varthabharthi


ವಿಶೇಷ-ವರದಿಗಳು

ಅಂಗಾಂಗ ದಾನ: ಸೌದಿ ಪೌರನೊಬ್ಬ ಕಲಿತು, ಕಲಿಸುತ್ತಿರುವ ಪಾಠ

ವಾರ್ತಾ ಭಾರತಿ : 16 Jun, 2021
ಝುಹಾ ಸಿ. ಪುತ್ತಿಗೆ

ಸೌದಿ ನಾಗರಿಕ ತಲ್ಹಾ ಇತ್ತೀಚೆಗೆ ತಮ್ಮ ಪುತ್ರಿ ಕೌಸರ್‌ಳ ನಾಲ್ಕನೆಯ ಜನ್ಮದಿನವನ್ನು ಆಚರಿಸಿದರು. ಆದರೆ ಮಗಳ ಬರ್ತ್‌ಡೇ ಆಚರಣೆಗೆ ಅವರು ಬಳಸಿದ ವಿಧಾನ ಭಿನ್ನವಾಗಿತ್ತು. ಅಂದು ಅವರು ಕೇಕ್ ಕತ್ತರಿಸುವ ಬದಲು, ತನ್ನ ಪತ್ನಿ ಅಸ್ಮಾ ಹಾಗೂ ಪುಟ್ಟ ಮಗುವಿನ ಜೊತೆ ಕೆಲವು ನಿರ್ದಿಷ್ಟ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿ ಸೇರಿದ್ದ ಜನರನ್ನುದ್ದೇಶಿಸಿ ಮಾತನಾಡಿದರು. ಮಾಧ್ಯಮಗಳ ಪ್ರತಿನಿಧಿಗಳಿಗೆ ಸಂದರ್ಶನ ನೀಡಿದರು. ಕೆಲವು ಸಂಘ ಸಂಸ್ಥೆಗಳು, ಶಾಲಾ ವ್ಯವಸ್ಥಾಪಕ ಮಂಡಳಿಗಳು ಹಾಗೂ ವಿದ್ಯಾರ್ಥಿ ಒಕ್ಕೂಟಗಳ ಪದಾಧಿಕಾರಿಗಳ ಜೊತೆ ವಿಚಾರ ವಿನಿಮಯ ನಡೆಸಿದರು. ಪುಟ್ಟ ಕೌಸರ್ ತನ್ನ ಸುತ್ತ ಏನು ನಡೆಯುತ್ತಿದೆ ಎಂಬುದರ ಯಾವ ಪರಿವೆಯೂ ಇಲ್ಲದೆ ಗಮ್ಮತ್ತಿನಲ್ಲಿದ್ದಳು. ಆದರೆ ಆಕೆ ಹೋದಲ್ಲೆಲ್ಲ ಎಲ್ಲರ ಗಮನ ಅವಳ ಮೇಲೆಯೇ ಇತ್ತು. ಏಕೆಂದರೆ ಅವಳ ತಂದೆ, ತಾನು ಹೋದಲ್ಲೆಲ್ಲಾ ಜನರಿಗೆ ಹೇಳುತ್ತಿದ್ದುದು ಅವಳ ಕಥೆಯನ್ನು. ತಲ್ಹಾ ಹೇಳುವಂತೆ ಅವರ ಮಗಳು ಜನಿಸಿ ಎರಡೇ ತಿಂಗಳಲ್ಲಿ ತೀವ್ರ ಅನಾರೋಗ್ಯದಿಂದ ನರಳ ತೊಡಗಿದಳು. ತಜ್ಞರು ಪರೀಕ್ಷಿಸಿದ ಬಳಿಕ, ಅವಳ ಲಿವರ್ 65ಶೇ. ನಿಷ್ಕ್ರಿಯವಾಗಿದ್ದು ಅವಳ ಜೀವ ಅಪಾಯದಲ್ಲಿದೆ ಎಂದು ತಿಳಿಯಿತು. ಒಂದು ಸಂಕೀರ್ಣ ಸರ್ಜರಿ ಮಾಡಿ ಅವಳ ಜೀವ ರಕ್ಷಿಸಲು ಶ್ರಮಿಸಬಹುದು. ಆದರೆ ಜೀವ ಉಳಿಯುವ ಸಾಧ್ಯತೆ 1ಶೇ. ಕ್ಕಿಂತ ಕಡಿಮೆ ಎಂದು ವೈದ್ಯರು ತಿಳಿಸಿದ್ದರು. ಈ ಕುರಿತು ತಲ್ಹಾ ತನ್ನ ಅನುಭವವನ್ನು ಈ ರೀತಿ ಹಂಚಿ ಕೊಳ್ಳುತ್ತಾರೆ:

 ‘‘ಒಂದು ದಿನ ಅವಳು ಮದುಮಗಳಾಗುವುದನ್ನು ನಾವು ಕಾಣಬೇಕು. ನಮಗೆ ಅಂತಹ ಭಾಗ್ಯವನ್ನು ಕರುಣಿಸು’’ ಎಂದು ನಾವೆಲ್ಲ ಹಗಲಿರುಳು ದೇವರಲ್ಲಿ ಪ್ರಾರ್ಥಿಸುತ್ತಿದ್ದೆವು. ಆಕೆ ಕೇವಲ 12 ವಾರದವಳಾಗಿದ್ದಾಗ ಒಂದು ದೊಡ್ಡ ಸರ್ಜರಿ ನಡೆಯಿತು. ಸರ್ಜರಿಯ ಬಳಿಕ ಕೌಸರ್ ಆರೋಗ್ಯವಂತಳಾದಳು. ಆದರೆ ಕೆಲವೇ ದಿನಗಳಲ್ಲಿ ಮತ್ತೆ ಅಸ್ವಸ್ಥಳಾಗಿ ಬಿಟ್ಟಳು. ಈ ಬಾರಿ ವೈದ್ಯರು, ಅವಳಿಗೆ ಇನ್ನೊಬ್ಬರ ಲಿವರ್‌ನ ಭಾಗವನ್ನು ಅಳವಡಿಸಬೇಕು ಮತ್ತು ಸರ್ಜರಿ ತಕ್ಷಣ ನಡೆಯಬೇಕು ಎಂದು ತಿಳಿಸಿದರು. ಸಾಮಾನ್ಯವಾಗಿ ಪಶ್ಚಿಮದ ದೇಶಗಳಲ್ಲಿ ಆಸ್ಪತ್ರೆಗಳ ಬಳಿ, ಇಂತಹ ಸಂದರ್ಭಗಳಲ್ಲಿ ಸಂಪರ್ಕಿಸುವುದಕ್ಕಾಗಿ ಸ್ವಯಂಸೇವಕ ಡೋನರ್‌ಗಳ ಪಟ್ಟಿಯೇ ಸಿದ್ಧವಿರುತ್ತದೆ. ಆದರೆ ಸೌದಿಯ ಯಾವ ಆಸ್ಪತ್ರೆಯಲ್ಲೂ ಅಂತಹ ಡೋನರ್‌ಗಳ ಪಟ್ಟಿ ಇರಲಿಲ್ಲ. ನಾವು ನಮ್ಮ ಸಂಪರ್ಕ ವಲಯದಲ್ಲಿ, ನಮ್ಮ ಮಗುವಿಗೆ ಲಿವರ್‌ನ ಭಾಗವನ್ನು ದಾನ ಮಾಡಲು ಸಿದ್ಧರಾಗಿರುವ ಮತ್ತು ಆಕೆಯ ಗ್ರೂಪ್‌ಗೆ ಮ್ಯಾಚ್ ಆಗುವ ಡೋನರ್ ಗಳನ್ನು ಹುಡುಕಲಾರಂಭಿಸಿದೆವು. ಅವು ಬಕ್ರೀದ್ ರಜಾದಿನಗಳಾಗಿದ್ದರಿಂದ ನಮ್ಮ ಎಷ್ಟೋ ಪರಿಚಯಸ್ಥರನ್ನು ಸಂಪರ್ಕಿಸಲು ಸಾಧ್ಯವಿರಲಿಲ್ಲ. ಸಾಮಾಜಿಕ ಜಾಲ ತಾಣಗಳಲ್ಲಿ ನಾವು ಸಂದೇಶ ಪ್ರಕಟಿಸಿದೆವು. ನಮ್ಮ ಮಟ್ಟಿಗೆ ಆ ಎರಡು ದಿನಗಳ ಕ್ಷಣ ಕ್ಷಣವೂ ಅವಿಸ್ಮರಣೀಯವಾಗಿತ್ತು,. ಕೊನೆಗೆ ಅಜ್ಞಾತ ಡೋನರ್ ಒಬ್ಬರು ನೇರವಾಗಿ ಆಸ್ಪತ್ರೆಯನ್ನು ಸಂಪರ್ಕಿಸಿ ತಮ್ಮ ಲಿವರ್‌ನ ಭಾಗವನ್ನು ದಾನ ಮಾಡಲು ಮುಂದೆ ಬಂದರು. ಅವರ ಪರಿಚಯವನ್ನು ನಮಗೆ ತಿಳಿಸಬಾರದು ಎಂಬುದು ಮಾತ್ರ ಅವರ ಪೂರ್ವ ಷರತ್ತಾಗಿತ್ತು. ಆಸ್ಪತ್ರೆಯವರು ಅದನ್ನು ಪಾಲಿಸಿದರು. ಸರ್ಜರಿ ನಡೆಯಿತು. ಕೌಸರ್ ಸಂಪೂರ್ಣ ಗುಣಮುಖಳಾದಳು. ಈಗ ಅವಳು ಸಂತುಷ್ಟಳಾಗಿದ್ದಾಳೆ. ನಮ್ಮ ಮಗುವಿನ ಪ್ರಾಣ ಉಳಿಸಿದ ಆ ಅಜ್ಞಾತ ಡೋನರ್‌ನಿಗೆ ಅಪಾರ ಪ್ರತಿಫಲವನ್ನು ನೀಡು ಎಂದು ನಾವೆಲ್ಲಾ ದೇವರಲ್ಲಿ ನಿತ್ಯ ಪ್ರಾರ್ಥಿಸುತ್ತಿದ್ದೇವೆ. ಖಾಸಗಿ ಕಂಪೆನಿಯೊಂದನ್ನು ನಡೆಸುತ್ತಿರುವ ತಲ್ಹಾ ತಮ್ಮ ಬದುಕಿನ ಈ ಅನುಭವದಿಂದಾಗಿ ತುಂಬಾ ಬದಲಾಗಿ ಬಿಟ್ಟಿದ್ದಾರೆ.

 ಅವರು ತಮ್ಮ ಹೆಚ್ಚಿನ ಸಮಯವನ್ನು ಅಂಗಾಂಗ ದಾನದ ಕುರಿತಂತೆ ಸಮಾಜದಲ್ಲಿ ಜಾಗೃತಿ ಬೆಳೆಸುವ ಕಾರ್ಯದಲ್ಲಿ ಕಳೆಯುತ್ತಾರೆ. ಮಸೀದಿ, ಮದ್ರಸಾಗಳಲ್ಲಿರುವ ವಿದ್ವಾಂಸರನ್ನು, ಶಾಲೆ ಕಾಲೇಜುಗಳಲ್ಲಿರುವ ಶಿಕ್ಷಕರು ಪ್ರೊಫೆಸರ್‌ಗಳನ್ನೆಲ್ಲ ಸಂಪರ್ಕಿಸುತ್ತಾರೆ ಮತ್ತು ಅಲ್ಲಲ್ಲಿ ಸಣ್ಣ ಮಟ್ಟದ ಸಭೆ, ಕೂಟಗಳನ್ನು ಆಯೋಜಿಸಿ ಅಂಗಾಂಗ ದಾನದ ಮಹತ್ವದ ಬಗ್ಗೆ ಜನರಿಗೆ ತಿಳುವಳಿಕೆ ನೀಡುತ್ತಾರೆ. ಈ ಕಾರ್ಯದ ವಿವಿಧ ಸಾಮಾಜಿಕ ಹಾಗೂ ಧಾರ್ಮಿಕ ಆಯಾಮಗಳ ಕುರಿತು ಚರ್ಚಿಸುತ್ತಾರೆ, ಜನರ ಪ್ರಶ್ನೆಗಳಿಗೆ ಉತ್ತರಿಸಿ ಅವರ ಸಂಶಯಗಳನ್ನು ನಿವಾರಿಸುತ್ತಾರೆ.

ತಲ್ಹಾ ಅವರ ಪ್ರಕಾರ, ಸೌದಿ ಅರೇಬಿಯಾದ ಸಮಾಜವೆಂದರೆ ಅದು ತುಂಬಾ ಸಂಪ್ರದಾಯವಾದಿ ಮುಸ್ಲಿಮರ ಸಮಾಜ. ಅಲ್ಲಿ ಜನರು ಅಂಗಾಂಗ ದಾನವನ್ನು ನಿಷಿದ್ಧವೆಂದೇನೂ ಪರಿಗಣಿಸುವುದಿಲ್ಲ. ಅವರ ಧರ್ಮವು ಈ ನಿಟ್ಟಿನಲ್ಲಿ ಒಂದು ತಡೆಯಾಗಿಲ್ಲ. ಕೆಲವು ದಶಕಗಳ ಹಿಂದೆ, ಅಂಗಾಂಗ ದಾನವನ್ನು ಇಸ್ಲಾಮ್ ಧರ್ಮವು ಸಮ್ಮತಿಸುತ್ತದೆಯೇ? ಎಂಬುದು ಭಾರೀ ಚರ್ಚೆ ಮತ್ತು ವಿವಾದದ ವಿಷಯವಾಗಿತ್ತು. ಆದರೆ ಕ್ರಮೇಣ ಮುಸ್ಲಿಮ್ ಸಮಾಜದ ಎಲ್ಲ ಪಕ್ಷ, ಪಂಥಗಳ ವಿದ್ವಾಂಸರು ಒಕ್ಕೊರಲಿನಿಂದ ಅದನ್ನು ಸಮ್ಮತಿಸಿದ್ದಾರೆ. ಸ್ವತಃ ಸೌದಿ ಅರೇಬಿಯಾದ ಹಲವು ಸಂಪ್ರದಾಯವಾದಿ ‘ಫತ್ವಾ’ ಸಂಸ್ಥೆಗಳು ಕೂಡಾ ವಿವಿಧ ಅಂಗಾಂಗಗಳ ದಾನ, ಕಸಿ ಇತ್ಯಾದಿಗಳನ್ನು ಸಮರ್ಥಿಸಿರುವುದು ಮಾತ್ರವಲ್ಲದೆ ಮಾನವರ ಜೀವ ಉಳಿಸುವ ಈ ಚಟುವಟಿಕೆಗಳೆಲ್ಲಾ ಪುಣ್ಯದಾಯಕ ಕಾರ್ಯಗಳೆಂದು ಪ್ರೋತ್ಸಾಹಿಸುವ ‘ಫತ್ವಾ’ಗಳನ್ನೂ ಹೊರಡಿಸಿವೆ. ಇಂದು ಜಗತ್ತಿನ ಯಾವುದೇ ಭಾಗದಲ್ಲಿ ಯಾವುದೇ ಗಣ್ಯ ಮುಸ್ಲಿಮ್ ಸಂಸ್ಥೆಯಾಗಲಿ ವಿದ್ವಾಂಸರಾಗಲಿ ಅಂಗಾಂಗ ದಾನ ಅಥವಾ ಕಸಿಯ ಬಗ್ಗೆ ಪ್ರತಿಕೂಲವಾಗಿ ಮಾತನಾಡುವುದಿಲ್ಲ. ಎಲ್ಲರೂ ಅದನ್ನು ಬೆಂಬಲಿಸಿಯೇ ಮಾತನಾಡುತ್ತಾರೆ.

ಆದರೆ ಇಷ್ಟಾಗಿಯೂ ಒಂದು ದೊಡ್ಡ ಸಮಸ್ಯೆ ಮಾತ್ರ ಎಲ್ಲೆಡೆ ಎದ್ದು ಕಾಣುತ್ತಿದೆ. ಅದೇನೆಂದರೆ, ಜನರಲ್ಲಿ ಅಂಗಾಂಗ ದಾನ ಮಾಡುವ ಬಗ್ಗೆ ದೊಡ್ಡ ಮಟ್ಟದ ಉತ್ಸಾಹವೇನೂ ಕಂಡು ಬರುವುದಿಲ್ಲ. ಸ್ವತಃ ತಮಗೆ ಅಥವಾ ತಮ್ಮ ಆಪ್ತರಿಗೆ ಅಂಗಾಂಗ ಬೇಕಾದಾಗ ಮಾತ್ರ ಜನರು ಈ ಕುರಿತು ಚರ್ಚಿಸುತ್ತಾರೆ. ತಮ್ಮ ಅಗತ್ಯ ಮುಗಿದೊಡನೆ ವಿಷಯವನ್ನು ಮರೆತು ಬಿಡುತ್ತಾರೆ. ನಿಜವಾಗಿ ಈ ವಿಷಯದಲ್ಲಿ ಎಲ್ಲೆಡೆ ಸಾಮೂಹಿಕ ಉತ್ಸಾಹದ ವಾತಾವರಣ ಮೂಡಿ, ಜನರು ದೊಡ್ಡ ಸಂಖ್ಯೆಯಲ್ಲಿ ಸ್ವಯಂ ಸ್ಫೂರ್ತಿಯಿಂದ ತಮ್ಮನ್ನು ಅಂಗಾಂಗ ಡೋನರ್‌ಗಳಾಗಿ ನೋಂದಾಯಿಸಲು ಪ್ರಾರಂಭಿಸಬೇಕು. ಯಾರ ಮರಣ ಯಾವಾಗ ಬರುತ್ತದೆಂದು ಹೇಳಲಿಕ್ಕಾಗುವುದಿಲ್ಲ. ಅದು ಮುಂಗಡ ನೋಟಿಸು ಕೊಟ್ಟಂತೂ ಖಂಡಿತ ಬರುವುದಿಲ್ಲ. ಆದ್ದರಿಂದ ಯಾರೂ ತಾವು ಮರಣದ ಅಂಚಿಗೆ ತಲುಪುವುದನ್ನು ಕಾಯದೆ ತಾವು ಯುವಕರಾಗಿರುವಾಗಲೇ, ಆರೋಗ್ಯವಂತರಾಗಿರುವಾಗಲೇ ತಮ್ಮ ಅಂಗಾಂಗಗಳನ್ನು ದಾನ ಮಾಡುವ ಕುರಿತು ಒಂದಷ್ಟು ತಿಳುವಳಿಕೆ ಬೆಳೆಸಿಕೊಂಡು ಆ ಕುರಿತು ಕಾಗದ ಪತ್ರ, ದಾಖಲೆಗಳನ್ನು ತಯಾರಿಸಿ ಇಟ್ಟುಕೊಳ್ಳುವುದು ಒಳ್ಳೆಯದು.

ತಲ್ಹಾ ಸೌದಿ ಅರೇಬಿಯಾದಲ್ಲಿ ನಡೆಸುತ್ತಿರುವ ಅಭಿಯಾನ ನಮ್ಮೆಲ್ಲರಿಗೆ ಸಂಬಂಧಿಸಿದ್ದು. ಅವರಿಗೆ ನಾವು ಯಶಸ್ಸನ್ನು ಹಾರೈಸೋಣ. ಜೊತೆಗೆ ನಾವು ನಮ್ಮ ಪರಿಸರದಲ್ಲೂ ಅಂಗಾಂಗ ದಾನವನ್ನು ಪ್ರೋತ್ಸಾಹಿಸೋಣ. ಆ ಕುರಿತು ಇರುವ ವೌಢ್ಯಗಳನ್ನು ನಿವಾರಿಸೋಣ. ಭಾರತದಲ್ಲಿ ಈ ರಂಗದಲ್ಲಿ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದೆ. ಇಲ್ಲಿ ಪ್ರತಿವರ್ಷ ಸುಮಾರು 2 ಲಕ್ಷ ಜನರಿಗೆ ಕಣ್ಣಿನ ಅಗತ್ಯವಿರುತ್ತದೆ. ಆದರೆ ಇಲ್ಲಿ ಅಂಗಾಂಗ ದಾನಿಗಳ ಮೂಲಕ ರೋಗಿಗಳಿಗೆ ಪ್ರತಿವರ್ಷ ಲಭ್ಯವಾಗುವುದು ಕೇವಲ 50 ಸಾವಿರ ಕಣ್ಣುಗಳು ಮಾತ್ರ. ಅಂದರೆ ಕೇವಲ 25ಶೇ. ರೋಗಿಗಳಿಗೆ ಮಾತ್ರ ಪರಿಹಾರ ಸಿಗುತ್ತದೆ. ಉಳಿದವರು ಜೀವನಾದ್ಯಂತ ಕುರುಡರಾಗಿಯೇ ಉಳಿಯ ಬೇಕಾಗುತ್ತದೆ. ಜನರು ತಮ್ಮ ಆರೋಗ್ಯವಂತ ಕಣ್ಣುಗಳನ್ನು ತಮ್ಮ ಜೊತೆ ಗೋರಿಗೋ ಚಿತೆಗೋ ಒಯ್ಯಲು ತಯಾರಾಗಿರುತ್ತಾರೆ. ಆದರೆ ಅದನ್ನು ಇನ್ನೊಬ್ಬರಿಗೆ ದಾನ ಮಾಡಿ ಅವರ ಬದುಕಿನಲ್ಲಿ ಬೆಳಕನ್ನು ಮೂಡಿಸಲು ತಯಾರಾಗುವುದಿಲ್ಲ. ಭಾರತದಲ್ಲಿ ಪ್ರತಿವರ್ಷ ಸುಮಾರು 2 ಲಕ್ಷ ಜನರಿಗೆ ಕಿಡ್ನಿಯ ಅಗತ್ಯವಿರುತ್ತದೆ. ಆದರೆ ದಾನಿಗಳ ಮೂಲಕ ಲಭ್ಯವಾಗುವುದು ಹೆಚ್ಚೆಂದರೆ 1,700 ಕಿಡ್ನಿಗಳು ಮಾತ್ರ. ಹಾಗೆಯೇ ಇಲ್ಲಿ ಪ್ರತಿ ವರ್ಷ ಸುಮಾರು 50 ಸಾವಿರ ರೋಗಿಗಳಿಗೆ ಹೃದಯ ಮತ್ತು ಸುಮಾರು 50 ಸಾವಿರ ರೋಗಿಗಳಿಗೆ ಲಿವರ್‌ಗಳಅಗತ್ಯವಿರುತ್ತದೆ. ಆದರೆ ಲಭ್ಯವಿರುವುದು 340 ಹೃದಯಗಳು ಮತ್ತು 700 ಲಿವರ್‌ಗಳು ಮಾತ್ರ. ಇಂತಹ ಪ್ರಮುಖ ಅಂಗಾಂಗಗಳು ಸಕಾಲದಲ್ಲಿ ಸಿಗದಿದ್ದರೆ ರೋಗಿ ಪ್ರಾಣ ಕಳೆದು ಕೊಳ್ಳುವುದು ಖಚಿತ.

 ನಾಚಿಕೆಯ ವಿಷಯವೇನೆಂದರೆ ಅಂಗಾಂಗ ದಾನದ ವಿಷಯದಲ್ಲಿ ನಮ್ಮ ದೇಶ ಜಗತ್ತಿನ ಬೇರೆ ಹೆಚ್ಚಿನೆಲ್ಲ ದೇಶಗಳಿಗಿಂತ ಹಿಂದಿದೆ. 2017ರಲ್ಲಿ ಭಾರತದಲ್ಲಿ ಸಾಯುವ ಮುನ್ನ ಅಂಗಾಂಗ ದಾನ ಮಾಡಿದವರ ಪ್ರಮಾಣ ಕೇವಲ 0.009ಶೇ. ರಷ್ಟಿತ್ತು. ಅಮೆರಿಕದಲ್ಲಿ ಪ್ರತಿ ಹತ್ತು ಲಕ್ಷಕ್ಕೆ 32 ಮಂದಿ ಅಂಗಾಂಗ ದಾನಿಗಳಿರುತ್ತಾರೆ. ಸ್ಪೇನ್ ನಲ್ಲಿ ಈ ಸಂಖ್ಯೆ ಹತ್ತು ಲಕ್ಷಕ್ಕೆ 47 ರಷ್ಟಿದೆ. ನಮ್ಮಲ್ಲಿ ಈ ಸಂಖ್ಯೆ ಕೇವಲ 0.9 ಮಾತ್ರ. ಅಂದರೆ ಹತ್ತು ಲಕ್ಷದಲ್ಲಿ ಒಬ್ಬರಿದ್ದಾರೆ ಅನ್ನುವ ಸ್ಥಿತಿಯಲ್ಲೂ ನಾವಿಲ್ಲ!

ಖಂಡಿತ ಲಜ್ಜ್ಜಾಸ್ಪದವಾದ ಈ ಪರಿಸ್ಥಿಯನ್ನು ಬದಲಾಯಿಸಲು ನಾವು ತಕ್ಷಣ ರಂಗಕ್ಕಿಳಿಯಬೇಕಾಗಿದೆ. ನಮ್ಮ ಕ್ರೀಡೆ, ವಾಣಿಜ್ಯ, ಪೂಜೆ, ಮನರಂಜನೆ ಇತ್ಯಾದಿಗಳಿಗೆ ಮೀಸಲಾಗಿರುವ ಎಲ್ಲ ವೇದಿಕೆಗಳಲ್ಲಿ ನಾವಿನ್ನು ಅಂಗಾಂಗ ದಾನದ ಕುರಿತು ಚರ್ಚಿಸಬೇಕಾಗಿದೆ. ನೀವು ನಿಮ್ಮ ಅಂಗಾಂಗಗಳನ್ನು ದಾನ ಮಾಡುವುದಾಗಿ ವಿಲ್ ಬರೆದಿದ್ದೀರಾ? ಎಂದು ಒಬ್ಬರನ್ನೊಬ್ಬರು ಪ್ರಶ್ನಿಸುವ ಮೂಲಕ ನಾವು ಈ ಅಭಿಯಾನವನ್ನು ಆರಂಭಿಸಬಹುದು. ಅಥವಾ ಅಯ್ಯಯ್ಯೋ, ನೀವಿನ್ನೂ ನಿಮ್ಮ ಅಂಗಾಂಗಗಳನ್ನು ಡೊನೇಟ್ ಮಾಡುವ ಪೇಪರ್‌ಗಳಿಗೆ ಸೈನ್ ಮಾಡಿಲ್ಲವೇ? ಎಂದು ವಿಚಾರಿಸಬಹುದು. ಇದಾವುದೂ ಪರಿಣಾಮಕಾರಿಯಾಗದಿದ್ದರೆ ಅಲ್ಲೊಬ್ಬ ಮೂರ್ಖ ಕೂತಿರುವುದು ಕಾಣಿಸುತ್ತಿದೆಯೇ? ಅವನಿನ್ನೂ ತನ್ನ ಅಂಗಾಂಗಗಳನ್ನು ಡೊನೇಟ್ ಮಾಡುವ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿಸುವ ಪ್ರಯೋಗ ಖಂಡಿತ ಮಾಡಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)