varthabharthi


ವಿಶೇಷ-ವರದಿಗಳು

ಉತ್ತರ ಪ್ರದೇಶ ಚುನಾವಣೆಗೆ ಮುನ್ನ ವರ್ಚಸ್ಸು ಕಳೆದುಕೊಳ್ಳುತ್ತಿರುವ ಆದಿತ್ಯನಾಥ್ ರನ್ನು ಬದಲಿಸಲಾಗದೆ ಬಿಜೆಪಿ ಪರದಾಟ

ವಾರ್ತಾ ಭಾರತಿ : 15 Jun, 2021

  ಹೊಸದಿಲ್ಲಿ,ಜೂ.15: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳಿಗೆ ಒಂಭತ್ತು ತಿಂಗಳುಗಳೂ ಉಳಿದಿಲ್ಲ ಮತ್ತು ಕೋವಿಡ್ ಎರಡನೇ ಅಲೆಯನ್ನು ನಿರ್ವಹಿಸುವಲ್ಲಿ ವೈಫಲ್ಯಕ್ಕಾಗಿ ರಾಜ್ಯ ಸರಕಾರದ ವಿರುದ್ಧ ಜನರಲ್ಲಿ ಸಿಟ್ಟು ಹೆಚ್ಚುತ್ತಿದೆ. ಹೀಗಿರುವಾಗಲೇ ರಾಜ್ಯದಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಕೇಂದ್ರೀಕರಿಸಿ ಇನ್ನೊಂದು ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗುತ್ತಿದೆ. ಆದಿತ್ಯನಾಥ್ ರ ನಾಯಕತ್ವ ಮತ್ತು ಆಡಳಿತ ಸಾಮರ್ಥ್ಯಗಳ ಬಗ್ಗೆ ಪ್ರಶ್ನೆಗಳೆದ್ದಿವೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲುವಿನತ್ತ ಮುನ್ನಡೆಸಲು ಆದಿತ್ಯನಾಥ್ ಆದರ್ಶ ಆಯ್ಕೆಯಲ್ಲ ಎಂದು ಹಲವರು ಭಾವಿಸಿದ್ದಾರೆ ಮತ್ತು ರಾಜ್ಯ ನಾಯಕತ್ವದಲ್ಲಿ ಬದಲಾವಣೆಗೆ ಆಗ್ರಹ ಹೆಚ್ಚುತ್ತಿದೆ. ಇತ್ತೀಚಿಗೆ ಬಿಜೆಪಿ ಮತ್ತು ಆರೆಸ್ಸೆಸ್‌ ನ ಉನ್ನತ ನಾಯಕರು ಲಕ್ನೋ ಮತ್ತು ದಿಲ್ಲಿಯಲ್ಲಿ ಸಭೆಗಳನ್ನು ನಡೆಸಿದ್ದರು ಮತ್ತು ಇದರ ಬೆನ್ನಲ್ಲೇ ‘ಸೌಜನ್ಯ’ಕ್ಕಾಗಿ ಮತ್ತು ‘ಮಾರ್ಗದರ್ಶನ’ವನ್ನು ಪಡೆಯಲು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲು ಆದಿತ್ಯನಾಥ್ ದಿಲ್ಲಿಗೆ ಆಗಮಿಸಿದ್ದರು.
 
ಆದಿತ್ಯನಾಥ್ ದಿಲ್ಲಿಗೆ ಪ್ರಯಾಣ ಬೆಳೆಸುವ ಒಂದು ದಿನ ಮೊದಲು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಜಿತಿನ್ ಪ್ರಸಾದ್ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಅವರನ್ನೀಗ ಪಕ್ಷದ ಪ್ರಮುಖ ಬ್ರಾಹ್ಮಣ ಮುಖವನ್ನಾಗಿ ಬಿಂಬಿಸಲಾಗುತ್ತಿದೆ.
  
ಉನ್ನತ ಮಟ್ಟದಲ್ಲಿ ನಡೆದಿರುವ ಸರಣಿ ಸಭೆಗಳಿಂದ ಬಿಜೆಪಿ ಮತ್ತು ಆರೆಸ್ಸೆಸ್ ನ ಉನ್ನತ ನಾಯಕತ್ವವು ಶಾಸಕರು ಮತ್ತು ಪಕ್ಷದ ಕಾರ್ಯಕರ್ತರ ನಡುವೆ ಆದಿತ್ಯನಾಥರ ಕುಸಿಯುತ್ತಿರುವ ಜನಪ್ರಿಯತೆ ಮತ್ತು ಅವರಿಂದ ರಾಜ್ಯದಲ್ಲಿಯ ಮಿತ್ರಪಕ್ಷಗಳ ಕಡೆಗಣನೆಯ ಬಗ್ಗೆ ಕಳವಳಗೊಂಡಿದೆ ಎಂದು ನಿರ್ಧರಿಸಬಹುದು. ಇದೇ ವೇಳೆ ರಾಜ್ಯವು ಅಧಿಕಾರಶಾಹಿಯ ಹಿಡಿತದಲ್ಲಿದೆ ಮತ್ತು ಜನಪ್ರತಿನಿಧಿಗಳು ಮೂಲೆಗುಂಪಾಗಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ.


  
ತನ್ಮಧ್ಯೆ ಗಂಗಾನದಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ತೇಲಿ ಬಂದ ಮೃತದೇಹಗಳು, ಚಿತಾಗಾರಗಳಲ್ಲಿ ನಿರಂತರವಾಗಿ ಉರಿಯುತ್ತಿರುವ ಚಿತೆಗಳು ಮತ್ತು ಮಳೆಯಿಂದಾಗಿ ಗಂಗಾನದಿಯ ದಂಡೆಯಲ್ಲಿನ ಅಸಂಖ್ಯಾತ ಅನಾಮಿಕ ಸಮಾಧಿಗಳು ಬಾಯಿ ತೆರೆದುಕೊಂಡಿದ್ದು ಇವೆಲ್ಲ ಕೋವಿಡ್ ಬಿಕ್ಕಟ್ಟನ್ನು ನಿರ್ವಹಿಸುವಲ್ಲಿ ಆದಿತ್ಯನಾಥ್ ರ ದಯನೀಯ ವೈಫಲ್ಯಕ್ಕೆ ಸಾಕ್ಷಿಗಳಾಗಿವೆ. ಆಮ್ಲಜನಕ, ಆಸ್ಪತ್ರೆ ಹಾಸಿಗೆಗಳು ಮತ್ತು ಔಷಧಿಗಳ ಕೊರತೆಗಳು ಮತ್ತು ಹೆಚ್ಚುತ್ತಿದ್ದ ಸಾವಿನ ಸಂಖ್ಯೆಗಳಿಂದ ಕಂಗಾಲಾಗಿದ್ದ ಶಾಸಕರು, ಸಂಸದರು ಮತ್ತು ಸಚಿವರು ನಿರಂತರವಾಗಿ ಆಗ್ರಹಿಸುತ್ತಿದ್ದರೂ ಆದಿತ್ಯನಾಥ್ ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ ಎನ್ನಲಾಗಿದೆ.
 
ಎರಡನೇ ಅಲೆಯ ನಡುವೆಯೇ ಉತ್ತರ ಪ್ರದೇಶದಲ್ಲಿ ನಡೆದಿದ್ದ ಪಂಚಾಯತ್ ಚುನಾವಣೆಗಳೂ ಬಿಜೆಪಿಯ ಪಾಲಿಗೆ ವಿನಾಶಕಾರಿಯಾಗಿದ್ದವು. ಅರ್ಧ ಮನಸ್ಸಿನ ಸಿದ್ಧತೆಗಳೊಂದಿಗೆ ಚುನಾವಣೆಗೆ ಇಳಿದಿದ್ದ ಸಮಾಜವಾದಿ ಪಕ್ಷವು ಅನಿರೀಕ್ಷಿತವಾಗಿ ಜಯಭೇರಿ ಬಾರಿಸಿದ್ದರೆ ಬಿಜೆಪಿ ಹೀನಾಯ ಸೋಲನ್ನು ಅನುಭವಿಸಿತ್ತು. ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಂತೂ ಲಕ್ನೋ,‌ ಅಯೋಧ್ಯೆ ಮತ್ತು ವಾರಣಾಸಿಯಂತಹ ಪಕ್ಷದ ಭದ್ರಕೋಟೆಗಳಲ್ಲಿಯೇ ಜನರು ಬಿಜೆಪಿಗೆ ಮಣ್ಣುಮುಕ್ಕಿಸಿದ್ದಾರೆ.

ಆದರೆ ಆದಿತ್ಯನಾಥ ಮಾತ್ರ ಮಾಧ್ಯಮಗಳ ಅಥವಾ ಪಕ್ಷದೊಳಗಿನ ಟೀಕೆಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಅವರು ರಾಜ್ಯ ಪ್ರವಾಸವನ್ನು ಆರಂಭಿಸಿದ ಬೆನ್ನಲ್ಲೇ ಸರಕಾರದ ಸಾರ್ವಜನಿಕ ಸಂಪರ್ಕ ಯಂತ್ರವು ಚುರುಕಾಗಿತ್ತು. ಮುಖ್ಯಮಂತ್ರಿಗಳ ನೀತಿಗಳು ಮತ್ತು ಕ್ರಿಯಾಶೀಲ ಕ್ರಮಗಳಿಂದಾಗಿ ಕೋವಿಡ್ ಎರಡನೇ ಅಲೆಯನ್ನು ನಿಯಂತ್ರಿಸಲಾಗಿದೆ ಎಂದು ಬಿಂಬಿಸಲಾಗಿತ್ತು. ಆದಿತ್ಯನಾಥರ ನೇತೃತ್ವದಲ್ಲಿ ಉತ್ತರ ಪ್ರದೇಶ ಸರಕಾರವು ಅದ್ವಿತೀಯ ಸಾಧನೆಗಳನ್ನು ಮಾಡಿದೆ ಎಂದು ಬಿಂಬಿಸುವ ಜಾಹೀರಾತುಗಳು ಪುಂಖಾನುಪುಂಖವಾಗಿ ಪ್ರಕಟಗೊಂಡಿದ್ದವು. ಆದರೆ ಇಷ್ಟೆಲ್ಲ ವ್ಯಾಪಕ ಪ್ರಚಾರಗಳ ಹೊರತಾಗಿಯೂ ಬಿಜೆಪಿಯಲ್ಲಿ ಮತ್ತು ರಾಜ್ಯ ಸರಕಾರದಲ್ಲಿ ಪ್ರಮುಖ ಬದಲಾವಣೆಗಳು ಸನ್ನಿಹಿತವಾಗಿವೆ ಎಂಬ ಊಹಾಪೂಹಗಳು ಕೇಳಿಬರತೊಡಗಿವೆ.
  
ಬಿಜೆಪಿ ಮತ್ತು ಆರೆಸ್ಸೆಸ್ ನಲ್ಲಿ ರಾಜಕೀಯ ಚರ್ಚೆಗಳ ನಡುವೆಯೇ ಉತ್ತರ ಪ್ರದೇಶದಲ್ಲಿ ಈ ಬಾರಿ ಗೆಲುವು ಅಷ್ಟು ಸುಲಭವಿಲ್ಲ ಎನ್ನುವುದು ಬಿಜೆಪಿಗೆ ಅರ್ಥವಾಗಿದೆ. ಪ.ಬಂಗಾಳದಲ್ಲಿ ಚುನಾವಣೆಗಳು ಪ್ರಕಟಗೊಳ್ಳುವವರೆಗೆ ಪಕ್ಷದಲ್ಲಿ ಆದಿತ್ಯನಾಥ ಸ್ಟಾರ್ ಪ್ರಚಾರಕರಲ್ಲೊಬ್ಬರಾಗಿದ್ದರು. ತೆಲಂಗಾಣ,ಕೇರಳ ಮತ್ತು ತ್ರಿಪುರಾಗಳಲ್ಲಿ ಚುನಾವಣಾ ಪ್ರಚಾರ ಸಭೆಗಳನ್ನುದ್ದೇಶಿಸಿ ಅವರು ಭಾಷಣ ಮಾಡಿದ್ದರು. ಪ.ಬಂಗಾಳ ಚುನಾವಣೆಯಲ್ಲಿಯೂ ಅವರು ಹಲವಾರು ರ್ಯಾಲಿಗಳನ್ನು ಮಾತನಾಡಿದ್ದರು. ಆದರೆ ಚುನಾವಣೆಗಳಲ್ಲಿ ಬಿಜೆಪಿಯ ನಿರಾಶಾದಾಯಕ ಪ್ರದರ್ಶನ ಮತ್ತು ಕೋವಿಡ್ ಎರಡನೇ ಅಲೆಯು ಮಾಡಿರುವ ವಿನಾಶವು ಪ್ರತಿಯೊಂದನ್ನೂ ಬದಲಿಸಿಬಿಟ್ಟಿದೆ. ಪ್ರಧಾನಿ ಹುದ್ದೆಗೆ ಭವಿಷ್ಯದ ಅಭ್ಯರ್ಥಿ ಎಂದೇ ಈವರೆಗೆ ಪರಿಗಣಿಸಲ್ಪಟ್ಟಿದ್ದ ಆದಿತ್ಯನಾಥ್ 2022, ಮಾರ್ಚ್ ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ತನ್ನ ಕ್ಷೇತ್ರವನ್ನಾದಲೂ ಉಳಿಸಿಕೊಳ್ಳಲು ಸಮರ್ಥರಾಗುವರೇ ಎಂಬ ಊಹಾಪೋಹಗಳು ಈಗ ದಟ್ಟವಾಗಿವೆ.

ಕೋವಿಡ್ ಬಿಕ್ಕಟ್ಟನ್ನು ನಿಯಂತ್ರಿಸುವಲ್ಲಿ ತಾನು ಯಶಸ್ವಿಯಾಗಿದ್ದೇನೆ ಎಂದು ಉ.ಪ್ರದೇಶ ಸರಕಾರವು ಭೋಂಗು ಬಿಡುತ್ತಿದೆಯಾದರೂ ಎರಡನೇ ಅಲೆಯನ್ನು ಹತ್ತಿಕ್ಕುವಲ್ಲಿ ಅದು ದಯನೀಯವಾಗಿ ವಿಫಲವಾಗಿತ್ತು ಎನ್ನುವುದು ಸ್ಪಷ್ಟವಾಗಿದೆ. ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವ ಬದಲು ಸರಕಾರವು ಪಂಚಾಯತ ಚುನಾವಣೆಗಳಲ್ಲಿ ವ್ಯಸ್ತವಾಗಿತ್ತು ಮತ್ತು ಈ ಚುನಾವಣೆಗಳು ಸೋಂಕಿನ ಸೂಪರ್ ಸ್ಪ್ರೆಡರ್ ಆಗಿ ಪರಿಣಮಿಸಿದ್ದವು. 

ಚುನಾವಣಾ ಕರ್ತ್ಯವ್ಯಕ್ಕೆ ನಿಯೋಜಿತರಾಗಿದ್ದ ಮೂರು ಸಾವಿರಕ್ಕೂ ಅಧಿಕ ಸರಕಾರಿ ನೌಕರರು ಕೋವಿಡ್ ಗೆ ಬಲಿಯಾಗಿದ್ದರು. ಆದರೆ ಈ ಸಾವುಗಳನ್ನು ಬಚ್ಚಿಡಲು ಸರಕಾರವು ತನ್ನೆಲ್ಲ ಶಕ್ತಿಯನ್ನು ವ್ಯಯಿಸಿತ್ತು. ಚಿತಾಗಾರಗಳಲ್ಲಿ ಉರಿಯುತ್ತಿದ್ದ ಚಿತೆಗಳ ಫೋಟೊ ತೆಗೆಯುವುದನ್ನು ದಂಡನೀಯ ಅಪರಾಧ ಎಂದು ಘೋಷಿಸಲಾಗಿತ್ತು. ನದಿದಂಡೆಗಳಲ್ಲಿ ಶವಗಳನ್ನು ಹೂತಿದ್ದನ್ನು ದೀರ್ಘಕಾಲದ ಸಂಪ್ರದಾಯ ಎಂದು ಬಿಂಬಿಸಲಾಗಿತ್ತು.


  
ಕೇವಲ ಹಿಂದುತ್ವ ಅಜೆಂಡಾವನ್ನು ನಂಬಿಕೊಂಡು ಉತ್ತರ ಪ್ರದೇಶವನ್ನು ಗೆಲ್ಲಲು ಸಾಧ್ಯವಿಲ್ಲ ಎನ್ನುವುದನ್ನು ಬಿಜೆಪಿ ಮತ್ತು ಆರೆಸ್ಸೆಸ್ ಅರ್ಥ ಮಾಡಿಕೊಂಡಿವೆ ಎಂದು ಆಂತರಿಕ ಮೂಲಗಳು ವರದಿ ಮಾಡಿವೆ. 2017ರ ವಿಧಾನಸಭಾ ಮತ್ತು 2029ರ ಲೋಕಸಭಾ ಚುನಾವಣೆಗಳಂತೆ ಈಗಲೂ ಇತರ ಹಿಂದುಳಿದ ವರ್ಗಗಳು ಮತ್ತು ಪರಿಶಿಷ್ಟ ಜಾತಿಗಳ ಬೆಂಬಲ ಬಿಜೆಪಿಗೆ ಅನಿವಾರ್ಯವಾಗಿದೆ. ಮುಖ್ಯಮಂತ್ರಿಯಾಗಿ ಆದಿತ್ಯನಾಥ್ ನೇಮಕದ ಬಳಿಕ ಅಧಿಕಾರಕ್ಕೇರಲು ಬಿಜೆಪಿಗೆ ನೆರವಾಗಿದ್ದ ತಮ್ಮನ್ನು ಕಡೆಗಣಿಸಲಾಗುತ್ತಿದೆ,ಪಕ್ಷದಲ್ಲಿ ಅಥವಾ ಸರಕಾರದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಲಾಗಿಲ್ಲ ಎಂಬ ಭಾವನೆ ಹಿಂದುಳಿದ ಜಾತಿಗಳು ಮತ್ತು ದಲಿತ ಸಮುದಾಯದಲ್ಲಿ ಬಲವಾಗುತ್ತಿದೆ.
 
ತನ್ಮಧ್ಯೆ ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತಿರುವ ಪ್ರತಿಭಟನೆಯು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳ ಮೇಲೆ ಪರಿಣಾಮವನ್ನು ಬೀರುವ ಭಯವೂ ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರನ್ನು ಕಾಡುತ್ತಿದೆ. ಇದಕ್ಕೆ ಪೂರಕವಾಗಿ ಪ್ರತಿಪಕ್ಷಗಳೂ ರಾಜ್ಯದಲ್ಲಿ ತಮ್ಮ ನೆಲೆಗಳನ್ನು ಗಟ್ಟಿಗೊಳಿಸಿಕೊಳ್ಳುತ್ತಿವೆ. ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪಟ್ಟು ಹಿಡಿದಿರುವ ಶಿಕ್ಷಕರು ಮತ್ತು ಇತರ ಸರಕಾರಿ ನೌಕರರು ಸರಕಾರದ ವಿರುದ್ಧ ತೀವ್ರ ಅಸಮಾಧಾನಗೊಂಡಿದ್ದಾರೆ. ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆಯೂ ತೀವ್ರಗೊಂಡಿದ್ದು, ಇತ್ತೀಚಿಗೆ ಆದಿತ್ಯನಾಥರ ಜನ್ಮದಿನವನ್ನು ‘ನಿರುದ್ಯೋಗ ದಿನ ’ ಎಂದು ಆಚರಿಸುವಂತೆ ಕರೆ ಸಾಮಾಜಿಕ ಮಾಧ್ಯಮಗಳಲ್ಲಿ ಟಾಪ್ ಟ್ರೆಂಡ್ ಗಳಲ್ಲೊಂದಾಗಿತ್ತು.
 
ಎಲ್ಲ ಪರ್ಯಾಯಗಳನ್ನೂ ತೂಗಿ ನೋಡಿರುವ ಬಿಜೆಪಿ ಮತ್ತು ಆರೆಸ್ಸೆಸ್ ಭವಿಷ್ಯದ ಮುಂದಿನ ಕ್ರಮವನ್ನು ರೂಪಿಸುವಲ್ಲಿ ತಲೆ ಕೆಡಿಸಿಕೊಂಡಿವೆ. ಆದಿತ್ಯನಾಥರಿಗೆ ಬದಲಿ ನಾಯಕರು ರಾಜ್ಯ ಬಿಜೆಪಿಯಲ್ಲಿಲ್ಲ ಮತ್ತು ಈ ಹಂತದಲ್ಲಿ ಬದಲಾವಣೆ ತುಂಬ ವಿಳಂಬಿತ ಕ್ರಮವಾಗುತ್ತದೆ, ಹೀಗಾಗಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಅಪಾಯವನ್ನು ಮೈಮೇಲೆ ಎಳದುಕೊಳ್ಳಲು ಬಿಜೆಪಿಯ ಉನ್ನತ ನಾಯಕರು ಬಯಸುತ್ತಿಲ್ಲ. ಹೀಗಾಗಿ ಅಸಮಾಧಾನಗೊಂಡಿರುವ ರಾಜ್ಯ ಬಿಜೆಪಿ ನಾಯಕರಿಗೆ ಕೇಂದ್ರ ಮತ್ತು ರಾಜ್ಯದಲ್ಲಿ ಸಚಿವ ಸ್ಥಾನಗಳನ್ನು ನೀಡುವ ಮೂಲಕ ಅವರ ತುಷ್ಟೀಕರಣ ಸದ್ಯಕ್ಕಿರುವ ಏಕೈಕ ಪರಿಹಾರವಾಗಿರುವಂತಿದೆ.
 
ಉ.ಪ್ರದೇಶದಲ್ಲಿ ಚುನಾವಣಾ ಫಲಿತಾಂಶ ಬಿಜೆಪಿಯ ಪರವಾಗಲಿ ಅಥವಾ ವಿರುದ್ಧವಾಗಲಿ,ಆದಿತ್ಯನಾಥರ ರಾಜಕೀಯ ಜೀವನದಲ್ಲಿ ಬದಲಾವಣೆ ನಿಶ್ಚಿತ. ಅವರ ರಾಜಕೀಯ ಮಹತ್ವಾಕಾಂಕ್ಷೆಗಳ ಬಗ್ಗೆ ಮೋದಿ ಮತ್ತು ಶಾ ಅವರಿಗೆ ಚೆನ್ನಾಗಿ ಗೊತ್ತಿದೆ. ಚುನಾವಣೆಗಳಲ್ಲಿ ಆದಿತ್ಯನಾಥರನ್ನು ಮುಖ್ಯಮಂತ್ರಿ ಹುದ್ದೆಯ ಅಭ್ಯರ್ಥಿ ಎಂದು ಬಿಂಬಿಸಿದರೂ ಅವರಿಗೆ ಸಂಪೂರ್ಣ ಸ್ವಾತಂತ್ರವಿರುವುದಿಲ್ಲ ಮತ್ತು ಶಾ ಅವರು ಚುನಾವಣಾ ಪ್ರಕ್ರಿಯೆಯ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರುತ್ತಾರೆ ಎನ್ನುವುದರಲ್ಲಿ ಅನುಮಾನವಿಲ್ಲ.

ಕೃಪೆ: Thewire.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)