varthabharthi


ಇ-ಜಗತ್ತು

ಆನ್ ಲೈನ್ ನಲ್ಲಿ ನಿಮ್ಮ ಹಣವನ್ನು ಸುರಕ್ಷಿತವಾಗಿಸಲು ಹೀಗೆ ಮಾಡಿ

ವಾರ್ತಾ ಭಾರತಿ : 18 Jul, 2021

ತಂತ್ರಜ್ಞಾನದ ಬೆಳವಣಿಗೆ ಮತ್ತು ಡಿಜಿಟಲೀಕರಣದ ವ್ಯಾಪಕತೆ ಹೆಚ್ಚುತ್ತಿರುವುದರೊಂದಿಗೆ ಸೈಬರ್ ಕ್ರಿಮಿನಲ್ ಗಳು ಮತ್ತು ವಂಚಕರು ಈಗ ಹಿಂದೆಂದಿಗಿಂತಲೂ ಹೆಚ್ಚು ವ್ಯಸ್ತರಾಗಿದ್ದಾರೆ. ಕೋವಿಡ್ ಸಾಂಕ್ರಾಮಿಕ ಮತ್ತು ಲಾಕ್ ಡೌನ್ ಗಳಿಂದಾಗಿ ಆನ್ ಲೈನ್ ಚಟುವಟಿಕೆಗಳು ಹೆಚ್ಚುತ್ತಿದ್ದು, ಆನ್ ಲೈನ್ ವಂಚನೆಗಳೂ ಹೆಚ್ಚುತ್ತಿವೆ. ಜನರನ್ನು ವಂಚಿಸಲು ಈ ವಂಚಕರು ಹೊಸ ಹೊಸ ವಿಧಾನಗಳನ್ನು ಕಂಡುಕೊಳ್ಳುತ್ತಿದ್ದಾರೆ.

ಆನ್ ಲೈನ್ ನಲ್ಲಿ ವಹಿವಾಟು ನಡೆಸುವಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಮತ್ತು ಜಾಗರೂಕರಾಗಿರುವುದು ಜನರಿಗೆ ಬಿಟ್ಟಿದ್ದು ಎನ್ನುತ್ತಾರೆ ಉದ್ಯಮ ತಜ್ಞರು.
ಆನ್ ಲೈನ್ ನಲ್ಲಿ ನಿಮ್ಮ ಹಣದ ಸುರಕ್ಷತೆಯನ್ನು ಕಾಯ್ದುಕೊಳ್ಳಲು ಕೆಲವು ಮಾರ್ಗಗಳು ಇಲ್ಲಿವೆ.....

► ಒಟಿಪಿ ಮತ್ತು ಕ್ಯೂಆರ್ ಕೋಡ್ ಗಳು


ಒಟಿಪಿ ಅಥವಾ ಒಂದು ಬಾರಿಯ ಪಾಸ್ವರ್ಡ್ ಸಾಮಾನ್ಯ ಪಾಸ್ವರ್ಡ್ ಗಳಿಗಿಂತ ಭಿನ್ನವಾಗಿರುವುದಿಲ್ಲ,ಹೀಗಾಗಿ ಅಪರಿಚಿತ ವ್ಯಕ್ತಿಗಳು ಅಥವಾ ಸಂಸ್ಥೆಗಳೊಂದಿಗೆ ಅದನ್ನು ಹಂಚಿಕೊಳ್ಳುವುದು ನೀವು ಹಣವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಇದೇ ರೀತಿ ದೃಢೀಕೃತವಲ್ಲದ ಕ್ಯೂಆರ್ ಕೋಡ್ ಗಳನ್ನು ಸ್ಕಾನ್ ಮಾಡುವುದು ಕೂಡ ನಿಮಗೆ ಹಣಕಾಸು ನಷ್ಟವನ್ನುಂಟು ಮಾಡಬಹುದು.

ಹಲವಾರು ಬ್ಯಾಂಕ್ಗಳು ಮತ್ತು ವೆಬ್ ಸೈಟ್ ಗಳು ಒಟಿಪಿ ದೃಢೀಕರಣದೊಂದಿಗೆ ಜನರು ತಮ್ಮ ಪಾಸ್ವರ್ಡ್ಗಳನ್ನು ಬದಲಿಸಲು ಅವಕಾಶ ಕಲ್ಪಿಸಿವೆ. ವಂಚಕರು ಈಗ ಕೇವಲ ಒಟಿಪಿ ದೃಢೀಕರಣಕ್ಕಾಗಿ ಕೇಳುವ ಮೂಲಕ ವ್ಯಕ್ತಿಗಳ ಆನ್ ಲೈನ್ ಬ್ಯಾಂಕಿಂಗ್ ಲಾಗಿನ್  ಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಆರಂಭಿಸಿದ್ದಾರೆ. ಅಲ್ಲದೆ ಯಾವುದೇ ಕ್ಯೂಆರ್ ಕೋಡ್ ನನ್ನು ಸ್ಕಾನ್ ಮಾಡುವುದರಿಂದ ವ್ಯಕ್ತಿಯ ವ್ಯಾಲೆಟ್, ಬ್ಯಾಂಕ್ ಖಾತೆ ಇತ್ಯಾದಿಗಳೊಂದಿಗೆ ಜೋಡಣೆಯಾಗಿರುವ ವಿವರಗಳು ಕಳ್ಳತನವಾಗಬಹುದು. ಹೀಗಾಗಿ ಒಟಿಪಿಗಳನ್ನು ಹಂಚಿಕೊಳ್ಳುವ ಗೋಜಿಗೆ ಹೋಗಬೇಡಿ ಮತ್ತು ನಿಮಗೆ ದೃಢಪಡದಿದ್ದರೆ ಕ್ಯೂಆರ್ ಕೋಡ್ ಗಳನ್ನು ಸ್ಕಾನ್ ಮಾಡುವುದರಿಂದ ದೂರವಿರಿ.

►ಲಿಂಕ್ ಅನ್ನು ಕ್ಲಿಕ್ಕಿಸುವುದು


ವಂಚಕರು ಇ-ಮೇಲ್ ತಂತ್ರವನ್ನು ಬಳಸಿ ಅಮಾಯಕರನ್ನು ಬಲೆಗೆ ಬೀಳಿಸುತ್ತಾರೆ. ವಂಚಕರು ಮೇಲ್ನೋಟಕ್ಕೆ ಅಸಲಿಯೆಂಬಂತೆ ಕಂಡು ಬರುವ ಇ-ಮೇಲ್ಗಳನ್ನು ರವಾನಿಸುತ್ತಾರೆ. ಅದರಲ್ಲಿರುವ ಲಿಂಕ್ಗಳೂ ಅಧಿಕೃತವೆಂಬಂತೆ ಕಂಡು ಬರುತ್ತವೆ. ಅಸಲಿಗೆ ಇದು ಫಿಷಿಂಗ್ ತಂತ್ರವಾಗಿದೆ. ಹೆಚ್ಚಾಗಿ ಬ್ಯಾಂಕುಗಳು,ವಿಮಾ ಕಂಪನಿಗಳು ಇತ್ಯಾದಿಗಳ ಹೆಸರುಗಳಲ್ಲಿ ಇಂತಹ ಇ-ಮೇಲ್ಗಳು ನಿಮ್ಮ ಮೇಲ್ಬಾಕ್ಸ್  ಬಂದು ಬೀಳುತ್ತವೆ. ಹೆಚ್ಚಿನ ಜನರಿಗೆ ಅಸಲಿ ಮತ್ತು ನಕಲಿ ಲಿಂಕ್ಗಳ ನಡುವಿನ ವ್ಯತ್ಯಾಸ ಗೊತ್ತಿರುವುದಿಲ್ಲ, ಹೀಗಾಗಿ ಇಂತಹ ಲಿಂಕ್ಗಳನ್ನು ಕ್ಲಿಕ್ಕಿಸದಿರುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು.


►ಕಾರ್ಡ್ ವಿವರಗಳ ದಾಸ್ತಾನು


  ಹೆಚ್ಚಿನ ಜನರು ವಿವಿಧ ವೆಬ್ ಸೈಟ್ ಗಳಲ್ಲಿ ಮತ್ತು ಪ್ಲಾಟ್ಫಾರ್ಮ್ಗಳಲ್ಲಿ ವಹಿವಾಟು ಸುಲಭವಾಗಲೆಂದು ತಮ್ಮ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳ ವಿವರಗಳನ್ನು ಸೇವ್ ಮಾಡಿರುತ್ತಾರೆ. ಆದರೆ ಈ ಪ್ರವೃತ್ತಿಯಿಂದ ದೂರವಿರುವುದು ಒಳ್ಳೆಯದು. ಬ್ರೌಸರ್ನಲ್ಲಿ ಆಟೋ-ಫಿಲ್ ಸೌಲಭ್ಯವನ್ನು ಟರ್ನ್ ಆಫ್ ಮಾಡುವುದರ ಜೊತೆಗೆ ಬ್ಯಾಂಕ್ ಆ್ಯಪ್ ಅಥವಾ ವೆಬ್ ಸೈಟ್ ಮೂಲಕ ಯಾವುದೇ ಕ್ರೆಡಿಟ್ ಕಾರ್ಡ್ನ ಆನ್ ಲೈನ್ ಮತ್ತು ಟ್ಯಾಪ್ ಆ್ಯಂಡ್ ಪೇ ಸೌಲಭ್ಯವನ್ನೂ ಟರ್ನ್ ಆಫ್ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳುವುದು ಒಳ್ಳೆಯದು. ಹೀಗೆ ಟರ್ನ್ ಆಫ್ ಮಾಡುವುದರಿಂದ ಅನಾನುಕೂಲತೆ ಹೆಚ್ಚಬಹುದಾದರೂ ಅದು ಖಂಡಿತವಾಗಿಯೂ ನಿಮ್ಮ ಆನ್ ಲೈನ್ ವಹಿವಾಟುಗಳನ್ನು ಹೆಚ್ಚು ಸುರಕ್ಷಿತವಾಗಿಸುತ್ತದೆ.


► ಟ್ಯಾಪ್ ಆ್ಯಂಡ್ ಪೇ ಕಾರ್ಡ್ ಗಳು


ನೂತನ ತಂತ್ರಜ್ಞಾನ ಪ್ರಗತಿಯಲ್ಲಿ ಟ್ಯಾಪ್ ಆ್ಯಂಡ್ ಪೇ ಸೌಲಭ್ಯವು ಸೇರಿದ್ದು,ಇದು ಪಿನ್ ಅಥವಾ ಕೋಡ್ ಅನ್ನು ದಾಖಲಿಸದೆ ವಹಿವಾಟು ನಡೆಸಲು ಅನುಕೂಲವನ್ನು ಕಲ್ಪಿಸಿದೆ. ಪಿನ್ ದೃಢೀಕರಣವಿಲ್ಲದೆ ನಿಮ್ಮ ಖಾತೆಯ ಪ್ರವೇಶವನ್ನು ಈ ಸೌಲಭ್ಯವು ಸುಲಭವಾಗಿಸಿದೆಯಾದರೂ ಕಾರ್ಡ್ನ್ನು ಕಳೆದುಕೊಂಡಾಗ ಅಥವಾ ಕಳ್ಳತನವಾದಾಗ ತೊಂದರೆಗೆ ಕಾರಣವಾಗುತ್ತದೆ. ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಸೌಲಭ್ಯವನ್ನು ಸೀಮಿತವಾಗಿ ಬಳಸಬೇಕು ಅಥವಾ ಸಂಪೂರ್ಣವಾಗಿ ನಿರ್ಬಂಧಿಸಬೇಕು ಎನ್ನುತ್ತಾರೆ ತಜ್ಞರು.

► ಕೊಡುಗೆಗಳಿಂದ ಕಳಚಿಕೊಳ್ಳಿ


ಆಫರ್ಗಳು ಅಥವಾ ಕೊಡುಗೆಗಳು,ರಿಯಾಯಿತಿಗಳು ಮತ್ತು ಪ್ರಚಾರಗಳು ಹಲವರನ್ನು ಆಕರ್ಷಿಸುತ್ತವೆ. ಇಂತಹ ಪ್ರಚಾರದ ಸಂದೇಶಗಳ ಮೂಲಕ ಜನರು ವಂಚಕರಿಗೆ ಬಲಿಯಾಗುತ್ತಾರೆ. ಹೀಗಾಗಿ ಇಂತಹ ಪ್ರೊಮೋಶನಲ್ ಆಫರ್ಗಳಿಂದ ಅನ್ಸಬ್ಸ್ಕ್ರೈಬ್ ಆಗುವುದು ಅಥವಾ ಸಂಪರ್ಕವನ್ನು ಕಡಿದುಕೊಳ್ಳುವುದು ವಂಚನೆಗಳನ್ನು ತಪ್ಪಿಸಲು ಮತ್ತು ವಂಚಕರ ಬಲೆಗೆ ಬೀಳದಿರಲು ಅತ್ಯುತ್ತಮ ಮಾರ್ಗವಾಗಿದೆ. ಬ್ಯಾಂಕ್ ಆಗಿರಲಿ ಅಥವಾ ಇನ್ಯಾವುದೇ ಹಣಕಾಸು ಸಂಸ್ಥೆಯಾಗಿರಲಿ,ಅವು ಗ್ರಾಹಕರಿಗೆ ಇ-ಮೇಲ್ಗಳು ಮತ್ತು ಎಸ್ಎಂಎಸ್ಗಳ ಮಹಾಪೂರವನ್ನೇ ರವಾನಿಸುವುದರಿಂದ ಇಂತಹ ಪ್ರಚಾರ ಸಂದೇಶಗಳಿಂದ ಅನ್ಸಬ್ಸ್ಕ್ರೈಬ್ ಆಗುವುದು ನಿಮ್ಮ ಹಣದ ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)