varthabharthi


ನಿಮ್ಮ ಅಂಕಣ

ಪ್ರತಿಕ್ರಿಯೆ

ವಿಜಯ್ ಅಂದಿಗೂ ಇಂದಿಗೂ ನಮ್ಮವರೇ...

ವಾರ್ತಾ ಭಾರತಿ : 23 Jun, 2021
ಗಂಗಾ ನಾಯಕ್, ಪಂಚನಹಳ್ಳಿ

ನಟ ವಿಜಯ್ ಕುರಿತಂತೆ ಜೂ.20ರ ‘ವಾರ್ತಾಭಾರತಿ’ಯಲ್ಲಿ ಪ್ರಕಟವಾದ ಚಂದ್ರೇಗೌಡರ ಲೇಖನದ ಮೊದಲ ಓದಿಗೆ ನನ್ನ ಪ್ರತಿಕ್ರಿಯೆ ‘ಧಿಕ್ಕಾರ’ ಎನ್ನುವುದಾಗಿದೆ. ನಂತರ ಕೆಲ ವಿಷಯಗಳು ಗೊತ್ತಿದ್ದರೂ ಖಾತರಿಪಡಿಸಿಕೊಂಡು ಉತ್ತರಿಸಬೇಕೆಂದು ಪಂಚನಹಳ್ಳಿಯಲ್ಲಿರುವ ವಿಜಯ್‌ನ ಇನ್ನೂ ಅನೇಕ ಒಡನಾಡಿಗಳ ಜೊತೆ ಮಾತಾಡಿ ನನ್ನ ಅನಿಸಿಕೆಯನ್ನೂ ಸೇರಿಸಿ ಬರೆಯುತ್ತಿದ್ದೇನೆ. ಮೊದಲಿಗೆ, ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ಇಂದು ಸುಮಾರು 5ರಿಂದ 6 ಸಾವಿರ ಜನಸಂಖ್ಯೆ ಇದ್ದು, ಅನೇಕ ಜಾತಿಯವರು ಅನ್ಯೋನ್ಯವಾಗಿ ಬಹಳ ಒಗ್ಗಟ್ಟಿನಿಂದ ಅಣ್ಣ ತಮ್ಮಂದಿರಂತೆ ಬದುಕುತ್ತಿದ್ದಾರೆ. ಸದರಿ ಊರಿನಲ್ಲಿ ಲಿಂಗಾಯತ, ಬ್ರಾಹ್ಮಣ, ಲಂಬಾಣಿ, ಕುರುಬ, ಗಾಣಿಗ, ನಾಯಕ ಮತ್ತು ಪರಿಶಿಷ್ಟ ಜಾತಿಗೆ ಸೇರಿದ ಜನರಿದ್ದಾರೆ. ಗೌರಮ್ಮ ಮತ್ತು ಬಸವರಾಜಯ್ಯನವರು ಅಂತರ್ಜಾತಿ ವಿವಾಹವಾಗಿದ್ದವರು ಎನ್ನುವ ಹಿನ್ನಲೆ ಇಟ್ಟುಕೊಂಡು ತಮ್ಮ ಕಪೋಲ ಕಲ್ಪಿತವಾದ, ವರ್ಣರಂಜಿತ ವಾದವನ್ನು ತಳಕು ಹಾಕಿ, ಸತ್ತು ಹೋದವರ ಹಿನ್ನೆಲೆಯನ್ನು ಕೆದಕಿ, ಜಾತಿ ದ್ವೇಷ ಹುಟ್ಟು ಹಾಕುವ ಚಂದ್ರೇಗೌಡರ ಲೇಖನಕ್ಕೆ ಮಾಹಿತಿ ಕೊರತೆ ಇದೆ ಮತ್ತು ಈ ಲೇಖನವನ್ನು ನಾನು ಖಂಡಿಸುತ್ತೇನೆ. ವಿಜಯ್ ಆರು ವರ್ಷದವನಾಗಿದ್ದಾಗ ಅಜ್ಜಂಪುರದಿಂದ ಶಿವಮೊಗ್ಗಕ್ಕೆ ಲೇಖಕರ ವರ್ಗಾವಣೆ ಆಯಿತು ಅಂತ ಹೇಳಿದ್ದು ಲೇಖಕರ ಮೊದಲ ಸುಳ್ಳು! ಬದಲಾಗಿ ಗೌರಮ್ಮನವರು ಪಂಚನಹಳ್ಳಿಗೆ ಬರುವ ಕೆಲವು ತಿಂಗಳ ಮುಂಚೆಯಷ್ಟೇ ವಿಜಯ್‌ಗೆ ಜನ್ಮ ನೀಡಿದ್ದು.

ಗೌರಮ್ಮನವರು ಜಗಜ್ಯೋತಿ ಬಸವೇಶ್ವರ ನಾಟಕದಲ್ಲಿ ಹಾಡುತ್ತಿದ್ದರು, ಪಾತ್ರ ಮಾಡುತ್ತಿದ್ದರು ಮತ್ತು ಕೆಲ ಕಾಲಗಳ ನಂತರ ಪ್ರದರ್ಶನ ನಿಂತ ಮೇಲೆ ಗೌರಮ್ಮ ನಿರುದ್ಯೋಗಿಯಾದರು ಎಂಬುದು ಲೇಖಕರ ಎರಡನೇ ಸುಳ್ಳು! ಬದಲಾಗಿ ಗೌರಮ್ಮನವರು ಸೂಲಗಿತ್ತಿಯಾಗಿ ಕೆಲಸ ಮಾಡುತ್ತಿದ್ದರು ಎಂಬುದು ಸತ್ಯ. ಬಸವರಾಜಯ್ಯ ಮತ್ತು ಗೌರಮ್ಮರ ಪರಿಚಯವಾಗಿದ್ದು ಪಂಚನಹಳ್ಳಿಯಲ್ಲಿ ಮತ್ತು ಮದುವೆ ಆಗಿದ್ದು ಕೂಡ ಪಂಚನಹಳ್ಳಿಯಲ್ಲಿ ಎಂಬುದು ಮೂರನೇ ಸುಳ್ಳು! ಬದಲಾಗಿ, ರೆವೆನ್ಯೂ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಬಸವರಾಜಯ್ಯನವರು ತಬಲ ನುಡಿಸುವ ಕಲಾವಿದರಾಗಿದ್ದರು ಮತ್ತು ಗೌರಮ್ಮನವರೂ ಕೂಡ ಒಳ್ಳೆಯ ಹಾಡುಗಾರ್ತಿಯಾದ್ದರಿಂದ ಇಬ್ಬರಲ್ಲೂ ಪ್ರೇಮಾಂಕುರಿಸಿ ಮದುವೆಯಾದದ್ದು ಅಜ್ಜಂಪುರದಲ್ಲಿಯೇ ಮತ್ತು ಹಲವು ವರ್ಷಗಳು ಅಜ್ಜಂಪುರದಲ್ಲಿಯೇ ನೆಲೆಸಿ ಹಿರಿಯ ಮಗ ವಿರೂಪಾಕ್ಷನಿಗೆ ಜನ್ಮ ನೀಡುತ್ತಾರೆ. ಆನಂತರ ಇಬ್ಬರಿಗೂ ಪಂಚನಹಳ್ಳಿಗೆ ವರ್ಗಾವಣೆ ಆಗುತ್ತದೆ.

ಪಂಚನಹಳ್ಳಿ ಪಂಚಮಶಾಲಿಗಳು ಇನ್ನಿಲ್ಲದಂತೆ ಈ ದಂಪತಿಗೆ ಕಾಟ ಕೊಟ್ಟರು ಎಂಬುದು ನಾಲ್ಕನೇ ಸುಳ್ಳು. ಬದಲಾಗಿ, ಪಂಚನಹಳ್ಳಿಗೆ ಬಂದ ನಂತರ ಪಂಚನಹಳ್ಳಿಯೂ ಸೇರಿದಂತೆ ಅಕ್ಕಪಕ್ಕದ ಹಳ್ಳಿಗಳಲ್ಲಿ ಜಾತಿ ಭೇದವಿಲ್ಲದೆ ಯಾರದೇ ಹೆರಿಗೆಯಾದರೂ ಗೌರಮ್ಮನವರೇ ಮಾಡಿಸುತ್ತಿದ್ದರು, ಈಗ ವಿಜಯ್‌ರನ್ನು ಸಮಾಧಿ ಮಾಡಿದ ತೋಟದ ಮಾಲಕರಾದ ಓಂಕಾರಮೂರ್ತಿಗಳ ಹಿರಿಮಗಳ ಹೆರಿಗೆ ಇವರೇ ಮಾಡಿಸಿದ್ದು ಮತ್ತು ಸ್ವತಃ ಹಾಡುಗಾರ್ತಿಯಾದ್ದರಿಂದ ಎಲ್ಲಾ ಜಾತಿಯ ಮನೆಯಲ್ಲಿ ಯಾವುದೇ ಧಾರ್ಮಿಕ ಕಾರ್ಯಗಳಾದರೂ ಅಲ್ಲಿ ಗೌರಮ್ಮನವರ ಹಾಡಿನಿಂದಲೇ ಆರಂಭವಾಗುತ್ತಿತ್ತು. ದಲಿತರನ್ನು ನಡೆಸಿಕೊಳ್ಳುತ್ತಿರುವ ಕ್ರೌರ್ಯಕ್ಕೆ ಮಿತಿಯಿರಲಿಲ್ಲ, ಪಂಚಮಶಾಲಿ ಲಿಂಗಾಯತರು ಬಸವಣ್ಣ ಫೋಟೊ ಇಟ್ಟುಕೊಂಡರೂ ಅಸ್ಪಶ್ಯತೆ ಆಚರಿಸುತ್ತಿದ್ದುದರಿಂದ ಯಾರ ಮನೆಗಳಿಗೂ ಹೋಗಲು ಬರಲು ಸಾಧ್ಯವಿರಲಿಲ್ಲ. ಹಾಗಾಗಿ ಪಂಚನಹಳ್ಳಿ ಬಿಟ್ಟರು ಎನ್ನುವುದು ಕೂಡ ಲೇಖಕರ ಇನ್ನೊಂದು ಸುಳ್ಳು. ಬದಲಾಗಿ, ಪಂಚನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವಸತಿ ನಿಲಯಗಳಲ್ಲಿಯೇ ಈ ಕುಟುಂಬ ವಾಸವಾಗಿತ್ತು ಮತ್ತು ಪಂಚನಹಳ್ಳಿ ಪಂಚಾಯತ್ ವಸತಿ ನಿಲಯ ಕೂಡ ಅಲ್ಲಿಯೇ ಇದ್ದಿದ್ದರಿಂದ ಬೇರೆ ಬೇರೆ ಜಾತಿಯ ಬೇರೆ ಇಲಾಖೆಯ ಅಧಿಕಾರಿಗಳ ಮನೆಗಳಿಗೆ ಹೋಗುವುದು ಬರುವುದರ ಜೊತೆಗೆ ಊರಿನಲ್ಲೂ ಸಹ ಎಲ್ಲರ ಮನೆಗಳಿಗೆ ಬರುತ್ತಿದ್ದರು, ಜಾತಿ ಭೇದ ಇರಲಿಲ್ಲ ಮತ್ತು ಸರಕಾರದ ಕೆಲಸವಾದ್ದರಿಂದ ವರ್ಗಾವಣೆ ಅನಿವಾರ್ಯ. ಹಾಗಾಗಿ ಪಂಚನಹಳ್ಳಿಯಿಂದ ಸುಮಾರು 5 ಕಿ.ಮೀ. ದೂರವಿರುವ ಅಣೆಗೆರೆ ಗ್ರಾಮಕ್ಕೆ ವರ್ಗಾವಣೆ ಆಗಿರುತ್ತದೆ. ಅಲ್ಲಿ ಸುಮಾರು ನಾಲ್ಕೈದು ವರ್ಷ ಕೆಲಸ ಮಾಡಿ ನಂತರ ಸಕ್ಕರಾಯ ಪಟ್ಟಣ ಮತ್ತು ಕಡೂರು ನಡುವೆ ಬರುವ ಎಮ್ಮೆದೊಡ್ಡಿಗೆ ವರ್ಗಾವಣೆ ಆಗುತ್ತದೆ. 1971/72ರಲ್ಲಿಯೇ ಪಂಚನಹಳ್ಳಿಯಲ್ಲಿ ಅಂತರ್ಜಾತಿ ವಿವಾಹ ಆಗಿದ್ದು, ಈಗಲೂ ಅನೇಕ ಅಂತರ್ಜಾತಿ ವಿವಾಹಗಳು ನಡೆಯುತ್ತಿರುವುದಕ್ಕೆ ಸಾಕ್ಷಿ ಇದೆ. ಅದರಲ್ಲೂ ಲಿಂಗಾಯತ ಮತ್ತು ಇತರ ಸಮುದಾಯಗಳ ನಡುವೆ ನಡೆದ ಮದುವೆಗಳೇ ಜಾಸ್ತಿ. ಹೀಗೆ ಸುಳ್ಳುಗಳ ಸರಮಾಲೆಯನ್ನೇ ಕಟ್ಟಿ ಈಗಾಗಲೇ ನೋವಿನಲ್ಲಿರುವ ವಿಜಯ್ ಕುಟುಂಬಕ್ಕೆ ಮತ್ತು ಅವರ ಆತ್ಮೀಯ ಬಳಗಕ್ಕೆ ಲೇಖಕರು ಇನ್ನಷ್ಟು ಘಾಸಿ ಮಾಡಿದ್ದಾರೆ.

ವಿಜಯ್ ಯಾವತ್ತೂ ಜಾತಿ ಮತ್ತು ಅಸ್ಪಶ್ಯತೆಯ ಬಗ್ಗೆ ಮಾತಾಡಿದವನಲ್ಲ. ಬದಲಾಗಿ ವೃತ್ತಿ ಬದುಕಿನಲ್ಲಿ ಆಗಿರುವ ಕೆಲವು ಕಹಿ ಘಟನೆಗಳನ್ನು ಹೇಳುತ್ತಾ, ‘‘ಅನುಮಾನ, ಅವಮಾನ ಬಳಿಕ ಬಹುಮಾನ’’ ಎನ್ನುವ ಹೇಳಿಕೆ ಸ್ವತಃ ವಿಜಯ್ ಕೊಟ್ಟಿದ್ದಾರೆ. ಲೇಖನದಲ್ಲಿ ಹೋರಾಟಗಾರ ಸುಬ್ರಹ್ಮಣ್ಯ ಶೆಟ್ಟರು ಮತ್ತು ಅವರ ಹೆಂಡತಿ ರುಕ್ಮಿಣಿ ಅಮ್ಮನವರನ್ನು ತಂದಿರುವುದು ಕಪೋಲ ಕಲ್ಪಿತ ವಾದಕ್ಕೆ ನೈಜತೆಯ ಟಚ್ ಕೊಡಲು ಎಂದು ನಾನು ಭಾವಿಸಿದ್ದೇನೆ ಮತ್ತು ದಲಿತರು ಹಾಗೂ ಪಂಚಮಶಾಲಿ ಲಿಂಗಾಯತರಲ್ಲಿ ಒಡಕು ಮೂಡಿಸುವ ಪ್ರಯತ್ನ ಎಂಬುದು ಖಾತರಿ. ಲೇಖಕರು ಸ್ವಜಾತಿವಾದಿ ಎನ್ನುವುದಕ್ಕೆ ತಮ್ಮದೇ ಜಾತಿಯವರಾದ ದಿ. ಎಚ್. ಎಲ್. ನಾಗೇಗೌಡರನ್ನೂ ಕೂಡ ಬಳಸಿದ್ದಾರೆ. ಇದು ಕೂಡ ಎಚ್. ಎಲ್. ನಾಗೇಗೌಡರಿಗೆ ಮಾಡಿದ ದ್ರೋಹ. ಬದುಕಿದ್ದಾಗ ಒಂದಕ್ಷರ ಬರೆಯದ ಲೇಖಕರು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಜಯ್‌ಗೆ ಮತ್ತು ಅವರ ಕುಟುಂಬಕ್ಕೆ ಅಗೌರವ ತರುವಂತಹ ಲೇಖನದಿಂದ ಸಾಧಿಸಿದ್ದಾದರೂ ಎನೂ? ಸತ್ತು ಹೋದವರ ಹಿನ್ನೆಲೆ ಕೆದಕಿ ಬದುಕಿರುವವರನ್ನೂ ಕೊಲ್ಲುವ ಪ್ರಯತ್ನ ಲೇಖಕರದು.


‘‘ವಿಜಯ್ ಇವತ್ತು ಪಂಚನಹಳ್ಳಿಯವನಲ್ಲ, ಬದಲಾಗಿ ಅವನು ಹುಟ್ಟಿದ ಕೆಲ ತಿಂಗಳ ನಂತರದಿಂದಲೇ ಪಂಚನಹಳ್ಳಿಯ ವನು, ನಾವು ಪ್ರೈಮರಿ ಸ್ಕೂಲ್‌ನಿಂದಲೇ ಜೊತೆಯಾಗಿ ಓದಿದ್ದು.’’
-ನಂದೀಶ್, ವಿಜಯ್ ಬಾಲ್ಯಸ್ನೇಹಿತ
ಪಂಚನಹಳ್ಳಿ‘‘ಸಂಚಾರಿ ವಿಜಯ್ ಅನ್ನುವುದು ಬೆಂಗಳೂರಿನ ಹೆಸರು, ನಮಗೆ ಅವನು ವಿಜಯ್ ಅಷ್ಟೇ. ವಿಜಯ್ ಪಂಚನಹಳ್ಳಿಗೆ ಬಂದು ಹಲವು ಹಿರಿಯರನ್ನು ಭೇಟಿ ಮಾಡಿ ಮಾತನಾಡಿಸುವಾಗ ಹಿರಿಯರು ಗುರುತು ಹಿಡಿಯುತ್ತಿರಲಿಲ್ಲ. ಆಗ ವಿಜಯ್ ‘‘ನಾನು ಗೌರಮ್ಮನ ಮಗ’’ ಎಂದು ಪರಿಚಯ ಮಾಡಿಕೊಳ್ಳುತ್ತಿದ್ದ. ಗೌರಮ್ಮನವರನ್ನು ಪಂಚನಹಳ್ಳಿ ಮತ್ತು ಸುತ್ತ ಮುತ್ತಲಿನ ಹಳ್ಳಿಗಳ ಜನರು ಅತ್ಯಂತ ಗೌರವದಿಂದ ನೋಡಿ ಕೊಳ್ಳುತ್ತಿದ್ದರು ಅನ್ನೋದಕ್ಕೆ ಇದೇ ಸಾಕ್ಷಿ.’’ 
-ರವಿ, ವಿಜಯ್ ಬಾಲ್ಯಸ್ನೇಹಿತ,
ಪಂಚನಹಳ್ಳಿ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)