varthabharthi


ರಾಷ್ಟ್ರೀಯ

ತ್ರಿಪುರಾ: ಜಾನುವಾರು ಕಳ್ಳರೆಂಬ ಶಂಕೆಯಲ್ಲಿ ಹತ್ಯೆ ಪ್ರಕರಣದ ಆರೋಪಿಗಳ ಮಾಹಿತಿ ಲಭ್ಯ; ಪೊಲೀಸರ ಹೇಳಿಕೆ‌

ವಾರ್ತಾ ಭಾರತಿ : 22 Jun, 2021

ಅಗರ್ತಲಾ, ಜೂ.22: ತ್ರಿಪುರಾದ ಖೊವೈ ಜಿಲ್ಲೆಯಲ್ಲಿ ಜಾನುವಾರು ಕಳ್ಳರೆಂಬ ಶಂಕೆಯಲ್ಲಿ 3 ಮಂದಿಯನ್ನು ಥಳಿಸಿ ಹತ್ಯೆಗೈದ ಪ್ರಕರಣದಲ್ಲಿ ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಲಭಿಸಿದ್ದು ಶೀಘ್ರ ಬಂಧಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಆರೋಪಿಗಳು ಅಪರಾಧ ಚಾಳಿಯವರಾಗಿದ್ದು ಕೆಲವು ತಿಂಗಳ ಹಿಂದೆ ಪೊಲೀಸರ ಕಾರ್ಯಾಚರಣೆ ಸಂದರ್ಭ ಪೊಲೀಸರ ಮೇಲೆಯೇ ದಾಳಿ ನಡೆಸಿದ್ದರು ಎಂದು ತ್ರಿಪುರಾ ಐಜಿ(ಕಾನೂನು ಮತ್ತು ಸುವ್ಯವಸ್ಥೆ) ಅರೀಂದಮ್ ನಾಥ್ ಹೇಳಿದ್ದಾರೆ. ದನಗಳನ್ನು ಕಳವು ಮಾಡಿದ್ದರ ಬಗ್ಗೆ ತನಿಖೆ ನಡೆಸಲಾಗುತ್ತದೆ. ಆದರೆ ಯಾವುದೇ ಕಾರಣಕ್ಕೆ ಜನ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಸುಮಾರು 30ರಿಂದ 40ರಷ್ಟಿದ್ದ ಗ್ರಾಮಸ್ಥರ ತಂಡ ಹಲ್ಲೆಯಲ್ಲಿ ಪಾಲ್ಗೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದವರು ಹೇಳಿದ್ದಾರೆ. 

ದನಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಒಂದು ಸಮುದಾಯದ ವಿರುದ್ಧ ರಹಸ್ಯ ಅಭಿಯಾನ ನಡೆಯುತ್ತಿದೆ. ಆದರೆ ಸರಕಾರ ಜನಜಾಗೃತಿ ಮೂಡಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿರುವ ಮಾನವ ಹಕ್ಕು ಕಾರ್ಯಕರ್ತ ರಾಯ್ ಬರ್ಮನ್, ಹತ್ಯೆ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ಹಾಗೂ ಸಂತ್ರಸ್ತ ಕುಟುಂಬದವರಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ. 

ಪ್ರಕರಣದ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ವಿರೋಧ ಪಕ್ಷದ ಮುಖಂಡ ಮಾಣಿಕ್ ಸರ್ಕಾರ್ ಆಗ್ರಹಿಸಿದ್ದಾರೆ. ಒಂದು ವೇಳೆ ಆ ವ್ಯಕ್ತಿಗಳು ಅಪರಾಧ ಎಸಗಿದ್ದರೂ ಜನತೆ ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಬಿಜೆಪಿ ವಕ್ತಾರ ಸುಬ್ರತಾ ಚಕ್ರವರ್ತಿ ಪ್ರತಿಕ್ರಿಯಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)