varthabharthi


ಅನುಗಾಲ

‘ಅರ್ತಿಕಜೆ’ಯೆಂಬ ಪುತ್ತೂರಿನ ಅಚ್ಚರಿ

ವಾರ್ತಾ ಭಾರತಿ : 1 Jul, 2021
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಅರ್ತಿಕಜೆ ಯೋಗ್ಯ ಶಿಕ್ಷಕರಾಗಿ ಹೆಸರು ಗಳಿಸಿದ್ದಾರೆ. ದುಡಿಯುವವರು ಬೇರೆ; ಸೇವೆ ಸಲ್ಲಿಸುವವರು ಬೇರೆ. ದುರ್ಬಳಕೆಯಿಂದಾಗಿ ‘ಸೇವೆ’ಯೆಂಬ ಪದ ಸವಕಲಾಗುತ್ತಿರುವಾಗ ನೈಜ ಸೇವಕರ ಬೆಳಕು ಮಸುಕಾಗುತ್ತದೆ. ಅರ್ತಿಕಜೆ ಮನಸ್ಸು ಮಾಡಿದ್ದರೆ ಪಿಎಚ್.ಡಿ. ಪದವಿಯನ್ನು ಪಡೆಯಬಹುದಿತ್ತಾದರೂ ಆ ಕಡೆ ದೃಷ್ಟಿಯನ್ನು ಹರಿಸಲೇ ಇಲ್ಲ. ಆದರೆ ಅದಕ್ಕಿಂತ ಬಹಳ ಎತ್ತರದಲ್ಲಿದ್ದಾರೆ. ತನ್ನ ಏಳಿಗೆಯನ್ನು ಬದಿಗಿಟ್ಟು ವಿದ್ಯಾರ್ಥಿ ಸಮುದಾಯದ ಹಿತ ಮತ್ತು ಆಸಕ್ತಿಗಳನ್ನು ಗಣಿಸುವವರಿಗೆ ಇಂತಹ ಹೆಚ್ಚುವರಿ ಪದವಿಗಳ, ಡಿಗ್ರಿಗಳ ಅಗತ್ಯವಿರುವುದಿಲ್ಲ.


ಜನಪ್ರಿಯತೆಯೇ ಶ್ರೇಷ್ಠತೆಯೆಂಬ ‘ವರ್ತಮಾನ’ದ ವಾತಾವರಣದಲ್ಲಿ ತಮ್ಮ ಪಾಡಿಗೆ ತಾವು ನಂಬಿದ ಭಾಷೆ, ಸಾಹಿತ್ಯ, ಸಂಸ್ಕೃತಿಯೇ ಮುಂತಾದ ಜ್ಞಾನಕೋಶಗಳ ಪರಿಚಾರಕರಾಗಿ ತೆರೆಮರೆಯಲ್ಲಿ ದುಡಿದ/ವ ಅನೇಕರು ನಮ್ಮ ಸಮಾಜದಲ್ಲಿದ್ದಾರೆ. ಅವರು ಪ್ರಚಾರ, ಪ್ರಸಿದ್ಧಿ, ಪ್ರತಿಷ್ಠೆಗಳ ಬೆನ್ನುಹತ್ತುವುದನ್ನು ಆರಿಸಿಕೊಂಡಿದ್ದರೆ ಅಥವಾ ಕಲಿತಿದ್ದರೆ ಎಲ್ಲರೂ ಬಲ್ಲವರಾಗಿರುತ್ತಿದ್ದರು. ಈ ‘ಎಲ್ಲರೂ ಬಲ್ಲ’ವರನ್ನು ಅನೇಕ ಬಾರಿ ನಾವು ‘ಎಲ್ಲವನ್ನೂ ಬಲ್ಲವರು’ ಎಂದು ತಪ್ಪುತಿಳಿಯುತ್ತೇವೆ. ನಾಲ್ಕಾರು ಮಂದಿ ಪಟ್ಟಭದ್ರರು ಮಾಡಿದ ತೀರ್ಮಾನವೇ ಸ್ವೀಕಾರಾರ್ಹವೆಂದು ಸಮಾಜ ತಿಳಿಯುವುದು ರಾಜಕೀಯ ಮಾತ್ರವಲ್ಲ, ಇತರ ಸಂವೇದನಾ ಕ್ಷೇತ್ರಗಳ ಬೆಳವಣಿಗೆಯನ್ನೂ ಕುಂಠಿತಗೊಳಿಸಿದೆ. ವಿಷಾದಕರವಾದ ಈ ಮಾತುಗಳನ್ನು ಹೇಳಬೇಕಾದ ಅವಶ್ಯಕತೆ ಬರುವುದು ಇಲ್ಲಿ ಉಲ್ಲೇಖಿಸಿದ ಅರ್ತಿಕಜೆಯವರಂತಹ ಕೆಲವು ಪ್ರಾತಃಸ್ಮರಣೀಯರನ್ನು ನೆನಪಿಸಿಕೊಂಡಾಗ.

ಪುತ್ತೂರು ತಾಲೂಕು ಬಡಗನ್ನೂರಿನ ಅರ್ತಿಕಜೆಯಲ್ಲಿ ವಿ.ಬಿ.ಅರ್ತಿಕಜೆ (ವೆಂಕಟರಮಣ ಭಟ್) ಜೂನ್ 29, 1943ರಂದು ಹುಟ್ಟಿದವರು. ಈಶ್ವರಮಂಗಲದಲ್ಲಿ ಪ್ರೌಢ ಶಿಕ್ಷಣದವರೆಗೆ ಓದಿ ಆನಂತರ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಓದಿ 1965ರಲ್ಲಿ ಬಿ.ಎ.ಯನ್ನು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಮೊದಲ ರ್ಯಾಂಕಿನೊಂದಿಗೆ ಪಾಸಾದರು. ಆನಂತರ ಪುತ್ತೂರಿನ ಸಂತ ಫಿಲೋಮಿನಾ ಹೈಸ್ಕೂಲಿನಲ್ಲಿ ಒಂದು ವರ್ಷ (1965-66) ಶಿಕ್ಷಕರಾಗಿ ದುಡಿದ ಬಳಿಕ ಮೈಸೂರು ವಿಶ್ವವಿದ್ಯಾನಿಲಯದ ಎಂ.ಎ. (ಇತಿಹಾಸ) ಪದವಿಗೆ ಸೇರಿ 1968ರಲ್ಲಿ ಪ್ರಥಮ ರ್ಯಾಂಕಿನೊಂದಿಗೆ ಶಿಕ್ಷಣವನ್ನು ಪೂರೈಸಿದರು. 1968ರಿಂದ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಜೂನ್ 30, 2001ರಂದು ನಿವೃತ್ತರಾದರು. ಈಗ 78 ವರ್ಷಗಳ ಅರ್ತಿಕಜೆ ಪತ್ನಿ, ಮಗ-ಮಗಳು ಮತ್ತವರ ಸಂಸಾರ ಹೀಗೆ ಸಂತೃಪ್ತ ಕುಟುಂಬಿ.

ಜೀವನಚರಿತ್ರೆ ಮುಖ್ಯವಲ್ಲ. ಬರಿಯ ಉದ್ಯೋಗ, ವೃತ್ತಿ, ಬರಹದಿಂದ ಒಬ್ಬ ವ್ಯಕ್ತಿ ಮುಖ್ಯವಾಗುವುದಿಲ್ಲ. ಆದರೆ ಬದುಕಿನ ಅರ್ಥವ್ಯಾಪ್ತಿಯನ್ನು ತಿಳಿದು ವ್ಯವಹರಿಸುವವರು ಮುಖ್ಯವೂ ಅಮೂಲ್ಯವೂ ಆಗುತ್ತಾರೆ. ಅರ್ತಿಕಜೆ ಯೋಗ್ಯ ಶಿಕ್ಷಕರಾಗಿ ಹೆಸರು ಗಳಿಸಿದ್ದಾರೆ. ದುಡಿಯುವವರು ಬೇರೆ; ಸೇವೆ ಸಲ್ಲಿಸುವವರು ಬೇರೆ. ದುರ್ಬಳಕೆಯಿಂದಾಗಿ ‘ಸೇವೆ’ಯೆಂಬ ಪದ ಸವಕಲಾಗುತ್ತಿರುವಾಗ ನೈಜ ಸೇವಕರ ಬೆಳಕು ಮಸುಕಾಗುತ್ತದೆ. ಅರ್ತಿಕಜೆ ಮನಸ್ಸು ಮಾಡಿದ್ದರೆ ಪಿಎಚ್. ಡಿ. ಪದವಿಯನ್ನು ಪಡೆಯಬಹುದಿತ್ತಾದರೂ ಆ ಕಡೆ ದೃಷ್ಟಿಯನ್ನು ಹರಿಸಲೇ ಇಲ್ಲ. ಆದರೆ ಅದಕ್ಕಿಂತ ಬಹಳ ಎತ್ತರದಲ್ಲಿದ್ದಾರೆ. ತನ್ನ ಏಳಿಗೆಯನ್ನು ಬದಿಗಿಟ್ಟು ವಿದ್ಯಾರ್ಥಿಸಮುದಾಯದ ಹಿತ ಮತ್ತು ಆಸಕ್ತಿಗಳನ್ನು ಗಣಿಸುವವರಿಗೆ ಇಂತಹ ಹೆಚ್ಚುವರಿ ಪದವಿಗಳ, ಡಿಗ್ರಿಗಳ ಅಗತ್ಯವಿರುವುದಿಲ್ಲ. ಅವೀಗ ಭಡ್ತಿ ಮತ್ತು ಹೆಚ್ಚಿನ ಸಂಬಳ ಸವಲತ್ತುಗಳಿಗಾಗಿ ಬಿಕರಿಯಾಗುತ್ತಿವೆ. ಜಿ.ಪಿ.ರಾಜರತ್ನಂ ಹೇಳಿದಂತೆ ಡಿಗ್ರಿಯೇ ಮುಖ್ಯವಾದರೆ ಉಷ್ಣತಾಮಾಪಕಕ್ಕಿರುವಷ್ಟು ಡಿಗ್ರಿ ಬೇರೆಲ್ಲೂ ಇಲ್ಲ.

ಅರ್ತಿಕಜೆ ರಾಜ್ಯದ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಬರೆದ ಪಠ್ಯಪುಸ್ತಕಗಳು 1973ರಿಂದ 2000ದ ವರೆಗೆ ಪಠ್ಯವಾಗಿ ಪುರಸ್ಕೃತವಾಗಿದ್ದವು. ಶುದ್ಧ ಅಕಾಡಮಿಕ್ ಶ್ರದ್ಧೆಯಿಂದ ತನ್ನ ಕಾಲೇಜಿನ ವಿದ್ಯಾರ್ಥಿಗಳಿಗೆ 1970ರಿಂದ 2008ರ ವರೆಗೆ 38 ವರ್ಷ ಉಚಿತವಾಗಿ ಪತ್ರಿಕೋದ್ಯಮದ ತರಬೇತಿ ನೀಡಿದರು. ಸಂಸ್ಕೃತ, ಕನ್ನಡ, ಇಂಗ್ಲಿಷ್, ಹಿಂದಿ ಭಾಷೆ ಮತ್ತು ಸಾಹಿತ್ಯವನ್ನು ಬೇಕಷ್ಟು ಓದಿಕೊಂಡವರು, ಈ ಇತಿಹಾಸತಜ್ಞ. ಸರಳತೆ ನಡೆ ಮತ್ತು ನುಡಿಯಲ್ಲಿ ಬಂದಾಗ ಮಾತ್ರ ಅದಕ್ಕೆ ಮಹತ್ವ. ಪರಿಸರದ ಬಗ್ಗೆ ಮಾತನಾಡುತ್ತ ಸಿಗರೇಟು ಸೇದುವವರಿಂದ, ಬಡತನದ ಬಗ್ಗೆ ಮಾತನಾಡುತ್ತ ಪಂಚತಾರಾ ಸೌಕರ್ಯಗಳನ್ನು ಬಯಸುತ್ತ, ಕನ್ನಡದ ಬಗ್ಗೆ ಪ್ರೀತಿ ತೋರುತ್ತ ವಿದೇಶಗಳಲ್ಲಿ ತಮಗೂ ತಮ್ಮ ಮಕ್ಕಳಿಗೂ ಅವಕಾಶಗಳನ್ನು ಕಾಯುತ್ತ, ಪ್ರಶಸ್ತಿಗಳತ್ತಲೇ ತದೇಕಚಿತ್ತದಿಂದ ಕಾಯುತ್ತ ಕುಳಿತಿರುವವರಿಂದ ಸರಳತೆಯನ್ನು ಬಯಸುವುದು, ಕಾಣುವುದು ಮೂರ್ಖತನ. ಅರ್ತಿಕಜೆಯವರು ತಮ್ಮ ರ್ಯಾಂಕುಗಳನ್ನು ಬದಿಗಿರಿಸಿ ತನ್ನ ಸೇವಾವಧಿಯುದ್ದಕ್ಕೂ ಮತ್ತು ಆನಂತರವೂ ಪಂಚೆ ಮತ್ತು ಷರ್ಟಿನಲ್ಲೇ ಕಾಲೇಜಿಗೆ ಬರುತ್ತಿದ್ದದ್ದು ಮಾತ್ರವಲ್ಲ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಕಾಣಿಸುತ್ತಿದ್ದದ್ದು ಮೊದಮೊದಲು ಆಘಾತಕರವಾಗಿ, ಹಾಸ್ಯಮಯವಾಗಿ ಕಾಣಿಸುತ್ತಿದ್ದರೂ ಬಳಿಕ ಹೀಗೂ ಇರಬಹುದೇ ಎಂಬ ಬೆರಗನ್ನು ಸೃಷ್ಟಿಸಿದ್ದವು. (1980ರ ದಶಕದಲ್ಲಿ ಮಡಿಕೇರಿಯ ಸರಕಾರಿ ಕಾಲೇಜಿನ ಭೌತಶಾಸ್ತ್ರ ವಿಭಾಗದ ಪ್ರೊ.ಬಾಳಿಗಾ, ರಸಾಯನಶಾಸ್ತ್ರ ವಿಭಾಗದ ಪ್ರೊ.ವೆಂಕಟಾಚಲಶೆಟ್ಟಿ ಇವರೂ ಇಂತಹ ಉಡುಪಿನಲ್ಲೇ ಕಾಲೇಜಿಗೆ ಬರುತ್ತಿದ್ದುದನ್ನು ಕಂಡಿದ್ದೇನೆ.)

ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ‘ನವಭಾರತ’ ದಿನಪತ್ರಿಕೆ, ಈಗ ಪ್ರಕಟವಾಗುತ್ತಿರುವ ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’, ‘ಹೊಸದಿಗಂತ’, ‘ಕೆನರಾ ಟೈಮ್ಸ್’, ‘ಕನ್ನಡ ಜನಾಂತರಂಗ’ ಮುಂತಾದ ಪತ್ರಿಕೆಗಳ ವರದಿಗಾರರಾಗಿಯೂ 1979ರಿಂದ 2000ದ ವರೆಗೆ ಬೇರೆಬೇರೆ ಕಾಲದಲ್ಲಿ ಅರ್ತಿಕಜೆ ಸೇವೆ ಸಲ್ಲಿಸಿದ್ದಾರೆ. ಕನ್ನಡದ ಅನೇಕ ದೊಡ್ಡ-ಸಣ್ಣ ಪತ್ರಿಕೆಗಳಿಗೆ ಅಂಕಣಗಳನ್ನೂ ಬರೆದಿದ್ದಾರೆ. ಅರ್ತಿಕಜೆಯವರು 1960ರ ದಶಕದಲ್ಲೇ ಗದ್ಯ-ಪದ್ಯಗಳನ್ನು ಬರೆಯುತ್ತಿದ್ದರು. ಆಗ ಸಾಹಿತಿಗಳ ಕಿಟಿಕಿಯಂತಿದ್ದ ‘ಗೋಕುಲ’, ‘ಕೈಲಾಸ’, ‘ತಾಯಿನಾಡು’ ಮುಂತಾದ ಪತ್ರಿಕೆಗಳಲ್ಲಿ ಅವರ ಕವಿತೆಗಳು ಪ್ರಕಟವಾಗುತ್ತಿದ್ದವು. ಅದರಲ್ಲಿ ಆ ಕಾಲಕ್ಕೆ ಸುಬ್ರಾಯ ಚೊಕ್ಕಾಡಿ ಮುಂತಾದವರು ಕನ್ನಡದ ಕಾವ್ಯ ಗಣ್ಯರೆಂದು ಪ್ರಸಿದ್ಧರಾದರು. ಆದರೆ ಅರ್ತಿಕಜೆಯವರು ಆ ದಾರಿಯಲ್ಲಿ ಯಾಕೋ ಮುಂದುವರಿಯಲು ಮನಸ್ಸು ಮಾಡಲಿಲ್ಲ. ಬರೆಯುವುದಕ್ಕೆ ಶ್ರೇಷ್ಠತೆಯ ದಾಹದ ಒತ್ತಡವೂ ಬೇಕೇನೋ? ಅವರು ತನ್ನ ಉದ್ಯೋಗ, ಸೇವಾ ಪ್ರವೃತ್ತಿ, ಇವುಗಳಿಗೆ ಆದ್ಯತೆಯನ್ನು ನೀಡಿದರು. ತನ್ನ ಎಳ್ಗೆಗಿಂತ ಇತರರ ಏಳ್ಗೆಗೆ ದುಡಿದರು. ಇದರಿಂದಾಗಿ ಅನೇಕ ಶಿಲ್ಪಗಳು ನಿರ್ಮಾಣವಾದವು. ಅರ್ತಿಕಜೆಯವರು ನಿವೃತ್ತಿಯ ಆನಂತರ ಬರೆಯುತ್ತಲೇ ಬಂದರು. ಮುಖ್ಯವಾಗಿ ಆತ್ಮಕಥನ ‘ನೂರೆಂಟು ನೆನಪುಗಳು’ (2009), ಅಂಕಣ ಬರಹಗಳ ಸಂಗ್ರಹ ‘ಹೀಗೊಂದು ವೃತ್ತಾಂತ’ (2003) ಮತ್ತು ‘ಹೊಸ ಮಾರ್ದನಿ’ (2013), 500 ಗಾದೆಗಳ ವಿಶ್ಲೇಷಣೆಯ ‘ಚಿಂತನ ಗಾಥಾ’ (2017), ಒಟ್ಟು 774 ಲೌಕಿಕನ್ಯಾಯಗಳ ಕುರಿತ ಲೇಖನಗಳನ್ನೊಳಗೊಂಡ ‘ನ್ಯಾಯವಲ್ಲರಿ’ (2017) ಮತ್ತು ‘ನ್ಯಾಯಮಂಜರಿ’ (2018) ಮುಂತಾದ ಕೃತಿಗಳನ್ನು ಪ್ರಕಟಿಸಿದರು.

ಸಾಮಾನ್ಯವಾಗಿ ಪ್ರಗತಿಪರರು, ಬುದ್ಧಿಜೀವಿಗಳು, ಜಾತ್ಯತೀತರು ಎಂದೆಲ್ಲ ಹಣೆಪಟ್ಟಿ ಕಟ್ಟಿಕೊಂಡವರು ಇಚ್ಛಾಪೂರ್ವಕವಾಗಿಯೋ ಅನಿವಾರ್ಯವಾಗಿಯೋ ಧರ್ಮಗ್ರಂಥಗಳನ್ನು ನಿರ್ಲಕ್ಷಿಸುವುದು ಮಾತ್ರವಲ್ಲ, ಟೀಕಿಸುತ್ತಾರೆ ಕೂಡ. ಅವು ಬ್ರಾಹ್ಮಣ ಗ್ರಂಥಗಳೆಂದೂ ಪ್ರತಿಗಾಮಿ ಬೋಧನೆಯವೆಂದೂ ತಿಳಿಯುವವರೇ ಹೆಚ್ಚು. ರಾಮಾಯಣ ಮಹಾಭಾರತಗಳನ್ನು ಧರ್ಮಗ್ರಂಥಗಳೆಂದು ಕಾಣುವುದು ಹೋಗಲಿ ಸಾಹಿತ್ಯಕೃತಿಗಳೆಂದೂ ಗೌರವಿಸದೆ ಕೋಮುಗ್ರಂಥಗಳೆಂದು ಗ್ರಹಿಸುತ್ತಾರೆ. ರಾಮ ಕ್ಷತ್ರಿಯನೆಂದು, ವಾಲ್ಮೀಕಿ ಬೇಡನೆಂದು, ಕೃಷ್ಣ ಯಾದವನೆಂದು, ವ್ಯಾಸರು ಮೊಗವೀರನೆಂದು ತಾಳಿಕೊಳ್ಳುವುದಿಲ್ಲ. ಅರ್ತಿಕಜೆಯವರು ಇಂತಹ ಪುರಾಣಗಳನ್ನೂ ಜ್ಞಾನಶಾಖೆಯೆಂದು ತಿಳಿಯುವ ಪೂರ್ಣಕುಂಭ. ಪೌರಾಣಿಕ ಕಾವ್ಯಭಾಗಗಳನ್ನು ಬೇಂದ್ರೆ, ಪುತಿನ, ಎಚ್‌ಎಸ್‌ವಿ ಮುಂತಾದವರು ಕನ್ನಡಕ್ಕೆ ತಂದಂತೆ ಗೋಸ್ವಾಮಿತುಲಸೀದಾಸರ ಶ್ರೀಹನುಮಾನ್ ಚಾಲೀಸಾ, ವ್ಯಾಸಭಾರತದೊಳಗಣ ವಿಷ್ಣುಸಹಸ್ರನಾಮಗಳನ್ನು ಕನ್ನಡ ಪದ್ಯರೂಪಕ್ಕಿಳಿಸಿದ್ದಾರೆ.

ಚುಟುಕಗಳನ್ನೂ ಬರೆದಿದ್ದಾರೆ; ತಮ್ಮ ಮನೆಮಾತಾದ ಹವ್ಯಕಕನ್ನಡದಲ್ಲೂ ಗದ್ಯ-ಪದ್ಯಗಳನ್ನು ಬರೆದಿದ್ದಾರೆ. ಅರ್ತಿಕಜೆಯವರ ಒಂದು ಅಮೂಲ್ಯ ಕೃತಿ ‘ಕಥಾಕಿರಣ’ (2017). ಇದರಲ್ಲಿ 500 ಪ್ರೇರಕ ಕತೆಗಳಿವೆ. ಇವು ಪುಟ್ಟ ಮತ್ತು ಅತೀ ಪುಟ್ಟಕತೆ/ಪ್ರಸಂಗ/ಘಟನೆಗಳ ಗೊಂಚಲು. ಸರಳ, ನೇರ ಸಂಕ್ಷಿಪ್ತ ನಿರೂಪಣೆ. ಇವು ಝೆನ್ ಕತೆಗಳ ಮಾದರಿಯವು; ಇತಿಹಾಸ, ಪುರಾಣ, ನಮ್ಮ ಸುತ್ತಲಿನ ವಿದ್ಯಮಾನಗಳು, ಸಂಬಂಧಗಳು, ಹೀಗೆ ಬದುಕಿನ ವಿವಿಧ ಮಜಲುಗಳನ್ನು ದರ್ಶಿಸುತ್ತವೆ; ಗಾತ್ರದ ಹೊರತು ಆಳ, ವಿಸ್ತಾರ ವ್ಯಾಪ್ತಿಯಲ್ಲಿ ಮಾಸ್ತಿಯವರ ಕೆಲವು ಸಣ್ಣಕತೆಗಳನ್ನು ಹೋಲುತ್ತವೆ. ವ್ಯತ್ಯಾಸವೆಂದರೆ ಇವು ಘಟನೆಗಳನ್ನು ಹೇಳಿ ಮುಗಿಸುತ್ತವೆ; ತೀರ್ಪು ನೀಡುವುದಿಲ್ಲ. ಮಾಸ್ತಿ ಅಂತಹ ಘಟನೆಗಳನ್ನು ಕತೆಯಾಗಿ ಹಿಗ್ಗಿಸಿ ತಮ್ಮ ಒಲವನ್ನು ಹೇಳುವುದಿಲ್ಲವೆನ್ನುತ್ತಲೇ ಹೇಳುತ್ತಾರೆ. ಅರ್ತಿಕಜೆ ನನಗೆ 8ನೇ ತರಗತಿಯಲ್ಲಿ ಕ್ಲಾಸ್‌ಟೀಚರ್ ಆಗಿದ್ದರು. ನನಗೆ ನೆನಪಿರುವಂತೆ ನಮಗೆ ಕನ್ನಡ, ಇಂಗ್ಲಿಷ್, ಇತಿಹಾಸ ಮತ್ತು ಹಿಂದಿಯನ್ನೂ ಅವರು ಪಾಠ ಮಾಡುತ್ತಿದ್ದರು. ಅವರ ಅಭಿನಂದನಾ ಗ್ರಂಥ ‘ಅರ್ತಿ’ (2009) ಯಲ್ಲಿ ನಾನು ‘ಅರ್ತಿಕಜೆ ಎಂಬ ಪುಟ್ಟ ಬೆಳಕಿನ ಬದುಕು’ ಎಂಬ ಲೇಖನವನ್ನು ಬರೆದಿದ್ದೆ. ಅದು ಶಿಷ್ಯನೊಬ್ಬ ಗುರುವಿನ ಕುರಿತು ಬರೆದ ಆಪ್ತಭಾವದ ಗುರುತು. ಅದಕ್ಕವರು ಪೋಸ್ಟ್‌ಕಾರ್ಡಿನಲ್ಲಿ ಹೀಗೊಂದು ಚೌಪದಿಯನ್ನು ಬರೆದಿದ್ದರು: ಅರ್ತಿಯಲಿ ನಿಮ್ಮ ಲೇಖನವಿಹುದ ನೋಡಿ ಹರಿದಿತ್ತು ಸಂತೋಷ ಬಾಷ್ಪಗಳ ಕೋಡಿ ಹೃದಯ ತುಂಬಿತು ಮೌನ ಬಂತು ಬಳಿ ಸಾರಿ ನಮನವೆನ್ನುವುದೊಂದೆ ನನಗುಳಿದ ದಾರಿ॥

ಬಡತನ ಸಿರಿತನ ಒಬ್ಬ ವ್ಯಕ್ತಿಯ ಬದುಕಿನಲ್ಲಿ ಮುಖ್ಯವೇ ಅಲ್ಲ. ಯಾವ ಸಾಹಿತಿಯ ಆತ್ಮಕಥನವನ್ನೋದಿದರೂ ತಾನೆಷ್ಟು ಬಡವನಾಗಿದ್ದೆನೆಂದು ಮತ್ತು ಬದುಕಿನಲ್ಲಿ ಮೇಲೆ ಬರುವುದಕ್ಕೆ ಎಷ್ಟು ಕಷ್ಟಪಡಬೇಕಾಯಿತೆಂದು ವಿವರಿಸುವುದಕ್ಕೇ ಸಾಕಷ್ಟು ಶ್ರಮ ವ್ಯಯಿಸುತ್ತಾರೆ. (ಪರೀಕ್ಷೆಗೆ ಕಷ್ಟಪಟ್ಟು ಓದಿದ್ದೇನೆ ಎಂದು ಬರೆದುಕೊಂಡವರೂ ಇದ್ದಾರೆ!) ಬಡತನದ ಬಗ್ಗೆ ತಮ್ಮ ಆತ್ಮಕಥನದಲ್ಲಿ ಅವರು ಹೇಳುವುದು ಹೀಗೆ: ‘‘ಬಡತನ ಎನ್ನುವುದು ಅಂದು ನಮಗೆ ಮಾತ್ರವಲ್ಲ, ಊರಿನ ಜನರಿಗೆಲ್ಲ ರೂಢಿಯಾಗಿ ಹೋಗಿತ್ತು. ಆದ್ದರಿಂದ ಅದರ ಬಗೆಗೆ ಬೇಸರಪಡುವ ಬದಲು ಹೊಂದಿಕೊಂಡು ಹೋಗುವುದೇ ಲೇಸೆಂದು ಬಗೆದವರೇ ಹೆಚ್ಚು ಮಂದಿ’’. ‘ಅಭಾವ ವೈರಾಗ್ಯ’ ಎಂಬ ಇನ್ನೊಂದು ಭಾಗದಲ್ಲಿ ಅವರು ತಮ್ಮ ತಾಯಿಯ ಬಗ್ಗೆ ಹೀಗೆ ಬರೆಯುತ್ತಾರೆ: ‘‘ಊಟೋಪಚಾರಗಳು ಗೃಹಿಣಿಯ ಹೊಣೆಯಾದ್ದರಿಂದ ತಾಯಿಯವರು ಉಳಿದೆಲ್ಲರ ಊಟವಾಗದೆ ಉಣ್ಣುತ್ತಿರಲಿಲ್ಲ.

ಕೆಲವೊಮ್ಮೆ ಅವರ ಪಾಲಿಗೆ ಯಾವ ಪದಾರ್ಥಗಳೂ ಮಿಗುತ್ತಿರಲಿಲ್ಲ. ಮಡಕೆಯ ತಳಭಾಗದಲ್ಲಿ ಬಾಕಿಯಾದ ಅನ್ನ, ಮಜ್ಜಿಗೆ ಮತ್ತು ಉಪ್ಪಿನಕಾಯಿ ಇಷ್ಟೇ ಸಿಗುತ್ತಿತ್ತು. ವಿಶೇಷ ತಿನಿಸುಗಳನ್ನು ತಯಾರಿಸಿದ ದಿನಗಳಲ್ಲಂತೂ ಉಪವಾಸವೇ ಗತಿಯಾಗಿದ್ದು ಉಂಟು’’. ಇಂತಹ ಸ್ಥಿತಿಯನ್ನೂ ಲಲಿತವಾಗಿ ಅವರು ಹೀಗೆ ನಿರೂಪಿಸುತ್ತಾರೆ: ‘‘ಒಮ್ಮೆ ಅಪರೂಪದ ನೆಂಟರೊಬ್ಬರು ಬಂದ ಕಾರಣ ತಾಯಿ ಉದ್ದಿನ ದೋಸೆ ಮಾಡಿದ್ದರು. ಅದಕ್ಕೆ ರುಚಿ ಬರಲೆಂದು ಸಿಹಿ ಚಟ್ನಿ ತಯಾರಿಸಲಾಗಿತ್ತು. ಸಾವಿತ್ರಿ ಅಕ್ಕನ ಪಾಕ ಭಾರೀ ಚೆನ್ನಾಗಿದೆ. ಭಲೇ, ಭೇಷ್ ಎನ್ನುತ್ತಾ ಫಲಾಹಾರ ಮುಂದುವರಿಸಿದ ಬಂಧು ದೋಸೆ ಉಳಿಯಿತೆಂದು ಚಟ್ನಿಯನ್ನೂ, ಚಟ್ನಿ ಮಿಕ್ಕಿತೆಂದು ದೋಸೆಯನ್ನೂ ಹಾಕಿಸಿಕೊಳ್ಳುತ್ತಾ ಹೊಟ್ಟೆ ತುಂಬಿಸಿಕೊಂಡು ಮೇಲೆದ್ದಾಗ ದೋಸೆಯ ಹಿಟ್ಟೂ ಖಾಲಿಯಾಗಿತ್ತು, ಚಟ್ನಿಯ ಪಾತ್ರೆಯೂ ಸ್ವಚ್ಛವಾಗಿತ್ತು!’’

ಅರ್ತಿಕಜೆ ನಿಜಾರ್ಥದಲ್ಲಿ ಅರಾಜಕೀಯರು. ಈವರೆಗೂ ಜಾತಿ-ಮತ-ಪಂಥಗಳನ್ನು ಲಕ್ಷಿಸದೆ ಬದುಕಿದವರು. ಇತರ ಅನೇಕ ಬುದ್ಧಿವಂತರಂತೆ ಗಂಟೆಗಟ್ಟಲೆ ಒಣಹರಟೆಯಲ್ಲಿ ಮಗ್ನರಾಗುವವರಲ್ಲ. ಮಿತಭಾಷಿ; ಹಿತಭಾಷಿ. ಊರ-ಪರವೂರ ಎಲ್ಲ ಸಾಹಿತ್ಯ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಶ್ರದ್ಧೆಯಿಂದ ಭಾಗವಹಿಸುವವರು. ‘ಶ್ರದ್ಧೆ’ ಏಕೆಂದರೆ ಅವರವರ ಭಾಷಣಗಳಿಗೆ ಬಂದು ಅದಾದೊಡನೆ ತೆರಳುವವರೇ ಹೆಚ್ಚಿರುವಾಗ ಪೂರ್ಣ ಉಪಸ್ಥಿತಿಯೇ ಒಂದು ಅಪವಾದ! ಪುತ್ತೂರು ಮತ್ತು ಸುತ್ತಮುತ್ತಲಿನ ಎಲ್ಲ ಸಂಘಟನೆಗಳಲ್ಲಿ ಗುರುತಿಸಿಕೊಂಡವರು. ತಮ್ಮ ಆಪ್ತೇಷ್ಟರೊಂದಿಗೆ ಪುತ್ತೂರಿನ ಸಾಹಿತ್ಯ-ಸಂಸ್ಕೃತಿಯ ತೇರನ್ನೆಳೆಯುತ್ತಲೇ ಬಂದವರು. ಕಾರಂತರು ಪುತ್ತೂರು ಬಿಟ್ಟ ಮೇಲೂ ಸಾಂಸ್ಕೃತಿಕ ಜಗತ್ತು ಬರಡಾಗದಂತೆ ನೀರೆರೆದವರು. ವಿ.ಗ.ನಾಯಕರು 2009ರಲ್ಲಿ ಅರ್ತಿಕಜೆ ಅಭಿನಂದನಾ ಗ್ರಂಥ ‘ಅರ್ತಿ’ಯನ್ನು ಸಂಪಾದಿಸಿ ಪ್ರಕಟಿಸಿದರು. ಅರ್ತಿಕಜೆಯವರು ಬಂದ, ಸಂದ ಗೌರವಗಳನ್ನು ನಮ್ರತೆಯಿಂದ ಸ್ವೀಕರಿಸಿದ್ದಾರೆ.

ತಮ್ಮ ಯೋಗ್ಯತೆಗೆ ಸರಿಯಾದ ಮಾನಸಮ್ಮಾನಗಳನ್ನು ಅವರು ಇನ್ನೂ ಪಡೆಯಬೇಕಿದೆ; ಅವರು ಬಯಸಿಲ್ಲ, ಆ ವಿಚಾರ ಬೇರೆ. ಅರ್ತಿಕಜೆ ತನ್ನ ಬಂಧು-ಬಳಗ-ಸ್ನೇಹಿತರ ಪಾಲಿಗೆ ನಿತ್ಯನೆರವಿನ ಒರತೆಯೆಂದು ಕೇಳಿದ್ದೇನೆ. ಅರ್ತಿಕಜೆಯವರು ಲೌಕಿಕರೊಳಗೊಬ್ಬ ಸಂತರಂತೆಯೇ ಬಾಳುತ್ತಿದ್ದಾರೆ. ಅವರ ವ್ಯಕ್ತಿತ್ವ ಘನಮುಗ್ಧವಾದದ್ದು. ಪಂಥ-ಸಿದ್ಧಾಂತಗಳ ರಾಜಕೀಯವಿಲ್ಲದ ನಿತ್ಯಾತ್ಮ ಬದುಕು ಅವರದ್ದು. ಈ ಮೊದಲು ಉಲ್ಲೇಖಿಸಿದ ಅರ್ತಿಕಜೆಯವರ ‘ಕಥಾಕಿರಣ’ದಲ್ಲಿ ಒಂದು ಪ್ರಸಂಗ ಹೀಗಿದೆ: ಸೂಫಿಪಂಥದ ಶ್ರೇಷ್ಠ ಸಂತಳಾದ ರಾಬಿಯಾ ಸರಳ ಜೀವನ ನಡೆಸುತ್ತಿದ್ದಳು. ಸಣ್ಣ ಗುಡಿಸಲೊಂದರಲ್ಲಿ ವಾಸವಾಗಿದ್ದಳು. ಒಂದು ದಿನ ಅವಳು ದೇವರ ನಾಮಸ್ಮರಣೆ ಮಾಡುತ್ತಾ ಕುಳಿತಿದ್ದಾಗ ಹೊರಗೆ ಭಕ್ತನೊಬ್ಬ ಬಂದು ನಿಂತ. ‘‘ಅಮ್ಮಾ ನೀನು ನಿಜವಾಗಿಯೂ ಓರ್ವ ಧರ್ಮದೇವತೆ. ದೇವರಲ್ಲಿ ಅನನ್ಯವಾದ ಭಕ್ತಿಯನ್ನು ಹೊಂದಿದ ನೀನು ನಮ್ಮಂತಹವರಿಗೆಲ್ಲ ಮಾರ್ಗದರ್ಶಿ. ನಿತ್ಯವೂ ನಿನ್ನ ಹೆಸರನ್ನು ಸ್ಮರಿಸಿದರೆ ಸಾಕು ನಮ್ಮ ಜೀವನ ಪವಿತ್ರವಾಗುತ್ತದೆ.’’ ಎಂದೆಲ್ಲ ಹೊಗಳಿದ. ಸ್ವಲ್ಪಸಮಯದ ಬಳಿಕ ಒಬ್ಬ ನಾಸ್ತಿಕ ಅಲ್ಲಿಗೆ ಬಂದ. ರಾಬಿಯಾಳನ್ನು ಮನಸ್ಸಿಗೆ ಬಂದಂತೆ ಬೈದುಹೋದ. ರಾಬಿಯಾಳ ಗುಡಿಸಲಲ್ಲಿ ಕುಳಿತಿದ್ದ ಗುರುಗಳು ಕೇಳಿದರು- ‘‘ಏನಮ್ಮಾ, ಆ ನಾಸ್ತಿಕ ತೆಗಳಿದ್ದನ್ನು ಕೇಳಿಸಿಕೊಂಡೆಯಾ?’’ ರಾಬಿಯಾ ಇಲ್ಲವೆಂದಳು. ‘‘ಹಾಗಾದರೆ ‘ಶ್ಲಾಘಿಸಿದ್ದನ್ನು ಕೇಳಿಸಿಕೊಂಡೆಯಾ?’’ ಅದಕ್ಕೂ ಇಲ್ಲವೆಂದ ರಾಬಿಯಾ ‘‘ನಾನು ಭಗವದಾನಂದದಲ್ಲಿ ಮುಳುಗಿದ್ದೆ’’ ಎಂದಳು.

ನಾನು ಕಂಡ ಅರ್ತಿಕಜೆ ಈ ರೀತಿಯ ಚೇತನ; ತಮ್ಮ ನಿಷ್ಕಲ್ಮಷ ಪುಟ್ಟಸರೋವರದಲ್ಲಿ ಮಿಂದವರು; ಇದ್ದಲ್ಲೇ ಇದ್ದು ಬೆಟ್ಟದಂತೆ ಬದುಕಿ ಬಾಳುತ್ತಿರುವವರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)