varthabharthi


ಸಂಪಾದಕೀಯ

ಕೋವಿಡ್ ಗಾಯಕ್ಕೆ ಬೆಲೆ ಏರಿಕೆಯ ಬರೆ

ವಾರ್ತಾ ಭಾರತಿ : 15 Jun, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಕಳೆದ ಒಂದೂವರೆ ವರ್ಷದಿಂದ ಕೋವಿಡ್ ವೈರಾಣು ಜನರ ಪ್ರಾಣವನ್ನು ಹಿಂಡುತ್ತಿದೆ. ಈ ವರ್ಷ ಮತ್ತೆ ಎರಡನೇ ಅಲೆ ಅಪ್ಪಳಿಸಿ ಲಾಕ್‌ಡೌನ್ ಮಾಡುವುದು ಅನಿವಾರ್ಯವಾಯಿತು. ಕಳೆದ ವರ್ಷ ಲಾಕ್‌ಡೌನ್‌ನಿಂದ ತತ್ತರಿಸಿ ಹೋಗಿದ್ದ ಜನ ಈ ಸಲವಂತೂ ತೀವ್ರ ತೊಂದರೆಗೆ ಸಿಲುಕಿದ್ದಾರೆ. ಎಲ್ಲ ಜನ ವರ್ಗಗಳ ಆರ್ಥಿಕ ಪರಿಸ್ಥಿತಿಯಲ್ಲಿ ಏರು ಪೇರಾಗಿದೆ. ದುಡಿದುಂಡು ಜೀವಿಸುವ ಜನರ ಬದುಕಂತೂ ಮೂರಾಬಟ್ಟೆಯಾಗಿದೆ. ದೇಶದಲ್ಲಿ ಇಪ್ಪತ್ತು ಕೋಟಿಗೂ ಹೆಚ್ಚು ಜನ ನಿರುದ್ಯೋಗದ ದವಡೆಗೆ ಸಿಲುಕಿದ್ದಾರೆ. ಉತ್ಪಾದನಾ ವಲಯ ಹಾಗೂ ಸೇವಾ ವಲಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಔದ್ಯಮಿಕ ಚಟುವಟಿಕೆಗಳು ನಿಂತು ಹೋಗಿವೆ. ಬಡವರು ಮತ್ತು ಮಧ್ಯಮವರ್ಗದ ಜನರು ಆದಾಯದ ಮೂಲವನ್ನು ಕಳೆದುಕೊಂಡು ದಿಕ್ಕೆಟ್ಟು ನಿಂತಿದ್ದಾರೆ. ಇದರ ಜೊತೆಗೆ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಮತ್ತಷ್ಟು ಹೈರಾಣಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಜನರ ನೆರವಿಗೆ ಬರಬೇಕಾದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಮ್ಮ ಹೊಣೆಗಾರಿಕೆಯನ್ನು ಮರೆತಂತೆ ಕಾಣುತ್ತದೆ. ಕೇಂದ್ರ ಸರಕಾರ ತೈಲೋತ್ಪನ್ನಗಳ ದರ ಹೆಚ್ಚಿಸಿದೆ. ರಾಜ್ಯ ಸರಕಾರ ವಿದ್ಯುತ್ ದರ ಏರಿಕೆ ಮಾಡಿದೆ. ಇದು ನಿಜಕ್ಕೂ ಆಘಾತಕಾರಿ ಸಂಗತಿ.

ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಗಣನೀಯವಾಗಿ ಏರಿಸಿದೆ. ಪೆಟ್ರೋಲ್ ಬೆಲೆ ದೇಶದ ಬಹುತೇಕ ಕಡೆ ರೂ. 100ರ ಗಡಿ ತಲುಪಿದೆ. ಡೀಸೆಲ್ ಬೆಲೆಯೂ ಇದರಿಂದ ಹೊರತಾಗಿಲ್ಲ. ಇದರ ಪರಿಣಾಮವಾಗಿ ಎಲ್ಲ ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ತೈಲೋತ್ಪನ್ನಗಳ ಬೆಲೆ ಏರಿಕೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮನ ಬಂದಂತೆ ಹಾಕಿದ ತೆರಿಗೆಯೇ ಕಾರಣ. ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಾಗಿದ್ದಾಗಲೂ ಜನರಿಗೆ ಅದರ ಪ್ರಯೋಜನವಾಗಲಿಲ್ಲ. ಈಗ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಳದ ನೆಪವನ್ನು ಕೇಂದ್ರ ಸರಕಾರ ಹೇಳುತ್ತಿದ್ದರೂ ತೈಲೋತ್ಪನ್ನಗಳ ಬೆಲೆ ಹೆಚ್ಚಳಕ್ಕೆ ನಿಜವಾದ ಕಾರಣ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಹಾಕಿದ ತೆರಿಗೆಯಲ್ಲದೆ ಬೇರೇನೂ ಅಲ್ಲ. ಮೂವತ್ತರಷ್ಟು ಬೆಲೆಯ ಪೆಟ್ರೋಲ್‌ಗೆ ಜನ ಸಾಮಾನ್ಯರು ರೂ. ಎಪ್ಪತ್ತರಷ್ಟು ತೆರಿಗೆ ಕಟ್ಟಬೇಕಾಗಿದೆ. ಇಂತಹ ಸನ್ನಿವೇಶದಲ್ಲೂ ಜನಸಾಮಾನ್ಯರ ಬವಣೆಗೆ ಸ್ಪಂದಿಸದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಇಳಿಸಲು ನಿರಾಕರಿಸಿದೆ. ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ‘‘ಬೆಲೆ ಏರಿಕೆಯಿಂದ ಜನರು ತೊಂದರೆ ಅನುಭವಿಸಿದರೂ ಪೆಟ್ರೋಲ್, ಡೀಸೆಲ್ ಹಾಗೂ ಅಡಿಗೆ ಅನಿಲಗಳ ದರ ಕಡಿಮೆ ಮಾಡಲು ಸಾಧ್ಯವಿಲ್ಲ’’ ಎಂದು ಅಸಡ್ಡೆಯಿಂದ ಮಾತಾಡಿದ್ದಾರೆ.

ಜನಸಾಮಾನ್ಯರ ಹಾಗೂ ಮಧ್ಯಮ ವರ್ಗದವರ ಪರಿಸ್ಥಿತಿ ಎಂದಿನಂತೆ ಇದ್ದಿದ್ದರೆ ಬೆಲೆ ಏರಿಕೆಯಾದರೂ ಜನರು ತಮ್ಮ ಜೀವನಕ್ಕೆ ಅಗತ್ಯವಿರುವಷ್ಟು ಹಣವನ್ನು ಹೇಗೋ ಸಂಪಾದಿಸಿ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದರು. ಆದರೆ ಲಾಕ್‌ಡೌನ್ ಪರಿಣಾಮವಾಗಿ ಜನರ ಆದಾಯ ಮೂಲಗಳೇ ಮುಚ್ಚಿ ಹೋಗಿವೆ. ಕೆಲವರು ಮನೆಯಿಂದ ಕೆಲಸ ಮಾಡುತ್ತಿದ್ದರೂ ದೈನಂದಿನ ಜೀವನಕ್ಕೆ ಸಾಕಾಗುವಷ್ಟು ಗಳಿಕೆ ಆಗುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ ಸರಕಾರಗಳ ಅಸಡ್ಡೆಯ ನೀತಿಯಿಂದ ಜನರು ಕಂಗಾಲಾಗಿದ್ದಾರೆ.

ಕೇಂದ್ರ ಸರಕಾರ ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಸಿದ್ದರೆ ಕರ್ನಾಟಕ ಸರಕಾರ ಕೇಂದ್ರದ ಜೊತೆಗೆ ಪೈಪೋಟಿಗೆ ನಿಂತಂತೆ ವಿದ್ಯುತ್ ದರ ಹೆಚ್ಚಳ ಮಾಡಿದೆ. ಈ ಹಿಂದೆ 2020ರ ನವೆಂಬರ್‌ನಲ್ಲಿ ಪ್ರತಿ ಯೂನಿಟ್ ವಿದ್ಯುತ್ ದರದಲ್ಲಿ 40 ಪೈಸೆಯಷ್ಟು ಹೆಚ್ಚಳ ಮಾಡುವ ತೀರ್ಮಾನವನ್ನು ಕೈಗೊಳ್ಳಲಾಗಿತ್ತು. ಈಗ ಮತ್ತೆ ಏಳು ತಿಂಗಳೊಳಗೆ ಪ್ರತಿ ಯೂನಿಟ್‌ಗೆ 30 ಪೈಸೆ ಹೆಚ್ಚಿಸುವ ತೀರ್ಮಾನವನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ಕೈಗೊಂಡಿದೆ. ಎಪ್ರಿಲ್ 1ರಿಂದ ಪೂರ್ವಾನ್ವಯವಾಗುವಂತೆ ಈ ದರ ಹೆಚ್ಚಳ ಜಾರಿಯಾಗಲಿದೆ. ಹೀಗಾಗಿ ಒಂದೆಡೆ ಪೆಟ್ರೋಲಿಯಂ ವಸ್ತುಗಳ ಬೆಲೆ ಏರಿಕೆ, ಇನ್ನೊಂದೆಡೆ ವಿದ್ಯುತ್ ದರ ಏರಿಕೆ ಹಾಗೂ ಇವೆರಡರ ಪರಿಣಾಮವಾಗಿ ಅಕ್ಕಿ, ಗೋಧಿ, ಜೋಳ, ಖಾದ್ಯತೈಲ ಸೇರಿದಂತೆ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ವಿಶೇಷವಾಗಿ ಮಧ್ಯಮವರ್ಗದ ಜನರು ಕಂಗಾಲಾಗಿದ್ದಾರೆ.

ಕೇಂದ್ರ ಸರಕಾರ ತೈಲೋತ್ಪನ್ನಗಳ ಬೆಲೆಯನ್ನು ತಕ್ಷಣ ಕಡಿಮೆ ಮಾಡಬೇಕು.ಇದನ್ನು ಕಡಿಮೆ ಮಾಡದಿದ್ದರೆ ಹಣದುಬ್ಬರ ಕೂಡ ನಿಯಂತ್ರಣಕ್ಕೆ ಬರುವುದಿಲ್ಲ.ರಿಸರ್ವ್ ಬ್ಯಾಂಕಿನ ಹಣಕಾಸು ನೀತಿ ಸಮಿತಿಯ ಅಭಿಪ್ರಾಯವೂ ಇದೇ ಆಗಿದೆ.‘‘ಸರಕಾರದ ಜನ ಕಲ್ಯಾಣ ಯೋಜನೆಗಳಿಗಾಗಿ ಸಂಪನ್ಮೂಲಗಳ ಅಗತ್ಯವಿದೆ. ಅದಕ್ಕಾಗಿ ತೈಲೋತ್ಪನ್ನಗಳ ಬೆಲೆಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ’’ ಎಂಬ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ರ ಮಾತನ್ನು ಒಪ್ಪಲು ಸಾಧ್ಯವಿಲ್ಲ. ಜನ ಕಲ್ಯಾಣ ಯೋಜನೆಗಳಿಗಾಗಿ ಸಂಪನ್ಮೂಲಗಳ ಕ್ರೋಡೀಕರಣಕ್ಕಾಗಿ ಜನಸಾಮಾನ್ಯರ ಬೆನ್ನುಮೂಳೆ ಮುರಿಯುವಂತಹ ಕರಭಾರ ಸರಿಯಲ್ಲ. ಇದರ ಬದಲಾಗಿ ಕೋವಿಡ್ ಕಾಲದಲ್ಲೂ ಲಕ್ಷಾಂತರ ಕೋಟಿ ರೂಪಾಯಿ ಲಾಭ ಮಾಡಿಕೊಂಡ ಅಂಬಾನಿ, ಅದಾನಿಯಂತಹ ಕಾರ್ಪೊರೇಟ್ ಜಗತ್ತಿನ ಬಂಡವಾಳಿಗರ ಮೇಲೆ ಕೊರೋನ ತೆರಿಗೆ ಎಂದು ವಿಶೇಷ ತೆರಿಗೆ ಹಾಕಿ ವಸೂಲಿ ಮಾಡಿ ಆ ಹಣವನ್ನು ಜನ ಕಲ್ಯಾಣ ಯೋಜನೆಗಳಿಗಾಗಿ ಬಳಸಿಕೊಳ್ಳಲಿ.

 ಈ ಹಿಂದೆ ಸರಕಾರ ತೈಲೋತ್ಪನ್ನಗಳ ಬೆಲೆಯನ್ನು ನಿಯಂತ್ರಣ ಮುಕ್ತಗೊಳಿಸಿದಾಗ ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾದರೆ ದೇಶದಲ್ಲಿ ಬೆಲೆ ಕಡಿಮೆ ಯಾಗುತ್ತದೆ ಎಂದು ಸಬೂಬು ಹೇಳಲಾಗುತ್ತಾ ಬರಲಾಯಿತು. ಈಗ ನೋಡಿದರೆ ಜನ ಕಲ್ಯಾಣ ಯೋಜನೆಗಳಿಗಾಗಿ ತೈಲೋತ್ಪನ್ನಗಳ ಮೇಲೆ ತೆರಿಗೆ ಹೆಚ್ಚಳ ಮಾಡುವುದಾಗಿ ಹೇಳಲಾಗುತ್ತಿದೆ. ಇದರರ್ಥ ಈ ಸರಕಾರಕ್ಕೆ ಜನರ ಬಗ್ಗೆ ಭಯವಿಲ್ಲ. ಕೋಮುವಾದಿ ಕಾರ್ಯಸೂಚಿಗಳನ್ನಿಟ್ಟುಕೊಂಡು ಜನರಲ್ಲಿ ಭಾವನೆಗಳನ್ನು ಕೆರಳಿಸಿ ಗೆಲ್ಲುವುದು ಇವರಿಗೆ ಅಭ್ಯಾಸವಾಗಿದೆ. ಜನತೆ ಎಚ್ಚರವಾಗದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)