varthabharthi


ಸಂಪಾದಕೀಯ

ಕೇಂದ್ರಕ್ಕೆ ಹೈಕೋರ್ಟ್ ಚಾಟಿ

ವಾರ್ತಾ ಭಾರತಿ : 17 Jun, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಸಂವಿಧಾನದ ಮೂಲ ಪಾಠಗಳನ್ನು ಒಂದು ಸರಕಾರ ಹೈಕೋರ್ಟ್ ಮೂಲಕ ಕಲಿಯಬೇಕಾದ ಸ್ಥಿತಿಗೆ ಬಂದಿದೆ. ಈ ಹಿಂದೆಲ್ಲ, ನ್ಯಾಯಾಲಯ ತರಾಟೆಗೆ ತೆಗೆದುಕೊಂಡರೆ, ಅದು ಕೇಂದ್ರ ಸರಕಾರಕ್ಕೆ ತೀರಾ ಮುಜುಗರದ ವಿಷಯವಾಗಿ ಬಿಡುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ಸರಕಾರಕ್ಕೆ ನ್ಯಾಯಾಲಯದಿಂದ ತರಾಟೆಗೊಳಗಾಗುವುದು ಅಭ್ಯಾಸವಾಗಿ ಬಿಟ್ಟಿದೆ. ಲಜ್ಜೆ ಕಳೆದುಕೊಂಡ ಸರಕಾರಕ್ಕೆ, ನ್ಯಾಯಾಲಯದ ಚುಚ್ಚು ಮಾತುಗಳು ತಾಕುತ್ತಲೇ ಇಲ್ಲ. ಇಲ್ಲವಾದರೆ, ‘ಪ್ರತಿಭಟನೆ ಮತ್ತು ಭಯೋತ್ಪಾದನೆ’ಯ ನಡುವಿನ ವ್ಯತ್ಯಾಸವನ್ನು ನ್ಯಾಯಾಲಯದ ಬಾಯಿಯಿಂದ ಕೇಳಿಸಿಕೊಳ್ಳುವ ಸ್ಥಿತಿ ಕೇಂದ್ರ ಸರಕಾರಕ್ಕೆ ಬರುತ್ತಿರಲಿಲ್ಲ. ಸಿಎಎ ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕಾಗಿ ಸಾಮಾಜಿಕ ಕಾರ್ಯಕರ್ತರಾಗಿರುವ ನತಾಶಾ ನರ್ವಾಲ್, ದೇವಾಂಗನಾ ಕಲಿತಾ ಹಾಗೂ ಜೆಎಂಐ ವಿದ್ಯಾರ್ಥಿ ಆಸಿಫ್ ಇಕ್ಬಾಲ್‌ರನ್ನು ಕಳೆದ ವರ್ಷ ಸರಕಾರ ಬಂಧಿಸಿತ್ತು. ಸುಮಾರು ಒಂದು ವರ್ಷ ಕಾಲ ಜೈಲಲ್ಲಿ ಕಳೆದ ಇವರಿಗೆ ಇದೀಗ ದಿಲ್ಲಿ ಹೈಕೋರ್ಟ್ ಜಾಮೀನು ನೀಡಿದೆ. ಇದೇ ಸಂದರ್ಭದಲ್ಲಿ, ಸರಕಾರವನ್ನು ಪ್ರಶ್ನಿಸುವ ನಾಗರಿಕರನ್ನು ಭಯೋತ್ಪಾದಕರೆಂದು ಕರೆಯುವ ಸರಕಾರದ ಮನಸ್ಥಿತಿಯ ಕುರಿತಂತೆ ಹೈಕೋರ್ಟ್ ತೀವ್ರ ಆತಂಕವನ್ನು ವ್ಯಕ್ತಪಡಿಸಿದೆ.

‘ಕೇಂದ್ರದ ಅಥವಾ ಸಂಸತ್ತಿನ ಉಪಕ್ರಮಗಳಿಗೆ ವ್ಯಾಪಕ ವಿರೋಧವಿದ್ದಾಗ ಪ್ರಚೋದನಾತ್ಮಕ ಭಾಷಣ, ರಸ್ತೆ ತಡೆ ನಡೆಸುವುದು ಮತ್ತಿತರ ಕೃತ್ಯಗಳು ಅಸಹಜವಲ್ಲ. ಇಂತಹ ಪ್ರತಿಭಟನೆಗಳು ಶಾಂತರೀತಿಯಲ್ಲಿ, ಅಹಿಂಸಾತ್ಮಕವಾಗಿ ನಡೆಯಬೇಕು ಎಂಬ ನಿರೀಕ್ಷೆಯಿದ್ದರೂ ಪ್ರತಿಭಟನಾಕಾರರು ಕಾನೂನಿನ ಪ್ರಕಾರ ಮಿತಿ ಮೀರಿ ವರ್ತಿಸುವುದೂ ಅಸಹಜವಲ್ಲ. ಇಲ್ಲಿ ಆರೋಪಿಗಳು ಈ ಮಿತಿಯನ್ನು ಮೀರಿದ್ದಾರೆ ಎಂದು ವಾದಿಸಬಹುದಾದರೂ, ಅವರ ಈ ನಡೆ ಯುಎಪಿಎ ಕಾಯ್ದೆಯಡಿ ವ್ಯಾಖ್ಯಾನಿಸಿದ ಭಯೋತ್ಪಾದಕ ಕೃತ್ಯ ಎಂದು ವ್ಯಾಖ್ಯಾನಿಸಲಾಗದು’ ಎಂದು ದಿಲ್ಲಿ ಹೈಕೋರ್ಟ್ ಹೇಳಿದೆ.

ಪ್ರತಿಭಟನೆಗಳನ್ನು ದೇಶದ ವಿರುದ್ಧ ನಡೆಸುತ್ತಿರುವ ಸಂಚು ಎಂದು ಗುರುತಿಸಿ ಪ್ರಕರಣ ದಾಖಲಿಸುತ್ತಿರುವುದು ಇದೇ ಮೊದಲಲ್ಲ. ಮೋದಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ, ಪ್ರಧಾನಿಯ ಕಾರ್ಯವೈಖರಿಯನ್ನು ಅಥವಾ ಸರಕಾರದ ಕಾರ್ಯವೈಖರಿಯನ್ನು ಟೀಕಿಸಿದ, ಪ್ರತಿಭಟಿಸಿದ ಜನರನ್ನು ದೇಶದ್ರೋಹಿಗಳು ಎಂದು ಕರೆದು ಸುಲಭದಲ್ಲಿ ಬಾಯಿ ಮುಚ್ಚಿಸುವ ಪ್ರಯತ್ನಗಳು ನಡೆಯುತ್ತಿವೆೆ. ಪೆಟ್ರೋಲ್ ಬೆಲೆಯೇರಿಕೆಯನ್ನು ಪ್ರಶ್ನಿಸಿದರೂ ಅದನ್ನ್ನೂ ದೇಶದ್ರೋಹವೆಂದು ಪರಿಗಣಿಸುವ ರಾಜಕೀಯ ನಾಯಕರು ನಮ್ಮ ನಡುವೆಯಿದ್ದಾರೆ. ಕಳೆದ ಏಳು ವರ್ಷಗಳಲ್ಲಿ ದೇಶದ್ರೋಹದ ವ್ಯಾಖ್ಯಾನ ತಿರುವು ಮುರುವಾಗಿದೆ. ದೇಶದ ಹಿತಾಸಕ್ತಿಯನ್ನು ಬಲಿಕೊಡುತ್ತಾ, ಅಕ್ರಮ ಚಟುವಟಿಕೆಗಳಲ್ಲಿ ಗುರುತಿಸುತ್ತಿರುವವರು ಸ್ವಘೋಷಿತ ದೇಶಭಕ್ತರಾಗಿ ಗುರುತಿಸಲ್ಪಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ದೇಶದ ಹಿತಾಸಕ್ತಿಯನ್ನು ಬಲಿಕೊಡುವ ಸರಕಾರದ ನೀತಿಗಳನ್ನು ಪ್ರತಿಭಟಿಸಿ ದೇಶಕ್ಕಾಗಿ ಧ್ವನಿಯೆತ್ತುತ್ತಿರುವ ಹೋರಾಟಗಾರರು ದೇಶದ್ರೋಹಿಗಳಾಗಿ ಗುರುತಿಸಲ್ಪಡುತ್ತಿದ್ದಾರೆ. ಸರಕಾರ ಮತ್ತು ದೇಶ ಬೇರೆ ಬೇರೆ. ಜನಸಾಮಾನ್ಯರು ಮತ ನೀಡಿ ಆರಿಸಿದ ಸರಕಾರಕ್ಕೆ ಈ ದೇಶವನ್ನು ಯೋಗ್ಯ ದಾರಿಯಲ್ಲಿ ಮುನ್ನಡೆಸುವ ಹೊಣೆಗಾರಿಕೆಗಳು ಇರುತ್ತವೆ. ಆ ಹೊಣೆಗಾರಿಕೆಗಳಿಂದ ಸರಕಾರ ಹಿಂದೆ ಸರಿದಾಗ ಅದನ್ನು ಸರಿದಾರಿಯಲ್ಲಿ ಮುನ್ನಡೆಯಲು ಎಚ್ಚರಿಸಬೇಕಾದವರೂ ಈ ದೇಶದ ಪ್ರಜೆಗಳೇ ಆಗಿದ್ದಾರೆ. ಪ್ರಜೆಗಳೇ ಆರಿಸಿದ ಸರಕಾರವಾಗಿರುವುದರಿಂದ, ಪ್ರಜೆಗಳೇ ಅದರ ಕಣ್ಗಾವಲಾಗಿ ಕೆಲಸ ಮಾಡಬೇಕು. ಈ ದೇಶದ ಪ್ರಜೆಗಳಲ್ಲದವರು ಸರಕಾರದ ವಿರುದ್ಧ ಮಾತನಾಡಿದರೆ, ಅದು ಬೇರೆ ಮಾತು.

ಹೈಕೋರ್ಟ್‌ನ ಆತಂಕಗಳನ್ನು ಗಮನಿಸಿದಾಗ ಒಂದು ಮನವರಿಕೆಯಾಗುತ್ತದೆ.ಈ ದೇಶದಲ್ಲಿ ಒಂದೋ ಜನರು ಆರಿಸಿದ ಸರಕಾರ ಅಸ್ತಿತ್ವದಲ್ಲಿ ಇಲ್ಲ ಅಥವಾ ಸರಕಾರಕ್ಕೆ ಸಂವಿಧಾನದ ಕುರಿತಂತೆ ಅರಿವಿಲ್ಲ. ಬ್ರಿಟಿಷರ ಕಾಲದಲ್ಲಿ ಸರಕಾರವನ್ನು ವಿರೋಧಿಸುವುದು ದೇಶದ್ರೋಹವಾಗಿತ್ತು. ಇರುವಷ್ಟು ಕಾಲ ದೇಶವನ್ನು ದೋಚಿದ ಬ್ರಿಟಿಷರಿಗೆ, ತಮ್ಮ ಆಳ್ವಿಕೆಯನ್ನು, ತಮ್ಮ ನೀತಿಗಳನ್ನು ಯಾರೇ ಪ್ರಶ್ನಿಸುವುದು ತಪ್ಪಾಗಿ ಕಾಣುತ್ತಿತ್ತು. ಬ್ರಿಟಿಷ್ ಸರಕಾರವನ್ನು ಪ್ರಜೆಗಳು ಸ್ವಯಂ ಆರಿಸಿರಲಿಲ್ಲವಾದುದರಿಂದ ಮತ್ತು ಆ ಸರಕಾರ ಬ್ರಿಟನ್ ರಾಣಿಗೆ ಬದ್ಧವಾಗಿರುವುದರಿಂದ ತಮ್ಮನ್ನು ಪ್ರಶ್ನಿಸುವುದು ಬ್ರಿಟಿಷರಿಗೆ ರಾಜದ್ರೋಹವಾಗಿ ಕಾಣುವುದು ಸಹಜವೇ ಆಗಿತ್ತು. ಆದುದರಿಂದ ಸ್ವಾತಂತ್ರ ಹೋರಾಟದ ಮೂಲಕ ನಮ್ಮನ್ನು ನಾವೇ ಆಳುವ ಹಕ್ಕುಗಳನ್ನು ನಮ್ಮದಾಗಿಸಿಕೊಂಡೆವು.

ವಿಪರ್ಯಾಸವೆಂದರೆ, ಇಂದಿನ ಸರಕಾರ ಬ್ರಿಟಿಷರಿಗಿಂತ ಕ್ರೂರವಾಗಿ ತನ್ನದೇ ಜನಗಳ ವಿರುದ್ಧ ರಾಜ್ಯದ್ರೋಹದ ಕಾನೂನನ್ನು ಬಳಸುತ್ತಿದೆ. ಅತ್ಯಾಚಾರಗಳ ವಿರುದ್ಧ ಪ್ರತಿಭಟಿಸಿದರೆ ಪ್ರತಿಭಟಿಸಿದವರ ವಿರುದ್ಧ ಮೊಕದ್ದಮೆ ದಾಖಲಾಗುತ್ತದೆಯೇ ಹೊರತು, ಅತ್ಯಾಚಾರ ಕೃತ್ಯ ಎಸಗಿದವರ ವಿರುದ್ಧ ಅಲ್ಲ. ಹಾಥರಸ್‌ನಲ್ಲಿ ಅತ್ಯಾಚಾರ ಆರೋಪಿಗಳು ಮುಕ್ತವಾಗಿ ಓಡಾಡುತ್ತಿದ್ದಾರೆ. ಆದರೆ ಅದನ್ನು ವರದಿ ಮಾಡಲು ತೆರಳಿದ ಪತ್ರಕರ್ತ ಇನ್ನೂ ಜೈಲಲ್ಲಿ ಕೊಳೆಯುತ್ತಿದ್ದಾರೆ. ಸರಕಾರ ಪ್ರಜೆಗಳಿಗೆ ಪೂರಕವಾದ ಆರ್ಥಿಕ ನೀತಿಗಳನ್ನು ರೂಪಿಸಬೇಕೇ ಹೊರತು, ತನ್ನ ಹಿತಾಸಕ್ತಿಗೆ ಪೂರಕವಾದ ನೀತಿಗಳನ್ನು ರೂಪಿಸಿ ಅದನ್ನು ಪ್ರಜೆಗಳು ಒಪ್ಪಿಕೊಳ್ಳಬೇಕು ಎಂದು ಒತ್ತಡ ಹೇರುವುದು ಸರ್ವಾಧಿಕಾರವಾಗುತ್ತದೆ.

ಅಂತಹ ಸಂದರ್ಭದಲ್ಲಿ ಪ್ರಜೆಗಳು ಬೀದಿಗಿಳಿಯುವುದು ಸಹಜ. ಪ್ರಜೆಗಳ ಆಗ್ರಹವನ್ನು ಒಪ್ಪಿ, ಅದಕ್ಕೆ ತಲೆಬಾಗುವುದು ಸರಕಾರದ ಕರ್ತವ್ಯ. ಜನರಿಂದ ಆಯ್ಕೆಯಾದ ಸರಕಾರಕ್ಕೆ ಜನರ ಆಗ್ರಹಗಳಿಗೆ ತಲೆಬಾಗುವುದು ಅನಿವಾರ್ಯವೂ ಕೂಡ. ಯಾಕೆಂದರೆ, ಒಂದು ಆ ಸರಕಾರ ಮತ್ತೆ ಜನರ ಬಳಿಗೆ ಹೋಗುವುದಕ್ಕಿದೆ. ಯಾವಾಗ, ತಾನು ಅಧಿಕಾರಕ್ಕೆ ಬಂದಿರುವುದು ಜನರಿಂದ ಅಲ್ಲ ಎನ್ನುವ ಭಾವನೆ ಮೂಡುತ್ತದೆಯೋ ಆಗ ಆ ಸರಕಾರ ಸರ್ವಾಧಿಕಾರಿಯಾಗುತ್ತದೆ. ಜನವಿರೋಧಿಯಾಗುತ್ತದೆ. ಇತ್ತೀಚಿನ ಮೋದಿ ಸರಕಾರದ ವರ್ತನೆ ಯೂ ಇದೇ ರೀತಿ ಇದೆ. ಇಡೀ ದೇಶದ ರೈತರು ಒಂದಾಗಿ ಕಳೆದ 200 ದಿನಗಳಿಂದ ಬೀದಿಯಲ್ಲಿ ನಿಂತು ಪ್ರತಿಭಟಿಸುತ್ತಿದ್ದರೂ, ರೈತರ ಹಿತಾಸಕ್ತಿ ಸರಕಾರಕ್ಕೆ ಮುಖ್ಯವಾಗಿಲ್ಲ. ಅದು ಅಂಬಾನಿ ಮತ್ತು ಅದಾನಿಗಳಂತಹ ಕಾರ್ಪೊರೇಟ್ ಶಕ್ತಿಗಳನ್ನು ನಂಬಿದೆ. ಆದುದರಿಂದ ಅದು ಅವರ ಪರವಾಗಿ ಕೆಲಸ ಮಾಡುತ್ತಿದೆ.

ಒಂದೆಡೆ ಜನ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಾ ಮಗದೊಂದೆಡೆ ಜನರನ್ನು ಭಾವನಾತ್ಮಕವಾಗಿ ಒಡೆಯುವುದಕ್ಕೆ ಮುಂದಾಗುತ್ತಿದೆ. ಸಿಎಎ ಕಾಯ್ದೆ ಜಾರಿ ಗೊಳಿಸಲು ಮುಂದಾಗಿರುವುದು ಈ ರಾಜಕೀಯದ ಭಾಗವಾಗಿದೆ. ಜನವಿರೋಧಿ ನೀತಿಗಳನ್ನು ಜಾರಿಗೆ ತಂದರೂ, ಜನರ ನಡುವೆ ದ್ವೇಷವನ್ನು ಬಿತ್ತಿ, ಧರ್ಮಾಧಾರಿತವಾಗಿ ಒಡೆದು ಮತ್ತೆ ಅಧಿಕಾರಕ್ಕೆ ಬರಬಹುದು ಎನ್ನುವ ಧೈರ್ಯ ಸರಕಾರಕ್ಕಿದೆ. ಸರಕಾರದ ಈ ದ್ವೇಷ ರಾಜಕಾರಣವನ್ನು ವಿರೋಧಿಸಿದವರು ಅನ್ಯಾಯವಾಗಿ ಜೈಲು ಪಾಲಾಗಿದ್ದಾರೆ. ಈ ನಿಟ್ಟಿನಲ್ಲಿ ಹೈಕೋರ್ಟ್ ತೀರ್ಪು ಹೋರಾಟಗಾರರಿಗೆ ಒಂದು ಬೆಳಕಿನ ಕಿರಣವಾಗಿದೆ. ಭವಿಷ್ಯದಲ್ಲಿ ಈ ದೇಶದ ಪ್ರಜಾಸತ್ತೆ ಉಳಿಯಬೇಕಾದರೆ ನಮ್ಮ ನ್ಯಾಯಾಲಯಗಳು ಸ್ವಂತಿಕೆಯ ಬಲದಿಂದ ಕಾರ್ಯಾಚರಿಸಬೇಕು. ಇಂತಹ ತೀರ್ಪುಗಳು ಇನ್ನಷ್ಟು ಹೊರ ಬಿದ್ದರೆ, ಸರಕಾರ ತನ್ನ ಸರ್ವಾಧಿಕಾರಿ ಮನಸ್ಥಿತಿಯ ಕುರಿತಂತೆ ಆತ್ಮವಿಮರ್ಶೆಗೆ ತೊಡಗಬಹುದೇನೋ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)