varthabharthi


ನಿಮ್ಮ ಅಂಕಣ

ಗಾಯದ ಮೇಲೆ ಬರೆ ಎಳೆದ ಇಂಧನ ದರ ಏರಿಕೆ

ವಾರ್ತಾ ಭಾರತಿ : 9 Jun, 2021
ವಿಜಯಕುಮಾರ್ ಎಚ್. ಕೆ., ರಾಯಚೂರು

ಮಾನ್ಯರೇ,

ದೇಶದಲ್ಲಿ ಪೆಟ್ರೋಲ್ ಬೆಲೆ ದಿನೇ ದಿನೇ ಏರಿಕೆಯಾಗುತ್ತಿರುವ ಕಾರಣ ಜನಸಾಮಾನ್ಯರಿಗೆ ದರ ಏರಿಕೆಯ ಬಿಸಿ ಮುಟ್ಟುತ್ತಿದೆ. ಬೆಲೆ ಏರಿಕೆ ವಿರೋಧಿಸಿ ಅಲ್ಲಲ್ಲಿ ಪ್ರತಿಭಟನೆಗಳು ಆರಂಭವಾಗಿದ್ದರೂ ರಾಜ್ಯ ಮತ್ತು ಕೇಂದ್ರ ಸರಕಾರ ಪ್ರತಿಭಟನೆಗಳಿಗೆ, ಜನಸಾಮಾನ್ಯರ ನೋವಿಗೆ ಸ್ಪಂದಿಸದಿರುವುದು ದುರದೃಷ್ಟಕರ. ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಸಾಮಾನ್ಯ ಪೆಟ್ರೋಲ್ ದರ 100 ರೂ.ಗಡಿ ದಾಟಿದ್ದು ಮತ್ತು ಡೀಸೆಲ್ ದರವೂ ಹೆಚ್ಚು ಕಡಿಮೆ ಎಲ್ಲಾ ನಗರಗಳಲ್ಲಿ ಗರಿಷ್ಠ ಮಟ್ಟದಲ್ಲಿರುವುದು ಈ ಕೋವಿಡ್ ಸಮಯದಲ್ಲಿ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಜನರು ದರ ಏರಿಕೆಯಿಂದ ಕಂಗಾಲಾಗಿದ್ದರೆ ಪ್ರಧಾನಿಯವರು ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳಕ್ಕೆ ಹಿಂದಿನ ಸರಕಾರಗಳ ಮೇಲೆ ಗೂಬೆ ಕೂರಿಸಿ, ‘‘ಈ ಹಿಂದಿನ ಸರಕಾರಗಳು ಸೂಕ್ತ ನಿರ್ಧಾರ ತೆಗೆದುಕೊಂಡು ಭಾರತವನ್ನು ತೈಲ ಸ್ವಾವಲಂಬಿ ದೇಶವಾಗಿಸಿದ್ದರೆ ಆಮದಿನ ಮೇಲೆ ಅವಲಂಬನೆಯಾಗುವ ಪರಿಸ್ಥಿತಿ ಸೃಷ್ಟಿಯಾಗುತ್ತಿರಲಿಲ್ಲ.’’ ಎನ್ನುತ್ತಾರೆ. ಆದರೆ ದರ ಏರಿಕೆಗೆ ಆಮದೂ ಕಾರಣವಲ್ಲ, ಅಂತರ್‌ರಾಷ್ಟ್ರೀಯ ಬೆಲೆ ಏರಿಕೆಯ ಕೊಡುಗೆಯೂ ಇಲ್ಲ ಎಂಬುದು ಜನಸಾಮಾನ್ಯರಿಗೆ ತಿಳಿಯದ ಸಂಗತಿಯೇನಲ್ಲ.

ಅಂತರ್‌ರಾಷ್ಟ್ರೀಯ ಕಚ್ಚಾ ಬೆಲೆಗಳು ಸದ್ಯ ಅಷ್ಟೇನೂ ಹೆಚ್ಚಿಲ್ಲ ಮತ್ತು ರೂಪಾಯಿ - ಡಾಲರ್ ದರವು ಹೆಚ್ಚು ಕಡಿಮೆ ಸ್ಥಿರವಾಗಿದೆ. ಹೀಗಾಗಿ ಆಮದಿನ ಮೇಲಿನ ಹೆಚ್ಚಿನ ಅವಲಂಬನೆಯ ಹೊರತಾಗಿಯೂ ಪೆಟ್ರೋಲ್-ಡೀಸೆಲ್ ದರ ಇಷ್ಟೊಂದು ಏರಬೇಕಾಗಿಲ್ಲ ಎಂಬುದು ಸಾಮಾನ್ಯ ಜ್ಞಾನ. ಪೆಟ್ರೋಲ್ ಮತ್ತು ಡೀಸೆಲ್‌ಗೆ ನಾವು ಪಾವತಿಸುವ ಹಣದಲ್ಲಿ ಮೂರನೇ ಎರಡು ಭಾಗ ತೆರಿಗೆಗೆ ಹೋಗುತ್ತದೆ. ಹೀಗಾಗಿ ದೇಶದ ಪೆಟ್ರೋಲ್ ದರದಲ್ಲಿ ಮೂರನೇ ಒಂದು ಭಾಗ ಮಾತ್ರ ಕಚ್ಚಾ ತೈಲ ಬೆಲೆಯಿಂದ ಪ್ರಭಾವಿತವಾಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಬೆಲೆಗಳು ಏರಿಕೆಯಲ್ಲಿದ್ದಾಗ ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರವು ವಿಧಿಸುವ ಎಕ್ಸೈಸ್ ಸುಂಕವೇ ಪ್ರಮುಖ ಕಾರಣ. ಈ ತೆರಿಗೆ ಮೂಲಕವೇ ಕಳೆದ ಮೂರು ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯಗಳು ಒಟ್ಟು ಇಪ್ಪತ್ತರಿಂದ ಮೂವತ್ತು ಲಕ್ಷ ಕೋಟಿ ರೂಪಾಯಿಗಳನ್ನು ದೋಚಿವೆ. ಕೊರೋನ ಹಿನ್ನೆಲೆಯಲ್ಲಿ ಈ ವರ್ಷ ಕೇಂದ್ರದ ನಡೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಕೋವಿಡ್‌ನಿಂದ ಉಂಟಾಗುವ ಹೆಚ್ಚಿನ ಹಣಕಾಸು ಹೊರೆಯನ್ನು ನಿವಾರಿಸಲು ಕೇಂದ್ರವು ಇಂಧನದ ಮೇಲೆ ಸವಾರಿ ಮಾಡಲು ಪ್ರಯತ್ನಿಸುತ್ತಿರುವುದು ತರವಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಈ ಸಮಯದಲ್ಲಿ ಸಂವೇದನಾಶೀಲತೆ ಮೈಗೂಡಿಸಿಕೊಳ್ಳುವುದು ಅತ್ಯಗತ್ಯ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)