿ ಗೆಲ್ಲುವ ಅವಕಾಶದ ಲೆಕ್ಕ ಹಾಕುವುದೇ ತಮ್ಮ ಆದ್ಯ ಕರ್ತವ್ಯ ಎಂಬ ಹಾಗೆ ಸರಕಾರಗಳು (ಕೇಂದ್ರ ಮತ್ತು ರಾಜ್ಯ) ವರ್ತಿಸುತ್ತಿವೆ. ಕೇಂದ್ರಕ್ಕೆ ಹೋಲಿಸಿದರೆ ರಾಜ್ಯವೇ ವಾಸಿ ಎಂದು ಕಾಣಿಸುತ್ತಿದೆ. ಪ್ರಧಾನಿ ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವ ಮತ್ತು ಹೊಣೆಯಿಂದ ಜಾರಿಕೊಳ್ಳುವ ಸತತ ಇಂದ್ರಜಾಲದಲ್ಲೇ ಇದ್ದಾರೆ. ದೇಶ-ವಿದೇಶಗಳಲ್ಲಿ ಬೆನ್ನು ಮತ್ತು ಎದೆತಟ್ಟಿಕೊಳ್ಳಲು ಭಾರೀ ವ್ಯವಸ್ಥೆಯನ್ನು ಮಾಡಲಾಗಿದೆ. ಜಗತ್ತಿನ ಯಾವುದೇ ಸಂಸ್ಥೆಯು ಭಾರತದ ಸಾಧನೆಯ ವೈಫಲ್ಯಗಳನ್ನು ಟೀಕಿಸಿದರೆ ಅದೆಲ್ಲವೂ ಸಾರಾ ಸಗಟು ಸುಳ್ಳು ಎಂದು ಹೇಳುತ್ತ ಸುತ್ತುವುದೇ ನಮ್ಮ ವಿದೇಶಾಂಗ ಸಚಿವರ ಕಾಯಕವಾಗಿದೆ. ಅವರ ಸಮರ್ಥನೆಗೆ ಯವುದೇ ಅಂಕಿ-ಅಂಶಗಳ ಬೆಂಬಲವಿಲ್ಲದಿದ್ದರೂ ಯಾವುದಾದರೊಂದು ಭಿನ್ನತೆಯನ್ನು ಹೇಳಿ ಅದಕ್ಕಾಗಿ ಭಾರತವನ್ನು ಟೀಕಿಸುತ್ತಿದ್ದಾರೆಂಬ ಸಂದೇಶವನ್ನು ಬಿತ್ತರಿಸುತ್ತಿದ್ದಾರೆ. ವಿದೇಶದಲ್ಲಿ ಇಂತಹ ಅಗ್ಗದ ಸ್ವಪ್ರತಿಷ್ಠೆಯ ಸುಳ್ಳುಗಳನ್ನು ನಂಬುವುದಿಲ್ಲವಾದರೂ ಭಾರತದಲ್ಲಿ ಬಹಳಷ್ಟು ಜನರು ನಂಬುತ್ತಿದ್ದಾರೆ. ಎಲ್ಲರನ್ನೂ ಎಲ್ಲ ಕಾಲದಲ್ಲೂ ಮೋಸಮಾಡಬಲ್ಲ ಪ್ರಜಾಪ್ರಭುತ್ವ ದೇಶವೆಂದರೆ ಭಾರತ ಮಾತ್ರವಿರಬಹುದು.

ಕಳೆದ ಬಾರಿ ಪ್ರಧಾನಿಯೇ ಖುದ್ದಾಗಿ ಲಾಕ್‌ಡೌನ್ ಘೋಷಿಸಿದಾಗ ಅದು ತೀರ ತಾತ್ಕಾಲಿಕ ಕ್ರಮವೆಂದು ಭಾವಿಸಲಾಗಿತ್ತು. ಅದರ ವಿಸ್ತರಣೆಯ ಸಂದರ್ಭದಲ್ಲಿ ಪ್ರಧಾನಿ ಟಿವಿ ಪರದೆಯ ಮೇಲೆ ಬರುವುದರಿಂದ ನುಣುಚಿಕೊಂಡು ಇತರರಿಂದ ಅದನ್ನು ಘೋಷಿಸಿದರು. ನಿಯಮಿತ ಆದಾಯವಿಲ್ಲದ, ಅಂದರೆ ಸರಕಾರಿ ಮತ್ತು ಇತರ ಸಾರ್ವಜನಿಕ ವಲಯದ ಉದ್ಯೋಗಿಗಳ ಹಾಗೂ ಪಿಂಚಣಿದಾರರನ್ನು ಹೊರತುಪಡಿಸಿ ಇತರರ (ಜನಪ್ರತಿನಿಧಿಗಳಿಗೆ ದೇಶಸೇವೆಯ ಸಂಬಳ, ಸವಲತ್ತು, ಪಿಂಚಣಿ ಯಥಾಪ್ರಕಾರ ಮುಂದುವರಿಯಿತು!) ಹಣಕಾಸು ಸ್ಥಿತಿ ಅಯೋಮಯವಾಗುತ್ತದೆಂದು ಆಡಳಿತದ ಕೆಲವರಿಗಾದರೂ ಅರ್ಥವಾದಾಗ ಸಾಲ ಮರುಪಾವತಿಯನ್ನು ವಿಸ್ತರಿಸಲಾಯಿತು. ಪ್ರಧಾನಿಯವರ ‘ಮನ್ ಕೀ ಬಾತ್’ ಮಾಸಿಕ ಮನರಂಜನೆಯಾಗಿ ಮುಂದುವರಿಯಿತು. ಇದರ ಜೊತೆಗೆ 20 ಲಕ್ಷ ಕೋಟಿಯೆಂಬ ಬಿಸಿಲ್ಗುದುರೆಯ ಪ್ರಕಟನೆಯನ್ನು ಮಾಡಿ ಮೋದಿ ಪುನೀತರಾದರು. ಜನರು ಈ ಮೊತ್ತದಲ್ಲಿರುವ ಶೂನ್ಯಗಳನ್ನು ಲೆಕ್ಕಹಾಕುವುದರಲ್ಲೇ ತೊಡಗಿದರು. ಅದರ ನಿರ್ವಹಣೆಯಾಗಲೀ, ಫಲಶ್ರುತಿಯಾಗಲೀ ಅವರ ಜವಾಬ್ದಾರಿಯಾಗಿರಲಿಲ್ಲ. ಅದಕ್ಕವರು ವಿವರಣೆಯನ್ನೂ ನೀಡಿರಲಿಲ್ಲ. ಅದೊಂದು ಅಂಕಿ-ಅಂಶಗಳ ಭಾರೀ ಮೋಸವೆಂದು ಮತ್ತು ಅದಾಗಲೇ ಹಿಂದಿನ ಆಯವ್ಯಯ ಪತ್ರದಲ್ಲಿ ನೀಡಲಾದ ಮತ್ತು ಪ್ರಕಟಿಸಲಾದ ಮೊತ್ತವನ್ನೂ ಒಳಗೊಂಡಿದ್ದು ಫಲಾನುಭವಿಗಳಿಗೆ ಇದು ತಲುಪುವ ಉದ್ದೇಶವನ್ನೇ ಹೊಂದಿರಲಿಲ್ಲವೆಂಬುದು ಜನರಿಗೆ ಗೊತ್ತಾಗುವಾಗ ತೀರ ತಡವಾಗಿತ್ತು. ಆದರೂ ಬಹುಪಾಲು ಜನರು ಮೋದಿಯವರಿಂದ ತಪ್ಪಾಗುವುದು ಸಾಧ್ಯವೇ ಇಲ್ಲವೆಂಬಂತೆ ಪ್ರತಿಕ್ರಿಯಿಸಿದರೆ, ಉಳಿದವರು ತಾಳ್ಮೆಯ ಪ್ರತಿರೂಪದಂತೆ ವರ್ತಿಸಿದ್ದಾರೆ.

ಪ್ರತಿಭಟಿಸಬಲ್ಲವರು, ಬುದ್ಧಿವಂತರೆಂದು ಗುರುತಿಸಿಕೊಂಡವರಲ್ಲಿ ಹೆಚ್ಚಿನವರು ಭಯಭೀತರಾಗಿಯೋ ಸಮಯಸಾಧನೆಗಾಗಿಯೋ ಸುಮ್ಮನಿದ್ದಾರೆ. ಕೆಲವೇ ಕೆಲವರು ತಮ್ಮ ಧ್ವನಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಇವರ ಸಂಖ್ಯೆ ದೇಶದ ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ಅಲಕ್ಷಿಸಬಹುದಾದಷ್ಟೇ ಇದೆಯೆನ್ನುವುದು ಆಡಳಿತಕ್ಕೆ ಅನುಕೂಲವಾದ ಅಂಶ. ಈ ಬಾರಿ ಪ್ರಧಾನಿ ಟಿವಿ ಪರದೆಯ ಮೇಲೆ ಬಂದು ರಾಷ್ಟ್ರೀಯ ಲಾಕ್‌ಡೌನ್ ಘೋಷಿಸಲಿಲ್ಲ. ಆಯಾಯ ರಾಜ್ಯಗಳಿಗೆ ಈ ಹೊಣೆಯನ್ನು ಹೊರಿಸಿದರು. (ಇದು ಬಿಟ್ಟುಕೊಟ್ಟದ್ದಲ್ಲ. ತಾನೇ ಘೋಷಿಸಿದರೆ ಇದರ ದುರಂತ ಪರಿಣಾಮಗಳಿಗೆ ತಾನು ಹೆಗಲು ಕೊಡಬೇಕಾಗುತ್ತದೆಯೆಂಬ ಅಥವಾ ಅನೇಕ ರಾಜ್ಯಗಳಲ್ಲೀಗ ಬಿಜೆಪಿಯೇತರ ಸರಕಾರಗಳಿವೆಯೆಂಬ ಕಾರಣಕ್ಕೋ ಇರಬಹುದು.) ಇದು ಮೂರು ಅನುಕೂಲಗಳನ್ನು ಹೊಂದಿತ್ತು: ಮೊದಲನೆಯದು, ಇದೀಗ ಕೋವಿಡ್-19ನ್ನು ರಾಷ್ಟ್ರೀಯ ದುರಂತವೆಂದು ಯಾರೂ ಟೀಕಿಸುವಂತಿಲ್ಲ; ಎರಡನೆಯದು, ರಾಷ್ಟ್ರೀಯವಾಗಿ ಕೇಂದ್ರ ಸರಕಾರವು ಪರಿಹಾರದ ಯಾವ ಹೆಜ್ಜೆಯನ್ನೂ ಘೋಷಿಸಬೇಕಾದ್ದಿಲ್ಲ ಮತ್ತು ಮೂರನೆಯದು, ಆಯಾಯ ರಾಜ್ಯಗಳು ತಮಗೆ ಬೇಕಾದಂತೆ ಅಧಿಕಾರಮೂಲವಾಗಿ ವರ್ತಿಸಲು ಅವಕಾಶವನ್ನು ಪಡೆದವು. ಆದರೆ ತನಗನುಕೂಲವಾದಂತೆ ಸಲಹೆಗಳನ್ನು ಕೊಡಲು ಕೇಂದ್ರ ಸರಕಾರ ಅಧಿಕಾರವನ್ನು ಉಳಿಸಿಕೊಂಡಿತು. ಇದರಿಂದಾಗಿ ಹಕ್ಕಷ್ಟೇ ಉಳಿದು ಕರ್ತವ್ಯದಿಂದ ಕೇಂದ್ರ ಸರಕಾರವು ವಿಮುಖವಾಯಿತು. ಇದೀಗ ಕೇಂದ್ರ ಸರಕಾರವು ರಾಜ್ಯಗಳಿಗೆ ಈಗಿರುವ ಲಾಕ್‌ಡೌನನ್ನು ಜೂನ್ 30ರ ವರೆಗೆ ವಿಸ್ತರಿಸಲು ಸಲಹೆ ಮಾಡಿದೆ. ಇದನ್ನು ರಾಜ್ಯ ಸರಕಾರಗಳು ಅನುಸರಿಸುತ್ತವೆಯೇ ಮತ್ತು ದುರಂತಮಯ ಪರಿಣಾಮಗಳಿಲ್ಲದೆ ಅನುಸರಿಸಲು ಸಾಧ್ಯವೇ ಎಂಬುದನ್ನು ಯೋಚಿಸಬೇಕಾಗಿದೆ.

ದೇಶಕ್ಕೆ ಒಳ್ಳೆಯ ರಾಜ ಬಂದಾಗ ಅಲ್ಲಿ ಸುಖ, ಸುಭಿಕ್ಷೆ ನೆಲೆಮಾಡುತ್ತದೆ. ಆನುವಂಶಿಕತೆಯೇ ಸ್ಥಾನಕ್ಕೆ ಅಧಾರವಾಗಿದ್ದ ಕಾಲದಲ್ಲಿ ಋತುಮಾನದ ಹಾಗೆ ಒಳ್ಳೆಯದೂ ಕೆಟ್ಟದ್ದೂ ಒಂದಾದ ಮೇಲೊಂದರಂತೆ ಒದಗಿಬರುತ್ತಿತ್ತು. ಕೆಟ್ಟ ಕಾಲದಲ್ಲಿ ಬದುಕಿದವರು, ಸತ್ತವರು ದುರದೃಷ್ಟಶಾಲಿಗಳು. ಅದೃಷ್ಟವಿದ್ದವರಿಗೆ ಒಳ್ಳೆಯ ಕಾಲ ಸಿಗುತ್ತದೆ. ಇವೆಲ್ಲ ತರ್ಕಬಾಧಿತವಲ್ಲ. ಆದರೂ ಇವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕೆಂಬ ಆಸೆಯಿಂದ ಮನುಷ್ಯ ಸಾಮಾಜಿಕ ಚೌಕಟ್ಟನ್ನು ಬದಲಾಯಿಸಿದ. ಆದರೆ ಇಲ್ಲೂ ಸಮಾಜದ ಹೆಚ್ಚು ಮಂದಿ ಮೌಢ್ಯಕ್ಕೆ ತುತ್ತಾದಾಗ ಅದರ ಫಲವನ್ನು ಉಳಿದವರೂ ಉಣ್ಣಬೇಕು. ಇದು ಲೋಕ ನಿಯಮ. ಪ್ರಸ್ತುತ ದೇಶದ ಜನರ ಅಭಿಮತ ವಿಚಿತ್ರವಾಗಿದೆ. ಇಷ್ಟೊಂದು ಒದ್ದಾಟ, ತೊಳಲಾಟವಿದ್ದರೂ ದ್ವೇಷದ ರಾಜಕೀಯವನ್ನು ಮಾಡುವುದನ್ನು, ಸುಳ್ಳು ಅಂಕಿ-ಅಂಶಗಳನ್ನು ಸರಕಾರ ಬಿಟ್ಟಿಲ್ಲ. ಎರಡನೆಯ ಅಲೆಯಿದ್ದಾಗಲೇ ಕೆಲವು ರಾಜ್ಯಗಳ ಚುನಾವಣೆ ನಡೆಯಿತು. ಕೋವಿಡ್-19ನ್ನು ಪೂರ್ಣ ಮರೆತು ಈ ಚುನಾವಣಾ ಪ್ರಚಾರ ನಡೆಯಿತು. ಕುಂಭಮೇಳ ಯಥಾಪ್ರಕಾರ ನಡೆಯಿತು. ಪರಿಣಾಮವಾಗಿ ಕೋವಿಡ್-19 ಇನ್ನಷ್ಟು ದೈತ್ಯಾಕಾರದಲ್ಲಿ ಆವರಿಸಿತು. ಈಗಷ್ಟೇ ನಡೆದ ಒಂದು ಸಮೀಕ್ಷೆಯಲ್ಲಿ ಮೋದಿಯ ಜನಪ್ರಿಯತೆ ಹಿಂದಿನಷ್ಟಿಲ್ಲವಾದರೂ ಅವರೇ ಇನ್ನೂ ದೇಶದ ಅತ್ಯಂತ ಜನಪ್ರಿಯ ನಾಯಕರಾಗಿ ಮುಂದುವರಿದಿದ್ದಾರೆ. ಈ ನಷ್ಟವೂ ಕೋವಿಡ್-19ರ ನಿರ್ವಹಣೆಯಿಂದ ಆಗಿದೆಯೇ ಹೊರತು ದ್ವೇಷ ರಾಜಕಾರಣದ ಕಾರಣದಿಂದ ಆಗಿಲ್ಲವೆಂಬುದೂ ನಮ್ಮ ಜನರ ಸಂಸ್ಕಾರವನ್ನು ಹೇಳುತ್ತದೆ. 55-66 ಶೇಕಡಾ ಜನರು ಸರಕಾರವು ಒಳ್ಳೆಯ ಆಡಳಿತವನ್ನು ಮತ್ತು ಸಂಸದೀಯ ಪ್ರಜಾಪ್ರಭುತ್ವವನ್ನು ನೀಡಿದೆಯೆಂದು ಹೇಳಿದ್ದಾರೆ.

ನಿರುದ್ಯೋಗದ ಬಗ್ಗೆಯೂ ಸಾಕಷ್ಟು ಜನರಿಗೆ ಚಿಂತೆಯೇ ಇಲ್ಲ. ಅದಾನಿ, ಅಂಬಾನಿಯವರಿಗೆ ಮಕ್ಕಳಾದರೆ ಜನರು ತಮಗೆ ಮಕ್ಕಳಾದಂತೆ ತಮ್ಮತಮ್ಮಲ್ಲೇ ಸಿಹಿ ಹಂಚಿ ಖುಷಿಪಡುತ್ತಿರುವುದು ನಮ್ಮ ಜನಮನದ ಕ್ರೂರ ವ್ಯಂಗ್ಯಗಳಲ್ಲೊಂದು. ಸರಕಾರ ಇಷ್ಟು ಚೆನ್ನಾಗಿ ಆಡಳಿತವನ್ನು ಮಾಡುತ್ತಿದ್ದರೆ ಇಂತಹ ದುರ್ದಿನಗಳಲ್ಲೂ ಶ್ರೀಮಂತರು ಇನ್ನಷ್ಟು ಶ್ರೀಮಂತರು ಮತ್ತು ಬಡವರು ಇನ್ನಷ್ಟು ಬಡವರು ಹೇಗಾಗುತ್ತಾರೆಂಬ ಬಗ್ಗೆ ಯಾರಲ್ಲೂ ಸಮರ್ಪಕ ಉತ್ತರವಿಲ್ಲ. ಸಮೀಕ್ಷೆಗಳು ಸರಿಯಿವೆಯೆಂದಲ್ಲ. ಆದರೆ ಅವು ಜನಾರೋಗ್ಯವನ್ನು ಅಳೆಯುತ್ತವೆ. ಉದಾಹರಣೆಗೆ ನಿರುದ್ಯೋಗದ ಕುರಿತು ಉದ್ಯೋಗಿಗಳು, ನಿವೃತ್ತರು, ಕೈಗಾರಿಕೋದ್ಯಮಿಗಳು, ಏನು ಹೇಳುತ್ತಾರೆ? ಅದನ್ನು ನಿರುದ್ಯೋಗಿಗಳಲ್ಲೇ ಪ್ರಶ್ನೆ ಮಾಡಬೇಕು. ರೈತರ ಸಮಸ್ಯೆಗಳ ಬಗ್ಗೆ ರೈತರನ್ನು ಪ್ರಶ್ನೆ ಮಾಡಬೇಕು. ಗೊಬ್ಬರ ತಯಾರಿಕಾ ಸಂಸ್ಥೆಗಳನ್ನಲ್ಲ; ಸಚಿವರುಗಳನ್ನಲ್ಲ. ಇತ್ತೀಚೆಗಷ್ಟೇ ಕರ್ನಾಟಕ ಉಚ್ಚ ನ್ಯಾಯಾಲಯವು ಕೇಂದ್ರ ಸರಕಾರವನ್ನು ‘‘ಕಂಪೆನಿಗಳ ಪರವಾಗಿ ಮಾತನಾಡುತ್ತೀರಿ!’’ ಎಂದು ಆಕ್ಷೇಪಿಸಿತು. ಕೋವಿಡ್-19ರ ಎರಡನೆಯ ಅಲೆಯಲ್ಲಿ ಹೊಸ ಸಮಸ್ಯೆಗಳು ಅನಾವರಣಗೊಂಡಿವೆ. ಆಮ್ಲಜನಕವೆಂಬ ಸವಲತ್ತು ಸಿಗದೆ ಸತ್ತವರು ಸಾಕಷ್ಟಿದ್ದಾರೆ. ಇವುಗಳ ಪೂರೈಕೆಯಲ್ಲಿ ಭ್ರಷ್ಟಾಚಾರ ಮಾತ್ರವಲ್ಲ, ಅಮಾನವೀಯ ತಾರತಮ್ಯ ಮತ್ತು ವಿಕೃತ ರಾಜಕಾರಣ ನಡೆದಿದೆ. ಜೊತೆಗೆ ಆರೋಗ್ಯ ಕಾರ್ಯಕರ್ತರನ್ನು ದುಡಿಸಿಕೊಳ್ಳುವುದರ ಹೊರತಾಗಿ ಇನ್ನೆಲ್ಲ ಅಂಶಗಳಲ್ಲೂ ಅಲಕ್ಷಿಸಲಾಗಿದೆ. ಜನರಿಗೆ ತಿಳಿವು ಮೂಡಿಸುವುದರ ಬದಲು ದಮನ ನೀತಿಯ, ಒತ್ತಡದ, ಪೊಲೀಸರ ಹಿಂಸೆಯ ಮೂಲಕ, ಶಿಸ್ತನ್ನು ಹೇರಲಾಗುತ್ತಿದೆ.

ಅಧಿಕಾರವನ್ನು ಹಿಡಿದವರು ಅದನ್ನು ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ಜನರ ತಳಮಳವನ್ನು ಅಭಿವ್ಯಕ್ತಿಸಲು ಸಾಮಾಜಿಕ ಜಾಲತಾಣಗಳು ನೆರವಾಗುತ್ತವೆ ಅಥವಾ ಅವಕಾಶ ನೀಡುತ್ತಿವೆಯೆಂಬ ಕಾರಣಕ್ಕೇ ಅವುಗಳ ಕುತ್ತಿಗೆ ಹಿಚುಕಲು ಮೋದಿ ಸರಕಾರ ಯತ್ನಿಸುತ್ತಿದೆ. ಈ ಪ್ರಯತ್ನಕ್ಕೆ ಕೆಲವು ನಿಷ್ಠಾವಂತ ‘ಪ್ರಾಕ್ಸಿ’ ವಲಯಗಳು ನೆರವಾಗುತ್ತಿವೆ. ಚಿಂತಿಸಬಲ್ಲವರು ಬಂಧನದಲ್ಲಿದ್ದಾರೆ; ಅಥವಾ ಬಂಧನದ ಭೀತಿಯನ್ನೆದುರಿಸುತ್ತಿದ್ದಾರೆ. ಇತಿಹಾಸದಲ್ಲಿ ಅಧಿಕಾರದ ಭದ್ರತೆಯ ಬಗ್ಗೆ ಆತಂಕವಿರುವ ಸರ್ವಾಧಿಕಾರಿಗಳು ಹೇಗೆ ವ್ಯವಹರಿಸಿದರೋ ಹಾಗೆಯೇ ಇಂದು ಭಾರತದ ಪ್ರಧಾನಿ ಮತ್ತವರ ಅಂಧಭಕ್ತರು ವ್ಯವಹರಿಸುತ್ತಿದ್ದಾರೆ. ಆದರೂ ಅವರಿಗಿರುವ ಭರವಸೆಯೆಂದರೆ ವಿರೋಧ ಪಕ್ಷದವರು ಒಗ್ಗಟ್ಟಾಗಿಲ್ಲ ಮತ್ತು ಒಬ್ಬ ಸಮರ್ಥ ನಾಯಕನನ್ನು ಕೊಡುವಲ್ಲಿ ಶಕ್ತವಾಗಿಲ್ಲ, ತಮ್ಮಾಳಗೆ ಕ್ಷುಲ್ಲಕ ಜಗಳಗಳನ್ನು, ನಾಯಕತ್ವವನ್ನು ಬಿಟ್ಟುಕೊಡಲು ಸಿದ್ಧವಿಲ್ಲದ ಅಹಂಭಾವವನ್ನು ತೊರೆಯುತ್ತಿಲ್ಲ.

ರಾಷ್ಟ್ರೀಯವಾದ ಪರ್ಯಾಯವೊಂದು ಇನ್ನೂ ನೆಲೆಕಂಡುಕೊಂಡಿಲ್ಲ. ಕಾಂಗ್ರೆಸ್, ಎಡಪಕ್ಷಗಳಂತಹ ರಾಷ್ಟ್ರೀಯ ಸಂಘಟನೆಗಳು ಒಂದು ನಿರ್ದಿಷ್ಟ ಕಾರ್ಯಸೂಚಿಯನ್ನು ಹೊಂದಿಲ್ಲ. ಕೇರಳದಲ್ಲಿ ಪರಸ್ಪರ ವಿರೋಧಿಸುತ್ತ, ಪಶ್ಚಿಮ ಬಂಗಾಳದಲ್ಲಿ ಮೈತ್ರಿಯನ್ನು ಹೊಂದಿದರೆ ಜನರು ತಮ್ಮ ದಿವಾಳಿತನವನ್ನು ಅಳೆಯುತ್ತಾರೆಂಬ ಕನಿಷ್ಠ ಪ್ರಜ್ಞೆಯನ್ನೂ ಲಜ್ಜೆಯನ್ನೂ ಹೊಂದಿಲ್ಲ. ಸಹಜವಾಗಿಯೇ ಕುಟುಂಬ ರಾಜಕಾರಣದ ಹಣೆಪಟ್ಟಿ ಹೊತ್ತ ಕಾಂಗ್ರೆಸ್ ಆಗಲೀ ಅಂತಹ ಮನಸ್ಥಿತಿಯನ್ನು ಹೊಂದಿದ ಇತರ ಯಾವ ಪ್ರತಿಪಕ್ಷವೂ ರಾಷ್ಟ್ರೀಯವಾಗಿ ಕಾರ್ಯಕರ್ತರ ದಂಡನ್ನು ಹೊಂದಿಲ್ಲ. ಒಂದೊಂದು ರಾಜ್ಯದಲ್ಲಿ ಬೇರುಗಳನ್ನು ಹೊಂದಿರುವ ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ನೆಲೆಯಲ್ಲಿ ತಮಗೆ ನಾಯಕತ್ವದ ಅವಕಾಶವಿಲ್ಲವೆಂಬುದನ್ನು ಬಲ್ಲರಾದರೂ ಅಂತಹ ಪ್ರಯತ್ನವನ್ನು ಬೆಂಬಲಿಸಲು ಮನಗೊಡುತ್ತಿಲ್ಲ. ಜಯಪ್ರಕಾಶ ನಾರಾಯಣರಂತಹ ಒಬ್ಬ ಶಕ್ತ ನಾಯಕನ ಅಗತ್ಯ ದೇಶಕ್ಕೆ ಎಂದಿಗಿಂತಲೂ ಹೆಚ್ಚಿದೆ. ಆದರೆ ಅಂತಹವರೊಬ್ಬರು ಉದಿಸಿ ಬರುವವರೆಗೆ ಇದೇ ಕತ್ತಲು ಮುಂದುವರಿಯಲಿದೆ. ರಾತ್ರಿ ಎಷ್ಟೇ ದೀರ್ಘವಾದರೂ ಬೆಳಕು ಹರಿಯಲೇಬೇಕಲ್ಲವೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)