varthabharthi


ಅನುಗಾಲ

‘ಮೆಕ್‌ಬೆತ್’ ಎಂಬ ನಿತ್ಯ ನಾಟಕ

ವಾರ್ತಾ ಭಾರತಿ : 15 Jul, 2021
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಅಧ್ಯಯನದ ದೃಷ್ಟಿಯಿಂದ ಸಾಂದರ್ಭಿಕವಾಗಿ ಶೇಕ್ಸ್‌ಪಿಯರ್‌ನೊಂದಿಗೆ ಕಾಳಿದಾಸನನ್ನಲ್ಲದೆ, ಕನ್ನಡದ ಕವಿಗಳನ್ನೂ, ಮೆಕ್‌ಬೆತ್‌ನನ್ನು ದುರ್ಯೋಧನನಂತಹ ಪಾತ್ರಗಳೊಂದಿಗೂ ಹೋಲಿಸಿ ಅಳೆಯಬಹುದು. ವ್ಯಾಸರು ಕಂಡ, ಬರೆದ, ಮಹಾಭಾರತ ಇಂತಹ ಒಂದು ವೈಪರೀತ್ಯಗಳ, ವೈರುಧ್ಯಗಳ, ವೈಚಿತ್ರ್ಯಗಳ ಗೊಂಡಾರಣ್ಯ. ದೊರೆಗಳ ಮನದಭೀಷ್ಟವನ್ನು ಈಡೇರಿಸುವುದಕ್ಕಾಗಿ ಅಥವಾ ಅವರನ್ನು ಸುಪ್ರೀತಗೊಳಿಸುವುದಕ್ಕಾಗಿ ರಚಿಸಿದ ಕೃತಿ ‘ಮೆಕ್‌ಬೆತ್’. ಆದರೆ ಅದು ಮೆಕ್‌ಡಫ್ ವಿಜಯ ಆಗಲಿಲ್ಲ. ಕನ್ನಡದಲ್ಲಿನ ಪಂಪನ ‘ವಿಕ್ರಮಾರ್ಜುನ ವಿಜಯ’ ಮತ್ತು ರನ್ನನ ‘ಸಾಹಸಭೀಮ ವಿಜಯ’ ಈ ಬಗೆಯ ಕೃತಿಗಳೇ.


ಸಂಸ್ಕೃತಕ್ಕೆ ಕಾಳಿದಾಸ ಹೇಗೋ ಆ ಬಗೆಯ ಸ್ಥಾನವನ್ನು ಇಂಗ್ಲಿಷ್ ಸಾಹಿತ್ಯದಲ್ಲಿ ಅದರಲ್ಲೂ ನಾಟಕ ಕ್ಷೇತ್ರದಲ್ಲಿ ಸಂಪಾದಿಸಿದವನು ಎಂಬ ಹೆಗ್ಗಳಿಕೆಗೆ ಪಾತ್ರನಾಗಿರುವವನು ಶೇಕ್ಸ್‌ಪಿಯರ್. ಸಾನೆಟ್ ಎಂಬ ಮಾದರಿಯ ಕಾವ್ಯದ ರಚನೆಯಲ್ಲೂ ಪ್ರವೀಣನಾಗಿದ್ದ ಈತ ತನ್ನ ನಾಟಕಗಳ ಮೂಲಕ ವಿಶ್ವದ ಸಾಹಿತ್ಯಲೋಕ ಮತ್ತೆ ಮತ್ತೆ ಆತನನ್ನು ನೆನಪು ಮಾಡುವುದನ್ನು ಅನಿವಾರ್ಯವಾಗಿಸಿದ್ದು ಮಾತ್ರವಲ್ಲ, ಆತನ ನಾಟಕಗಳನ್ನು ಓದಿನ ಮತ್ತು ರಂಗಪ್ರಯೋಗಗಳ ಮೂಲಕ ಮೆಲುಕುಹಾಕುವಂತೆ ಮಾಡಿದ ಸಾಹಸಿ. ಶೇಕ್ಸ್‌ಪಿಯರ್ ಹುತ್ತಗಟ್ಟಿದ ಚಿತ್ತ. ಭಾಷೆಯ ಬಳಕೆಯಲ್ಲಿ ಹೊಸ ಪದಗಳನ್ನು ಪ್ರಯೋಗಿಸುವಲ್ಲಿ ಮಿಲ್ಟನ್‌ನನ್ನೂ ಮೀರಿಸಿದ ಪ್ರತಿಭೆಯೆಂದು ಹೆಸರಾದವನು. ಔಪಚಾರಿಕ ಶಿಕ್ಷಣವಿಲ್ಲದ ಈ ಅಪಾರ ಸಾರಸ್ವತ ಶಕ್ತಿಯ ಕುರಿತ ಅಭಿಮತಗಳು, ವಿಮರ್ಶೆ ಯಾವ ಹಂತಕ್ಕೇರಿತೆಂದರೆ ಈ ಎಲ್ಲವನ್ನೂ ಆತನು ಬರೆದಿರಲಿಕ್ಕಿಲ್ಲವೆಂಬ ಸಂಶೋಧನೆಯೂ ನಡೆಯಿತು. ನಮ್ಮಲ್ಲಿ ವೇದೋಪನಿಷತ್ತಿನ ಥರದ ಬರವಣಿಗೆಯನ್ನು ಸುಲಭವಾಗಿ ಪವಾಡವೆಂದೋ ‘ಅಪೌರುಷೇಯ’ವೆಂದು ಹೇಳಿ ಜಾರಿಕೊಳ್ಳಬಹುದು. ಆದರೆ ಪಾಶ್ಚಾತ್ಯರು ಯಾವುದನ್ನೇ ಆಗಲಿ ಮನುಷ್ಯನೇ ಬರೆದಿರಬಹುದು ಎಂಬಷ್ಟಾದರೂ ವಾಸ್ತವತೆಯನ್ನು ಹೊಂದಿದ್ದಾರೆ. ಶೇಕ್ಸ್‌ಪಿಯರ್ ಬರೆದ ನಾಟಕಗಳನ್ನು ದುರಂತ, ಚಾರಿತ್ರಿಕ, ಮನೋರಂಜಕ/ಹರ್ಷಿಕ ಎಂದೆಲ್ಲ ವಿಂಗಡಿಸಬಹುದು, ವಿಮರ್ಶಕರು ವಿಂಗಡಿಸಿದ್ದಾರೆ ಕೂಡಾ. ಈ ಪೈಕಿ ಪ್ರಸಿದ್ಧವಾದ ದುರಂತ ನಾಟಕಗಳು ನಾಲ್ಕು: ‘ಕಿಂಗ್ ಲಿಯರ್’, ‘ಒಥೆಲ್ಲೋ’, ‘ಮೆಕ್‌ಬೆತ್’, ‘ಹ್ಯಾಮ್ಲೆಟ್’. ಇವು ಓದುಗರನ್ನು, ನೋಡುಗರನ್ನು ಪ್ರಭಾವಿಸಿದಷ್ಟು ಇತರ ನಾಟಕಗಳು ಪ್ರಭಾವಿಸಿಲ್ಲ ಎನ್ನುವುದು ತಪ್ಪಾಗುತ್ತದೆ. ವಿವಿಧ ಮತ್ತು ವಿಶಿಷ್ಟ ಮನೋಸ್ಥಿತಿಯಲ್ಲಿ ಎಲ್ಲ ನಾಟಕಗಳೂ ಆಸಕ್ತರನ್ನು ಕಾಡಿವೆ; ಕಾಡುತ್ತಿವೆ. ಇಲ್ಲಿನ ಕೇಂದ್ರ ಪಾತ್ರಗಳೆಲ್ಲ ನಾಟಕದ ಹೆಸರೇ ಆಗಿವೆ- In and as  ಎಂಬ ಸಿನೆಮಾ ನಾಯಕರ ಪೋಸ್ಟರುಗಳ ಹಾಗೆ.

ದುರಂತ ನಾಟಕಗಳ ಪೈಕಿ ಸರ್ವಶ್ರೇಷ್ಠವಾದದ್ದು ಯಾವುದು ಎಂಬ ತೌಲನಿಕ ಅಧ್ಯಯನ ಈ ಲೇಖನದ ಉದ್ದೇಶವಲ್ಲ. ದೇಶಕಾಲಗಳ ರಾಜಕೀಯ ಮತ್ತು ಚಾರಿತ್ರಿಕ ವಿಕಾಸ ಮತ್ತು ಪತನದ ಹಾದಿಯಲ್ಲಿ ಹೆಚ್ಚು ಪ್ರಸ್ತುತವಾಗುವುದು ಹಾಗೂ ನೆನಪಾಗುವುದು-ನೋಯುವ ಹಲ್ಲಿನ ಕಡೆಗೆ ನಾಲಗೆ ಚಾಚಿಕೊಳ್ಳುವಂತೆ ಮಾಡುವುದು; ಆ ವಿಚಿತ್ರಕ್ಕೆ ನಮಿಸುವುದು ಮಾತ್ರ.

ಈ ಪೈಕಿ ‘ಮೆಕ್‌ಬೆತ್’ ಅಗ್ರಸ್ಥಾನದಲ್ಲಿದೆ. ಪ್ರಾಯಃ ಒಬ್ಬ ಖಳನಾಯಕನೇ ನಾಯಕನಾಗಿ ಚಿತ್ರಿಸಿಕೊಳ್ಳುವುದು ಅಪರೂಪ. ಮೆಕ್‌ಬೆತ್ ಎಂಬ ಆ ವರೆಗೂ ಉಳಿದೆಡೆ ಸಜ್ಜನನಾಗಿದ್ದವನಿಗೆ ಈ ಭಾಗ್ಯವಿತ್ತು; ಇದೆ. ಡಂಕನ್‌ನಂತಹ ಸಾಧು ದೊರೆಯನ್ನು ಕೊಲ್ಲುವುದೇ ಅಮಾನವೀಯ. ಅದಕ್ಕೆ ದೈವೀ ಸಮರ್ಥನೆಯನ್ನು ಹೇರುವುದು ಇನ್ನಷ್ಟು ಕುಟಿಲ ರಾಜಕಾರಣ. ಇಂತಹ ಸನ್ನಿವೇಶದಲ್ಲಿ ಗಂಡನಿಗೆ ಸಿಗಬೇಕಾದ್ದು ಕಾಂತಾಸಮ್ಮಿತೆ. ಆದರೆ ಇಲ್ಲಿ ಲೇಡಿಮೆಕ್‌ಬೆತ್ ತನ್ನ ಗಂಡನ ಮಹತ್ವಾಕಾಂಕ್ಷೆಗೆ ಪ್ರೋತ್ಸಾಹ ನೀಡುವುದು ಮಾತ್ರವಲ್ಲ, ಆತನ ಮನುಷ್ಯತ್ವವು ಮೇಲ್ಗೈ ಸಾಧಿಸದಂತೆ, ಆತ ತನ್ನ ಈ ಮಾರಕ ಹಾದಿಯಿಂದ ಹಿಂಜರಿಯದಂತೆ ನೋಡಿಕೊಳ್ಳುತ್ತಾಳೆ. ಮೆಕ್‌ಬೆತ್ ಆನಂತರ ತಾನೇ ದೊರೆಯಾಗಿ ಅಡ್ಡಗಾಲಿನ ಯಾರ ಮತ್ತು ಯಾವ ಬೆದರಿಕೆಯೂ ಇಲ್ಲದೆಯೂ ತಲ್ಲಣಿಸುತ್ತಲೇ ಹೋಗುತ್ತಾನೆ.

ಅವನ ಪತನಕ್ಕೆ ಇತರ್ಯಾರೂ ಕಾರಣರಲ್ಲ. ಬಿರ್ನಮ್ ಅರಣ್ಯವಾಗಲೀ ಮೆಕ್‌ಡಫ್ ಆಗಲಿ ನೆಪ ಮಾತ್ರ. ಬಿರ್ನಮ್ ನಿಜವಾದದ್ದೇನಲ್ಲ. ಮೆಕ್‌ಡಫ್ ಮೆಕ್‌ಬೆತ್‌ಗಿಂತ ಶೂರನೇನಲ್ಲ. ಡಂಕನ್ ಮಕ್ಕಳು ಮಾತ್ರವಲ್ಲ, ಇತರ ಅಧಿಕಾರಿಗಳೂ ದೇಶ ಬಿಟ್ಟು ಹೋಗಿರುತ್ತಾರೆ. ಆದರೆ ಕಾಲವೇ ಅವರಿಗೆ ನೆರವನ್ನು ಒದಗಿಸುತ್ತದೆ. ಆದರೆ ಇವಿಷ್ಟೇ ಸಾಲದು. ಹಗ್ಗವನ್ನು ಹಾವೆಂದು ಕಾಣುವ ಭೀರುತನ ಮೆಕ್‌ಬೆತ್‌ನದ್ದು. ಆತನ ಶಾಪಗ್ರಸ್ತ, ಪಾಪಗ್ರಸ್ತ ಮನಸ್ಥಿತಿಯೇ ಆತನನ್ನು ಇಲ್ಲವಾಗಿಸುತ್ತದೆ. ಮೆಕ್‌ಬೆತ್‌ನಿಗೆ ಯಕ್ಷಿಣಿಯರ ಮೂಲಕ ಸಿಕ್ಕಿದ್ದು ವರಗಳ ರೂಪದ ಶಾಪ. ಸಾವಿಲ್ಲದೇ ಇಲ್ಲವಲ್ಲ! ಯಕ್ಷಿಣಿಯರು ಆತನ ಮಹತ್ವಾಕಾಂಕ್ಷೆಯನ್ನು ಪುಟಿದೆಬ್ಬಿಸಿದರೂ ಮತ್ತೆ ಭೇಟಿಯಾದಾಗ ಆತನಿಗೆ ಮೂರು ಸುರಕ್ಷತೆಯ ಮಾತುಗಳನ್ನೂ ಹೇಳುತ್ತವೆೆ: ಒಂದು, ಮೆಕ್‌ಡಫ್‌ನ ಕುರಿತ ಎಚ್ಚರಿಕೆ, ಎರಡು, ಹೆಣ್ಣಿನ ಹೊಟ್ಟೆಯಿಂದ ಹುಟ್ಟಿ ಬಂದ ಯಾರೂ ಆತನನ್ನು ಕೊಲ್ಲಲಾರದ ಸ್ಥಿತಿ ಮತ್ತು ಮೂರು, ಬರ್ನಮ್ ಅರಣ್ಯವು ಡನ್ಸಿನೇನ್ ಕೋಟೆಯತ್ತ ನಡೆದು ಬರುವ ವರೆಗೆ ಆತ ಅಜೇಯ.

ಮೊದಲನೆಯದು ಇತ್ಯಾತ್ಮಕವಾದದ್ದು, ಎರಡು ಮತ್ತು ಮೂರನೆಯದು ನೇತ್ಯಾತ್ಮಕವಾದದ್ದು! ಮೆಕ್‌ಬೆತ್‌ನ ಪಾಲಿಗೆ ಇವು ಅಶಕ್ಯ. ಈ ಷರತ್ತುಗಳ ರೂಪದ ಮಾತುಗಳನ್ನು ಹೇಳುವ ಮೊದಲು ಯಕ್ಷಿಣಿಯರು ತಮ್ಮ ಬಾಯಿಯಿಂದಲೇ ಅದನ್ನು ಕೇಳಬೇಕೇ ಅಥವಾ ತಮ್ಮ ಒಡೆಯರಿಂದಲೇ ಎಂದು ಪ್ರಶ್ನಿಸುತ್ತವೆ. ಮೆಕ್‌ಬೆತ್‌ನ ಋಣಾನುಬಂಧ ಈ ಶಾಪಗಳನ್ನು ಅವರ ಬಾಯಿಯಿಂದಲೇ ಕೇಳಬೇಕೆಂದು ಹೇಳಿಸುತ್ತದೆ. ಆ ಒಡೆಯರು ಇನ್ನೇನು ಹೇಳುತ್ತಿದ್ದರೋ? ಭೂಮಿಯ ಮೇಲೆ ಅಮರರನ್ನಾಗಿಸುವುದು ಪಾಶ್ಚಾತ್ಯ ನಾಟಕಗಳಲ್ಲಿ ಕಡಿಮೆ. ಗ್ರೀಕ್ ರುದ್ರನಾಟಕಗಳಲ್ಲಿ ಪೌರಾಣಿಕ ದೇವದೇವತೆಗಳಿದ್ದರೂ ಅವು ಇಂಗ್ಲೆಂಡ್, ಐರ್‌ಲ್ಯಾಂಡ್, ಸ್ಕಾಟ್‌ಲ್ಯಾಂಡ್‌ಗೆ ಬರುವುದಿಲ್ಲ. ‘ಹ್ಯಾಮ್ಲೆಟ್’ನಲ್ಲಿ ಬರುವ ಸತ್ತ ದೊರೆಯ ಭೂತ ಕೂಡಾ ಆರಂಭದಲ್ಲಿ ವಾಸ್ತವವೆನಿಸಿದರೂ ಕೊನೆಗೆ ಹ್ಯಾಮ್ಲೆಟ್‌ನ ಮತಿವಿಭ್ರಮೆಯೇನೋ ಅನ್ನಿಸುತ್ತದೆ. ಮಾರ್ಲೋವಿನ ಫಾಸ್ಟ್ ಕೂಡಾ ಅಮರನಲ್ಲ. ಆತ ಮಾನಸಿಕ ಯಾತನೆಗೆ ಗುರಿಯಾಗುವುದು ಭೂಮಿಯ ಮೇಲಿನ ಬದುಕಿಗೆ ಕೊನೆ ಹಾಡುವ ಹೊತ್ತಿನಲ್ಲಿ; ಮುಂದಿದೆ ಮಾರಿಹಬ್ಬ ಅನ್ನುವಾಗ.

ಅಧ್ಯಯನದ ದೃಷ್ಟಿಯಿಂದ ಸಾಂದರ್ಭಿಕವಾಗಿ ಶೇಕ್ಸ್‌ಪಿಯರ್‌ನೊಂದಿಗೆ ಕಾಳಿದಾಸನನ್ನಲ್ಲದೆ, ಕನ್ನಡದ ಕವಿಗಳನ್ನೂ, ಮೆಕ್‌ಬೆತ್‌ನನ್ನು ದುರ್ಯೋಧನನಂತಹ ಪಾತ್ರಗಳೊಂದಿಗೂ ಹೋಲಿಸಿ ಅಳೆಯಬಹುದು. ವ್ಯಾಸರು ಕಂಡ, ಬರೆದ, ಮಹಾಭಾರತ ಇಂತಹ ಒಂದು ವೈಪರೀತ್ಯಗಳ, ವೈರುಧ್ಯಗಳ, ವೈಚಿತ್ರ್ಯಗಳ ಗೊಂಡಾರಣ್ಯ. ದೊರೆಗಳ ಮನದಭೀಷ್ಟವನ್ನು ಈಡೇರಿಸುವುದಕ್ಕಾಗಿ ಅಥವಾ ಅವರನ್ನು ಸುಪ್ರೀತಗೊಳಿಸುವುದಕ್ಕಾಗಿ ರಚಿಸಿದ ಕೃತಿ ‘ಮೆಕ್‌ಬೆತ್’. ಆದರೆ ಅದು ಮೆಕ್‌ಡಫ್ ವಿಜಯ ಆಗಲಿಲ್ಲ. ಕನ್ನಡದಲ್ಲಿನ ಪಂಪನ ‘ವಿಕ್ರಮಾರ್ಜುನ ವಿಜಯ’ ಮತ್ತು ರನ್ನನ ‘ಸಾಹಸಭೀಮ ವಿಜಯ’ ಈ ಬಗೆಯ ಕೃತಿಗಳೇ. ವ್ಯಾಸಭಾರತವನ್ನು ಕನ್ನಡೀಕರಿಸುವಾಗ ಬೇಕಾದ ಸೌಜನ್ಯ ಪಂಪನಲ್ಲಿತ್ತು. ‘‘ವ್ಯಾಸಮುನೀಂದ್ರ ರುಂದ್ರ ವಚನಾಮೃತವಾರ್ಧಿಯನೀಸುವೆಂ ಕವಿ ವ್ಯಾಸನೆನೆಂಬ ಗರ್ವಮೆನಗಿಲ್ಲ’’ ಎಂಬ ಕೊಡೆಯಡಿಯೇ ಪಂಪ ತನ್ನ ಈ ಶ್ರೇಷ್ಠಕಾವ್ಯದ ಹುಟ್ಟು ಹಾಕಿದ್ದಾನೆ; ನಾವೆಯನ್ನು ನಡೆಸಿದ್ದಾನೆ. ಆದರೆ ರನ್ನ ‘‘ಆರಾತೀಯಕವೀಶ್ವರರಾರುಂ ಮುನ್ನಾರ್ತರಿಲ್ಲ ವಾಗ್ದೇವಿಯ ಭಂಡಾರದ ಮುದ್ರೆಯನೊಡೆದಂ ಸಾರಸ್ವತಮೆನಿಪ ಕವಿತೆಯೊಳ್ ಕವಿರತ್ನಂ’’ ಎಂಬ ಆತ್ಮಶ್ಲಾಘನೆಯೊಂದಿಗೆ ಮುನ್ನಡೆದಿದ್ದಾನೆ.

‘ಮೆಕ್‌ಬೆತ್’ ನಾಟಕವನ್ನೋದಿದ ಮೇಲೆ ಪ್ರಾಯಃ ಮೆಕ್‌ಬೆತ್‌ನಂತಹ ಖಳನಾಯಕನೊಬ್ಬನನ್ನು ಶೇಕ್ಸ್‌ಪಿಯರ್ ಧೀರೋದ್ಧಾತ ನಾಯಕನನ್ನಾಗಿ ಮಾಡಿದಂತೆ ದುರ್ಯೋಧನನನ್ನು ಮಾಡಲು ಕನ್ನಡದ ಕವಿ ರನ್ನನಿಗೆ ಅವಕಾಶವಿತ್ತು. (ಪಂಪನು ಅರ್ಜುನನನ್ನೇ ನಾಯಕನನ್ನಾಗಿಸಿದರೂ ತನ್ನೊಳಗಿದ್ದ ಒಲವನ್ನು ಬಚ್ಚಿಡಲಾಗದೆ ‘‘ಕರ್ಣರಸಾಯನಮಲ್ತೆ ಭಾರತಂ’’ ಎನ್ನಬೇಕಾಯಿತು. ಕುಮಾರವ್ಯಾಸನೂ ‘‘ತಿಳಿಯ ಹೇಳುವೆ ಕೃಷ್ಣಕಥೆಯನು’’ ಎಂದು ಹೇಳಿದರೂ ಯಾವ ಪಕ್ಷಪಾತ ದೃಷ್ಟಿಯಿಲ್ಲದೆ ಎಲ್ಲರ ಗುಣಗಾನಮಾಡಿದ್ದಾನೆ. ರನ್ನನು ಇಡೀ ಭಾರತವನ್ನು ಗದಾಯುದ್ಧದ ಮೂಲಕ ಹೇಳುತ್ತೇನೆಂದು ಹೊರಟವನು (‘‘ಒಳಪೊಕ್ಕು ನೋಡೆ ಭಾರತದೊಳಗಣ ಕಥೆಯೆಲ್ಲಮೀ ಗದಾಯುದ್ಧದೊಳಂತೊಳಕೊಂಡತ್ತೆನೆ’’) ತನ್ನ ಭೀಮನ ಬದಲಿಗೆ ದುರ್ಯೋಧನನನ್ನು ಖಳನಾಯಕನ್ನಾಗಿಸಿಯೇ ಒಂದು ದುರಂತ ಕಾವ್ಯವನ್ನಾಗಿಸಿದ್ದರೆ ಹೇಗಿರುತ್ತಿತ್ತು ಎಂದು ಅನ್ನಿಸುತ್ತದೆ. ‘ಸಾಹಸಭೀಮವಿಜಯ’ವು ಶೇಕ್ಸ್‌ಪಿಯರ್‌ನ ಕೈಗೆ ಸಿಕ್ಕಿದ್ದರೆ ಕತೆ ಬದಲಾಗುತ್ತಿರಲಿಲ್ಲ. ಆದರೆ ಕಾವ್ಯವು ಕೌರವನ ಹೆಸರಿನಲ್ಲಿರುತ್ತಿತ್ತೊ ಏನೋ? ಮೆಕ್‌ಬೆತ್ ಮತ್ತು ದುರ್ಯೋಧನ ಸಾಂದರ್ಭಿಕವಾಗಿ ಕೇಡಿಗರಾದರೂ ಒಳ್ಳೆಯವರೇ.

ಜನಜೀವನ, ಆಡಳಿತ ಆತನ ಕಾಲದಲ್ಲೂ ಹಿಂದೆಯೂ ಆನಂತರವೂ ವ್ಯತ್ಯಾಸವನ್ನು ಕಂಡಿರಲಿಲ್ಲ. ದುರ್ಯೋಧನನ ಊರುಭಂಗದ ಶಾಪ, ಭೀಷ್ಮರ ಹಿತನುಡಿ, ವೈಶಂಪಾಯನಕೊಳದಲ್ಲಿ ಅಡಗುವ ಪ್ರಸಂಗವು, ಮೆಕ್‌ಡಫ್‌ನ ಕುರಿತ ಎಚ್ಚರಕ್ಕಿಂತ, ಆತನ ಜನ್ಮರಹಸ್ಯಕ್ಕಿಂತ, ಬಿರ್ನಮ್ ಅರಣ್ಯದ ನಾಟಕೀಯತೆಗಿಂತ ಕಡಿಮೆಯೇನಲ್ಲ. ಕುರುಕ್ಷೇತ್ರದ ರಣಾಂಗಣದಲ್ಲಿ ಪಿಶಾಚಿಗಳು ಆತನನ್ನು ಅಣಕಿಸುವ ರೀತಿಯಲ್ಲಿ ಈ ನಾಟಕೀಯತೆ ಸ್ಪಷ್ಟವಾಗುತ್ತದೆ. ಭಾರತೀಯ ಹಿನ್ನೆಲೆಯಲ್ಲಿ ನಮಗೆ ಯಾವುದರ ರಹಸ್ಯವು ಅರ್ಥವಾಗಲಿಲ್ಲವೋ ಅದಕ್ಕೆ ಪೂರ್ವಕರ್ಮ ಅಥವಾ ದೈವಲೀಲೆಯನ್ನು ಆರೋಪಿಸುತ್ತೇವೆ. ಶೇಕ್ಸ್‌ಪಿಯ ರ್ ಹಾಗೆ ಮಾಡದೆ ಪಾತ್ರದ ಯಾವುದಾದರೊಂದು ದೌರ್ಬಲ್ಯವೇ ಆತನನ್ನು ನಾಶಮಾಡುವಂತೆ ನಾಟಕಗಳನ್ನು ರಚಿಸಿದ. ರನ್ನ ಶ್ರೇಷ್ಠನೇ. ಆದರೆ ಇಂಥದ್ದೊಂದು ಅವಕಾಶವನ್ನು ಕಳೆದುಕೊಂಡನೇನೋ ಎಂದು ಭಾಸವಾಗುತ್ತದೆ.

ಆಧುನಿಕ ಕನ್ನಡದಲ್ಲಿಯೂ ‘ಮೆಕ್‌ಬೆತ್’ ನಾಟಕವಾಗಿದೆ. ಶ್ರೀಕಂಠೇಗೌಡರ ‘ಪ್ರತಾಪರುದ್ರ ದೇವ’, ಡಿವಿಜಿ ಭಾಷಾಂತರಿಸಿದ ‘ಮ್ಯಾಕ್‌ಬೆತ್’, ಚನ್ನಬಸಪ್ಪನವರ ‘ಮ್ಯಾಕ್‌ಬೆತ್’ ಇವೆಲ್ಲ ಈ ನಾಟಕವನ್ನು ಯಾರದೇ ಗೆಲುವಿನ ಕಥೆಯನ್ನಾಗಿಸಲಿಲ್ಲ. ಷೇಕ್ಸ್‌ಪಿಯರನ ಮೆಕ್‌ಬೆತ್‌ನ್ನು ಕನ್ನಡಿಸುವಾಗ ಡಿವಿಜಿಯವರು "Tyrant' ಎಂಬ ಪದಕ್ಕೆ ಪರ್ಯಾಯವಾಗಿ ‘ಅಪರಾಜ’ ಎಂದು ಬಳಸಿದ್ದಾರೆ. ಅವರು ವ್ಯಾಖ್ಯಾನಿಸಿದಂತೆ ಯಾರು ರಾಜ್ಯಾಧಿಕಾರವನ್ನು ನ್ಯಾಯಕ್ರಮದಿಂದ ಪಡೆಯದೆ, ನ್ಯಾಯವಾಗಿ ರಾಜನಾಗತಕ್ಕವನನ್ನು ತನ್ನ ಬಲದಿಂದ ತಳ್ಳಿಹಾಕಿ, ಆ ಪದವಿಯನ್ನಾಕ್ರಮಿಸುವನೋ ಅವನು ಅಪರಾಜ. ಮೆಕ್‌ಬೆತ್‌ನಲ್ಲಿ ಇದ್ದ ರಾಜನನ್ನೇ ಮುಗಿಸಿ, ರಾಜನಾಗತಕ್ಕವರನ್ನು ಓಡಿಸಿ ಪಟ್ಟವೇರುವುದರಿಂದ ಇದು ಇನ್ನೂ ಕೆಟ್ಟ, ದುಷ್ಟಸ್ಥಿತಿ. ‘ಮೆಕ್‌ಬೆತ್’ನ ಯಕ್ಷಿಣಿಯರ ಕುರಿತು ಡಿವಿಜಿಯವರ ಮಾತುಗಳು ರಚನೆಯಲ್ಲಿ ಅಸ್ಪಷ್ಟವಾದರೂ ಬಹುಮುಖ್ಯವಾಗುತ್ತವೆ.

‘‘ಯಕ್ಷಿಣಿಯರು ಮನುಷ್ಯನನ್ನು ಮೀರಿದ ಮಹಿಮೆಯುಳ್ಳವರು. ಆದ್ದರಿಂದ ಅವರದು ಅದ್ಭುತ ಕಾರ್ಯಗಳು. ಅವರು ಗೌರವದಿಂದಲೂ ಎಚ್ಚರಿಕೆಯಿಂದಲೂ ನೋಡಲ್ಪಡಬೇಕಾದವರು. ಅವರ ಮಾತನ್ನು ಲಾಲಿಸಬೇಕು. ಆದರೆ ಅದನ್ನು ಸಂಪೂರ್ಣವಾಗಿ ನಂಬುವುದು ಅಪಾಯಕರ. ಅವರು ಭವಿಷ್ಯವನ್ನು ನುಡಿಯುತ್ತಾರೆ ಮತ್ತು ಮಂತ್ರ-ತಂತ್ರಗಳಲ್ಲಿ ನಿಪುಣರು. ಆದ್ದರಿಂದ ಅವರ ವಿಷಯದಲ್ಲಿ ಜಾಗರೂಕತೆಯಿಂದಿರಬೇಕಾದದ್ದು-ಎಂದರೆ ನಮ್ಮ ನೀತಿ-ನಿಷ್ಠೆಯಲ್ಲಿ ಮೈಮರೆಯದೆ ವಿವೇಕದಿಂದ ನಡೆಯಬೇಕಾದದ್ದು.’’ ಶೇಕ್ಸ್‌ಪಿಯರ್‌ನ ಮೆಕ್‌ಬೆತ್ ಮೂಲತಃ ಕೆಟ್ಟವನಲ್ಲ. ಆದರೆ ಈ ಯಕ್ಷಿಣಿಯರ ಮಾತು ಆತನನ್ನು ಹದಗೆಡಿಸಿತು. ದೌರ್ಬಲ್ಯವನ್ನು ಹೊರಗೆಳೆಯಿತು. ಹ್ಯಾಮ್ಲೆಟ್‌ನ ಅನಿಶ್ಚಿತತೆ ಮತ್ತು ವಿಳಂಬ ನೀತಿಯಂತೆ ಮೆಕ್‌ಬೆತ್ ಕೂಡಾ ಇನ್ನೊಬ್ಬರ ಸಹಾಯವಿಲ್ಲದೆಯೂ ನಾಶವಾಗಲು ಪೂರಕವಾಯಿತು. ಅಲ್ಲಿ ‘ಇರಬೇಕೇ ಇಲ್ಲದಿರಬೇಕೇ’ (To be or Not to be) ಹ್ಯಾಮ್ಲೆಟ್‌ನ ಸಂಕಟವಾದರೆ ಇಲ್ಲಿ ‘ಒಳಿತೇ ಕೆಡುಕು, ಕೆಡುಕೇ ಒಳಿತು’ (Fair is foul, foul is fair) ಮೆಕ್‌ಬೆತ್‌ನ ಸಂಕಟವಾಗುತ್ತದೆ.

ಮೆಕ್‌ಬೆತ್ ಕುರಿತು ಬಂದ ಅಸಂಖ್ಯ ಯುರೋಪಿಯನ್ ವಿಮರ್ಶೆ ಒಂದೆಡೆ, ಕನ್ನಡದ ವಿಮರ್ಶಕರು ಆತನನ್ನು ಒರೆಗೆ ಹಚ್ಚಿದ ರೀತಿ ಇನ್ನೊಂದೆಡೆ. ಮೆಕ್‌ಬೆತ್ ಒಂದು ಶತಮಾನಕ್ಕೂ ಮಿಕ್ಕಿ ಅವಧಿಯಲ್ಲಿ ಕನ್ನಡಕ್ಕೆ ಭಾಷಾಂತರ, ರೂಪಾಂತರಗೊಂಡಿದೆ. ಎ. ಎನ್. ಮೂರ್ತಿರಾವ್, ಎಂ. ರಾಮರಾವ್, ಶಾ. ಬಾಲುರಾವ್, ಜಿ. ಕೆ. ಗೋವಿಂದರಾವ್, ರಾಮಚಂದ್ರದೇವ ಮುಂತಾದವರು ಶೇಕ್ಸ್‌ಪಿಯರ್‌ನ ಈ ನಾಟಕ ಮತ್ತಿತರ ಸಾಹಿತ್ಯವನ್ನು ಶಕ್ತವಾಗಿಯೇ ವಿಶ್ಲೇಷಿಸಿದ್ದಾರೆ. ಅಡಿಗರು ‘ಕಂಭವೊಡೆಯುವ ವರೆಗೆ, ಕುಂಭ ತುಂಬುವ ವರೆಗೆ, ಲೆಕ್ಕ ನೂರಕೆ ಭರ್ತಿಯಾಗುವನಕ; ಬಿರ್ನಮ್ ಅರಣ್ಯವೇ ಎದ್ದು ಹೊರಡುವ ತನಕ, ಮೋಹಿನಿಯ ಕೈ ತಲೆಯ ಮುಟ್ಟುವನಕ’ ಈ ಭಯಾನಕ ಸ್ಥಿತಿ ಮುಂದುವರಿಯಲಿದೆಯೆಂದು ಭಾರತದ ತುರ್ತುಸ್ಥಿತಿಯ ಸಮಯದಲ್ಲಿ ಬರೆದರು. ಅದು ಇಂದಿಗೂ ಪ್ರಸ್ತುತ.

ಈ ಪೈಕಿ ಗಮನ ಸೆಳೆಯುವ ‘ಷೇಕ್‌ಸ್ಪಿಯರಿಗೆ ನಮಸ್ಕಾರ’ ಎಂಬ ಕೃತಿಯಲ್ಲಿ ಸಾಕಷ್ಟು ಒಳನೋಟಗಳನ್ನೊಳಗೊಂಡ ತಮ್ಮ ದೀರ್ಘ ಪ್ರಸ್ತಾವನೆಯಲ್ಲಿ ಶಾ. ಬಾಲುರಾವ್ ‘ಮೆಕ್‌ಬೆತ್’ ನಾಟಕವನ್ನು ರುದ್ರನಾಟಕವೆಂದು ವಿಂಗಡಿಸಿದ್ದಾರೆ. ಜಿ.ಕೆ.ಗೋವಿಂದರಾವ್ ತಮ್ಮ ‘ಶೇಕ್ಸ್‌ಪಿಯರ್’ ಸಂವಾದ ಕೃತಿಯಲ್ಲಿ ಮೆಕ್‌ಬೆತ್ ಇಲ್ಲೇ ನಮ್ಮ ನಡುವಿನಲ್ಲೇ ಇದ್ದಾನೇನೋ ಎಂಬಷ್ಟು ಆತ್ಮೀಯವಾಗಿ, ವಿಚಾರ-ಭಾವಪ್ರಚೋದಕವಾಗಿ, ನಾಟಕವನ್ನೂ ನಾಟಕದ ಪಾತ್ರಗಳನ್ನೂ ವಿಮರ್ಶಿಸಿದ್ದಾರೆ. ಅವರು ಹೇಳುವ ‘‘ಮೆಕ್‌ಬೆತ್‌ನ ಮಾತುಗಳು ನಿರಾಶಾಭಾವವನ್ನು ಬಿಂಬಿಸುವುದಕ್ಕಿಂತ ಹೆಚ್ಚಿಗೆ ವಿಷಾದವನ್ನು ಬಿಂಬಿಸುತ್ತವೆ.’’ ಎಂಬುದು ಮೆಕ್‌ಬೆತ್ ಪಾತ್ರದ ಕುರಿತ ಸತ್ಯ; ಹಾಗೆಯೇ ‘‘ನೀರು ತೊಳೆಯಬಹುದಾದ ಕಲೆ ಚರ್ಮಕ್ಕಂಟಿದುದು ಮಾತ್ರ.

ನಿಜವಾಗಿ ಕಲುಷಿತಗೊಂಡಿರುವುದು ಪ್ರಕೃತಿಯೊಡನೆ ನಂಟಿರುವ ಮನುಷ್ಯ ಪ್ರಜ್ಞೆ, ಆಳದಲ್ಲಿ ಮಿಡಿಯುತ್ತಲೇ ಇರುವ ಮನುಷ್ಯ ಸಂವೇದನೆ.’’ ಎಂಬುದು ಒಟ್ಟು ನಾಟಕದ ಕುರಿತ ಸತ್ಯ; ಮೆಕ್‌ಬೆತ್‌ನ ಕೊನೆಯ ಕೆಲವು ಹೆಜ್ಜೆಗಳ ಕುರಿತು ಹೇಳುವ ‘‘ಇದು ಪಕ್ಕಾ ರಾಜಕೀಯ ನಡೆ. ಅವಕಾಶವಾದದ ನಡೆ. ದೂರದೃಷ್ಟಿಯ ಲೋಪದ ನಡೆ.’’ ಎಂಬುದು ಇಂದಿನ ಪ್ರತಿಯೊಬ್ಬ ಮಹತ್ವಾಕಾಂಕ್ಷಿಯನ್ನೂ ತಿವಿಯಬೇಕು; ಇತರರಿಗೆ ಭರವಸೆಯನ್ನು ನೀಡಬೇಕು. ‘ಮೆಕ್‌ಬೆತ್’ ನಾಟಕದ 4ನೇ ಅಂಕದ 3ನೇ ದೃಶ್ಯದಲ್ಲಿ ಮೆಕ್‌ಡಫ್ ಮತ್ತು ಮ್ಯಾಲ್ಕಂ ನಡುವಣ ಸಂಭಾಷಣೆ ಎಲ್ಲ ದುರ್ದೆಸೆಯ ದೇಶಾಡಳಿತದ ಕುರಿತು ಪ್ರಾಮಾಣಿಕರ ಆತಂಕ ಮತ್ತು ಪ್ರೀತಿಯನ್ನು ಹೇಳುವಂತಹದ್ದು. ಕೊನೆಗೂ ಇದು ಮನುಷ್ಯನ ಮತ್ತು ದೇಶದ ದುರದೃಷ್ಟದ ಕುರಿತ ಕಥೆಯಾಗುವುದೇ ಹೀಗೆ. ಭವಿಷ್ಯವನ್ನು ವರ್ತಮಾನದಲ್ಲಿ ಕಾಣದ ಕಲೆ ಕಲೆಯಾಗಿ ಉಳಿಯಲಾರದು. ನಿತ್ಯ ಹರಿದ್ವರ್ಣದ ಕಾಡುಗಳೂ ಮಾಗಿಯಲ್ಲಿ ಎಲೆಗಳನ್ನು ಬೀಳಿಸಿಕೊಂಡು ಬೆತ್ತಲಾಗಿ ವೈಶಾಖದಲ್ಲಿ ಒಣಗಿದಂತೆ ಕಂಡರೂ ವಸಂತವೋ ವರ್ಷವೋ ಆರಂಭವಾದಾಗ ಮತ್ತೆ ಹಸುರಾಗಿ ನಳನಳಿಸುವಂತೆ ಮೌಲಿಕ ಕೃತಿಗಳು ಯಾವುದೇ ಪರಿಸ್ಥಿತಿಯಲ್ಲಿ ಮರುಕಳಿಸಿ ‘‘ನಾನು ಹೇಳಿದ್ದು ಹೇಗಾಯಿತು? ನಿಜವಾಗಲಿಲ್ಲವೇ?’’ ಎಂಬ ಪ್ರಶ್ನೆಗಳನ್ನೆಸೆಯಬಹುದು. ಕಲೆಯ ನೈಜತೆ ಬೆಳಗುವುದೇ ಹೀಗೆ. ಭಾರತವೂ ಸೇರಿದಂತೆ 21ನೇ ಶತಮಾನದ ಎಲ್ಲ ರಾಜಕೀಯ ಅಲ್ಲೋಲಕಲ್ಲೋಲಗಳೂ ಮಹತ್ವಾಕಾಂಕ್ಷೆಯ ಫಲವೇ. ಮರುದಿನದ ಬೆಳಗು-ಬೆಳಕು ಕಾಣದ ರಾತ್ರಿ ಮಾತ್ರ ದೀರ್ಘ. ಒಳಿತಿನ ಹೆಸರಿನಲ್ಲಿ ಬರುವ ಕೆಡುಕಿಗೂ ಕೊನೆಯಿದೆ ಎಂಬುದೇ ಮೆಕ್‌ಬೆತ್ ನಾಟಕದ ಸಂದೇಶ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)