varthabharthi


ತಿಳಿ ವಿಜ್ಞಾನ

ನಾಳೆ ವಿಶ್ವ ರಕ್ತದಾನಿಗಳ ದಿನ

ರಕ್ತದಾನ ಮಾಡುವುದೇಕೆಂದರೆ...!

ವಾರ್ತಾ ಭಾರತಿ : 13 Jun, 2021
ಆರ್.ಬಿ ಗುರುಬಸವರಾಜು

ಟಿಫಿನ್ ನಂತರ ಪೇಪರ್ ಓದ್ತಾ ಕುಳಿತಿದ್ದ ತಂದೆಗೆ ಪಪ್ಪಾಯಾವುದೋ ಫೋನ್ ಕಾಲ್ ಎಂದು ಫೋನ್ ತಂದು ತಂದೆಯ ಕೈಗಿಟ್ಟಳು ಜಾಸ್ಮಿನ್. ಅತ್ತ ಕಡೆಯಿಂದ ‘‘ಸರ್ ಅರ್ಜೆಂಟಾಗಿ ರಕ್ತ ಬೇಕಾಗಿತ್ತು. ಎಲ್ಲಿಯಾದ್ರೂ ವ್ಯವಸ್ಥೆಯಾಗುತ್ತಾ?’’ ಎಂಬ ಕೋರಿಕೆ ಸಲ್ಲಿಸಿದರು. ಪೇಶೆಂಟ್ ಮತ್ತು ಆಸ್ಪತ್ರೆಯ ಮಾಹಿತಿ ಪಡೆದ ತಂದೆ ಅಂಗಿ ಧರಿಸಿ ಹೊರಡಲು ಸಿದ್ಧವಾದರು. ‘‘ಪಪ್ಪಾ, ರಕ್ತ ಯಾಕೆ ಕೊಡ್ತೀರಾ? ನಿಮಗೆ ತೊಂದರೆಯಾಗಲ್ವಾ?’’ ಎಂದಳು ಜಾಸ್ಮಿನ್. ‘‘ಇಲ್ಲ ಪುಟ್ಟಿ. ರಕ್ತ ಕೊಡೋದ್ರಿಂದ ತೊಂದರೆ ಏನೂ ಆಗಲ್ಲ. ಅದರಿಂದ ನಮಗೆ ಬಹಳ ಉಪಯೋಗ ಇದೆ. ಅದನ್ನೆಲ್ಲಾ ಹೇಳಲು ಈಗ ಟೈಮಿಲ್ಲ. ಬಂದ ನಂತರ ಎಲ್ಲಾ ಹೇಳ್ತೇನೆ. ಅಲ್ಲಿವರೆಗೂ ರಕ್ತ ಹಾಗೂ ಅದರ ವಿಧಗಳ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದುಕೊಂಡಿರು’’ ಎನ್ನುತ್ತಾ ಬೈಕ್ ಏರಿ ಆಸ್ಪತ್ರೆಗೆ ಹೊರಟೇ ಬಿಟ್ಟರು.

ಒಂದು ಗಂಟೆಯ ನಂತರ ಮನೆಗೆ ಬಂದ ತಂದೆಯನ್ನು ಸ್ವಾಗತಿಸಿದ ಜಾಸ್ಮಿನ್ ರಕ್ತದಾನದ ಬಗ್ಗೆ ತಿಳಿಯಲು ಕಾತುರಳಾಗಿದ್ದಳು. ‘‘ಅಪ್ಪಾರಕ್ತ ಯಾರಿಗೆ ಬೇಕಾಗಿತ್ತು?.’’ ‘‘ನನ್ನ ಸ್ನೇಹಿತನ ತಂಗಿಗೆ ಸಿಜೇರಿಯನ್ ಮಾಡಿದ್ದಾರೆ. ಅವರಿಗೆ ರಕ್ತದ ಅಗತ್ಯವಿತ್ತು. ಕೊಟ್ಟು ಬಂದೆ’’ ಎಂದರು ತಂದೆ. ‘‘ರಕ್ತ ಕೊಟ್ಟಿದ್ದರಿಂದ ನಿನಗೆ ಏನೂ ಆಗಲಿಲ್ಲವಾ? ಎಂದು ಮರುಪ್ರಶ್ನೆ ಹಾಕಿದಳು ಜಾಸ್ಮಿನ್. ‘‘ಜಾಸ್ಮಿನ್ ಬಾ ಇಲ್ಲಿ’’ ಒಳಗಿನಿಂದ ಅಮ್ಮ ಕೂಗಿ ಕರೆದರು. ಒಳಗೆ ಬಂದ ಜಾಸ್ಮಿನ್‌ಗೆ ಸದ್ಯ ಅಪ್ಪನಿಗೆ ಒಂದಿಷ್ಟು ವಿಶ್ರಾಂತಿಯ ಅಗತ್ಯವಿುವುದನ್ನು ತಾಯಿ ತಿಳಿಸಿ ಹೇಳಿದಳು.

ತಂದೆ ವಿಶ್ರಾಂತಿ ಪಡೆದ ಬಳಿಕ ನಿಧಾನವಾಗಿ ಅವರ ಬಳಿ ಬಂದು ಕುಳಿತ ಜಾಸ್ಮಿನ್ ಪ್ರಶ್ನೆ ಕೇಳಲು ಕಾತುರಳಾಗಿದ್ದುದನ್ನು ಗಮನಿಸಿದ ತಂದೆ ‘‘ರಕ್ತ ಹಾಗೂ ರಕ್ತದ ಗುಂಪುಗಳ ಬಗ್ಗೆ ತಿಳಿದುಕೊಂಡೆಯಾ?’’ ಎಂದು ಪ್ರಶ್ನಿಸಿದರು. ಹೌದೆಂಬಂತೆ ತಲೆಯಾಡಿಸಿದಳು ಜಾಸ್ಮಿನ್. ಸರಿ ಹಾಗಾದರೆ ರಕ್ತದ ಬಗ್ಗೆ ನಿನಗೇನು ತಿಳಿದಿದೆ ಸಂಕ್ಷಿಪ್ತವಾಗಿ ಹೇಳು ನೋಡೋಣ ಎಂದರು ತಂದೆ. ‘‘ಆರೋಗ್ಯವಂತ ವಯಸ್ಕ ಮಾನವನ ದೇಹದಲ್ಲಿ 5-6 ಲೀಟರ್‌ನಷ್ಟು ರಕ್ತ ಇರುತ್ತದೆ. ಅದರಲ್ಲಿ ಶೇ.90ರಷ್ಟು ಪ್ಲಾಸ್ಮಾ ಇದ್ದು, ಇನ್ನುಳಿದ ಶೇ.10ರಷ್ಟು ಕೆಂಪು ಮತ್ತು ಬಿಳಿ ರಕ್ತಕಣಗಳು, ಕೊಬ್ಬು, ಪ್ರೊಟೀನ್, ಪಿಷ್ಟ, ವಿಟಮಿನ್ ಮತ್ತು ಖನಿಜದ ಅಂಶಗಳಿವೆ. ಯಕೃತ್ ಮತ್ತು ಮೂಳೆಗಳ ಅಸ್ಥಿಮಜ್ಜೆಗಳಲ್ಲಿ ರಕ್ತದ ವಿವಿಧ ಘಟಕಗಳು ತಯಾರಾಗುತ್ತವೆ. ರಕ್ತದಲ್ಲಿ ಮುಖ್ಯವಾಗಿ ಎ, ಬಿ, ಎಬಿ ಮತ್ತು ಒ ಎಂಬ ನಾಲ್ಕು ಗುಂಪುಗಳಿವೆ. ಒಂದೇ ಗುಂಪಿನ ರಕ್ತವು ಮಾತ್ರ ಪರಸ್ಪರ ಹೊಂದಾಣಿಕೆಯಾಗುತ್ತದೆ. ರಕ್ತ ಪೂರಣದ ವೇಳೆ ಹೊಂದಾಣಿಕೆ ಗಮನಿಸಿ ರಕ್ತ ಪೂರಣ ಮಾಡಲಾಗುತ್ತದೆ’’ ಎಂದು ತನ್ನ ಜ್ಞಾನದ ಮಟ್ಟವನ್ನು ತಿಳಿಸಿದಳು. ‘‘ಓಹ್ ರಕ್ತದ ಬಗ್ಗೆ ನಿನ್ನ ತಿಳುವಳಿಕೆಯನ್ನು ಮೆಚ್ಚಲೇಬೇಕು. ನಾನೀಗ ರಕ್ತ ಯಾಕೆ ಕೊಡಬೇಕು ಎಂಬ ನಿನ್ನ ಪ್ರಶ್ನೆಗೆ ಉತ್ತರಿಸುವ ಪ್ರಯತ್ನ ಮಾಡುತ್ತೇನೆ’’ ಎಂದು ಹೇಳಿ ತಮ್ಮ ಮಾತನ್ನು ಪ್ರಾರಂಭಿಸಿದರು.

ರಕ್ತ ಕೊಡುವುದನ್ನು ದಾನ ಎಂದು ಹೇಳಲಾಗುತ್ತದೆ. ಹೌದು ಏಕೆಂದರೆ ರಕ್ತವನ್ನು ಪ್ರಯೋಗಶಾಲೆಯಲ್ಲಾಗಲೀ ಅಥವಾ ಇನ್ನಾವುದೇ ಸ್ಥಳಗಳಲ್ಲಿ ಉತ್ಪತ್ತಿ ಮಾಡಲು ಸಾಧ್ಯವಿಲ್ಲ. ಅದನ್ನು ಕೇವಲ ಮಾನವರು ಮಾತ್ರ ಮಾನವರಿಗೆ ಕೊಡಲು ಇರುವ ಅವಕಾಶ. ಅದಕ್ಕಾಗಿ ಇದನ್ನು ರಕ್ತದಾನ ಎನ್ನಲಾಗುತ್ತದೆ. ರಕ್ತದಾನವು ಮಹತ್ವದ ದಾನವಾಗಿದೆ. ಏಕೆಂದರೆ ನಮ್ಮ ದೇಶದಲ್ಲಿ ಪ್ರತಿ ಎರಡು ಸೆಕೆಂಡಿಗೆ ಒಬ್ಬರಿಗೆ ರಕ್ತದ ಅಗತ್ಯವಿದೆ. ಪ್ರತಿದಿನ 38,000ಕ್ಕೂ ಹೆಚ್ಚು ಜನರಿಗೆ ರಕ್ತ ಬೇಕಾಗುತ್ತದೆ. ನಮ್ಮ ದೇಶದಲ್ಲಿ ಪ್ರತಿವರ್ಷ 5ಕೋಟಿ ಯೂನಿಟ್ ರಕ್ತದ ಅಗತ್ಯವಿದೆ. ಆದರೆ ಅದರಲ್ಲಿ ಮೂರು ಕೋಟಿ ಯೂನಿಟ್‌ನಷ್ಟು ಮಾತ್ರ ಸರಬರಾಜು ಆಗುತ್ತಿದೆ. ಬಹುತೇಕರು ಸಕಾಲಕ್ಕೆ ಅಗತ್ಯವಾದ ರಕ್ತ ದೊರೆಯುದೆ ಸಾವನ್ನಪ್ಪುತ್ತಿದ್ದಾರೆ. ಅಪಘಾತ, ಆಪರೇಶನ್ ಮುಂತಾದ ತುರ್ತು ಆರೋಗ್ಯ ಸೇವೆಗೆ ರಕ್ತದ ಅಗತ್ಯವಿದೆ. ಕ್ಯಾನ್ಸರ್ ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುವವರಿಗೆ ಆಗಾಗ ರಕ್ತ ಬೇಕೇ ಬೇಕು. ನಿಯಮಿತವಾಗಿ ರಕ್ತದಾನ ಮಾುವುದರಿಂದ ಹಲವಾರು ಲಾಭಗಳಿವೆ.

ನಿಯಮಿತವಾಗಿ ರಕ್ತ ನೀಡುವುದರಿಂದ ವೈಯಕ್ತಿಕ ಆರೋಗ್ಯದ ತಪಾಸಣೆ ಆಗುತ್ತದೆ. ಅಂದರೆ ರಕ್ತ ನೀಡಲು ಹೋದಾಗಲೆಲ್ಲ, ಬಿ.ಪಿ, ಮಧುಮೇಹ, ದೇಹದ ಉಷ್ಣತೆ, ಹೀಮೋಗ್ಲೋಬೀನ್, ಪ್ಲೇಟ್‌ಲೆಟ್ಸ್, ಹೆಚ್‌ಐವಿ ಮುಂತಾದ ರಕ್ತ ಸಂಬಂಧಿ ಕಾಯಿಲೆಗಳನ್ನೆಲ್ಲ ಪರೀಕ್ಷಿಸಲಾಗುತ್ತದೆ. ಅದೂ ಎಲ್ಲವೂ ಉಚಿತವಾಗಿ ತಪಾಸಣೆ ಮಾಡಲಾಗುತ್ತದೆ. ಒಂದು ವೇಳೆ ತಪಾಸಣೆ ಮಾಡಿದ ಅಂಶಗಳಲ್ಲಿ ಯಾವುದಾದರೂ ತೊಂದರೆ ಇದ್ದರೂ ತಕ್ಷಣವೇ ಆ ಬಗ್ಗೆ ರೋಗನಿಧಾನ ವ್ಯವಸ್ಥೆ ಕೈಗೊಳ್ಳಲು ಅನುಕೂಲವಾಗುತ್ತದೆ. ಹಾಗಾಗಿ ರಕ್ತ ನೀಡುವುದು ಒಂದು ರೀತಿಯ ಉಚಿತ ದೇಹ ತಪಾಸಣೆ ಮಾಡಿಸಿದಂತೆ ಎನ್ನಬಹುದು.

ರಕ್ತದಾನ ಮಾಡುವುದರಿಂದ ಹಿಮೋಕ್ರೊಮಾಟೋಸಿನ್‌ನಿಂದ ದೂರ ಇರಬಹುದು. ರಕ್ತದಲ್ಲಿ ಕಬ್ಬಿಣಾಂಶವು ಮಿತಿಮೀರಿದಾಗ ಅಗುವ ತೊಂದರೆಯೇ ಹಿಮೋಕ್ರೊಮಾಟೋಸಿನ್. ನಿಯಮಿತವಾಗಿ ರಕ್ತದಾನ ಮಾಡುವುದರಿಂದ ರಕ್ತದಲ್ಲಿ ಕಬ್ಬಿಣಾಂಶವು ಶೇಖರವಾಗುವುದಿಲ್ಲ. ಜೊತೆಗೆ ನಿಯಮಿತವಾಗಿ ರಕ್ತದಾನ ಮಾಡುವುದರಿಂದ ರಕ್ತಕಾ್ಯನ್ಸರ್‌ನ ಅಪಾಯ ದೂರವಾಗುತ್ತದೆ.

ರಕ್ತದಾನದ ಬಹುಮುಖ್ಯ ಲಾಭವೆಂದರೆ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬಹುದು. ಅಮೆರಿಕನ್ ಜರ್ನಲ್ ಆಫ್ ಎಪಿಡೆಮಿಯಾಲಜಿ ನಡೆಸಿದ ಅಧ್ಯಯನದ ಪ್ರಕಾರ ವರ್ಷಕ್ಕೊಮ್ಮೆಯಾದರೂ ರಕ್ತದಾನ ಮಾಡುವುದರಿಂದ ಹೃದಯಾಘಾತದ ಅಪಾಯವನ್ನು ಶೇ.88ರಷ್ಟು ಕಡಿಮೆ ಮಾಡಬಹುದು. ರಕ್ತದಾನ ಮಾಡುವುದರಿಂದ ಯಕೃತ್ತಿನ ಆರೋಗ್ಯ ಉತ್ತಮವಾಗಿರುತ್ತದೆ. ಅನಗತ್ಯವಾಗಿ ರಕ್ತದಲ್ಲಿ ಕೊಬ್ಬಿನ ಅಂಶ ಂಗ್ರಹವಾಗುವುದು ತಪ್ಪುತ್ತದೆ.

ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಸ್ಥೂಲಕಾಯವನ್ನು ದೂರವಿಡಬಹುದು. ಪ್ರತಿಬಾರಿ ರಕ್ತ ನೀಡಿದಾಗ ದೇಹದಲ್ಲಿನ ಅನಗತ್ಯವಾಗಿ ಶೇಖರವಾಗುವ ಕೊಬ್ಬಿನ ಪ್ರಮಾಣ ಕಡಿಮೆಯಾಗುತ್ತದೆ. ಇತರ ಆರೋಗ್ಯದ ಅಸ್ವಸ್ಥತೆಗಳು ದೂರವಾಗುತ್ತದೆ. ರಕ್ತದಾನ ಮಾಡಿದಾಗ ನಷ್ಟವಾದ ರಕ್ತವನ್ನು ಮರುಪೂರಣ ಮಾಡಿಕೊಳ್ಳಲು ದೇಹವು ಸಜ್ಜಾಗುತ್ತದೆ. ಹೊಸ ರಕ್ತಕಣಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ರಕ್ತದಾನವು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ದೀಘಾರ್ಯುಷ್ಯವನ್ನು ಹೊಂದಲು ಸಹಕಾರಿ.

ರಕ್ತದಾನವು ಒಂದು ರೀತಿಯ ಸಾಮಾಜಿಕ ಕಾರ್ಯವಾಗಿರುವುದರಿಂದ ಮಾನಸಿಕ ನೆಮ್ಮದಿ ಹೆಚ್ಚುತ್ತದೆ. ಅಪಾಯದಲ್ಲಿರುವ ಜೀವಕ್ಕೆ ಅಗತ್ಯ ರಕ್ತ ನೀಡುವುದರಿಂದ ಜೀವ ಉಳಿಸಿದ ನೆಮ್ಮದಿ ಇರುತ್ತದೆ. ಜೊತೆಗೆ ರಕ್ತ ಪಡೆದವರಿಂದ ಅಭಿನಂದನೆ ಮತ್ತು ಕೃತಜ್ಞತೆ ದೊರೆಯುವುದರಿಂದ ಮನಸ್ಸು ಉಲ್ಲಸಿತವಾಗಿರುತ್ತದೆ.

ರಕ್ತದಾನವು ಕೇವಲ ವೈಯಕ್ತಿಕ ಲಾಭಗಳನ್ನು ಮಾತ್ರ ನೀಡುವುದಿಲ್ಲ. ಬದಲಾಗಿ ಸಾಮಾಜಿಕ ಲಾಭಗಳನ್ನು ನೀಡುತ್ತದೆ. ರಕ್ತದಾನ ಮಾಡುವುದರಿಂದ ಅನೇಕ ಜೀವಗಳನ್ನು ಉಳಿಸಿದ ಸಾರ್ಥಕತೆ ಇರುತ್ತದೆ. ಅಂದರೆ ಅಪಾಯದಲ್ಲಿರುವ ಜೀವಕ್ಕೆ ಅಗತ್ಯವಾದ ರಕ್ತ ನೀಡಿ ಸಾವಿನಿಂದ ಬದುಕಿಸುವುದರಿಂದ ಆ ಜೀವವನ್ನು ನಂಬಿಕೊಂಡ ಇಡೀ ಕುಟುಂಬಕ್ಕೆ ಪರೋಕ್ಷವಾಗಿ ಸಹಾಯ ಮಾಡಿದಂತಾಗುತ್ತದೆ. ರಕ್ತದಾನವು ಇಂದಿನ ಅತ್ಯಂತ ಪ್ರಮುಖ ಸಾಮಾಜಿಕ ಜವಾಬ್ದಾರಿಯಾಗಿದೆ.

ರಕ್ತದಾನ ಮಾಡುವುದರಿಂದ ಅನಾರೋಗ್ಯ ಸ್ಥಿತಿ ಉಂಟಾಗುತ್ತದೆ ಎಂಬ ತಪ್ಪುತಿಳಿವಳಿಕೆ ಬಹುತೇಕರಲ್ಲಿದೆ. ಕೆಲವರಲ್ಲಿ ರಕ್ತದಾನ ಮಾಡಿದ ನಂತರ ಕೆಲವೊಂದಿಷ್ಟು ಸಣ್ಣ ಪುಟ್ಟ ಅನಾರೋಗ್ಯ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ತಲೆ ಸುತ್ತುವುದು, ರಕ್ತ ತೆಗೆದ ಭಾಗದಲ್ಲಿ ನೆವೆ ಉಂಟಾಗುವುದು ಸಹಜ. ಮೊದಲ ಬಾರಿಗೆ ರಕ್ತದಾನ ಮಾಡಿದವರಲ್ಲಿ ಒಂದು ರೀತಿಯ ಭಯ ಇರುತ್ತದೆ. ಇದೂ ಸಹ ಮಾನಸಿಕವಾಗಿ ಕಿರಿಕಿರಿ ಉಂಟು ಮಾಡುತ್ತದೆ. ಇದನ್ನೇ ಅವರು ತೊಂದರೆ ಎಂದುಕೊಂಡು ರಕ್ತ ನೀಡಲು ಹಿಂದೇಟು ಹಾಕುತ್ತಾರೆ. ಆದರೆ ರಕ್ತದಾನದಿಂದ ಆಗುವ ಪ್ರಯೋಜನಗಳನ್ನು ಅರಿತುಕೊಂಡರೆ ಇಂತಹ ಅನಗತ್ಯ ಮಾನಸಿಕ ಗೊಂದಲನ್ನು ದೂರ ಮಾಡಿ ರಕ್ತದಾನ ಮಾಡುವ ಮೂಲಕ ಜಾಗತಿಕ ರಕ್ತದಾನಿ ಎನಿಸಿಕೊಂಡು ನಮ್ಮ ಆರೋಗ್ಯದ ಜೊತೆಗೆ ಸಮುದಾಯದ ಆರೋಗ್ಯವನ್ನೂ ಕಾಪಾಡಬಹುದಲ್ಲವೇ? ಎಂದು ಹೇಳುತ್ತಾ ತಮ್ಮ ರಕ್ತದಾನದ ಪ್ರಯೋಜನ ಮತ್ತು ಮಹತ್ವವನ್ನು ತಿಳಿಸಿದರು. ರಕ್ತದಾನದ ಬಗ್ಗೆ ಇರುವ ತಪ್ಪುತಿಳುವಳಿಕೆ ಬಿಟ್ಟು ಜೀವ ಉಳಿಸುವ ಸಾಮಾಜಿಕ ಜವಾಬ್ದಾರಿಯನ್ನು ಎಲ್ಲರೂ ಹೊರೋಣವೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)