ಡೆಲ್ಟಾ ಪ್ಲಸ್ ಕೊರೋನ ವೈರಸ್ ಪ್ರಬೇಧ: ದೇಶದಲ್ಲಿ ಇದುವರೆಗೆ 22 ಪ್ರಕರಣಗಳು ಪತ್ತೆ
ಹೊಸದಿಲ್ಲಿ, ಜೂ. 22: ದೇಶದಲ್ಲಿ ಮೊದಲ ಬಾರಿಗೆ ಪತ್ತೆಯಾದ ಡೆಲ್ಟಾ ಕೊರೋನ ವೈರಸ್ ಪ್ರಬೇಧದ ರೂಪಾಂತರಿತ ಪ್ರಬೇಧ ಡೆಲ್ಟಾ ಪ್ಲಸ್ ಕೊರೋನ ವೈರಸ್ನ 22 ಪ್ರಕರಣಗಳು ಮಹಾರಾಷ್ಟ್ರ, ಕೇರಳ ಹಾಗೂ ಮಧ್ಯಪ್ರದೇಶದಲ್ಲಿ ಪತ್ತೆಯಾಗಿವೆ. ಆದರೆ, ಕೇಂದ್ರ ಸರಕಾರ ಮಂಗಳವಾರ ಸಂಜೆ ಈ ರಾಜ್ಯಗಳಿಗೆ ನೀಡಿದ ಮುನ್ನೆಚ್ಚರಿಕೆಯಲ್ಲಿ ಇದು ಕಳವಳಪಡುವ ಪ್ರಬೇಧ ಅಲ್ಲ ಎಂದು ತಿಳಿಸಿದೆ. ಕೊರೋನ ಸೋಂಕಿನ ಎರಡನೇ ಅಲೆಯಿಂದ ತತ್ತರಿಸಿರುವ ಭಾರತದಲ್ಲಿ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿರುವ ಈ ಸಂದರ್ಭದಲ್ಲಿ ಡೆಲ್ಟಾ ಪ್ಲಸ್ ಕೊರೋನ ವೈರಸ್ ಪ್ರಬೇಧ ಆತಂಕ ಮೂಡಿಸಿದೆ. ಮಹಾರಾಷ್ಟ್ರದ ರತ್ನಗಿರಿ ಹಾಗೂ ಜಲಗಾಂವ್; ಕೇರಳದ ಪಾಲಕ್ಕಾಡ್, ಪತ್ತನಂತಿಟ್ಟ ಹಾಗೂ ಮಧ್ಯಪ್ರದೇಶದ ಭೋಪಾಲ್, ಶಿವಪುರಿಯಲ್ಲಿ ಡೆಲ್ಟಾ ಪ್ಲಸ್ ಕೊರೋನ ವೈರಸ್ ಪ್ರಬೇಧ ಪತ್ತೆಯಾಗಿದೆ ಎಂದು ಕೇಂದ್ರ ಸರಕಾರದ ಸಲಹೆ ಹೇಳಿದೆ.
ಐಎನ್ಎಸ್ಎಸಿಒಜಿ (ಇಂಡಿಯನ್ ಸಾರ್ಸ್-ಸಿಒವಿ-2 ಜೆನೋಮಿಕ್ ಕನ್ಟೋರ್ಟಿಯಾ) ಈ ಡೆಲ್ಟಾ ಪ್ಲಸ್ ಕೊರೋನ ವೈರಸ್ನ ಪ್ರಬೇಧವನ್ನು ಗುರುತಿಸಿರುವುದರಿಂದ ಜನಸಂದಣಿ ನಿಯಂತ್ರಣ, ವ್ಯಾಪಕ ಪರೀಕ್ಷೆ, ಪತ್ತೆ ಹಾಗೂ ಆದ್ಯತೆಯ ಆಧಾರದಲ್ಲಿ ಲಸಿಕೆ ನೀಡುವುದು ಸೇರಿದಂತೆ ಈ ಜಿಲ್ಲೆಗಳು ಹಾಗೂ ಕ್ಲಸ್ಟರ್ ಗಳಲ್ಲಿ ಕೂಡಲೇ ಕಂಟೈನ್ಮೆಂಟ್ ಕ್ರಮಗಳನ್ನು ತೆಗೆದುಕೊಳ್ಳುವಂತೆ ಈ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಕೇಂದ್ರ ಸರಕಾರ ಸಲಹೆ ನೀಡಿದೆ.
‘‘ಸಾರ್ವಜನಿಕ ಆರೋಗ್ಯದ ಕಾಳಜಿಯ ಬಗ್ಗೆ ರಾಜ್ಯ ಸರಕಾರಗಳಿಗೆ ಕೇಂದ್ರ ಸರಕಾರ ಈ ಸಲಹೆಗಳನ್ನು ನೀಡಿದೆ. ಈ ಹಿಂದೆ ಅನುಷ್ಠಾನಿಸಿದ ಕ್ರಮಗಳನ್ನೇ ಈಗ ಹೆಚ್ಚು ಕೇಂದ್ರೀಕೃತ ಹಾಗೂ ಪರಿಣಾಮಕಾರಿಯಾಗಿ ಅನುಸರಿಸಬೇಕು’’ ಎಂದು ಲಸಿಕೀಕರಣದ ರಾಷ್ಟ್ರೀಯ ತಜ್ಞರ ಗುಂಪಿನ ಮುಖ್ಯಸ್ಥ. ವಿ.ಕೆ. ಪೌಲ್ ಹೇಳಿದ್ದಾರೆ.
ಆದರೆ ತಜ್ಞರು, ಡೆಲ್ಟಾ ಕೊರೋನ ವೈರಸ್ ನಿಂದ ರೂಪಾಂತರಗೊಂಡಿರುವ ಡೆಲ್ಟಾ ಪ್ಲಸ್ ಕೊರೋನ ವೈರಸ್ ಪ್ರಬೇಧ ಅಥವಾ ಎ.ವೈ.01 ಪ್ರಬೇಧ ದೇಶದಲ್ಲಿ ಮೂರನೇ ಅಲೆಗೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.