varthabharthi


ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?

ಫೆಲೆಸ್ತೀನ್‌ನಲ್ಲಿ ನಡೆಯುತ್ತಿರುವುದೇನು?

ಸೌದಿ-ಯಮನ್ ನಡುವಣ ಕಲಹ

ವಾರ್ತಾ ಭಾರತಿ : 25 Jun, 2021
ಎ.ಎಸ್. ಪುತ್ತಿಗೆ

► ಭಾಗ-22


UNICEF  ವರದಿ ಪ್ರಕಾರ ಇಂದು ಜಗತ್ತಿನಲ್ಲಿ ಅತ್ಯಧಿಕ ಪ್ರಮಾಣದ ಮಾನವೀಯ ದುರಂತವನ್ನು ಎದುರಿಸುತ್ತಿರುವ ದೇಶ ಯಮನ್.

ಈ ಕಡು ದರಿದ್ರ ದೇಶ, ಸೌದಿ ಅರೇಬಿಯ ಎಂಬ ಸಂಪನ್ನ ದೇಶದ ನೆರೆಯಲ್ಲೇ ಇದೆ. ಸದ್ಯ ಅಲ್ಲಿ 1. 2 ಕೋಟಿ ಮಕ್ಕಳ ಸಹಿತ 2.4 ಕೋಟಿ ಮಂದಿಗೆ ತುರ್ತು ನೆರವಿನ ಅಗತ್ಯವಿದೆ. ಅಲ್ಲಿ 5 ವರ್ಷಕ್ಕಿಂತ ಕೆಳಗಿನ 23 ಲಕ್ಷ ಮಕ್ಕಳು ಪೋಷಕಾಂಶಗಳ ಕೊರತೆಯಿಂದ ನರಳುತ್ತಿದ್ದಾರೆ. ತುರ್ತು ಆಹಾರ ಮತ್ತು ಚಿಕಿತ್ಸೆ ದೊರೆಯದಿದ್ದರೆ ಈ ಪೈಕಿ ಸುಮಾರು 4 ಲಕ್ಷ ಮಕ್ಕಳ ಜೀವಗಳು ಅಪಾಯದಲ್ಲಿವೆ. ಕೋವಿಡ್ ನಿಂದಾಗಿ ಅಲ್ಲಿಯ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. 20 ಲಕ್ಷ ಎಳೆಯ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಪ್ರಾಕೃತಿಕ ಕಾರಣಗಳಿಂದ ಯಮನ್ ದೇಶದ ಹೆಚ್ಚಿನ ಭಾಗಗಳು ತೀವ್ರ ಸ್ವರೂಪದ ಜಲಕ್ಷಾಮವನ್ನು ಎದುರಿಸುತ್ತಿವೆ. ಅಲ್ಲಿ ಕಳೆದ ಕೆಲವು ದಶಕಗಳ ಅವಧಿಯಲ್ಲಿ ಜಲ ಸಂಪನ್ಮೂಲಗಳ ಮೇಲೆ ನಿಯಂತ್ರಣ ಸಾಧಿಸುವುದಕ್ಕಾಗಿಯೇ ವಿವಿಧ ಸ್ಥಳೀಯ ಗುಂಪುಗಳ ಮಧ್ಯೆ ನೂರಾರು ಬಾರಿ ಹಿಂಸೆ ನಡೆದಿದ್ದು ಪ್ರತಿವರ್ಷ ಸರಾಸರಿ 4 ಸಾವಿರ ಮಂದಿ ಇಂತಹ ಹಿಂಸೆಗಳಿಗೆ ಬಲಿಯಾಗುತ್ತಿದ್ದಾರೆ. ಸಾಲದ್ದಕ್ಕೆ ಕಳೆದ 10 ವರ್ಷಗಳಿಂದ ಈ ದೇಶವು ಭೀಕರ ಸ್ವರೂಪದ ಆಂತರಿಕ ಯುದ್ಧವನ್ನು ಎದುರಿಸುತ್ತಿದೆ. ಈ ಬಿಕ್ಕಟ್ಟಿನಿಂದ ಯಮನ್ ಮತ್ತದರ ಜನತೆಗೆ ಮುಕ್ತಿ ನೀಡಬೇಕಾಗಿದ್ದ ಅದರ ಅಕ್ಕಪಕ್ಕದ ದೇಶಗಳು, ತಮ್ಮದೇ ಸ್ವಾರ್ಥಗಳಿಂದ ಪ್ರೇರಿತವಾದ ಬೇರೆಯೇ ಕ್ರೂರ ಆಟವೊಂದನ್ನು ಆಡುತ್ತಿವೆ. ಹಿಂದೆ ಪರೋಕ್ಷವಾಗಿ ಯಮನ್‌ನ ಯುದ್ಧನಿರತ ಗುಂಪುಗಳ ಪೈಕಿ ಕೆಲವರಿಗೆ ಬೆಂಬಲ ನೀಡುತ್ತಿದ್ದ ಸೌದಿ, ಯುಎಇ, ಇರಾನ್ ಮುಂತಾದ ಹಲವು ದೇಶಗಳು ಇತ್ತೀಚಿನ ವರ್ಷಗಳಲ್ಲಿ ಈ ಯುದ್ಧದಲ್ಲಿ ಪ್ರತ್ಯಕ್ಷ ಹಾಗೂ ಸಕ್ರಿಯ ಪಾತ್ರ ವಹಿಸುತ್ತಿವೆ. ಈ ಮೂಲಕ ಅವು ಆಗಲೇ ವಿನಾಶದ ಅಂಚಿನಲ್ಲಿರುವ ಯಮನ್ ಎಂಬ ಬಡ ದೇಶದ ಸರ್ವನಾಶಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಿವೆ.

ಸೌದಿ ಮತ್ತು ಖತರ್ ನಡುವಣ ವೈಷಮ್ಯ

ಅರಬ್ ದೇಶಗಳ ಪರಸ್ಪರ ಸಂಬಂಧಗಳ ಕುರಿತು ಚರ್ಚಿಸುವಾಗ ಪ್ರಸ್ತಾಪಿಸಲೇ ಬೇಕಾದ ಇನ್ನೊಂದು ಮಹತ್ವದ ವಿಷಯವಿದೆ:

ಹಲವು ದಶಕಗಳ ತನಕ ಇಸ್ರೇಲ್ ಅನ್ನು ಬಹಿಷ್ಕರಿಸುವ ಮತ್ತು ಇಸ್ರೇಲ್ ಮೇಲೆ ದಿಗ್ಬಂಧನ ಹೇರುವ ಕುರಿತು ಚರ್ಚಿಸುತ್ತಲೇ ಬಂದಿರುವ ಅರಬ್ ದೇಶಗಳು 2017 ರಲ್ಲಿ ಒಂದು ದೊಡ್ಡ ಮುನ್ನಡೆ ಸಾಧಿಸಿದವು. ಆದರೆ ಅವರು ಬಹಿಷ್ಕರಿಸಿದ್ದು ಖತರ್ ಎಂಬ ಅರಬ್ ದೇಶವನ್ನೇ ಹೊರತು ಇಸ್ರೇಲ್ ದೇಶವನ್ನಲ್ಲ. ಸೌದಿ ಅರೇಬಿಯ, ಯುಎಇ, ಬಹರೈನ್ ಮತ್ತು ಈಜಿಪ್ಟ್ ಎಂಬ GCC ಯ ನಾಲ್ಕು ಪ್ರಮುಖ ದೇಶಗಳು ಖತರ್ ದೇಶದ ಜೊತೆಗಿನ ತಮ್ಮೆಲ್ಲಾ ರಾಜತಾಂತ್ರಿಕ ಸಂಪರ್ಕಗಳನ್ನು ಕಡಿದುಕೊಂಡು ಆ ದೇಶದ ಮೇಲೆ ಪೂರ್ಣ ಪ್ರಮಾಣದ ದಿಗ್ಬಂಧನವನ್ನು ಹೇರಿದವು. ಖತರ್ ದೇಶವನ್ನು ಸಂಪರ್ಕಿಸಲು ಲಭ್ಯವಿದ್ದ ನೆಲ, ಜಲ ಮತ್ತು ವಾಯು ಮಾರ್ಗವನ್ನು ಮುಚ್ಚಿದವು. ಖತರ್ ಜೊತೆ ಎಲ್ಲ ಬಗೆಯ ಆಮದು, ರಫ್ತು, ವಾಣಿಜ್ಯ, ಕ್ರೀಡೆ, ಮನರಂಜನೆ ಮತ್ತಿತರ ಸಕಲ ವ್ಯವಹಾರಗಳನ್ನು ನಿಷೇಧಿಸಿದವು.

ಇದೇನೂ ಹಠಾತ್ತನೆ ತಲೆದೋರಿದ ಬೆಳವಣಿಗೆಯಾಗಿರಲಿಲ್ಲ. ವಿವಿಧ ದೇಶಗಳಲ್ಲಿ ‘ಅರಬ್ ವಸಂತ’ದ ಬಂಡಾಯ ಚಟುವಟಿಕೆಗಳು ನಡೆಯುತ್ತಿದ್ದಾಗ ಸೌದಿ ಮತ್ತು ಅದರ ಮಿತ್ರ ರಾಷ್ಟ್ರಗಳು ಸರ್ವಾಧಿಕಾರಿಗಳ ಪರ ನಿಂತಿದ್ದರೆ, ಖತರ್, ಇರಾನ್ ಮತ್ತು ಟರ್ಕಿ ಬಂಡುಕೋರ ಪಕ್ಷಗಳನ್ನು ಬೆಂಬಲಿಸುತ್ತಿದೆ ಎಂದು ಸೌದಿ ಸಹಿತ ಕೆಲವು GCC ದೇಶಗಳು ಸಂದೇಹಿಸತೊಡಗಿದ್ದವು. ಖತರ್‌ನ ಅಲ್ ಜಝೀರಾ ಟಿವಿ ಯು ‘ಅರಬ್ ವಸಂತ’ ಕ್ಕೆ ಸಂಬಂಧಿಸಿದ ಬೆಳವಣಿಗೆಗಳಿಗೆ ನೀಡುತ್ತಿದ್ದ ಪ್ರಚಾರ ಕೂಡಾ ಈ ದೇಶಗಳ ಪಾಲಿಗೆ ತಲೆನೋವಾಗಿತ್ತು. ಈ ಹಿನ್ನೆಲೆಯಲ್ಲಿ 2014 ರಲ್ಲೇ ಸೌದಿ, ಯುಎಇ ಮತ್ತು ಬಹರೈನ್ ದೇಶಗಳು ಖತರ್ ಜೊತೆಗಿನ ತಮ್ಮ ರಾಜ ತಾಂತ್ರಿಕ ಸಂಬಂಧಗಳನ್ನು ಮೊಟಕುಗೊಳಿಸಿದ್ದವು. ಪ್ರಸ್ತುತ ದೇಶಗಳು ಖತರ್‌ನ ಮುಂದೆ ಕೆಲವು ಬೇಡಿಕೆಗಳನ್ನಿಟ್ಟು ಅವುಗಳನ್ನು ಈಡೇರಿಸುವ ತನಕ ಅದರ ಜೊತೆ ಸಂಬಂಧ ಸುಧಾರಣೆ ಸಾಧ್ಯವಿಲ್ಲ ಎಂಬ ಎಚ್ಚರಿಕೆಯನ್ನು ನೀಡಿದವು.

ಪ್ರಮುಖ ಬೇಡಿಕೆಗಳು:
1. ಇರಾನ್ ಜೊತೆಗಿನ ರಾಜತಾಂತ್ರಿಕ ಸಂಬಂಧವನ್ನು ಕೆಳ ಮಟ್ಟಕ್ಕೆ ಇಳಿಸಬೇಕು.
2. ಟರ್ಕಿ ಜೊತೆಗಿನ ಮಿಲಿಟರಿ ಸಹಕಾರದ ಒಪ್ಪಂದಗಳನ್ನು ಕೈ ಬಿಡಬೇಕು.
3. ಮೂಲತಃ ಖತರ್‌ನಿಂದ ಕಾರ್ಯಾಚರಿಸುತ್ತಿರುವ ‘ಅಲ್ ಜಝೀರಾ’ ಮಾಧ್ಯಮ ಸಂಸ್ಥೆಯನ್ನು ಮುಚ್ಚಬೇಕು.
4. ಅಮೆರಿಕನ್ ಸರಕಾರವು ‘ಭಯೋತ್ಪಾದಕ’ ಎಂದು ಹೆಸರಿಸಿರುವ ಎಲ್ಲ ಸಂಘಟನೆಗಳನ್ನು, ಭಯೋತ್ಪಾದಕ ಎಂದು ಪರಿಗಣಿಸಿ ಅವುಗಳ ಜೊತೆ ಆ ಪ್ರಕಾರ ವ್ಯವಹರಿಸಬೇಕು.
5. ಬೇರೆ ಯಾವುದೇ ದೇಶದ ವ್ಯವಹಾರದಲ್ಲಿ ಹಸ್ತಕ್ಷೇಪ ನಡೆಸಬಾರದು.

ಖತರ್ ಸರಕಾರವು ಪ್ರಸ್ತುತ ದೇಶಗಳ ಯಾವ ಬೇಡಿಕೆಯನ್ನೂ ಗಂಭೀರವಾಗಿ ಪರಿಗಣಿಸಲಿಲ್ಲ. ಅತ್ತ ಆ ದೇಶಗಳು ಕೂಡ 2017ರ ತನಕವೂ ತಮ್ಮ ಬೆದರಿಕೆಗಳನ್ನು ಕಟ್ಟು ನಿಟ್ಟಾಗಿ ಅನುಷ್ಠಾನಿಸಲು ಹೊರಡಲಿಲ್ಲ. ಆದರೆ 2017ರಲ್ಲಿ ಪರಿಸ್ಥಿತಿ ಕೈ ಮೀರಿತು. ಈ ಬಾರಿ ತುಂಬಾ ಕಠಿಣ ಸ್ವರೂಪದ ಬಹಿಷ್ಕಾರ ಹೇರುವುದಕ್ಕೆ ಕಾರಣವಾದ ಸನ್ನಿವೇಶ ಬಹಳ ಸ್ವಾರಸ್ಯಕರವಾಗಿತ್ತು. 2017 ಮೇ ತಿಂಗಳಲ್ಲಿ ಆಗಿನ ಅಮೆರಿಕ ಅಧ್ಯಕ್ಷ ಟ್ರಂಪ್ ಸೌದಿ ಅರೇಬಿಯಕ್ಕೆ ಭೇಟಿ ನೀಡಿದ್ದರು. ಅದರ ಬೆನ್ನಿಗೆ ಕೆಲವು ಹ್ಯಾಕರ್‌ಗಳು ಖತರ್ ಸರಕಾರದ ಕೆಲವು ಅಧಿಕೃತ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿ, ಖತರ್‌ನ ದೊರೆಯ ಹೆಸರಲ್ಲಿ, ಅಮೆರಿಕವನ್ನು ನಿಂದಿಸಿ ಇರಾನ್ ಅನ್ನು ಹೊಗಳುವ ಕೆಲವು ಹುಸಿ ಹೇಳಿಕೆಗಳನ್ನು ಪ್ರಕಟಿಸಿದರು. ಖತರ್ ಸರಕಾರವು ಇದೆಲ್ಲ ಹ್ಯಾಕರ್‌ಗಳ ಕಿಡಿಗೇಡಿ ಕೃತ್ಯಗಳೆಂದು ಸ್ಪಷ್ಟೀಕರಿಸಿ ಅವುಗಳನ್ನು ತನ್ನ ವೆಬ್ ಸೈಟ್‌ಗಳಿಂದ ಕಿತ್ತು ಹಾಕಿದರೂ ಸೌದಿ ಮತ್ತು ಯುಎಇಯ ಹೆಚ್ಚಿನೆಲ್ಲಾ ಟಿವಿ ಚಾನೆಲ್ ಗಳಲ್ಲಿ ಪ್ರಸ್ತುತ ಸುಳ್ಳು ಹೇಳಿಕೆಗಳನ್ನು ವ್ಯಾಪಕವಾಗಿ, ಪದೇ ಪದೇ ಪ್ರಸಾರ ಮಾಡಲಾಯಿತು. ಈ ಕುರಿತು ಸ್ಪಷ್ಟೀಕರಣ ನೀಡಲು ಪ್ರಯತ್ನಿಸಿದ ಅಲ್ ಜಝೀರಾ ಟಿವಿ ಚಾನೆಲ್‌ಗೆ ಕೂಡ ಸೌದಿ, ಬಹರೈನ್‌ಮತ್ತು ಯುಎಇಗಳಲ್ಲಿ ನಿರ್ಬಂಧ ಹೇರಲಾಯಿತು. ಈ ರೀತಿ ಪ್ರಕ್ಷುಬ್ಧತೆ ಹೆಚ್ಚುತ್ತಾ ಹೋಗಿ ಕೊನೆಗೆ ಜೂನ್ 5 ರಂದು ಪ್ರಸ್ತುತ ನಾಲ್ಕು ದೇಶಗಳು ಖತರ್ ಮೇಲೆ ದಿಗ್ಬಂಧನ ಹೇರುವ ನಿರ್ಧಾರವನ್ನು ಪ್ರಕಟಿಸಿದವು.

ಈ ವರ್ಷ (2021) GCCಶೃಂಗ ಸಭೆಯಲ್ಲಿ ಸೌದಿ ಅರೇಬಿಯ, ಯುಎಇ, ಬಹರೈನ್ ಮತ್ತು ಈಜಿಪ್ಟ್ ಸರಕಾರಗಳು ಖತರ್ ಮೇಲಿನ ಎಲ್ಲ ದಿಗ್ಬಂಧನವನ್ನು ಹಿಂದೆಗೆದುಕೊಂಡು ಸ್ನೇಹ ಪೂರ್ಣ ರಾಜತಾಂತ್ರಿಕ ಸಂಬಂಧಗಳನ್ನು ಪುನಃಸ್ಥಾಪಿಸುವ ಒಪ್ಪಂದಕ್ಕೆ ಸಹಿ ಹಾಕಿದವು. ಹೀಗೆ ಔಪಚಾರಿಕವಾಗಿ ಸಂಬಂಧಗಳನ್ನು ಸರಿಪಡಿಸುವ ಪ್ರಕ್ರಿಯೆಯಲ್ಲಿ ಕುವೈತ್ ಮತ್ತು ಅಮೆರಿಕ ಸರಕಾರಗಳು ಮಹತ್ವದ ಪಾತ್ರ ನಿರ್ವಹಿಸಿದ್ದವು. ಸದ್ಯ ಖತರ್ ಮತ್ತು ಇತರ ಅರಬ್ ದೇಶಗಳ ನಡುವೆ ಸಂಬಂಧಗಳು ಔಪಚಾರಿಕವಾಗಿ ಸುಧಾರಿಸಿದ್ದರೂ ತಳಮಟ್ಟದಲ್ಲಿ ಧಾರಾಳ ಉದ್ವಿಗ್ನತೆ ಈಗಲೂ ಇದೆ.

ಕೆಲವು ಆಘಾತಕಾರಿ ಆಯಾಮಗಳು

ಅರಬ್ ದೇಶಗಳಿಗೆ ಮತ್ತು ಅಲ್ಲಿನ ಆಡಳಿತಗಾರ ರಿಗೆ ಕೋಪ ಬಂದರೆ ಅವರು ಅದೆಷ್ಟು ಭಯಾನಕ ರುದ್ರಾವತಾರಗಳನ್ನು ತಾಳುತ್ತಾರೆ ಎಂಬುದನ್ನು ನೋಡಲು ಬಯಸಿದ್ದವರೆಲ್ಲ ಖತರ್ ಮೇಲೆ ನಾಲ್ಕು ಅರಬ್ ದೇಶಗಳು ಬಹಿಷ್ಕಾರ ಹಾಕಿದ್ದ ದಿನಗಳಲ್ಲಿ ನೋಡಿ ಬಿಟ್ಟರು. ಆ ಮಟ್ಟದ ಪರಸ್ಪರ ದ್ವೇಷ, ಆಕ್ರೋಶ, ಪ್ರತೀಕಾರ ಭಾವ, ಮೊಂಡುತನವೆಲ್ಲ ಆ ಅವಧಿಯಲ್ಲಿ ಬಹಿಷ್ಕಾರಿಗಳು ಮತ್ತು ಬಹಿಷ್ಕೃತರಿಂದ ಪ್ರದರ್ಶಿತವಾಯಿತು. ಈ ಒಟ್ಟು ಬೆಳವಣಿಗೆಯನ್ನು ಫೆಲೆಸ್ತೀನ್‌ನ ಹಿನ್ನೆಲೆಯಲ್ಲಿ ನೋಡಿದರೆ ಮಾತ್ರ, ಬೇರೆಯೇ ಕೆಲವು ಅಂಶಗಳು ಬಹಳ ಉಜ್ವಲವಾಗಿ ಎದ್ದು ಕಾಣುತ್ತವೆ. ಉದಾ: ಸೌದಿ ಅರೇಬಿಯಾ ಮತ್ತದರ ಮಿತ್ರ ದೇಶಗಳು ಖತರ್ ವಿರುದ್ಧ ತಾವು ತೋರಿದ ಕೋಪತಾಪಗಳ ಒಂದಂಶವನ್ನು ಕೂಡಾ ಈವರೆಗಿನ ತಮ್ಮ ಇತಿಹಾಸದಲ್ಲೆಂದೂ ಇಸ್ರೇಲ್ ವಿರುದ್ಧ ತೋರಿರಲಿಲ್ಲ!

ಖತರ್ ಮೇಲೆ ದಿಗ್ಬಂಧನ ಹೇರಿದ ನಾಲ್ಕು ದೇಶಗಳ ಪೈಕಿ ಈಜಿಪ್ಟ್ ಸರಕಾರವಂತೂ 1979ರಲ್ಲೇ ಇಸ್ರೇಲ್ ಜೊತೆ ಪೂರ್ಣ ಪ್ರಮಾಣದ ರಾಜತಾಂತ್ರಿಕ ಸಂಬಂಧ ಸ್ಥಾಪಿಸಿಕೊಂಡಿದೆ. ಸ್ವತಃ ಖತರ್ ಮತ್ತು ಒಮಾನ್ ದೇಶಗಳು 1996ರಲ್ಲಿ ಇಸ್ರೇಲ್ ಜೊತೆ ಅಧಿಕೃತ ವ್ಯಾಪಾರ ಸಂಬಂಧಗಳನ್ನು ಸ್ಥಾಪಿಸಿಕೊಂಡಿವೆ. ವಿಪರ್ಯಾಸವೇನೆಂದರೆ, ಯುಎಇ ಮತ್ತು ಬಹರೈನ್ ಸರಕಾರಗಳು ತಾವು ಖತರ್ ಮೇಲೆ ದಿಗ್ಬಂಧನ ಹೇರಿದ್ದ ದಿನಗಳಲ್ಲೇ, ಅಂದರೆ 2020 ಸೆಪ್ಟಂಬರ್‌ನಲ್ಲಿ ಇಸ್ರೇಲ್ ಜೊತೆ ಬಹಿರಂಗ ಮತ್ತು ಅಧಿಕೃತ ರಾಜತಾಂತ್ರಿಕ ಸಂಬಂಧ ಸ್ಥಾಪನೆಯ ಒಪ್ಪಂದಕ್ಕೆ ಸಹಿ ಹಾಕುವುದರಲ್ಲಿ ಮಗ್ನರಾಗಿದ್ದವು! ಇಸ್ರೇಲ್ ಜೊತೆ ಬಹಿರಂಗ ಸ್ನೇಹದ ವಿಷಯದಲ್ಲಿ ಯುಎಇ ಮತ್ತು ಬಹರೈನ್ ಸರಕಾರಗಳನ್ನು ಮುಂದೆ ಕಳಿಸಿರುವ ಸೌದಿ ಅರೇಬಿಯ ಇಸ್ರೇಲ್ ಜೊತೆ ಸ್ವತಃ ತನ್ನ ಸ್ನೇಹವನ್ನು ಬಹಿರಂಗವಾಗಿ ಘೋಷಿಸಲು ಹೆಚ್ಚು ಸಮಯ ತೆಗೆದುಕೊಳ್ಳಲಿಕ್ಕಿಲ್ಲ ಎಂಬುದು ಇದೀಗ ಎಲ್ಲರ ಲೆಕ್ಕಾಚಾರವಾಗಿದೆ. ಜಗಳನಿರತರಾಗಿರುವ ಪ್ರಸ್ತುತ ಹಲವಾರು ದೇಶಗಳ ನಡುವೆ ಇರುವ ವ್ಯತ್ಯಾಸಗಳ ಬದಲು ಸಮಾನ ಅಂಶಗಳನ್ನು ನೋಡುವುದಾದರೆ ಸೌದಿ ಅರೇಬಿಯ, ಖತರ್, ಯುಎಇ ಮತ್ತು ಬಹರೈನ್ ಈ ಎಲ್ಲ ದೇಶಗಳೂ ಅಮೆರಿಕಕ್ಕೆ ಪರಮಾಪ್ತ ಸ್ಥಾನಮಾನವನ್ನು ನೀಡಿದ್ದು ಈ ಎಲ್ಲ ದೇಶಗಳಲ್ಲೂ ಅಮೆರಿಕದ ಬೃಹತ್ ಸೇನಾ ನೆಲೆಗಳಿವೆ ಎಂಬ ಅಂಶ ಗಮನಾರ್ಹವೆನಿಸುತ್ತದೆ. ವೈಚಿತ್ರ ಮತ್ತು ವೈರುಧ್ಯಗಳ ಈ ದೀರ್ಘ ಸರಣಿಯಲ್ಲಿ ಅತ್ಯಂತ ಆಘಾತಕಾರಿ ಎಂದು ಫೆಲೆಸ್ತೀನಿಗಳು ಗುರುತಿಸುವ ಅಂಶವೇನೆಂದರೆ, ಸೌದಿ ಮತ್ತು ಅದರ ಮಿತ್ರಕೂಟವು ‘ಹಮಾಸ್’ ಸಂಘಟನೆಯನ್ನು ಗುರಿ ಮಾಡುವ ವಿಷಯದಲ್ಲಿ ತನ್ನ ಸಾಕ್ಷಾತ್ ಇಸ್ರೇಲ್‌ನ ಏಜೆಂಟ್ ಎಂಬಂತೆ ವರ್ತಿಸುತ್ತಿವೆ. ಪಿಎಲ್‌ಒ ನಿಷ್ಕ್ರಿಯವಾದ ಬಳಿಕ ಆಕ್ರಮಿತ ಫೆಲೆಸ್ತೀನ್‌ನಲ್ಲಿ ಅಲ್ಲಿನ ಜನತೆಯ ಬೆಂಬಲದೊಂದಿಗೆ, ಅವರ ಹಕ್ಕುಗಳಿಗಾಗಿ ಮತ್ತು ಅವರ ವಿಮೋಚನೆಗಾಗಿ ಹೋರಾಡುತ್ತಿರುವ ಸಂಘಟನೆ ಹಮಾಸ್. ಸ್ವಾಭಾವಿಕವಾಗಿಯೇ, ಇಸ್ರೇಲ್ ಸರಕಾರವು, ತನಗೆ ಸವಾಲಾಗಿರುವ ಈ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆ ಎಂದು ಗುರುತಿಸುತ್ತದೆ. ಆದರೆ ಸೌದಿ ಅರೇಬಿಯ ಮತ್ತದರ ಮಿತ್ರ ದೇಶಗಳು ಕೂಡಾ ಹಮಾಸ್ ಅನ್ನು ಭಯೋತ್ಪಾದಕ ಎಂದು ಪರಿಗಣಿಸಿದರೆ ಮತ್ತು ಇದೇ ಧೋರಣೆ ಅನುಸರಿಸಬೇಕೆಂದು ಖತರ್‌ನಂತಹ ಇತರ ದೇಶಗಳನ್ನು ಆಗ್ರಹಿಸಿದರೆ, ಇಸ್ರೇಲ್ ಮತ್ತು ಈ ಸರಕಾರಗಳ ನಡುವೆ ಯಾವ ವ್ಯತ್ಯಾಸ ತಾನೇ ಉಳಿಯಿತು?

► ಹುಸಿ ನಿರೀಕ್ಷೆ ಬೇಡ


ಫೆಲೆಸ್ತೀನ್ ಎಂಬ ನಾಡಿನ ಜೊತೆ ಅರಬ್ ಮತ್ತು ಮುಸ್ಲಿಮ್ ಜನಸಾಮಾನ್ಯರಿಗೆ ಇರುವ ಅಸಾಮಾನ್ಯ, ಭಾವಾನಾತ್ಮಕ ನಂಟಿನಿಂದಾಗಿ ಯಾವುದೇ ಅರಬ್ ಅಥವಾ ಮುಸ್ಲಿಮ್ ಸರಕಾರವು ಅಧಿಕೃತವಾಗಿ ಫೆಲೆಸ್ತೀನ್ ವಿರುದ್ಧ ನಿಲುವು ತಾಳುವಂತಿಲ್ಲ. ಆದ್ದರಿಂದ ಸಂಪೂರ್ಣವಾಗಿ ಅಮೆರಿಕದ ಮಡಿಲಲ್ಲಿರುವ ಅರಬ್ ಲೀಗ್ ಅಥವಾ GCC ಸರಕಾರಗಳು ಕೂಡಾ ಫೆಲೆಸ್ತೀನ್ ವಿಮೋಚನೆ, ಮಸ್ಜಿದ್ ಅಲ್ ಅಕ್ಸಾ ವಿಮೋಚನೆ ಇತ್ಯಾದಿಗಳ ಬಗ್ಗೆ ಮಾತನಾಡುತ್ತಲೇ ಇರುತ್ತವೆ. ಆ ಕುರಿತು ಸೆಮಿನಾರಗಳನ್ನೂ ಆಯೋಜಿಸುತ್ತಲಿರುತ್ತವೆ. ಅಪರೂಪಕ್ಕೊಮ್ಮೆ ವಿಶ್ವ ಸಂಸ್ಥೆ ಮತ್ತಿತರ ವೇದಿಕೆಗಳಲ್ಲಿ ಇಸ್ರೇಲ್ ಅನ್ನು ಅತ್ಯುಗ್ರವಾಗಿ ಖಂಡಿಸುವ ಮತ್ತು ಇಸ್ರೇಲ್‌ಗೆ ಗಂಭೀರ ಎಚ್ಚರಿಕೆಗಳನ್ನು ನೀಡುವ ನಿರ್ಣಯ, ಗೊತ್ತುವಳಿ ಇತ್ಯಾದಿಗಳನ್ನು ಅಂಗೀಕರಿಸುತ್ತಲೂ ಇರುತ್ತವೆ. ಫೆಲೆಸ್ತೀನ್ ನಿರಾಶ್ರಿತರಿಗೆ ಒಂದಷ್ಟು ವಾರ್ಷಿಕ ಸಹಾಯಧನವನ್ನೂ ಒದಗಿಸುತ್ತಲಿರುತ್ತವೆ. ಈ ಮೂಲಕ ಆ ಸರಕಾರಗಳಿಗೆ ತಮ್ಮ ದೇಶದೊಳಗಿನ ವಿರೋಧಿಗಳ ಬಾಯಿ ಮುಚ್ಚಿಸಲು ಸಾಧ್ಯವಾಗುತ್ತದೆ. ಜೊತೆಗೆ ಅವು ಇಸ್ರೇಲ್ ಜೊತೆ ರಾಜತಾಂತ್ರಿಕ, ವಾಣಿಜ್ಯ ಮತ್ತಿತರ ಎಲ್ಲ ಬಗೆಯ ಸಂಬಂಧಗಳನ್ನು ಸ್ಥಾಪಿಸಿಕೊಳ್ಳುತ್ತವೆ ಮತ್ತು ಫೆಲೆಸ್ತೀನ್ ಪರವಾಗಿ ಹೋರಾಡುವ ಸಂಘಟನೆಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ಕರೆಯುತ್ತಲೂ ಇರುತ್ತವೆ. ಈ ಮೂಲಕ ಅವು ತಮ್ಮ ಪ್ರಭುಗಳನ್ನು ಪ್ರಸನ್ನಗೊಳಿಸುತ್ತವೆ. ಅತ್ತ, ಸಂಪೂರ್ಣವಾಗಿ ಅಮೆರಿಕದ ನಿಯಂತ್ರಣದಲ್ಲಿಲ್ಲದ ಇರಾನ್, ಟರ್ಕಿ ಮುಂತಾದ ದೇಶಗಳ ಸರಕಾರಗಳು ಒಂದು ಹೆಜ್ಜೆ ಮುಂದೆ ಹೋಗಿ, ತಮ್ಮ ದೇಶದಲ್ಲಿ ಫೆಲೆಸ್ತೀನ್ ನಿರಾಶ್ರಿತರಿಗೆ ಆಶ್ರಯ ಒದಗಿಸಿ, ಹಮಾಸ್‌ನಂತಹ ಸಂಘಟನೆಗಳಿಗೆ ಮಾತನಾಡಲು ಜಾಗತಿಕ ವೇದಿಕೆಗಳನ್ನೊದಗಿಸಿ, ಅವುಗಳಿಗೆ ಸೀಮಿತ ಸೈನಿಕ ನೆರವನ್ನೂ ನೀಡಿ ತಮ್ಮ ಜನತೆಯನ್ನು ಸಾಂತ್ವನಗೊಳಿಸಬಹುದು. ಇದರಾಚೆಗೆ ಪ್ರಸ್ತುತ ದೇಶಗಳು ಫೆಲೆಸ್ತೀನ್‌ಗಾಗಿ ಏನಾದರೂ ಮಾಡುವ ಸಾಧ್ಯತೆ ಕಡಿಮೆ. ಈ ಎಲ್ಲ ದೇಶಗಳಲ್ಲಿ ನಿಜಕ್ಕೂ ಜನರನ್ನು ಪ್ರತಿನಿಧಿಸುವ ಮತ್ತು ಅಮೆರಿಕದಂತಹ ದೈತ್ಯ ಶಕ್ತಿಗಳ ಪ್ರಭಾವದಿಂದ ಮುಕ್ತವಾದ ಸ್ವತಂತ್ರ, ಪ್ರಜಾಸತ್ತಾತ್ಮಕ ಸರಕಾರಗಳು ಸ್ಥಾಪಿತವಾದಾಗ ಮಾತ್ರ ಒಳ್ಳೆಯದೇನನ್ನಾದರೂ ನಿರೀಕ್ಷಿಸಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)