varthabharthi


ಅನುಗಾಲ

2024ರ ಭವಿಷ್ಯವೇನು?

ವಾರ್ತಾ ಭಾರತಿ : 24 Jun, 2021
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಭಾಜಪಕ್ಕೀಗ ಅಯೋಧ್ಯೆ, ಕಾಶ್ಮೀರ ಮತ್ತು ಮತೀಯ ವಿಚಾರಗಳು ನೆರವಾಗುವುದಿಲ್ಲವಾದ್ದರಿಂದ ಪ್ರತಿಪಕ್ಷಗಳ ಬಿಕ್ಕಟ್ಟೇ ಬಂಡವಾಳ. ರಾಜ್ಯಗಳ ಚುನಾವಣೆಗಳ ಮತ್ತು ರಾಷ್ಟ್ರೀಯ ಚುನಾವಣೆಯ ದಿಕ್ಕು ಬೇರೆಬೇರೆ. ಪ್ರತಿಪಕ್ಷಗಳು ತಮ್ಮ ಮಿತಿಯನ್ನರಿತು ಅಹಂಭಾವ ಮತ್ತು ಸ್ವಾರ್ಥವನ್ನು ತ್ಯಜಿಸಿ, ಯಾರ ನಾಯಕತ್ವದಲ್ಲಾದರೂ ಸರಿಯೇ ಒಗ್ಗಟ್ಟಾಗಿ 2024ರ ಚುನಾವಣೆಯನ್ನು ಎದುರಿಸಲು ನಿರ್ಧರಿಸದೆ ಹೋದರೆ ಮೇಲೆ ಹೇಳಿದ ಮಾತನ್ನು ಸತ್ಯಗೊಳಿಸುತ್ತವೆ ಮಾತ್ರವಲ್ಲ, ರಾತ್ರಿ ಕಂಡ ಬಾವಿಗೆ ಹಗಲೇ ಬೀಳಲಿವೆ.


ಸದ್ಯದ ಭವಿಷ್ಯವೆಂದರೆ ಮೋದಿಯೇ 2024ರಲ್ಲೂ ಗೆದ್ದು ಬರುತ್ತಾರೆ, ಏಕೆಂದರೆ ಅವರನ್ನು ಎದುರಿಸಲು ಪ್ರತಿಪಕ್ಷಗಳು ಒಗ್ಗಟ್ಟಾಗಿಲ್ಲ, ಆಗುವುದೂ ಇಲ್ಲ. ಇದು ಭಾಜಪದ ವಿಶ್ವಾಸದ ಮಾತು ಮತ್ತು ಪ್ರತಿಪಕ್ಷಗಳಿಗೆ ಎಚ್ಚರಿಕೆ ಅಥವಾ ಸಲಹೆ. ಆದರೆ ಸತ್ಯ. ಮುಂದಿನ ಚುನಾವಣೆಯಲ್ಲಿ ಈಗಿನ ಕೇಂದ್ರ ಸರಕಾರದ ಆಡಳಿತವನ್ನು ಹೊತ್ತ ಪಕ್ಷ ಗೆದ್ದರೆ ಅದಕ್ಕೆ ಪ್ರತಿಪಕ್ಷಗಳೇ ಹೊಣೆ, ಅದರಲ್ಲೂ ಕಾಂಗ್ರೆಸ್ ಪ್ರಧಾನ ಅಪರಾಧಿಯಾಗುತ್ತದೆ.

ಸದ್ಯ ದೇಶದಲ್ಲಿರುವ ರಾಷ್ಟ್ರೀಯ ಪಕ್ಷಗಳು ಎರಡೇ: ಹಿಂದೆಲ್ಲ ಕಾಂಗ್ರೆಸ್ ಮತ್ತು ಭಾಜಪ ಎನ್ನಬಹುದಾಗಿತ್ತು. ಆದರೆ ಈಗ ಈ ಪರಿಸ್ಥಿತಿ ಬದಲಾಗಿ ಭಾಜಪ ಮೊದಲ ಸ್ಥಾನದಲ್ಲಿದೆ. ಭಾಜಪ ಮತ್ತು ಕಾಂಗ್ರೆಸ್ ಎನ್ನಬೇಕು. ದಶಕಗಳ ಕೆಳಗೆ ರಾಷ್ಟ್ರೀಯ ಲಕ್ಷಣಗಳನ್ನು ಹೊಂದಿದ್ದ ಎಡಪಕ್ಷಗಳು ಈಗ ಅಧಿಕಾರದ ಬದಲು ತಮ್ಮ ಅಸ್ತಿತ್ವಕ್ಕಾಗಿ ಹೋರಾಡುತ್ತಿವೆ. ಅವುಗಳಿಗೆ ಕೇರಳದ ಪಿಣರಾಯಿ ವಿಜಯನ್ ತತ್ಕಾಲೀನ ಆಮ್ಲಜನಕವನ್ನು ಸರಬರಾಜು ಮಾಡಿದ್ದಾರೆ. ಉಳಿದವೆಲ್ಲ ಪ್ರಾದೇಶಿಕ ಪಕ್ಷಗಳು. ಜೆಡಿ(ಎಸ್) ಎಂಬ ಪಕ್ಷವು ತನ್ನ ರಾಷ್ಟ್ರೀಯ ಅಧ್ಯಕ್ಷರನ್ನು ಜೀವಾವಧಿಗೆ ಅರಿಸಿದೆಯಾದರೂ ಅದು ಕರ್ನಾಟಕವೆಂಬ ಚಿಕ್ಕ ಈಜುಕೊಳದಲ್ಲಿ ಸಂತುಷ್ಟವಾಗಿದೆ. ದೇವೇಗೌಡರ ಮಾಜಿ ರಾಷ್ಟ್ರೀಯ ವರ್ಚಸ್ಸಿನಿಂದಾಗಿ ಕೆಲವೆಡೆ ಒಂದೋ ಎರಡೋ ಸ್ಥಾನಗಳು ಆಕಸ್ಮಿಕವಾಗಿ ದಕ್ಕುವುದುಂಟು.

ಎನ್‌ಸಿಪಿ ಅತ್ತ ರಾಷ್ಟ್ರೀಯವೂ ಆಗದೆ, ಇತ್ತ ಪ್ರಾದೇಶಿಕವೂ ಆಗದೆ ನಡುವೆ ಸುಳಿಯುತ್ತ ಮಹಾರಾಷ್ಟ್ರದಲ್ಲಷ್ಟೇ ಅಧಿಕಾರದ ಸೂತ್ರಹಸ್ತವಾಗಲು ಹವಣಿಸುತ್ತಿದೆ. ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷಗಳು ಈಗ ಭಾಜಪವೂ ಕಾಂಗ್ರೆಸೂ ಸೇರಿದಂತೆ ಯಾರೊಂದಿಗೂ ನಂಟನ್ನು ಹೊಂದಲಾಗದೆ, ವಿರೋಧಿಸಲಾಗದೆ, ಕಳಚಿಕೊಳ್ಳುತ್ತ ಉಳಿದಿವೆ. ಮಹಾರಾಷ್ಟ್ರದಲ್ಲಿ ಶಿವಸೇನೆ, ಆಂಧ್ರಪ್ರದೇಶದಲ್ಲಿ ವೈಎಸ್‌ಆರ್ ಕಾಂಗ್ರೆಸ್, ತಮಿಳುನಾಡಿನಲ್ಲಿ ಡಿಎಂಕೆ, ತೆಲಂಗಾಣದಲ್ಲಿ ಟಿಆರ್‌ಎಸ್, ಒಡಿಶಾದಲ್ಲಿ ಪಟ್ನಾಯಕ್, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಜಾರ್ಖಂಡ್‌ನಲ್ಲಿ ಸೋರೆನ್, ದಿಲ್ಲಿಯಲ್ಲಿ ಆಪ್- ಹೀಗೆ ಕೆಲವು ಪಕ್ಷಗಳು, ವ್ಯಕ್ತಿಗಳು ತಮ್ಮ ಮಿತಿಯೊಳಗೇ ವ್ಯವಹರಿಸುತ್ತಿದ್ದಾರೆ. ಜೊತೆಗೆ ಟಾಮ್ ಆ್ಯಂಡ್ ಜೆರ್ರಿ ಕಾಮೆಡಿಯಂತೆ ರಾಷ್ಟ್ರೀಯ ಪಕ್ಷಗಳನ್ನು ಲೇವಡಿ ಮಾಡುವಂತೆ ಅಲ್ಲಲ್ಲಿ ತಾವೂ ಸ್ಪರ್ಧಿಸುತ್ತಿವೆ. ಪಂಜಾಬಿನಲ್ಲಿ ಆಪ್ ಮಾಡಿದ್ದು ಇದನ್ನೇ. ಅದೀಗ ಗುಜರಾತಿನ ಕೆಲವು ಚುನಾವಣೆಯಲ್ಲೂ ತನ್ನ ಇರವನ್ನು ಬಯಸಿದೆ, ಸೂಚಿಸಿದೆ. ಇನ್ನು ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ, ಮುಸ್ಲಿಮ್ ಲೀಗ್, ಉವೈಸಿಯ ಮಜ್ಲಿಸ್ ಮುಂತಾದ ಕೆಲವು ಪಕ್ಷಗಳ ಮಂದಿ ಒಂದಷ್ಟು ಮತಗಳನ್ನೂ ಒಂದಷ್ಟು ಸ್ಥಾನಗಳನ್ನೂ ಬಾಚಿಕೊಂಡು ‘ಸ್ಪಾಯಿಲ್ ಸ್ಪೋರ್ಟ್’ ಆಟಗಾರರಾಗಿದ್ದಾರೆ. ಮುಖ್ಯ ಎರಡು ರಾಷ್ಟ್ರೀಯ ಪಕ್ಷಗಳ ಕುರಿತು ಮೊದಲು ಚರ್ಚಿಸಬಹುದು. ಭಾಜಪ ದೇಶದೆಲ್ಲೆಡೆ ಅಧಿಕಾರವನ್ನು ಹೊಂದಿಲ್ಲ. ಅದು ಸ್ವಂತ ಅಥವಾ ಸಮ್ಮಿಶ್ರ ಆಡಳಿತವನ್ನು ಪಡೆದಿರುವುದು ಅಸ್ಸಾಮ್, ಮಣಿಪುರ, ತ್ರಿಪುರ, ನಾಗಾಲ್ಯಾಂಡ್, ಮೇಘಾಲಯ, ಗುಜರಾತ್, ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಗೋವಾ ರಾಜ್ಯಗಳಲ್ಲಿ ಹಾಗೂ ಪುದುಚೇರಿಯೆಂಬ ಕೇಂದ್ರಾಡಳಿತ ಪ್ರದೇಶಗಳಲ್ಲಿ. ಉಳಿದಂತೆ ಮಧ್ಯಪ್ರದೇಶ ಮತ್ತು ಕರ್ನಾಟಕಗಳಲ್ಲಿ ಭಾಜಪವು ಪ್ರಶ್ನಾರ್ಹ ಮತ್ತು ಕೀಳು ರಾಜಕೀಯದ ಮೂಲಕ ಅಧಿಕಾರವನ್ನು ‘ಹಿಡಿದಿದೆ’. ಇದು ದೇಶಕ್ಕಾಗಲಿ, ಪ್ರಜಾಪ್ರಭುತ್ವಕ್ಕಾಗಲಿ, ಪಕ್ಷಕ್ಕಾಗಲಿ ಎಷ್ಟು ಒಳ್ಳೆಯದೆಂಬುದನ್ನು ಭಾಜಪ ಅರಿತಿಲ್ಲ. ಕಾಲವೇ ಉತ್ತರಿಸಬೇಕು.

ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೆ ಭಾಜಪದ ದಿವಾಳಿತನವನ್ನು ಇನ್ನಿಲ್ಲದ ರೀತಿಯಲ್ಲಿ ಅನಾವರಣಗೊಳಿಸಿದೆ. ಕಾಂಗ್ರೆಸನ್ನು ಅದು ಯಾವ ಅಂಶಗಳಿಗೆಲ್ಲ ಹಳಿಯುತ್ತಿತ್ತೋ ಅದನ್ನೆಲ್ಲ ಪ್ರದರ್ಶಿಸಿಯೂ ಭಾಜಪ ಅಧಿಕಾರವನ್ನು ಪಡೆಯುವಲ್ಲಿ ವಿಫಲವಾಯಿತು. ರಾಜಕಾರಣದ ಮೂಲಕ ಮಾತ್ರವಲ್ಲ, ಆಸೆ ಆಮಿಷಗಳ ಮೂಲಕ ಮಾತ್ರವಲ್ಲ, ತನ್ನ ಸಿಬಿಐ, ಈಡಿ, ಎನ್‌ಐಎ, ಆಯಕರ ಇಲಾಖೆ ಮುಂತಾದ ಸಂಸ್ಥೆಗಳ ಮೂಲಕ ಹೆದರಿಸಿಯೂ ಅನೇಕ ಟಿಎಂಸಿ ನಾಯಕರನ್ನು ಭಾಜಪ ಆಮದುಮಾಡಿಕೊಂಡಿತು. ಅಲ್ಲದೆ ಪಾಳೇಗಾರರ ವಿರುದ್ಧ ಚಕ್ರವರ್ತಿಯೇ ದಾಳಿಯಿಟ್ಟಂತೆ ಚುನಾವಣೆಯನ್ನು ಎದುರಿಸಿತು. ಸಲ್ಲದ ಕೆಳಮಟ್ಟದ ಪ್ರಚಾರ ನಡೆಸಿತು. ಕೋವಿಡ್-19ರ ತೀವ್ರ ನಡುಕದ ನಡುವೆಯೂ ಸಾವಿರ ಸಾವಿರ ಜನರನ್ನು ಸೇರಿಸಿ ಶಕ್ತಿಪ್ರದರ್ಶನ ಮಾಡಲಾಯಿತು. ಎಲ್ಲ ರೀತಿಯ ಹಿಂದೂ ಮತೀಯ ಧ್ರುವೀಕರಣವನ್ನೂ ಮಾಡಿತು; ಮಾಡಿಸಿತು. ಕೇಂದ್ರದಲ್ಲಿ ಸಂಸತ್ ಸದಸ್ಯರಾಗಿರುವ ಅತಿರಥ-ಮಹಾರಥರನ್ನೂ ಕಣಕ್ಕಿಳಿಸಿತು. ಇಷ್ಟೆಲ್ಲ ಆದರೂ ಕೊನೆಗೂ 70 ಚಿಲ್ಲರೆ ಸ್ಥಾನದೊಂದಿಗೆ (ಅ)ತೃಪ್ತಿಪಡಬೇಕಾಯಿತು. ಮಮತಾ ನಿರೀಕ್ಷೆಗೂ ಮೀರಿ ಸ್ಥಾನಗಳಿಸಿದರು. ಇನ್ನುಳಿದಂತೆ ತಮಿಳುನಾಡಿನಲ್ಲಿ ಎಐಡಿಎಂಕೆಯೊಂದಿಗೆ ಮೈತ್ರಿಯಿಂದಾಗಿ 4 ಸ್ಥಾನಗಳು ದಕ್ಕಿದವು. ಕೇರಳದಲ್ಲಿ ಎಷ್ಟೇ ಮತೀಯತೆಯನ್ನು ಕೆರಳಿಸಿದರೂ ಶೂನ್ಯಸಂಪಾದನೆಯಾಯಿತು.

ಅಸ್ಸಾಮಿನಲ್ಲಿ ವಲಸಿಗ ಕಾಂಗ್ರೆಸಿಗರೊಬ್ಬರು ಮುಖ್ಯಮಂತ್ರಿಯಾದರು. ಕರ್ನಾಟಕದಲ್ಲಿ ಕಾಂಗ್ರೆಸಿಗರೇ ಸಚಿವಸಂಪುಟದಲ್ಲಿ ಬಹುಮತೀಯರಾಗಿದ್ದಾರೆಂದು ಭಾಜಪ ಶಾಸಕರೇ ಗೊಣಗುತ್ತಿದ್ದಾರೆ! ಆಂಧ್ರಪ್ರದೇಶದಲ್ಲಿಯೂ ಭಾಜಪಕ್ಕೆ ಒಂದೂ ಸ್ಥಾನ ಲಭಿಸಿಲ್ಲ. ಇವನ್ನೆಲ್ಲ ಗಮನಿಸಿದರೆ ಮೋದಿಯ ಪ್ರಭಾವ ಮತ್ತು ವರ್ಚಸ್ಸೇ 2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಭಾಜಪದ ಗೆಲುವಿಗೆ ಕಾರಣ. ಕಳೆದ ಚುನಾವಣೆಯಲ್ಲಿ ಅದರೊಂದಿಗೆ ಸೇರಿಕೊಂಡಿದ್ದ ಪ್ರಾದೇಶಿಕ ಪಕ್ಷಗಳೆಲ್ಲ ಒಂದೊಂದಾಗಿ ಬಿಟ್ಟುಹೋಗುತ್ತಿವೆ. ಜೊತೆಗೆ ಕಳೆದ ಚುನಾವಣೆಯಲ್ಲಿದ್ದ ಪ್ರಭಾವ ಈಗಿದ್ದ ಹಾಗೆ ಕಾಣುವುದಿಲ್ಲ. ರಾಜ್ಯಗಳ ಮಟ್ಟಿಗೆ ಹೇಳುವುದಾದರೆ 2018ರ ಆನಂತರ ಭಾಜಪವು 3 ಈಶಾನ್ಯ ರಾಜ್ಯ ಮತ್ತು 1 ಕೇಂದ್ರಾಡಳಿತ ಪ್ರದೇಶಗಳ ಚುನಾವಣೆಗಳನ್ನಷ್ಟೇ ಗೆದ್ದಿದೆ. ಆದ್ದರಿಂದ ಭಾಜಪವು ತನ್ನ ಗರಿಷ್ಠ ಮಟ್ಟವನ್ನು ತಲುಪಿ ಈಗ ಅವರೋಹಣದ ಹಾದಿಯಲ್ಲಿದೆಯೆನ್ನಬಹುದು. ಹೀಗಿರುವುದರಿಂದಲೇ 2024ರ ಭವಿಷ್ಯಕ್ಕೆ ಅರ್ಥ ಬರುವುದು. 1977ರ ಚುನಾವಣೆಯನ್ನು ನೆನಪಿಸಿದರೆ ಕಾಂಗ್ರೆಸ್ ಎಷ್ಟೇ ದುಸ್ಥಿತಿಗೆ ಬಂದರೂ ಅದರ ಗೆಲುವಿಗೆ ಮುಳ್ಳಾದದ್ದು ಪ್ರತಿಪಕ್ಷಗಳ ಒಗ್ಗಟ್ಟು. ಭಾಜಪದ ಪೂರ್ವಾವತಾರಿ ಬಲಪಂಥದ ಜನಸಂಘದಿಂದ ಮೊದಲ್ಗೊಂಡು ಎಡಪಕ್ಷಗಳ ವರೆಗೆ ಎಲ್ಲವೂ ಜಯಪ್ರಕಾಶ್ ನಾರಾಯಣರೆಂಬ ಅನಾಸಕ್ತಿಯೋಗದ ನಾಯಕನಡಿ ಕಾಂಗ್ರೆಸನ್ನು ತಮ್ಮ ಸಾಮಾನ್ಯ ಎದುರಾಳಿಯೆಂದು ಬಗೆದು ವೈಯಕ್ತಿಕ ಪಂಥಗಳನ್ನು ತಾತ್ಕಾಲಿಕವಾಗಿಯಾದರೂ ಬದಿಗೊತ್ತಿ ಒಟ್ಟಾದವು.

ಎಡಪಕ್ಷಗಳನ್ನು ಹೊರತುಪಡಿಸಿ ಉಳಿದೆಲ್ಲ ಪಕ್ಷಗಳೂ ಜನತಾ ಪಾರ್ಟಿಯೆಂಬ ಕೊಡೆಯಡಿ ಮತ್ತು ಎಡಪಕ್ಷಗಳು ಇವುಗಳೊಂದಿಗೆ ಪರಸ್ಪರ ಚುನಾವಣಾ ಹೊಂದಾಣಿಕೆ ಮಾಡಿಕೊಂಡು ಕಣಕ್ಕಿಳಿದವು. ಪರಿಣಾಮವಾಗಿ ಕಾಂಗ್ರೆಸ್ ಸೋತಿತು. (ದಕ್ಷಿಣ ಭಾರತವೇ ಕಾಂಗ್ರೆಸಿನ ಕೈಹಿಡಿದು ಮಾನವುಳಿಸಿದ್ದು!) ಆದರೆ ಕೇವಲ ಎರಡೂ ಚಿಲ್ಲರೆ ವರ್ಷಗಳಲ್ಲಿ ಈ ಎಲ್ಲ ಪಕ್ಷಗಳಿಗೆ ತಮ್ಮ ವೈಯಕ್ತಿಕ ಹಿತಾಸಕ್ತಿ ಮುಖ್ಯವಾಗಿ ಛಿದ್ರವಾದವು; ಜನಸಂಘವು ತನ್ನ ಹಿಂದಿನ ಹೆಸರನ್ನು ತ್ಯಜಿಸಿ ‘ಭಾರತೀಯ ಜನತಾ ಪಾರ್ಟಿ’ ಎಂಬ ಹೊಸ ಹೆಸರಿನೊಂದಿಗೆ ಒಗ್ಗಟ್ಟನ್ನು ಮರೆಯಿತು; ಸಂಘಟನೆಯನ್ನು ತೊರೆಯಿತು. ಮತ್ತೆ ಕಾಂಗ್ರೆಸ್ ಅಧಿಕಾರ ಪಡೆಯಿತು ಮತ್ತು ಸುಮಾರು ಒಂದೂವರೆ ದಶಕಗಳ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಿತು.ಇಷ್ಟಾದರೂ ಈ ಪ್ರತಿಪಕ್ಷಗಳು ಪಾಠ ಕಲಿಯಲಿಲ್ಲ. ಆನಂತರದ ವರ್ಷಗಳಲ್ಲಿ ಯಾವ ಪಕ್ಷವೂ ಸ್ವತಂತ್ರವಾಗಿ ಅಧಿಕಾರ ಹಿಡಿಯಲು ವಿಫಲವಾದವು ಮತ್ತು ಈ ಕಾರಣದಿಂದ ಮೈತ್ರಿಪಕ್ಷಗಳು ಕಿಚಡಿ ಸರಕಾರಗಳನ್ನು ನಿರ್ವಹಿಸಿದವು. ಮುಂದೆ ಇದು ಕಾಂಗ್ರೆಸನ್ನೂ ಕ್ಷೀಣಗೊಳಿಸಿತು. ಪ್ರತಿಪಕ್ಷಗಳು ಭಾಜಪದಡಿ ಎನ್‌ಡಿಎ ಎಂದಾದರೆ ಕಾಂಗ್ರೆಸ್ ಯುಪಿಎ ಆಗುವುದು ಅನಿವಾರ್ಯವಾಯಿತು.

2014ರಲ್ಲಿ ಎನ್‌ಡಿಎ ಎಂಬ ಹೆಸರಿದ್ದರೂ ಅದು ಭಾಜಪ ಸರಕಾರವೇ ಆಯಿತು ಮತ್ತು 2019ರಲ್ಲಿಯೂ ಹಾಗೆಯೇ ಮುಂದುವರಿಯಿತು. ಕಾಂಗ್ರೆಸ್ ನಿಶ್ಚಯವಾಗಿಯೂ ಆತ್ಮಹತ್ಯೆಯ ಹಾದಿಯಲ್ಲಿದೆ. ಖಿನ್ನತೆ ಕಾಂಗ್ರೆಸನ್ನು ಆವರಿಸಿದೆ. ಅದಕ್ಕೀಗ ಗೇಣಿ ಕಾನೂನಿನಡಿ ಆಸ್ತಿ ಕಳೆದುಕೊಂಡ ವಂಶಾಡಳಿತದ ಭೂಮಾಲಕರ ವರ್ಚಸ್ಸೇ ವಿನಾ ಬೇರೇನಿಲ್ಲ. ಅಲ್ಲಿ-ಇಲ್ಲಿ ಸ್ವಲ್ಪಅಧಿಕಾರ ಗೌರವ ಸಿಕ್ಕಿದರೂ ಪೂರ್ಣಪ್ರಮಾಣದ ಅಸ್ತಿತ್ವವಿಲ್ಲ. ತನ್ನ ಪಕ್ಷದ ಸರಕಾರಗಳನ್ನಾಗಲಿ, ಪದಾಧಿಕಾರಿಗಳನ್ನಾಗಲಿ, ಹಿಡಿತದಲ್ಲಿಟ್ಟುಕೊಳ್ಳುವುದಿರಲಿ, ನೈತಿಕ ಸ್ಥೈರ್ಯವನ್ನು ಮೂಡಿಸುವುದೂ ಅದಕ್ಕೆ ಕಷ್ಟವಾಗಿದೆ. ಸೋನಿಯಾ-ರಾಹುಲ್-ಪ್ರಿಯಾಂಕಾ ಇವರನ್ನು ಬಿಟ್ಟರೆ ಬೇರೆ ನಾಯಕರನ್ನು ಕಲ್ಪಿಸುವುದೂ ಕಾಂಗ್ರೆಸಿನಲ್ಲಿ ದೇಶದ್ರೋಹಕ್ಕಿಂತ ದೊಡ್ಡ ಅಪರಾಧವಾಗುತ್ತಿದೆ. ಅದೆಷ್ಟೋ ಹಿರಿಯ ನಾಯಕರು (ಅವರೂ ಸ್ವಾರ್ಥಪರರು, ಅವಕಾಶವಾದಿಗಳು- ಆ ವಿಚಾರ ಬೇರೆ) ಪಕ್ಷದ ಹಿತವನ್ನು ಕಾಪಾಡಲು ಮುಂದಾದರೆ ತಕ್ಷಣ ಅವರನ್ನು ಮೂಲೆಗುಂಪು ಮಾಡದಿದ್ದರೂ ಪಕ್ಕಕ್ಕೆ ಸರಿಸಲಾಗುತ್ತದೆ. ರಾಜ್ಯಗಳಲ್ಲಿ ನಡೆಯುತ್ತಿರುವ ಬಣರಾಜಕೀಯ, ಪರಸ್ಪರ ಕೆಸರೆರಚಾಟಗಳನ್ನು ನಿಲ್ಲಿಸಲು ಕೇಂದ್ರ ನಾಯಕತ್ವ ಅಶಕ್ತವಾಗಿ ಅವನ್ನು ಪ್ರೋತ್ಸಾಹಿಸುವಂತೆ ನಡೆದುಕೊಳ್ಳುತ್ತಿದೆ. ಸಚಿನ್ ಪೈಲಟ್, ಜ್ಯೋತಿರಾದಿತ್ಯ ಸಿಂಧಿಯಾ ಇವರು ರಾಹುಲ್ ಗಾಂಧಿಗಿಂತ ಹೆಚ್ಚಿನ ನಾಯಕತ್ವ ಗುಣಗಳನ್ನು ಹೊಂದಿದಾಗ್ಯೂ ಅವರನ್ನು ಹಿರಿಯ ನಾಯಕರು ಬೆಂಬಲಿಸಿಲ್ಲ. ಅಧಿಕಾರವನ್ನು ಸವಿದವರು ಅದನ್ನು ಬಿಟ್ಟುಕೊಟ್ಟು ಪಕ್ಷದ ಏಳಿಗೆಯನ್ನು ಬಯಸುತ್ತಿಲ್ಲ.

ಇನ್ನೂ ವಿಷಾದದ ಸಂಗತಿಯೆಂದರೆ ಎಲ್ಲಾದರೂ ಹೈಕಮಾಂಡ್ ಬದಲಾವಣೆಯನ್ನು ತರಲು ಯತ್ನಿಸಿದರೆ ತಕ್ಷಣ ಅವಕಾಶ ಕಳೆದುಕೊಂಡವರು ಪಕ್ಷವನ್ನು ತ್ಯಜಿಸುತ್ತಾರೆ. ತಾವು ಅನೇಕ ದಶಕಗಳಿಂದ ಎಲ್ಲ ಲಾಭವನ್ನು ಪಡೆದುಕೊಂಡರೂ ಇನ್ನೂ ಅವರ ಲೋಭ ಮುಗಿಯುವುದಿಲ್ಲ. ಇದಕ್ಕೆ ಎಸ್. ಎಂ. ಕೃಷ್ಣ ಒಂದು ದೊಡ್ಡ ಉದಾಹರಣೆ. ಮುಖ್ಯಮಂತ್ರಿ, ಕೇಂದ್ರದ ಸಚಿವ, ರಾಜ್ಯಪಾಲ ಹೀಗೆ ಹತ್ತಾರು ಹುದ್ದೆಗಳನ್ನು ನಿರ್ವಹಿಸಿಯೂ ತನ್ನ ಇಳಿಗಾಲದಲ್ಲಿ ಭಾಜಪಕ್ಕೆ ಪಕ್ಷಾಂತರವಾದರು; ವ್ರತ ಕೆಟ್ಟರೂ ಸುಖಪಡಲಿಲ್ಲವೆಂಬ ಹಾಗೆ ಅಲ್ಲೂ ಅನಾಥರಾಗಿಯೇ ಉಳಿದರು. ಅನೇಕ ಬಾರಿ ಶಾಸಕ, ಸಂಸದರಾಗಿದ್ದ ಅನೇಕ ನಾಯಕರು ಒಮ್ಮೆ ಟಿಕೇಟು ವಂಚಿತರಾದಾಕ್ಷಣ ತಮಗೆ ಅನ್ಯಾಯವಾಯಿತೆಂದು ಅತ್ತು ಪಕ್ಷವನ್ನು ಬಿಟ್ಟುಹೋಗುತ್ತಾರೆ. ಈಗ ಕಾಂಗ್ರೆಸ್ ಕೆಲವು ರಾಜ್ಯಗಳಲ್ಲಿ ಉಳಿದಿದ್ದರೆ ಅಲ್ಲಿನ ರಾಜಕಾರಣಿಗಳಿಂದಲೇ ಹೊರತು ಕೇಂದ್ರ ನಾಯಕತ್ವದಿಂದಲ್ಲ. ಸದ್ಯ ಕಾಂಗ್ರೆಸಿನ ಕೇಂದ್ರ ನಾಯಕತ್ವವು ಬ್ರಿಟಿಷ್ ರಾಜವಂಶದಷ್ಟೇ ಪ್ರಸ್ತುತವಾಗಿದೆ. ಹಾಗಾದರೆ ಇವೆಲ್ಲವೂ ಭಾಜಪದಲ್ಲಿಲ್ಲವೇ ಎಂಬ ಪ್ರಶ್ನೆ ಎದುರಾಗಬಹುದು. ಭಾಜಪವು ಕಾಂಗ್ರೆಸಿನ ಎಲ್ಲ ತಂತ್ರಗಳನ್ನೂ ಮುಂದುವರಿಸಿದೆ. ಆದರೆ ಭಾಜಪವು ದೇಶದ ಜನರನ್ನು ಮತೀಯವಾಗಿ ಒಡೆಯಲು, ಧ್ರುವೀಕರಿಸಲು ಶಕ್ತವಾಗಿದೆ. ಹೇಗೆ ಕಾಂಗ್ರೆಸ್ ಬಡತನ, ಅನಕ್ಷರತೆಯನ್ನು ತನ್ನ ಮತಬ್ಯಾಂಕಾಗಿ ಒಂದು ಕಾಲದಲ್ಲಿ ಬಳಸಿಕೊಂಡಿತೋ ಅದೇ ರೀತಿಯಲ್ಲಿ ಮತ್ತು ಅದಕ್ಕಿಂತಲೂ ಹೆಚ್ಚು ಅಪಾಯಕಾರಿಯಾಗಿ ಧರ್ಮ, ಮತ ಮತ್ತು ಜಾತಿಯನ್ನು ಭಾಜಪ ಬಳಸಿಕೊಂಡು ತನ್ನ ಭ್ರಷ್ಟತೆಯನ್ನು ಮತ್ತು ಲಜ್ಜಾಹೀನತೆಯನ್ನು ಮುಚ್ಚಿಕೊಂಡಿದೆ.

ಪಕ್ಷಾಂತರದ ವಿರುದ್ಧವೇ ತನ್ನ ದನಿಯನ್ನೆತ್ತಿದ ಭಾಜಪಕ್ಕೆ ಇಂದು ಅದೇ ಬಂಡವಾಳವಾಗಿದೆ. ಅಧಿಕಾರಕ್ಕಾಗಿ ರಾಜಕೀಯ ಮೌಲ್ಯಗಳ ದುರುಪಯೋಗದಲ್ಲಿ ಮತ್ತು ಸಾಂವಿಧಾನಿಕ ಹುದ್ದೆಗಳನ್ನು, ಸಂಸ್ಥೆಗಳನ್ನು ಅಪಮೌಲ್ಯಗೊಳಿಸುವುದರಲ್ಲಿ ಭಾಜಪವು ಕಾಂಗ್ರೆಸನ್ನು ಮೀರಿಸಿದೆ. ಇತ್ತೀಚೆಗೆ ಅಸ್ಸಾಮಿನ ಮುಖ್ಯಮಂತ್ರಿಯಾದವರು ಕಾಂಗ್ರೆಸ್‌ನ ಹಳೆಯ ಹುರಿಯಾಳು. ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಅನೇಕ ಮಂತ್ರಿಗಳು ಕಾಂಗ್ರೆಸಿಗರು. ಪಶ್ಚಿಮ ಬಂಗಾಳದಲ್ಲಂತೂ ಟಿಎಂಸಿ ಪಕ್ಷದ ಎಲ್ಲ ಉಚ್ಚಿಷ್ಟಗಳೂ ಭಾಜಪ ಸೇರಿವೆ. ಕೆಲವು ಮತ್ತೆ ಮರಳಿವೆ. ಪಿಡಿಪಿಯೊಂದಿಗೆ ಮೈತ್ರಿಮಾಡಿಕೊಂಡು ಜಮ್ಮು ಮತ್ತು ಕಾಶ್ಮೀರದಲ್ಲಿ ಅಧಿಕಾರವನ್ನು ಸವಿದ ಭಾಜಪವು ಆನಂತರ ಅದನ್ನು ವಿಚ್ಛೇದಿಸಿ ಪಿಡಿಪಿ ನಾಯಕಿ ಮುಫ್ತಿ ಮೆಹಬೂಬರನ್ನು ಬಂಧನದಲ್ಲಿಡುವ ಹಂತಕ್ಕೆ ತಲುಪಿತು. ಪ್ರೀತಿ ಮತ್ತು ಯುದ್ಧದಂತೆ ರಾಜಕಾರಣದಲ್ಲೂ ಎಲ್ಲವೂ ಮತ್ತು ಯಾವುದೂ ಸರಿಯೆಂಬ (ಅ)ನೀತಿಯನ್ನು ಸಾರಿತು.

ಇವೆಲ್ಲವನ್ನು ಗಮನಿಸಿದರೆ 1975ರ ತುರ್ತುಪರಿಸ್ಥಿತಿಯಲ್ಲಿ ಜನಸಂಘ ಮತ್ತು ಆರೆಸ್ಸೆಸ್ ಇಂದಿರಾ ಗಾಂಧಿಯನ್ನು ವಿರೋಧಿಸಿ, ಜೆಪಿಯನ್ನು ಬೆಂಬಲಿಸಿದ್ದು ಅಧಿಕಾರವನ್ನು ಹಿಡಿಯಲು ಮಾಡಿದ ದುಷ್ಟರಾಜಕಾರಣವೇ ಹೊರತು ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವುದಕ್ಕೂ ಅಲ್ಲ, ಸರ್ವಾಧಿಕಾರವನ್ನು ವಿರೊಧಿಸುವುದಕ್ಕೂ ಅಲ್ಲ ಎಂಬುದು ಸ್ಪಷ್ಟ. ಯಾವುದನ್ನು ಆಗ ಅದು ಧಿಕ್ಕರಿಸಿತ್ತೋ ಅದನ್ನೀಗ ಪಲ್ಲಕ್ಕಿಯಲ್ಲಿ ಮೊವಣಿಗೆ ಮಾಡುತ್ತಲಿದೆ. ಭಾಜಪಕ್ಕೀಗ ಅಯೋಧ್ಯೆ, ಕಾಶ್ಮೀರ ಮತ್ತು ಮತೀಯ ವಿಚಾರಗಳು ನೆರವಾಗುವುದಿಲ್ಲವಾದ್ದರಿಂದ ಪ್ರತಿಪಕ್ಷಗಳ ಬಿಕ್ಕಟ್ಟೇ ಬಂಡವಾಳ. ರಾಜ್ಯಗಳ ಚುನಾವಣೆಗಳ ಮತ್ತು ರಾಷ್ಟ್ರೀಯ ಚುನಾವಣೆಯ ದಿಕ್ಕು ಬೇರೆಬೇರೆ. ಪ್ರತಿಪಕ್ಷಗಳು ತಮ್ಮ ಮಿತಿಯನ್ನರಿತು ಅಹಂಭಾವ ಮತ್ತು ಸ್ವಾರ್ಥವನ್ನು ತ್ಯಜಿಸಿ, ಯಾರ ನಾಯಕತ್ವದಲ್ಲಾದರೂ ಸರಿಯೇ ಒಗ್ಗಟ್ಟಾಗಿ 2024ರ ಚುನಾವಣೆಯನ್ನು ಎದುರಿಸಲು ನಿರ್ಧರಿಸದೆ ಹೋದರೆ ಮೇಲೆ ಹೇಳಿದ ಮಾತನ್ನು ಸತ್ಯಗೊಳಿಸುತ್ತವೆ ಮಾತ್ರವಲ್ಲ, ರಾತ್ರಿ ಕಂಡ ಬಾವಿಗೆ ಹಗಲೇ ಬೀಳಲಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)