ಬೆಂಗಳೂರು: ಮೂತ್ರ ವಿಸರ್ಜನೆ ವೇಳೆ ವಿದ್ಯುತ್ ತಂತಿ ಸ್ಪರ್ಶ; ಇಬ್ಬರು ಕಾರ್ಮಿಕರು ಮೃತ್ಯು
ಬೆಂಗಳೂರು, ಜೂ.22: ಮೂತ್ರ ವಿಸರ್ಜನೆ ವೇಳೆ ವಿದ್ಯುತ್ ಸ್ಪರ್ಶಿಸಿ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ದುರ್ಘಟನೆ ಇಲ್ಲಿನ ಕಲಾಸಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೂಲತಃ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕರಿಯಪ್ಪ(22) ಹಾಗೂ ನಾಗರಾಜು(19) ಮೃತ ಕಾರ್ಮಿಕರು ಎಂದು ಪೊಲೀಸರು ಗುರುತಿಸಿದ್ದಾರೆ.
ಇಬ್ಬರೂ ಖಾಸಗಿ ಕಂಪೆನಿಯಲ್ಲಿ ಕಳೆದೊಂದು ವರ್ಷದಿಂದ ರಾಜಕಾಲುವೆ ಸ್ವಚ್ಛಗೊಳಿಸುವ ಕೆಲಸ ಮಾಡಿಕೊಂಡಿದ್ದರು. ಸೋಮವಾರ ತಡರಾತ್ರಿ ಇಲ್ಲಿನ ಮಲ್ಲಸಂದ್ರ ಬಳಿಯ ರಾಜಕಾಲುವೆ ಕೆಲಸ ಮುಗಿಸಿ ಎಚ್ಎಸ್ಆರ್ ಲೇಔಟ್ನಲ್ಲಿರುವ ತಮ್ಮ ಮನೆಗೆ ಹಿಂದಿರುಗುತ್ತಿದ್ದರು.
ಈ ವೇಳೆ ಲಾಲ್ಬಾಗ್ ರಸ್ತೆಯ ನಾಲೆಯ ರಸ್ತೆ ಬಳಿ ಕೆಲಸ ಮಾಡುತ್ತಿದ್ದ ಸಂಗಡಿಗರನ್ನು ಕರೆದೊಯ್ಯಲು ಬಂದಿದ್ದ ಕರಿಯಪ್ಪ ಹಾಗೂ ನಾಗರಾಜು ಮೂತ್ರ ವಿಸರ್ಜನೆಗೆ ಹೋಗಿದ್ದಾರೆ. ಈ ವೇಳೆ ತುಂಡಾಗಿದ್ದ ವಿದ್ಯುತ್ ತಂತಿ ತಗಲಿದ ಪರಿಣಾಮ ಸ್ಥಳದಲ್ಲಿಯೇ ಇಬ್ಬರೂ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಬಳಿಕ ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸಿ, ಮರಣೋತ್ತರ ಪರೀಕ್ಷೆ ನಂತರ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಈ ಸಂಬಂಧ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 304(ಎ) ಅಡಿಯಲ್ಲಿ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.