varthabharthi


ಸಿನಿಮಾ

ಹಿರಿಯ ನಟಿ ಸುರೇಖಾ ನಿಧನ

ವಾರ್ತಾ ಭಾರತಿ : 6 Jun, 2021

ಸುರೇಖಾ (Photo source: Twitter)

ಬೆಂಗಳೂರು, ಜೂ.6: ಹಿರಿಯ ಸಿನೆಮಾ ತಾರೆ ಸುರೇಖಾ(69) ಶನಿವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಅಗಲಿಕೆಗೆ ಹಿರಿಯ ನಟ, ನಟಿಯರು, ನಿರ್ಮಾಪಕ, ನಿರ್ದೇಶಕರು ಸಂತಾಪ ವ್ಯಕ್ತಪಡಿಸಿದ್ದಾರೆ.

ಸುಮಾರು 150 ಚಲನಚಿತ್ರಗಳಲ್ಲಿ ಅಭಿನಯಿಸಿದ್ದ ಸುರೇಖಾ, ರಾಜಕುಮಾರ್ ಅವರೊಂದಿಗೆ ಹಲವು ಸಿನಿಮಾಗಳಲ್ಲಿ ಜೋಡಿಯಾಗಿ ನಟಿಸಿದ್ದರು. ಮೂಲತಃ ಭರತ ನಾಟ್ಯ ಮತ್ತು ಕೂಚುಪುಡಿ ನೃತ್ಯಗಾರ್ತಿಯಾಗಿದ್ದ ಅವರು ಲಂಡನ್, ಪ್ಯಾರಿಸ್, ಮಾಸ್ಕೋ, ತಾಷ್ಕೆಂಟ್ ಸೇರಿದಂತೆ ಹಲವು ದೇಶ-ವಿದೇಶಗಳಲ್ಲಿಯೂ ನೃತ್ಯ ಪ್ರದರ್ಶನ ನೀಡಿ ಜಾಗತಿಕವಾಗಿ ಮನ್ನಣೆ ಪಡೆದುಕೊಂಡು ಸಾವಿರಾರು ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು.

ಆಪರೇಷನ್ ಜಾಕ್‍ಪಾಟ್, ತ್ರಿಮೂರ್ತಿ, ಒಲವು ಗೆಲುವು, ಗಿರಿ ಕನ್ಯೆ, ಸಾಕ್ಷಾತ್ಕಾರ, ಕಸ್ತೂರಿ ನಿವಾಸ, ಹುಲಿಯ ಹಾಲಿನ ಮೇವು, ಶಿವಕನ್ಯೆ, ಕಾವೇರಿ, ಕೆಸರಿನ ಕಮಲ, ಬ್ಯಾಂಕರ್ ಮಾರ್ಗಯ್ಯ, ಆಲೆಮನೆ, ನಾಗರಹೊಳೆ, ತಾಯಿ ದೇವರು, ಭಕ್ತ ಸಿರಿಯಾಳ ಮೊದಲಾದವು ಅವರು ಅಭಿನಯಿಸಿದ ಪ್ರಮುಖ ಚಿತ್ರಗಳಾಗಿವೆ.

ಸಂತಾಪ: ನಟಿ ಸುರೇಖಾ ನಿಧನಕ್ಕೆ ಹಿರಿಯ ನಿರ್ದೇಶಕ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂತಾಪ ವ್ಯಕ್ತಪಡಿಸಿ, ಡಾ.ರಾಜ್‍ಕುಮಾರ್ ಸೇರಿದಂತೆ ಹಲವು ಹಿರಿಯ ನಟರ ಜತೆ ಅಭಿನಯಿಸಿ ಮನೆ ಮಾತಾಗಿದ್ದರು. ಅವರು ಅಭಿನಯಿಸಿದ ಪ್ರತಿಯೊಂದು ಸಿನೆಮಾಗಳು ಅಪಾರ ಜನಪ್ರಿಯತೆ ಗಳಿಸಿದ ಚಿತ್ರಗಳಾಗಿವೆ ಎಂದು ಸ್ಮರಿಸಿದ್ದಾರೆ.

ಸೆನ್ಸಾರ್ ಮಂಡಳಿ ಹಾಗೂ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದ ಅವರು, ಭರತನಾಟ್ಯ, ನೃತ್ಯಗಾರ್ತಿಯಾಗಿ ದೇಶ, ವಿದೇಶದಲ್ಲಿ ಜನಪ್ರಿಯಗೊಂಡಿದ್ದರು. ಅವರ ಅಗಲಿಕೆ ಸಿನೆಮಾ ಕ್ಷೇತ್ರಕ್ಕೆ ಅಪಾರ ನಷ್ಟವೆಂದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)