varthabharthi


ಸಿನಿಮಾ

ಸಾರಾ’ಸ್: ಮದುವೆ ಮತ್ತು ತಾಯ್ತನದ ನಡುವೆ...

ವಾರ್ತಾ ಭಾರತಿ : 11 Jul, 2021
ಶಶಿಕರ ಪಾತೂರು

ಸಾರಾ’ಸ್ ಎನ್ನುವ ಹೆಸರು ಕೇಳಲು ಅಸಹಜ ಅನಿಸಬಹುದು. ಆದರೆ ಸಾರಾ ಎನ್ನುವ ಹೆಸರಿಗಿರುವ ಹಿನ್ನೆಲೆಯನ್ನು ಚಿತ್ರದ ಟ್ರೇಲರ್ ಮೂಲಕವೇ ತೋರಿಸಲಾಗಿತ್ತು. ಬೈಬಲ್‌ನಲ್ಲಿ ಬರುವ ಕತೆಯ ಪ್ರಕಾರ ಸಾರಾ ಎಂದರೆ ಪತಿವ್ರತೆಯಾಗಿದ್ದು, ತಾಯ್ತನವನ್ನು ಪ್ರೀತಿಸುವ ಮಹಿಳೆ. ಸ್ತ್ರೀಯರು ಆಕೆಯನ್ನು ಮಾದರಿಯಾಗಿಸಬೇಕು ಎಂದು ಧರ್ಮಗ್ರಂಥ ಹೇಳುತ್ತದೆ. ಆದರೆ ಸಿನೆಮಾದಲ್ಲಿರುವ ಸಾರಾ ಬದಲಾದ ಕಾಲಘಟ್ಟದಲ್ಲಿನ ಮಹಿಳೆಯರನ್ನು ಪ್ರತಿನಿಧಿಸುತ್ತಾಳೆ. ಹಾಗಾದಾಗ ಆಕೆ ಎದುರಿಸಬೇಕಾದ ಸಮಸ್ಯೆ ಮತ್ತು ಪರಿಸ್ಥಿತಿಗಳನ್ನು ಚಿತ್ರದ ಮೂಲಕ ರಂಜನೀಯವಾಗಿ ತೋರಿಸಲಾಗಿದೆ.

ಅವಳು ಶಾಲಾದಿನಗಳಿಂದಲೇ ದಿಟ್ಟ ಹುಡುಗಿ. ಆಗಲೇ ಒಬ್ಬ ವಿದ್ಯಾರ್ಥಿಯೊಡನೆ ಪ್ರೇಮವಿತ್ತು. ಆದರೆ ಆತ ಮಗುವಿನ ಬಗ್ಗೆ ಕಾಣುವ ಕನಸು ಆಕೆಯ ಮನಸ್ಸು ಕೆಡಿಸಿತು. ತಾನು ಮದುವೆಯಾದರೂ ಮಗುವಿಗೆ ತಾಯಿಯಾಗಲಾರೆ ಎನ್ನುವುದು ಅವಳ ನಿರ್ಧಾರ. ಹಾಗಾಗಿ ಮಕ್ಕಳು ಬೇಡ ಎಂದು ನಿರ್ಧರಿಸುವ ಹುಡುಗನನ್ನೇ ವಿವಾಹವಾಗುವುದು ಆಕೆಯ ಗುರಿ. ಈ ನಡುವೆ ಆಕೆ ಸಿನೆಮಾಕ್ಷೇತ್ರ ಸೇರಿಕೊಂಡು ಸಹಾಯಕ ನಿರ್ದೇಶಕಿಯಾಗುತ್ತಾಳೆ. ಸ್ವತಃ ಸಿನೆಮಾ ನಿರ್ದೇಶಿಸುವ ತನಕ ವಿವಾಹವಾಗುವುದಿಲ್ಲ ಎನ್ನುವುದು ಅವಳ ತೀರ್ಮಾನ. ಅಷ್ಟರಲ್ಲಿ ಜೀವನ್ ಎನ್ನುವ ಯುವಕನ ಪರಿಚಯವಾಗುತ್ತದೆ. ಆತನಿಗೂ ‘ಮಕ್ಕಳೇ ಬೇಡ’ ಎನ್ನುವ ಮನೋಭಾವ ಇರುವುದು ಕಂಡು ಆತ್ಮೀಯಳಾಗುತ್ತಾಳೆ. ಆದರೆ ಅನಿವಾರ್ಯವಾಗಿ ನಿರ್ದೇಶಕಿಯಾಗುವ ಮೊದಲೇ ಮದುವೆಯಾಗಬೇಕಾಗುತ್ತದೆ. ಆದರೆ ಮದುವೆಯ ಬಳಿಕ ನಿರ್ದೇಶಕಿಯಾಗುತ್ತಾಳೆಯೇ? ಅಥವಾ ಮಗುವಿನ ತಾಯಿಯಾಗುತ್ತಾಳೆಯೇ ಎನ್ನುವುದರ ಉತ್ತರ ಚಿತ್ರವನ್ನೇ ನೋಡಿ ಪಡೆಯಬಹುದು.

ಸಾರಾ ಪಾತ್ರದಲ್ಲಿ ನಟಿಸಿರುವವರು ಅನ್ನಾ ಬೆನ್ ಎನ್ನುವ ಯುವನಟಿ. ಈಕೆ ‘ಕುಂಬಳಂಗಿ ನೈಟ್ಸ್’ ಎನ್ನುವ ಜನಪ್ರಿಯ ಚಿತ್ರದ ಸಣ್ಣಪಾತ್ರವೊಂದರಲ್ಲೇ ಸುದ್ದಿಯಾಗಿದ್ದವರು. ಪ್ರಸ್ತುತ ನಾಯಕಿ ಪ್ರಧಾನ ಪಾತ್ರವೇ ಸಿಕ್ಕಿದ್ದು ಅದಕ್ಕೆ ಸಂಪೂರ್ಣ ಜೀವ ನೀಡಿದ್ದಾರೆ. ಸಾರಾ ಪತಿಯಾಗಿ ಜೀವನ್ ಎನ್ನುವ ಪಾತ್ರವನ್ನು ನಟ ಸನ್ನಿವೇನ್ ನಿಭಾಯಿಸಿದ್ದಾರೆ. ಇವರಿಬ್ಬರನ್ನು ಹೊರತುಪಡಿಸಿ ಜೀವನ್ ತಾಯಿಯಾಗಿ ನಟಿಸಿರುವ ಮಲ್ಲಿಕಾ ಸುಕುಮಾರನ್ ಅವರ ಪಾತ್ರ ಮತ್ತು ನಟನೆ ಉಲ್ಲೇಖಾರ್ಹವೆನಿಸುತ್ತದೆ.

ನಿರ್ದೇಶಕ ಜ್ಯೂಡ್ ಆ್ಯಂಟನಿ ಜೋಸೆಫ್ ತಮ್ಮ ಪ್ರಥಮ ಚಿತ್ರ ‘ಓಂ ಶಾಂತಿ ಓಶಾನ’ದಿಂದಲೇ ಖ್ಯಾತರಾದವರು. ಸಾರಾ’ಸ್ ಸಿನೆಮಾದಲ್ಲಿಯೂ ಆ ಚಿತ್ರದ್ದೇ ಮಾದರಿಯ ಶಾಲಾದಿನಗಳ ದೃಶ್ಯಗಳಿವೆ. ಸ್ವತಂತ್ರ ಹುಡುಗಿಯ ಮನೋಭಾವನೆಗಳಿವೆ. ಆದರೆ ಇಲ್ಲಿ ಅವೆಲ್ಲಕ್ಕಿಂತ ಮುಖ್ಯವಾಗಿ ಬದುಕಿನ ನಿರ್ಧಾರಗಳಲ್ಲಿ ಹೆಣ್ಣಿಗೆ ಎಷ್ಟು ಪ್ರಾಮುಖ್ಯತೆ ಇದೆ ಎನ್ನುವುದರ ಅನಾವರಣವಾಗುತ್ತದೆ. ಹಾಗಂತ ಸ್ತ್ರೀ ಸ್ವಾತಂತ್ರ್ಯದ ಸಂದೇಶಕ್ಕಾಗಿ ಮಾಡಿರುವ ಕತೆಯೇನೂ ಅಲ್ಲ. ಒಬ್ಬ ಸಾಮಾನ್ಯ ಹೆಣ್ಣುಮಗಳು ಕೂಡ ಆಕೆಯ ಕನಸಿನಂತೆ ಬದುಕುಕಟ್ಟಿಕೊಳ್ಳಲು ಸ್ವತಂತ್ರಳು ಎಂದು ನೆನಪಿಸುವ ಚಿತ್ರ. ಇಲ್ಲಿ ಎಲ್ಲರೂ ಬದುಕಿನ ಕನಸು ಕಂಡವರೇ ಹಾಗಾಗಿ ಖಳ ಪಾತ್ರಗಳಿಲ್ಲ. ಬದುಕಿನ ಕುರಿತಾದ ದೃಷ್ಟಿಕೋನದಲ್ಲಿ ಮೂಡುವ ತಾಕಲಾಟಗಳು. ಹಾಗಾಗಿಯೇ ಆಕೆ ತನ್ನ ಹಕ್ಕು ಸ್ಥಾಪನೆಗೆ ಕುಟುಂಬದಿಂದ ದೂರಾಗಿ ಹೋರಾಡುವುದಿಲ್ಲ. ಒಳಗಿದ್ದುಕೊಂಡೇ ಬದಲಾದ ಸಮಾಜದ ಕನ್ನಡಿಯಾಗುತ್ತಾಳೆ. ಅಕ್ಷಯ ಹರೀಶ್ ಚಿತ್ರಕತೆ ಸಿನೆಮಾದ ಬೆನ್ನೆಲುಬಾಗಿದೆ. ಸಂಭಾಷಣೆಗಳು ಚಿಕ್ಕದಾಗಿ ಮುಗಿದರೂ ಅರ್ಥದ ಬಗ್ಗೆ ಮತ್ತೊಮ್ಮೆ ಯೋಚಿಸುವಂತೆ ಮಾಡುತ್ತದೆ. ದೃಶ್ಯಗಳ ಮೂಲಕವೇ ಉಪಮೆಗಳನ್ನು ನೀಡುವ ಕಲೆ ನಿರ್ದೇಶಕರಿಗೆ ಸಿದ್ದಿಸಿದೆ. ನಿಮಿಷ್ ರವಿ ಛಾಯಾಗ್ರಹಣದೊಂದಿಗೆ ಶಾನ್ ರೆಹಮಾನ್ ಸಂಗೀತವೂ ಚಿತ್ರಕ್ಕೆ ಪೂರಕವಾಗಿ ಮೂಡಿಬಂದಿದೆ.

ಹೆಣ್ಣು ಹೆತ್ತು ಸತ್ತರೆ ಸ್ವರ್ಗ ಎನ್ನುವ ಮನಸ್ಥಿತಿಯವರ ನಡುವೆ ಆಕೆಗೆ ಮಾನಸಿಕ, ದೈಹಿಕ ತೊಂದರೆ ಇದ್ದರೆ ಗಂಡನ ಒಪ್ಪಿಗೆ ಇಲ್ಲದೆಯೂ ಅಬಾರ್ಷನ್ ಮಾಡಿಕೊಳ್ಳಬಹುದು ಎನ್ನುವ ಮಾನವೀಯತೆಗೆ ಒತ್ತು ನೀಡಲಾಗಿದೆ. ಅಮೆಝಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿರುವ ಈ ಸಿನೆಮಾ ಖಂಡಿತವಾಗಿ ಒಮ್ಮೆ ವೀಕ್ಷಿಸಬಹುದು.


ತಾರಾಗಣ: ಸನ್ನಿ ವೇನ್ ಅನ್ನಾ ಬೆನ್
ನಿರ್ದೇಶನ: ಜ್ಯೂಡ್ ಆ್ಯಂಟನಿ ಜೋಸೆಫ್
ನಿರ್ಮಾಣ: ಪಿ.ಕೆ ಮುರಳೀಧರನ್, ಶಾಂತಾ ಮುರಳಿ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)