varthabharthi


ಸಂಪಾದಕೀಯ

‘ಸ್ಟಾರ್ ನಟರಿಗೆ’ ಮಾದರಿಯೊಂದನ್ನುಉಳಿಸಿ ಹೋದ ಸಂಚಾರಿ ವಿಜಯ್

ವಾರ್ತಾ ಭಾರತಿ : 16 Jun, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ತಮ್ಮ ಬದುಕಿನ ಯಾತ್ರೆಯನ್ನು ಮುಗಿಸಿದ್ದಾರೆ. ಕುಟುಂಬಸ್ಥರು ಸಂಚಾರಿ ವಿಜಯ್ ಅವರ ದೇಹವನ್ನು ದಾನ ಮಾಡುವುದಕ್ಕೆ ನಿರ್ಧರಿಸಿದ್ದರಿಂದ, ಮಿಡಿಯುತ್ತಿದ್ದ ದೇಹದ ಭಾಗಗಳು ಭವಿಷ್ಯದಲ್ಲಿ ಹಲವರ ಬದುಕಿಗೆ ಆಸರೆಯಾಗಲಿವೆ. ಮೆದುಳು ಸತ್ತ ಬಳಿಕವೂ ಹೃದಯ ಮಿಡಿಯುತ್ತಿದ್ದುದರಿಂದ ಸಂಚಾರಿ ವಿಜಯ್ ಮೃತರಾಗಿದ್ದಾರೆಯೋ ಇಲ್ಲವೋ ಎನ್ನುವುದನ್ನು ಘೋಷಿಸುವುದಕ್ಕೆ ವೈದ್ಯರೂ ಒಂದಿಷ್ಟು ಚಡಪಡಿಸುವಂತಾಯಿತು. ಇದೇ ಸಂದರ್ಭದಲ್ಲಿ, ಹಲವು ಮುಖಂಡರು ಸಂತಾಪ ವ್ಯಕ್ತಪಡಿಸಿ, ಆ ಬಳಿಕ ಅದನ್ನು ಅಳಿಸಿದರು. ‘ಶಿಪ್ ಆಫ್ ಥೀಶಿಯಸ್’ ಎನ್ನುವ ತತ್ವವನ್ನು ನೆನಪಿಸುವಂತೆ, ವಿಜಯ್ ದೇಹ ಎಲ್ಲರನ್ನೂ ಗೊಂದಲದಲ್ಲಿ ಕೆಡವಿತ್ತು. ಥೀಶಿಯಸ್ ಎನ್ನುವ ಬೃಹತ್ ಹಡಗಿನ ಭಾಗಗಳನ್ನು ಇನ್ನೊಂದು ಹಡಗಿಗೆ ಜೋಡಿಸಿದರೆ, ಅದನ್ನು ಹೊಸ ಹಡಗೆಂದು ಕರೆಯಬೇಕೇ? ಅಥವಾ ಅದನ್ನು ಹಳೆಯ ಹಡಗಿನ ಹೆಸರಿನಲ್ಲೇ ಕರೆಯಬೇಕೇ? ಎಂಬ ಜಿಜ್ಞಾಸೆಯಂತೆಯೇ ಹಲವರು, ನಟ ಜೀವಂತ ಇದ್ದಾನೆ ಎಂದೇ ತರ್ಕಿಸಿದರು. ಕೊನೆಗೆ ಕುಟುಂಬಸ್ಥರು ವಿಜಯ್ ಅವರ ಅಂಗಾಂಗ ದಾನ ಮಾಡುವ ಘೋಷಣೆ ಮಾಡಿದ ಬಳಿಕ ಗೊಂದಲಗಳು ಮುಗಿದವು.

ಅತಿ ಸಣ್ಣ ವಯಸ್ಸಿನಲ್ಲಿ ನಾಯಕ ಅಥವಾ ನಾಯಕಿ(ನಾನು ಅವನಲ್ಲ ಅವಳು ಚಿತ್ರಕ್ಕಾಗಿ) ಪಾತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ವಿಜಯ್, ನಿಜದ ಬದುಕಿನಲ್ಲಿ ನಿರ್ವಹಿಸಿದ್ದು ಅತಿಥಿ ಪಾತ್ರವೇ ಆಗಿದ್ದರೂ, ಅದನ್ನು ಪರಿಣಾಮಕಾರಿಯಾಗಿ ಅಭಿನಯಿಸಿ ಮುಗಿಸಿದ್ದಾರೆ. ಬರೇ ಸಿನೆಮಾದ ಕಾರಣಕ್ಕಾಗಿಯಷ್ಟೇ ಅಲ್ಲ, ತನ್ನ ಸಮಾಜ ಮುಖಿ ಕೆಲಸದ ಮೂಲಕವೂ ಜನಪ್ರಿಯರಾಗಿ, ಸಾವಿನ ಬಳಿಕವೂ ತಮ್ಮ ದೇಹದ ಭಾಗಗಳನ್ನು ಅಗತ್ಯವಿರುವವರಿಗೆ ಹಂಚಿ ವಿದಾಯ ಹೇಳಿದ್ದಾರೆ. ಒಬ್ಬ ‘ನಾಯಕ ಪಾತ್ರಧಾರಿ’ ಬೆಳ್ಳಿತೆರೆಯಾಚೆಗೂ ಹೇಗೆ ಜನರ ಜೊತೆಗೆ ಸಂಬಂಧ ಬೆಸೆದುಕೊಂಡು ಬದುಕಬಹುದು ಎನ್ನುವುದನ್ನು ಕನ್ನಡದ ಇತರ ‘ಸೂಪರ್ ಸ್ಟಾರ್’ಗಳಿಗೆ ತನ್ನ ಅಲ್ಪ ಕಾಲದ ಬದುಕಿನ ಮೂಲಕ ತಿಳಿಸಿ ಹೋಗಿದ್ದಾರೆ.

ಕನ್ನಡದಲ್ಲಿ ತಮ್ಮ ನಾಯಕ ಪಾತ್ರದ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿಯನ್ನು ಪಡೆದವರು ಮೂವರು. ಚೋಮನ ದುಡಿ ಚಿತ್ರಕ್ಕಾಗಿ 70ರ ದಶಕದಲ್ಲಿ ಎಂ. ವಿ. ವಾಸುದೇವ ರಾವ್ ಅವರು ಮೊತ್ತ ಮೊದಲು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಇದಾದ ಬಳಿಕ ‘ತಬರನ ಕತೆ’ ಚಿತ್ರಕ್ಕಾಗಿ ಚಾರು ಹಾಸನ್ ಈ ಗೌರವವನ್ನು ಪಡೆದುಕೊಂಡರು. ಇವರಿಬ್ಬರೂ ಕನ್ನಡದ ಹಿರಿಯ ನಟರು. ಶಿವರಾಮ ಕಾರಂತ, ಪೂರ್ಣಚಂದ್ರ ತೇಜಸ್ವಿಯಂತಹ ಶ್ರೇಷ್ಟ ಬರಹಗಾರರ ಕತೆಗಳನ್ನು ವಸ್ತುವಾಗಿಸಿಕೊಂಡು ಈ ಚಿತ್ರವನ್ನು ಸಿದ್ಧಗೊಳಿಸಲಾಗಿತ್ತು. ಭೂಸುಧಾರಣೆ ಕಾಯ್ದೆ ಜಾರಿಗೊಳ್ಳುತ್ತಿರುವ ಹೊತ್ತಿನಲ್ಲಿ ಬಂದ ಚೋಮನದುಡಿ, ಭ್ರಷ್ಟಾಚಾರದ ಕುರಿತಂತೆ ಜನರಲ್ಲಿ ಆಕ್ರೋಶ ತಾಂಡವವಾಡುತ್ತಿದ್ದ ಕಾಲದಲ್ಲಿ ಬಂದ ತಬರನ ಕತೆ ಸಹಜವಾಗಿಯೇ ಗಂಭೀರ ಸಿನಿ ವೀಕ್ಷಕರನ್ನು ತಲುಪಿದವು. ಶ್ರೇಷ್ಟ ನಿರ್ದೇಶಕರ ಕೈಯಲ್ಲಿ ಮಾರ್ಗದರ್ಶನ ಪಡೆದ ಹಿರಿಯ ಕಲಾವಿದರು ರಾಷ್ಟ್ರಪ್ರಶಸ್ತಿಯನ್ನು ಪಡೆದದ್ದು ಕನ್ನಡದ ಪಾಲಿಗೆ ತೀರಾ ಅನಿರೀಕ್ಷಿತ ಆಗಿರಲಿಲ್ಲ. ಆದರೆ ಸಂಚಾರಿ ವಿಜಯ್ ಅವರ ಪ್ರಕರಣ ಭಿನ್ನವಾದುದು.

ಈ ಹಿಂದೆ ಪ್ರಶಸ್ತಿ ಪಡೆದವರಿಗೆ ಹೋಲಿಸಿದರೆ ವಿಜಯ್ ಅವರು ತೀರಾ ಕಿರಿಯ. ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡದ ಪಾಲಿಗೆ ಅತ್ಯಂತ ಹೊಸತಾಗಿರುವ ಕಥಾ ವಸ್ತುವನ್ನು ಹೊಂದಿದ ಚಿತ್ರ ಅದಾಗಿತ್ತು. ಯಾವುದೇ ಕಲಾವಿದರು ನಿರ್ವಹಿಸಲು ಅಂಜುವಂತಹ ಪಾತ್ರವನ್ನು ವಿಜಯ್ ನಿರ್ವಹಿಸಿದ್ದರು. ‘ನಾನು ಅವನಲ್ಲ ಅವಳು’ ಗಂಡಾಗಿ ಹುಟ್ಟಿ, ಹೆಣ್ಣಾಗುವ ತಹತಹಿಕೆ ಹೊಂದಿದ ಮಂಗಳಮುಖಿಯ ಕತೆಯಿದು. ಮಂಗಳ ಮುಖಿಯರ ಒಳ ಹೊರಗಿನ ಸಂಘರ್ಷಗಳನ್ನು ಈ ಚಿತ್ರ ತೆರೆದಿಡುತ್ತದೆ. ಅಷ್ಟೇ ಅಲ್ಲ, ಮಂಗಳ ಮುಖಿಯರು ಒಂದೋ ಭಿಕ್ಷೆ ಬೇಡಬೇಕು ಇಲ್ಲವೇ ವೇಶ್ಯಾವಾಟಿಕೆಗೆ ಬಲಿಯಾಗಬೇಕು ಎನ್ನುವ ಪರಂಪರೆಯನ್ನು ಮುರಿದು, ಅವರಿಗೂ ಒಂದು ಒಳ್ಳೆಯ ಬದುಕನ್ನು ನಿರ್ಮಾಣ ಮಾಡಿಕೊಡುವ ಸದುದ್ದೇಶವನ್ನು ಹೊಂದಿದ ಚಿತ್ರ. ಜನರನ್ನು ಹೊಸದಾಗಿ ಆಲೋಚನೆಗೆ ಹಚ್ಚುವ ಈ ಪಾತ್ರವನ್ನು ಧೈರ್ಯದಿಂದ ನಿಭಾಯಿಸಿ ವಿಜಯ್ ರಾಷ್ಟ್ರಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಮಾತ್ರವಲ್ಲ, ಬಳಿಕ ಹಲವು ವಿಭಿನ್ನ ಕಥಾವಸ್ತುಗಳುಳ್ಳ ಚಿತ್ರಗಳಲ್ಲಿ ಅಭಿನಯಿಸಿ, ಗಾಂಧಿನಗರದಲ್ಲಿ ತನ್ನದೇ ಒಂದು ಕಾಲು ಹಾದಿಯನ್ನು ನಿರ್ಮಿಸಿದರು.

ಸಿನೆಮಾ ನಟನಾಗಿದ್ದರೂ ಜನರ ನಡುವೆ ಓಡಾಡುತ್ತಾ ಸರಳ ಬದುಕನ್ನು ವಿಜಯ್ ಬದುಕಿದರು. ಕೊರೋನ ಮತ್ತು ಲಾಕ್‌ಡೌನ್ ಸಂಕಷ್ಟದ ಸಂದರ್ಭದಲ್ಲಿ ಒಬ್ಬ ನಟನ ಸಾಮಾಜಿಕ ಜವಾಬ್ದಾರಿ ಏನು ಎನ್ನುವುದನ್ನು ‘ಸ್ಟಾರ್ ನಟ’ರಿಗೆ ತಮ್ಮ ಚಟುವಟಿಕೆಗಳ ಮೂಲಕವೇ ಮಾದರಿಯಾದರು. ಸ್ವತಃ ತಾವೇ ಬೀದಿಗಿಳಿದು ಜನರಿಗೆ ಆಹಾರ ಕಿಟ್‌ಗಳನ್ನು ಹಂಚಿದರು. ಕೊರೋನ ಕಾಲದಲ್ಲಿ ಬೆಡ್‌ಗಳಿಲ್ಲದೆ, ಆಕ್ಸಿಜನ್‌ಗಳಿಲ್ಲದೆ ಕಂಗಾಲಾದವರಿಗೆ ಮಿಡಿದರು. ತಮ್ಮ ಕೈಲಾದ ಸಹಾಯವನ್ನು ಮಾಡಿದರು. ವಿವಿಧ ಗೆಳೆಯರ ಜೊತೆಗೆ ಕೈಜೋಡಿಸಿ ಜನರ ಸಂಕಟಗಳಿಗೆ ಸ್ಪಂದಿಸಿದರು. ಯಾವುದೇ ವಾಣಿಜ್ಯ ಉದ್ದೇಶವಿಲ್ಲದೆ, ರಾಜಕೀಯ ಉದ್ದೇಶವಿಲ್ಲದೆ ವಿಜಯ್ ಇವುಗಳನ್ನು ಮಾಡಿದರು. ತನ್ನ ಚಟುವಟಿಕೆಗಳ ಮೂಲಕ ಸಣ್ಣ ವಯಸ್ಸಿನಲ್ಲಿ ಹಿರಿದಾದ ವೌಲ್ಯಗಳನ್ನು ಅವರು ಹರಡಿದರು. ಅಂತಿಮವಾಗಿ ಸಾವಿನ ಬಳಿಕವೂ ಅವರ ದೇಹದ ಅಂಗಾಂಗ ಇನ್ನೊಬ್ಬರಿಗೆ ಆಸರೆಯಾದವು.

ವಿಜಯ್ ಅವರ ಸಾವು ವಿಧಿಲಿಖಿತವೇನೋ ಸರಿ. ಆದರೂ ಅವಘಡಕ್ಕೆ ತಿಳಿಯದೆಯೇ ಅವರೂ ಕಾರಣರಾದರು. ಬೈಕ್‌ನಲ್ಲಿ ಸಂಚಾರ ಹೊರಡುವ ಸಂದರ್ಭದಲ್ಲಿ ಹೆಲ್ಮೆಟ್ ಹಾಕಲು ಮರೆತರು. ಅತಿವೇಗವಾಗಿ ಬೈಕ್ ಚಲಾಯಿಸುತ್ತಿದ್ದ ಗೆಳೆಯನಿಗೆ ತಿಳಿ ಹೇಳಿದ್ದರೆ, ಅವಘಡವನ್ನು ತಪ್ಪಿಸಬಹುದಿತ್ತೇನೋ. ಸಾಮಾಜಿಕ ಹೊಣೆಗಾರಿಕೆಗಳನ್ನು ಚೆನ್ನಾಗಿಯೇ ಅರಿತಿದ್ದ ವಿಜಯ್ ಅವರಿಗೆ ಇದನ್ನು ಪ್ರತ್ಯೇಕವಾಗಿ ಮನವರಿಕೆ ಮಾಡಿಸುವ ಅಗತ್ಯವೂ ಇದ್ದಿರಲಿಲ್ಲ. ಒಂದು ವರ್ಷದ ಹಿಂದೆ, ವಿಜಯ್ ಮೃತಪಟ್ಟ ದಿನಾಂಕದಂದೇ ಬಾಲಿವುಡ್‌ನ ಖ್ಯಾತ ಯುವ ನಟ ಸುಶಾಂತ್ ಸಿಂಗ್ ರಜಪೂತ್ ಕೂಡ ಮೃತಪಟ್ಟಿದ್ದರು. ಇಬ್ಬರದೂ ಅವಘಡವೇ ಆಗಿತ್ತು. ಸುಶಾಂತ್ ಸಿಂಗ್ ಅವರ ಆತ್ಮಹತ್ಯೆಯಲ್ಲಿ ಖಿನ್ನತೆ, ಡ್ರಗ್ಸ್, ಪ್ರೀತಿ, ಪ್ರೇಮ ಇತ್ಯಾದಿಗಳೆಲ್ಲ ತಳಕು ಹಾಕಿಕೊಂಡಿದ್ದವು. ಬಾಲಿವುಡ್‌ನ ವೇಗದ ಜೀವನಶೈಲಿ ಅವರನ್ನು ಆತ್ಮಹತ್ಯೆಯಂತಹ ಅವಘಡಕ್ಕೆ ತಳ್ಳಿತು. ಆದರೆ ವಿಜಯ್ ಸಿನೆಮಾದ ಮಾಯಾಜಗತ್ತಿನಿಂದ ಹೊರಗಿದ್ದು ಬದುಕಿದವರು. ಸುಶಾಂತ್ ಸಿಂಗ್‌ಗೆ ಹೋಲಿಸಿದರೆ ಬದುಕನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಂಡವರು. ಬದುಕಿನ ಕುರಿತಂತೆ ಆಶಾವಾದಿಯಾಗಿದ್ದವರು. ಅವರ ಒಂದು ಕ್ಷಣದ ಮೈಮರೆವಿನಿಂದ ಸಂಭವಿಸಿದ ಅವಘಡ, ನಮ್ಮಿಂದ ಅಪರೂಪದ ವ್ಯಕ್ತಿತ್ವವೊಂದನ್ನು ಕಸಿದುಕೊಂಡಿತು. ಹೇಗೆ ವಿಜಯ್ ದಾನ ಮಾಡಿದ ಅಂಗಾಂಗ ಇನ್ನೊಬ್ಬರ ದೇಹದಲ್ಲಿ ಇನ್ನೂ ಮಿಡಿಯುತ್ತಿದೆಯೋ ಹಾಗೆಯೇ ಅವರ ಜೀವಪರ ನಿಲುವುಗಳು ನಮ್ಮ ನಡುವೆ ಜೀವಂತವಾಗಿರಲಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)