varthabharthi


ತಿಳಿ ವಿಜ್ಞಾನ

ಭೂವಾತಾವರಣವೆಲ್ಲ ಆಮ್ಲಜನಕದಿಂದ ಕೂಡಿದ್ದರೆ...

ವಾರ್ತಾ ಭಾರತಿ : 6 Jun, 2021
ಆರ್.ಬಿ.ಗುರುಬಸವರಾಜ

ಪ್ರಜ್ವಲ್ ಓಡುತ್ತಲೇ ಇದ್ದಾನೆ. ಕಾಲಡಿಯಲ್ಲಿ ನೀರು, ಸುತ್ತಲೂ ಮರಗಳಿಂದ ಕೂಡಿದ ಗೊಂಡಾರಣ್ಯ. ಆ ಗೊಂಡಾರಣ್ಯ ಧಗಧಗನೇ ಹೊತ್ತಿ ಉರಿಯುತ್ತಿದೆ. ಕಾಲಡಿಯ ನೀರೂ ಸಹ ಬಿಸಿಯಾಗುತ್ತಿದೆ. ದೂರದಲ್ಲಿ ಕೀಟಗಳ ಸದ್ದು ಕೇಳಿಬರುತ್ತಿದೆ. ಕ್ರಮೇಣ ಈ ಸದ್ದು ಸನಿಹವಾಗುತ್ತಿದೆ. ಅವು ಸಾಮಾನ್ಯ ಕೀಟಗಳಲ್ಲ. ದೈತ್ಯಾಕಾರದ ಕೀಟಗಳು. ಅವು ಪ್ರಜ್ವಲ್‌ನನ್ನು ಹಿಂಬಾಲಿಸಿವೆ. ಒಂದೆಡೆ ಬೆಂಕಿ ಹೆಚ್ಚುತ್ತಲೇ ಇದೆ. ಇಡೀ ಕಾಡನ್ನೇ ಆವರಿಸುತ್ತಿದೆ. ಇನ್ನೊಂದೆಡೆ ದೈತ್ಯ ಕೀಟಗಳು ದಾಳಿ ನಡೆಸಲು ಹಿಂಬಾಲು ಬಿದ್ದಿವೆ. ಮತ್ತೊಂದೆಡೆ ಕಾಲಡಿಯ ನೀರು ಓಡಲು ಸಹಾಯಕವಾಗಿಲ್ಲ. ಕಷ್ಟಪಟ್ಟು ಓಡಲು ಪ್ರಯತ್ನಿಸಿದ ಪ್ರಜ್ವಲ್ ಕಾಲುಜಾರಿ ನೀರಿನಲ್ಲಿ ಬಿದ್ದ. ಬೆಂಕಿ ಮತ್ತು ಕೀಟಗಳು ಆತನ ಮೇಲೆ ದಾಳಿ ನಡೆಸಿಯೇ ಬಿಟ್ಟವು ಎಂಬ ಜೀವಭಯದಿಂದ ಕಿಟಾರನೆ ಕಿರುಚಿದ, ತಪ್ಪಿಸಿಕೊಳ್ಳಲು ಹೊರಳಾಡಿದ. ದೊಪ್ಪೆಂದು ಮಂಚದಿಂದ ಕೆಳಕ್ಕೆ ಬಿದ್ದ. ನಡೆದ ಘಟನೆ ನಿಮಗೆ ಅರ್ಥವಾಗಿರಬಹುದು. ಇಲ್ಲಿಯವರೆಗಿನ ಎಲ್ಲಾ ಘಟನೆಗಳು ನಡೆದಿದ್ದು ಪ್ರಜ್ವಲ್‌ನ ಕನಸಿನಲ್ಲಿ.

ಎಚ್ಚರಗೊಂಡ ಪ್ರಜ್ವಲ್ ದಿಗಿಲುಗೊಂಡ. ಸುತ್ತಲೂ ಒಮ್ಮೆ ಕಣ್ಣಾಡಿಸಿದ. ಬೆಂಕಿಯಾಗಲೀ, ಕೀಟಗಳಾಗಲೀ ಅಲ್ಲಿಲ್ಲ. ಕಾಲಡಿಯಲ್ಲಿ ನೋಡಿದ. ನೀರೂ ಕೂಡಾ ಅಲ್ಲಿಲ್ಲ. ‘‘ಓಹ್! ಇದು ಕನಸೋ’’ ಎಂದುಕೊಂಡ. ಮುಖ ತೊಳೆದುಕೊಂಡ ಅಂಕಲ್‌ನ ಬಳಿ ಬಂದು ಕನಸಿನ ಕತೆ ಹೇಳಿದ. ‘‘ನೀನು ಕಂಡದ್ದು ಕನಸೇ ಆಗಿದ್ದರೂ ಕೆಲವು ವೇಳೆ ವಾಸ್ತವದಲ್ಲೂ ಕಾಡಿನ ಮರಗಳಿಗೆ ಬೆಂಕಿ ಬೀಳುತ್ತದೆ. ಮಾನವನ ಅನಪೇಕ್ಷಿತ ಚಟುವಟಿಕೆಗಳಿಂದ ಕಾಡಿನ ಮರಗಳಿಗೆ ಬೆಂಕಿ ಹೊತ್ತಿಕೊಳ್ಳುತ್ತದೆ. ಒಂದು ಸಣ್ಣ ಕಿಡಿ ಇಡೀ ಕಾಡಿನ ನಾಶಕ್ಕೆ ಕಾರಣವಾಗಲೂಬಹುದು’’ ಎಂದು ಅಂಕಲ್ ಒಂದು ಚಿಕ್ಕ ಭಾಷಣ ನೀಡಿದರು. ‘‘ಅಂಕಲ್, ಒಂದು ಪ್ರಶ್ನೆ ಕೇಳಲೇ?’’ ಎಂದ ಪ್ರಜ್ವಲ್. ಅದಕ್ಕೆ ಅಂಕಲ್ ಸಮ್ಮತಿಸಿದರು. ‘‘ವಸ್ತುಗಳು ಉರಿಯಲು ಆಮ್ಲಜನಕ ಬೇಕು ಎಂದು ಶಿಕ್ಷಕರು ಹೇಳಿದ್ದರು. ಈಗ ವಾತಾವರಣದಲ್ಲಿ ಆಮ್ಲಜನಕ ಶೇಕಡಾ 21ರಷ್ಟು ಇದೆ. ಒಂದು ವೇಳೆ ಇದು ಶೇಕಡಾ 100ರಷ್ಟಿದ್ದರೆ ಏನಾಗುತ್ತಿತ್ತು ಅಂಕಲ್’’ ಎಂದು ಪ್ರಜ್ವಲ್ ಮರುಪ್ರಶ್ನೆ ಹಾಕಿದ.

‘‘ನಿನ್ನ ಕನಸು ನಿಜವಾಗುತ್ತಿತ್ತು. ಕಾಡಿನ ಎಲ್ಲಾ ಮರಗಳು ಧಗಧಗನೇ ಹೊತ್ತಿ ಉರಿದು ಬೂದಿಯಾಗುತ್ತಿದ್ದವು. ಕಾಡು ಎಂಬುದೇ ಇರುತ್ತಿರಲಿಲ್ಲ. ಆಮ್ಲಜನಕ ಹೆಚ್ಚಳದಿಂದ ಕೀಟಗಳೆಲ್ಲ ದೈತ್ಯಾಕಾರ ತಾಳುತ್ತವೆ. ಇನ್ನೂ ಅನೇಕ ಅವಘಡಗಳು ನಡೆಯುತ್ತವೆ’’ ಎಂದು ಅಂಕಲ್ ಹೇಳತೊಡಗಿದರು. ಜೀವಿಗಳು ಬದುಕಲು ಆಮ್ಲಜನಕ ಅಗತ್ಯ. ವಾತಾವರಣದಲ್ಲಿರುವ ಆಮ್ಲಜನಕ ಉಸಿರಾಡಲು ಸಹಾಯಕವಾಗುವ ಜೊತೆಗೆ ಜೀವಿಗಳ ದೇಹಕ್ಕೆ ಬೇಕಾದ ಶಕ್ತಿಯನ್ನು ನೀಡುತ್ತದೆ. ವಾತಾವರಣದಲ್ಲಿ ಶೇಕಡಾ 21ರಷ್ಟು ಆಮ್ಲಜನಕ ಇದೆ ಎಂಬುದು ತಿಳಿದ ವಿಚಾರ. ಇದರ ಪ್ರಮಾಣ ಹೆಚ್ಚಾದರೆ ಇನ್ನಷ್ಟು ಅನುಕೂಲವಾಗಬಹುದೇ? ಎಂಬ ಪ್ರಶ್ನೆ ಮೂಡದೇ ಇರದು.

ವಾತಾವರಣದಲ್ಲಿ ಆಮ್ಲಜನಕ ಪ್ರಮಾಣದ ಹೆಚ್ಚಳವು ಅನೇಕ ತೊಂದರೆಗಳನ್ನು ತಂದೊಡ್ಡುತ್ತದೆ. ಅದು ಶೇಕಡಾ 100ರಷ್ಟಾದರಂತೂ ತೊಂದರೆಗಳ ಸರಮಾಲೆಯನ್ನೇ ಎದುರಿಸಬೇಕಾಗುತ್ತದೆ. ಆಮ್ಲಜನಕ ಶುದ್ಧವಾಗಿದ್ದಷ್ಟೂ ತೊಂದರೆ ಉಂಟುಮಾಡುತ್ತದೆ. ಶುದ್ಧ ಆಮ್ಲಜನಕ ವೇಗವಾಗಿ ಫ್ರೀರ್ಯಾಡಿಕಲ್ಸ್‌ಗಳನ್ನು ಸೃಷ್ಟಿಸುತ್ತದೆ. ಈ ಫ್ರೀರ್ಯಾಡಿಕಲ್ಸ್‌ಗಳು ಜೀವಕೋಶಗಳ ಮೇಲೆ ಹಾನಿಯನ್ನುಂಟು ಮಾಡುತ್ತವೆ. ಕ್ಯಾನ್ಸರ್ ಮತ್ತು ಅಲ್‌ಝೈಮರ್‌ನಂತಹ ಗಂಭೀರ ಕಾಯಿಲೆಗೆ ಕಾರಣವಾಗುತ್ತವೆ. ಪ್ರಸ್ತುತ ಮಾನವ ಜೀವಿಗಳಾದ ನಾವು ಶೇಕಡಾ 21ರಷ್ಟು ಆಮ್ಲಜನಕ ವಾತಾವರಣಕ್ಕೆ ಹೊಂದಿಕೊಂಡಿದ್ದೇವೆ. ಒಂದುವೇಳೆ ಭವಿಷ್ಯದಲ್ಲಿ ಮಾನವ ಜೀವನ ಶುದ್ಧ ಆಮ್ಲಜನಕ ವಾತಾವರಣಕ್ಕೆ ರೂಪಾಂತರಗೊಂಡು ಅದಕ್ಕೆ ಹೊಂದಿಕೊಂಡರೆ, ಪ್ರತಿ ಉಸಿರಾಟದಲ್ಲೂ ತೊಂದರೆ ಅನುಭವಿಸುವಂತಾಗುತ್ತದೆ. ಪ್ರತಿ ಬಾರಿ ಶುದ್ಧ ಆಮ್ಲಜನಕವನ್ನು ಒಳ ತೆಗೆದುಕೊಂಡಾಗಲೆಲ್ಲಾ ಶ್ವಾಸಕೋಶಗಳಲ್ಲಿ ನೋವುಂಟಾಗುತ್ತದೆ. ಶುದ್ಧ ಆಮ್ಲಜನಕ ಉಸಿರಾಟದಿಂದ ಶ್ವಾಸಕೋಶಗಳಲ್ಲಿ ದ್ರವ ಸಂಗ್ರಹವಾಗುತ್ತದೆ ಮತ್ತು ತಲೆ ಸುತ್ತುವಿಕೆ ಪ್ರಾರಂಭವಾಗುತ್ತದೆ. ಪ್ರಜ್ಞೆ ಕಳೆದುಕೊಂಡು ಸಾಯುವವರೆಗೂ ಕೋಮಾ ಸ್ಥಿತಿ ತಲುಪಬಹುದು. ಶುದ್ಧ ಆಮ್ಲಜನಕವು ಒಂದು ಡ್ರಗ್ ಇದ್ದಂತೆ.

ಶುದ್ಧ ಆಮ್ಲಜನಕವು ಮಾನವ ದೇಹದಲ್ಲಿನ ಪ್ರಕ್ರಿಯೆಗಳನ್ನು ರಸಾಯನಿಕವಾಗಿ ಉಂಟುಮಾಡುತ್ತದೆ ಮತ್ತು ವೇಗಗೊಳಿಸುತ್ತದೆ. ನಾವು ಉಸಿರಾಡುವಾಗ ಆಮ್ಲಜನಕವನ್ನು ಹಿಡಿದಿಡಲು ರಕ್ತದಲ್ಲಿನ ಹೀಮೋಗ್ಲೋಬಿನ್ ಎಂಬ ಸಾರಿಗೆಯ ಅಣು ವಿಕಸನ ಹೊಂದಿದೆ. ನಾವು ಸಾಮಾನ್ಯ ಆಮ್ಲಜನಕ ಸಾಂದ್ರತೆಗಿಂತ ಹೆಚ್ಚಿನ ಗಾಳಿಯನ್ನು ಉಸಿರಾಡಿದರೆ ಶ್ವಾಸಕೋಶದಲ್ಲಿನ ಆಮ್ಲಜನಕಯುಕ್ತ ರಕ್ತವನ್ನು ಸಾಗಿಸುವ ಸಾಮರ್ಥ್ಯವನ್ನು ಮೀರಿಸುತ್ತದೆ. ಇದರ ಪರಿಣಾಮವೇನೆಂದರೆ ಹೆಚ್ಚಿನ ಆಮ್ಲಜನಕವು ಶ್ವಾಸಕೋಶದ ಮೇಲ್ಮೈ ಪ್ರೊಟೀನ್‌ಗಳೊಂದಿಗೆ ಬಂಧಿಸಲ್ಪಡುತ್ತದೆ. ಕೇಂದ್ರ ನರಮಂಡಲದ ಕಾರ್ಯಾಚರಣೆಯಲ್ಲಿ ಹಸ್ತಕ್ಷೇಪ ಮಾಡುತ್ತದೆ ಮತ್ತು ರೆಟಿನಾದ ಮೇಲೆ ದಾಳಿ ಮಾಡುತ್ತದೆ. ಇದರಿಂದ ದೃಷ್ಟಿ ಮಂದವಾಗುತ್ತದೆ. ಶುದ್ಧ ಆಮ್ಲಜನಕ ಮಾನವರಿಗೆ ಕಂಟಕವಾದರೆ ಕೀಟಗಳಿಗೆ ವರದಾನವಾಗುತ್ತದೆ. ಸುಮಾರು 300 ದಶಲಕ್ಷ ವರ್ಷಗಳ ಹಿಂದೆ ಕೀಟಗಳು ಭೂಮಿಯಲ್ಲಿ ಸಂಚರಿಸಿದ್ದವು ಎಂಬ ಅಂಶವನ್ನು ವಿಜ್ಞಾನಿಗಳು ಶಂಕಿಸಿದ್ದಾರೆ. ಆಗ ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಶೇಕಡಾ 30ರಷ್ಟಿತ್ತು. ಸಾಮಾನ್ಯ ಕೀಟಗಳು ಸಹ ದೈತ್ಯಾಕಾರ ಹೊಂದಿದ್ದವು ಎಂದು ವಿಜ್ಞಾನಿಗಳು ವಾದಿಸುತ್ತಾರೆ. ಅಂದರೆ ಆಮ್ಲಜನಕದ ಪ್ರಮಾಣ ಹೆಚ್ಚಾದಷ್ಟೂ ಕೀಟಗಳ ಗಾತ್ರ ಹೆಚ್ಚಳವಾಗುತ್ತದೆ. ಕೀಟಗಳ ಗಾತ್ರ ಹೆಚ್ಚಳ ನಮ್ಮ ಬದುಕಿನಲ್ಲಿ ವೈಪ್ಯರೀತ್ಯಗಳನ್ನು ತಂದೊಡ್ಡುತ್ತದೆ.

ಈಗಿನ ಆಮ್ಲಜನಕ ಪ್ರಮಾಣದಲ್ಲಿಯೇ ಕೆಲವು ವೇಳೆ ಕಾಡಿನ ಮರಗಳಲ್ಲಿ ತನ್ನಷ್ಟಕ್ಕೆ ತಾನೇ ಬೆಂಕಿ ಹೊತ್ತಿಕೊಳ್ಳುತ್ತದೆ. ಇನ್ನು ಆಮ್ಲಜನಕ ಶುದ್ಧ್ದವಾದರೆ ಭೂಮಿಯ ಮೇಲಿನ ಎಲ್ಲಾ ಕಾಡುಗಳೂ ಹೊತ್ತಿ ಉರಿಯುತ್ತವೆ. ವಾತಾವರಣದಲ್ಲಿ ಆಮ್ಲಜನಕ ಮಾತ್ರ ಇದ್ದರೆ ವಸ್ತುಗಳು ತಮ್ಮಷ್ಟಕ್ಕೆ ತಾವೇ ಸ್ಫೋಟಗೊಳ್ಳುತ್ತವೆ. ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಳ್ಳುತ್ತದೆ. 5 ಪಟ್ಟು ವೇಗದಲ್ಲಿ ವಸ್ತುಗಳು ದಹಿಸುತ್ತವೆ. ಈಗ ಹೇಳಿ ನಿಮಗೆ ಶುದ್ಧ ಆಮ್ಲಜನಕ ಬೇಕೋ? ಈಗಿನ ಆಮ್ಲಜನಕ ಸಾಕೋ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)