varthabharthi


ಅನುಗಾಲ

ಇಬ್ಸೆನ್ ನ ‘ಬೊಂಬೆಯ ಮನೆ’

ವಾರ್ತಾ ಭಾರತಿ : 17 Jun, 2021
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ನೋರಾ ತನ್ನ ಸೂಕ್ಷ್ಮ ಮನಸ್ಸು ಘಾಸಿಗೊಂಡು ಮತ್ತೆ ಪತಿಯೊಂದಿಗೆ ಸೇರದ ಸ್ಥಿತಿಯನ್ನು ಹೇಳುವುದಲ್ಲದೆ ಮನೆಯಿಂದ ವಿಶಾಲ ಜಗತ್ತಿಗೆ ತನ್ನ ಬದುಕನ್ನು, ಗೌರವವನ್ನು ಹುಡುಕಿಕೊಂಡು ಹೋಗುವ ಮೂಲಕ ಎಲ್ಲ ಸಂಸಾರಗಳನ್ನೂ ಎಚ್ಚರಿಸುತ್ತಾಳೆ. ಆಕೆ ಪತಿಗೆ ಹೇಳುವ ‘‘ನಾನು ನಿನಗೆ ಅರ್ಥವಾಗುವುದಿಲ್ಲ; ನೀನು ನನಗೆ ಇಂದಿನವರೆಗೆ ಅರ್ಥವಾಗಿರಲಿಲ್ಲ’’ ಮತ್ತು ‘‘ನೀನು ನನ್ನಲ್ಲಿ ಪ್ರೀತಿಯಿಟ್ಟಿರಲಿಲ್ಲ; ನನ್ನಿಂದ ಪ್ರೀತಿಯ ಸಂತೋಷವನ್ನು ಪಡೆದುಕೊಳ್ಳುವುದರಲ್ಲಿ ಮಾತ್ರ ಆಸಕ್ತಿ ಇಟ್ಟಿದ್ದೆ’’ ಎನ್ನುವಾಗ ಅದು ಬರಿಯ ಭಾವಾಭಿವ್ಯಕ್ತಿಯಾಗದೆ ಭ್ರಮನಿರಸನವೆಂಬುದು ಗೊತ್ತಾಗುತ್ತದೆ. ಹೆಲ್ಮರ್ ಹೇಳುತ್ತಿದ್ದ ಬಾನಾಡಿ, ಅಳಿಲು, ಬೊಂಬೆ ಮುಂತಾದ ಪದಗಳಿಗೆ ಹೊಸ ಅರ್ಥ ಮೂಡುತ್ತದೆ.


ಜೂನ್ 4, 2021ರಿಂದ ನೆಟ್‌ಫ್ಲಿಕ್ಸ್ ವಾಹಿನಿಯಿಂದ ‘ಸ್ವೀಟ್‌ಟೂತ್’ ಎಂಬ ಆಕರ್ಷಕ ಶೀರ್ಷಿಕೆಯ ಸರಣಿ ಧಾರಾವಾಹಿ ಚಲನಚಿತ್ರವು ಪ್ರದರ್ಶಿತವಾಗುತ್ತಿದೆ. ಚಲನಚಿತ್ರವು ಹೇಗೂ ಇರಲಿ (ಚೆನ್ನಾಗಿದೆಯೆಂದು ಅನ್ನಿಸುತ್ತಿದೆ) ಅದರ ಶೀರ್ಷಿಕೆಯು ಗಮನ ಸೆಳೆಯಿತು. ಸಿಹಿಯನ್ನು ಇಷ್ಟಪಡುವವರನ್ನು ಸ್ವೀಟ್‌ಟೂತ್ ಎನ್ನುತ್ತಾರೆಂದು ಕೇಳಿದ್ದೇನೆ. ಈ ಪದವನ್ನು ನಾರ್ವೆಯ ಆಂಗ್ಲ ನಾಟಕಕಾರ ಇಬ್ಸೆನ್ ತನ್ನ ‘ಎ ಡಾಲ್ಸ್ ಹೌಸ್’ (ಬೊಂಬೆಯ ಮನೆ) ನಾಟಕದಲ್ಲಿ ಬಳಸಿದ್ದನು. ಆ ನಾಟಕದಲ್ಲಿ ಅದೊಂದು ಮುಖ್ಯ ಪದವಲ್ಲದಿದ್ದರೂ ಕುತೂಹಲದಿಂದ ಮತ್ತೆ ಓದಿದೆ. ಹೆನ್ರಿಕ್ ಇಬ್ಸೆನ್ 19ನೇ ಶತಮಾನದ (1828-1906) ಪ್ರಸಿದ್ಧ ವಾಸ್ತವವಾದಿ (ಅಥವಾ ವಾಸ್ತವತಾವಾದಿ) ನಾಟಕಕಾರ. ಆರಂಭದಲ್ಲಿ ಚಾರಿತ್ರಿಕ ಮತ್ತು ರಮ್ಯ ದುರಂತ ನಾಟಕಗಳನ್ನು ಬರೆದರೂ ಆನಂತರ ಪರಂಪರೆಯ ಪಂಥಗಳಿಂದ ವಿಚಲಿತನಾಗಿ ಸಾಮಾಜಿಕ ನೆಲೆಗಟ್ಟಿನ ನಾಟಕಗಳನ್ನು ಬರೆದವನು. ಮೇಲೆ ಹೇಳಿದ ‘ಎ ಡಾಲ್ಸ್ ಹೌಸ್’, ‘ದಿ ಮಾಸ್ಟರ್ ಬಿಲ್ಡರ್’, ‘ಏನ್ ಎನಿಮಿ ಆಫ್ ದಿ ಪೀಪಲ್’, ‘ವಾರಿಯರ್ಸ್ ಆಫ್ ಹೆಲ್ಗ್‌ಲ್ಯಾಂಡ್’, ‘ಘೋಸ್ಟ್ಸ್’ ಮುಂತಾದ ಹತ್ತಾರು ಗದ್ಯ ನಾಟಕಗಳನ್ನು ಬರೆದವನು. ಪ್ರಾಯಃ ಶೇಕ್ಸ್‌ಪಿ ಯರ್‌ನ ಆನಂತರ ರಂಗಭೂಮಿಯಲ್ಲಿ ಯಶಸ್ಸು ಕಂಡ ಮೊದಲಿಗ. (ನಂತರ ಬರ್ನಾರ್ಡ್‌ಷಾ, ಗಾರ್ಕಿ ಮುಂತಾದವರೂ ಇದೇ ಯಶಸ್ಸನ್ನು ಪಡೆದಿದ್ದಾರೆ.) ಈತನ ‘ಎ ಡಾಲ್ಸ್ ಹೌಸ್’ ಅತೀ ಹೆಚ್ಚು ಪ್ರದರ್ಶನ ಕಂಡ ನಾಟಕವೆಂದು ಪ್ರಸಿದ್ಧಿಗಳಿಸಿದೆ. ಈ ನಾಟಕದ ಮುಖ್ಯ ಭೂಮಿಕೆಯಲ್ಲಿರುವ ನೋರಾಳ ಪಾತ್ರ ವಹಿಸುವುದು ಪ್ರತಿಯೊಬ್ಬ ನಟಿಯ ಕನಸಾಗಿತ್ತಂತೆ!

ಈ ನಾಟಕ ಪ್ರಚುರಪಡಿಸುವ ಸ್ತ್ರೀ ಸ್ವಾತಂತ್ರ್ಯ/ವಿಮೋಚನೆಯ ಸಂಕೇತವನ್ನು ಆನಂತರ ಎಲ್ಲ ಕಡೆ ಒಂದು ಸಿದ್ಧಾಂತವಾಗಿ, ಚಳವಳಿಯಾಗಿ ಮುನ್ನಡೆಸಲಾಯಿತು. ಚರಿತ್ರೆಯಲ್ಲಿ ಮಹಿಳೆಯರು ರಾಜಕೀಯ ಅಧಿಕಾರವನ್ನು ಪಡೆದುಕೊಂಡ ಉದಾಹರಣೆಗಳು ಇವೆಯಾದರೂ ಸಾಮಾನ್ಯರ ಸ್ಥಿತಿ ಉತ್ತಮವಾಗಿರಲಿಲ್ಲವೆಂಬ ಸತ್ಯವನ್ನು ಮರೆಮಾಚಲಾಗದು. ಭಾರತದಲ್ಲೂ ರಾಜಾರಾಮಮೋಹನರಾಯ್ ಅಥವಾ ಪಂಡಿತೆ ರಮಾಬಾಯಿ ಮುಂತಾದವರ ಪ್ರಯತ್ನದ ಹೊರತಾಗಿಯೂ ಈ ಸಮಸ್ಯೆ ಮುಂದುವರಿಯಿತು. 1915ರಲ್ಲಿ ಕನ್ನಡ ಚಿಂತಕ, ಸಾಹಿತಿ ಎಂ. ಎನ್. ಕಾಮತ್ ಅವರು ‘ಹಿಂದೂದೇಶದ ಸ್ತ್ರೀ’ ಎಂಬ ಲೇಖನದಲ್ಲಿ ‘‘ಹಿಂದೂ ದೇಶದಲ್ಲಿ ಪುರುಷನು ಸ್ತ್ರೀಯ ಮೇಲೆ ದಾಸ್ಯವನ್ನು ವಿಧಿಸಿದಂತೆ ಮತ್ತಾವ ದೇಶದಲ್ಲೂ ವಿಧಿಸಲಿಲ್ಲ. ಸ್ತ್ರೀ ಜೀವಿತವೆಲ್ಲವೂ ಪುರುಷನ ಅಂಗೈಯಲ್ಲಿಯೇ ಇರುವುದು. ಒಳ್ಳೆಯ ಹೆಂಡತಿಯಾಗಿಯೂ, ಒಳ್ಳೆಯ ತಾಯಿಯಾಗಿಯೂ ಇರಬೇಕು.’’ ಮತ್ತು ‘‘ಸ್ವಭಾವಸಿದ್ಧವಾಗಿ ಆಕೆಯು ಗೃಹಕೃತ್ಯವನ್ನು ನೋಡಿಕೊಳ್ಳುವುದು ಮಾತ್ರವಲ್ಲದೆ ಮತ್ತಾವ ಕೆಲಸಕ್ಕೂ ಬಾರಳು ಎಂಬಿವೇ ಸ್ತ್ರೀಯ ಕುರಿತು ಪುರುಷನಿಗಿರುವ ಅಭಿಪ್ರಾಯಗಳು.’’ ಎಂದು ಹೇಳಿ ಬಳಿಕ ‘‘ಅಸಂಖ್ಯಾತ ವರ್ಷಗಳಿಂದಲೂ ಸ್ತ್ರೀಯನ್ನು ಕಟ್ಟಿಹಾಕಿದ ಅಂಧಕಾರ ಬಂಧವನ್ನು ಸಡಿಲಿಸಬೇಕು’’ ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.

1927ರಲ್ಲಿ ಕ್ಯಾಥರಿನ್‌ಮೆಯೋ ಎಂಬ ಆಂಗ್ಲ ಲೇಖಕಿ ತನ್ನ ‘ಮದರ್ ಇಂಡಿಯಾ’ ಎಂಬ ಕೃತಿಯಲ್ಲೂ ಲಿಂಗತಾರತಮ್ಯವೂ ಸೇರಿದಂತೆ ಭಾರತದ ಮಹಿಳೆಯರ ಶೋಚನೀಯ ಸ್ಥಿತಿಯ ಬಗ್ಗೆ ವಿವರಿಸಿ ಆಗಿನ ದೇಶಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದರು. ಫ್ರೆಂಚ್ ಲೇಖಕಿ ಸಿಮೋನ್‌ದಬೋವಾ 1949ರಲ್ಲಿ ಪ್ರಕಟಿಸಿದ ‘ದ ಸೆಕೆಂಡ್ ಸೆಕ್ಸ್’ ಎಂಬ ಕೃತಿಯಲ್ಲಿ ಮಹಿಳಾ ವಿಮೋಚನೆಯ ಪ್ರಯತ್ನ, ವಿಕಾಸ ಮತ್ತು ಲಿಂಗಸಮಾನತೆಯ ಕುರಿತು ಇನ್ನೂ ಆಗಬೇಕಾಗಿರುವ ಕಾರ್ಯವನ್ನು ವಿಸ್ತೃತವಾಗಿ ಬರೆದಿದ್ದರು. ಅಂತೂ ಎಲ್ಲೆಡೆ ಅನೇಕ ಸ್ತ್ರೀಯರು ಸಮಾನತೆಯನ್ನೂ ಕೆಲವೆಡೆ ಅಧಿಕಾರವನ್ನೂ ಸಾಧಿಸಿದ್ದರೆ, ಜನಮಾನಸದಲ್ಲಿ ಸೂರ್ಯೋದಯವಾಗಿರಲಿಲ್ಲ. ವಿಶೇಷವೆಂದರೆ 1879ರಲ್ಲೇ ಜನಸಾಮಾನ್ಯರ ಈ ಎಲ್ಲ ಅಶಯಗಳ ಸ್ವರೂಪವನ್ನು ಅಭಿವ್ಯಕ್ತಿಪಡಿಸಿ ಇಬ್ಸೆನ್ ತನ್ನ ‘ಎ ಡಾಲ್ಸ್ ಹೌಸ್’ ನಾಟಕವನ್ನು ಬರೆದಿದ್ದನು. ಇದು ರಂಗಮಂಚದಿಂದ ಪ್ರೇಕ್ಷಕರ ಮನೆಗೆ ಇಳಿದದ್ದು ಆನಂತರವೇ.

ಇಬ್ಸೆನ್‌ನ ನಾಟಕಗಳನ್ನು ಓದಲು ಸುಲಭ. ಅಲಂಕಾರಗಳಿಲ್ಲ. ದೃಶ್ಯ ಮತ್ತು ಸ್ಥಾನಗಳಷ್ಟು ವಿವರಗಳನ್ನು ಸಂಭಾಷಣೆ ಬಯಸುವುದಿಲ್ಲ. ಅರ್ಥಮಾಡಿಕೊಳ್ಳಲು ಶೇಕ್ಸ್‌ಪಿಯರ್ ಇಂಗ್ಲಿಷ್‌ನ ತಿಳಿವಳಿಕೆ ಬೇಡ. ಅಭಿನಯಿಸಲು ಸುಲಭವಾಗುವಂತೆ 3-4 ಅಂಕಗಳಲ್ಲೇ ಶ್ರೀಸಾಮಾನ್ಯರ ಸರಳ ಭಾಷೆಯಲ್ಲೇ ನಾಟಕ ನಡೆಯುತ್ತದೆ. ಆಪ್ತವಾಗುತ್ತದೆ. ಸಂದೇಶ ರವಾನೆಯಾಗುತ್ತದೆ. ‘ಎ ಡಾಲ್ಸ್ ಹೌಸ್’ ನಾಟಕ ಕ್ರಿಸ್‌ಮಸ್ ಮತ್ತು ಹೊಸವರ್ಷದ ಒಂದು ವಾರದ ನಡುವಣ ಎರಡು ದಿನಗಳಲ್ಲಿ ನಡೆಯುವ ನಾಟಕ. ಎರಡು ಮುಖ್ಯ ಪಾತ್ರಗಳು- ತೋರ್ವಾಲ್ಡ್ ಹೆಲ್ಮರ್ ಎಂಬ ವಕೀಲ, ಈಗ ಬ್ಯಾಂಕ್ ಮ್ಯಾನೇಜರ್ ಆದವನು, ಆತನ ಪತ್ನಿ ನೋರಾ; ನಿಲ್ಸ್ ಕ್ರಾಗ್‌ಸ್ಟಾಡ್ ಎಂಬ ಇನ್ನೊಬ್ಬ ವಕೀಲ ಈಗ ಅದೇ ಬ್ಯಾಂಕ್ ನೌಕರ; ಕ್ರಿಸ್ಟೀನ್ ಲಿಂಡ್ ಎಂಬ ನೋರಾಳ ಗೆಳತಿ ಮತ್ತು ಡಾ. ರ್ಯಾಂಕ್ ಎಂಬ ಹೆಲ್ಮರ್ ಕುಟುಂಬದ ಆಪ್ತ ಮತ್ತು ವೈದ್ಯ. (ಇನ್ನುಳಿದ 3-4 ಪಾತ್ರಗಳು ಬಂದು ಹೋಗುವವು- ಆಳು, ಸಂದೇಶವಾಹಕ, ಸೇವಕಿ, ಮಕ್ಕಳು, ಹೀಗೆ.) ನೋರಾ, ತನ್ನ ಗಂಡ ಮತ್ತು ಮೂವರು ಮಕ್ಕಳೊಂದಿಗೆ ಸಂತೋಷದಿಂದ 8 ವರ್ಷ ಸಂಸಾರ ಮಾಡಿದವಳು. ಹೆಲ್ಮರ್ ಪತ್ನಿಯನ್ನು ತನ್ನ ಮುದ್ದಿನ ಬಾನಾಡಿ, ಅಳಿಲು, ಸವಿಪ್ರೀತಿಯವಳು, ಬೊಂಬೆ ಹೀಗೆಲ್ಲ ಮುದ್ದುಗರೆಯುತ್ತಲೇ ನೋಡಿಕೊಂಡವನೇ ಹೊರತು ಯಾವ ಗಂಭೀರ ಸಮಸ್ಯೆಯನ್ನೂ ಆಕೆಯೊಂದಿಗೆ ಚರ್ಚಿಸದವನು. ಆತನ ಪ್ರಕಾರ ಗೃಹಿಣಿ ಸೌಂದರ್ಯದ ಮತ್ತು ಮನೆಯ ವ್ಯವಸ್ಥೆಯ ಸಂಕೇತ.

ವೈವಾಹಿಕ ಜೀವನದ ಗತಕಾಲದ ಒಂದು ಘಟನೆಯು ಈ ಕುಟುಂಬದ ಶಾಂತಿಯನ್ನು ಕದಡುತ್ತದೆ. ಹೆಲ್ಮರ್ ಕಾಯಿಲೆಯಲ್ಲಿದ್ದಾಗ ಆತನಿಗರಿವಾಗದಂತೆ ನೋರಾ ತನ್ನ ತಂದೆಯ ಸಹಿಯನ್ನು ಫೋರ್ಜರಿ ಮಾಡಿ ಕ್ರಾಗ್‌ಸ್ಟಾಡ್‌ನಿಂದ ಸಾಲ ಪಡೆದಿದ್ದು ಪತಿಗೆ ಗೊತ್ತಾಗದಂತೆ ಹಣ ಕೂಡಿಟ್ಟು ಸಾಲವನ್ನು ತೀರಿಸಿಕೊಂಡು ಬಂದಿದ್ದಾಳೆ; ಇನ್ನೂ ಬಾಕಿಯಿದೆ. ಕ್ರಿಸ್‌ಮಸ್‌ನ ಹಿಂದಿನ ದಿನ ಆಕೆಯ ಗೆಳತಿ ಲಿಂಡ್ ಉದ್ಯೋಗವನ್ನು ಹುಡುಕಿಕೊಂಡು ಬಂದು ಆಕೆಯ ನೆರವನ್ನು ಬೇಡುತ್ತಾಳೆ. ನೋರಾ ಪತಿಯೊಂದಿಗೆ ಮಾತನಾಡಿ ಆಕೆಗೆ ಆತನ ಬ್ಯಾಂಕಿನಲ್ಲಿ ಉದ್ಯೋಗವನ್ನು ಕೊಡಿಸುವ ವ್ಯವಸ್ಥೆಯನ್ನು ಮಾಡುತ್ತಾಳೆ. ಜೊತೆಗೇ ತಾನು ಕ್ರಾಗ್‌ಸ್ಟಾಡ್‌ನಿಂದ ಸಾಲಪಡೆದದ್ದನ್ನು ಹೇಳುತ್ತಾಳೆ. ಲಿಂಡ್ ಒಮ್ಮೆ ಆತನನ್ನು ಮದುವೆಯಾಗಲು ನಿರಾಕರಿಸಿ ಜೀವನೋಪಾಯಕ್ಕಾಗಿಯೇ ಬೇರೊಬ್ಬನನ್ನು ಮದುವೆಯಾಗಿ ಗಂಡನನ್ನು ಕಳೆದುಕೊಂಡವಳು. ಹೆಲ್ಮರ್ ಕರ್ತವ್ಯದಲ್ಲಿ ಪ್ರಾಮಾಣಿಕ ಹಾಗೂ ನಿಷ್ಠುರಿ. ಕ್ರಾಗ್‌ಸ್ಟಾಡ್ ಮಾಡಿದ ಫೋರ್ಜರಿಗಾಗಿ ಆತನನ್ನು ಕೆಲಸದಿಂದ ಕಿತ್ತುಹಾಕಲು ನಿರ್ಧರಿಸುತ್ತಾನೆ. ಇದನ್ನು ತಪ್ಪಿಸಲು ಕ್ರಾಗ್‌ಸ್ಟಾಡ್ ನೋರಾಳನ್ನು ಭೇಟಿಯಾಗಿ ಹೆಲ್ಮರ್‌ನನ್ನು ಅಂತಹ ನಿರ್ಧಾರದತ್ತ ದುಡುಕಬಾರದಾಗಿ ಹೇಳಬೇಕೆಂದೂ ಆಕೆ ಮಾಡಿದ ಫೋರ್ಜರಿಯನ್ನು ನೆನಪಿಸಿ ಅದು ಆಕೆಯನ್ನು ಜೈಲಿಗೆ ತಳ್ಳಲು ಸಾಕೆಂದೂ ಎಚ್ಚರಿಸುತ್ತಾನೆ. ಆಕೆ ತಳಮಳಕ್ಕೊಳಗಾಗುತ್ತಾಳೆ. ಲಿಂಡ್ ಇದನ್ನು ಪತಿಗೆ ತಿಳಿಸಲು ಹೇಳಿದರೂ ನಿರಾಕರಿಸುತ್ತಾಳೆ. ಅದು ಆಕೆಯ ಅಸ್ಮಿತೆಯ ಪ್ರಶ್ನೆ.

ಹೆಲ್ಮರ್ ಕ್ರಾಗ್‌ಸ್ಟಾಡ್‌ನನ್ನು ಉದ್ಯೋಗದಿಂದ ವಜಾಮಾಡುವ ಪತ್ರವನ್ನು ನೀಡುತ್ತಾನೆ. ಇದರಿಂದ ವ್ಯಗ್ರನಾದ ಕ್ರಾಗ್‌ಸ್ಟಾಡ್ ನೋರಾಳನ್ನು ಕಂಡು ಆಕೆಯ ಸಂಸಾರದ ಸುಖವನ್ನು ಹಾಳುಮಾಡುವುದಾಗಿ ಹೇಳಿ ಸಾಲದ ಮಾಹಿತಿ ಪತ್ರವನ್ನು ಹೆಲ್ಮರ್‌ನಿಗೆ ಕಳುಹಿಸುತ್ತಾನೆ. ನೋರಾ ಅದು ಹೇಗೋ ಹೆಲ್ಮರ್ ಆ ಪತ್ರವನ್ನು ಕ್ರಿಸ್‌ಮಸ್ ಮುಗಿಯುವ ವರೆಗೆ ಆತನು ಓದದಂತೆ ತಡೆಯುತ್ತಾಳೆ. ಆನಂತರ ಆ ಪತ್ರ ಹೆಲ್ಮರ್‌ನ ಕೈಸೇರಿದಾಗ ಆತ ನೋರಾಳನ್ನು ಕಠಿಣವಾಗಿ ಹಳಿದು ಆಕೆ ತನಗೆ ಕ್ರಾಗ್‌ಸ್ಟಾಡ್‌ನ ಎದುರು ಮಾತ್ರವಲ್ಲ, ಸಾರ್ವಜನಿಕವಾಗಿಯೂ ಅಗೌರವವನ್ನು ತಂದಳೆಂದೂ ಇನ್ನು ಮುಂದೆ ಮನೆಯಲ್ಲೇ ಬಿದ್ದಿರಬೇಕೆಂದೂ ಮಕ್ಕಳನ್ನು ತಾನೇ ಬೆಳೆಸುವುದಾಗಿಯೂ ತಾಕೀತು ಮಾಡುತ್ತಾನೆ. ತಾನಿದ್ದ ಸ್ಥಿತಿಯಲ್ಲಿ ಬೇರೆ ದಾರಿಯಿರಲಿಲ್ಲವೆಂದು ಆಕೆ ವಿವರಿಸಿದರೂ ‘‘ತನ್ನ ಕೈಹಿಡಿದ ಹೆಂಡತಿಗೋಸ್ಕರ ಯಾವ ಗಂಡನೂ ತನ್ನ ಮಾನವನ್ನು ಕಳೆದುಕೊಳ್ಳಲಾರನು’’ ಎನ್ನುತ್ತಾನೆ. ತನ್ಮಧ್ಯೆ ಕ್ರಾಗ್‌ಸ್ಟಾಡ್‌ನ ಸ್ಥಾನಕ್ಕೆ ನೇಮಕವಾದ ಲಿಂಡ್ ನೋರಾಳಲ್ಲಿ ತಾನು ಕ್ರಾಗ್‌ಸ್ಟಾಡ್‌ನೊಂದಿಗೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಹೇಳುತ್ತಾಳೆ. ನೋರಾ ಒಪ್ಪದೆಯೂ ಆಕೆ ಆತನನ್ನು ಸಂಧಿಸುವ ಇಚ್ಛೆಯನ್ನು ವ್ಯಕ್ತಪಡಿಸಿ ಭೇಟಿಯಾಗಿ ತಾನು ಆತನನ್ನು ಮದುವೆಯಾಗುವುದಾಗಿ ಹೇಳಿ ಈ ಸಂಸಾರವನ್ನು ಹಾಳುಮಾಡದಂತೆ ಹೇಳಿ ಆತನನ್ನು ಒಪ್ಪಿಸುತ್ತಾಳೆ. ಅದರಂತೆ ಆತ ಸಾಲದ ಪತ್ರವನ್ನು ಹೆಲ್ಮರ್‌ನಿಗೆ ಮರಳಿಸುತ್ತಾನೆ.

ಅದನ್ನು ಕಂಡಕೂಡಲೇ ಹೆಲ್ಮರ್ ಮತ್ತೆ ಬದಲಾಗಿ ನೋರಾಳಲ್ಲಿ ತನ್ನ ಸಮಸ್ಯೆ ಬಗೆಹರಿಯಿತೆಂದೂ ಮುಂದಿನಂತೆಯೇ ಇರೋಣವೆಂದೂ ಹೇಳುತ್ತಾನೆ. ಆದರೆ ನೋರಾಳಿಗೆ ಮನೆಯಲ್ಲಿ ತನ್ನ ಸ್ಥಾನವಿಷ್ಟೇ-ಒಂದು ಬೊಂಬೆಯಂತೆ ಪತಿಯನ್ನು ಸಂತುಷ್ಟನಾಗಿಡುವುದು ಮಾತ್ರ, ಈತ ತನ್ನನ್ನು ರಕ್ಷಿಸುವವನೇ ಹೊರತು ಸಮಾನತೆಯನ್ನು ಕಲ್ಪಿಸಿ ಪ್ರೀತಿಸುವವನಲ್ಲ, ತವರುಮನೆಯಲ್ಲೂ ಈಗ ಗಂಡನ ಮನೆಯಲ್ಲೂ ಈ ರೀತಿಯ ಬದುಕಿಗಿಂತ ತನ್ನತನವನ್ನು ಕಂಡುಕೊಳ್ಳುವುದು ಮುಖ್ಯವೆಂದನ್ನಿಸಿ ಮಕ್ಕಳ ಮುಖವನ್ನೂ ನೋಡದೆ ಆ ಇರುಳೇ ಮನೆಬಿಟ್ಟು ಹೋಗುತ್ತಾಳೆ. ಎರಡೇ ಎರಡು ದಿನಗಳಲ್ಲಿ ಸಂಸಾರ ಒಡೆದುಹೋಗುತ್ತದೆ. ನೋರಾ ತನ್ನ ಸೂಕ್ಷ್ಮ ಮನಸ್ಸು ಘಾಸಿಗೊಂಡು ಮತ್ತೆ ಪತಿಯೊಂದಿಗೆ ಸೇರದ ಸ್ಥಿತಿಯನ್ನು ಹೇಳುವುದಲ್ಲದೆ ಮನೆಯಿಂದ ವಿಶಾಲ ಜಗತ್ತಿಗೆ ತನ್ನ ಬದುಕನ್ನು, ಗೌರವವನ್ನು ಹುಡುಕಿಕೊಂಡು ಹೋಗುವ ಮೂಲಕ ಎಲ್ಲ ಸಂಸಾರಗಳನ್ನೂ ಎಚ್ಚರಿಸುತ್ತಾಳೆ. ಆಕೆ ಪತಿಗೆ ಹೇಳುವ ‘‘ನಾನು ನಿನಗೆ ಅರ್ಥವಾಗುವುದಿಲ್ಲ; ನೀನು ನನಗೆ ಇಂದಿನವರೆಗೆ ಅರ್ಥವಾಗಿರಲಿಲ್ಲ’’ ಮತ್ತು ‘‘ನೀನು ನನ್ನಲ್ಲಿ ಪ್ರೀತಿಯಿಟ್ಟಿರಲಿಲ್ಲ; ನನ್ನಿಂದ ಪ್ರೀತಿಯ ಸಂತೋಷವನ್ನು ಪಡೆದುಕೊಳ್ಳುವುದರಲ್ಲಿ ಮಾತ್ರ ಆಸಕ್ತಿ ಇಟ್ಟಿದ್ದೆ’’ ಎನ್ನುವಾಗ ಅದು ಬರಿಯ ಭಾವಾಭಿವ್ಯಕ್ತಿಯಾಗದೆ ಭ್ರಮನಿರಸನವೆಂಬುದು ಗೊತ್ತಾಗುತ್ತದೆ. ಹೆಲ್ಮರ್ ಹೇಳುತ್ತಿದ್ದ ಬಾನಾಡಿ, ಅಳಿಲು, ಬೊಂಬೆ ಮುಂತಾದ ಪದಗಳಿಗೆ ಹೊಸ ಅರ್ಥ ಮೂಡುತ್ತದೆ. ಕೊನೆಯಲ್ಲಿ ನೋರಾ ಬಾಗಿಲು ಮುಚ್ಚಿದ ಸದ್ದು ಹೆಲ್ಮರನಿಗೆ ಮಾತ್ರವಲ್ಲ, ಇಡೀ ವಿಶ್ವದಲ್ಲಿ ಮಾರ್ದನಿಗೊಂಡಿತೆಂದು ಅಮೆರಿಕದ ವಿಮರ್ಶಕ ಜೇಮ್ಸ್ ಗಿಬ್ಬನ್ಸ್ ರೂಪಕಾತ್ಮಕವಾಗಿ ಹೇಳುತ್ತಾನೆ. ಈ ಮುಕ್ತಾಯದ ಕುರಿತು ಆಗ ನಾರ್ವೆಯಲ್ಲಿ ಭಾರೀ ಕೋಲಾಹಲವಾಗಿ ಇಬ್ಸೆನ್ ಕೆಲವೆಡೆ ಬೇರೆ ಅಂತ್ಯವನ್ನು ಕಾಣಿಸಿದ್ದನಂತೆ.

ನೋರಾಳ ವ್ಯಕ್ತಿತ್ವಕ್ಕೆ ವಿರುದ್ಧವಾದ ಪಾತ್ರವನ್ನು ಇಬ್ಸೆನ್ ಇನ್ನೊಂದು ನಾಟಕದಲ್ಲಿ ಸೃಷ್ಟಿಸಿದನಂತೆ! ಮುಂದೆ ಅಮೆರಿಕದ ನಾಟಕಕಾರ ಲ್ಯೂಕಾಸ್ ನೋರಾ 15 ವರ್ಷಗಳ ಆನಂತರ ಮರಳಿದ ಕಥಾವಸ್ತುವನ್ನು ಸೃಷ್ಟಿಸಿ ‘ಎ ಡಾಲ್ಸ್ ಹೌಸ್-ಭಾಗ 2’ ಎಂಬ ನಾಟಕವನ್ನು ಬರೆದಿದ್ದಾನೆ. ಒಂದು ನಾಟಕ ಹೇಗೆ ಸಮಾಜವನ್ನು ಕಾಡಬಹುದೆಂಬುದಕ್ಕೆ ಇದು ಒಳ್ಳೆಯ ನಿದರ್ಶನ. ಈ ಕೃತಿಯನ್ನು 20ನೇ ಶತಮಾನದ ಮೊದಲ ದಶಕಗಳಲ್ಲಿ (ನಿಖರವಾಗಿ ವರ್ಷ ಲಭ್ಯವಿಲ್ಲ) ಎಸ್. ಜಿ. ಶಾಸ್ತ್ರಿಯವರು ಸೂತ್ರದ ಬೊಂಬೆ ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ. ಸರಳವಾಗಿ ರಂಗಕ್ಕನುಗುಣವಾಗಿದೆ. ಆರಂಭದಲ್ಲಿ ಹೇಳಿದ್ದನ್ನು ನೆನಪಿಸುವುದಾದರೆ ‘ಮಿಸ್‌ಸ್ವೀಟ್‌ಟೂತ್’ ಪದಕ್ಕೆ ಪರ್ಯಾಯವಾಗಿ ‘ಸೌಮಿಠಾಯಿ ಬಾಯಿ’ ಎಂದು ಶ್ಲೇಷಾತ್ಮಕವಾಗಿ ಬಳಸಿದ್ದಾರೆ. ಸಾಂದರ್ಭಿಕವಾಗಿದೆ.

ಏಕೆಂದರೆ ಅದು ಹೆಲ್ಮರ್ ನೋರಾಳಿಗೆ ಹೇಳುವ ಮಾತು! ಸ್ವೀಟ್‌ಟೂತ್ ನಮ್ಮನ್ನು ಎಲ್ಲಿಂದ ಎಲ್ಲಿಗೆ ಒಯ್ಯುತ್ತಿದೆ! ಇವರೇ ಅನುವಾದಿಸಿದ ಇಬ್ಸೆನ್‌ನ ಇನ್ನೊಂದು ನಾಟಕದ ಸಂದರ್ಭದಲ್ಲಿ ಬಿಎಂಶ್ರೀಯವರು ಬರೆದ ಮುನ್ನುಡಿಯು ಇಲ್ಲೂ ಪ್ರಕಟವಾಗಿದೆ. ಬಿಎಂಶ್ರೀಯವರು ‘‘ಹೆಂಗಸರು ವ್ಯಕ್ತಿಸ್ವಾತಂತ್ರ್ಯವಿಲ್ಲದೆ ನಿರ್ಬಂಧ ಜೀವನದಲ್ಲಿ ಸಿಕ್ಕಿ ಬೊಂಬೆಗಳಾಗಿರುವುದರ ಪರಿಣಾಮ’’ವನ್ನು ಹೇಳಿ ಇಬ್ಸೆನ್‌ನ ‘‘ನಾನು ಬೋಧಕನಲ್ಲ; ಸಮಾಜದ ರೋಗಕ್ಕೆ ಚಿಕಿತ್ಸೆ ಮಾಡಲಾರೆ, ಆದರೆ ಅವುಗಳನ್ನು ಪರಿಶೀಲಿಸಿ ರೋಗದ ಸ್ವಭಾವವಿಂತಹುದು ಎಂದು ಕಂಡುಹಿಡಿಯಲು ಪ್ರಯತ್ನಪಟ್ಟಿದ್ದೇನೆ’’ ಎಂಬ ಮಾತುಗಳನ್ನು ಉಲ್ಲೇಖಿಸಿದ್ದಾರೆ. ಅನುವಾದದ ಕುರಿತು ವಿವೇಚಿಸುತ್ತ ಅಲ್ಲೊಂದು ಗ್ರಂಥ, ಇಲ್ಲೊಂದು ಗ್ರಂಥವನ್ನು ಪರಿವರ್ತಿಸುವುದಕ್ಕಿಂತಲೂ, ನಮ್ಮ ಗ್ರಂಥಕಾರರು ಯಾವನಾದರೂ ಒಬ್ಬ ದೊಡ್ಡ ಕವಿಯನ್ನು ಆಯ್ದು ಆತನ ಗ್ರಂಥಮಾಲೆಯಲ್ಲಿ ಪಾಂಡಿತ್ಯವನ್ನು ಸಂಪಾದಿಸಿ, ತಮ್ಮ ಜೀವಮಾನವನ್ನೇ ಆತನಿಗೆ ಧಾರೆಯೆರೆದು, ಆತನ ಗ್ರಂಥಗಳನ್ನೆಲ್ಲಾ ಕನ್ನಡಿಗರಿಗೆ ಅರ್ಪಿಸುವುದು ಉಚಿತವೆಂದು ಹೇಳುತ್ತಾರೆ. ಬಿ. ವೆಂಕಟಾಚಾರ್ಯರು ಬಂಕಿಮಚಂದ್ರರ ಕೃತಿಗಳನ್ನು ಈ ರೀತಿ ಕನ್ನಡಿಸಿದ್ದನ್ನು ಉದಾಹರಿಸುತ್ತಾರೆ.
ಎಲ್ಲ ಕಾಲಕ್ಕೂ ಸಲ್ಲುವ ಈ ನಾಟಕವನ್ನು ಕನ್ನಡದ ರಂಗಭೂಮಿಯಲ್ಲಿ ಹೆಚ್ಚು ಹೆಚ್ಚು ಕಾಣುವ ಅಗತ್ಯವಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)