varthabharthi


ರಾಷ್ಟ್ರೀಯ

ನಗರದ ಹಲವು ಪ್ರದೇಶಗಳು ಜಲಾವೃತ, ರೈಲ್ವೆ ಸಂಚಾರ ಅಸ್ತವ್ಯಸ್ಥ: ರೆಡ್ ಅಲರ್ಟ್ ಘೋಷಣೆ

ಮಹಾಮಳೆಗೆ ಮುಂಬೈ ತತ್ತರ: ಕಟ್ಟಡ, ಜೋಪಡಿ ಕುಸಿದು ಕನಿಷ್ಠ 20 ಮಂದಿ ಸಾವು

ವಾರ್ತಾ ಭಾರತಿ : 18 Jul, 2021

ಮುಂಬೈ,ಜು.18: ಶನಿವಾರ ತಡರಾತ್ರಿಯಿಂದ ಸುರಿದ ಭಾರೀ ಮಳೆಗೆ ದೇಶದ ವಾಣಿಜ್ಯರಾಜಧಾನಿ ಮುಂಬೈ ಮಹಾನಗರ ಅಕ್ಷರಶಃ ತತ್ತರಿಸಿ ಹೋಗಿದೆ. ಚೆಂಬೂರು ಹಾಗೂ ವಿಕ್ರೋಲಿ ಪ್ರದೇಶಗಳಲ್ಲಿ ಮಹಾಮಳೆಯಿಂದಾಗಿ ಮನೆಗಳು ಕುಸಿದುಬಿದ್ದು ಕನಿಷ್ಠ 20 ಮಂದಿ ಸಾವನ್ನಪ್ಪಿದ್ದಾರೆ. ರವಿವಾರವೂ ನಗರದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ರೆಡ್ ಆಲರ್ಟ್ ಘೋಷಿಸಲಾಗಿದೆ ಹಾಗೂ ನಾಗರಿಕರು ಮನೆಯಿಂದ ಹೊರಬಾರದಂತೆ ಎಚ್ಚರಿಕೆ ನೀಡಲಾಗಿದೆ.

ವಿಕ್ರೋಲಿ ಪ್ರದೇಶದಲ್ಲಿ ರವಿವಾರ ನಸುಕಿನಲ್ಲಿ ತಳಅಂತಸ್ತಿನ ವಸತಿಕಟ್ಟಡವೊಂದು ಕುಸಿದು, ಮೂವರು ಸಾವನ್ನಪ್ಪಿದ್ದಾರೆ ಹಾಗೂ 15 ಮಂದಿಯನ್ನು ರಕ್ಷಿಸಲಾಗಿದೆ. ಚೆಂಬೂರಿನ ಭರತ್ನಗರದಲ್ಲಿ ಜೋಪಡಿ ಮನೆಗಳ ಮೇಲೆ ಗೋಡೆಯೊಂದು ಕುಸಿದುಬಿದ್ದುದರಿಂದ ಆರು ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಅವಶೇಷಗಳಡಿಯಲ್ಲಿ ಸಿಲುಕಿದ್ದ 9 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದುರಂತದಲ್ಲಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅರು ಹೇಳಿದ್ದಾರೆ. ಅವಶೇಷಗಳಡಿಯಲ್ಲಿ ಇನ್ನೂ ಹಲವಾರು ಮಂದಿ ಸಿಲುಕಿರುವ ಸಾಧ್ಯತೆಯಿರುವುದರಿಂದ ಎರಡೂ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.

ಮುಂಬೈಯಲ್ಲಿ ಮಳೆಯಿಂದಾಗಿ ಸಂಭವಿಸಿದ ದುರಂತಗಳಲ್ಲಿ ಸಂಭವಿಸಿರುವ ಪ್ರಾಣ ಹಾನಿಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಡಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರವನ್ನು ಕೂಡಾ ಪ್ರಧಾನಿ ಪ್ರಕಟಿಸಿದ್ದಾರೆ.

ಮಹಾನಗರದ ತಗ್ಗುಪ್ರದೇಶಗಳಾದ ಚುನ್ನಾಭಟ್ಟಿ, ಸಿಯಾನ್, ದಾದರ್, ಗಾಂಧಿ ಮಾರ್ಕೆಟ್, ಚೆಂಬೂರು ಹಾಗೂ ಕುರ್ಲಾ ಎಲ್ಬಿಎಸ್ ರೋಡ್ ಸಂಪೂರ್ಣವಾಗಿ ಜಲಾವೃತಗೊಂಡಿವೆ. ಬೊರಿವಿಲಿಯಲ್ಲಿ ಹಲವಾರು ಕರೆಗಳು ನೆರೆನೀರಿನ ಪ್ರವಾಹಕ್ಕೆ ಕೊಚ್ಚಿಹೋಗಿವೆ. ರೈಲ್ವೆ ಹಳಿಗಳು ಸಂಪೂರ್ಣವಾಗಿ ನೆರೆ ನೀರಿನಲ್ಲಿ ಮುಳುಗಿದ್ದರಿಂದ ಉಪನಗರ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ದಾದರ್,ಪರೇಲ್, ಮಾತುಂಗ,ಕುರ್ಲಾ,ಸಯಾನ್,ಭಾಂಡುಪ್ ಮತ್ತಿತರೆಡೆಗಲ್ಲೂ ರೈಲು ಹಳಿಗಳು ಜಲಾವೃತಗೊಂಡಿದ್ದರಿಂದ ಸಿಎಸ್ಎಂಟಿ ಹಾಗೂ ಥಾಣೆ ನಡುವಿನ ರೈಲು ಸಂಚಾರವನ್ನು ಕೂಡಾ ಸ್ಥಗಿತಗೊಳಿಸಲಾಗಿದೆ. ಕೇಂದ್ರ ರೈಲ್ವೆ ವಲಯ ಹಾಗೂ ಪಶ್ಚಿಮ ರೈಲ್ವೆ ವಲಯದ ಹಲವಾರು ದೂರಸಂಚಾರದ ರೈಲುಗಳ ಸೇವೆಗಳೂ ಕೂಡಾ ಬಾಧಿತವಾಗಿವೆಯೆಂದು ವರದಿಗಳು ತಿಳಿಸಿವೆ.

ಶನಿವಾರ ಸಂಜೆ 8:00 ಗಂಟೆಯಿಂದ ರವಿವಾರ ಬೆಳಗ್ಗೆ 8:00 ಗಂಟೆಯ ನಡುವೆ ಮುಂಬೈಯಲ್ಲಿ 176.96 ಮಿ.ಮೀ. ಮಳೆಯಾಗಿದೆ. ನಗರದ ಪೂರ್ವಭಾಗದ ಉಪನಗರಗಳಲ್ಲಿ 204.07 ಹಾಗೂ ಪಶ್ಚಿಮದ ಉಪನಗರಗಳಲ್ಲಿ 195.48 ಮಿ.ಮೀ. ಮಳೆಯಾಗಿದೆಯೆಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಮುಂದಿನ ಐದು ದಿನಗಳ ವರೆಗೆ ಮುಂಬೈನಲ್ಲಿ ಭಾರೀ ಮಳೆ ಮುಂದುವರಿಯಲಿದೆೆ ಎಂದು ಎಂದು ಭಾರತೀಯ ಹವಾಮಾನ ಇಲಾಖೆಯ ಪ್ರಕಟಣೆ ತಿಳಿಸಿದೆ. 2019ರಲ್ಲಿ ನಗರದಲ್ಲಿ 375.2 ಮಿ.ಮೀ. ಮಳೆಯಾಗಿದ್ದು 2010ರಿಂದೀಚೆಗೆ 24 ತಾಸುಗಳ ಅವಧಿಯಲ್ಲಿ ದಾಖಲಾಗಿರುವ ಗರಿಷ್ಠ ಪ್ರಮಾಣದ ಮಳೆಯಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)