varthabharthi


ಕ್ರೀಡೆ

ಭಾರತೀಯ ಫುಟ್ಬಾಲ್ ತಂಡದ ಮಾಜಿ ನಾಯಕ, ಉಡುಪಿಯ ಶೇಖರ್ ಬಂಗೇರ ಕೋವಿಡ್ ಗೆ ಬಲಿ

ವಾರ್ತಾ ಭಾರತಿ : 10 Jun, 2021

ಉಡುಪಿ, ಜೂ.10: ಭಾರತ ಹಾಗೂ ಮಹಾರಾಷ್ತ್ರ ಫುಟ್‌ಬಾಲ್ ತಂಡದ ಮಾಜಿ ನಾಯಕ, ಗೋಲ್‌ಕೀಪರ್ ಹಾಗೂ ಕೋಚ್ ಶೇಖರ ಬಂಗೇರ ಅವರು ಜೂ. 8ರಂದು ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. 74 ವರ್ಷ ಪ್ರಾಯದ ಬಂಗೇರ, ಜೂ.1ರಂದು ಸೋಂಕಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಉಡುಪಿ ಸಮೀಪದ ಬಡಾನಿಡಿಯೂರು ಮೂಲದ ಶೇಖರ ಬಂಗೇರ ಅವರ ಫುಟ್‌ಬಾಲ್ ಬದುಕೆಲ್ಲಾ ಅರಳಿ, ಬೆಳಗಿದ್ದು ಮುಂಬಯಿಯ ಓರ್ಕೆ ಮಿಲ್ಸ್ ಫುಟ್‌ಬಾಲ್ ತಂಡದಲ್ಲಿ. ಫುಟ್‌ಬಾಲ್‌ನಲ್ಲಿ ಗೋಲ್‌ಕೀಪರ್ ಆಗಿ ಮಿಂಚಿದ ಅವರು 80ರ ದಶಕದ ಪ್ರಾರಂಭದಲ್ಲಿ ಭಾರತ ಎಐಎಫ್‌ಎಫ್ ಫುಟ್‌ಬಾಲ್ ತಂಡದ ನಾಯಕರೂ ಆಗಿದ್ದರು.

ಮುಂಬಯಿಯ ಓರ್ಕೆ ಮಿಲ್ಸ್ ಫುಟಬಾಲ್ ತಂಡದ ಗೋಲ್‌ಕೀಪರ್, ನಾಯಕರಾಗಿದ್ದ ಅವರು ತಂಡ ಪ್ರತಿಷ್ಠಿತ ಫೆಡರೇಷನ್ ಕಪ್ ಫುಟ್‌ಬಾಲ್ ಪ್ರಶಸ್ತಿ ಗೆಲ್ಲಲು ಪ್ರಮುಖ ಕಾರಣರಾಗಿದ್ದರು. ಪ್ರಶಸ್ತಿಗಾಗಿ ಓರ್ಕೆ ಮಿಲ್ಸ್, ದೇಶದ ಬಲಿಷ್ಠ ಫುಟ್‌ಬಾಲ್ ತಂಡಗಳಾದ ಕೊಲ್ಕತ್ತಾದ ಮೋಹನ್ ಬಾಗನ್ ಹಾಗೂ ಮುಂಬಯಿಯ ಡೆಂಪೊ ತಂಡಗಳನ್ನು ಪರಾಭವಗೊಳಿಸಿತ್ತು.

ಸಕ್ರಿಯ ಫುಟ್‌ಬಾಲ್‌ನಿಂದ ನಿವೃತ್ತರಾದ ಬಳಿಕ ಬಂಗೇರ ಕೋಚ್ ಆಗಿ ಮಿಂಚಿದರು. 2017ರಲ್ಲಿ ಅವರು ಭಾರತದ ಅಂತಾರಾಷ್ಟ್ರೀಯ ಗೋಲ್‌ಕೀಪರ್ ಭಾಸ್ಕರ ಮಾಲ್ಟಿ, ಯೂಸುಫ್ ಅನ್ಸಾರಿ ಹಾಗೂ ಇತರ ಸಹ ಆಟಗಾರರೊಂದಿಗೆ ಸೇರಿ ಮುಂಬಯಿಯಲ್ಲಿ ಗೋಲ್‌ಕೀಪರ್ಸ್‌ ಅಕಾಡೆಮಿ ಸ್ಥಾಪಿಸಿದ್ದು, ಯುವ ಪ್ರತಿಭೆಗಳಿಗೆ ಫುಟ್‌ಬಾಲ್ ಗೋಲ್‌ಕೀಪಿಂಗ್‌ನಲ್ಲಿ ತರಬೇತಿ ನೀಡುತಿದ್ದರು.

ಮುಂಬಯಿಯಲ್ಲಿ ಈ ವರ್ಷದ ಫೆಬ್ರವರಿಯಲ್ಲಿ ಪ್ರಾರಂಭಗೊಂಡ ಧನಬಾದ್ ಫುಟ್‌ಬಾಲ್ ಅಕಾಡೆಮಿಯ ಮುಖ್ಯ ಕೋಚ್ ಆಗಿ ಅವರು 10ವರ್ಷದ ಮೇಲಿನ ಬಾಲಕ-ಬಾಲಕಿಯರಿಗೆ ಚರ್ಚ್‌ಗೇಟ್‌ನ ಕೆಎಸ್‌ಎ ಮೈದಾನದಲ್ಲಿ ಫುಟ್‌ಬಾಲ್ ತರಬೇತಿಯನ್ನು ನೀಡುತಿದ್ದರು. ಇದರ ಶಾಖೆಯೊಂದನ್ನು ಉಡುಪಿ-ಮಣಿಪಾಲದಲ್ಲಿ ಪ್ರಾರಂಭಿಸುವ ಉದ್ದೇಶದಿಂದ ಅವರು ಕಳೆದ ಒಂದೆರಡು ತಿಂಗಳುಗಳಿಂದ ಉಡುಪಿಯಲ್ಲಿದ್ದರು ಎಂದು ತಿಳಿದು ಬಂದಿದೆ. ಶೇಖರ್ ಬಂಗೇರ ಅವರ ಪತ್ನಿ ಶಿರ್ವ ಮೂಲದವರಾಗಿದ್ದು ಅವರ ಕುಟುಂಬ ಮುಂಬಯಿಯಲ್ಲಿದೆ.

ಮುಂಬಯಿಯಲ್ಲಿದ್ದಾಗ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ಅವರ ಅಂತ್ಯಕ್ರಿಯೆ ಇಂದು ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್‌ನಲ್ಲಿ ನಡೆಯಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)