varthabharthi


ನಿಮ್ಮ ಅಂಕಣ

ಕೋ-ವಿನ್, ಕ್ಯಾಸಿನೋಗಳು ಮತ್ತು ಅದೃಷ್ಟ

ವಾರ್ತಾ ಭಾರತಿ : 10 Jun, 2021
ಆನಂದ ದಮಾನಿ

ಭಾರತದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಅಪಾಯಿಂಟ್‌ಮೆಂಟ್ ಪಡೆಯುವುದು ಕೆಲವರಿಗೆ ಫಲದಾಯಕ. ಆದರೆ ಹೆಚ್ಚಿನವರಿಗೆ ಹತಾಶೆ, ರೇಜಿಗೆ ಉಂಟುಮಾಡುವ ಅನುಭವವಾಗಿದೆ. ಇದುವರೆಗೆ ಲಸಿಕೆ ಪಡೆಯಬೇಕಾದರೆ ನಾಗರಿಕನೊಬ್ಬ ಅನುಸರಿಸಬೇಕಾದ ಪ್ರತಿಕ್ರಿಯೆ ಹೀಗಿದೆ: ಕೋ-ವಿನ್ ವೆಬ್‌ಸೈಟ್ ಅಥವಾ ಆರೋಗ್ಯ ಸೇತು ಆ್ಯಪ್‌ನಲ್ಲಿ ತನ್ನ ಹೆಸರನ್ನು ನೋಂದಾಯಿಸಿ ತಾನು ಆಯ್ಕೆ ಮಾಡುವ ಒಂದು ಲಸಿಕಾ ಕೇಂದ್ರದಲ್ಲಿ ಅಪಾಯಿಂಟ್‌ಮೆಂಟ್ ಪಡೆಯಬೇಕು. ನೀವು ಸ್ವತಃ ಪ್ರಯತ್ನಿಸುವವರೆಗೆ ಇದು ತುಂಬಾ ಸುಲಭ ಅನ್ನಿಸುತ್ತದೆ. ಆದರೆ ನೀವು ಎಷ್ಟೇ ವೇಗವಾಗಿ ಕನ್‌ಫರ್ಮ್ ಬಟನ್ ಒತ್ತಿದರೂ ಸುಲಭದಲ್ಲಿ ಅಪಾಯಿಂಟ್‌ಮೆಂಟ್ ಸಿಗಲಾರದು. ಯಾಕೆಂದರೆ ಲಸಿಕೆಗಳ ಪೂರೈಕೆ ಬೇಕಾಗುವಷ್ಟು ಇಲ್ಲ. ಯಾಕಿಲ್ಲವೆಂದರೆ ಭಾರತ ಸರಕಾರ ಲಸಿಕೆ ಪೂರೈಕೆಗೆ ಸಾಕಷ್ಟು ಆರ್ಡರ್‌ಗಳನ್ನು ನೀಡಿಲ್ಲ. ನಮ್ಮ ಸೋಷಿಯಲ್ ನೆಟ್‌ವರ್ಕ್‌ನಲ್ಲಿ ಅಪಾಯಿಂಟ್‌ಮೆಂಟ್ ಪಡೆದ ಯಾರೋ ಅದೃಷ್ಟವಂತರನ್ನು ನೋಡಿ ಜನರು ಮತ್ತೆ ಮತ್ತೆ ಬಟನ್ ಕ್ಲಿಕ್ಕಿಸುತ್ತಾರೆ. ಲಸಿಕಾ ಕೇಂದ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸ್ಲಾಟ್ ಓಪನಿಂಗ್‌ಗಳ ಅಲರ್ಟ್ ಸಂದೇಶಗಳನ್ನು ಕಳುಹಿಸುತ್ತಿರುವುದರಿಂದ ಜನರು ‘ಫಾಸ್ಟೆಸ್ಟ್ ಫಿಂಗರ್ ಫಸ್ಟ್’ ಆಟದಲ್ಲಿ ಮುಂದುವರಿಯುತ್ತಲೇ ಇರುತ್ತಾರೆ.

ರ್ಯಾಂಡಮ್ ಅಲರ್ಟ್‌ಗಳು ಮತ್ತು ಪುನಃ ಪುನಃ ವೆಬ್‌ಸೈಟ್‌ನಲ್ಲಿ ಲಾಗಿನ್ ಆಗುವುದರ ಹಿಂದೆ ಇರುವ ಸೈಕಾಲಜಿ ಮತ್ತು ಕ್ಯಾಸಿನೋಗಳಲ್ಲಿ (ಜೂಜು ಕೇಂದ್ರ) ಜೂಜಾಡುವುದು ಹಾಗೂ ಲಾಟರಿ ಟಿಕೆಟ್‌ಗಳನ್ನು ಕೊಂಡುಕೊಳ್ಳುವುದರ ಹಿಂದಿರುವ ಸೈಕಾಲಜಿ ಒಂದೇ ತೆರನಾಗಿದೆ. ಕ್ಯಾಸಿನೋಗಳಲ್ಲಿ ಜನರು ಸ್ಲಾಟ್ ಯಂತ್ರದಲ್ಲಿ ಹಣ ಹಾಕಿ ಬಟನ್ ಒತ್ತುತ್ತಾರೆ. ತಾವು ಗೆಲ್ಲುತ್ತೇವೋ ಇಲ್ಲವೋ ಎಂದು ಅವರಿಗೆ ಗೊತ್ತಿರುವುದಿಲ್ಲ. ತಾವು ಹೆಚ್ಚು ಹೆಚ್ಚು ಜೂಜಾಡಿದಷ್ಟು ಗೆಲ್ಲುವ ಸಾಧ್ಯತೆ ಹೆಚ್ಚು ಎಂಬುದು ಅವರ ನಂಬಿಕೆ. ಆದ್ದರಿಂದ ಅವರು ಜೂಜಾಡುತ್ತಲೇ ಇರುತ್ತಾರೆ. ಲಸಿಕೆಗೆ ಅವಕಾಶ ಸಿಗಲಿಕ್ಕಾಗಿ ತಮ್ಮ ಅದೃಷ್ಟ ಪರೀಕ್ಷೆ ಮಾಡುವಾಗ ಜನರು ಸ್ಲಾಟ್ ಓಪನಿಂಗ್‌ಗಳ ಅಲಾಟ್‌ಗಳಿಗಾಗಿ ಉತ್ಸುಕರಾಗಿ ಕಾಯುತ್ತಾ ಇದ್ದು, ಲಾಗಿನ್ ಕನ್‌ಫರ್ಮ್ ಬಟನ್ ಒತ್ತುತ್ತಾರೆ. ತಮಗೆ ಅಪಾಯಿಂಟ್‌ಮೆಂಟ್ ಸಿಗುತ್ತದೋ ಇಲ್ಲವೋ ಎಂದು ಅವರಿಗೆ ಗೊತ್ತಿಲ್ಲ. ಆದರೆ ತಾವು ಹೆಚ್ಚು ಹೆಚ್ಚು ಬಾರಿ ಲಾಗಿನ್ ಆದಲ್ಲಿ ಅಪಾಯಿಂಟ್‌ಮೆಂಟ್‌ನ ಅದೃಷ್ಟ ಒಲಿಯಬಹುದೆಂದು ತಿಳಿದು ಅವರು ಪ್ರಯತ್ನಿಸುತ್ತಲೇ ಇರುತ್ತಾರೆ. ಕ್ಯಾಸಿನೋದಲ್ಲಿ ಕ್ಯಾಸಿನೋ ಮಾಲಕನಿಗೆ ಹೆಚ್ಚಿನ ವೇಳೆ ಲಾಭವಾಗುತ್ತದೆ. ಜೂಜಾಡಿದವನಿಗೆ ನಷ್ಟವಾಗುತ್ತದೆ. ಆದರೆ ಲಸಿಕೆ ಜೂಜಿನಲ್ಲಿ ಸರಕಾರ ಮತ್ತು ಜನ ಇಬ್ಬರೂ ಸೋಲುತ್ತಿದ್ದಾರೆ.

ಇವಾನ್ ಪಾವ್ಲೊವ್‌ನ ಪ್ರಸಿದ್ಧ ಕಂಡಿಷನಿಂಗ್ ಪ್ರಯೋಗದಲ್ಲಿ ಆಹಾರ ಸಿದ್ಧತೆಗೆ ಸಂಬಂಧಿಸಿದ ಶಬ್ದಗಳು ಕೇಳಿಸಿದ ಕೂಡಲೇ ನಾಯಿಗಳು ಜೊಲ್ಲು ಸುರಿಸುತ್ತವೆ. ಆಹಾರ ನೀಡದೆ ಕೇವಲ ಗಂಟೆ ಬಾರಿಸಿದಾಗಲೂ ಅವುಗಳು ಜೊಲ್ಲು ಸುರಿಸುತ್ತವೆ. ಸ್ವಲ್ಪಹೊತ್ತಿನ ಬಳಿಕ ಗಂಟೆ ಬಾರಿಸಿದ ನಂತರ ಆಹಾರ ನೀಡದೆ ಇದ್ದಾಗ ಅವುಗಳು ಪ್ರತಿಕ್ರಿಯಿಸುವುದನ್ನೇ ನಿಲ್ಲಿಸಿಬಿಡುತ್ತವೆ. ಆದರೆ, ಇಲಿಗಳು ಹಾಗೂ ಪಾರಿವಾಳಗಳಿಗೆ ಆಗೊಮ್ಮೆ ಈಗೊಮ್ಮೆ ಆಹಾರ ನೀಡಿದರೂ ಸಾಕು, ಅವುಗಳು ಬಹಳ ಹೊತ್ತಿನವರೆಗೆ ತಾವು ಪ್ರತಿಕ್ರಿಯಿಸುವುದನ್ನು ಮುಂದುವರಿಸುತ್ತವೆ ಎಂಬುದನ್ನು ಮನೋವಿಜ್ಞಾನಿ ಬಿ. ಎಫ್. ಸ್ಕಿನ್ನರ್ ಕಂಡುಹಿಡಿದ.

ಮನುಷ್ಯರು, ತಮಗೆ ತಾವು ಮತ್ತೆಮತ್ತೆ ಮಾಡುವ ಒಂದು ಕ್ರಿಯೆಗೆ ಆಗೊಮ್ಮೆ ಈಗೊಮ್ಮೆ ಪ್ರತಿಫಲ ದೊರೆತರೂ ಸಾಕು, ಅವರು ಇಲಿಗಳ ಹಾಗೂ ಪಾರಿವಾಳಗಳ ಹಾಗೆ ವರ್ತಿಸುತ್ತಾರೆ. ಜೂಜಾಡುವವರಿಗೆ ತಮ್ಮ ಕಾರ್ಡುಗಳನ್ನು ಆಡಲು ಬಿಡುವ ಮೂಲಕ ಕ್ಯಾಸಿನೋಗಳು ಆಟಗಾರರಿಗೆ ಆಟದ ಮೇಲೆ ತಮಗೆ ನಿಯಂತ್ರಣವಿದೆ ಎಂಬ ಭ್ರಮೆ ಹುಟ್ಟಿಸುತ್ತವೆ. ಹಾಗೆಯೇ ಲಸಿಕೆಗಳ ವಿಷಯದಲ್ಲಿ ಲಾಗಿನ್ ಆಗಿ ಅಪಾಯಿಂಟ್‌ಮೆಂಟ್ ಬುಕ್ ಮಾಡಿ ತಮ್ಮ ಅದೃಷ್ಟ ಪರೀಕ್ಷಿಸುವಂತೆ ಪ್ರೋತ್ಸಾಹಿಸುವ ಮೂಲಕ ಸರಕಾರ ಜನರಿಗೆ ನಿಯಂತ್ರಣದ ಭ್ರಮೆ ನೀಡುತ್ತದೆ. ಅಪಾಯಿಂಟ್‌ಮೆಂಟ್ ಸಿಗುವ, ‘ವಿನ್’ ಆಗುವ ಸಂಭಾವ್ಯತೆ ತೀರಾ ಕಡಿಮೆಯಾದರೂ ಈ ಲಸಿಕೆ ಜೂಜಿನಲ್ಲಿ ಆಶ್ಚರ್ಯ ಅಥವಾ ಅನಿಶ್ಚಿತತೆಯ ಒಂದು ಅಂಶವಿದೆ. ಇದು ಜನರನ್ನು ಆಟದಲ್ಲಿ ಎಂಗೇಜ್ ಆಗಿ ಇಡುವುದಲ್ಲದೆ ಬೇರೇನೂ ಅಲ್ಲ. ಈಗ ಏಳುವ ಪ್ರಶ್ನೆ: ಸರಕಾರ ಒಂದು ಕ್ಯಾಸಿನೋದ ಹಾಗೆ ಲಸಿಕೆಗಳ ವಿಷಯದಲ್ಲಿ ಮುಂದೆಯೂ ಕಾರ್ಯಾಚರಿಸುತ್ತಿರಬೇಕೇ?

 ಕೃಪೆ: TheHindu

(ಲೇಖಕರು ಓರ್ವ ಬಿಹೇವಿಯರಲ್ ವಿಜ್ಞಾನಿ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)